Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಮಾಡಿದ ತಪ್ಪಿಗೆ ಮುಖಕ್ಕೆ ಮಸಿ ಬಳಿಸಿಕೊಳ್ಳುವುದಂದ್ರೇನು ? ನಟಿ ನಿಧಿ ಸುಬ್ಬಯ್ಯ ಅವರಿಗೆ ಇದು ಬೇಕಿತ್ತಾ? ಕಿರುತೆರೆ ವೀಕ್ಷಕರು ಹಾಗೆಯೇ ಸಿನಿಮಾ ಪ್ರೇಕ್ಷಕರು ಹೀಗೆಲ್ಲ ಹೇಳುತ್ತಿದ್ದಾರೆ. ಹಾಗಾದ್ರೆ ನಿಧಿ ಸುಬ್ಬಯ್ಯ ಮಾಡಿದ ತಪ್ಪೇನು?
ಇದು ಬಿಗ್ ಬಾಸ್ ಮನೆಯ ಕಥೆ.ಬಿಗ್ ಬಾಸ್ ಸೀಸನ್ 8 ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಬುಧವಾರ ಬಿಗ್ ಬಾಸ್ ಮನೆಯಲ್ಲಿ ಕೊರೋನಾ ವೈರಸ್ ನದ್ದೂ ಹಾವಳಿ ಹೆಚ್ಚಾಗಿತ್ತು. ಅಂದ್ರೆ ಕೊರೋನಾ ವೈರಸ್ ಹಾಗೂ ಮನುಷ್ಯರ ಮಧ್ಯೆ ಒಂದು ಯುದ್ಧ ನಡೆದಿತ್ತು.
ನಿಧಿಯಿಂದ ಆಟವೇ ಸ್ಟಾಪ್ ! ಕೊರೋನಾ ವೈರಸ್ ಅಲ್ಲಿದ್ದ ಮನುಷ್ಯರ ಮೇಲೆ ದಾಳಿ ಮಾಡುವ ಆಟವದು. ಈ ವೇಳೆ ಅಲ್ಲಿ ಎರಡು ತಂಡಗಳಾಗಿ ರೂಪಿಸಲಾಗಿತ್ತು. ವೈರಸ್ ಟೀಮ್‌ನಲ್ಲಿ ನಟಿ ನಿಧಿ ಸುಬ್ಬಯ್ಯ ಇದ್ದರು. ಅವರು ಮನುಷ್ಯರ ಮೇಲೆ ದಾಳಿ ಮಾಡುವಾಗ ಸರಿಯಾಗಿ ಆಡಲಿಲ್ಲ ಅನ್ನೋದು ಅಲ್ಲಿದ್ದವರು ಆರೋಪ. ಕೊನೆಗೆ ಆ ಆಟವೇ ಅಲ್ಲಿ ನಡೆಯಲಿಲ್ಲ. ಅರ್ಧದಲ್ಲಿಯೇ ನಿಂತು ಹೋಯಿತು. ಅದು ಅರ್ಧದಲ್ಲಿಯೇ ನಿಂತು ಹೋಗಿದ್ದರ ಆರೋಪ ನಿಧಿ ಸುಬ್ಬಯ್ಯ ಮೇಲೆ ಬಂತು. ಆ ಕಾರಣಕ್ಕೆ ಸಂಜೆ ಬಿಗ್ ಬಾಸ್ ಮನೆಯಲ್ಲಿ ಇತರೆ ಕಂಟೆಸ್ಟೆಂಟ್ ಅವರ ಮೇಲೆ ಆರೋಪ ಹೊರಿಸಿ, ಅವರ ಮುಖಕ್ಕೆ ಮಸಿ ಬಳಿದರು. ಬಿಗ್ ಬಾಸ್ ಮನೆಯಲ್ಲಿ ಕೋಪದ ಕಾವು ಹೆಚ್ಚಾಗುತ್ತಿದ್ದು. ಕಂಟೆಸ್ಟೆಂಟ್ ವೈಯಕ್ತಿಕ ದ್ವೇಷದಿಂದ ಟಾಸ್ಕ್ ಗಳಲ್ಲಿ ಎಡವುತ್ತಿದ್ದಾರೆ ಅನ್ನೋದು ಸದ್ಯದ ಪರಿಸ್ಥಿತಿಯಲ್ಲಿ ಗಮನಿಸಬಹುದು.
ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಈಗಾಗಲೇ ಸೇರ್ಪಡೆಯ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಅಧಿಕೃತವಾಗಿ ಕೈ ಹಿಡಿಯುವುದು ಮಾತ್ರ ಬಾಕಿ ಇದೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ತಾವು ಮಾನಸಿಕವಾಗಿ ಕಾಂಗ್ರೆಸ್ ಸೇರಿದ್ದಾಗಿ ಹೇಳಿದ್ದಾರೆ. ಹಾಗೆಯೇ ತಮ್ಮ ಸಹೋದರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆಂದು ಹೇಳಿದ್ದಾರೆ. ಅವರು ಇಷ್ಟು ಹೇಳಿದ ಮೇಲೆ ಕುತೂಹಲ ಇರೋದು ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರುತ್ತಿರುವುದು ನಿಜವಾ ಅಂತ.
ನಟ ಶಿವರಾಜ್ ಕುಮಾರ್ ಮೊದಲಿನಿಂದಲೂ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದವರು. ಆದರೆ ಗೀತಾ ಶಿವರಾಜ್ ಕುಮಾರ್ ಅವರಿಗೆ ರಾಜಕಾರಣ ಹೊಸದಲ್ಲ. ರಾಜಕೀಯ ಹಿನ್ನೆಲೆಯ ಕುಟುಂಬದಿಂದಲೇ ಬಂದವರು. ಹಾಗೆಯೇ ೨೦೧೪ ರಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅಲ್ಲಿಂದ ಸಹೋದರ ಮಧು ಬಂಗಾರಪ್ಪನವರ ಜತೆಗೆ ರಾಜಕೀಯ ಮಾಡುತ್ತಲೇ ಬಂದರು. ಮತ್ತೊಂದು ಚುನಾವಣೆಗೆ ಮಧು ಬಂಗಾರಪ್ಪ ಲೋಕಸಭಾ ಚುನಾವಣೆಗೆ ಜೆಡಿಎಸ್ -ಕಾಂಗ್ರೆಸ್ ಅಭ್ಯರ್ಥಿಯಾದಾಗಲೂ ಅವರ ಪರವಾಗಿ ಗೀತಾ ಶಿವರಾಜ್ ಕುಮಾರ್ ಚುನಾವಣೆ ಪ್ರಚಾರ ನಡೆಸಿದ್ದರು. ಅದಕ್ಕೂ ಮೊದಲು ಮಧು ಬಂಗಾರಪ್ಪ ಸೊರಬ ವಿಧಾನಸಭಾ ಚುನಾವಣೆ ನಿಂತಾಗಲೂ ಅವರ ಪರವಾಗಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದರು. ಆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲುವು ಕಂಡಿದ್ದರು.
ಒಟ್ಟಿನಲ್ಲಿ ಸಹೋದರ ಮಧು ಬಂಗಾರಪ್ಪ ಪರವಾಗಿ ಚುನಾವಣಾ ರಾಜಕೀಯದಲ್ಲಿ ಒಂಥರ ಸಕ್ರಿಯವಾಗಿಯೇ ಪಾಲ್ಗೊಳ್ಳುತ್ತಾ ಬಂದಿರುವ ಗೀತಾ ಶಿವರಾಜ್ ಕುಮಾರ್ ಈಗ ಕಾಂಗ್ರೆಸ್ ಸೇರುತ್ತಾರಾ ಎನ್ನುವುದು ಸಹಜವಾದ ಕುತೂಹಲ. ಈಗಾಗಲೇ ಮಧು ಬಂಗಾರಪ್ಪ ಮಾಧ್ಯಮದವರ ಜತೆಗೆ ಮಾತನಾಡುತ್ತಾ, ಅಕ್ಕ ಕಾಂಗ್ರೆಸ್ ಗೆ ಸೇರಿದ್ದಾರೆ ಅಂತ ತಿಳಿದುಕೊಳ್ಳಿ ಅಂತಲೂ ಹೇಳಿದ್ದಾರೆ. ಇದು ಒಂದ್ರೀತಿ ಖಚಿತವಾದ ಮಾತೇ. ಮೊದಲಿನಿಂದಲೂ ಸಹೋದರ ಮಧು ಬಂಗಾರಪ್ಪನವರ ರಾಜಕೀಯದ ಭವಿಷ್ಯಕ್ಕಾಗಿ ಶ್ರಮಿಸುತ್ತಲೇ ಬಂದಿರುವ ಗೀತಾ ಶಿವರಾಜ್ ಕುಮಾರ್ ಈಗಲೂ ಅವರ ನಿರ್ಧಾರವನ್ನು ತಳ್ಳಿ ಹಾಕುವುದಕ್ಕೆ ಸಾಧ್ಯವೇ ಇಲ್ಲ. ಮಧು ಬಂಗಾರಪ್ಪ ಅವರ ಹಾಗೆಯೇ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರುವುದನ್ನು ತಳ್ಳಿ ಹಾಕುವಂತಿಲ್ಲ.
