Categories
ಸಿನಿ ಸುದ್ದಿ

ನನ್ನ ಫೋಕಸ್‌ ಆಕ್ಟಿಂಗ್‌ ಕಡೆಗೆ ಮಾತ್ರ- ಮಾನ್ವಿತಾ ಕಾಮತ್‌, ʼಸಿನಿಲಹರಿʼ ಕಚೇರಿಗೆ ಭೇಟಿ ಕೊಟ್ಟು ಮನಬಿಚ್ಚಿ ಮಾತನಾಡಿದ ಟಗರು ಪುಟ್ಟಿ !

ಸದ್ಯಕ್ಕೆ ನನ್ನ ಫೋಕಸ್‌ ಆಕ್ಟಿಂಗ್‌ ಕಡೆಗೆ ಮಾತ್ರ. ಮುಂದಿನದ್ದು ನಾನು ಈಗಲೇ ಏನನ್ನು ಹೇಳೋದಿಲ್ಲ… ಇದು ʼಟಗರು ಪುಟ್ಟಿʼ ಖ್ಯಾತಿಯ ನಟಿ ಮಾನ್ವಿತಾ ಕಾಮತ್‌ ಕೊಟ್ಟ ಸ್ಪಷ್ಟನೆ. ಇತ್ತೀಚೆಗಷ್ಟೆ ” ಸಿನಿ ಲಹರಿʼ ಕಚೇರಿಗೆ ಔಪಚಾರಿಕವಾಗಿ ಭೇಟಿ ಕೊಟ್ಟಿದ್ದ ಅವರು, ತಮ್ಮ ಸಿನಿಜರ್ನಿ ಕುರಿತು ಸುದೀರ್ಘವಾಗಿ ಮಾತನಾಡಿದರು. ಅದೇ ವೇಳೆ, ನಟಿ ಮಾನ್ವಿತಾ ಕಾಮತ್ ಸಿನಿಮಾ ನಿರ್ದೇಶನಕ್ಕೆ ಕೈ ಹಾಕುತ್ತಿದ್ದಾರೆಂದು ಈ ಹಿಂದೆ ಕೇಳಿ ಬಂದ ಸುದ್ದಿಗೂ ಸ್ಪಷ್ಟನೆ ಕೊಟ್ಟರು.

” ನಾನು ನಟಿಯಾಗಿ ಸಿನಿಮಾ ರಂಗಕ್ಕೆ ಬಂದವಳು. ಸದ್ಯಕ್ಕೆ ನನ್ನ ಫೋಕಸ್‌ ಆಕ್ಟಿಂಗ್‌ ಕಡೆಗೆ ಮಾತ್ರ. ನಾಯಕಿಯಾಗಿ ಇನ್ನು ಬೇರೆ ಬೇರೆ ಪ್ರಯೋಗಾತ್ಮಕ ಪಾತ್ರಗಳಲ್ಲೂ ಅಭಿನಯಿಸುವ ಆಸೆ ಇದೆ. ಹೊಸ ಬಗೆಯ ಕಥೆಗಳಲ್ಲೂ ಕಾಣಿಸಿಕೊಳ್ಳುವ ಆಸೆ ಇದೆ. ಜತೆಗೆ ನನಗೆ ಇಷ್ಟವಾಗುವ ಪಾತ್ರಗಳು ಸಿಗುತ್ತಿವೆ. ಇಂತಹ ಸಮಯದಲ್ಲಿ ನಾನು ಇನ್ನೇನೋ ಮಾಡಲು ಹೊರಟಿದ್ದೇನೆಂದು ಹಬ್ಬಿರುವ ಗಾಸಿಪ್‌ ನಂಬಬೇಡಿ. ಸದ್ಯಕ್ಕೆ ಅಂತಹ ಆಲೋಚನೆ ನನ್ನಲ್ಲಿಲ್ಲ. ಈಗೇನಿದ್ದರೂ ನಾನು ನಟಿ ಮಾತ್ರʼ ಎನ್ನುವ ಮಾತುಗಳನ್ನು ಒತ್ತು ಕೊಟ್ಟು ಹೇಳಿದರು ʼಕೆಂಡ ಸಂಪಿಗೆʼಯ ಚೆಲುವೆ ಮಾನ್ವಿತಾ ಕಾಮತ್.‌ʼ

” ನನಗೆ ಪುಸ್ತಕ ಓದುವ ಅಭ್ಯಾಸ ಇದೆ. ಸಿನಿಮಾ ಶೂಟಿಂಗ್‌ ಟೈಮ್‌ ನಲ್ಲಿ ಸಮಯ ಸಿಕ್ಕಾಗೆಲ್ಲ ಪುಸ್ತಕ ಓದುತ್ತಿರುತ್ತೇನೆ. ಜತೆಗೆ ಬರವಣಿಗೆ ಕೂಡ ನನ್ನ ಅಭ್ಯಾಸ. ಆ ಬಗ್ಗೆ ಆಪ್ತರಲ್ಲಿ ಹೇಳಿಕೊಂಡಿದ್ದೆ. ಅದೇ ಇನ್ನೇನೋ ಅರ್ಥ ಬರುವ ಹಾಗಾಯಿತು. ನಟನೆ ಬಿಟ್ಟು ನಿರ್ದೇಶನಕ್ಕೆ ಹೋಗ್ತಾರಂತೆ ಮಾನ್ವಿತಾ ಅಂತೆಲ್ಲ ಸುದ್ದಿ ಆಯಿತು. ಇನ್ನು ಮುಂದೆ ಅದು ಹಾಗೋದಿಲ್ಲ. ಮುಂದಿನದ್ದು ಈಗಲೇ ಏನನ್ನು ಹೇಳೋದಿಲ್ಲ. ಬದಲಿಗೆ ನನಗೀಗ ನಟನೆಯೇ ಮುಖ್ಯ. ಒಳ್ಳೆಯ ಕತೆಗಳು ಬಂದರೆ ಒಪ್ಪಿಕೊಳ್ಳುವೆ. ಸಿನಿಮಾ‌ ಕ್ಷೇತ್ರದಲ್ಲಿ ಕಲಿಯುವುದು ಸಾಕಷ್ಟಿದೆ. ಎಷ್ಟು ಕಲಿತರೂ ಇನ್ನೂ ಕಲಿಯುವ ಹಂಬಲ ಇದೆʼ ಎನ್ನುವುದು ಮಾನ್ವಿತಾ ಮಾತು.

‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ನಂತರದ ಒಂದಷ್ಟು ಗ್ಯಾಪ್‌ ಬಳಿಕ ನಟಿ ಮಾನ್ವಿತಾ ಕಾಮತ್‌ ʼಶಿವ 143ʼ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಇದು ಜಯಣ್ಣ -ಭೋಗೇಂದ್ರ ನಿರ್ಮಾಣದ ಅದ್ಧೂರಿ ವೆಚ್ಚದ ಚಿತ್ರ. ವರನಟ ರಾಜ್‌ ಕುಮಾರ್‌ ಮೊಮ್ಮಗ, ನಟ ರಾಮ್‌ ಕುಮಾರ್‌ ಪುತ್ರ ಧಿರೇನ್‌ ರಾಮ್‌ಕುಮಾರ್‌ ಅಭಿನಯದ ಚೊಚ್ಚಲ ಚಿತ್ರ. ಈ ಚಿತ್ರದಲ್ಲಿ ವಿಭಿನ್ನ ಬಗೆಯ ಪಾತ್ರದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿರುವ ಮಾನ್ವಿತಾ, ಆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಹೌದು.


