ಶೋಕಿಗಷ್ಟೇ ಸಿನಿಮಾ ನಟರಾಗೋದಲ್ಲ – ನಟ ಚೇತನ್ ಕೆಂಡಕಾರಿದ್ದು ಯಾರ ಮೇಲೆ ?

ಸ್ಟಾರ್ ಸಂಸ್ಕೃತಿ ನನಗೆ ಮೇಲೆ ನಂಬಿಕೆ ಇಲ್ಲ. ಇದೆಲ್ಲ ಅಸಮಾನತೆಯ ಸೂಚಕ. ಇಷ್ಟಕ್ಕೂ ಸ್ಟಾರ್ ಆಗೋದು ಅಂದ್ರೇನು? ಒಂದಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡು ಕಟೌಟ್ ಗಳ ಮೇಲೆ ಹಾಲಿನ ಅಭಿಷೇಕ ಮಾಡಿಸಿಕೊಳ್ಳುವುದಾ ? ನನ್ನ ಪ್ರಕಾರ ಸ್ಟಾರ್ ಗಿರಿ ಅನ್ನೋದು ಜನರು ನೀಡುವ ಆಶೀರ್ವಾದ. ಅದಕ್ಕೆ ವಾಪಸ್ ನಾವು ಅವರಿಗೇನು ಕೊಡುತ್ತೇವೆ ಅನ್ನೋದೇ ನಂಗೆ ಮುಖ್ಯ. ಅದು ಬಿಟ್ಟು ಶೋಕಿಗೋಸ್ಕರ ಸಿನಿಮಾ ನಟರಾಗೋದಲ್ಲ….

‘ಆ ದಿನಗಳು’ ಚಿತ್ರದ ಖ್ಯಾತಿಯ ನಟ ಚೇತನ್, ಸಿನಿಮಾ ಜಗತ್ತಿನ ಸ್ಟಾರ್ ಸಂಸ್ಕೃತಿಯ ವಿರುದ್ಧ ಹೀಗೆ ಒಂದೇ ಸಮನೆ ಗುಡುಗಿದರು. ಸಿನಿಮಾ ಜಗತ್ತು, ಜತೆಗೆ ಅದರಾಚೆಗೂ ನಮ್ಮ ಸುತ್ತ ಇರುವ ಅಸಮಾನತೆ, ತಾರತಮ್ಯ, ಲಿಂಗಭೇದ, ಶೋಷಣೆ ವಿರುದ್ಧ ಅವರ ಮಾತುಗಳು ಬೆಂಕಿ ಉಂಡೆಗಳಂತೆ ಹಾರಿದವು. ಒಬ್ಬ ನಟ ಹೀಗೆಲ್ಲ ಮಾತನಾಡುವುದಕ್ಕೆ ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ ಸರ್ಕಾರ ಮತ್ತು ಶೋಷಕ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದರು ಚೇತನ್.

ಅವರು ಹೀಗೆಲ್ಲ ಮಾತನಾಡಿದ್ದು ‘ಸಿನಿ ಲಹರಿ’ ಕಚೇರಿಗೆ ಔಪಚಾರಿಕವಾಗಿ ಭೇಟಿ ನೀಡಿದ್ದ ಸಂದರ್ಭ. ಸೋಮವಾರ ನಟ ಚೇತನ್ ಅವರು ಪತ್ನಿ ಮೇಘಾ ಅವರೊಂದಿಗೆ ‘ಸಿನಿ ಲಹರಿ’ ಕಚೇರಿಗೆ ಬಂದಿದ್ದರು. ಇದೊಂದು ಔಪಚಾರಿಕ ಭೇಟಿ. ಕಚೇರಿ ವ್ಯವಸ್ಥೆ ಕಂಡು ಖುಷಿ ಪಟ್ಟರು. ಆ ನಂತರ ಮಾತಿಗೆ ಕುಳಿತ ಅವರು, ತಮ್ಮ ಸಿನಿ ಜರ್ನಿ ಜತೆಗೆ ಸಾಮಾಜಿಕ ಹೋರಾಟಕ್ಕೆ ಇಳಿದ ಕಾರಣ, ಅದೇ ಕಾರಣಕ್ಕೆ ಎದುರಿಸಿದ  ಜೀವ ಬೆದರಿಕೆ, ನಟ ಎನ್ನುವುದಕ್ಕಿಂತ ಹೋರಾಟಗಾರನಾಗಿ ಕಂಡ ಬದುಕಿನ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಚೇತನ್ ನಟರಾ ಅಥವಾ ಹೋರಾಟಗಾರನಾ? ಮೊದಲು ಎದುರಾದ ಪ್ರಶ್ನೆಗೆ ಸಮಗ್ರವಾಗಿ ಉತ್ತರಿಸಿದರು.  “ ಎರಡನ್ನು ಯಾಕೆ ವಿಂಗಡಿಸಬೇಕು? ಒಬ್ಬ ನಟನೊಳಗೂ ಹೋರಾಟಗಾರ ಇರಬಾರದೇ? ನಾನು ನಟನಾಗುವುದಕ್ಕೂ ಮೊದಲೇ ಒಬ್ಬ ಸಾಮಾಜಿಕ ಹೋರಾಟಗಾರನಾಗಿದ್ದೆ. ಕೆಲವು ಸಾಮಾಜಿಕ ವಿಷಯಗಳ ಪರವಾಗಿ ಕರ್ನಾಟಕದ ಕೆಲವೆಡೆಗಳಿಗೆ ಭೇಟಿ ಕೊಟ್ಟು ಬಂದಿದ್ದೆ. ಜತೆಗೆ ಮನೆಯಲ್ಲಿ ನನ್ನ ಪೋಷಕರು ಬೆಳೆಸಿದ್ದೇ ಹಾಗೆ. ಹೋರಾಟಗಾರನಾಗಿ ನನ್ನ ಮಾತಿಗೆ ಒಂದಷ್ಟು ಬೆಲೆ ಬರಬೇಕಾದರೆ ನಟನಾಗುವುದು ಸೂಕ್ತಎನಿಸಿತು. ಹಾಗಾಗಿ ನಟನಾದೆ. ಸಿನಿಮಾ ನನ್ನ ವೃತ್ತಿ. ಹೋರಾಟ ನನ್ನ ಬದುಕು’ ಎನ್ನುತ್ತಾರೆ ಚೇತನ್.