ಸಿನಿಲಹರಿ ತಂಡದ ಬಹುದಿನಗಳ ಪ್ರಯತ್ನ ಕೊನೆಗೂ ಈಡೇರಿದೆ. ಬಹುದಿನಗಳಿಂದ ಸಿನಿಲಹರಿ ಯುಟ್ಯೂಬ್ ಚಾನೆಲ್ ಶುರು ಮಾಡಬೇಕೆನ್ನುವ ಕನಸು ಈಗ ನನಸಾಯಿತು. ಸುಸಜ್ಜಿತ ಸ್ಟುಡಿಯೋ ಮೂಲಕವೇ ಒಂದೊಳ್ಳೆಯ ಕಂಟೆಂಟ್ ಆಧರಿತ ಯೂಟ್ಯೂಬ್ ಚಾನೆಲ್ ಮಾಡಲು ಹೊರಟ ನಮ್ಮ ಪ್ರಯತ್ನಕ್ಕೆ ಲವ್ಲೀ ಸ್ಟಾರ್ ಪ್ರೇಮ್, ಕಂಚಿನ ಕಂಠದ ನಟ ವಸಿಷ್ಠ ಸಿಂಹ, “ದಿಯಾʼ ಚಿತ್ರದ ಖ್ಯಾತಿಯ ನಟಿ ಖುಷಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಹಿರಿಯ ಜರ್ನಲಿಸ್ಟ್ ಅನಂತ್ ಚಿನಿವಾರ್ ಚಾಲನೆ ಕೊಟ್ಟರು.ಬುಧವಾರ ಸಂಜೆ ಬೆಂಗಳೂರಿನ ಮಲ್ಲೇಶ್ವರಂ 18 ನೇ ಕ್ರಾಸಿನಲ್ಲಿರುವ ರೇಣುಕಾಂಬಾ ಡಿಜಿಟಲ್ ಸ್ಟುಡಿಯೋದ ಮಿನಿ ಚಿತ್ರಮಂದಿರದಲ್ಲಿಯೇ ಯೂಟ್ಯೂಬ್ ಚಾನೆಲ್ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ ನಡೆಯಿತು.
ಸಿನಿಲಹರಿ ಬಹುದೊಡ್ಡ ಸಂಸ್ಥೆಯಾಗಲಿ ಯೂಟ್ಯೂಬ್ ಚಾನೆಲ್ ನ ಸದಾಶಯ ಹಾಗೂ ಅದಕ್ಕೆ ʼಸಿನಿಲಹರಿʼ ಸಂಸ್ಥೆ ಹೊಂದಿರುವ ಸುಸಜ್ಜಿತ ಸ್ಟುಡಿಯೋ ಕುರಿತ ಪ್ರೊಪೈಲ್ ವಿಡಿಯೋ ಹಾಗೂ ಪ್ರೋಮೋ ಪ್ರದರ್ಶನದ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಚಿತ್ರೋತ್ಸವ ಸಿದ್ಧತಾ ಕಾರ್ಯಕ್ರಮಗಳ ಒತ್ತಡದ ನಡುವೆಯೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಹೋರಾಟದ ಹಿನ್ನೆಲೆಯಿಂದಲೇ ಬಂದ ಇಬ್ಬರು ಗೆಳೆಯರ ಪ್ರಯತ್ನ ಫಲಿಸಲಿ. ಸಿನಿಲಹರಿ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದರು. ಹಾಗೆಯೇ ಮಾತನಾಡುತ್ತಾ ಡಿಜಿಟಲ್ ಮಾಧ್ಯಮಕ್ಕೂ ಈಗ ಸೆನ್ಸಾರ್ ಅಗತ್ಯವಿದೆ. ಈಗ ಡಿಜಿಟಲ್ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗುವ ಸುದ್ದಿ ನೋಡಿದರೆ ವಿಚಿತ್ರ ಎನಿಸುತ್ತಿದೆ. ಇದೆಲ್ಲ ಒಂದು ಮಿತಿಯೊಳಗಡೆ ಬರಬೇಕಾದರೆ ಸೆನ್ಸಾರ್ ಮಾದರಿಯಲ್ಲಿ ನೀತಿ- ನಿಯಮಗಳಿಗೆ ಒಳಪಡಬೇಕು ಎಂದರು.
ಸ್ಟುಡಿಯೋ ಉದ್ಘಾಟನೆಯ ನಂತರ ಸಿನಿ ಲಹರಿ ಪ್ರೋಮೋ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದ ನಟ ನೆನಪಿರಲಿ ಪ್ರೇಮ್, ಸಿನಿ ಲಹರಿಯ ವಿಜಯ್ ಭರಮಸಾಗರ ಹಾಗೂ ದೇಶಾದ್ರಿ ಹೊಸ್ಮನೆ ಇಬ್ಬರೂ ನನ್ನ ಗೆಳೆಯರು. ತುಂಬಾ ವರ್ಷಗಳಿಂದ ನಾನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಅವರಿಗೆ ಬರವಣಿಗೆಯ ದೊಡ್ಡ ಶಕ್ತಿಯಿದೆ. ಅವರಿಗೆ ಗೆಲುವು ಸಿಗುವುದರಲ್ಲಿ ಅನುಮಾನವೇ ಇಲ್ಲʼಎಂದರು.
ನಟ ವಸಿಷ್ಠ ಸಿಂಹ ಮಾತನಾಡಿ, ನಾನು ನಟ ಅಂತ ಗುರುತಿಸಕೊಳ್ಳುವ ಮುನ್ನವೇ ನನ್ನ ಬಗ್ಗೆ ಬರೆದು ಕಲಾವಿದನಾಗಿ ಗುರುತಿಸಿಕೊಳ್ಳಲು ಕಾರಣರಾದ ಗೆಳೆಯರಿವರು. ಒಳ್ಳೆಯ ಮನಸು ಹೊಂದಿದವರು. ಅಂತಹ ಮನಸು ಇದ್ದಾಗ ಗೆಲ್ಲವುದೇನು ಕಷ್ಟ ಆಗದು ಅಂತ ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಅನಂತ್ ಚಿನಿವಾರ್ ಮಾತನಾಡುತ್ತಾ, ಇವತ್ತಿನ ಡಿಜಿಟಲ್ ಮಾಧ್ಯಮದ ಸವಾಲುಗಳ ಬಗ್ಗೆ ವಿವರಿಸಿದರು. ನಟಿ ಖುಷಿ ಮಾತನಾಡಿ, ಸಿನಿ ಲಹರಿಗೆ ಶುಭಾಶಯ ಹೇಳಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಲಿಂಗದೇವರು ಹಾಗೂ ಹಿರಿಯ ಪತ್ರಕರ್ತ ಮೈಸೂರು ಹರೀಶ್ ಮಾತನಾಡಿ, ಸಿನಿ ಲಹರಿ ಜನರ ಲಹರಿ ಆಗಲಿ ಎಂದರು.