” ನಿಜ, ನಂಗಿದು ತುಂಬಾ ಸ್ಪೆಷಲ್‌ ಸಿನಿಮಾ. ಅದಕ್ಕೆ ಕಾರಣ ಹಲವು. ಮೊದಲಿಗೆ ಇದೊಂದು ಅದ್ದೂರಿ ವೆಚ್ಚದ ಸಿನಿಮಾ ಎನ್ನುವುದು. ಅದರ ಜತೆಗೆ ನಿರ್ದೇಶಕ ರವಿಕುಮಾರ್‌ ಅವರ ಸಿನಿಮಾ ಮೇಕಿಂಗ್‌ ಶೈಲಿ. ಹಾಗೆಯೇ ಡಾ, ರಾಜ್‌ ಕುಮಾರ್‌ ಅವರ ಮೊಮ್ಮಗ ಧಿರೇನ್‌ ಅಭಿನಯದ ಚೊಚ್ಚಲ ಸಿನಿಮಾ. ಇವಿಷ್ಟು ವಿಶೇಷತೆಗಳಿರುವ ಸಿನಿಮಾದಲ್ಲಿ ನಾನಿದ್ದೇನೆ ಎನ್ನುವ ಖುಷಿಯಿದೆ. ದೊಡ್ಡ ಮಟ್ಟದಲ್ಲಿ ಅದರು ಸದ್ದು ಮಾಡಲು ರೆಡಿಯಾಗಿದೆ. ಸದ್ಯಕ್ಕೆ ನಾವೀಗ ಅದರ ಪ್ರಮೋಷನ್‌ ಕಾರ್ಯಕ್ರಮದಲ್ಲೇ ಬ್ಯುಸಿ ಆಗಿದ್ದೇವೆʼ ಎನ್ನುತ್ತಾರೆ ಟಗರು ಪುಟ್ಟಿ.

Categories
ಸಿನಿ ಸುದ್ದಿ

ಸಖತ್‌ ಸೌಂಡ್‌ ಮಾಡಿದ ಶುಗರ್ ಫ್ಯಾಕ್ಟರಿ ಫಸ್ಟ್‌ ಲುಕ್‌ ಪೋಸ್ಟರ್‌ !

ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಸೊನಾಲ್‌ ಮಾಂಟೆರೊ ಅಭಿನಯದ ʼಶುಗರಿ ಫ್ಯಾಕ್ಟರಿʼ ಸೌಂಡ್‌ ಮಾಡುತ್ತಿದೆ. ಚಿತ್ರಕ್ಕೆ ಈಗ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಸುತ್ತ ಮುತ್ತ  12 ದಿನಗಳ ಕಾಲ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ನಡೆಸಿದೆ ಚಿತ್ರ ತಂಡ. ಡಾರ್ಲಿಂಗ್‌ ಕೃಷ್ಣ, ಸೊನಾಲ್‌ ಮಾಂಟೆರೊ ಜತೆಗೆ ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಸೂರಜ್ ಮತ್ತಿತರರು ಚಿತ್ರದಲ್ಲಿದ್ದು, ಪಕ್ಕ ಲವ್‌ ಸ್ಟೋರಿಯ ಮೂಲಕ ಈ ಚಿತ್ರ ಕುತೂಹಲ ಮೂಡಿಸಿದೆ.


ಈ ಮಧ್ಯೆ ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಫೆ. 14 ರಂದು  ಚಿತ್ರ ತಂಡ ಲಾಂಚ್‌ ಮಾಡಿದ್ದ ಚಿತ್ರದ ಫಸ್ಟ್‌ ಲುಕ್‌ ಭರ್ಜರಿ ಸದ್ದು ಮಾಡಿದೆ. ಸಿನಿಮಾ ಅಭಿಮಾನಿಗಳಿಂದ ಈ ಪೋಸ್ಟರ್‌ ಗೆ ಸಖತ್‌ ಮೆಚ್ಚುಗೆ ಸಿಕ್ಕಿದ್ದು ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ. ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿರ್ದೇಶನ ಈ ಚಿತ್ರಕ್ಕೆ ಮಾರ್ಚ್‌ ಎರಡನೇ ವಾರ ಗೋವಾದಲ್ಲಿ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆಯಂತೆ. ಸದ್ಯಕ್ಕೆ ಚಿತ್ರ ತಂಡ ಅದರ ಸಿದ್ಧತೆಯಲ್ಲಿ ಬ್ಯುಸಿ ಆಗಿದೆ. ಬಾಲ ಮಣಿ ಪ್ರೊಡಕ್ಷನ್‌ ಲಾಂಛನದಲ್ಲಿ ಆರ್.‌ ಗಿರೀಶ್‌ ಈ ಚಿತ್ರ ನಿರ್ಮಿಸುತ್ತಿದ್ದು, ಸಂತೋಷ್‌ ರೆ ಪಾತಾಜೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ, ಮಿಲನಾ, ಯಜ್ಞಾ ಶೆಟ್ಟಿ ಹೆಸರು !

ಸಿನಿಮಾ ಪತ್ರಕರ್ತರೇ ನೀಡುವ ಸ್ಯಾಂಡಲ್‌ವುಡ್‌ನ ಪ್ರತಿಷ್ಟಿತ ʼ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಆಕಾಡೆಮಿʼಯ ವಾರ್ಷಿಕ ಪ್ರಶಸ್ತಿಗೆ ಚಿತ್ರರಂಗ ಸಜ್ಜಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭ ವರ್ಣರಂಜಿತವಾಗಿಯೇ ಆಯೋಜನೆ ಗೊಂಡಿದೆ. ಫೆ. 21 ಕ್ಕೆ ಅವಾರ್ಡ್‌ ಪ್ರೋಗ್ರಾಮ್‌ ಫಿಕ್ಸ್‌ ಆಗಿದೆ. ಸದ್ಯಕ್ಕೆ ಜಾಗ ನಿಗದಿ ಆಗಿಲ್ಲ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶನಿವಾರದಿಂದಲೇ ಚಾಲನೆ ಸಿಕ್ಕಿದೆ. ಬೆಂಗಳೂರಿನ ಎಸ್‌ ಆರ್‌ ವಿ ಮಿನಿ ಚಿತ್ರಮಂದಿರದಲ್ಲಿ ಶನಿವಾರ ಬೆಳಗ್ಗೆ ಟ್ರೋಪಿ ಅನಾವರಣ ಕಾರ್ಯಕ್ರಮ ನಡೆಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹಾಗೂ ‘ಟಗರುಪುಟ್ಟಿ ‘ ಅಂತಲೇ ಜನಪ್ರತಿಯತೆ ಪಡೆದ ನಟಿ ಮಾನ್ವಿತಾ ಕಾಮತ್‌ ಟ್ರೋಪಿ ಅನಾವರಣಗೊಳಿಸುವ ಮೂಲಕ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಈ ಪ್ರಸಕ್ತ ಸಾಲಿನ ಕ್ರಿಟಿಕ್ಸ್‌ ಅವಾರ್ಡ್‌ ಗೆ ವಿವಿಧ ೨೦ವಿಭಾಗಗಳಲ್ಲಿ ನಾಮಿನೇಟೆಡ್‌ ಆದ ಸಿನಿಮಾ, ನಟ-ನಟಿಯರು, ಪೋಷಕ ಕಲಾವಿದರು. ನೃತ್ಯ ನಿರ್ದೇಶಕರು, ಸ್ಟಂಟ್‌ ಮಾಸ್ಟರ್‌, ಗಾಯಕರು ಸೇರಿದಂತೆ ಎಲ್ಲಾ ವಿಭಾಗಗಳ ವಿವರ ಪ್ರಕಟಿಸಲಾಯಿತು.


ವಿಶೇಷವಾಗಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿಗೆ ಪೈಪೋಟಿಯಲ್ಲಿರುವವರ ವಿವರ ಕೂಡ ರೀವಿಲ್‌ ಆಯಿತು. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಕ್ಟ್‌ 1978 , ದಿಯಾ, ಜಂಟಲ್‌ ಮನ್‌, ಲವ್‌ ಮಾಕ್ಟೆಲ್‌ ಹಾಗೂ ನಾನು ಮತ್ತು ಗುಂಡ ಚಿತ್ರಗಳಿವೆ. ಹಾಗೆಯೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ ರವಿ, ಮಿಲನಾ ನಾಗರಾಜ್‌ ಹಾಗೂ ಯಜ್ಫಾ ಶೆಟ್ಟಿ ಇದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಗೆ ಡಾಲಿ ಧನಂಜಯ್‌, ಕೃಷ್ಣ, ಪ್ರಜ್ವಲ್‌ ದೇವರಾಜ್‌, ಪೃಥ್ವಿ ಅಂಬರ್‌ ಮತ್ತು ರಮೇಶ್‌ ಅರವಿಂದ್‌ ನಾಮಿನೇಟೆಡ್‌ ಆಗಿದ್ದಾರೆ. ಕಳೆದ ಭಾರಿಗಿಂತ ಈ ಬಾರಿ ಅಂದರೆ 2020 ರಲ್ಲಿ ರಿಲೀಸ್‌ ಆದ ಸಿನಿಮಾಗಳ ಸಂಖ್ಯೆ ಕಮ್ಮಿ. ಅಷ್ಟಾಗಿಯೂ ಒಳ್ಳೆಯ ಚಿತ್ರಗಳೇ ಇದ್ದು, ಪ್ರಶಸ್ತಿ ಆಯ್ಕೆ ಎಲ್ಲಾ ವಿಭಾಗಗಳಲ್ಲು ಕುತೂಹಲಕಾರಿ ಆಗಿದೆ.


ಟ್ರೋಪಿ ಅನಾವರಣ ಗೊಳಿಸಿದ ನಂತರ ನಟಿ ಮಾನ್ವಿತಾ ಕಾಮತ್, ಕ್ರಿಟಿಕ್‌ ಅವಾರ್ಡ್‌ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪತ್ರಕರ್ತರು ಒಂದು ಅವಾರ್ಡ್ ಕೊಡ್ತಾರೆ ಅಂದ್ರೆ ಅಲ್ಲಿ ಪ್ರಾಮಾಣಿಕ ಪ್ರಯತ್ನ ಇರುತ್ತೆ, ಅದ್ಯಾವ ಸಿನಿಮಾವನ್ನು ಆದ್ರೂ , ಪ್ರಾಮಾಣಿಕ ಪ್ರಯತ್ನದಿಂದ ವಿವರ್ಶಿಸುತ್ತಾರೆ ಎಂದರು. ಹಾಗೆಯೇ ನಟ ಸಂಚಾರಿ ವಿಜಯ್‌ ಮಾತನಾಡಿ, ಪ್ರಶಸ್ತಿಗಳು, ಹಣ, ಜನಮನ್ನಣೆ ತಂದುಕೊಡಲ್ಲ. ನಿಜವಾದ ಪ್ರತಿಭೆಗಳನ್ನು ಗುರುತಿಸುವುದರಿಂದ ನಮ್ಮಲ್ಲೂ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ʼಸಿನಿಲಹರಿʼ ವೆಬ್‌ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಸಿಇಓ ಕೃಷ್ಣ ಪಿ ಮತ್ತು ಮೂವೀ ಬಜಾರ್‌ ಮುಖ್ಯಸ್ಥ ನವರಸನ್‌ ಹಾಜರಿದ್ದರು. ” ಚಂದನವನ ಫಿಲ್ನ್‌ ಕ್ರಿಟಿಕ್ಸ್‌ ಎಲ್ಲಾ ಪ್ರಯತ್ನಕ್ಕೂ ಸಿನಿಲಹರಿ ಬೆಂಬಲ ಇರಲಿದ್ದು, ಇದು ಇನ್ನು ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು’ ಸಿನಿ ಲಹರಿ ‘ಸಿಇಓ ಕೃಷ್ಣ ಹೇಳಿದರು. ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಪರವಾಗಿ ನಿರ್ದೇಶಕರಾದ ಶರಣು ಹುಲ್ಲೂರು ಕಾರ್ಯಕ್ರಮದ ರೂಪುರೇಷೆಗಳ ಜತೆಗೆ ಪ್ರಶಸ್ತಿಗೆ ನಾಮಿನೇಟೆಡ್‌ ಆದವರ ವಿವರ ನೀಡಿದರು.

Categories
ಸಿನಿ ಸುದ್ದಿ

ದೋಬಾರಾ’ ಥ್ರಿಲ್ಲರ್‌ನಲ್ಲಿ ತಾಪ್ಸಿ, ಟೀಸರ್ ಮೂಲಕ ಸಿನಿಮಾ ಘೋಷಣೆ!

ಅನುರಾಗ್ ಕಶ್ಯಪ್ ನಿರ್ದೇಶನದ ‘ದೋಬಾರಾ’ ಹಿಂದಿ ಚಿತ್ರದಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ತಾಪ್ಸಿಗೆ ಕಶ್ಯಪ್‌ ಜೊತೆ ಇದು ಮೂರನೇ ಪ್ರಯೋಗ. ಇದು ‘ನ್ಯೂ ಏಜ್ ಥ್ರಿಲ್ಲರ್‌’ ಸಿನಿಮಾ ಎಂದಿರುವ ಕಶ್ಯಪ್‌ ಆಕರ್ಷಕ ಟೀಸರ್‌ನೊಂದಿಗೆ ಸಿನಿಮಾ ಘೋಷಿಸಿರುವುದು ವಿಶೇಷ. ಟೀಸರ್‌ನಲ್ಲಿ, ಹೊರಗಿನಿಂದ ಮನೆಗೆ ಬರುವ ತಾಪ್ಸಿ ಏನಾದರೂ ವಿಶೇಷವಾಗಿದ್ದನ್ನು ಪ್ಲೇ ಮಾಡುವಂತೆ ‘ಅಲೆಕ್ಸಾ’ಗೆ ಹೇಳುತ್ತಾರೆ. ಟೀವಿಯಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಕಾಣಿಸುತ್ತಾರೆ!

