ನಟ ವಿಜಯ್‌ರನ್ನು ಹಾಡಿಹೊಗಳಿದ ಪ್ರಿಯಾಂಕಾ !

ತಮ್ಮ ‘ಅನ್‌ಫಿನಿಷ್ಡ್‌’ ಪುಸ್ತಕದಲ್ಲಿ ಪ್ರಸ್ತಾಪ

ನಟಿ ಪ್ರಿಯಾಂಕಾ ಚೋಪ್ರಾ ಸಾಧನೆಯ ಹಾದಿ ಯುವತಿಯರಿಗೆ ಪ್ರೇರಣೆ. ವಿಶ್ವ ಸುಂದರಿ (2000) ಕಿರೀಟ ತೊಟ್ಟ ನಂತರ ಬಾಲಿವುಡ್‌ನ ಯಶಸ್ವೀ ನಟಿಯಾಗಿ ಮಿಂಚಿದ ನಟಿ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದಾರೆ.
ಬಾಲಿವುಡ್‌ಗೂ ಮುಂಚೆ ನಟಿಯಾಗಿ ಅವರಿಗೆ ಬ್ರೇಕ್‌ ಕೊಟ್ಟಿದ್ದು ಕಾಲಿವುಡ್‌. ಮಾಜಿತ್‌ ನಿರ್ದೇಶನದಲ್ಲಿ ವಿಜಯ್‌ ಹೀರೋ ಆಗಿದ್ದ ‘ತಮಿಝಾನ್‌’ ತಮಿಳು ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದು. ಹಾಗಾಗಿ ತಮ್ಮ ಮೊದಲ ಸಿನಿಮಾ ಹಾಗೂ ಹೀರೋ ಕುರಿತು ಅವರಿಗೆ ಅಪಾರ ಅಭಿಮಾನ.

ಮೊನ್ನೆಯಷ್ಟೇ ಅವರ ಸಿನಿಮಾ – ಬದುಕಿನ ಅನುಭವಗಳ ‘ಅನ್‌ಫಿನಿಷ್ಡ್‌’ ಪುಸ್ತಕ ಬಿಡುಗಡೆಯಾಗಿದೆ. ಇದರಲ್ಲಿ ನಟಿ ತಮ್ಮ ವೃತ್ತಿಬದುಕಿನ ಆರಂಭದ ದಿನಗಳ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಕೆಲವು ಚಿತ್ರನಿರ್ದೇಶಕರ ಕಿರಿಕಿರಿ, ಕೆಟ್ಟ ವ್ಯಕ್ತಿತ್ವದ ಬಗ್ಗೆ ಪ್ರಸ್ತಾಪಿಸಿರುವ ಪ್ರಿಯಾಂಕಾ ತಮ್ಮ ಮೊದಲ ಚಿತ್ರದ ಹೀರೋ ವಿಜಯ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

“ಅಭಿಮಾನಿಗಳ ಬಗ್ಗೆ ವಿಜಯ್‌ ಅವರಿಗಿರುವ ಕಾಳಜಿ, ಪ್ರೀತಿ ನನಗೆ ಅಚ್ಚರಿ ಮೂಡಿಸುತ್ತದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅಮೆರಿಕಾದಲ್ಲಿ ನನ್ನ ‘ಕ್ವಾಂಟಿಕೋ’ ಇಂಗ್ಲಿಷ್ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮೊಂದಿಗೆ ನನ್ನ ಫೋಟೋ ತೆಗೆಸಿಕೊಳ್ಳಲು ಅಪೇಕ್ಷಿಸುತ್ತಿದ್ದರು. ಒತ್ತಡದ ಮಧ್ಯೆಯೂ ನಾನು ಬಿಡುವಿನ ವೇಳೆಯಲ್ಲಿ ಅವರೊಂದಿಗೆ ಸಮಯ ಕಳೆಯುತ್ತಿದ್ದೆ. ಆಗೆಲ್ಲಾ ನನಗೆ ವಿಜಯ್‌ ನೆನಪಾಗುತ್ತಿದ್ದರು. ಅಭಿಮಾನಿಗಳೆಡೆಗಿನ ಅವರ ಶ್ರದ್ಧೆ, ಸಿನಿಮಾ ಕುರಿತ ಅವರ ಪ್ಯಾಷನ್‌ ನನಗೆ ಸ್ಫೂರ್ತಿ” ಎಂದಿದ್ದಾರೆ ಪ್ರಿಯಾಂಕಾ. ಅವರೀಗ ‘ಶೀಲಾ’, ‘ಟೆಕ್ಸ್ಟ್‌ ಫಾರ್ ಯೂ’, ‘ಸಿಟಾಡೆಲ್‌’ ಇಂಗ್ಲಿಷ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರತದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ಅವರ ಮುಂದಿನ ಯೋಜನೆ.

Related Posts

error: Content is protected !!