ಖ್ಯಾತ ನಟ,ನಟಿಯರು ಭಾಗಿ ನಟರಾದ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ, ಲಿಖಿತ್ ಸೂರ್ಯ, ಕುರಿ ರಂಗ, ನಿರಂಜನ್ ದಾವಣಗೆರೆ, ನಿರ್ಮಾಪಕರಾದ ನಾಗೇಶ್ ಕುಮಾರ್, ಚೇತನ್ ರಾಜ್, ನಿರ್ದೇಶಕರಾದ ಕಿರಣ್ ಕುಮಾರ್, ರಾಜು ಪಾವಗಡ, ಮಂಜುನಾಥ್ ಸಂಗೀತ ನಿರ್ದೇಶಕ ವೀರ್ ಸಮರ್ಥ್, ನಟಿ ವಿರಾನಿಕಾ ಶೆಟ್ಟಿ, ಲೇಖಕ ಶಿವಕುಮಾರ ಮಾವಲಿ, ದಿ ಫೈಲ್ ಪೊರ್ಟಲ್ ನ ಮುಖ್ಯಸ್ಥ ಮಹಾಂತೇಶ್ ಭದ್ರಾವತಿ, ಪತ್ರಕರ್ತ ಶ್ರೀನಾಥ್ ಬೆಳಚುಕನಹಳ್ಳಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ರಾಜ್ಯ ಅಧಿಕ ಕಾರ್ಯದರ್ಶಿ, ಹುಬ್ಬಳ್ಳಿ ಕಂಪನಿಯ ಕೆಪಿಟಿಸಿಲ್ ಹಿರಿಯ ಉಪಾಧ್ಯಕ್ಷ ಎಸ್ ಎಸ್ ಬಿರಾದಾರ್, ನಿರ್ದೇಶಕ ವಿರೇನ್ ಸಾಗರ್, ನಟ ಮಧು, ಪತ್ರಕರ್ತರಾದ ರಾಘವೇಂದ್ರ ತೊಗರ್ಸಿ, ಪ್ರಸಾದ್, ನಿರ್ದೇಶಕ ಮಂಜುನಂದನ್, ಹಾಜರಿದ್ದು, ಶುಭ ಹಾರೈಸಿದರು.
ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಜೋಡಿಯ ಮತ್ತೊಂದು ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಸಿನಿಮಾ ಪ್ರೇಕ್ಷಕರಲ್ಲಿದ್ದ ಭಾರೀ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಇದು ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್ ಮೂರನೇಸಿನಿಮಾ. ಹಾಗೆಯೇ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಅಭಿನಯದ 125ನೇ ಚಿತ್ರ.
‘ ಭಜರಂಗಿ 2 ‘ ಬೆನ್ನಲೇ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ಮೂಲಕ ಮತ್ತೊಂದು ಚಿತ್ರ ಶುರುವಾಗುತ್ತಿದ್ದು, ಅದಕ್ಕೆ ಶಿವರಾಜ್ ಕುಮಾರ್ ಅವರೇ ನಿರ್ಮಾಪಕರು ಎನ್ನುವ ಸುದ್ದಿ ತುಂಬಾ ದಿನಗಳ ಹಿಂದೆಯೇ ಬಹಿರಂಗಗೊಂಡಿತ್ತು. ಹಾಗೆಯೇ ಒಂದಷ್ಟು ದಿನಗಳಾದ ನಂತರ ಅ ಚಿತ್ರ ಸ್ಕ್ರಿಪ್ಟ್ ಪೂಜೆ ಕೂಡ ನೆರವೇರಿತ್ತು.ಅಲ್ಲಿಂದೀಗ ನಿರ್ದೇಶಕ ಎ. ಹರ್ಷ ಮಹಾ ಶಿವರಾತ್ರಿ ಹಬ್ಬಕ್ಕೆ ಆ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಲಾಂಚ್ ಮಾಡುವ ಮೂಲಕ ಸ್ಯಾಂಡಲ್ ವುಡ್ ದೊಡ್ಡ ಕ್ರೇಜ್ ಹುಟ್ಟು ಹಾಕಿದ್ದಾರೆ.
ವೇದ ಚಿತ್ರದ ಫಸ್ಟ್ ಲುಕ್ ನೋಡಿದರೆ ಇದು ಭಜರಂಗಿಯ ಇನ್ನೊಂದು ಅವತಾರ ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ. ಶಿವರಾಜ್ ಕುಮಾರ್ ಅವರ ಮತ್ತೊಂದು ಶಿವನ ಅವತಾರ ಇಲ್ಲೂಇರಲಿದೆ ಅಂತಂದುಕೊಳ್ಳಬಹುದು.ಗಡ್ಡದಾರಿ ಶಿವರಾಜ್ ಕುಮಾರ್ ಶಿವನ ಮತ್ತೊಂದು ಅವತಾರದಂತೆಯೇ ಕಾಣುತ್ತಾರೆ. ಹಾಗಂತ ಇದು ಭಜರಂಗಿ ೩ ಅಲ್ಲ. ಇದೊಂದು ಪ್ರೆಶ್ ಕತೆ. ಶಿವರಾಜ್ ಕುಮಾರ್ ಅವರ ಸಿನಿಜರ್ನಿಯಲ್ಲೇ ಹೊಸ ಶೆಡ್ಸ್ಇರುವಂತಹ ಪಾತ್ರವಿದೆ ಎನ್ನುತ್ತಾರೆ ನಿರ್ದೇಶಕ ಹರ್ಷ.
ಸದ್ಯಕ್ಕೆ ಸಿನಿಮಾದ ಮುಖ್ಯ ಆಕರ್ಷಣೆ ಶಿವರಾಜ್ ಕುಮಾರ್ ಅವರ ಪಾತ್ರ.ಅದರ ಫಸ್ಟ್ ಲುಕ್ ಈಗ ರಿವೀಲ್ ಆಗಿದೆ. ಉಳಿದಂತೆ ಯಾರೆಲ್ಲ ಇರಲಿದ್ದಾರೆಂಬುದು ಇನ್ನು ನಿಗೂಢ. ಅದರಾಚೆ, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಸ್ವಾಮಿ ಜಿ. ಗೌಡ ಕ್ಯಾಮೆರಾ, ರಘು ನೀಡುವಳ್ಳಿ ಸಂಭಾಷಣೆಯಿದೆ. ವಿಶೇಷ ಅಂದ್ರೆ ಗೀತಾ ಶಿವರಾಜ್ ಕುಮಾರ್ ಈ ಚಿತ್ರದ ನಿರ್ಮಾಪಕರು.
ಕನ್ನಡ ಚಿತ್ರರಂಗ ಈ ದಿನಕ್ಕಾಗಿ ಕಾಯುತ್ತಿತ್ತು. ಲಾಕ್ ಡೌನ್ ನಂತರ ಚಿತ್ರರಂಗಕ್ಕೆ ಮತ್ತೆ ಚೇತರಿಕೆ ಬರಬೇಕಾದರೆ ದರ್ಶನ್ ಅಭಿನಯದ ʼರಾಬರ್ಟ್ʼ ತೆರೆಗೆ ಬರಲೇಬೇಕು ಅಂತ ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗ ಕೂಡ ಬಯಸಿತ್ತು. ಆ ಕ್ಷಣ ಈಗ ಬಂದೇ ಬಿಟ್ಟಿದೆ. ಕರ್ನಾಟಕದಲ್ಲಿ ದರ್ಶನ್ ಅಭಿಮಾನಿಗಳ ಅಬ್ಬರಕ್ಕೆ ಕೊರೋನಾ ಭಯ ಕಿತ್ತುಕೊಂಡು ಹಾರುವುದು ಗ್ಯಾರಂಟಿ ಆಗಿದೆ. ಲಾಕ್ ಡೌನ್ ನಂತರ ಮಾತ್ರವಲ್ಲ ಇದುವರೆಗಿನ ಚಿತ್ರ ರಂಗದ ದಾಖಲೆಯೇ ಮುರಿದು ಹೋಗುವ ಹಾಗೆ ದರ್ಶನ್ ಅಭಿನಯದ ʼ ರಾಬರ್ಟ್ʼ ಚಿತ್ರ ನಾಳೆ (ಮಾ.11) ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.
ರಾಜ್ಯದಲ್ಲಿ ಒಟ್ಟು ಈ ಚಿತ್ರ 656 ಚಿತ್ರ ಮಂದಿರಗಳಲ್ಲಿ ಗ್ರಾಂಡ್ ಎಂಟ್ರಿ ಪಡೆಯುತ್ತಿದೆ. ಇನ್ನೊಂದು ದಾಖಲೆ ಎನ್ನುವ ಹಾಗೆ ನಾಳೆ ಬೆಳಗಿನ ಜಾವದಿಂದಲೇ ಸರಿ ಸುಮಾರು 50 ಕ್ಕೂ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿರುವುದು ವಿಶೇಷ ಅಂತ ಚಿತ್ರ ತಂಡ ಹೇಳಿದೆ.