“ನೀವೇಕೆ ನನ್ ಟೀವೀಲಿ ಬಂದಿದ್ದೀರಿ?” ಎನ್ನುತ್ತಾರೆ ತಾಪ್ಸಿ. “ಏನಾದರೂ ವಿಶೇಷವಾಗಿರೋದು ಪ್ಲೇ ಮಾಡೋಕೆ ಹೇಳಿದ್ಯಲ್ಲ, ಅದಕ್ಕೆ ನಾನು ಬಂದಿದ್ದೇನೆ. ನಿನ್ನಲ್ಲಿ ಸ್ಕ್ರಿಪ್ಟ್ ಇದೆ ನೋಡು” ಎನ್ನುತ್ತಾರೆ ಕಶ್ಯಪ್‌. ಸ್ಕ್ರಿಪ್ಟ್‌ ಮೇಲೆ ಕಣ್ಣಾಡಿಸುವ ತಾಪ್ಸಿ, “ಚಿತ್ರದ ಶೀರ್ಷಿಕೆ ಏನು?” ಎಂದು ಕೇಳುತ್ತಾರೆ. ‘ಈಗ ಟೈಂ ಎಷ್ಟು?’ ಎನ್ನುವ ಕಶ್ಯಪ್ ಪ್ರಶ್ನೆ ತಾಪ್ಸಿಗೆ ಅಚ್ಚರಿ ಮೂಡಿಸುತ್ತದೆ. “ಈಗ ಗಡಿಯಾರ ತೋರಿಸುತ್ತಿರುವ ಸಮಯವೇ ಚಿತ್ರದ ಶೀರ್ಷಿಕೆ” ಎಂದು ಕಶ್ಯಪ್ ಹೇಳುತ್ತಲೇ ತಾಪ್ಸಿ ವಾಚ್ ನೋಡುತ್ತಾರೆ. ‘ದೋ ಬಾರಾ’ ಎಂದು ಉದ್ಘರಿಸುತ್ತಾರೆ ಆಕೆ!

2018ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ‘ಮನ್‌ಮರ್ಝಿಯಾ’ ಚಿತ್ರದಲ್ಲಿ ನಟಿಸಿದ್ದರು ತಾಪ್ಸಿ. “ಇದೊಂದು ವಿಶಿಷ್ಠ ಥ್ರಿಲ್ಲರ್ ಸಿನಿಮಾ ಆಗಲಿದೆ. ಇಲ್ಲಿಯವರೆಗೆ ನಾನು ನಟಿಸಿರುವ ಥ್ರಿಲ್ಲರ್ ಚಿತ್ರಗಳ ಪಟ್ಟಿಗೆ ಇದೊಂದು ಮಹತ್ವದ ಪ್ರಯೋಗವಾಗಿ ಸೇರ್ಪಡೆಯಾಗಲಿದೆ” ಎನ್ನುತ್ತಾರೆ ತಾಪ್ಸಿ. ಇನ್ನು ನಿರ್ದೇಶಕ ಕಶ್ಯಪ್ ಚಿತ್ರದ ಬಗ್ಗೆ ಹೇಳುತ್ತಾ, “ಥ್ರಿಲ್ಲರ್ ಮಾದರಿಯಲ್ಲಿ ಇದೊಂದು ತಾಜಾ ಪ್ರಯೋಗವಾಗಿರಲಿದೆ” ಎಂದಿದ್ದಾರೆ. ಏಕ್ತಾ ಕಪೂರ್ ಮತ್ತಿಬ್ಬರ ಸಹಯೋಗದೊಂದಿಗೆ ಚಿತ್ರ ನಿರ್ಮಿಸುತ್ತಿದ್ದಾರೆ.

https://youtu.be/50fZA_XeTiE

Categories
ಸಿನಿ ಸುದ್ದಿ

ಒಂದೂ ಚಿತ್ರ ತೆರೆ ಕಂಡಿಲ್ಲ, ಆದರೂ ಈ ನಟಿಗೆ ಕೈ ತುಂಬಾ ಆಫರ್ !‌ ‌

ಈಗಷ್ಟೇ ಚಂದನವನಕ್ಕೆ ಪ್ರವೇಶ ಪಡೆದ ನಟಿ ಇವರು.“ ಪದವಿ ಪೂರ್ವʼ ಚಿತ್ರಕ್ಕೆ ನಿರ್ದೇಶಕ ಯೋಗರಾಜ್‌ ಭಟ್‌ ಶೋಧಿಸಿ ತಂದ ಚೆಲುವೆ. ಆದ ಚಿತ್ರ ಇನ್ನು ಚಿತ್ರೀಕರಣದಲ್ಲಿರುವಾಗಲೇ ಶಿವರಾಜ್‌ ಕುಮಾರ್‌ ಅಭಿನಯದ “ಶಿವಪ್ಪʼ ಚಿತ್ರದಲ್ಲೂ ಅಭಿನಯಿಸುವ ಅವಕಾಶ ಸಿಕ್ಕಿದೆ. ಅಲ್ಲಿಂದೀಗ “ ಬಹದ್ದೂರ್‌ ಗಂಡುʼ ಹೆಸರಿನ ಮತ್ತೊಂದು ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಅಂದ ಹಾಗೆ, ಆ ನಟಿ ಬೇರಾರು ಅಲ್ಲ ಬೆಂಗಳೂರು ಬೆಡಗಿ ಯಶ್ ಶಿವಕುಮಾರ್.‌

ಚಿತ್ರೋದ್ಯಮ ಈಗ ಹಿಂದಿನಂತಿಲ್ಲ. ಹೊಸಬರಿಗೆ ಇಲ್ಲಿ ಅವಕಾಶ ಸಿಗುವುದು ಅಷ್ಟು ಸುಲಭ ಇಲ್ಲ. ನಟಿಯರ ವಿಚಾರದಲ್ಲಂತೂ ಇದು ಸಂಕಷ್ಟದ ಕಾಲ. ಸೌಂದರ್ಯದ ಜತೆಗೆ ಪ್ರತಿಭೆ ಇದ್ದವರೂ ಕೂಡ ಈಗ ಹೊಸ ಹೊಸ ಅವಕಾಶಗಳಿಗೆ ಪರದಾಡುವ ಪರಿಸ್ಥಿತಿ ಮಾಮೂಲು ಆಗಿದೆ. ಇದರ ನಡುವೆಯೂ ಸ್ಯಾಂಡಲ್‌ ವುಡ್‌ ಗೆ ಈಗಷ್ಟೇ ಎಂಟ್ರಿಯಾದ ಯಶ್‌ ಶಿವಕುಮಾರ್‌ಗೆ ಕೈ ತುಂಬಾ ಅವಕಾಶ ಎನ್ನುವುದು ವಿಶೇಷಗಳಲ್ಲೇ ವಿಶೇಷ.

ಇದು ಹೆಸರಿನಲ್ಲೇ ʼಯಶ” ಸ್ಸು ಇದಿದ್ದರ ರಹಸ್ಯವೋ, ಅದೃಷ್ಟವೋ?

ಬೆಂಗಳೂರು ಬೆಡಗಿ ಯಶ್‌ ಕುಮಾರ್‌ ಇಂಜಿನಿಯರ್‌  ಪದವೀಧರೆ. ಮಂಗಳೂರಿನ ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ. ಆಲ್ಲೇ ಒದುತ್ತಿದ್ದಾಗಲೇ ಫ್ಯಾಷನ್‌ ಎಬಿಸಿಡಿ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸ್‌ ಕರ್ನಾಟಕ ಕಿರೀಟ್ ಮುಡಿಗೇರಿಸಿಕೊಂಡಿದ್ದರು. ಆದಾದ ಮೇಲೆಯೇ ʼಪದವಿ ಪೂರ್ವʼ ಚಿತ್ರಕ್ಕೆ ಆಡಿಷನ್‌ ಮುಗಿಸಿದ್ದರಂತೆ. ಆದಾಗಿ ಒಂದು ವರ್ಷಕ್ಕೆ ಆ ಚಿತ್ರಕ್ಕೆ ಆಯ್ಕೆಯಾಗಿದ್ದು. ಅದೃಷ್ಟ ಅಂದ್ರೆ, ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ ನಂತರ ಅವರಿಗೆ ಮತ್ತೊಂದು ಆಫರ್‌ ಬಂತು, ಅದುವೇ ಶಿವರಾಜ್‌ ಕುಮಾರ್‌ ಅಭಿನಯದ ʼಶಿವಪ್ಪ ʼಚಿತ್ರ.

