ಈ ನಟಿಗೆ ದೇಗುಲವನ್ನೇ ನಿರ್ಮಿಸಿದ ಅಭಿಮಾನಿಗಳು !

ತೆಲುಗು ಮತ್ತು ತಮಿಳು ಸಿನಿಮಾಗಳ ಯುವನಟಿ ನಿಧಿ ಅಗರ್‌ವಾಲ್‌ ಅವರಿಗೆ ಅಭಿಮಾನಿಗಳು ಚೆನ್ನೈನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ನಟಿಯ ಪ್ರತಿಮೆ ರೂಪಿಸಿದ್ದು, ಅದಕ್ಕೆ ಅಭಿಷೇಕ – ಆರತಿ ನಡೆಯುತ್ತಿದೆ. “ಪ್ರೇಮಿಗಳ ದಿನಕ್ಕಾಗಿ ಇದು ನಮ್ಮ ಕಡೆಯಿಂದ ನಟಿಗೆ ಉಡುಗೊರೆ” ಎಂದಿದ್ದಾರೆ ಅಭಿಮಾನಿಗಳು. “ಅಭಿಮಾನಿಗಳು ಈ ನಡೆ ನನಗೆ ಶಾಕ್ ತಂದಿದೆ. ಇದೆಲ್ಲವನ್ನೂ ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಅವರ ಪ್ರೀತಿಗೆ ನಾನು ಋಣಿ” ಎನ್ನುತ್ತಾರೆ ನಿಧಿ.

ನಟ-ನಟಿಯರಿಗೆ ದೇವಾಲಯ ನಿರ್ಮಿಸುವುದು ತಮಿಳುನಾಡಿನಲ್ಲಿ ಹೊಸದೇನಲ್ಲ. ಈ ಹಿಂದೆ ಎಂಜಿಆರ್‌, ಖುಷ್ಬೂ, ನಮಿತಾ, ಹನ್ಸಿಕಾ ಅವರಿಗೆ ಅಭಿಮಾನಿಗಳು ದೇವಾಲಯಗಳನ್ನು ನಿರ್ಮಿಸಿದ್ದರು. ಬಹುಭಾಷಾ ತಾರೆ ನಯನತಾರಾ ಅವರಿಗೂ ದೇಗುಲ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಇದೀಗ ನಿಧಿಯನ್ನು ಆರಾಧಿಸುತ್ತಿರುವುದು ಸ್ವತಃ ಆ ನಟಿಗೇ ಅಚ್ಚರಿ ತಂದಿದೆ.

“ನಾನಿನ್ನೂ ಹೊಸಬಳು. ಮೂರ್ನಾಲ್ಕು ತೆಲುಗು ಮತ್ತು ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದೇನಷ್ಟೆ. ಅಭಿಮಾನಿಗಳು ನನ್ನ ಬಗ್ಗೆ ಅಪಾರ ಅಭಿಮಾನ ತಳೆದಿದ್ದಾರೆ. ಸಂದರ್ಶನವೊಂದರಲ್ಲಿ ನಾನು ಅನಾಥ ಮಕ್ಕಳಿಗಾಗಿ ಕೆಲಸ ಮಾಡಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದೆ. ನನ್ನ ಮನದಿಂಗಿತ ಅರಿತು ಅಭಿಮಾನಿಗಳು ಅನಾಥರಿಗೆ ಊಟ ನೀಡಿದ್ದಾರೆ” ಎನ್ನುವ ನಿಧಿ ಸದ್ಯ ಪವನ್ ಕಲ್ಯಾಣ್ ಜೋಡಿಯಾಗಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಉದಯನಿಧಿ ಸ್ಟಾಲಿನ್ ಜೊತೆ ತಮಿಳು ಸಿನಿಮಾ ಮಾಡಲಿದ್ದಾರೆ.

Related Posts

error: Content is protected !!