ಕೇರಳ, ದೆಹಲಿ, ತಮಿಳುನಾಡು ಸೇರಿದಂತೆ ಪ್ರಮುಖ ರಾಜ್ಯಗಳಲ್ಲೂ ʼರಾಬರ್ಟ್ʼ ದರ್ಶನ ಆಗಲಿದೆಯಂತೆ. ಈಗಾಗಲೇ ರಾಬರ್ಟ್ ಪ್ರೀ ರಿಲೀಸ್ ಮಾರ್ಕೆಟ್ ನಲ್ಲೂ ದಾಖಲೆ ಸೃಷ್ಟಿಸಿದೆ. ಟಿವಿ ರೈಟ್ಸ್ ಹಾಗೂ ಡಿಜಿಟಲ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರ ತಂಡದ ಮೂಲಗಳ ಪ್ರಕಾರ 100 ಕೋಟಿಗೆ ರಾಬರ್ಟ್ ಡಿಜಿಟಲ್ ರೈಟ್ಸ್ ಸೇಲ್ ಆಗಿದೆಯಂತೆ. ಹಾಗಾಗಿ ರಿಲೀಸ್ ಮುಂಚಿನಾ ಬಿಸಿನೆಸ್ ವಿಚಾರದಲ್ಲೂ ರಾಬರ್ಟ್ ದೊಡ್ಡ ಸುದ್ದಿಯಲ್ಲಿದೆ. ಅದರ ಜತೆಗೀಗ ಮೊದಲ ದಿನದ ಬಿಡುಗಡೆಯಲ್ಲೂ ʼರಾಬರ್ಟ್ʼ ಹೊಸ ದಾಖಲೆ ಸೃಷ್ಟಿಸಿದೆ.
ಚಿತ್ರ ತಂಡದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಇನ್ನೊಂದು ವಿಶೇಷ ಅಂದ್ರೆ “ಪೊಗರುʼ ಹಾಗೂ “ಹೀರೋʼ ಸಿನಿಮಾ ಪ್ರದರ್ಶನವಾಗುತ್ತಿದ್ದ ಹಲವು ಚಿತ್ರಮಂದಿರಗಳು “ರಾಬರ್ಟ್ʼ ಪಾಲಾಗಿವೆ. ಹಾಗೆಯೇ ಮೊದಲ ದಿನವೇ ಅತಿ ಹೆಚ್ಚು ಶೋ ಕಾಣುತ್ತಿದೆ ʼರಾಬರ್ಟ್ʼ ಚಿತ್ರ. ಚಿತ್ರ ತಂಡದ ಮೂಲಗಳ ಪ್ರಕಾರ 100 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿದೆ. ಮೊದಲ ದಿನ ಎಲ್ಲ ಚಿತ್ರಮಂದಿರಗಳಲ್ಲಿ ಸೇರಿ 2786 ಶೋಗಳು ರಾಬರ್ಟ್ ಸಿನಿಮಾ ಪ್ರದರ್ಶನ ಕಾಣಲಿದೆ. ಇದು ಸ್ಯಾಂಡಲ್‌ವುಡ್ ಪಾಲಿಗೆ ನೂತನ ದಾಖಲೆ.
ಇದು ನಿಜಕ್ಕೂ ಸಂಕಷ್ಟದ ಕಾಲ. ಏನೇ ಸಾಹಸಗಳು ಕೂಡ ಸವಾಲೇ. ಅಂತಹದ್ದೆ ಸವಾಲಿನ ಸಂದರ್ಭದಲ್ಲೇ ʼ ಸಿನಿಲಹರಿʼ ಸಾಹಸಗಳು ಮುಂದುವರೆದಿವೆ ಅನ್ನೋದು ನಮ್ಮ ಪಾಲಿಗೆ ಹೆಮ್ಮೆ. ʼ ಸಿನಿಲಹರಿʼ ವೆಬ್ ಸೈಟ್ ಶುರು ವಾಗಿದ್ದೇ ನಮ್ಮ ಪಾಲಿಗೆ ಒಂದು ದೊಡ್ಡ ಸಾಹಸ. ಕೋರೋನಾ ನಂತರದ ಲೌಕ್ ಡೌನ್ ದಿನಗಳು ಆಗಷ್ಟೇ ಮುಗಿದಿದ್ದವು. ಹಾಗಂತ ಜನರಿಗೆ ಕೊರೋನಾ ಆತಂಕ ದೂರವಾಗಿರಲಿಲ್ಲ. ಆ ಹೊತ್ತಿಗೆ ನಮಗೂ ಕೈಯಲ್ಲಿ ಕೆಲಸ ಇರಲಿಲ್ಲ. ಬದುಕಿಗೆ ಒಂದು ಕೆಲಸ ಅಂತ ಅನಿವಾರ್ಯವೇ ಇತ್ತು. ಆಗ ನಮಗೆ ಹೊಳೆದಿದ್ದು ವೆಬ್ ಸೈಟ್ ಶುರು ಮಾಡುವ ಆಲೋಚನೆ. ಅದೃಷ್ಟ ಎನ್ನುವ ಹಾಗೆ ಅದಕ್ಕೆ ದೊಡ್ಡ ಬೆಂಬಲ ನೀಡಿ, ಚಾಲನೆ ಕೊಟ್ಟಿದ್ದು ಲಹರಿ ರೆಕಾರ್ಡಿಂಗ್ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಅವರು. ” ಸಿನಿ ಲಹರಿʼ ಪ್ರತಿ ಹೆಜ್ಜೆಗಳಲ್ಲಿ ಅವರನ್ನು ನಾವು ಮರೆಯೋದಿಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ , ಕಂಗೆಟ್ಟಿದ್ದ ನಮಗೆ ಒಂದು ದಾರಿ ಸಿಕ್ಕಿದ್ದೇ ಅವರ ಮೂಲಕ.
ಯೋಗಾ ಯೋಗ ಅದಕ್ಕೆ ಹಲವರ ಬೆಂಬಲವೂ ಸಿಕ್ಕಿತು. ಅದು ಶುರುವಾಗಿ ಇಲ್ಲಿಗೆ ನಾಲ್ಕು ತಿಂಗಳ ಮೇಲಾಯಿತು. ಈಗ ಇನ್ನೊಂದು ಹೆಜ್ಜೆ. ʼ ಸಿನಿ ಲಹರಿʼ ಯುಟ್ಯೂಬ್ ಚಾನೆಲ್. ಹಾಗಂತ ಆರ್ಥಿಕವಾಗಿ ಏನೋ ಮ್ಯಾಜಿಕ್ ನಡೆದು ಹೋಯಿತು ಅಂತೇನಿಲ್ಲ. ಹಣಕಾಸಿನ ವಿಚಾರದಲ್ಲಿ ಈಗಲೂ ಸಂಕಷ್ಟವೇ. ಕೊರೋನಾ ಕಾರಣಕ್ಕೆ ಇಡೀ ಚಿತ್ರರಂಗ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಅದು ಚೇತರಿಕೆ ಕಾಣಲು ಇನ್ನಷ್ಟು ಸಮಯ ಬೇಕಿದೆ. ಇಂತಹ ದಿನಗಳಲ್ಲಿ ಸಿನಿಮಾ ರಂಗ ನಂಬಿಕೊಂಡು ಏನೇನೋ ಮಾಡಲು ಹೊರಡುತ್ತೇವೆಂದರೆ ಅದರ ಪರಿಸ್ಥಿತಿ ಹೇಗೆ ಅಂತ ಬಿಡಿಸಿ ಹೇಳಬೇಕಿಲ್ಲ. ಅದೇ ಪರಿಸ್ಥಿತಿಯಲ್ಲೆ ನಾವೂ ಇದ್ದೇವೆ. ಅದರಾಚೆ, ಅತೀ ಕಡಿಮೆ ಅವದಿಯಲ್ಲಿ’ ಸಿನಿ ಲಹರಿ ”ಗೆ ಚಿತ್ರರಂಗದಿಂದ ದೊಡ್ಡ ಮನೋಬೆಂಬಲ ಸಿಕ್ಕಿದೆ. ಸಿನಿಮಾಕ್ಕಂತಲೇ ಇಂತಹದೊಂದು ವೆಬ್ ಸೈಟ್ ಬೇಕಿತ್ತು, ಅದನ್ನು ನೀವಿಬ್ಬರು ಮಾಡಿದ್ದೀರಿ, ಅದನ್ನು ಇನ್ನಷ್ಟು, ಮತ್ತಷ್ಟು ಅಂದವಾಗಿ, ಚೆಂದವಾಗಿ ನಡೆಸಿಕೊಂಡು ಹೋಗುವ ಸಾಮಾರ್ಥ್ಯ ನಿಮಗಿದೆ, ಮಾಡಿ ಅಂದರು. ಹಲವು ನಟ- ನಟಿಯರು ಕಚೇರಿಗೆ ನೇರವಾಗಿ ಭೇಟಿ ಕೊಟ್ಟು, ಮಾನಸಿಕ ಸ್ಥೈರ್ಯ ಕೊಟ್ಟರು. ಅದೇ, ಹೊತ್ತಿಗೆ ನಮ್ಮ ಸಾಹಸಕ್ಕೆ ಆರ್ಥಿಕ ಸಹಾಯದ ಮೂಲಕ ‘ಸಿನಿಲಹರಿ’ ಗೆ ದೊಡ್ಡ ಬೆಂಬಲವಾಗಿ ನಿಂತಿದ್ದು ಉದ್ಯಮಿ ಪಿ. ಕೃಷ್ಣ. ಅವರಿವತ್ತು ಸಿನಿ ಲಹರಿ ಸಿಇಒ.