ಕಲಾವಿದರಿಗೆ ಅದೃಷ್ಟ ಖುಲಾಯಿಸುವುದು ಹೀಗೆಯೇ. ಕೆಲವರು ಒಂದು ಸಿನಿಮಾ ಮಾಡಿ, ಮತ್ತೊಂದು ಚಿತ್ರಕ್ಕೆ ಪರದಾಡಿದ ಉದಾಹರಣೆಗಳು ಸಾಕಷ್ಟಿವೆ. ಅದು ಕೂಡ ಸಕ್ಸಸ್‌ ಸಿನಿಮಾ ಮಾಡಿಯೂ ಹೊಸಬರು ಮತ್ತೊಂದು ಚಿತ್ರಕ್ಕೆ ಹೆಣಗಾಡಿದ್ದೂ ಇದೆ. ಅಂತಹ ಉದಾಹರಣೆಗಳ ನಡುವೆ ಯಶ್‌, ಅದೃಷ್ಟವಂತೆ ಎಂದೆನಿಸುವುದು ಇದೇ ಕಾರಣಕ್ಕೆ. ʼಶಿವಪ್ಪʼ ನಂತರವೀಗ ಕಿರುತೆರೆಯ ಜನಪ್ರಿಯ ನಟ ಕಿರಣ್‌ ರಾಜ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವʼಬಹದ್ದೂರ್‌ ಗಂಡುʼ ಚಿತ್ರಕ್ಕೆ ಈಗಷ್ಟೇ ನಾಯಕಿ ಆಗಿದ್ದಾರೆ. ಅವರ ಮಟ್ಟಿಗೆ ಇದು ಅದೃಷ್ಟವೇ? ನಿಜವೂ ಹೌದು ಎನ್ನುತ್ತಾರೆ ನಟಿ ಯಶ್‌ ಶಿವಕುಮಾರ್.

Categories
ಸಿನಿ ಸುದ್ದಿ

ಜಗಪತಿಬಾಬುಗೆ ʼಮದಗಜʼ ತಂಡದಿಂದ ಭರ್ಜರಿ ಗಿಫ್ಟ್‌

ದಕ್ಷಿಣ ಭಾರತದ ಹೆಸರಾಂತ ನಟ ಜಗಪತಿ ಬಾಬು ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರಿಗೆ ಇಂದು ಶ್ರೀ ಮುರಳಿ ಅಭಿನಯದ” ಮದಗಜʼ ಚಿತ್ರ ತಂಡವು ಭರ್ಜರಿ ಗಿಫ್ಟ್‌ ನೀಡಿದೆ. ಟಾಲಿವುಡ್‌ ನ ಸ್ಟಾರ್‌ ನಟ ಜಗಪತಿ ಬಾಬು ಸದ್ಯಕ್ಕೆ ಮಹೇಶ್‌ ಕುಮಾರ್‌ ನಿರ್ದೇಶನ ಮದಗಜ ಚಿತ್ರದಲ್ಲಿ ಪ್ರಮುಖ ಖಳನಟನಾಗಿ ಅಭಿನಯಿಸಿದ್ದು, ಅದೇ ಕಾರಣಕ್ಕೆ ಚಿತ್ರ ತಂಡ ನಟ ಜಗಪತಿ ಬಾಬು ಅವರಿಗೆ ಇಂದು ಸ್ಪೆಷಲ್‌ ಟೀಸರ್‌ ಲಾಂಚ್‌ ಮಾಡಿದೆ.

ಟಾಲಿವುಡ್‌ ಜತೆಗೆ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲೂ ಬ್ಯುಸಿ ಇರುವ ಜಗಪತಿ ಬಾಬು, ಹೀರೋ ಆಗಿದ್ದು ಮಿಂಚಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಈಗ ಅವರಿಗೆ ವಿಲನ್‌ ಆಗಿಯೂ ಅಷ್ಟೇ ಡಿಮ್ಯಾಂಡ್‌ ಇದೆ. ಅದರಲ್ಲೂ ಕಾರ್ಪೊರೇಟ್‌ ವಲಯದ ಖಳ ನಟನ ಪಾತ್ರಕ್ಕೆ ಜಗಪತಿ ಬಾಬು ಬಹು ಬೇಡಿಕೆ ಪಡೆದಿದ್ದಾರೆ. ಅದೇ ಕಾರಣಕ್ಕೆ ಕನ್ನಡದಲ್ಲೂ ಅವರಿಗೆ ಸಾಕಷ್ಟು ಡಿಮ್ಯಾಂಡ್‌ ಇದೆ. ಇತ್ತೀಚಿನ ಬಿಗ್‌ ಬಜೆಟ್‌ ಸಿನಿಮಾಗಳೆಲ್ಲ ಜಗಪತಿ ಬಾಬು ಖಾಯಂ ಆಗಿದ್ದಾರೆ.

ಅಂದ ಹಾಗೆ, ಈಗ ʼಮದಗಜʼ ಕೂಡ ಅಷ್ಟೇ ಕುತೂಹಲ ಮೂಡಿಸಿದೆ. ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಣದ ʼಮದಗಜʼ ಚಿತ್ರದಲ್ಲಿ ಜಗಪತಿ ಬಾಬು ಅವರ ಗೆಟಪ್‌ ತುಂಬಾ ಚೆಂಜ್‌ ಇದೆ. ಅಭಿಮಾನಿಗಳು ಅವರ ಲುಕ್‌ ಅಂಡ್‌ ಗೆಟಪ್‌ ಗೆ ಫುಲ್‌ ಫಿದಾ ಆಗಿದ್ದಾರೆ. ʼ ಕೆಜಿಎಫ್‌ʼ ಖ್ಯಾತಿಯ ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಸಿನಿಲಹರಿ ನೂರನೇ ದಿನಕ್ಕೆ ಕೇಕ್‌ ಕತ್ತರಿಸಿ ಶುಭ ಹಾರೈಸಿದ ನಟ ಸಂಚಾರಿ ವಿಜಯ್‌

ವೀರಕಪುತ್ರ ಶ್ರೀನಿವಾಸ್‌ , ಮಂಸೋರೆ, ಹರೀಶ್‌ ಎಂ.ಡಿ ಹಳ್ಳಿ, ನಟಿಯರಾದ ಜಯಶ್ರೀ, ಅನುಷಾ ರೋಡ್ರಿಗಸ್‌ ಸೇರಿ ಹಲವರು ಸಾಥ್

