ಎಸ್‌ಪಿಬಿ ಪುಸ್ತಕ ಲೋಕಾರ್ಪಣೆ- ಕನ್ನಡದೊಂದಿಗೆ ಅನುಪಮ ಅನುಬಂಧ ಈ ನಮ್ಮ ಗಾಯಕ; ಇದು ಹಿರಿಯ ಪತ್ರಕರ್ತರ ಕೃತಿ

ಭಾರತೀಯ ಸಿನಿಮಾ ಕಂಡ ಮೇರು ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ದಾವಣಗೆರೆಯ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಎಸ್‌ಪಿಬಿ ಕುರಿತು ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ರಚಿಸಿದ್ದಾರೆ. ಈ ಕೃತಿ ಸೆಪ್ಟೆಂಬರ್‌ 25ರಂದು ದಾವಣಗೆರೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಪುಸ್ತಕದಲ್ಲಿನ ಒಂದು ಆಯ್ದ ಟಿಪ್ಪಣಿ ಇಲ್ಲಿದೆ.

ನನ್ನನ್ನು ಭಾರತದ ಎಲ್ಲಾ ಸ್ಥಳದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಅದೇಕೋ ನನಗೂ ಗೊತ್ತಿಲ್ಲ. ಅವರೆಲ್ಲರಿಗಿಂತಲೂ ಕನ್ನಡಿಗರಿಗೆ ನನ್ನ ಮೇಲೆ ಪ್ರೀತಿ ಅಭಿಮಾನ ತುಸು ಹೆಚ್ಚೇ ಎನ್ನಬಹುದು. ಹೀಗಾಗಿ ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ ಖಂಡಿತವಾಗಿಯೂ ಕರ್ನಾಟಕದಲ್ಲಿ ಹುಟ್ಟಬೇಕೆಂಬ ಆಸೆ. ಇದು ಉತ್ಪ್ರೇಕ್ಷೆ ಅಲ್ಲ ಮತ್ತು ಪ್ರಚಾರಕ್ಕಾಗಿಯೂ ಅಲ್ಲ. ನನ್ನ ಹೃದಯಾಂತರಾಳದ ಮಾತು ಎಂದು ಎಸ್.ಪಿ.ಬಿ. ಅನೇಕ ಸಂದರ್ಭದಲ್ಲಿ ಹೇಳಿದ್ದರು. ಕನ್ನಡವರಿಗೆ ಹೆಚ್ಚು ಪ್ರಿಯರಾದ ಎಸ್‌ಪಿಬಿ ಸಾವಿರಾರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ "ನಕ್ಕರೆ ಅದೇ ಸ್ವರ್ಗ" ಚಿತ್ರವು 1966ರಲ್ಲಿ ತೆರೆಕಂಡಿತು. ಬಾಲು ಕೂಡ ಪ್ರಥಮವಾಗಿ ಅದೇ ಸಿನಿಮಾದ ಮೂಲಕ ಕನ್ನಡಿಗರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿದರೆನ್ನಬಹುದು. ಮೊದಲ ಹಾಡಿಗೆ ದೊರೆತ ಸಂಭಾವನೆ 150ರೂ.ಗಳು. ಆ ಕಾಲಕ್ಕೆ ಕನ್ನಡದಲ್ಲಿ ಪ್ರಸಿದ್ಧರಾಗಿದ್ದ ಪಿ.ಬಿ. ಶ್ರೀನಿವಾಸ್ ಒಂದು ಹಾಡಿಗೆ 250ರೂ. ಸಂಭಾವನೆ ಪಡೆಯುತ್ತಿದ್ದರು. "ದೇವರಗುಡಿ" ಸಿನಿಮಾದಮಾಮರವೆಲ್ಲೋ ಕೋಗಿಲೆ ಎಲ್ಲೋ” ಹಾಡು ಅವರಿಗೆ ಅತ್ಯಂತ ಹೆಚ್ಚಿನ ಜನಪ್ರಿಯತೆಗೆ ನಾಂದಿ ಹಾಡಿತೆನ್ನಬಹುದು.

ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡದ 15ಕ್ಕೂ ಹೆಚ್ಚು ನಾಯಕನಟರಿಗೆ ಅವರ ಧ್ವನಿಯೇ ಪರ್ಫೆಕ್ಟ್ ಎಂಬಂತೆ ಹೊಂದಿಕೊಂಡಿತು. ‘ಈ ಭೂಮಿ ಬಣ್ಣದ ಬುಗುರಿ’ ಎನ್ನುವಾಗ ವಿಷ್ಣುವರ್ಧನ್ ಹಾಡಿದಂತೆ, ಚಂದನದ ಗೊಂಬೆ ಚೆಲುವಾದ ಗೊಂಬೆ" ಪಲ್ಲವಿ ಕೇಳಿದಾಗ ಅನಂತ್‌ನಾಗ್ ದನಿ ಎನ್ನುವಂತಾಗುವುದು, ‘ಜೊತೆ ಜೊತೆಯಲಿ’ ಎಂದು ಗುನುಗುವಾಗ ಶಂಕರ್‌ನಾಗ್ ಹಾಡಿದಂತೆ, ‘ಸ್ನೇಹದ ಕಡಲಲ್ಲಿ’ ಹಾಡಿನ ನೆನಪು ಶ್ರೀನಾಥ್‌ರ ದನಿಯಾಗಿ, ‘ಶಿವ ಶಿವ ಎಂದರೆ ಭಯವಿಲ್ಲ...’ ಎನ್ನುವಾಗ ಲೋಕೇಶ್,ನಮ್ಮೂರು ಮೈಸೂರು, ನಿಮ್ಮೂರು ಯಾವೂರು” ಪಲ್ಲವಿಯು ದ್ವಾರಕೀಶ್‌ರೇ ಹಾಡಿದಂತೆ, ‘ಮಂಡ್ಯದ ಗಂಡು’ ಹಾಡಿನ ನೆನಪಿಗೆ ಅಂಬರೀಶ್ ದನಿಯಾದಂತೆ, ‘ಟುವ್ವಿ ಟುವ್ವಿ’ ಎಂದಾಗ ಶಿವರಾಜ್‌ಕುಮಾರ್, `ಈ ಬೆಳದಿಂಗಳು” ಎಂದಾಗ ರಮೇಶ್ ಅರವಿಂದ್‌ರ ದನಿಯೇ ನಮಗೆ ಕೇಳಿಸಿದಂತಹ ಪ್ರಭಾವಕ್ಕೆ ಸಿಲುಕಿಸಿರುವುದರ ಹಿಂದೆ ಎಸ್.ಪಿ.ಬಿ.ಯವರೇ ಹಾಡಿದ್ದರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಎಸ್‌ಪಿಬಿ ನಿರಂತರವಾಗಿ ಹಾಡಲು ಸಾಧ್ಯವಾದದ್ದು ಹೇಗೆ?
ಬಾಲು ಹಾಡುತ್ತಿದ್ದ ಕಾಲಘಟ್ಟದಲ್ಲಿ ಗಾಯಕರಾಗಿ ಬಂದವರು. ಹೆಚ್ಚು ವರ್ಷ ಚಾಲ್ತಿಯಲ್ಲಿ ಉಳಿಯಲಿಲ್ಲ. ಇವರು ಮಾತ್ರ ನಿರಂತರವಾಗಿ ಹಾಡುತ್ತಾ, ವಿಶ್ರಾಂತಿಯ ಸಂಗತಿಯನ್ನು ಮರೆತವರಂತಿದ್ದರು. ನಟರ ಧ್ವನಿಯನ್ನು ಅನುಸರಿಸುತ್ತಿದ್ದ ಎಸ್.ಪಿ.ಬಿ.ಗೆ ಅದೇ ಸಂಗೀತಕ್ಕೂ ವರದಾನ ಆಯಿತೆನ್ನಬಹುದು. ಹಾಡಬೇಕಾದ ನಟರ ಹೆಸರು ಹೇಳಿದರೆ ಸಾಕು. ಅವರ ಧ್ವನಿಗೆ ತಕ್ಕಂತೆ ಹಾಡುವುದು ಅವರಿಗೆ ಕರತಲಾಮಲಕ ಎನ್ನುವಂತಾಯಿತು. ಅವರ ಕಂಠ ಮಾಧುರ್ಯದ ಸಾಮರ್ಥ್ಯ ಹೇಗಿತ್ತೆಂದರೆ ಇಪ್ಪತ್ತು ವರ್ಷದ ಹಿಂದಿನ ಹಾಡನ್ನು ನಂತರ ಹಾಡಿಸಿದಾಗಲೂ ಅದೇ ಫೋರ್ಸ್‌ನಲ್ಲಿ ಅದೇ ವಾಯ್ಸ್ ಕಲ್ಚರ್‌ನಲ್ಲಿ, ಯಾವ ಲ್ಯಾಂಡಿಂಗ್ ನೋಟ್ಸ್‌ಗಳಿಗೂ ವ್ಯತ್ಯಾಸವಾಗದ ಹಾಗೆ ಪ್ರಸೆಂಟ್ ಮಾಡುವಲ್ಲಿ ಎಸ್ಪಿಬಿಯವರಿಗೆ ಅವರೇ ಸಾಟಿ ಎನಿಸಿದ್ದರು.