ಹಾಗೆ ನೋಡಿದರೆ, ಸಿನಿಲಹರಿ ಯುಟ್ಯೂಬ್ ಚಾನೆಲ್ ಶುರುವಿಗೆ ಅವರೇ ಕಾರಣ. ಅವರಿಂದಲೇ ಯುಟ್ಯೂಬ್ ಚಾನೆಲ್ ಆರಂಭದ ಕನಸುಗಳು ಗರಿಗೆದರಿಕೊಂಡವು. ಮುಂದೆ ಅವರೇ ಆಸಕ್ತಿ ವಹಿಸಿ, ಯುಟ್ಯೂಬ್ ಚಾನೆಲ್ ಆರಂಭದ ಪ್ರಕ್ರಿಯೆಗಳು ಶುರುವಾದವು. ಹೆಚ್ಚು ಕಡಿಮೆ ಒಂದು ತಿಂಗಳ ಸಿದ್ಧತೆಯಲ್ಲಿ ವ್ಯವಸ್ಥಿತ ಸ್ಟುಡಿಯೋ, ಮೂರ್ನಾಲ್ಕು ಹೈಟೆಕ್ ತಂತ್ರಜ್ಞಾನದ ಕ್ಯಾಮೆರಾ, ನುರಿತ ಸಿಬ್ಬಂದಿಯೊಂದಿಗೆ ಈಗ ಯುಟ್ಯೂಬ್ ಚಾನೆಲ್ ಸಿನಿಮಾ ರಂಗದ ಸೇವೆಗೆ ರೆಡಿಯಾಗಿದೆ. ಇಂದು( ಮಾ.10) ಜನಪ್ರಿಯ ಸಿನಿ ತಾರೆಯರು ಹಾಗೂ ಹಿತೈಷಿಗಳ ಮೂಲಕ ಚಿತ್ರರಂಗಕ್ಕೆ ಅರ್ಪಣೆ ಆಗುತ್ತಿರುವುದು ಸಿನಿ ಲಹರಿ ತಂಡದ ಹೆಮ್ಮೆ.
ಚಿಂದೋಡಿ ಬಂಗಾರೇಶ್ ನಿರ್ದೇಶನದಲ್ಲಿ ತಯಾರಾಗಿದ್ದ ‘ಗಾನಯೋಗಿ ಪಂಚಾಕ್ಷರ ಗವಾಯಿ’ ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಈ ಸಿನಿಮಾದ ಅತ್ಯುತ್ತಮ ಸಂಗೀತಕ್ಕೆ ಹಂಸಲೇಖ ಮತ್ತು ಗಾಯನಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಆನಂತರ ‘ದಾನಮ್ಮದೇವಿ’ ಚಿತ್ರದೊಂದಿಗೆ ಮತ್ತೊಮ್ಮೆ ಚಿಂದೋಡಿ ಮತ್ತು ಹಂಸಲೇಖ ಸಂಗೀತದ ಮೋಡಿ ಮಾಡಿದ್ದರು. ಈಗ ‘ಹಾನಗಲ್ ಶ್ರೀ ಕುಮಾರೇಶ’ ಚಿತ್ರದಲ್ಲಿ ಮತ್ತೆ ಸಂಗೀತ ಸುಧೆ ಹರಿಸಲಿದ್ದಾರೆ. ಈಗಾಗಲೇ ಸಂಗೀತದ ಮಟ್ಟುಗಳು ತಯಾರಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಬಗ್ಗೆ ಇತರೆ ಮಾಹಿತಿ ನೀಡಲಿದ್ದಾರೆ ಚಿಂದೋಡಿ ಬಂಗಾರೇಶ್.
ಹಾನಗಲ್ ಕುಮಾರೇಶರು ಸಂಗೀತಗಾರ ಪಂಚಾಕ್ಷರ ಗವಾಯಿ ಅವರ ಗುರುಗಳು. “ಪಂಚಾಕ್ಷರ ಗವಾಯಿಗಳ ಚಿತ್ರ ಮಾಡುವಾಗ ಕುಮಾರಸ್ವಾಮಿಗಳ ಬಗ್ಗೆ ಓದಿದ್ದೆ. ಈಗ ಅವರದೇ ಜೀವನ ಚರಿತ್ರೆ ಮಾಡುವ ಯೋಗ ಬಂದಿದ್ದು ಪುಣ್ಯವೆಂದೇ ಭಾವಿಸುತ್ತೇನೆ. ಈ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ, ಸ್ವಾಮೀಜಿ, ಮಠಾದೀಶರನ್ನು ಸಂಪರ್ಕಿಸಿದ್ದೇನೆ. ಈಗ ಅಗಡೀಶ ಪ್ರೊಡಕ್ಷನ್ಸ್ ಅಡಿ ಸಿನಿಮಾ ಸೆಟ್ಟೇರುತ್ತಿದೆ” ಎನ್ನುತ್ತಾರೆ ನಿರ್ದೇಶಕ ಚಿಂದೋಡಿ ಬಂಗಾರೇಶ್.
‘ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರದಲ್ಲಿ ಲೋಕೇಶ್
ಹಂಸಲೇಖ ಅವರ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಹಾಡುಗಳು ಸಿದ್ಧವಾಗುತ್ತಿವೆ. ಭಕ್ತಿಪ್ರಧಾನ ಹಾಡುಗಳನ್ನು ಅವರು ಸೊಗಸಾಗಿ ಸಂಯೋಜಿಸುತ್ತಾರೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ‘ಹಾನಗಲ್ ಕುಮಾರೇಶ’ ಚಿತ್ರಕ್ಕಾಗಿ ಭೀಮಕವಿ ವಿರಚಿತ ಬಸವ ಪುರಾಣ 3500 ಸಾಲುಗಳ ಭಾಮಿನಿ ಷಟ್ಪದಿಯಲ್ಲಿರುವ ಪುರಾಣ ಆಧರಿಸಿ ಎಂಟು ನಿಮಿಷಗಳ ಹಾಡೊಂದನ್ನು ಹಂಸಲೇಖ ಸಂಯೋಜಿಸಲಿದ್ದಾರೆ. ಖಂಡಿತವಾಗಿ ಕನ್ನಡಕ್ಕೆ ಇದೊಂದು ಅತ್ಯುತ್ತಮ ಸಂಗೀತಮಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಚಿಂದೋಡಿ. ಕಲಾವಿದರ ಆಯ್ಕೆ ನಡೆದಿದ್ದು, ಜುಲೈನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಜಗ ಮೆಚ್ಚಿದ ಸುಂದರಿ ಭದ್ರಾವತಿಯ ಚೆಲುವೆ ಆಶಾಭಟ್ ದೊಡ್ಡದೊಂದು ತವಕದಲ್ಲಿದ್ದಾರೆ. “ರಾಬರ್ಟ್’ ಚಿತ್ರದ ಮೂಲಕ ಇದೇ ಮೊದಲು ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಮಾರ್ಚ್ 11 ಕ್ಕೆ ರಾಬರ್ಟ್ ಭರ್ಜರಿ ಆಗಿ ಬಿಡುಗಡೆ ಆಗುತ್ತಿದೆ. ಮೊದಲ ಚಿತ್ರವಾದರೂ ದರ್ಶನ್ ಅವರಂತಹ ಸ್ಟಾರ್ ಜತೆಗೆ ಇದೇ ಮೊದಲು ತೆರೆ ಹಂಚಿಕೊಂಡಿದ್ದು ಮಾತ್ರವಲ್ಲ, ಮೊದಲ ಚಿತ್ರದಲ್ಲೇ ಕನ್ನಡದ ಜತೆಗೆ ತೆಲುಗಿಗೂ ಎಂಟ್ರಿ ಆಗುತ್ತಿದ್ದಾರೆ ಮಾಡೆಲ್ ಆಶಾ ಭಟ್. ಫಸ್ಟ್ ಟೈಮ್ ನಟಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿರುವ ಆಶಾ ಭಟ್ “ರಾಬರ್ಟ್ʼ ಕುರಿತು ಹೇಳುವುದಿಷ್ಟು….