ಸಿನಿ ಲಹರಿ ಶುರುವಾಗಿ ನೂರು ದಿನ ಪೂರೈಸಿತು. ಎಷ್ಟು ಬೇಗ ಆದವು ದಿನಗಳು ಅಂತೆನಿಸುತ್ತಿದೆ. ಹಾಗಂತ, ಇದೇನು ದೊಡ್ಡ ಸಾಧನೆ ಅಲ್ಲ. ಅದರೂ, ನಮ್ಮ ಮಟ್ಟಿಗೆ ಇದು ಒಂದೊಳ್ಳೆಯ ಹೆಜ್ಜೆ. ಕಾರಣ, ಮುಂದಿನ ಯೋಜನೆ, ಯೋಚನೆಗೆ ಇದು ಮಹತ್ತರದ ಕ್ಷಣ. ಅದೇ ಕಾರಣಕ್ಕೆ ʼಸಿನಿಲಹರಿʼ ಹಿತೈಷಿಗಳೇ ಸಿನಿಲಹರಿ ಸ್ಟುಡಿಯೋ ದಲ್ಲಿ ಸಿಂಪಲ್‌ ಆಗಿ ಆಯೋಜಿಸಿದ್ದ ಸಣ್ಣದೊಂದು ಸೆಲೆಬ್ರೇಷನ್‌ ದೊಡ್ಡದಾಗಿಯೇ ನಡೆದಿದ್ದು ವಿಶೇಷ. ಇದೊಂದು ಪೂರ್ವಯೋಜಿತ ಕಾರ್ಯಕ್ರವಲ್ಲ. ಅವಸರದ ಕಾರ್ಯಕ್ರಮ. ಆದರೂ ಸಿನಿ ಲಹರಿ ಮೆಲಿನ ಪ್ರೀತಿಗೆ, ಕಾಳಜಿಗೆ ಸಿನಿಮಾ ರಂಗದ ದೊಡ್ಡ ತಂಡವೇ ಬಂದಿದ್ದು ನಮ್ಮ ಹೆಮ್ಮೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ನಮ್ಮ ಆಹ್ವಾನ ಗೌರವಿಸಿ ಬಂದಿದ್ದರು. ಅವರೇ ಕೇಕ್‌ ಕತ್ತರಿಸಿ, ಸಿನಿ ಲಹರಿಗೆ ಶುಭ ಹಾರೈಸಿದರು.

ಡಾ. ವಿಷ್ಣು ವರ್ಧನ್‌ ಅಭಿಮಾನಿಗಳ ಸಂಘದ ವೀರಕಪುತ್ರ ಶ್ರೀನಿವಾಸ್‌ , ನಟ ನಿಹಾಲ್‌,ನಿರ್ದೇಶಕರಾದ ಮಂಸೋರೆ, ಹರೀಶ್‌ ಎಂ.ಡಿ. ಹಳ್ಳಿ, ಹೃಷಿಕೇಶ್‌, ಕಿರಣ್‌, ರಾಜು ಪಾವಗಡ, ನಟಿಯರಾದ ಅನುಷಾ ರೋಡ್ರಿಗಸ್‌, ಅಂಜಲಿ ರಾಮಚಂದ್ರ, ಜಯಶ್ರೀ, “ಮಗಳು ಜಾನಕಿʼ ಧಾರಾವಾಹಿಯ ಖ್ಯಾತಿಯ ಸುಪ್ರಿಯಾ ರಾವ್‌, ನಿರಂಜನ್‌ ಕುಮಾರ್‌ ದಾವಣಗೆರೆ, ಯುವ ಪ್ರತಿಭೆ ವೈಶಾಖ್‌, ಸವಿನ್‌ ತೀರ್ಥಹಳ್ಳಿ, ಮತ್ತಿತರರು ಹಾಜರಿದ್ದು ಸಿನಿ ಲಹರಿಗೆ ಶುಭ ಹಾರೈಸಿದರು. ಸಿನಿ ಲಹರಿ ಸಿಇಓ ಕೃಷ ಪಿ. ಕೂಡ ಹಾಜರಿದ್ದು, ಮುಂದಿನ ಯೋಜನೆಯ ಬಗ್ಗೆ ವಿವರಿಸಿದರು. ಅದರ ಒಂದು ಫೋಟೋ ಝಲಕ್‌ ಇಲ್ಲಿದೆ.

Categories
ಸೌತ್‌ ಸೆನ್ಸೇಷನ್

ನಟ ವಿಜಯ್‌ರನ್ನು ಹಾಡಿಹೊಗಳಿದ ಪ್ರಿಯಾಂಕಾ !

ತಮ್ಮ ‘ಅನ್‌ಫಿನಿಷ್ಡ್‌’ ಪುಸ್ತಕದಲ್ಲಿ ಪ್ರಸ್ತಾಪ

ನಟಿ ಪ್ರಿಯಾಂಕಾ ಚೋಪ್ರಾ ಸಾಧನೆಯ ಹಾದಿ ಯುವತಿಯರಿಗೆ ಪ್ರೇರಣೆ. ವಿಶ್ವ ಸುಂದರಿ (2000) ಕಿರೀಟ ತೊಟ್ಟ ನಂತರ ಬಾಲಿವುಡ್‌ನ ಯಶಸ್ವೀ ನಟಿಯಾಗಿ ಮಿಂಚಿದ ನಟಿ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದಾರೆ.
ಬಾಲಿವುಡ್‌ಗೂ ಮುಂಚೆ ನಟಿಯಾಗಿ ಅವರಿಗೆ ಬ್ರೇಕ್‌ ಕೊಟ್ಟಿದ್ದು ಕಾಲಿವುಡ್‌. ಮಾಜಿತ್‌ ನಿರ್ದೇಶನದಲ್ಲಿ ವಿಜಯ್‌ ಹೀರೋ ಆಗಿದ್ದ ‘ತಮಿಝಾನ್‌’ ತಮಿಳು ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದು. ಹಾಗಾಗಿ ತಮ್ಮ ಮೊದಲ ಸಿನಿಮಾ ಹಾಗೂ ಹೀರೋ ಕುರಿತು ಅವರಿಗೆ ಅಪಾರ ಅಭಿಮಾನ.

ಮೊನ್ನೆಯಷ್ಟೇ ಅವರ ಸಿನಿಮಾ – ಬದುಕಿನ ಅನುಭವಗಳ ‘ಅನ್‌ಫಿನಿಷ್ಡ್‌’ ಪುಸ್ತಕ ಬಿಡುಗಡೆಯಾಗಿದೆ. ಇದರಲ್ಲಿ ನಟಿ ತಮ್ಮ ವೃತ್ತಿಬದುಕಿನ ಆರಂಭದ ದಿನಗಳ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಕೆಲವು ಚಿತ್ರನಿರ್ದೇಶಕರ ಕಿರಿಕಿರಿ, ಕೆಟ್ಟ ವ್ಯಕ್ತಿತ್ವದ ಬಗ್ಗೆ ಪ್ರಸ್ತಾಪಿಸಿರುವ ಪ್ರಿಯಾಂಕಾ ತಮ್ಮ ಮೊದಲ ಚಿತ್ರದ ಹೀರೋ ವಿಜಯ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

“ಅಭಿಮಾನಿಗಳ ಬಗ್ಗೆ ವಿಜಯ್‌ ಅವರಿಗಿರುವ ಕಾಳಜಿ, ಪ್ರೀತಿ ನನಗೆ ಅಚ್ಚರಿ ಮೂಡಿಸುತ್ತದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅಮೆರಿಕಾದಲ್ಲಿ ನನ್ನ ‘ಕ್ವಾಂಟಿಕೋ’ ಇಂಗ್ಲಿಷ್ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮೊಂದಿಗೆ ನನ್ನ ಫೋಟೋ ತೆಗೆಸಿಕೊಳ್ಳಲು ಅಪೇಕ್ಷಿಸುತ್ತಿದ್ದರು. ಒತ್ತಡದ ಮಧ್ಯೆಯೂ ನಾನು ಬಿಡುವಿನ ವೇಳೆಯಲ್ಲಿ ಅವರೊಂದಿಗೆ ಸಮಯ ಕಳೆಯುತ್ತಿದ್ದೆ. ಆಗೆಲ್ಲಾ ನನಗೆ ವಿಜಯ್‌ ನೆನಪಾಗುತ್ತಿದ್ದರು. ಅಭಿಮಾನಿಗಳೆಡೆಗಿನ ಅವರ ಶ್ರದ್ಧೆ, ಸಿನಿಮಾ ಕುರಿತ ಅವರ ಪ್ಯಾಷನ್‌ ನನಗೆ ಸ್ಫೂರ್ತಿ” ಎಂದಿದ್ದಾರೆ ಪ್ರಿಯಾಂಕಾ. ಅವರೀಗ ‘ಶೀಲಾ’, ‘ಟೆಕ್ಸ್ಟ್‌ ಫಾರ್ ಯೂ’, ‘ಸಿಟಾಡೆಲ್‌’ ಇಂಗ್ಲಿಷ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರತದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ಅವರ ಮುಂದಿನ ಯೋಜನೆ.