ಇನ್ನೊಬ್ಬರ ಅವಕಾಶವನ್ನು ಕಿತ್ತುಕೊಳ್ಳಲಾರೆ
ಚಿತ್ರವೊಂದಕ್ಕೆ ವೈದ್ಯನಾಥನ್ ಸಂಗೀತ ಸಾರಥ್ಯದಲ್ಲಿ ಬಾಲು ಹಾಡನ್ನು ಹಾಡಿ ತಮ್ಮ ಪಾಲಿನದನ್ನು ಮುಗಿಸಿದರು. ಆದರೆ ನಿರ್ಮಾಪಕರೊಬ್ಬರು ಇನ್ನೊಂದು ಹಾಡನ್ನೂ ಪ್ಲೀಸ್ ಹಾಡಿರಿ ಎಂದು ವಿನಂತಿಸಿಕೊಂಡರು. ಆ ಹಾಡನ್ನು ಪಿ.ಬಿ. ಶ್ರೀನಿವಾಸ್ ಹಾಡಬೇಕಿತ್ತು, ಸ್ವತಃ ಪಿ.ಬಿ.ಎಸ್. ಕಾಯುತ್ತಿದ್ದರೂ ಅವಕಾಶವನ್ನು ಬದಲಾಯಿಸುವ ಪ್ರಯತ್ನ ನಡೆಯಿತು. ಬಾಲು ಅಸಲಿ ವಿಷಯವನ್ನು ತಿಳಿದುಕೊಂಡರು, ಅವರಿಂದ ಹಾಡಿಸಬೇಕಾದ ಹಾಡನ್ನು ನಾನು ಕಸಿಯುವುದು ಸಮಂಜಸವಲ್ಲ, ನೀವು ಅವರಿಂದಲೇ ಹಾಡಿಸುವುದು ನ್ಯಾಯಸಮ್ಮತ, ಅವರಿಂದಲೇ ಹಾಡಿಸಿ ಎಂದರು. ನಂತರ ಪಿ.ಬಿ.ಶ್ರೀನಿವಾಸ್ ಹಾಡುವ ತನಕ ಇದ್ದು ನಂತರ ಸ್ಟುಡಿಯೋದಿಂದ ಹೊರ ಬಂದರು. ಹಿರಿಯ ಗಾಯಕನ ಬಗೆಗಿನ ಗೌರವ ಯಾವ ರೀತಿಯಲ್ಲಿ ಇತ್ತು ಎಂದು ಇದನ್ನು ಕರೆಯಬಹುದಲ್ಲವೆ?


2007 ಡಿಸೆಂಬರ್ 16 ರಂದು ಮೈಸೂರಿನಲ್ಲಿ ಎದೆತುಂಬಿ ಹಾಡುವೆನು" ಸ್ಪರ್ಧೆಯ ಸಂಬಂಧದ ಕಾರ್ಯಕ್ರಮದಲ್ಲಿ ಬಾಲು ಪಾಲ್ಗೊಂಡಿದ್ದರು. ಆ ಹೊತ್ತಿಗೆ ಅವರು ಹಾಡಲು ಶುರು ಮಾಡಿ ನಾಲ್ಕು ದಶಕಗಳು ಕಳೆದಿದ್ದವು.

ಅಷ್ಟು ವರ್ಷಗಳ ದೀರ್ಘ ಕಾಲ ಹಾಡುವುದನ್ನು ಮುಂದುವರಿಸಿದ್ದರೂ ಅದೇ ಕಂಠಸಿರಿಯನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಸಂದರ್ಶಕರೊಬ್ಬರ ಪ್ರಶ್ನೆಗೆ ಬಾಲು ಉತ್ತರ ಹೀಗಿತ್ತು,ಕಾಣದ ಊರಲಿ ನೀ ಕುಳಿತಿರುವೆ’, ‘ಎಲ್ಲರ ಕಥೆಯ ನೀ ಬರೆದಿರುವೆ” ಆ ಹಾಡನ್ನು ನೆನಪಿಸಿಕೊಂಡಿದ್ದರು, ಕನ್ನಡಿಗರು ಮತ್ತು ಕನ್ನಡದ ಪ್ರಸ್ತಾಪ ಬಂದಾಗಲೆಲ್ಲಾ ಎಸ್ಪಿಬಿಯವರಿಗೆ ಭಾವುಕತೆ ಗರ್ಭ ತುಂಬಿಕೊಳ್ಳುತ್ತಿತ್ತು.

Related Posts

error: Content is protected !!