‘ಬ್ರಹ್ಮಾಸ್ತ್ರ’ ಪೂರ್ಣಗೊಳಿಸಿದ ನಾಗಾರ್ಜುನ !

ಬಹುವರ್ಷಗಳ ನಂತರ ಬಾಲಿವುಡ್‌ಗೆ ಹೋಗಿದ್ದ ನಾಗಾರ್ಜುನ ತಮ್ಮ ‘ಬ್ರಹ್ಮಾಸ್ತ್ರ’ ಹಿಂದಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರದ ಪ್ರಮುಖ ತಾರೆಯರಾದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್‌ ಜೊತೆಗಿನ ಫೋಟೋ ಹಂಚಿಕೊಂಡಿರುವ ಅವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ಚಿತ್ರದ ನನ್ನ ಪೋರ್ಷನ್‌ ಮುಗಿಸಿದೆ. ಉತ್ತಮ ನಟ-ನಟಿಯಾದ ರಣಬೀರ್ ಮತ್ತು ಅಲಿಯಾ ಜೊತೆಗೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಥಿಯೇಟರ್‌ನಲ್ಲಿ ನಿಮ್ಮ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರವರು.

‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ ಪುರಾತತ್ವಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ (ರಣಬೀರ್‌) ಮತ್ತು ಇಶಾ (ಅಲಿಯಾ) ಪುರಾತನ ದೇವಾಲಯವೊಂದನ್ನು ಅಭ್ಯಸಿಸಲು ವಾರಣಾಸಿಗೆ ಬರುತ್ತಾರೆ. ಅಲ್ಲಿ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ಅವರಿಗೆ ಹಲವು ಅಚ್ಚರಿಗಳು ಕಾಣುತ್ತವೆ. ಮುಂದೆ ಸಿನಿಮಾ ಕತೆ ಹಿಮಾಲಯದೆಡೆ ಸಾಗುತ್ತದೆ. ಆಕ್ಷನ್‌-ಥ್ರಿಲ್ಲರ್ ಮಾದರಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌನಿ ರಾಯ್‌ ಕೂಡ ನಟಿಸಿದ್ದಾರೆ.

ನಾಗಾರ್ಜುನ ನಟಿಸಿದ್ದ ಕೊನೆಯ ಹಿಂದಿ ಸಿನಿಮಾ ‘ಎಲ್‌ಓಸಿ ಕಾರ್ಗಿಲ್‌’ (2003). ಅದಕ್ಕೂ ಮುನ್ನ ಅವರು ಖುದಾ ಗವಾ, ಅಂಗಾರೆ, ಕ್ರಿಮಿನಲ್, ಝಕ್ಮ್‌ ಚಿತ್ರಗಳಲ್ಲಿ ನಟಿಸಿದ್ದರು. ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಇದೀಗ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಮುಗಿಯಲಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಗಲಿದೆ. ಈ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

Related Posts

error: Content is protected !!