Categories
ಸಿನಿ ಸುದ್ದಿ

ಹೊಸ ಸಿನಿಮಾಗೆ ಚಿತ್ರಕಥೆ ಮುಗಿಸಿದ ಖುಷಿಯಲ್ಲಿ ಜೋಗಿ ಪ್ರೇಮ್‌ ; ಈ ಬಾರಿ ಪಕ್ಕಾ ಆಕ್ಷನ್‌ ಸಿನಿಮಾಗೆ ಕೈ ಹಾಕ್ತಾರಾ ಬಾಸು!

ನಿರ್ದೇಶಕ ಪ್ರೇಮ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ, ಮತ್ಯಾವ ಸ್ಟಾರ್‌ ನಟ ಅವರ ವಿರುದ್ಧ ಮಾತಾಡಿದ್ರು ಅನ್ನೋ ಪ್ರಶ್ನೆ ಈಗ ಸಹಜ. ಅದಕ್ಕೆ ಕಾರಣ, ಇತ್ತೀಚೆಗಷ್ಟೇ ಪ್ರೇಮ್‌ ಅವರನ್ನು ಕುರಿತಂತೆ ನಟ ದರ್ಶನ್‌ ಅವರು ಅವರೇನು ದೊಡ್ಡ ಪುಡಂಗಾನ ಅಂದಿದ್ದರು. ಆ ಮಾತು ಜೋರು ಸುದ್ದಿ ಮಾಡಿತ್ತು. ಅಷ್ಟೇ ಅಲ್ಲ, ಅತ್ತ ಪ್ರೇಮ್‌ ಅವರನ್ನೂ ಕೆರಳಿಸುವಂತೆ ಮಾಡಿದ್ದು ಸುಳ್ಳಲ್ಲ. ಪ್ರೇಮ್‌ ಕೂಡ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ದರ್ಶನ್‌ ವಿರುದ್ಧ ಮಾತಾಡಿದ್ದರು. ಆ ಮಧ್ಯೆ ರಕ್ಷಿತಾ ಪ್ರೇಮ್‌ ಎಂಟ್ರಿಯಾಗಿ, ದರ್ಶನ್‌ ಜೊತೆಗಿದ್ದ ಒಂದು ಫೋಟೋ ಹಾಕಿಕೊಂಡು ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಸುಖಾಂತ್ಯಗೊಂಡಿತ್ತು. ಈಗ ಪ್ರೇಮ್‌ ಅವರ ಹೊಸ ಸುದ್ದಿ ಅಂದರೆ, ಅವರೊಂದು ಹೊಸ ಸಿನಿಮಾ ಕಥೆಯನ್ನು ಮುಗಿಸಿದ್ದಾರೆ.

ಹೌದು, ಹೀಗಂತ ಸ್ವತಃ ಪ್ರೇಮ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲೊಂದು ವಿಡಿಯೋ ಹಂಚಿಕೊಂಡು ಹೇಳಿಕೊಂಡಿದ್ದಾರೆ. ಸದ್ಯ ಪ್ರೇಮ್‌ ರಕ್ಷಿತಾ ಅವರ ಸಹೋದರ ರಾಣ ಅವರಿಗೆ “ಏಕ್‌ ಲವ್‌ ಯಾ” ಸಿನಿಮಾ ಮಾಡಿದ್ದಾರೆ. ಅದು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಇದರ ಮಧ್ಯೆ ಪ್ರೇಮ್‌ ಕೂಡ ಸದ್ದಿಲ್ಲದೆಯೇ ಒಂದು ಸಿನಿಮಾದ ಚಿತ್ರಕಥೆ ಮುಗಿಸಿದ ಬಗ್ಗೆ ಹೇಳಿಕೊಂಡಿದ್ದು, ಆ ಚಿತ್ರಕಥೆಗೆ ವಿಶೇಷ ಪೂಜೆ ಮಾಡಿ, ಕುಂಬಳಕಾಯಿ ಒಡೆದು ಖುಷಿಗೊಂಡಿದ್ದಾರೆ. ಹಾಗಾದರೆ, ಪ್ರೇಮ್‌ ಈ ಬಾರಿ ಯಾವ ಜಾನರ್‌ ಸಿನಿಮಾ ಮಾಡ್ತಾರೆ? ಸಹಜವಾಗಿಯೇ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು. ಪ್ರೇಮ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಂದಿನ ಸಿನಿಮಾ ಪಕ್ಕಾ ಆಕ್ಷನ್‌ ಸಿನಿಮಾ ಆಗಿರುತ್ತೆ ಅನ್ನುವುದು ದಟ್ಟವಾಗಿದೆ.

ಅಷ್ಟಕ್ಕೂ ಪ್ರೇಮ್‌ ಹಂಚಿಕೊಂಡಿರುವ ಆ ವಿಡಿಯೋದಲ್ಲೇನಿದೆ ಗೊತ್ತಾ? “ಯಾರಾದರೂ ಯುದ್ಧದಲ್ಲಿ ಹುತಾತ್ಮರಾದರೆ ಅವರ ಸ್ವಾಗತಕ್ಕಾಗಿ ಸ್ವರ್ಗ ಕಾಯುತ್ತಿರುತ್ತದೆ. ಒಂದೊಮ್ಮೆ ಯುದ್ಧದಲ್ಲಿ ಗೆದ್ದರೆ, ಅವರಿಗಾಗಿ ಅಧಿಕಾರದ ಕಿರೀಟ ಕಾಯುತ್ತಿರುತ್ತದೆ. ಒಟ್ಟಾರೆ ಯುದ್ಧ ಒಳ್ಳೆಯದೇ. ಯುದ್ಧ ಈಗ ಶುರುವಾಗುತ್ತಿದೆ…ʼ ಎಂದಿದ್ದಾರೆ ಪ್ರೇಮ್.‌ ಚಿತ್ರಕತೆ ಕೆಲಸವನ್ನು ಮುಗಿಸಿದ್ದೇನೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಗಸ್ಟ್ 2021ರಲ್ಲಿಯೇ ಹಂಚಿಕೊಳ್ಳಲಿದ್ದೇನೆ’ ಎಂದಿರುವ ಪ್ರೇಮ್ ಅವರಿಗೆ ಇದು 9ನೇ ಚಿತ್ರ. 2003ರಲ್ಲಿ ‘ಕರಿಯಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಪ್ರೇಮ್, ಆ ಬಳಿಕ ಒಂದೊಂದೇ ಹಿಟ್‌ ಸಿನಿಮಾ ಕೊಟ್ಟರು. ಆ ಮೂಲಕ ಅವರು ಗಾಂಧಿನಗರದಲ್ಲಿ ಗಟ್ಟಿ ಬೇರೂರಿದರು.

ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡುವ ಪ್ರೇಮ್‌ಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಅವರಿಗೆ ತಕ್ಕಂತೆಯೇ ಸಿನಿಮಾ ಕೊಡುವ ಜಾಣತನ ಪ್ರೇಮ್‌ಗಿದೆ. ಸ್ಟಾರ್‌ ಮಾತ್ರವಲ್ಲ, ಹೊಸಬರನ್ನೂ ಇಟ್ಟುಕೊಂಡು ಸಾಬೀತು ಮಾಡಿರುವ ಪ್ರೇಮ್‌, ಒಂದು ಸಿನಿಮಾ ಮಾಡ್ತಾರೆ ಅಂದರೆ, ಅದೊಂದು ರೀತಿ ಕುತೂಹಲವಂತೂ ಹೌದು. ಪ್ರೇಮ್‌ ಸೋಲು ಕಂಡಿದ್ದೂ ಇದೆ, ಗೆಲುವಿನ ಮೆಟ್ಟಿಲನ್ನೂ ಏರಿದ್ದೂ ಇದೆ. ನಿರೀಕ್ಷೆ ಇಟ್ಟುಕೊಂಡ ಸಿನಿಮಾಗಳು ಸಹ ಕೈ ಕೊಟ್ಟಿದ್ದ ಉದಾಹರಣೆ ಇದ್ದರೂ, ಪ್ರೇಮ್‌ ಮಾತ್ರ, ತಮ್ಮ ಪಾಡಿಗೆ ತಾವು ಸಿನಿಮಾ ಮಾಡುತ್ತಿದ್ದಾರೆ. “ವಿಲನ್‌” ಮೂಲಕ ಶಿವರಾಜಕುಮಾರ್‌ ಮತ್ತು ಸುದೀಪ್‌ ಅವರನ್ನು ಇಟ್ಟುಕೊಂಡು ದೊಡ್ಡ ಮಟ್ಟದ ಚಿತ್ರ ಕೊಟ್ಟರು. ಭಾರೀ ಕುತೂಹಲ ಕೆರಳಿಸಿದ್ದ ಆ ಚಿತ್ರ, ತಕ್ಕಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿತು. ಆ ಬಳಿಕ ಅವರು, “ಏಕ್‌ ಲವ್‌ ಯಾ” ಸಿನಿಮಾಗೆ ಅಣಿಯಾದರು.

ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಅಂದಹಾಗೆ, ರಕ್ಷಿತಾ ಅವರ ಸಹೋದರನಿಗಾಗಿಯೇ, ಒಂದೊಳ್ಳೆಯ ಲವ್‌ ಸ್ಟೋರಿ ಹೆಣೆದಿರುವ ಪ್ರೇಮ್‌, ಈಗಾಗಲೇ ಚಿತ್ರದ ಒಂದು ಸಾಂಗ್‌ ಬಿಟ್‌ ಬಿಡುಗಡೆ ಮಾಡಿ, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಪ್ರೇಮ್‌ ಈಗ ಹೊಸ ಸಿನಿಮಾದ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಈ ಬಾರಿ ಸ್ಟಾರ್‌ ಹಿಂದೆ ಹೋಗ್ತಾರೋ ಅಥವಾ ಹೊಸಬರನ್ನು ಕರೆತರುತ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಪಾವಗಡ ಮಂಜುನಾ ಕೈ ಬಿಡಲಿಲ್ಲ ಧರ್ಮಸ್ಥಳ ಮಂಜುನಾಥಸ್ವಾಮಿ; ಬಿಗ್ಬಾಸ್ ಪಟ್ಟಕ್ಕೇರಿಸಿ ಕೇಕೆ ಹೊಡೆದಿದ್ದು 6 ಕೋಟಿ ಜನ ಸ್ವಾಮಿ !

ಉಸಿರುಗಟ್ಟಿ‌ ಕೋಮಾಗೆ ಹೋದಾಗ, ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ, ಜೀವಕ್ಕೆ ಉಸಿರು ತುಂಬಿ ಬದುಕಿಸಿಕೊಂಡ ಧರ್ಮಸ್ಥಳ‌ ಮಂಜುನಾಥ ಸ್ವಾಮಿ, ಅರಮನೆಯಂತಹ ಸೆರೆಮನೆಯಲ್ಲಿರುವ ನನ್ನನ್ನ ಕೈಬಿಡುವುದುಂಟೇ ? ಹೀಗೊಂದು ಪ್ರಶ್ನೆ ಮಂಜು ಪಾವಗಡ ಮನಸ್ಸಲ್ಲೂ ಕೂಡ ಕಥಕ್ಕಳಿ ಆಡಿತ್ತು.
ಕಲಾವಿದ ಆಗಬೇಕು ಎಂದು ಬೇಡಿಕೊಂಡಾಗ, ನಾಲ್ಕು ಮಂದಿ ನನ್ನನ್ನು ಗುರುತಿಸುವಂತೆ ಮಾಡು ಸ್ವಾಮಿ ಎಂದು ಅಡ್ಡಬಿದ್ದು ಬೇಡಿದಾಗ ಎಲ್ಲವನ್ನೂ ಈಡೇರಿಸಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ, ಬಿಗ್ ಬಾಸ್ ಗೆಲ್ಲುವ ಕನಸನ್ನು ಈಡೇರಿಸದೇ ಬಿಡುವನೇ ? ಯಾವುದೇ ಕಾರಣಕ್ಕೂ ಮಂಜುನಾಥ ಸ್ವಾಮಿ ನನ್ನ ಕೈ ಬಿಡಲ್ಲ.. ಗೆದ್ದೇ ಗೆಲ್ತೀನಿ.. ಬಿಗ್ಬಾಸ್ ಗದ್ದುಗೆ ಏರೇ ಏರ್ತೀನಿ, ಹೀಗೊಂದು ಆತ್ಮ ವಿಶ್ವಾಸ ಮಂಜು ಪಾವಗಡ ಮನಸ್ಸಲ್ಲಿತ್ತು. ಆ ಅಚಲವಾದ ಆತ್ಮವಿಶ್ವಾಸಕ್ಕೆ ಬಿಗ್ಬಾಸ್ ವಿಜಯದ ಹಾರ ಹಾಕಿದೆ. ಮಂಜುನಾಥ ಸ್ವಾಮಿಯ ಅಭಯ ಹಸ್ತ ಮಂಜಣ್ಣನ ಮೇಲಿರುವುದು ನಿಜವಾಗಿದೆ.

