ಡಾ, ರಾಜ್‌ ಪ್ರತಿಮೆ ವಿವಾದ : ಕೊನೆಗೂ ಕ್ಷಮೆ ಕೇಳಿದ ಶಾಸಕ ಮಹಾಶಯ !

ವರನಟ ಡಾ. ರಾಜ್‌ ಕುಮಾರ್‌ ಪ್ರತಿಮೆ ಸ್ಥಾಪನೆ ವಿವಾದದಲ್ಲಿ ಬೆಂಗಳೂರಿನ ಶಾಂತಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.‌ ಎ. ಹ್ಯಾರಿಸ್‌ ಕೊನೆಗೂ ಕ್ಷಮೆ ಕೋರಿದ್ದಾರೆ.

” ನಾನು ಅಣ್ಣಾವ್ರ ಪಕ್ಕಾ ಅಭಿಮಾನಿ. ಅವರ ಬಗ್ಗೆ ಅಪಾರ ಗೌರವವಿದೆ. ಅನೇಕ ಸಲ ಅವರನ್ನು ನೇರವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ಅವರ ಬಗ್ಗೆ ನಾನೆಂದಿಗೂ ಅಗೌರವ ತೋರಿಲ್ಲ. ಯಾರು ಹೇಗೆ ಅರ್ಥೈಸಿದ್ದಾರೋ ನಂಗೆ ಗೊತ್ತಿಲ್ಲ. ವಾಸ್ತವದಲ್ಲಿ ಶಾಂತಿನಗರದಲ್ಲಿ ರಾಜ್‌ ಕುಮಾರ್‌ ಪ್ರತಿಮೆ ಬರೋದಿಕ್ಕೆ ನಾನು ಕೂಡ ಕಾರಣ. ಆದರೆ ಯಾರು ಈ ರೀತಿ ಅಪ ಪ್ರಚಾರ ಮಾಡಿದ್ದರೋ ಅರ್ಥ ಆಗುತ್ತಿಲ್ಲ. ಈ ರೀತಿ ಯಾವುದೇ ಮಾತು ನಾನು ಆಡಿಲ್ಲʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಶಾಸಕ ಹ್ಯಾರಿಸ್‌ ವಿರುದ್ಧ ಸೋಷಲ್‌ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಯಾವುದೋ ಭಾಷಿಗನನ್ನು ಇಲ್ಲಿ ಬಿಟ್ಟುಕೊಂಡಿದ್ದರಿಂದಲೇ ಇವತ್ತು ಕನ್ನಡ ಮತ್ತು ಕನ್ನಡದ ಸಾಧಕರಿಗೆ ಅವಮಾನ ಆಗುತ್ತಿದೆ ಎಂದು ಕನ್ನಡ ಸಂಘಟನೆಗಳ ಕಾರ್ಯಕರ್ತರು ಹ್ಯಾರಿಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾಗುತ್ತಿದ್ದರೆ ಎಚ್ಚೆತ್ತುಕೊಂಡ ಶಾಸಕ ಎನ್.ಎ. ಹ್ಯಾರಿಸ್‌  ತಾವು ಹಾಗೆ ಹೇಳಿಲ್ಲ ಎಂದು ವಿಡಿಯೋ ಮಾಡಿ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ವಾಸ್ತವ ಏನು? ಹ್ಯಾರಿಸ್‌ ಹಾಗೆ ಹೇಳಿಲ್ಲವೇ?

ವಿವಾದ ಅಗಿದ್ದು ಹೀಗೆ..

ಶಾಂತಿನಗರ ವಿಧಾನ ಸಭಾ ಕ್ಷೇತ್ರದಲ್ಲಿನ ಶಾಂತಿ ಸಾಗರ್‌ ಹೊಟೇಲ್‌ ಬಳಿ   ಡಾ. ರಾಜ್‌ ಕುಮಾರ್‌ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಕನ್ನಡ ಸಂಘಟನೆಗಳು ಕೋರಿದ್ದವು ಎನ್ನಲಾಗಿದೆ.  ಜತೆಗೆ ಡಾ. ರಾಜ್‌ ಕುಮಾರ್‌ ಹೆಸರಲ್ಲಿ ಒಂದು ಬೋರ್ಡ್‌ ಹಾಕಿಸಲು ಕೂಡ ಅನುಮತಿ ಕೇಳಿದ್ದರು.  ಇತ್ತೀಚೆಗೆ ಅದರ ಪರಿಶೀಲನೆಗೆ ಹೋಗಿದ್ದ ಶಾಸಕ ಹ್ಯಾರಿಸ್‌, ಪ್ರತಿಮೆಗಳೆಲ್ಲ ರಸ್ತೆಗಳಿಗೆ ಬೇಕಾ? ಬೇಕಾದ್ರೆ ಮನೆಯಲ್ಲೇ ಹಾಕಿಸಿಕೊಳ್ಳಿ. ಇವರಿಗೆ ಬುದ್ದಿ ಇಲ್ಲ. ಹೇಳಿದ್ರೆ ಇನ್ನೇನೋ ಮಾಡ್ತಾರೆ ಎಂದಿದ್ದಾರೆ. ಅವರು ಮಾತನಾಡಿರುವ  ಆಡಿಯೋ , ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕನ್ನಡ ಸಂಘಟನೆಗಳ ಕಾರ್ಯಕರ್ತರೇ ಅದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಈ ವಿಚಾರ ಸೋಷಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಭಾರೀ ವಿವಾದವೇ ಸೃಷ್ಟಿಯಾಯಿತು. ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಹ್ಯಾರಿಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.ಇದು ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಎನ್.‌ ಎ. ಹ್ಯಾರಿಸ್‌ ತಾವು ಹಾಗೆ ಮಾತನಾಡಿಲ್ಲ. ರಾಜ್‌ ಕುಮಾರ್‌ ಅವರ ಬಗ್ಗೆ ಗೌರವವಿದೆ ಅಂತ ವಿವಾದದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ.

Related Posts

error: Content is protected !!