ಅಲಂಕೃತ ಶ್ರೀವಾತ್ಸವ್ ನಿರ್ಮಾಣ, ನಿರ್ದೇಶನದ ‘ಬಾಂಬೆ ಬೇಗಮ್ಸ್’ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಕಾರವಾರ ಮೂಲದ ಕನ್ನಡತಿ ಆದ್ಯಾ ಆನಂದ್ ನಟಿಸಿದ್ದಾರೆ. ಮೊನ್ನೆ ಸರಣಿಯ ಟ್ರೈಲರ್ ಬಿಡುಗಡೆಯಾಗಿದ್ದು, ಮಾರ್ಚ್ 8ರ ಮಹಿಳಾ ದಿನದಂದು ಸರಣಿ ಪ್ರೀಮಿಯರ್ ಆಗಲಿದೆ. ಆಧುನಿಕ ಮುಂಬಯಿಯ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಐವರು ಮಹಿಳೆಯರ ಸುತ್ತ ಹೆಣೆದ ಕತೆ ‘ಬಾಂಬೆ ಬೇಗಮ್ಸ್’. ಪೂಜಾ ಭಟ್, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಠಾಕೂರ್ ಮತ್ತು ಆದ್ಯಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿಂಗಾಪೂರದಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಆನಂದ್ ನಾಯಕ್ ಮತ್ತು ಪ್ರಿಯಾ ದಂಪತಿ ಪುತ್ರಿ ಆದ್ಯಾ ಆನಂದ್. ಮಡಿಕೇರಿಯಲ್ಲಿ ಜನಿಸಿದ ಆದ್ಯಾ ಬೆಳೆದದ್ದು ಸಿಂಗಾಪೂರದಲ್ಲಿ. ಏಳನೇ ವಯಸ್ಸಿಗೆ ಆಕ್ಟಿಂಗ್, ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಆದ್ಯಾ ಸಿಂಗಾಪೂರದಲ್ಲಿ ರಂಗಭೂಮಿ ತರಬೇತಿ ಪಡೆದರು. ಬಾಲಿವುಡ್‌ನ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಇನ್‌ಸ್ಟಿಟ್ಯೂಟ್‌ಗಳಲ್ಲಿಯೂ ತರಬೇತಿ ಪಡೆದಿದ್ದಾರೆ. ‘ಎ ಯಲ್ಲೋ ಬರ್ಡ್’ ಸಿನಿಮಾ, ‘ಒನ್ ಹವರ್ ಟು ಡೇಲೈಟ್’ ಮತ್ತು ‘ಸ್ಕೈ ಸಿಟಿ’ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ್ದ ‘ಎ ಯಲ್ಲೋ ಬರ್ಡ್’ ಸಿನಿಮಾ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
ಸೋನಿ ಟೀವಿಯ ಸೂಪರ್ ಡ್ಯಾನ್ಸ್ ಸಿಂಗಾಪೂರ್‌ನ ವಿಜೇತೆ ಆದ್ಯಾ. ಸಿಂಗಾಪೂರ್‌ನ ಜನಪ್ರಿಯ ‘ವ್ಹೂಪೀಸ್ ವರ್ಲ್ಡ್’ ಸರಣಿಯ ನಾಲ್ಕು ಸೀಸನ್‌ಗಳು, ‘ಲಯನ್ ಮಮ್ಸ್’ನ 2 ಮತ್ತು 3ನೇ ಸರಣಿ, ‘ವರ್ಲ್ಡ್ ವಿಜ್ ಸ್ಲೈಮ್ ಪಿಟ್’, ‘ಮೆನಂತು ಇಂಟರ್‌ನ್ಯಾಷನಲ್’ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಝೀ ಟೀವಿಯಲ್ಲಿ ಆದ್ಯಾ ನಿರೂಪಿಸಿದ್ದ ‘ಬ್ರೈನ್ ಬೂಸ್ಟರ್ಸ್’ ಕಾರ್ಯಕ್ರಮ ಹದಿನೆಂಟು ದೇಶಗಳಲ್ಲಿ ಎರಡು ಸೀಸನ್‌ಗಳಲ್ಲಿ ಪ್ರಸಾರ ಕಂಡಿದೆ.‘ಬಾಂಬೆ ಬೇಗಮ್ಸ್’ ವೆಬ್ ಸರಣಿ ಆಡಿಷನ್‌ನಲ್ಲಿ 500ಕ್ಕೂ ಹೆಚ್ಚು ಯುವತಿಯರು ಭಾಗವಹಿಸಿದ್ದರು. ಕೊನೆಗೆ ‘ಶಾಯ್ ಇರಾನಿ’ ಪಾತ್ರಕ್ಕೆ ಆದ್ಯಾ ಆಯ್ಕೆಯಾಗಿದ್ದಾರೆ. ಮಾತೃಭಾಷೆ ಕನ್ನಡದ ಜೊತೆ ಹಿಂದಿ ಮತ್ತು ಇಂಗ್ಲಿಷನ್ನು ಸೊಗಸಾಗಿ ಮಾತನಾಡುವ ಆದ್ಯಾ ಮುಂದಿನ ದಿನಗಳಲ್ಲಿ ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸುವ ಇರಾದೆ ಹೊಂದಿದ್ದಾರೆ.