ಬಿಗ್ಬಾಸ್ ಸೀಸನ್ 8 ರ ವಿನ್ನರ್ ಯಾರಾಗ್ತಾರೆ ಎನ್ನುವ ಆರು ತಿಂಗಳ‌ ಕೂತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ದೊಡ್ಮನೆ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಅಂತ್ಯಗೊಂಡಿದೆ.
ಮಜಾಭಾರತ ಖ್ಯಾತಿಯ ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೇರಿ ಗೆಲುವಿನ ಮುತ್ತಿನ ಹಾರ ಹಾಕಿಸಿಕೊಂಡು ಕರುನಾಡ ಅಂಗಳದಲ್ಲಿ‌ ಮೆರವಣಿಗೆ ಹೊರಟಿದ್ದಾರೆ. ಮಂಜು ಗೆಲುವನ್ನು ಕರ್ನಾಟಕದ ಲಕ್ಷಾಂತರ ಮಂದಿ ಸಂಭ್ರಮಿಸುತ್ತಿದ್ದಾರೆ.

ಮಂಜು ಪಾವಗಡ ಗೆಲ್ಲಬೇಕು‌ ಎನ್ನುವುದು ಕೇವಲ ಅವರ ಕುಟುಂಬಸ್ಥರು ಹಾಗೂ ಆಪ್ತರ ಕನಸಾಗಿರಲಿಲ್ಲ. ಕರುನಾಡಿನ ಬಹುತೇಕ ಮಂದಿ ಮಂಜು‌ ಗೆಲುವಿನ‌ ಗದ್ದುಗೆ ಏರಬೇಕೆಂದು ಬಯಸಿದ್ದರು. ಪಾವಗಡ ಮಂಜು‌ ಬಿಗ್ಬಾಸ್ ನಲ್ಲಿ ದಿಗ್ವಿಜಯ ಸಾಧಿಸಿದರೆ ಹಳ್ಳಿ ಜಯಭೇರಿ ಬಾರಿಸಿದಂತೆ ಎಂದು ಮಾತನಾಡಿಕೊಂಡಿದ್ದರು.‌ ಅದರಂತೆ ಕರುನಾಡಿನ 45,03,495 ಲಕ್ಷ ಮಂದಿ
ವೋಟ್ ಹಾಕಿದ್ದಾರೆ. ಫಿನಾಲೆಗೆ ಲಗ್ಗೆ ಇಟ್ಟ ಟಾಪ್ ಫೈವ್ ಸ್ಪರ್ಧಿಗಳ‌ ಪೈಕಿ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ಬಾಸ್ ಟ್ರೋಪಿಗೆ ಮಂಜಣ್ಣ ಮುತ್ತಿಕ್ಕಿದ್ದಾರೆ. 53 ಲಕ್ಷ ಕಂತೆ ನೋಟಿಗೆ ಮಂಜಣ್ಣ ಒಡೆಯರಾಗಿದ್ದಾರೆ.‌

ಹಳ್ಳಿಹಕ್ಕಿ.. ಗ್ರಾಮೀಣ ಪ್ರತಿಭೆ ಮಂಜಣ್ಣನ ಯಶಸ್ಸಿಗೆ ಸ್ವಂತ ಪರಿಶ್ರಮ ಹಾಗೂ ಕರ್ನಾಟಕದ ಮಂದಿಯ ಪ್ರೋತ್ಸಾಹ ಹಾಗೂ ಸಹಕಾರದ ಜೊತೆಗೆ ಧರ್ಮಸ್ಥಳದ‌ ಶ್ರೀಮಂಜುನಾಥ ಸ್ವಾಮಿಯ ಅಭಯಹಸ್ತವೂ ಇದೆ ಎನ್ನುವುದು ಪ್ರೂ ಆಗಿದೆ. ಮಂಜಣ್ಣ ಇಲ್ಲಿವರೆಗೂ ಏನೇ ಕೇಳಿಕೊಂಡರೂ ಅದೆಲ್ಲವೂ ಈಡೇರಿದೆಯಂತೆ. ಈಗ ದೊಡ್ಮನೆಯಲ್ಲಿ ಜಯಭೇರಿ ಬಾರಿಸುವ ಕನಸು ಕೂಡ ಸಾಕಾರಗೊಂಡಿದೆ. ಉಸಿರುಗಟ್ಟಿ ಕೋಮದಲ್ಲಿದ್ದ ಮಂಜುನಾ ತೀರ್ಥ ಹಾಗೂ ಪ್ರಸಾದ ಸೇವನೆಯಿಂದ ಬದುಕಿಸಿಕೊಂಡ ಶ್ರೀ ಮಂಜುನಾಥ ಸ್ವಾಮಿ,
ತನ್ನ ನಾಮಧೇಯ ಇಟ್ಟುಕೊಂಡು ಶ್ರದ್ಧಾ ಭಕ್ತಿಯಿಂದ ಸ್ಮರಿಸುವ ಹಾಗೂ ಕಲೆಯನ್ನು ಆರಾಧಿಸುವ ಕಲಾವಿದನ ದೊಡ್ಮನೆ‌ ಕನಸು ನನಸಾಗಿರುವುದರಲ್ಲಿ ಯಾವುದೇ ಡೌಟಿಲ್ಲ‌‌ ಬಿಡಿ.

ಬಿಗ್ಬಾಸ್ ಸೀಸನ್ 8ರ ಗೆಲುವು ಮಂಜಣ್ಣನಿಗೆ ಅಷ್ಟು ಸುಲಭವಾಗಿ ದಕ್ಕಿರುವುದಲ್ಲ. ಹಳ್ಳಿ ಹೈದ ಮಂಜಣ್ಣನಿಗೆ ತುಂಬಾ ಜನ ಕಾಂಪಿಟೇಟರ್ ಗಳು ಇದ್ದರು. ಫೈನಲ್ಸ್ ವರೆಗೆ ನೆಕ್ ಟು ನೆಕ್ ಪೈಪೋಟಿ ಕೊಡುತ್ತಲೇ ಬಂದರು.‌ ಇದ್ಯಾವುದಕ್ಕೂ ಜಗ್ಗದ ಹಳ್ಳಿ ಹಕ್ಕಿ ಮಂಜಣ್ಣ ಪ್ರತಿಸ್ಪರ್ಧಿಗಳ ಜೊತೆ ಫೈಟ್ ಮಾಡುತ್ತಾ, ಟಾಸ್ಕ್ ಕಂಪ್ಲೀಟ್ ಮಾಡುತ್ತಾ, ಬಿಗ್ಬಾಸ್ ವೀಕ್ಷಕರಿಗೆ ಭರ್ ಪೂರ್ ಹಾಸ್ಯದ ಮೂಲಕ ಮನರಂಜನೆ ಕೊಡುತ್ತಾ, ದೊಡ್ಮನೆ ನಾಯಕನಾಗಿಯೂ ಸೈ‌ ಎನಿಸಿಕೊಳ್ಳುತ್ತಾ ಅರಮನೆಯಲ್ಲಿ ಭರ್ತಿ
120 ದಿನ ಪೂರೈಸಿದರು. ಕಿಚ್ಚನ ಪಕ್ಕದಲ್ಲಿ ಬಂದು ನಿಂತರು.‌ ಮಾಣಿಕ್ಯನಿಂದ ಕೈ‌ ಮೇಲೆತ್ತಿಸಿಕೊಂಡು ವಿಜಯದ ಕೀರ್ತಿ ಪತಾಕೆಯನ್ನು ಹಾರಿಸಿದರು. ಅರೆಕ್ಷಣ ಭಾವುಕರಾದರು.

ಸಪೋರ್ಟ್ ಮಾಡಿದವರೆಲ್ಲರಿಗೂ ವೇದಿಕೆಯಿಂದಲೇ ಧನ್ಯವಾದ ಹೇಳಿದರು.
ಕರುನಾಡಿನ‌ ಈ ಋಣವನ್ನು ಕಲಾವಿದನಾಗಿ ತೀರಿಸಬೇಕು ಎನ್ನುವ ಹಠ ತೊಟ್ಟು ಮುಂದೆ ಸಾಗಿದ್ದಾರೆ. ಮಂಜಣ್ಣನ ವಿಜಯದ ಸವಾರಿ ಹೀಗೆ ಸಾಗಲಿ, ಕರುನಾಡನ್ನು ಸದಾ ರಂಜಿಸುತ್ತಿರಲಿ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕನ್ನಡಿಗ ಸುಧೀರ್ ಅತ್ತಾವರ್ ಪರಿಕಲ್ಪನೆಯಲ್ಲಿ ಹೋರಾಟಗಾರರ ಪರಿಚಯಿಸೋ ಬಾನುಲಿ ಸರಣಿ; ಶುರುವಾಗಿರೋ ಹಮಾರೇ ಸ್ವತಂತ್ರ್ಯ ತಾ ಸೇನಾನಿ ಸರಣಿಗೆ ಮೆಚ್ಚುಗೆ…

ಕನ್ನಡ ನಿರ್ದೇಶಕ ಸುಧೀರ್ ಅತ್ತಾವರ್ ದೂರದ ಮುಂಬೈನಲ್ಲಿದ್ದುಕೊಂಡೇ ಒಂದಷ್ಟು ಸುದ್ದಿ ಮಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ಸಕ್ಸಸ್ ಫಿಲ್ಮ್ಸ್ ಹೆಸರಿನ ಸ್ಟುಡಿಯೊ ಶುರು ಮಾಡಿ ಬಾಲಿವುಡ್ ಮಂದಿಯ ಫೇವರ್ ಎನಿಸಿರುವ ಸುಧೀರ್ ಅತ್ತಾವರ್, ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹಾಗಂತ ಅವರು ಹೊಸ ಹಿಂದಿ ಸಿನಿಮಾ ಶುರು ಮಾಡಿದ್ದಾರಾ? ಈ ಪ್ರಶ್ನೆ ಸಹಜ. ಅವರು ಈಗಾಗಲೇ ಮರಾಠಿ ಹಾಗು ಹಿಂದಿ ಭಾಷೆಯ ಸಿನಿಮಾ ಮಾಡಿದ್ದಾಗಿದೆ. ಹೊಸದೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೂ ಪ್ಲಾನ್ ಮಾಡಿದ್ದಾರೆ. ಇದರ ಜೊತೆ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ಹೌದು, ನಿರ್ದೇಶಕ ಸುಧೀರ್ ಅತ್ತಾವರ್ ಅವರು ಈಗ ಕೈ ಹಾಕಿರೋದು ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸಕ್ಕೆ. ಈಗಾಗಲೇ ಅದು ಬಾನುಲಿ ಸರಣಿ ಮೂಲಕ ಪ್ರಸಾರವಾಗುತ್ತಿದೆ. ಅಂದಹಾಗೆ, ‘ಹಮಾರೇ ಸ್ವತಂತ್ರ್ಯ ತಾ ಸೇನಾನಿ’ ಶೀರ್ಷಿಕೆಯಡಿ ಹೊಸ ಸರಣಿ ಶುರು ಮಾಡಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸುಧೀರ್ ಅತ್ತಾವರ್ ಅವರು ಮುಂಬೈನಲ್ಲಿರೋ ತಮ್ಮಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ಡಿ.ಕೆ ಫ್ಲ್ಯಾಗ್ ಫೌಂಡೇಷನ್ ಈ ಕಾರ್ಯಕ್ರಮವನ್ನು ಅರ್ಪಿಸಿದ್ದು, ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಇಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋದು ವಿಶೇಷ.