Categories
ಸಿನಿ ಸುದ್ದಿ

ಸಿಎಂ ಲಾಂಚ್‌ ಮಾಡಿದ್ರು “ತನುಜಾ” ಚಿತ್ರದ ಫಸ್ಟ್ ಲುಕ್ , ಕಥೆಯ ಒಂದೆಳೆ ಕೇಳಿ ಅವರೇ ಫುಲ್‌ ಖುಷ್‌ !

‌  ಸಚಿವ ಸುಧಾಕರ್‌ ಕೂಡ ಬಣ್ಣ ಹಚ್ಚುವ ಸಾಧ್ಯತೆ

ಅಂತರ್ಜಲ ಚಿತ್ರದ ಮೂಲಕ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದ ಸೃಜಲಶೀಲ ಯುವ ನಿರ್ದೇಶಕ ಹರೀಶ್‌ ಕುಮಾರ್‌ ಎಂ.ಡಿ ಹಳ್ಳಿ ಒಂದಷ್ಟು ಗ್ಯಾಪ್‌ ನಂತರ ಮತ್ತೊಂದು ಸಿನಿಮಾದೊಂದಿಗೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.  ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನವೊಂದರಿಂದ ಪ್ರಭಾವಿತರಾಗಿ  ಹೊಸದೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ʼತನುಜಾʼ.

Beyond visions cinemas ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ  ಈ  ಚಿತ್ರದ ಫಸ್ಟ್ ಲುಕ್ ಅನ್ನು ಮುಖ್ಯಮಂತ್ರಿ ಬಿ.ಎಸ್‌ . ಯಡಿಯೂರಪ್ಪ  ಲಾಂಚ್‌ ಮಾಡಿದರು.   ಫಸ್ಟ್‌ ಲುಕ್‌ ಲಾಂಚ್‌ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರಾದ ಸುಧಾಕರ್ ಹಾಗೂ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ವಿಶೇಷ ಅಂದ್ರೆ ಈ ಚಿತ್ರದ ಒಂದು ಪಾತ್ರದಲ್ಲಿ  ಆರೋಗ್ಯ ಸಚಿವ ಸುಧಾಕರ್‌ ಕೂಡ ಬಣ್ಣ ಹಚ್ಚುವ ಸಾಧ್ಯತೆ ಇದೆಯಂತೆ.

ಇದೊಂದು ಡಿಫೆರೆಂಟ್ ಜಾನರ್‌ ಸಿನಿಮಾ.ನೈಜ ಘಟನೆ ಆಧರಿತ ಕಥೆ.  ಕೊರೋನಾ ಸಂಕಷ್ಟದ ಕಾಲದಲ್ಲಿ ನೀಟ್‌ ಪರೀಕ್ಷೆ ಬರೆಯಲು ಹೆಣಗಾಟ ನಡೆಸಿ, ಕೊನೆಗೂ ಸಿನಿಮೀಯ ರೀತಿಯಲ್ಲಿ ಅದರಲ್ಲಿ ಸಕ್ಸಸ್‌ ಆದ ಒಬ್ಬ ವಿದ್ಯಾರ್ಥಿನೀಯ ಕಥೆ ಇದು.  ಕೊನೆಗೂ ಆಕೆ ಹೇಗೆ ಪರೀಕ್ಷೆ ಬರೆದಳು, ಅದರಿಂದ ಮುಂದೆ ಆಕೆ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದಳು ಎನ್ನುವುದೇ ತನುಜಾ ಚಿತ್ರದ ಕಥಾ ಹಂದರ.

” ಇದು ನಿಜ ಘಟನೆಯೇ.  ಎಲ್ಲರಿಗೂ ಗೊತ್ತಿರುವುದೇ. ಆದರೆ ಇಡೀ ಘಟನೆ ಒಂದು ಥ್ರಿಲ್ಲರ್‌ ಮೂವೀ  ರೀತಿಯಲ್ಲಿದೆ. ಸಿನಿಮಾ ಮಾಡುವ ನಿಟ್ಟಿನಲ್ಲಿ ಸಾಕಷ್ಟು ವರ್ಕ ಮಾಡಿಕೊಂಡಿದ್ದೇನೆ. ಮೇಲಾಗಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ್‌ ಭಟ್‌ ಅವರ ಮೂಲಕ ಇಂತಹದೊಂದು ಕತೆ ಸಿನಿಮಾ ಮಾಡೋದಿಕ್ಕೆ ನನಗೆ ಸಿಕ್ಕಿದ್ದು ಅದೃಷ್ಟವೇ ಹೌದು. ಎಷ್ಟು ಸಾಧ್ಯವೋ ಅಷ್ಟು ಪ್ರಮಾಣಿಕವಾಗಿ ಸಿನಿಮಾವನ್ನು ತೆರೆಗೆ ತರಬೇಕೆನ್ನುವ ಆಸೆ ಇದೆ ʼಎನ್ನುತ್ತಾರೆ  ನಿರ್ದೇಶಕ ಹರೀಶ್‌ ಕುಮಾರ್.

ಇದು  ಒರ್ವ ವಿದ್ಯಾರ್ಥಿನಿ ಮೇಲೆಯೇ ಕೇಂದ್ರಿಕೃತವಾದ ಸಿನಿಮಾ.  ಕಥಾ ನಾಯಕಿ ತನುಜಾ. ಆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ  ಯುವ ನಟಿ ಸಪ್ತ ಪಾವೂರು. ʼಸರ್ಕಾರಿ ಹಿ.ಪ್ರಾಥಮಿಕ ಶಾಲೆʼ ಚಿತ್ರದಲ್ಲಿ  ಸಪ್ತ‌ ಪಾವೂರು  ಅಭಿನಯಿಸಿದ್ದರು. ಚಿತ್ರದ ಪಾತ್ರಕ್ಕೆ ಸರಿ ಸರಿಯಾದ ಅಯ್ಕೆ ಅಂತ ಚಿತ್ರದ ಹೇಳುತ್ತಿದೆ.  ತಾರಾಬಳಗದ ಆಯ್ಕೆ ನಡೆಯುತ್ತಿದೆ.ಚಿತ್ರದ ಚಿತ್ರೀಕರಣ ಮಾರ್ಚ್ ಎರಡನೇ‌ವಾರದಲ್ಲಿ ಆರಂಭವಾಗಲಿದೆ. ಬೆಂಗಳೂರು – ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.

2016_17 ಸಾಲಿನ ರಾಜ್ಯಪ್ರಶಸ್ತಿಗೆ ಭಾಜನವಾಗಿದ್ದ “ಅಂತರ್ಜಲ” ಚಿತ್ರದ ನಂತರ   ಎಂ ಡಿ ಹಳ್ಳಿ ಅವರಿಗೆ ಇದು ಎರಡನೇ ಚಿತ್ರ.
ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣವಿರುವ “ತನುಜಾ” ಚಿತ್ರಕ್ಕೆ ಆರ್ ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದಾರೆ.  Beyond visions cinemas ಲಾಂಛನದಲ್ಲಿ  ಹರೀಶ್‌ ಕುಮಾರ್‌ , ರಘು ನಂದನ್‌ ಸೇರಿದಂತೆ ಒಂದಷ್ಟು ಗೆಳೆಯರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಅಧಿಕಾರ ನನ್‌ ಕೈಲ್ಲಿದಿದ್ದರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ… ಹೀಗಂತ ಶಿವಣ್ಣ ಬೇಸರ ವ್ಯಕ್ತಪಡಿಸಿದ್ದೇಕೆ?

