ಮೈಸೂರು ಅಂದಾಕ್ಷಣ ನೆನಪಾಗೋದೇ ಅರಮನೆ, ದಸರಾ ವೈಭವ. ಈಗ ಮೈಸೂರು ಹೆಸರಿನ ಸಿನಿಮಾವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡಿದೆ. ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೆಸರಿನ ಸಿನಿಮಾ ರೆಡಿಯಾಗಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗುತ್ತಿದೆ. ಇದು ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನೊಬ್ಬನ ಲವ್‌ಸ್ಟೋರಿ ಹೊಂದಿದೆ.
ಸದ್ಯ ಚಿತ್ರೀಕರಣಗೊಂಡಿರುವ ಈ ಚಿತ್ರ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್ ಇತರೆ ಸ್ಥಳಗಳಲ್ಲಿ ಸುಮಾರು ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕಿರುತೆರೆಯಲ್ಲಿ ಕೆಲಸ ಮಾಡಿ ಅನುಭವ ಇರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್. ಆರ್. ಕಂಬೈನ್ಸ್ ಬ್ಯಾನರ್‌ನಲ್ಲಿ ವಾಸುದೇವ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಜಗದೀಶ್ (ಜೆ.ಕೆ), ಕೆ.ಆರ್.ಅಪ್ಪಾಜಿ (ಕೊಡವತ್ತಿ) ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂಬುದು ವಿಶೇಷ.
ಸಂವಿತ್ ಈ ಚಿತ್ರದ ನಾಯಕರಾಗಿದ್ದಾರೆ. ಅವರು ತೆಲುಗು, ಬಂಗಾಳಿ, ಭೋಜಪುರಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಕನ್ನಡದ ಮೊದಲ ಚಿತ್ರವಿದು. ಇನ್ನು, ಪೂಜಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಜೂ.ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈ ಶ್ರೀ, ರವಿಕುಮಾರ್ ಇತರರು ಈ ಚಿತ್ರದಲ್ಲಿದ್ದಾರೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ.
ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣವಿದೆ. ಸಿದ್ದು ಭಗತ್ ಸಂಕಲನ ಮಾಡಿದರೆ, ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶ್ರೀಕಾಂತ್ ಸಾಹಸವಿದೆ.