ಅಂದಹಾಗೆ, ಈ ಕಾರ್ಯಕ್ರಮ ದೆಹಲಿ, ಮುಂಬೈ, ಕೋಲ್ಕತಾ, ಚೆನೈ,ಹೈದರಾಬಾದ್, ಫೋರ್ಟ್ ಬ್ಲೇರ್, ಚಂಡೀಘರ್,ಲಕ್ನೋ, ಅಹಮದಾಬಾದ್,ಪೂನಾ, ನಾಗ್ಪುರ, ಬೆಂಗಳೂರು, ಮಂಗಳೂರು ಸೇರಿ ದೇಶದ ಪ್ರಮುಖ ಬಾನುಲಿ ಕೇಂದ್ರಗಳಲ್ಲಿ ಈಗಾಗಲೇ ಶರುವಾಗಿದೆ. ಆಗಸ್ಟ್ 15ರವರೆಗೆ ಪ್ರತಿ ದಿನ ಸಂಜೆ4.30ರಿಂದ ಪ್ರಸಾರವಾಗುತ್ತಿದೆ. ವಿಶೇಷವೆಂದರೆ, ಈ ಬಾನುಲಿ ಸರಣಿ ಕಾರ್ಯಕ್ರಮ 75ನೇ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿದ್ದು, 15 ಕಂತುಗಳಲ್ಲಿ ಪ್ರಸಾರವಾಗಲಿದೆ.

ಅದೇನೆ ಇರಲಿ, ಕನ್ನಡಿಗ ಸುಧೀರ್ ಅತ್ತಾವರ್, ದೂರದ ಮುಂಬೈನಲ್ಲಿದ್ದುಕೊಂಡೇ ತಮ್ಮ ಪ್ರತಿಭಾವಂತರ ತಂಡ ಕಟ್ಟಿಕೊಂಡು, ಹೊಸ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆ ಸಾಲಿಗೆ ಈ ಬಾನುಲಿ ಸರಣಿ ಕೂಡ ವಿನೂತನ ಪ್ರಯತ್ನ. ಇದು ಆ ತಂಡದ ದೇಶಾಭಿಮಾನಕ್ಕೊಂದು ಸಾಕ್ಷಿ ಅಲ್ಲದೆ ಮತ್ತೇನು? ಇನ್ನು ಇಂತಹ ಹಲವು ವಿಶೇಷ ಕಾರ್ಯಕ್ರಮಗಳು ಅವರ ಸಕ್ಸಸ್ ಫಿಲ್ಮ್ಸ್ ಮೂಲಕ ಬರಲಿ. ಹಾಗೆಯೇ ಅವೆಲ್ಲವೂ ಸಕ್ಸಸ್ ಆಗಲಿ ಅನ್ನೋದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ಡಾಲಿ ಜೊತೆ ಹೆಡ್- ಬುಷ್ ಆಡಲು ಬಂದಳಲ್ಲ ತೆಲುಗು ಪಿಲ್ಲಾ !

ಡಾಲಿ ಧನಂಜಯ್ ಗಂಧದಗುಡಿಯ ಹೆಮ್ಮೆಯ ಕಲಾವಿದ. ತಮ್ಮ ಅಘಾದವಾದ ಪ್ರತಿಭೆಯಿಂದ ಗಡಿದಾಟಿ ಗುರ್ತಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಗಷ್ಟೇ ಸೀಮಿತವಾಗಿದ್ದ ಧನಂಜಯ್ ಈಗ ಸೌತ್ ಸಿನಿಮಾ ಇಂಡಸ್ಟ್ರಿ ತುಂಬೆಲ್ಲಾ ಹೆಸರು ಮಾಡೋದಕ್ಕೆ ಅವಕಾಶ ಸಿಕ್ಕಿದೆ. ಪರಭಾಷಾ ಅಂಗಳದಲ್ಲಿ ಬ್ರ್ಯಾಂಡ್ ಆಗುವತ್ತ ಲಗ್ಗೆ ಇಡುತ್ತಿರುವ ಡಾಲಿ ಹೆಡ್ ಬುಷ್ ಮೂಲಕ ಪ್ಯಾನ್ ಇಂಡಿಯಾ ತಲುಪಲಿದ್ದಾರೆ. ಆಲ್ ಓವರ್ ಇಂಡ್ಯಾ ಡಾಲಿ ಸ್ಟಾರ್ ಆಗುವಂತಹ ಹೆಡ್ ಬುಷ್ ಚಿತ್ರಕ್ಕೆ ತೆಲುಗು ಪಿಲ್ಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿಯ ಹೆಸರು ಪಾಯಲ್ ರಜಪೂತ್.

ಪಾಯಲ್ ರಜಪೂತ್ ಹೆಸರು ಕೇಳಿದರೆ ಥಟ್ ಅಂತ ಆಕೆ ನೆನಪಾಗದೇ ಇರಬಹುದು. ಆದರೆ, ‘ಆರ್ ಎಕ್ಸ್ 100’ ಅಂದಾಕ್ಷಣ ಆಕೆ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಪಕ್ಕಾ. ಆ ಸೆಕ್ಸಿ ಸುಂದರಿಯನ್ನೇ ಹೆಡ್ ಬುಷ್ ಚಿತ್ರತಂಡ ಕನ್ನಡಕ್ಕೆ ಕರೆತರುತ್ತಿದ್ದಾರೆ. ಸೆನ್ಸೇಷನಲ್ ಡಾಲಿ ಪಕ್ಕದಲ್ಲಿ ನಿಂತು ಹಲ್ ಚಲ್ ಎಬ್ಬಿಸೋಕೆ ಪಾಯಲ್ ಒಪ್ಪಿಕೊಂಡಿದ್ದಾರೆ. ವಿಕ್ಟರಿ ವೆಂಕಟೇಶ್, ನಾಗಚೈತನ್ಯ, ಮಾಸ್ ಮಹರಾಜ ರವಿತೇಜ ಸೇರಿದಂತೆ ಹಲವು ಸ್ಟಾರ್ ಗಳ ಚಿತ್ರಗಳಲ್ಲಿ ಪಾಯಲ್ ನಟಿಸಿದ್ದಾರೆ.

ಹೆಡ್- ಬುಷ್ ಬೆಂಗಳೂರಿನ ಭೂಗತ ದೊರೆ ಎಂ.ಪಿ. ಜಯರಾಜ್ ಅವರ ಜೀವನಾಧರಿತ ಚಿತ್ರ.‌
ಮಾಜಿ ಡಾನ್ ಪಾತ್ರದಲ್ಲಿ ಡಾಲಿ ಧನಂಜಯ್ ಅಟ್ಟಹಾಸ ಮೆರೆಯಲಿದ್ದಾರೆ. ಅಗ್ನಿ ಶ್ರೀಧರ್ ಅವರು ಕಥೆ ಚಿತ್ರಕಥೆ ಎಣೆದಿದ್ದು, ಶೂನ್ಯ ಎನ್ನುವ ಹೊಸ ಪ್ರತಿಭೆ ಆಕ್ಷನ್ ಕಟ್ ಹೇಳ್ತಿದ್ದಾರೆ. ನಾಳೆಯಿಂದ ಅಂದರೆ ಆಗಸ್ಟ್ 09 ರಿಂದ ಚಿತ್ರೀಕರಣ ಶುರುವಾಗಲಿದೆ. ಮೈ ಕೊಡವಿಕೊಂಡು ಹೆಡ್ ಬುಷ್ ಚಿತ್ರತಂಡ ಅಖಾಡಕ್ಕೆ ಇಳಿಯಲಿದೆ.

ಡಾಲಿಯ ಹೆಡ್ ಬುಷ್ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ಚಾಲನೆ ಕೊಟ್ಟಿದ್ದರು. ಟೈಟಲ್ ಅನೌನ್ಸ್ ಮಾಡಿ ಶುಭಕೋರಿದ್ದರು. ಅಶು ಬೆದ್ರ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದರು. ಆದ್ರೀಗ ಹೆಡ್ ಬುಷ್ ಚಿತ್ರವನ್ನು ಕೈಬಿಟ್ಟಿದ್ದಾರೆ. ಆದ್ದರಿಂದ ಡಾಲಿ ಧನಂಜಯ್ ಹೆಡ್ ಬುಷ್ ನ ಟೇಕಾಫ್ ಮಾಡ್ತಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಗೊಳ್ಳುತ್ತಿದ್ದು ಡಾಲಿ ಜೊತೆಗೆ ತ್ರಿವಿಕ್ರಮ ಚಿತ್ರದ ನಿರ್ಮಾಪಕ ಸೋಮಣ್ಣ ಕೈಜೋಡಿಸ್ತಿದ್ದಾರೆ. ಈ ಹಿಂದೆ ಹೇಳಿದಂತೆ ಹೆಡ್ ಬುಷ್ ಆರು ಭಾಷೆಯಲ್ಲಿ ನಿರ್ಮಾಣಗೊಳ್ತಿದೆ. ಎರಡು ಚಾಪ್ಟರ್ ಗಳಾಗಿ ತಯ್ಯಾರಾಗುತ್ತಿದ್ದು, ಆಗಸ್ಟ್ 23 ರಂದು ಡಾಲಿ ಬರ್ತ್ ಡೇ ದಿನ ಹೆಡ್ ಬುಷ್ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಶೀಘ್ರದಲ್ಲೇ ಚಿತ್ರದ ಅತೀ ದೊಡ್ಡ ತಾರಾ ಬಳಗದ ಲಿಸ್ಟ್ ಹೊರಬೀಳಲಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಿತ್ರರಂಗದ ಮೇಲೆ ಮತ್ತೆ ಕೊರೊನಾ ಕರಿ ನೆರಳು! ಚಿತ್ರಮಂದಿರ ಮಾಲೀಕರಲ್ಲಿ ಆತಂಕ- ನಿರ್ಮಾಪಕರಲ್ಲಿ ಗೊಂದಲ!!

