ಅಧಿಕಾರ ನನ್‌ ಕೈಲ್ಲಿದಿದ್ದರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ… ಹೀಗಂತ ಶಿವಣ್ಣ ಬೇಸರ ವ್ಯಕ್ತಪಡಿಸಿದ್ದೇಕೆ?

ಶಿವಣ್ಣ ರೈತ ಪರ -ಸೋಷಲ್‌ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ

ನಟ ಶಿವರಾಜ್‌ ಕುಮಾರ್‌ ಅಂದ್ರೆನೆ ಹಾಗೆ. ದೊಡ್ಡ ಸ್ಟಾರ್‌ ಆಗಿದ್ದರೂ ಸರಳ-ಸಜ್ಜನಿಕೆಗೆ ಮಾದರಿಯಂತಿರುವ ಅಪರೂಪದ ನಟ. ಹಾಗೆಯೇ ನಟನೆಯ ಆಚೆಯೂ ಸದಾ ನಾಡು-ನುಡಿ, ನೆಲ-ಜಲ ಪರವಾಗಿ ನಿಂತ ಅಪರೂಪದ ಕಲಾವಿದ. ಜನ ಪರವಾದ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದು ಮಾತ್ರವಲ್ಲ, ತೆರೆ ಮೇಲೂ ರೈತ ಪರವಾಗಿ ಧ್ವನಿ ಮೊಳಗಿಸಿದ ಹೀರೋ. ಅದಕ್ಕೆ ಸಾಕ್ಷಿ “ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯʼ ಚಿತ್ರ. ಅಂತೆಯೇ ಈಗ ಅತ್ಯಂತ ʼದುರಿತʼ ಕಾಲದಲ್ಲೂ ರೈತ ಪರವಾಗಿ ಧ್ವನಿ ಎತ್ತಿ ತಾವು ವಿಭಿನ್ನ ಮತ್ತು ವಿಶಿಷ್ಟ ನಟ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸ್ಯಾಂಡಲ್‌ ವುಡ್‌ ಕಡೆಯಿಂದ ಮೊದಲಿಗರಾಗಿ ನಟ ಶಿವರಾಜ್‌ ಕುಮಾರ್‌ ಬೆಂಬಲ ಸೂಚಿಸಿ ಮಾತನಾಡಿರುವುದು ವಿಶೇಷವಾಗಿದೆ.

ಸ್ಯಾಂಡಲ್‌ ವುಡ್‌ ಮಂದಿ ಕೂಡ ರೈತರ ಪ್ರತಿಭಟನೆಗೆ ಬೆಂಬಲ ನೀಡಬೇಕೆನ್ನುವ ಕೂಗು ಕೇಳಿಬಂದ ಬೆನ್ನಲೇ ಶಿವರಾಜ್‌ ಕುಮಾರ್‌, ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದೆ. ಸೋಷಲ್‌ ಮೀಡಿಯಾದಲ್ಲಿ ಅವರ ಆಭಿಮಾನಿಗಳು ಮಾತ್ರವಲ್ಲ, ಜನಪರ ಚಿಂತಕರು, ಹೋರಾಟಗಾರರು ಕೂಡ ಶಿವಣ್ಣ ಅವರ ಹೇಳಿಕೆಯನ್ನು ಶೇರ್‌ ಮಾಡಿ, ಈ ನಿಲುವು ಶಿವಣ್ಣ ಅಲ್ಲದೆ ಇನ್ನಾರು ತೆಗೆದುಕೊಳ್ಳಲು ಸಾಧ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ , ಇಷ್ಟಕ್ಕೂ ಶಿವಣ್ಣ ಹೇಳಿದ್ದೇನು…? ಅಧಿಕಾರ ನನ್‌ ಕೈಲ್ಲಿದಿದ್ದರೆ ಎಲ್ಲವನ್ನೂ ಬರೆದು ಕೊಡುತ್ತಿದ್ದೆ ಅಂತ ಶಿವಣ್ಣ ಯಾಕೆ ಹೇಳಿದ್ರು?

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರ ಜತೆಗೆ ಮಾತನಾಡಿದ ಶಿವಣ್ಣ, ಯಾರೂ ಹೋರಾಟದ ಬಗ್ಗೆ ಕಾಮೆಂಟ್ ಮಾಡ್ತಿಲ್ಲ ಅಂತಾರೆ. ಆದ್ರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿ ಇಳಿಯೋದ್ರಿಂದ ಏನೂ ಸಾಧ್ಯವಾಗಲ್ಲ. ಹಾಗೇ ಆಗೋದಾದ್ರೆ ನಾವು ಬೀದಿಗಿಳಿಯಲು ಸಾಧ್ಯ. ಅದು ಸರ್ಕಾರದಿಂದ ಮಾಡೋಕಷ್ಟೇ ಸಾಧ್ಯ. ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡಿದ್ರೆ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ನಮ್ಮ ಸಪೋರ್ಟ್ ಖಂಡಿತಾ ಇದ್ದೇ ಇರುತ್ತೆ. ಆದ್ರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ. ಆದ್ರೆ ಅಧಿಕಾರಿ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಶಿವರಾಜ್‌ ಕುಮಾರ್‌ ಉತ್ತರವಷ್ಟೇ ಇದಾಗಿರುಬಹುದು, ಆದರೆ ದೆಹಲಿ ರೈತರ ಪ್ರತಿಭಟನೆಯ ಬಿಸಿ ಇವತ್ತು ಇಡೀ ಭಾರತೀಯ ಚಿತ್ರ ರಂಗಕ್ಕೂ ತಟ್ಟಿದೆ. ಬಾಲಿವುಡ್‌ ನಲ್ಲೂ ಇದು ಮೊನ್ನೆಯಷ್ಟೇ ಭಾರೀ ಸದ್ದು ಮಾಡಿದ್ದು ಕೂಡ ನಿಮಗೆಲ್ಲ ಗೊತ್ತೇ ಇದೆ. ಅಲ್ಲಿ ಅಭಿಮಾನಿಗಳಿಂದಲೇ ಕಲಾವಿದರಿಗೆ ಒತ್ತಡ ಹೆಚ್ಚಾಗುತ್ತಿದೆ. ಕಲಾವಿದರು ತಮ್ಮ ನಿಲುವು ಸ್ಪಷ್ಟ ಪಡಿಸಬೇಕೆಂದು ಜನರೇ ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಅಂತಹ ತೀವ್ರ ತರಹದ ಒತ್ತಡ ಬಂದಿಲ್ಲವಾದರೂ, ಈಗ ಸೋಷಲ್‌ ಮೀಡಿಯಾದಲ್ಲಿ ಜನ ಮಾತನಾಡಿಕೊಳ್ಳುತ್ತಿರುವುದು ಹೌದು. ಇಂತಹ ಸಂದರ್ಭದಲ್ಲಿ ಶಿವರಾಜ್‌ ಕುಮಾರ್‌ ರೈತರ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿರುವುದು ಇತರೆ ಕಲಾವಿದರ ಪಾಲಿಗೂ ಒತ್ತಡವೇ ಸೃಷ್ಟಿಸಿದೆ. ಯಾರು ರೈತ ಪರ ಎನ್ನುವುದು ಈಗ ಗೊತ್ತಾಗಬೇಕಿದೆ.

Related Posts

error: Content is protected !!