ಚೇತನ್ ಅಂದ್ರೆ ವಿವಾದ, ವಿವಾದ ಅಂದ್ರೆ ಚೇತನ್ ಅಂತಾಗಿದ್ದೇಕೆ? ನೇರವಾದ ಈ ಪ್ರಶ್ನೆಗೆ ಚೇತನ್ ನಗುತ್ತಲೇ ಉತ್ತರಿಸಿದ ರೀತಿಯೇ ಅದ್ಭುತವಾಗಿತ್ತು. “ ನಂದು ಬಿಡಿ, ಬುದ್ಧ ಬಸವಣ್ಣ, ಅಂಬೇಡ್ಕರ್ ಅವರ ಕಾಲದಲ್ಲೂ ಇಂತಹದೇ ವ್ಯವಸ್ಥೆ ಇತ್ತು. ನಾನೇನು ಹೇಳಿದ್ದೇನೆ ಎನ್ನುವುದಕ್ಕಿಂತ ಅವನೇಕೆ ಹೇಳಿದ ಅಂತಲೇ ನೋಡುವ ಜನರಿದ್ದಾರೆ. ಹಾಗಾಗಿ ನಾನೇನೆ ಹೇಳಿದರೂ ವಿವಾದ ಹುಟ್ಟುತ್ತೆ. ಅವರನ್ನಾದರೂ ನಾನು ತಲುಪಿದ್ದೇನೆ ಎನ್ನುವುದು ಮುಖ್ಯವೇ. ಇರಲಿ, ಅವರು ಇರಲೇಬೇಕು. ಹಾಗಂತ ವಿವಾದ ಅಂದ್ರೆ ಚೇತನ್ ಅಲ್ಲ, ಚೇತನ್ ಹೇಳಿದ್ದನ್ನು ವಿವಾದ ಮಾಡುವ ಹುನ್ನಾರ ನಡೆಯುತ್ತಿದೆಯಷ್ಟೇ’ ಎನ್ನುವ ಸ್ಪಷ್ಟನೆ ಚೇತನ್ ಅವರದ್ದು.

ಸಿನಿಮಾ ನಟನಾಗಿಯೇ ಜನರಲ್ಲಿ ಜಾಗೃತಿ ಮೂಡಿಸಬಹುದಲ್ಲವೇ? ಎನ್ನುವ ಮತ್ತೊಂದು ಪ್ರಶ್ನೆಗೆ ಚೇತನ್ ಸ್ವಾರಸ್ಯಕರವಾದ ಉತ್ತರ ನೀಡಿದರು.” ನಾನು ಅಮೇರಿಕಾದಿಂದ ಸ್ಟಾರ್‌ ಆಗೋಕ್ಕೆ ಬಂದಿಲ್ಲ, ಹಾಗಂತ ನಟನೆಯನ್ನು ದ್ವೇಷಿಸೋದಿಲ್ಲ. ಸಿನಿಮಾ ರಂಗ ಒಂದು ಸಿದ್ದಾಂತಕ್ಕೆ ಸೀಮಿತವಾಗಿಲ್ಲ. ಸಿನಿಮಾರಂಗದಲ್ಲಿ ಎಲ್ಲರನ್ನು ಕಾರ್ಮಿಕರ ದೃಷ್ಟಿಕೋನದಿಂದ ನೋಡೋಣ. ನಮ್ಮ ದೃಷ್ಟಿಕೋನ ಬಹಳ ಮುಖ್ಯ. ನಟ, ನಟಿಯರಿಗಷ್ಟೇ ಸಿನಿಮಾಕ್ಷೇತ್ರ ಅಲ್ಲ. ನನ್ನ ಫ್ಯಾಮಿಲಿ ನನ್ನನ್ನು ವೈಚಾರಿಕ ಯೋಚನೆಯಿಂದ ಬೆಳೆಸಿದ್ದಾರೆ. ಸಮಾಜದ ಡೊಂಕನ್ನು ತಿದ್ದುವ ಹಾಗೆ ಬೆಳೆಸಿದ್ದಾರೆ. ಆ ಕೆಲಸವೇ ನನ್ನ ಪ್ರಧಾನ ಆದ್ಯತೆ’ ಎನ್ನುತ್ತಾರೆ ನಟ ಚೇತನ್‌. ( ಚೇತನ್ ಅವರೊಂದಿಗಿನ ರೋಚಕ ಮಾತುಕತೆ ಫುಲ್ ಡಿಟೈಲ್ಸ್ ಸಿನಿ ಲಹರಿ ಯುಟ್ಯೂಬ್ ಚಾನೆಲ್ ವೀಕ್ಷಿಸಿ. ಇಷ್ಟರಲ್ಲಿಯೇ ನಿಮ್ಮ ಮುಂದೆ)

Related Posts

error: Content is protected !!