ಎಲ್ಲಾ ಕ್ಷೇತ್ರಕ್ಕೂ ಹೀಗೇನಾ ಅಥವಾ ಸಿನಿಮಾ ರಂಗಕ್ಕೆ ಮಾತ್ರ ಹೀಗೇನಾ…?
– ಹೀಗಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುವಂತಾಗಿದೆ. ಹೌದು, ಇದಕ್ಕೆ ಕಾರಣ, ಕೊರೊನಾ ಭಯ. ಕೊರೊನಾ ಹಾವಳಿಯಿಂದ ಚಿತ್ರರಂಗಕ್ಕೇ ದೊಡ್ಡ ಹೊಡೆತ ಬಿದ್ದಿರುವುದಂತೂ ನಿಜ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಮೆಲ್ಲನೆ ಚೇತರಿಸಿಕೊಂಡಿದೆ. ಇನ್ನೇನು ಚಿತ್ರಮಂದಿರಗಳಲ್ಲಿ ಮತ್ತೆ ಅಬ್ಬರಿಸಬೇಕು ಎಂಬ ಉತ್ಸಾಹದಲ್ಲಿರುವಾಗಲೇ, ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸಂಪೂರ್ಣ ಬಂದ್‌ ಆಗಿದ್ದೂ ಗೊತ್ತೇ ಇತ್ತು. ಲಾಕ್‌ಡೌನ್‌ ಬಳಿಕ ಸರ್ಕಾರ ಅನುಮತಿ ಕೊಟ್ಟಿದ್ದೇನೋ ನಿಜ. ಆದರೆ, ಚಿತ್ರಮಂದಿರಗಳು ಬಾಗಿಲು ತೆರೆದರೂ, ಅದೇಕೋ ಏನೋ, ಸ್ಟಾರ್‌ ಸಿನಿಮಾಗಳು ಬಿಡುಗಡೆ ಮಾಡುವ ಆಸಕ್ತಿ ತೋರಲೇ ಇಲ್ಲ. ಬಿಡುಗಡೆಯಾದ ಸಿನಿಮಾಗಳೇ ಮರು ಬಿಡುಗಡೆಯಾಗುತ್ತಿವೆಯಾದರೂ, ಜನರು ಚಿತ್ರಮಂದಿರ ಒಳ ಬರುತ್ತಿಲ್ಲ. ಇದಕ್ಕೆ ಕಾರಣ ಮತ್ತದೇ ಕೊರೊನಾ ಭಯ!

ಹೌದು, ಕೊರೊನಾ ಭಯ ಒಂದು ಕಡೆಯಾದರೆ, ಸರ್ಕಾರ ಈಗ ಶೇ.೫೦ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳು ಕೂಡ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಸಿನಿಮಾಗಳು ಕೂಡ ತೆರೆಗೆ ಅಪ್ಪಳಿಸಲು ಮನಸ್ಸು ಮಾಡುತ್ತಿಲ್ಲ. ಸರ್ಕಾರ ಒಂದು ವೇಳೆ ಶೇ.100 ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಸ್ಟಾರ್‌ ನಟರ ಒಂದೊಂದೇ ಸಿನಿಮಾಗಳು ತೆರೆಮೇಲೆ ಮೂಡುತ್ತವೆ. ಆಗ ಜನ ಕೂಡ ಉತ್ಸಾಹದಲ್ಲೇ ಚಿತ್ರಮಂದಿರದತ್ತ ಮುಖ ಮಾಡುತ್ತಾರೆ ಎಂಬ ದೊಡ್ಡ ಆಸೆ ಚಿತ್ರರಂಗಕ್ಕಿದೆ. ಆದಾಗ್ಯೂ ಸರ್ಕಾರ ಈಗ ಶೇ.೧೦೦ರಷ್ಟು ಭರ್ತಿಗೆ ಅವಕಾಶ ಕೊಟ್ಟಿಲ್ಲ. ಕೊಡುತ್ತದೆ ಎಂಬ ಆಶಾಭಾವದಲ್ಲೇ ಸಿನಿಮಾ ಮಂದಿ ಇದ್ದಾರೆ. ಹಾಗೇನಾದರೂ, ಶೇ.೧೦೦ ರಷ್ಟು ಅನುಮತಿ ಸಿಕ್ಕರೆ, ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. ಅದಕ್ಕಾಗಿಯೇ ಈಗ ಎದುರು ನೋಡುತ್ತಿದ್ದಾರೆ.

ಬಿಡುಗಡೆ ಮಾತು ದೂರ…
ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಶೇ.50ರಷ್ಟು ಕೊಟ್ಟರೂ, ಚಿತ್ರಮಂದಿರದತ್ತ ಯಾವೊಬ್ಬ ಸ್ಟಾರ್‌ ಸಿನಿಮಾನೂ ತಿರುಗಿ ನೋಡಿಲ್ಲ. ಹಾಗೊಂದು ವೇಳೆ ಶೇ.100ರಷ್ಟು ಅನುಮತಿ ಕೊಟ್ಟರೂ. ಬಿಡುಗಡೆಗೆ ಸಾಧ್ಯವಾ? ಈ ಪ್ರಶ್ನೆ ಈಗ ಎದ್ದಿದೆ. ಕಾರಣ, ಸರ್ಕಾರ ಈಗ ಹೊಸದೊಂದು ನಿಯಮ ಜಾರಿ ಮಾಡಿದೆ. ಗಡಿ ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕದಲ್ಲೂ ಎಚ್ಚರಿಕೆ ಕ್ರಮ ಜರುಗಿಸಿದೆ. ಗಡಿ ಜಿಲ್ಲೆಗಳಲ್ಲಿ ವೀಕೆಂಡ್‌ ಲಾಕ್‌ಡೌನ್‌ ಮತ್ತು ನೈಟ್‌ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಇದರಿಂದಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ರಾತ್ರಿ ಪ್ರದರ್ಶನಗಳು ರದ್ದಾಗಿವೆ. ಇದರೊಂದಿಗೆ ವೀಕೆಂಡ್‌ ಪ್ರದರ್ಶನಗಳೂ ರದ್ದಾಗಿವೆ. ಹೀಗಾಗಿ ಚಿತ್ರರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದಂತೂ ದಿಟ.

ಹೇಗೋ ಶೇ.50ರಷ್ಟು ಭರ್ತಿಗೆ ಆದೇಶ ಕೊಟ್ಟಿತ್ತು. ಇರುವ ಆಸನಗಳು ತುಂಬುವುದೇ ಕಷ್ಟ ಇದ್ದ ಸಂದರ್ಭದಲ್ಲಿ ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದರಿಂದ ಇದ್ದ ಸಣ್ಣ ಆಸೆಗೂ ಕಲ್ಲು ಬಿದ್ದಂತಾಗಿದೆ. ನಿರ್ಮಾಪಕರು ಹೇಗೋ ಬಂದಷ್ಟು ಬರಲಿ ಅಂತ ತಮ್ಮ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದರು. ಪೂರ್ಣ ಪ್ರದರ್ಶನಕ್ಕೆ ಅವಕಾಶ ಸಿಗುತ್ತೆ ಅನ್ನುವಾಗಲೇ ಈಗ ಸಮಸ್ಯೆ ಎದುರಾಗಿದೆ. ಮತ್ತೆ ಕೊರೊನಾ ತೀವ್ರತೆಯಾಗಿ, ಲಾಕ್‌ಡೌನ್‌ ಆಗಿಬಿಟ್ಟರೆ, ಸಿನಿಮಾರಂಗದ ಕಥೆ ಏನು? ಎಂಬ ಆತಂಕ ಕೂಡ ಸಿನಿಮಾ ಮಂದಿಯಲ್ಲಿ ಶುರುವಾಗಿದೆ. ಇಡೀ ಚಿತ್ರರಂಗ ಈಗ ಶೇ.100ರಷ್ಟು ಅವಕಾಶವನ್ನೇ ಎದುರು ನೋಡುತ್ತಿದೆ. ಇಂತಹ ಸಂದರ್ಭದಲ್ಲೇ ಕೊರೊನಾ ಮತ್ತೆ ಆವರಿಸಿಕೊಳ್ಳುವ ಸೂಚನೆ ನೀಡುತ್ತಿದೆ. ಹೀಗೇ ಮುಂದುವರೆದರೆ, ಚಿತ್ರರಂಗದ ಮೇಲೆ ಕರಿನೆರಳು ಗ್ಯಾರಂಟಿ.

ಸರ್ಕಾರ ಶೇ.100ರಷ್ಟು ಅನುಮತಿ ಕೊಟ್ಟ ಬಳಿಕ ಸ್ಟಾರ್‌ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದವು. ಆದರೆ, ಈಗ ಎಲ್ಲಾ ಸಿನಿಮಾಗಳೂ ಗೊಂದಲದಲ್ಲಿವೆ. ದುನಿಯಾ ವಿಜಯ್‌ ಅಭಿನಯದ ಸಲಗ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಹೇಳಿತ್ತು. ಅಂದೇ ನಿನ್ನ ಸನಿಹಕೆ ಸಿನಿಮಾ ಕೂಡ ಬರುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ರಾತ್ರಿ ಕರ್ಫ್ಯೂ ಜಾರಿ ಮಾಡಿ, ಗಡಿ ಭಾಗದಲ್ಲಿ ವೀಕೆಂಡ್‌ ಲಾಕ್‌ಡೌನ್‌ ಮಾಡಿರುವುದರಿಂದ ಅದಕ್ಕೂ ಕಲ್ಲು ಬಿದ್ದಂತಾಗಿದೆ. ಅಲ್ಲಿಗೆ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಕೂಡ ಹಿಂದಕ್ಕೆ ಹೋಗಿದೆ. ಅದೇನೆ ಇರಲಿ, ಚಿತ್ರರಂಗಕ್ಕೆ ಮಾತ್ರ ಕಳೆದ ಎರಡು ವರ್ಷಗಳಿಂದ ದೊಡ್ಡ ನಷ್ಟವೇ ಆಗಿದೆ. ಈ ವರ್ಷ ಕೂಡ ಅದೇ ಆತಂಕದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತದೇ ಗತವೈಭವ ನೋಡಲು ಸಿನಿಮಾ ಮಂದಿ ಉತ್ಸುಕರಾಗಿದ್ದಾರೆ. ಅಂತಹ ದಿನಗಳು ಬರಲಿ ಎಂಬುದೇ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಕೋಮಾದಲ್ಲಿರುವಾಗಲೇ ಬದುಕಿಸಿದ `ಮಂಜು’ನಾಥ ಸ್ವಾಮಿ! ಬಿಗ್‌ಬಾಸ್‌ ಮನೇಲಿರುವಾಗ ಕೈ ಬಿಡೋದುಂಟೆ ?

ಉಸಿರಾಟದ ತೊಂದರೆಯಿಂದ ಬಾಲ್ಯದಲ್ಲೇ ಮಂಜಣ್ಣ ಕೋಮಾಗೆ ಹೋಗಿದ್ದರು. ಆಸ್ಪತ್ರೆಗೆ ಹೋದರೂ ಮಂಜಣ್ಣ ಉಸಿರಾಡಿದ್ದು ಶ್ರೀಮಂಜುನಾಥಸ್ವಾಮಿ ತೀರ್ಥ- ಪ್ರಸಾದ ಸೇವಿಸಿದ ಮೇಲೆ! ಮಗನ ಆರೋಗ್ಯ ಹದಗೆಟ್ಟಿದ್ದೇ ತಡ, ಮಂಜಣ್ಣ ತಂದೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿ, ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ಹಾಕಿ ಬೇಡಿದ್ದರು. ಸ್ವಾಮಿಯ ತೀರ್ಥ -ಪ್ರಸಾದ ತಂದು ಪುತ್ರ ಮಂಜಣ್ಣನಿಗೆ ಕೊಟ್ಟರು. ಅದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟರು…

  • ವಿಶಾಲಾಕ್ಷಿ

ನಂಬಿದ ಭಕ್ತರನ್ನು ಭಗವಂತ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎನ್ನುವ ಮಾತಿದೆ. ತನ್ನನ್ನು ಆರಾಧಿಸುವ, ಪೂಜಿಸುವ, ಸ್ಮರಿಸುವ ಭಕ್ತ ಬಳಗವನ್ನು ಭಗವಂತ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾನೆ ಅಂತ ಪೂರ್ವಜರು ಹೇಳ್ತಾರೆ, ಪುರಾಣಗಳು ಹೇಳುತ್ತವೆ. ಅಷ್ಟಕ್ಕೂ, ನಾವು ಇವತ್ತು ಭಗವಂತ-ದೇವರು ಅಂತ ಬರೆಯುತ್ತಿರುವುದಕ್ಕೆ ಕಾರಣ ಮಂಜು ಪಾವಗಡ. ಬಿಗ್‌ಬಾಸ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಮಂಜಣ್ಣ, ತಮ್ಮ ಬದುಕಿನಲ್ಲಿ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಯ ಪವಾಡ ಎಂತಹದ್ದು ಅನ್ನೋದನ್ನು ವಿವರಿಸಿದ್ದಾರೆ. ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ, ಮಂಜುನಾಥ ಸ್ವಾಮಿ ಬದುಕಿಸಿದ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ. ಆ ಅಚ್ಚರಿಯ ಕಥೆಯನ್ನ ಈ ಕ್ಷಣ ನಿಮ್ಮ ಮುಂದೆ ಇಡಲಿದ್ದೇವೆ.