ಕೊನೆಗೂ ನೀವು ತೆರೆ ಕಾಣಸಿಕೊಳ್ಳುವ ಕ್ಷಣ ಬಂದೇ ಬಿಟ್ಟಿದೆ, ಹೇಗನಿಸುತ್ತೆ ?
ಹೌದು, ಬಾಳಾ ಖುಷಿ ಆಗ್ತಿದೆ. ಈ ದಿನಕ್ಕಾಗಿ ನಾವೆಲ್ಲ ಕಾಯ್ತ ಇದ್ದೇವು. ಅಂತೂ ಆ ದಿನ ಬಂದೇ ಬಿಟ್ಟಿದೆ. ನಂಗಂತೂ ತುಂಬಾ ಎಕ್ಸೈಟ್ ಆಗ್ತಿದೆ. ಇಷ್ಟು ದೊಡ್ಡ ಜನರ ಪ್ರೀತಿ, ನಿರೀಕ್ಷೆ, ಅಭಿಮಾನ ಕಂಡು ನಾನೇ ನರ್ವಸ್ ಆಗಿಬಿಟ್ಟಿದ್ದೇನೆ. ಆದ್ರೂ ತುಂಬಾ ಹೋಪ್ ಇದೆ. ಈ ಸಿನಿಮಾ ದರ್ಶನ್ ಅವರ ಫ್ಯಾನ್ಸಿಗೆ, ಪ್ರೇಕ್ಷಕರಿಗೆ ಭರಪೂರ ರಂಜಿಸುತ್ತದೆ ಎನ್ನುವ ವಿಶ್ವಾಸ, ನಂಬಿಕೆ ನಂಗಂತೂ ಬಲವಾಗಿದೆ
ಕನ್ನಡದವರೇ ಆದ ನಿಮಗೆ ಇದು ಮೊದಲ ಸಿನಿಮಾ, ಈ ಬಗ್ಗೆ ಏನ್ ಹೇಳ್ತೀರಾ?
ಒಹೋ.. ನಿಜಕ್ಕೂ ಭಯ ಆಗ್ತಿದೆ. ಹಾಗೆಯೇ ಬಾಳಾ ಖುಷಿಯೂ ಇದೆ. ದರ್ಶನ್ ಅವರಂತಹ ಸ್ಟಾರ್ ನಟರ ಜತೆಗೆ ಅಭಿನಯಿಸುವ ಅವಕಾಶ ಸಿಗಬಹುದು ಅಂತ ನಾನು ಕನಸಲ್ಲೂ ಕಂಡಿರಲಿಲ್ಲ. ಅದೃಷ್ಟ ಎನ್ನುವಂತೆ ರಾಬರ್ಟ್ ಸಿನಿಮಾದ ಅವಕಾಶ ನನ್ನನ್ನೇ ಹುಡುಕಿಕೊಂಡು ಬಂತು. ನಿರ್ದೇಶಕರಾದ ತರುಣ್ ಸುಧೀರ್ ಸರ್, ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದು ಅದೃಷ್ಟವೇ ಅಲ್ಲದೆ ಇನ್ನೇನು ಅಲ್ಲ. ಮೊದಲ ಸಿನಿಮಾ ಅಂತ ನಾನೇನು ನಿರೀಕ್ಷೆ ಮಾಡಿದ್ದೇನೋ ಅದಕ್ಕಿಂತ ದುಪ್ಪಟ್ಟು, ಮೂರು ಪಟ್ಟು ಈ ಸಿನಿಮಾದಲ್ಲಿ ಅಭಿನಯಿಸಿದ ಖುಷಿ ಇದೆ.
ಮಾಡೆಲಿಂಗ್‌ನಲ್ಲಿ ನೀವು ಬ್ಯುಸಿ ಆಗಿ ಮುಂಬೈನಲ್ಲಿದ್ದಾಗ ಕನ್ನಡದ ಅವಕಾಶಗಳ ಬಗ್ಗೆ ಯೋಚಿಸಿದ್ರಾ?
ಖಂಡಿತಾ ಹೌದು. ನಾನು ಕನ್ನಡತಿ. ಇಲ್ಲಿ ನನ್ನನ್ನು ನಾನು ಗುರುತಿಸಿಕೊಂಡಾಗಲೇ ಅದಕ್ಕೊಂದು ಗೌರವ. ಹಾಗೆಯೇ ನನಗೂ ಖುಷಿ. ಅದಕ್ಕಾಗಿ ನಾನು ಕನ್ನಡದಲ್ಲಿನ ಸಿನಿಮಾ ಅವಕಾಶಗಳನ್ನು ಎದುರು ನೋಡುತ್ತಿದ್ದೆ. ಆದ್ರೆ ಒಳ್ಳೆಯ ಅವಕಾಶಗಳು ಸಿಗಲಿ ಅಂತ ಕಾಯುತ್ತಿದ್ದಾಗ, ಅದೃಷ್ಟವೇ ಅಂತ ಸಿಕ್ಕಿದ್ದು ರಾಬರ್ಟ್. ತರುಣ್ ಸರ್ ಫಸ್ಟ್ ಟೈಮ್ ಭೇಟಿ ಮಾಡಿ ಕಥೆ ಹೇಳಿದಾಗ ನಾನು ಮರು ಮಾತನಾಡದೆ ಉಪ್ಪಿಕೊಂಡಿದ್ದಕ್ಕೆ ಎರಡು ಕಾರಣ ಇದ್ದವು. ದೊಡ್ಡ ಪ್ರೊಡಕ್ಷನ್ ಹೌಸ್ ಅನ್ನೋದು ಒಂದು ಕಾರಣವಾದರೆ, ದರ್ಶನ್ ಹಾಗೂ ತರುಣ್ ಸುಧೀರ್ ಜೋಡಿಯ ಸಿನಿಮಾ ಅನ್ನೋದು ಮತ್ತೊಂದು ಕಾರಣ.
ʼರಾಬರ್ಟ್ʼ ಅದೃಷ್ಟ ಅಂತಿದ್ದೀರಿ, ಮತ್ತೊಂದು ಅದೃಷ್ಟ ಎನ್ನುವ ಹಾಗೆ ಇದು ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ, ಈ ಬಗ್ಗೆ ಹೇಳಿ ?
ಇದೊಂಥರ ನಂಗೆ ಡಬಲ್ ಧಮಾಕಾ. ಯಾರಿಗುಂಟು ಯಾರಿಗಿಲ್ಲ ಈ ಅವಕಾಶ ಎನ್ನುವ ಹಾಗೆ. ಆರಂಭದಲ್ಲಿ ಇದು ಕನ್ನಡದಲ್ಲಿ ಮಾತ್ರವೇ ಎನ್ನುವಂತಿತ್ತು. ಆ ನಂತರ ತೆಲುಗಿನಲ್ಲೂ ರಿಲೀಸ್ ಮಾಡೋದಿಕ್ಕೆ ಪ್ಲಾನ್ ಮಾಡಲಾಯಿತು. ನನ್ನ ಮಟ್ಟಿಗೆ ಮೊದಲು ಸಿನಿಮಾವೇ ಈ ರೀತಿ ಬಹು ಭಾಷೆಯಲ್ಲಿ ಬರುತ್ತಿರುವುದು ದೊಡ್ಡ ಖುಷಿ ತಂದಿದೆ. ಅಷ್ಟಾಗಿಯೂ ನಂಗೆ ಕನ್ನಡ ಮುಖ್ಯ. ಇಲ್ಲಿಯ ಜನರಿಗೆ ನಾನು ಇಷ್ಟ ಆಗಬೇಕು. ಅವರು ನನ್ನ ಅಭಿನಯ ಒಪ್ಪಿಕೊಳ್ಳಬೇಕು. ಆಗಲೇ ನಮ್ಮಂತಹವರ ಶ್ರಮಕ್ಕೆ ಬೆಲೆ.
