ಎರಡ್ಮೂರು ದಿನಗಳಲ್ಲಿ ಚಿತ್ರ ರಂಗಕ್ಕೆ ಗುಡ್‌ ನ್ಯೂಸ್‌! ಚಿತ್ರಮಂದಿರಗಳಲ್ಲಿ‌ನೂರರಷ್ಟು ಸೀಟು ಭರ್ತಿಗೆ ಮನವಿ

ಸಿನಿಮಾ‌ರಂಗ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಲು ರೆಡಿಯಾಗುತ್ತಿದೆ.ಇಷ್ಟರಲ್ಲಿಯೇ ಚಿತ್ರಮಂದಿರಗಳಲ್ಲಿನ ನೂರರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶ‌ನೀಡುವ ಸಾದ್ಯತೆ ಇದೆ. ಹಾಗೊಂದು ಸುಳಿವು ಮಂಗಳವಾರ ಸರ್ಕಾರದಿಂದ ಸಿಕ್ಕಿದೆ. ಮಂಗಳವಾರ ಸಿನಿಮಾ ರಂಗವನ್ನು ಪ್ರತಿನಿಧಿಸಿ ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್ ಹಾಗೂ ಜಯಣ್ಣ ಸೇರಿದಂತೆ ಒಂದು ನಿಯೋಗವು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿತ್ತು‌ . ಈ ಸಂದರ್ಭದಲ್ಲಿ ಚಿತ್ರರಂಗದ ಸದ್ಯದ ಸ್ಥಿತಿಗತಿ ಹಾಗೂ ಸದ್ಯಕ್ಕೆ ಇರುವ ವಾತಾವರಣ ವನ್ನು ವಿವರಿಸಿ, ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ‌ಮಾಡಿತು.ನಿರ್ಮಾಪಕರ ಜತೆಗಿನ ಮಾತುಕತೆ ನಂತರ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ರಂಗ ಆನುಭವಿಸಿದ ಕಷ್ಟದ ಅರಿವು ನಮಗೂ ಇದೆ. ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮಾತನಾಡುತ್ತೇವೆ. ಬಹುತೇಕ ತಾಂತ್ರಿಕ ಸಮಿತಿ ಕೂಡ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಇಷ್ಟರಲ್ಲಿಯೇ ಅವಕಾಶ ನೀಡುವ ಆಶಾಭಾವನೆ ನಮಗೂ ಇದೆ ಎಂದರು.


ಚಿತ್ರಮಂದಿರಗಳಲ್ಲಿ ಈಗಾಗಲೇ ಶೇ.೫೦ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗಷ್ಟೇ ನಿರ್ಮಾಪಕರು ನನ್ನನ್ನ ಭೇಟಿ ಮಾಡಿದ್ದರು. ಅವರು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾ ರಂಗಕ್ಕಾದ ನಷ್ಟದ ಬಗ್ಗೆ ಅವರು ಹೇಳಿದ್ದಾರೆ. ಸಿನಿಮಾ ರಂಗದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ನಮಗೂ ಅರಿವಿದೆ. ಇದನ್ನು ಮುಖ್ಯಮಂತ್ರಿಗಳ ಜತೆಗೂ ಮಾತನಾಡುತ್ತೇನೆ. ಆದಷ್ಟು ಬೇಗ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.


ಕೊರೋನಾ ಈಗಲೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಒಂದಷ್ಟು ಪಾಸಿಟಿವ್‌ ಕೇಸುಗಳು ಬರುತ್ತಿವೆ. ಈಗ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತಜ್ಞರ ಸಲಹೆಯೇ ಅಂತಿಮ. ಈ ನಿಟ್ಟಿನಲ್ಲಿಯೇ ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮತ್ತೆ ಮಾತನಾಡುತ್ತೇವೆ. ಆ ಸಮಿತಿ ಯಾವ ಅಭಿಪ್ರಾಯ ನೀಡಬಹುದು ಎನ್ನುವ ಬಗ್ಗೆ ನಮಗೂ ಕುತೂಹಲ ಇದೆ. ಸದ್ಯಕ್ಕೆ ಕೊರೋನಾ ಪಾಸಿಟಿವ್‌ ಸಂಖ್ಯೆ ಕಮ್ಮಿ ಆಗುತ್ತಿರುವುದರಿಂದ ಸಿನಿಮಾ ಮಂದಿರಗಳಿಗೆ ಶೇ.100 ರಷ್ಟು ಅವಕಾಶ ಸಿಗಬಹುದು ಎಂಬ ಆಶಾಭಾವನೆ ಇದೆ ಎಂದರು.


ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡುವುದಕ್ಕೂ ಮೊದಲು ಚರ್ಚೆ ನಡೆಸಬೇಕಿದೆ. ಬಳಿಕ ಸೋಂಕಿತರ ಸಂಖ್ಯೆ ನೋಡಿಕೊಂಡು ತೀರ್ಮಾನ ಮಾಡಲಿದ್ದೇವೆ. ಸೋಂಕು ಮತ್ತೆ ಹೆಚ್ಚಳವಾಗದಂತೆ ಕ್ರಮ ವಹಿಸಬೇಕಾಗುತ್ತದೆ. ಸಿಎಂ, ನಾನು ಹಾಗೂ ಎಲ್ಲರೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Related Posts

error: Content is protected !!