ಮಂಜು ಪಾವಗಡ ಕಡು ಬಡತನದ ಕುಟುಂಬಕ್ಕೆ ಸೇರಿದ ಕುಡಿ. ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ. ಕೂಲಿನಾಲಿ ಮಾಡಿಕೊಂಡು ಜೀವನ ಮಾಡುವಂತಹ ಕುಟುಂಬ. ಹೀಗೆ ಬದುಕು ಸಾಗುತ್ತಿರುವಾಗ ಮಂಜಣ್ಣ ತೀರಾ ಚಿಕ್ಕವನು. ಆಗಿನ್ನೂ ಹೆಸರಿಟ್ಟಿರಲಿಲ್ಲ. ಮಗನ ನಾಮಕರಣಕ್ಕೆ ಸಕಲ ತಯ್ಯಾರಿ ನಡೆದಿತ್ತು. ಮಂಜು ಅವರ ತಂದೆ ರೇಷ್ಮೆಗೂಡನ್ನು ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಅಲ್ಲಿಂದ ಅವರು ಬರುವಷ್ಟರಲ್ಲಿ ಮಂಜಣ್ಣನಿಗೆ ತೀರಾ ಸೀರಿಯಸ್ಸ್ ಆಗಿಬಿಟ್ಟಿತ್ತು. ಉಸಿರಾಟಕ್ಕೆ ತೊಂದರೆಯಾಗಿ ಬಾಲ್ಯದಲ್ಲೇ ಮಂಜಣ್ಣ ಕೋಮಾಗೆ ಹೋಗಿ ಬಿಟ್ಟಿದ್ದ. ಆಸ್ಪತ್ರೆಗೆ ತೋರಿಸಿದರಾದರೂ ಕೂಡ ಮಂಜಣ್ಣ ಉಸಿರಾಡಿದ್ದು ಶ್ರೀಮಂಜುನಾಥಸ್ವಾಮಿಯ ತೀರ್ಥ ಹಾಗೂ ಪ್ರಸಾದ ಹೊಟ್ಟೆಗೆ ಹೋದ್ಮೇಲೆ.

ಹೌದು, ಮಗನ ಆರೋಗ್ಯ ಹದಗೆಟ್ಟಿದ್ದೇ ತಡ, ಮಂಜಣ್ಣ ಅವರ ತಂದೆ ಧರ್ಮಸ್ಥಳ ಬಸ್ ಏರಿ ಶ್ರೀಮಂಜುನಾಥನ ಸನ್ನಿಧಿಗೆ ತೆರಳಿದರು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡರು. ವಿಶೇಷ ಪೂಜೆ ಮಾಡಿಸಿಕೊಂಡು ತೀರ್ಥ-ಪ್ರಸಾದ ತೆಗೆದುಕೊಂಡು ಬಂದರು. ಉಸಿರಾಡೋದಕ್ಕೆ ಕಷ್ಟಪಡುತ್ತಿದ್ದ ಪುತ್ರ ಮಂಜಣ್ಣನಿಗೆ ಮಂಜುನಾಥ ಸ್ವಾಮಿ ತೀರ್ಥ ಸೇವನೆ ಮಾಡಿಸಿದರು. ಇದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟ. ಅಂದಿನಿಂದ ಇಂದಿನಿವರೆಗೂ ಮಂಜಣ್ಣ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಗೆ ನಡೆದುಕೊಳ್ತಾರೆ. ಕಷ್ಟ-ಸುಖ-ಸಂತೋಷ ಯಾವುದೇ ಇರಲಿ ಅಲ್ಲಿಗೆ ಹೋಗಿ ಆಶೀರ್ವಾದ ಬೇಡಿಕೊಂಡು ಬರುತ್ತಾರಂತೆ.

ಹಸನಾದ ಬದುಕು…

ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಂಜಣ್ಣನನ್ನು ಬದುಕಿಸಿಕೊಟ್ಟ ಮಂಜುನಾಥಸ್ವಾಮಿ, ಮಂಜಣ್ಣನಿಗೆ ಹಸನಾದ ಬದುಕು ಕಟ್ಟಿಕೊಟ್ಟಿದ್ದಾನೆ. ನಾನು ಕಲಾವಿದ ಆಗ್ಬೇಕು ಎನ್ನುವುದು ಬಾಲ್ಯದ ಕನುಸು ಮಂಜುನಾಥ ದಯವಿಟ್ಟು ಅದೊಂದು ಮಹದಾಸೆಯನ್ನು ಈಡೇರಿಸಿಕೊಡೆಂದು ಒಮ್ಮೆ ಧರ್ಮಸ್ಥಳಕ್ಕೆ ಹೋಗಿ ಅಡ್ಡಬಿದ್ದು ಮಂಜಣ್ಣ ಬೇಡಿಕೊಂಡಿದ್ದತೆ. ಆ ಕನಸು ಮಜಾ ಭಾರತದ ಮೂಲಕ ಕೊನೆಗೂ ಈಡೇರಿಬಿಡ್ತು. ಕಲರ್ಸ್ ಕನ್ನಡದ ಮಜಾ ಅಂಗಳಕ್ಕೆ ಬರುವುದಕ್ಕೂ ಮೊದಲು ಲ್ಯಾಂಗ್ ಮಂಜಣ್ಣ ಬೇಜಾನ್ ಸೈಕಲ್ ಹೊಡೆದಿದ್ದಾರೆ. ತಾನೊಬ್ಬ ಕಲಾವಿದ ಎಂದು ಸಾಬೀತುಪಡಿಸುವುದಕ್ಕೆ ಸಾಕಷ್ಟು ಕಷ್ಟ-ನೋವು-ಅವಮಾನ-ಅಪಮಾನ-ನಿಂದನೆ ಎದುರಿಸಿದ್ದಾರೆ. ಅದಕ್ಕೆ ಇವತ್ತು ದೊಡ್ಮನೆ ಅಂಗಳದಲ್ಲಿ ನಿಂತಿದ್ದಾರೆ. ನಾಲ್ಕು ಜನ ನನ್ನ ಗುರ್ತಿಸಿದರೇ ಸಾಕು ಎನ್ನುತ್ತಿದ್ದ ಲ್ಯಾಂಗ್ ಮಂಜಣ್ಣರನ್ನ ಇವತ್ತು ಇಡೀ ಕರುನಾಡಿನ ಏಳುಕೋಟಿ ಜನರು ಗುರ್ತಿಸುತ್ತಿದ್ದಾರೆ ಜೊತೆಗೆ ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ.

ಕೆಲವೇ ಗಂಟೆಯಲ್ಲಿ ಬಿಗ್‌ಬಾಸ್‌ ಯಾರೆಂಬ ಉತ್ತರ!

ದೊಡ್ಮನೆ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿಪಡೆಯವುದು ಅಷ್ಟು ಸುಲಭವಲ್ಲ. ಅಲ್ಲಿಗೆ ಜಿಗಿದ್ಮೇಲೆ ಎದುರಾಳಿ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಾ, ಗೇಮ್ಸ್ ಗಳಲ್ಲಿ ಜೆನ್ಯೂನ್ ಆಗಿ ಆಡುತ್ತಾ, ಕರುನಾಡ ಮಂದಿಯನ್ನು ರಂಜಿಸುತ್ತಾ ಗ್ರ್ಯಾಂಡ್ ಫಿನಾಲೆವರೆಗೂ ಬರೋದು ತಮಾಷೆ ಮಾತಲ್ಲ. ಅಂತದ್ರಲ್ಲಿ ಲ್ಯಾಗ್ ಮಂಜಣ್ಣ ಬಿಗ್‌ಬಾಸ್ ಫೈನಲ್ಸ್ ತಲುಪಿದ್ದಾರೆ. ಬಿಗ್‌ಬಾಸ್ ಗೆಲ್ತಾರೆ, ಕಿರೀಟ ಮುಡಿಗೇರಿಸಿಕೊಂಡು ಕರುನಾಡ ಅಂಗಳದಲ್ಲಿ ಮೆರವಣಿಗೆ ಹೊರಡ್ತಾರೆ ಎನ್ನುವ ಸುದ್ದಿ ಕೂಡ ಟಪ್ಪಾಂಗುಚ್ಚಿ ಸ್ಟೆಪ್ ಹಾಕ್ತಿದೆ. ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಬಿಗ್‌ಬಾಸ್ ಸೀಸನ್ 8ರ ವಿನ್ನರ್-ರನ್ನರ್ ಯಾರಾಗ್ತಾರೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.

ಆ ಅಂತಿಮ ಉತ್ತರಕ್ಕೂ ಮೊದಲೇ ಕರ್ನಾಟಕದ ಬಹುತೇಕ ಮಂದಿ ಮಂಜು ಪಾವಗಡ ಅವರೇ ಗೆಲ್ಲಬೇಕು ಅಂತ ಆಶಿಸುತ್ತಿದ್ದಾರೆ. ಕೋಮಾದಲ್ಲಿದ್ದಾಗ ಶ್ರೀಮಂಜುನಾಥ ಸ್ವಾಮಿಯೇ ಬದುಕಿಸಿದ್ದು ಅಂತ ಮಂಜಣ್ಣ ಹೇಳಿದ್ಮೇಲಂತೂ ಹಲವು ಮಂದಿ ಬಾಯಲ್ಲಿ ಅದೇ ಮಂಜುನಾಥ ಸ್ವಾಮಿ ಬಿಗ್‌ಬಾಸ್‌ನಲ್ಲಿ ಮಂಜಣ್ಣನ್ನು ಗೆಲ್ಲಿಸೋದು ಖಚಿತವೆಂದು ಮಾತನಾಡಿಕೊಳ್ತಿದ್ದಾರೆ. ನೋಡೋಣ ಮಂಜುನಾಥಸ್ವಾಮಿಯ ಅಭಯಹಸ್ತ ಟಾಪ್ ಫೈವ್ ಕಂಟೆಸ್ಟೆಂಟ್‌ಗಳಲ್ಲಿ ಯಾರ ಮೇಲಿದೆ ಅಂತ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅದಿತಿ ರೈತೋಭವ! ಹಳ್ಳಿ ಸುಂದರಿಯ ಕೃಷಿ ಕೆಲಸ!! ಹೊಲ ಬಿತ್ತಿದರು, ಸಗಣಿ ಬಾಚಿದರು, ಹಾಲು ಕರೆದರು, ರೊಟ್ಟಿ ತಟ್ಟಿದರು…

ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನೂರು, ತನ್ನ ಜನರನ್ನ ಒಂದಲ್ಲ ಒಂದು ದಿನ ನೆನಪಿಸಿಕೊಳ್ಳೋದು ಸಹಜ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್‌ ನಟ, ನಟಿಯರು ಕೂಡ ತಮ್ಮ ಊರು, ಅಲ್ಲಿನ ಪರಿಸರ, ತಾವು ಬಾಲ್ಯದಲ್ಲಿ ಓಡಾಡಿಕೊಂಡ ಬೀದಿ, ಜೊತೆಯಾಗಿದ್ದ ಗೆಳೆಯರು, ಪ್ರೀತಿ ತೋರಿದ ಜನರ ಬಗ್ಗೆ ಹೇಳಿಕೊಂಡಿದ್ದಾರೆ. ಈಗಲೂ ಹಲವರು ಬಿಡುವು ಸಿಕ್ಕಾಗೆಲ್ಲ, ತನ್ನೂರಿಗೆ ತೆರಳಿ ಒಂದಷ್ಟು ಸಮಯ ಕಳೆದು ಬರುತ್ತಾರೆ. ಆ ಸಾಲಿಗೆ ಈಗ ನಟಿ ಅದಿತಿ ಪ್ರಭುದೇವ ಕೂಡ ತನ್ನ ಹಳ್ಳಿ ಕಡೆ ಒಂದು ಸುತ್ತು ಹೋಗಿ ಬಂದಿದ್ದಾರೆ. ಹಾಗಂತ, ಹಳ್ಳಿಗೆ ಸುಮ್ಮನೆ ವಿಸಿಟ್‌ ಹಾಕಿಬಂದಿಲ್ಲ. ಅವರು, ಹಳ್ಳಿಯಲ್ಲಿರೋ ತಮ್ಮ ಹೊಲಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಕೃಷಿ ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ಎಷ್ಟೇ ಆಗಲಿ, ಹಳ್ಳಿ ಹುಡುಗಿ ಅಲ್ಲವೇ?