ದರ್ಶನ್ ಅವರೊಂದಿಗೆ ಅಭಿನಯಿಸಿದ ಅನುಭವ ಹೇಗಿತ್ತು ?
ವಂಡರ್‌ಫುಲ್. ಅವರ ಜತೆಗೆ ಎಷ್ಟು ಸಿನಿಮಾದಲ್ಲಾದರೂ ಅಭಿನಯಿಸಬಹುದು. ಯಾಕಂದ್ರೆ, ಕ್ಯಾಮೆರಾ ಮುಂದೆ ಅಷ್ಟು ಕಂಫರ್ಟ್ ಆರ್ಟಿಸ್ಟ್ ಅವರು. ನಮಗೆ ಗೊತ್ತಿಲ್ಲದನ್ನು ಹಾಗಲ್ಲ, ಹೀಗೆ ಮಾಡಿ ಅಂತ ಅತ್ಯಂತ ತಾಳ್ಮೆಯಿಂದಲೇ ಹೇಳಿಕೊಡುತ್ತಾರೆ. ಸಿನಿಮಾ ಅಂತ ಬಂದಾಗ ನಂಗೆ ಇದೇ ಮೊದಲ ಅನುಭವವೇ ಆಗಿದ್ದರೂ, ಯಾವುದೇ ತೊಂದರೆ ಆಗಿಲ್ಲ. ಅದಕ್ಕೆ ಕಾರಣ ಚಿತ್ರ ತಂಡ. ಹಾಗೆಯೇ ಕೋ ಸ್ಟಾರ್ ದರ್ಶನ್ ಸರ್.
ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಏನ್ ಹೇಳ್ತೀರಾ?
ಅಯ್ಯೂ.. ಅವರ ಬಗ್ಗೆ ನಾವು ಮಾತನಾಡುವಷ್ಟು ದೊಡ್ಡವಳಲ್ಲ ನಾನು. ಒಂದೇ ಮಾತಿನಲ್ಲಿ ಹೇಳೋದಾದ್ರೆ, ಅವರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀತಿಯಲಿ ಜಾನಕಿ ರಾಮ.
ರಾಬರ್ಟ್ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
ಪಾತ್ರ ತುಂಬಾ ಚೆನ್ನಾಗಿದೆ. ನಂಗೆ ಇದೊಂದು ತುಂಬಾ ಡಿಫೆರೆಂಟ್. ಫಸ್ಟ್ ಟೈಮ್ ನಾನಿಲ್ಲಿ ಪರಿಚಯವಾಗುತ್ತಿರುವುದರಿಂದ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂತಹ ಪಾತ್ರ ಬೇಕೆಂದು ಕಾಯುತ್ತಿದ್ದೆ. ಅಂತಹ ಪಾತ್ರವೇ ಇಲ್ಲಿ ಸಿಕ್ಕಿದೆ. ಗ್ಲಾಮರ್, ರೊಮಾನ್ಸ್, ಪರ್ಫಾಮೆನ್ಸ್ ಹೀಗೆ ಎಲ್ಲದಕ್ಕೂ ಇಲ್ಲಿದೆ ಅವಕಾಶ. ಒಂದು ಪಾತ್ರಕ್ಕೆ ಇದಕ್ಕಿಂತ ಇನ್ನೇನು ಬೇಕು ನೀವೇ ಹೇಳಿ? ನಂಗಂತೂ ಒಂದೊಳ್ಳೆಯ ಪಾತ್ರದಲ್ಲಿ ಅಭಿನಯಿಸಿದ ಖುಷಿ ಇದೆ.
ನಿಮಗೀಗ ಸಿನಿಮಾ ಅವಕಾಶ ಹೇಗಿವೆ? ರಾಬರ್ಟ್ ನಂತರ ಯಾವ ಸಿನಿಮಾ ?
ಆ ಬಗ್ಗೆ ನಾನು ಈಗಲೇ ಏನನ್ನು ಹೇಳಲಾರೆ. ನಂಗೀಗ ರಾಬರ್ಟ್ ಸಿನಿಮಾವೇ ಮುಖ್ಯ. ಆದಾದ ಮೇಲೆ ಮುಂದಿನ ಸಿನಿಮಾದ ಬಗ್ಗೆ ಆಲೋಚನೆ. ಹಾಗಂತ ನಂಗೀಗ ಅವಕಾಶ ಬಂದಿಲ್ಲ ಅಂತಲ್ಲ, ಆ ಬಗ್ಗೆ ನಾನಿನ್ನು ತಲೆ ಕೆಡಿಸಿಕೊಂಡಿಲ್ಲ. ಅದನ್ನು ರಾಬರ್ಟ್ ತೆರೆ ಕಂಡ ನಂತರದ ದಿನಗಳಲ್ಲಿ ರಿವೀಲ್ ಮಾಡುವೆ.
ನಟಿ ಧನುಶ್ರೀ ಮೇಕಪ್ ಕಥೆ ಮಜಾವಾಗಿದೆ. ಅದರಲ್ಲೂ ಅವರು ಮೇಕಪ್ ಮಾಡ್ಕೊಂಡ್ ಸ್ನಾನಕ್ಕೆ ಹೋಗುವ ಕಥೆ ಇನ್ನೂ ಮಜಾವಾಗಿದೆ. ಹೌದು, ಬಾತ್ ರೂಂಗೆ ಹೋಗಿ ಪ್ರೆಶ್ ಆಗಿ ಬಂದು ಎಲ್ಲರೂ ಮೇಕಪ್ ಮಾಡ್ಕೊಳ್ಳೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಧನುಶ್ರೀ ಮೇಕಪ್ ಮಾಡ್ಕೊಂಡು ಸ್ನಾನಕ್ಕೆ ಹೋಗಿ ಬರ್ತಾರಂತೆ. ಇಂತಹ ಕಥೆ ನೀವೇನಾದ್ರೂ ಕೇಳಿದುಂಟಾ? ಖಂಡಿತಾ ಕೇಳಿರೋದಿಕ್ಕೆ ಸಾಧ್ಯವೇ ಇಲ್ಲ.ಬಟ್, ಧನುಶ್ರೀ ಇರೋದೇ ಹಾಗಂತ. ಅವರಿಗೆ ಅದೇ ಅಭ್ಯಾಸವಂತೆ. ಹಾಗಂತ ಬಿಗ್ ಬಾಸ್ ಮನೆಯೊಳಗಡೆ ಒಂದಷ್ಟು ಸ್ವಾರಸ್ಯಕರ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ.
‘ಸೂಪರ್ ಸಂಡೆ ಸುದೀಪ್’ ಭಾನುವಾರದ ಎಪಿಸೋಡ್ ನಲ್ಲಿ ನಟಿ ಧನುಶ್ರೀ ಅವರ ಈ ವಿಚಾರ ಬಹಿರಂಗ ಗೊಂಡಿತು. ಅದು ಬಯಲಾಗಿದ್ದು ಹಾಸ್ಯ ನಟ ಪಾವಗಡ ಮಂಜು ಮೂಲಕ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಪಾವಗಡ ಮಂಜು ಸಖತ್ ಮಜಾ ಕೊಡುತ್ತಿದ್ದಾರೆ. ಹಿಂದಿನ ಸರಣಿಯಲ್ಲಿ ಕುರಿ ಪ್ರತಾಪ್ ಇದ್ದ ಜಾಗವನ್ನೀಗ ಪಾವಗಡ ಮಂಜು ತುಂಬಿದ್ದಾರೆ. ಹಾಗೊಂದು ಸ್ಟ್ರಾಟಜಿ ಇಟ್ಕೊಂಡೆ ಅವರು ಬಿಗ್ ಬಾಸ್ ಮನೆಯಲ್ಲಿ ಆಟ ಆಡುತ್ತಿದ್ದಾರೆ. ಅವರು ಗಮನಸಿದ ಸಂಗತಿಗಳಲ್ಲಿ ನಟಿಧನುಶ್ರೀ ಮೇಕಪ್ ಕಥೆ ಕೂಡ ಒಂದು.