ಶಿವಣ್ಣ ರೈತ ಪರ -ಸೋಷಲ್‌ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ

ನಟ ಶಿವರಾಜ್‌ ಕುಮಾರ್‌ ಅಂದ್ರೆನೆ ಹಾಗೆ. ದೊಡ್ಡ ಸ್ಟಾರ್‌ ಆಗಿದ್ದರೂ ಸರಳ-ಸಜ್ಜನಿಕೆಗೆ ಮಾದರಿಯಂತಿರುವ ಅಪರೂಪದ ನಟ. ಹಾಗೆಯೇ ನಟನೆಯ ಆಚೆಯೂ ಸದಾ ನಾಡು-ನುಡಿ, ನೆಲ-ಜಲ ಪರವಾಗಿ ನಿಂತ ಅಪರೂಪದ ಕಲಾವಿದ. ಜನ ಪರವಾದ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದು ಮಾತ್ರವಲ್ಲ, ತೆರೆ ಮೇಲೂ ರೈತ ಪರವಾಗಿ ಧ್ವನಿ ಮೊಳಗಿಸಿದ ಹೀರೋ. ಅದಕ್ಕೆ ಸಾಕ್ಷಿ “ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯʼ ಚಿತ್ರ. ಅಂತೆಯೇ ಈಗ ಅತ್ಯಂತ ʼದುರಿತʼ ಕಾಲದಲ್ಲೂ ರೈತ ಪರವಾಗಿ ಧ್ವನಿ ಎತ್ತಿ ತಾವು ವಿಭಿನ್ನ ಮತ್ತು ವಿಶಿಷ್ಟ ನಟ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸ್ಯಾಂಡಲ್‌ ವುಡ್‌ ಕಡೆಯಿಂದ ಮೊದಲಿಗರಾಗಿ ನಟ ಶಿವರಾಜ್‌ ಕುಮಾರ್‌ ಬೆಂಬಲ ಸೂಚಿಸಿ ಮಾತನಾಡಿರುವುದು ವಿಶೇಷವಾಗಿದೆ.

ಸ್ಯಾಂಡಲ್‌ ವುಡ್‌ ಮಂದಿ ಕೂಡ ರೈತರ ಪ್ರತಿಭಟನೆಗೆ ಬೆಂಬಲ ನೀಡಬೇಕೆನ್ನುವ ಕೂಗು ಕೇಳಿಬಂದ ಬೆನ್ನಲೇ ಶಿವರಾಜ್‌ ಕುಮಾರ್‌, ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದೆ. ಸೋಷಲ್‌ ಮೀಡಿಯಾದಲ್ಲಿ ಅವರ ಆಭಿಮಾನಿಗಳು ಮಾತ್ರವಲ್ಲ, ಜನಪರ ಚಿಂತಕರು, ಹೋರಾಟಗಾರರು ಕೂಡ ಶಿವಣ್ಣ ಅವರ ಹೇಳಿಕೆಯನ್ನು ಶೇರ್‌ ಮಾಡಿ, ಈ ನಿಲುವು ಶಿವಣ್ಣ ಅಲ್ಲದೆ ಇನ್ನಾರು ತೆಗೆದುಕೊಳ್ಳಲು ಸಾಧ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ , ಇಷ್ಟಕ್ಕೂ ಶಿವಣ್ಣ ಹೇಳಿದ್ದೇನು…? ಅಧಿಕಾರ ನನ್‌ ಕೈಲ್ಲಿದಿದ್ದರೆ ಎಲ್ಲವನ್ನೂ ಬರೆದು ಕೊಡುತ್ತಿದ್ದೆ ಅಂತ ಶಿವಣ್ಣ ಯಾಕೆ ಹೇಳಿದ್ರು?

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರ ಜತೆಗೆ ಮಾತನಾಡಿದ ಶಿವಣ್ಣ, ಯಾರೂ ಹೋರಾಟದ ಬಗ್ಗೆ ಕಾಮೆಂಟ್ ಮಾಡ್ತಿಲ್ಲ ಅಂತಾರೆ. ಆದ್ರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿ ಇಳಿಯೋದ್ರಿಂದ ಏನೂ ಸಾಧ್ಯವಾಗಲ್ಲ. ಹಾಗೇ ಆಗೋದಾದ್ರೆ ನಾವು ಬೀದಿಗಿಳಿಯಲು ಸಾಧ್ಯ. ಅದು ಸರ್ಕಾರದಿಂದ ಮಾಡೋಕಷ್ಟೇ ಸಾಧ್ಯ. ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡಿದ್ರೆ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ನಮ್ಮ ಸಪೋರ್ಟ್ ಖಂಡಿತಾ ಇದ್ದೇ ಇರುತ್ತೆ. ಆದ್ರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ. ಆದ್ರೆ ಅಧಿಕಾರಿ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಶಿವರಾಜ್‌ ಕುಮಾರ್‌ ಉತ್ತರವಷ್ಟೇ ಇದಾಗಿರುಬಹುದು, ಆದರೆ ದೆಹಲಿ ರೈತರ ಪ್ರತಿಭಟನೆಯ ಬಿಸಿ ಇವತ್ತು ಇಡೀ ಭಾರತೀಯ ಚಿತ್ರ ರಂಗಕ್ಕೂ ತಟ್ಟಿದೆ. ಬಾಲಿವುಡ್‌ ನಲ್ಲೂ ಇದು ಮೊನ್ನೆಯಷ್ಟೇ ಭಾರೀ ಸದ್ದು ಮಾಡಿದ್ದು ಕೂಡ ನಿಮಗೆಲ್ಲ ಗೊತ್ತೇ ಇದೆ. ಅಲ್ಲಿ ಅಭಿಮಾನಿಗಳಿಂದಲೇ ಕಲಾವಿದರಿಗೆ ಒತ್ತಡ ಹೆಚ್ಚಾಗುತ್ತಿದೆ. ಕಲಾವಿದರು ತಮ್ಮ ನಿಲುವು ಸ್ಪಷ್ಟ ಪಡಿಸಬೇಕೆಂದು ಜನರೇ ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಅಂತಹ ತೀವ್ರ ತರಹದ ಒತ್ತಡ ಬಂದಿಲ್ಲವಾದರೂ, ಈಗ ಸೋಷಲ್‌ ಮೀಡಿಯಾದಲ್ಲಿ ಜನ ಮಾತನಾಡಿಕೊಳ್ಳುತ್ತಿರುವುದು ಹೌದು. ಇಂತಹ ಸಂದರ್ಭದಲ್ಲಿ ಶಿವರಾಜ್‌ ಕುಮಾರ್‌ ರೈತರ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿರುವುದು ಇತರೆ ಕಲಾವಿದರ ಪಾಲಿಗೂ ಒತ್ತಡವೇ ಸೃಷ್ಟಿಸಿದೆ. ಯಾರು ರೈತ ಪರ ಎನ್ನುವುದು ಈಗ ಗೊತ್ತಾಗಬೇಕಿದೆ.

error: Content is protected !!