ಅದಿತಿ ಪ್ರಭುದೇವ ಅವರು ಇತ್ತೀಚೆಗೆ ದಾವಣಗೆರೆ ಸಮೀಪದ ತಮ್ಮ ಹಳ್ಳಿಗೆ ಹೋಗಿ ಒಂದಷ್ಟು ಸಮಯ ಕಳೆದುಬಂದಿದ್ದಾರೆ. ಅವರ ಊರಲ್ಲಿರುವ ಹೊಲದಲ್ಲಿ ಓಡಾಡಿ, ಒಂದಷ್ಟು ಕೃಷಿ ಚಟುವಟಕೆಯಲ್ಲಿ ತೊಡಗಿ ಖುಷಿಗೊಂಡಿದ್ದಾರೆ. ಸದ್ಯ ಅದಿತಿ ಪ್ರಭುದೇವ ಅವರು ಅವರದೇ ಆದ ಯುಟ್ಯೂಬ್‌ ಚಾನೆಲ್‌ನಲ್ಲಿ ಭೂಮಿ ಉಳುಮೆ ಮಾಡಿ, ಮನೆಗೆಲಸ ಮಾಡುತ್ತಿರುವ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಅವರ ಕೃಷಿ ಪ್ರೀತಿ ಹಾಗು ಹಳ್ಳಿಯಲ್ಲಿ ಸಮಯ ಕಳೆದ ಬಗ್ಗೆ ಅವರ ಫ್ಯಾನ್ಸ್‌ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ, ಅದಿತಿ ಪ್ರಭುದೇವ ಅವರು ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಹೇಗೋ, ಆರಂಭದ ದಿನಗಳಲ್ಲಿ ವೇದಿಕೆ ಮೇಲೇರಿ ನಿರೂಪಣೆ ಮಾಡುತ್ತಿದ್ದ ಅದಿತಿ ಅವರಿಗೆ ಕಿರುತೆರೆ ಪ್ರವೇಶಿಸುವ ಅವಕಾಶ ಸಿಕ್ತು. ಅಲ್ಲಿಂದ ಬೆಳ್ಳಿತೆರೆಗೂ ಜಂಪ್‌ ಮಾಡಿದ ಅವರು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿ ನೆಲೆ ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ, ಈಗಲೂ ಕೈ ತುಂಬಾ ಸಿನಿಮಾಗಳಿರುವ ಅದಿತಿ ಸದ್ಯದ ಮಟ್ಟಿಗೆ ಬ್ಯುಝಿ.


ಅದಿತಿ ಪ್ರಭುದೇವ ಅವರು, ಬೇಡಿಕೆ ನಟಿಯಾಗಿದ್ದರೂ, ಅವರ ಸರಳತೆ ಎಲ್ಲರಿಗೂ ಇಷ್ಟವಾಗುತ್ತೆ. ಯಾರೇ ಮಾತಾಡಿಸಿದರೂ, ಆ ಕ್ಷಣಕ್ಕೆ ಸ್ಪಂದಿಸುವ ಗುಣ ಅವರದು. ಹಳ್ಳಿ ಬದುಕಿನ ಬಗ್ಗೆ ಅಪಾರವಾಗಿ ತಿಳಿದಿರುವ ಅವರು, ರೈತರ ಶ್ರಮದ ಬಗ್ಗೆಯೂ ಅರಿತಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಹಳ್ಳಿಗೆ ಹೋಗಿ ಬರುವ ಅದಿತಿ, ಈ ಬಾರಿ, ಅವರ ಹೊಲದಲ್ಲಿ ತಾವೇ ಕೆಲಸ ಮಾಡಿದ್ದಾರೆ. ಹೊಲ ಬಿತ್ತುವ ಸಂದರ್ಭದಲ್ಲಿ ಅದಿತಿ ಕೂಡ ಟ್ರಾಕ್ಟರ್ ಏರಿ ಬಿತ್ತನೆಗೆ ಮುಂದಾಗಿದ್ದಾರೆ. ಎತ್ತುಗಳನ್ನು ಓಡಿಸುವ ಮೂಲಕ ಹೊಲವನ್ನು ಉಳುಮೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.


ಇದರೊಂದಿಗೆ ಅದಿತಿ ಅವರು, ಹೊಲದ ಮನೆಯಲ್ಲಿ ಸಾಕಿರುವ ಹಸುಗಳ ಸಗಣಿ ಬಾಚಿದ್ದಾರೆ. ನಂತರ ಹಾಲು ಕರೆದು ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಹೊಲದ ಮನೆಯಲ್ಲೇ ಕಟ್ಟಿಗೆ ಒಲೆ ಮುಂದೆ ಕೂತು ರೊಟ್ಟಿ ತಟ್ಟಿದ್ದಾರೆ. ಅದೇನೆ ಇರಲಿ, ಕೃಷಿ ಕುಟುಂಬದ ಹುಡುಗಿಯಾಗಿ, ರೈತ ಮಾಡುವ ಕೆಲಸವನ್ನು ಪ್ರೀತಿಸಿ, ತಾನೂ ಒಂದಷ್ಟು ಸಮಯ ಹೊಲದಲ್ಲಿ ಕಳೆದು ಖುಷಿಯಾಗಿರುವ ಅದಿತಿ ಅವರ ಕೆಲಸಕ್ಕೆ ಎಲ್ಲಡೆಯಿಂದ ಮೆಚ್ಚುಗೆ ಸಿಗುತ್ತಿದೆ.

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ `ಕಲಿವೀರ’ ಲಗ್ಗೆ; ಸಿನಿ ಪ್ರೇಮಿಗಳು ಏನಂದ್ರು ? ಕೈ ಹಿಡಿದು ಕಾಪಾಡ್ಬೇಕಿದೆ ಮುಕ್ಕೋಟಿ ಒಡೆಯ !?

ಚಿತ್ರ ವಿಮರ್ಶೆ

  • ವಿಶಾಲಾಕ್ಷಿ

ಶುಭ ಶುಕ್ರವಾರ ಸಿನಿ ಶುಕ್ರವಾರ ಚಿತ್ರಮಂದಿರಕ್ಕೆ ಸಿನಿಮಾವೊಂದು ಲಗ್ಗೆ ಇಟ್ಟಿದೆ. ಚಿತ್ರಮಂದಿರಗಳು ಮದುವಣಗಿತ್ತಿಯಂತೆ ಕಂಗೊಳ್ಳಿಸುತ್ತಿವೆ, ಪ್ರೇಕ್ಷಕ ಮಹಾಷಯರು ಸಾಗರೋಪಾದಿಯಲ್ಲಿ ಥಿಯೇಟರ್‌ನತ್ತ ದೌಡಾಯಿಸುತ್ತಿದ್ದಾರೆ. ಈಗಾಗಲೇ ಹೌಸ್‌ಫುಲ್ ಬೋರ್ಡ್ಬಿದ್ದಿದೆ. ಫಿಲಂ ಟೀಮ್‌ ಮೊಗದಲ್ಲಿ ಮಂದಹಾಸ ಮೂಡಿದೆ. ಈ ರೀತಿ ಬರೆಯುವ ಸಂದರ್ಭ ಆದಷ್ಟು ಬೇಗ ಬರಬೇಕು. ಸದ್ಯದ ಪರಿಸ್ಥಿತಿಯನ್ನು ನೋಡಿದ್ರೆ, ಕೊರೊನಾ ಮೂರನೇ ಅಲೆಯ ಅವಾಂತರವನ್ನು ಸೂಕ್ಷವಾಗಿ ಗಮನಿಸಿದರೆ ಅಂತಹದ್ದೊಂದು ಸಂದರ್ಭ ಹಾಗೂ ಸನ್ನಿವೇಶ ಸದ್ಯಕ್ಕಿಲ್ಲ ಎನ್ನುವ ಸೂಚನೆ ಸಿಕ್ಕರೂ ಕೂಡ ಹುಂಬು ಧೈರ್ಯ ಮಾಡಿ ಮಲ್ಟಿಪ್ಲೆಕ್ಸ್ ಅಖಾಡಕ್ಕೆ ಧುಮ್ಕಿರುವ `ಕಲಿವೀರ’ನ ಕಾನ್ಫಿಡೆನ್ಸ್‌ಗೆ ಉಘೇ ಉಘೇ ಎನ್ನಲೆಬೇಕು.

ಕಲಿವೀರ ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾಗಿರುವ ಕನ್ನಡದ ಮೊದಲ ಚಿತ್ರ. ಕೊರೊನಾ ಮೂರನೇ ಅಲೆ ಶುರುವಾಗುತ್ತಂತೆ, ಮತ್ತೆ ಲಾಕ್‌ಡೌನ್ ಮಾಡ್ತಾರಂತೆ ಎನ್ನುವ ಸದ್ದುಗದ್ದಲ್ಲದ ನಡುವೆಯೂ ಕೂಡ `ಕಲಿವೀರ’ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಸರ್ಕಾರ ಶೇಕಡ 100ರಷ್ಟು ವಿನಾಯಿತಿಯನ್ನು ನೀಡದ ಕಾರಣ ಸಿಂಗಲ್ ಸ್ಕ್ರೀನಿಂಗ್‌ ಚಿತ್ರಮಂದಿರಗಳು ಇನ್ನೂ ಬಾಗಿಲು ತೆರೆದಿಲ್ಲ. ಆದರೆ, ಮಾಲ್ ಮಂದಿ 50 ಪರ್ಸೆಂಟ್ ಆದರೂ ಪರವಾಗಿಲ್ಲ ಸಿನಿಮಾ ಹಾಕೋದಕ್ಕೆ ರೆಡಿ ಇರೋದ್ರಿಂದ ಕಲಿವೀರ ಚಿತ್ರತಂಡ ಕರ್ನಾಟಕದಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್‌ ಗಳಲ್ಲಿ ತಮ್ಮ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಹಾಗಾದ್ರೆ, ಕಲಿವೀರ ಚಿತ್ರ ಹೇಗಿದೆ? ಕಥೆಯ ತಿರುಳೇನು? ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿದ ಕ್ಲಾಸ್ ಮಂದಿ ಏನಂದ್ರು? ಹುಂಬು ಧೈರ್ಯ ಮಾಡಿ ರಿಲೀಸ್ ಮಾಡಿದ ಚಿತ್ರತಂಡ ಖುಷಿಯಾಗಿದೆಯಾ? ಕಲಿವೀರನ ಹುಚ್ಚು ಸಾಹಸಕ್ಕೆ ಮೆಚ್ಚುಗೆ ಸಿಕ್ಕಿತಾ? ಏಕಲವ್ಯನ ಚೊಚ್ಚಲ ಅಭಿನಯಕ್ಕೆ ಸಿನಿರಸಿಕರು ಉಘೇ ಉಘೇ ಎಂದರಾ? ಈ ರೀತಿ ಒಂದಿಷ್ಟು ಪ್ರಶ್ನೆಗಳು ಕಾಡುತ್ತವೆ. ಕಲಿವೀರನ ಬಗ್ಗೆ ಹೇಳುವುದಾದರೆ..,

ಕಲಿವೀರ' ಸ್ಯಾಂಡಲ್‌ವುಡ್ ಅಂಗಳದಲ್ಲಿ ಟೀಸರ್ ಹಾಗೂ ಟ್ರೇಲರ್‌ನಿಂದಲೇ ಕೂತೂಹಲ ಕೆರಳಿಸಿದ್ದ ಚಿತ್ರ. ಕಥೆ-ಚಿತ್ರಕಥೆ ಹೇಗಿರಬಹುದು ಎನ್ನುವ ಲೆಕ್ಕಚ್ಚಾರಕ್ಕಿಂತ ನಾಯಕ ಏಕಲವ್ಯನ ಆಕ್ಷನ್ ಧಮಾಕ ನೋಡುವುದಕ್ಕೆ ಒಂದಿಷ್ಟು ಮಂದಿ ಕೌತುಕದಿಂದ ಕಾಯ್ತಿದ್ದರು. ಆ ಕೂತೂಹಲಕ್ಕೆ ಇವತ್ತು ತೆರೆಬಿದ್ದಿದೆ. ಡ್ಯೂಪ್-ರೋಪ್ ಹಾಕಿಸಿಕೊಳ್ಳದೆ ಕಲಿವೀರ ಹೊಡೆದಾಡಿರುವುದನ್ನು ನೋಡಿದರೆ ಎದೆ ಝಲ್ ಎನಿಸುತ್ತೆ. ಕಳರಿಪಯಟ್ಟು ಸಮರ ಕಲೆಯಲ್ಲಿ ಪ್ರವೀಣರಾಗಿರುವ ಏಕಲವ್ಯ ʼಕಲಿವೀರ’ನಾಗಿ ಕಮಾಲ್ ಮಾಡಿದ್ದಾರೆ. ಚೊಚ್ಚಲ ಸಿನಿಮಾ ಆದರೂ ಕೂಡ ಹತ್ತಾರು ಸಿನಿಮಾ ಮಾಡಿರುವ ನಟರಂತೆ ಕ್ಯಾಮೆರಾ ಎದುರಿಸಿದ್ದಾರೆ. ಏನಾದರೊಂದು ಸಾಧನೆ ಮಾಡೋವರೆಗೂ ಗಡ್ಡ ತೆಗಿಯಲ್ಲ-ಮೀಸೆ ಬೋಳಿಸಲ್ಲ ಅಂತ ಪಣತೊಟ್ಟು ಸಾಧಿಸಿ ತೋರಿಸಿದ್ದಾರೆ. ಭರ್ತಿ ಮೂವತ್ತು ವರ್ಷದ ಕನಸನ್ನು ನನಸು ಮಾಡಿದ್ದಾರೆ. ಜೀವಂತವಾಗಿ ಉಳಿದಿಲ್ಲದ ಹೆತ್ತವ್ವನ ಮಹದಾಸೆಯೊಂದನ್ನು ಈಡೇರಿಸಿ ಬೆಳ್ಳಿಪರದೆ ಮೇಲೆ ಮೆರವಣಿಗೆ ಹೊರಟಿದ್ದಾರೆ.

ಇಷ್ಟೆಲ್ಲಾ ಹೇಳಿದ್ಮೇಲೆ ಕಲಿವೀರ' ಕಥೆ ಏನು? ಕೊರೊನಾ ಆತಂಕಬಿಟ್ಟು ನಾವ್ಯಾಕೆ ಮಲ್ಟಿಪ್ಲೆಕ್ಸ್‌ಗೆ ಹೋಗಿ ಸಿನಿಮಾ ನೋಡ್ಬೇಕು? ಒಂದು ವೇಳೆ ದುಡ್ಡು ಕೊಟ್ಟು ಮಾಲ್‌ಗೆ ಹೋಗಿ ಸಿನಿಮಾ ನೋಡಿದರೆಕಲಿವೀರ’ ನಮ್ಮನ್ನು ರಂಜಿಸುತ್ತಾನೆಯೇ? ಕೊಟ್ಟ ದುಡ್ಡಿಗೆ ನಮಗೆ ಮೋಸ ಆಗುವುದಿಲ್ಲವೇ? ಕಂಪ್ಲೀಟ್ ಫ್ಯಾಮಿಲಿ ಕರೆದುಕೊಂಡು ಹೋಗಿ ಸಿನಿಮಾ ನೋಡಬಹುದೇ? ಹಂಡ್ರೆಡ್‌ ಪರ್ಸೆಂಟ್ ಅಲ್ಲ ಅಂದರೂ ಕೂಡ ೫೦ ಪರ್ಸೆಂಟ್ ಶ್ಯೂರಿಟಿ ಕೊಡಬಹುದು. `ಕಲಿವೀರ’ ನಿಮ್ಮನ್ನ ಸೀಟಿನಲ್ಲಿ ಕೂರಿಸುತ್ತಾನೆ. ಕಣ್ಣುಬ್ಬು ಎಗಿರಿಸುತ್ತಾ, ಕಣ್ಣಲ್ಲೇ ಅಭಿನಯಿಸುತ್ತಾ, ಜಬರ್ದಸ್ತ್ ಆಕ್ಷನ್ ಮಾಡುವ ಜೊತೆಗೆ ಪ್ರಾಣಿ-ಪಕ್ಷಿಯಂತೆ ಸೌಂಡ್ ಮಾಡುತ್ತಾ ರಂಜಿಸುತ್ತಾನೆ. ತಬಲನಾಣಿಯವರ ಕಾಮಿಡಿ, ಅನಿತಾಭಟ್‌ ಅವರ ಗ್ಲಾಮರ್ ನೋಟ ಕಿಕ್ ಕೊಡುತ್ತೆ. ಪಾವನಗೌಡ-ಚಿರಶ್ರೀ ಅಂಚನ್ ಇಬ್ಬರು ನಟಿಯರು ಗಮನ ಸೆಳೆಯುತ್ತಾರೆ. ಡ್ಯಾನಿ ಕುಟ್ಟಪ್ಪ ಖಳನಾಯಕರಾಗಿ, ರಮೇಶ್ ಪಂಡಿತ್ ಮಂತ್ರವಾದಿಯಾಗಿ ಮಂತ್ರಮುಗ್ದಗೊಳಿಸ್ತಾರೆ.

ಯಾರು ಈ ಕಲಿ?

ʼಕಲಿ' ಒಬ್ಬ ಆದಿವಾಸಿ ಜನಾಂಗಕ್ಕೆ ಸೇರಿದವ. ತಮ್ಮ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ದ ಸಿಡಿದೆದ್ದು ಪ್ರತಿಕಾರ ತೀರಿಸಿಕೊಳ್ತಾನೆ. ವಜ್ರದ ಶಿವಲಿಂಗವೇ ಕಲಿವೀರ’ ಚಿತ್ರ ಕಥೆಯ ಪ್ರಮುಖ ತಿರುಳು. ಆದಿವಾಸಿ ಸಮುದಾಯ ಈ ವಜ್ರದ ಶಿವಲಿಂಗವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುತ್ತಿತ್ತು. ಈ ವಜ್ರದ ಶಿವಲಿಂಗದ ಮೇಲೆ ಆಫ್ಗಾನ್ ದೊರೆ ಘಡಾಫು ಕಣ್ಣಿಟ್ಟು ಸಂಚು ರೂಪಿಸ್ತಾನೆ. ಹೇಗಾದರೂ ಮಾಡಿ ಆದಿವಾಸಿ ಸಮುದಾಯವನ್ನು ಮಟ್ಟ ಹಾಕಿ ವಜ್ರದ ಶಿವಲಿಂಗ ವಶಪಡಿಸಿಕೊಳ್ಳೋಕೆ ಪ್ಲಾನ್ ರೂಪಿಸ್ತಾನೆ. ಅದರಂತೇ ಎಲ್ಲರನ್ನೂ ನಾಶಪಡಿಸುತ್ತಾನೆ. ಆದರೆ, ಕಲಿಯನ್ನು ಮಟ್ಟ ಹಾಕೋದಕ್ಕೆ ಸಾಧ್ಯವಾಗೋದಿಲ್ಲ. ವಜ್ರದ ಶಿವಲಿಂಗ ಆಫ್ಗಾನ್ ದೊರೆ ಘಡಾಫು ಕೈ ಸೇರಲ್ಲ. ಅದು ಹೇಗೆ ಎಂತ ಅನ್ನೋದಕ್ಕೆ ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡ್ಬೇಕು. ಅಂದ್ಹಾಗೇ,
ಮೊಹಮ್ಮದ್ ಘಜ್ನಿ ಹಾಗೂ ಮೊಹಮ್ಮದ್ ಘೋರಿ ಹಿಂದೂ ಸ್ಥಾನದ ಮೇಲೆ ದಂಡೆತ್ತಿ ಬಂದು ಎಷ್ಟೋ ದೇವಸ್ತಾನಗಳನ್ನು ಹೊಡೆದುರುಳಿಸಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆನ್ನುವುದಕ್ಕೆ ಇತಿಹಾಸ ಪುಟದಲ್ಲಿ ಪುರಾವೆಗಳಿವೆ. ಆ ಪುರಾವೆಯನ್ನ ಇಟ್ಕೊಂಡು ಕಾಲ್ಪನಿಕವಾಗಿ ಕಥೆ ಮಾಡಿಟ್ಟುಕೊಂಡ ನಿರ್ದೇಶಕ ಅವಿಯವರು, `ಕಲಿವೀರ’ ಚಿತ್ರ ಮಾಡಿದ್ದಾರೆ. ಕಥೆಯಷ್ಟೇ ನಿರೂಪಣೆ ಕೂಡ ಸೊಗಸಾಗಿದೆ. ಅಲ್ಲಿ ದೇಸಿ ಸೊಗಡನ್ನು ಅಷ್ಟೇ ಅರ್ಥಪೂರ್ಣವಾಗಿ ಬಿಂಬಿಸಿದ್ದಾರೆ ಕೂಡ. ಇನ್ನು, ಚಿತ್ರಕ್ಕೆ ಪೂರಕವಾಗಿ ಕ್ಯಾಮೆರಾ ಕಣ್ಣು ಏಕಲವ್ಯನ ಸ್ಪೀಡ್‌ಗೆ ತಕ್ಕಂತೆ ವರ್ತಿಸಿದೆ. ಸಂಗೀತ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ. ಸಿನಿಮಾಗೆ ಸಂಕಲನ ಕೂಡ ಮುಖ್ಯ. ಇಲ್ಲಿ ಕತ್ತರಿ ಪ್ರಯೋಗವೂ ತನ್ನ ವೇಗ ಕಳೆದುಕೊಂಡಿಲ್ಲ. ಇಷ್ಟಾಗಿಯೂ ಈ ಕಲಿವೀರನ ಬಗ್ಗೆ ನೋಡುವ ಕುತೂಹಲವೇನಾದರೂ ಇದ್ದರೆ, ಥಿಯೇಟರ್‌ನತ್ತ ಮುಖಮಾಡಬಹುದು.

ಚಿತ್ರ : ಕಲಿವೀರ
ನಿರ್ದೇಶಕ : ಅವಿನಾಶ್‌ ಭೂಷಣ್
ನಿರ್ಮಾಪಕ:‌ ಹನುಮಂತಪ್ಪ, ರಾಜು ಪೂಜಾರ್
ಸಂಗೀತ- ವಿ.ಮನೋಹರ್
ತಾರಾಗಣ: ಏಕಲವ್ಯ, ತಬಲಾನಾಣಿ, ಚಿರಶ್ರೀ ಅಂಚನ್‌, ನೀನಾಸಂ ಅಶ್ವತ್ಥ್‌, ಪಾವನಾ, ಅನಿತಾಭಟ್‌, ಡ್ಯಾನಿ ಕುಟ್ಟಪ್ಪ, ಮೋಹನ್‌ ಜುನೇಜಾ ಇತರರು.

Categories
ಸಿನಿ ಸುದ್ದಿ

ಗ್ರೂಫಿ ಸಾಂಗ್‌ ಹೊರಬಂತು;‌ ಹೊಸಬರಿಗೆ ಅರ್ಜುನ್‌ ಜನ್ಯ ಸಾಥ್ -‌ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್


“ಗ್ರೂಫಿ”… ಇದು ಹೊಸಬರ ಸಿನಿಮಾ. ಏನಿದು ಗ್ರೂಫಿ? ಸಾಮಾನ್ಯವಾಗಿ ಎಲ್ಲರಿಗೂ ಇದೊಂದೇ ಈ ಪ್ರಶ್ನೆ. ಒಬ್ಬರೇ ಫೋಟೋ ಕ್ಲಿಕ್ಕಿಸಿಕೊಂಡರೆ ಸೆಲ್ಫಿ. ಅದೇ ಗುಂಪಾಗಿ ತೆಗೆದುಕೊಳ್ಳುವುದಕ್ಕೆ ಗ್ರೂಫಿ ಅಂತಾರೆ. ಅಂದಹಾಗೆ, ಈ ಚಿತ್ರವನ್ನು ರವಿ ಅರ್ಜುನ್‌ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಯನ್‌ ಹೀರೋ. ಪದ್ಮಶ್ರೀ ಸಿ.ಜೈನ್‌ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅರ್ಜುನ್‌ ಜನ್ಯ ಅವರು ಸಾಂಗ್‌ ರಿಲೀಸ್‌ ಮಾಡಿ ಶುಭಹಾರೈಸಿದರು. ಈ ವೇಳೆ ಮಾತಿಗಿಳಿದ ಅವರು, ಸಿನಿಮಾ ಹಾಡುಗಳು ಚೆನ್ನಾಗಿವೆ. ನನ್ನ ಪ್ರಕಾರ ಗ್ರೂಫಿ ಅಂದರೆ ಹೆಮ್ಮೆ ಅಂತ. ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹಾಗೂ ನಿರ್ದೇಶಕ ರವಿ ಅರ್ಜುನ್ ಸ್ನೇಹಿತರು. ಇಪ್ಪತ್ತು ವರ್ಷದ ಹಿಂದೆ ಇದೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವಿ.ಮನೋಹರ್ ಅವರ ಬಳಿ ನನ್ನ ಸಂಗೀತ ಪಯಣ ಆರಂಭವಾಗಿತ್ತು. ನನ್ನ ಸ್ನೇಹಿತನ ಮೊದಲ ಸಿನಿಮಾ ಆಡಿಯೋ ರಿಲೀಸ್ ಇಲ್ಲೇ ಆಗುತ್ತಿರುವುದು ಕಾಕತಾಳೀಯ. ಇಡೀ ತಂಡಕ್ಕೆ ಶುಭವಾಗಲಿ ಎಂಬುದು ಅರ್ಜುನ್‌ ಜನ್ಯ ಮಾತು.


ನಿರ್ದೇಶಕ ರವಿ ಅರ್ಜುನ್‌ ಹೇಳುವಂತೆ, “ಗ್ರೂಫಿ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಸಿನಿಮಾ. ಒಬ್ಬರೆ ಫೋಟೋ ತೆಗೆದುಕೊಂಡರೆ ಸೆಲ್ಫಿ. ಗುಂಪಾಗಿ ತೆಗೆದುಕೊಳ್ಳುವುದನ್ನು “ಗ್ರೂಫಿ” ಎನ್ನುತ್ತಾರೆ ಈಗಿನ ಯುವಪೀಳಿಗೆ. ಚಿತ್ರದ ಶೀರ್ಷಿಕೆಗೆ ಹಾಗೂ ಕಥೆಗೆ ಸಂಬಂಧವಿದೆ ಹಾಗಾಗಿ ಈ ಹೆಸರಿಟ್ಟಿದ್ದೇವೆ. ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರು, ಹೊನ್ನಾವರ, ಮಡಿಕೇರಿ ಹಾಗೂ ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ ಎಂಬುದು ರವಿ ಅರ್ಜುನ್ ಮಾತು.


ನಾಯಕ ಆರ್ಯನ್‌ ಇಲ್ಲಿ ಛಾಯಾಗ್ರಾಹಕನ ಪಾತ್ರ ಮಾಡಿದ್ದಾರಂತೆ. ಚಿತ್ರ ನೋಡಿ ಹರಸಿ ಅನ್ನುತ್ತಾರೆ ನಾಯಕ ಆರ್ಯನ್. ನಾಯಕಿ ಪದ್ಮಶ್ರೀ ಸಿ.ಜೈನ್‌ ಅವರಿಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರು ಎಲ್ಲರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು. ಎಷ್ಟು ಲೈಕ್ ಹಾಗೂ ಕಾಮೆಂಟ್ ಬರುತ್ತದೆ ಎಂದು ಕಾಯುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ.
ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ ಅವರಿಗೆ ಅವರ ಗುರು ಅರ್ಜುನ್‌ ಜನ್ಯ ಅವರು ಸಾಂಗ್‌ ರಿಲೀಸ್‌ ಮಾಡಿದ್ದು ಖುಷಿ ಕೊಟ್ಟಿದೆಯಂತೆ.

ಇನ್ನು ನಿರ್ಮಾಪಕ ಕೆ.ಜಿ.ಸ್ವಾಮಿ ಅವರಿಗೆ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತಂತೆ. ವರಮಹಾಲಕ್ಷ್ಮೀ ಹಬ್ಬದಂದು ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಉತ್ತಮ ಸಂದೇಶ ಇರುವ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಅವರು.
ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ ಮಾಡಿದರೆ, ವಿಜೇತ್ ಚಂದ್ರ ಸಂಕಲನ ಮತ್ತು ಇಮ್ರಾನ್ ಸರ್ದಾರಿಯಾ, ಮೋಹನ್ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಶ್ರೀಧರ್, ಹನುಮಂತೇಗೌಡ, ಸಂಗೀತ, ರಜನಿಕಾಂತ್ ನಟಿಸಿದ್ದಾರೆ.

ಚಿತ್ರದ ನಾಲ್ಕು ಹಾಡುಗಳಿಗೆ ಜಯಂತ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್, ರವಿ ಅರ್ಜುನ್ ಬರೆದಿದ್ದಾರೆ. ಸಂತೋಷ್ ವೆಂಕಿ, ಮಾನಸ ಹೊಳ್ಳ, ಅನಿರುದ್ಧ ಶಾಸ್ತ್ರಿ, ವಿಜೇತ್ ಕೃಷ್ಣ ಹಾಗೂ ರಕ್ಷ ಹಾಡಿದ್ದಾರೆ.

Categories
ಸಿನಿ ಸುದ್ದಿ

ನಟ ಬಿರಾದಾರ್‌ ಮೈಲಿಗಲ್ಲು! ವೈಜನಾಥ್ ಅಭಿನಯದ ಐನೂರನೇ ಸಿನಿಮಾ‌ ಬಿಡುಗಡೆಗೆ ಸಜ್ಜು!!

ಒಬ್ಬ ನಟನ ವೃತ್ತಿ ಬದುಕಲ್ಲಿ ಐನೂರನೇ ಸಿನಿಮಾ ಅನ್ನೋದು ನಿಜಕ್ಕೂ ಮೈಲಿಗಲ್ಲು. ಅದರಲ್ಲೂ ಅಪರೂಪದ ನಟರಾಗಿ ಗುರುತಿಸಿಕೊಂಡಿರುವ ಹಾಸ್ಯ ನಟ ವೈಜನಾಥ್‌ ಬಿರಾದಾರ್‌ ಅವರು ಯಶಸ್ವಿ ಐನೂರನೇ ಸಿನಿಮಾಗೆ ಬಣ್ಣ ಹಚ್ಚಿ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಆ ಸಿನಿಮಾ ಇತ್ತೀಚೆಗೆ ಡಬ್ಬಿಂಗ್‌ ಕಾರ್ಯವನ್ನೂ ಮುಗಿಸಿದೆ. ಹೌದು, “ನೈಂಟಿ ಹೊಡಿ ಮನೀಗ್‌ ನಡಿ” ಸಿನಿಮಾ ಈಗ ಬಿಡುಗಡೆಯತ್ತ ಸಾಗಿದೆ. ಅಂದಹಾಗೆ, ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರಿನಡಿ ನಿರ್ಮಾಣವಾಗಿರುವ “ನೈಂಟಿ ಹೊಡಿ ಮನೀಗ್ ನಡಿ” ಚಿತ್ರ ಇತ್ತೀಚೆಗಷ್ಟೇ ಡಬ್ಬಿಂಗ್ ಮುಗಿಸಿದೆ.

ಈ ಸಿನಿಮಾ ನಟ ವೈಜನಾಥ ಬಿರದಾರ್ ಅವರ ಐನೂರನೇ ಚಿತ್ರ ಅನ್ನೋದು ವಿಶೇಷ. ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತ ಕೊನೆಯ ಹಂತದ ಚಿತ್ರೀಕರಣ ಮುಗಿಸಿತ್ತು. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಔಟ್ ಆಂಡ್ ಔಟ್ ಕಮರ್ಷಿಯಲ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು, ರತ್ನಮಾಲಾ ಬಾದರದಿನ್ನಿ ಅವರು ಚಿತ್ರದ ನಿರ್ಮಾಪಕರು.

ಚಿತ್ರದಲ್ಲಿ ವೈಜನಾಥ ಬಿರಾದರ್ ಅವರಿಗೆ ಜೋಡಿಯಾಗಿ ನೀತು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರೀತು ಪೂಜಾ, ಹಿರಿಯ ನಟರಾದ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಆರ್.ಡಿ. ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಹೊಸಕೋಟೆ ಮುರುಳಿ, ಸಂತು ಸೊಕನಾದಗಿ, ರಾಜು ಗೂಗವಾಡ, ಎಲ್ಐಸಿ ಲೋಕೇಶ್ ಸೇರಿದಂತೆ ಇತರರು ನಟಿಸಿದ್ದಾರೆ.

ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ ಮಾಡಿದರೆ, ರಾಕಿ ರಮೇಶ್ ಸಾಹಸವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ. ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಉತ್ತರ ಕರ್ನಾಟಕದ ನಾಟಿ ಶೈಲಿಯ ಹಾಡಿಗೆ “ಚುಟು ಚುಟು” ಖ್ಯಾತಿಯ ಶಿವು ಭೆರ್ಗಿ ಸಾಹಿತ್ಯ ಬರೆದು, ಸಂಗೀತ ನೀಡಿದದಾರೆ. ಆ ಹಾಡಿಗೆ ರವೀಂದ್ರ ಸೋರಗಾಂವಿ ಮತ್ತು ಶಮಿತಾ ಮಲ್ನಾಡ್ ಧ್ವನಿಯಾಗಿದ್ದಾರೆ. ಭೂಷಣ್ ನೃತ್ಯ ನಿರ್ದೇಶನವಿದೆ. ಸದ್ಯ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಗಿಸಿ, ಬಿಡುಗಡೆ ಕೆಲಸದತ್ತ ಚಿತ್ರತಂಡ ತೊಡಗಿಕೊಂಡಿದೆ.

error: Content is protected !!