ನಾನು ಸಿನಿಮಾ ನಿರ್ಮಾಣಕ್ಕೆ ಬಂದಿದ್ದು ಹಣ ಮಾಡೋದಿಕ್ಕೆ ಅಲ್ಲ. ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನೋದು. ಅದರಲ್ಲೂ ಮಹಿಳೆಯ ಕುರಿತು ವಿಶೇಷವಾದ ಸಿನಿಮಾ ಮಾಡಬೇಕೆನ್ನುವುದು ನನ್ನ ಕನಸು. ನಾನು ನೋಡಿದಂತೆ ಸಿನಿಮಾದಲ್ಲಿ ಮಹಿಳೆ ಒಂದ್ರೀತಿ ಎರಡನೇ ದರ್ಜೆಯ ಪ್ರಜೆ. ಇದು ಯಾಕೆ ಎನ್ನುವುದು ನನ್ನ ಪ್ರಶ್ನೆ ಎನ್ನುತ್ತಾರೆ ಸಮಾಜ ಸೇವಕಿ ಸುಧಾರಾಜು.
ಸಿನಿಮಾ ರಂಗಕ್ಕೆ ನಟರಾಗಲು ಬಂದ ಅನೇಕ ಕಲಾವಿದರಿಗೆ ವರನಟ ಡಾ. ರಾಜ್ ಕುಮಾರ್ ಸ್ಪೂರ್ತಿ ಆದ ಹಾಗೆಯೇ ಸಿನಿಮಾ ನಿರ್ಮಾಣಕ್ಕೆ ಬಂದ ಹಲವು ಮಹಿಳಾ ನಿರ್ಮಾಪಕಿಯರಿಗೆ ಶ್ರೀಮತಿ ಡಾ. ಪಾರ್ವತಮ್ಮ ರಾಜ್ ಕುಮಾರ್ ಕೂಡ ದೊಡ್ಡ ಸ್ಪೂರ್ತಿಯೇ ಹೌದು. ಅದಕ್ಕೆ ಸಾಕ್ಷಿ ಯುವ ನಿರ್ಮಾಪಕಿ ಸುಧಾರಾಜು ಕೂಡ ಒಬ್ಬರು.
ಮೂಲತಃ ತಮುಕೂರಿನವರಾದ ಸುಧಾ ರಾಜು ಅವರು, ವೃತ್ತಿಯಲ್ಲಿ ಉಪನ್ಯಾಸಕಿ. ಪ್ರವೃತ್ತಿಯಲ್ಲಿ ಸಮಾಜ ಸೇವಕಿ, ರಾಜಕಾರಣಿ ಹಾಗೆಯೇ ಈಗ ಸಿನಿಮಾ ಸಹ ನಿರ್ಮಾಪಕಿ. ಹೌದು, ಅವರೀಗ ʼ ಚಿ. ತು. ಯುವಕರ ಸಂಘʼ ಚಿತ್ರದೊಂದಿಗೆ ಸಹ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇದೊಂದು ವಿಭಿನ್ನ ಶೀರ್ಷಿಕೆಯ ಚಿತ್ರ. ಚಿಂತೆ ಇಲ್ಲದ ತುಂಡ ಹೈಕ್ಳ ಯುವಕರ ಸಂಘ ಎನ್ನುವುದು ಈ ಚಿತ್ರದ ಶೀರ್ಷಿಕೆ ಫುಲ್ಫಾರ್ಮ್.
ಶಿವು ರಾಮನಗರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಚೇತನ್ ರಾಜ್ ಚಿತ್ರದ ಮುಖ್ಯ ನಿರ್ಮಾಪಕರು. ಸಹ ನಿರ್ಮಾಪಕಿಯಾಗಿ ಇವರಿಗೆ ಸಾಥ್ ನೀಡುವ ಮೂಲಕ ಸುಧಾ ರಾಜು ಸಿನಿ ದುನಿಯಾಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಬೆಸಿಕಲಿ ಇವರು ಉಪನ್ಯಾಸಕಿ. ತುಮಕೂರು ವಿಶ್ವವಿದ್ಯಾಲದಲ್ಲಿ ಒಂದಷ್ಟು ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಗುಬ್ಬಿಯ ಶುಭೋದಯ ಕಾಲೇಜಿನಲ್ಲಿ ಒಂದೆರೆಡು ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಕೊನೆಗೆ ಅದೆಲ್ಲ ಸಾಕು ಅಂತ ಸುಧೆ ಸೇವಾ ಟ್ರಸ್ಟ್ ಮೂಲಕ ಸಮಾಜ ಸೇವೆಯತ್ತ ಗಮನ ಹರಿಸಿದರು.
ಸುಧಾರಾಜು ಅವರದ್ದು ಬಹುಮುಖ ಪ್ರತಿಭೆ. ಚಿತ್ರಕಲೆ ಹಾಗೂ ಸಾಹಿತ್ಯದಲ್ಲೂ ವಿಶೇಷ ಆಸಕ್ತಿ ಹೊಂದಿರುವರು. ಇತ್ತೀಚೆಗಷ್ಟೇ ‘ಚಿತ್ತ ಕದಡಿದ ಬಯಲು’ ಹೆಸರಿನ ಕವನ ಸಂಕಲನ ಹೊರತಂದಿದ್ದರು. ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಆಗಮಿಸಿ, ಕವನ ಸಂಕಲನ ಬಿಡುಗಡೆ ಮಾಡಿದ್ದರು. ಇದಕ್ಕೆ ಕಾರಣ ಸುಧಾರಾಜು ಅವರು ಕೂಡ ಬಿಜೆಪಿ ಮುಖಂಡರಾಗಿದ್ದು. ಹಾಲಿ ಈಗ ಅವರು ತುಮಕೂರು ಜಿಲ್ಲಾ ಬಿಜೆಪಿ ಮಹಿಳಾ ವಿಭಾಗದ ಅಧ್ಯಕ್ಷೆ. ಹಾಗೆಯೇ ಇಂಟರ್ ನ್ಯಾಷನಲ್ ಚಿತ್ರಕಲಾ ಪ್ರಮೋಟ ರ್ ಕೂಡ ಆಗಿದ್ದು, ಈಗ ಅವೆಲ್ಲವುದರ ಜತೆಗೆ ಸಿನಿಮಾ ಸಹ ನಿರ್ಮಾಪಕಿಯೂ ಆಗಿದ್ದಾರೆ. ಹಾಗಾದ್ರೆ ರಾಜಕಾರಣಿಯೂ ಆಗಿ ಸಿನಿಮಾದತ್ತ ಅವರ ಒಲವು ಯಾಕೆ ?
“ ಸಿನಿಮಾ, ರಾಜಕಾರಣ, ಸಾಹಿತ್ಯ, ಚಿತ್ರಕಲೆ ಎಲ್ಲವೂ ಒಟ್ಟೊಟ್ಟಿಗೆ ಇರುವ ಕ್ಷೇತ್ರಗಳು. ನನ್ನ ಪ್ರಕಾರ ಇವೆಲ್ಲ ಬೇರೆ ಬೇರೆ ಅಂತ ಹೇಳೋದಿಕ್ಕೆ ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ನನಗೆ ಸಿನಿಮಾ ಕೂಡ ಮೊದಲಿನಿಂದಲೂ ಒಂದು ಆಸಕ್ತಿಯ ಕ್ಷೇತ್ರವೇ ಆಗಿತ್ತು. ವಿಶೇಷವಾಗಿ ನನಗೆ ಇಲ್ಲಿಗೆ ಬರಲು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರೇ ಸ್ಫೂರ್ತಿ. ಅವರು ನಿರ್ಮಾಣ ಮಾಡಿದ ಚಿತ್ರಗಳು, ನಿರ್ಮಾಪಕಿಯಾಗಿ ಬೆಳೆದ ಪರಿ, ಅಲ್ಲಿಯೇ ಸಕ್ಸಸ್ ಕಂಡ ರೀತಿಗಳೆಲ್ಲ ನನಗೆ ಕುತೂಹಲದ ವಿಷಯ. ಅವರ ಬಗ್ಗೆ ಕೇಳಿ ತಿಳಿಯುತ್ತಾ ಹೋದಂತೆ ನನಗೂ ಸಿನಿಮಾ ನಿರ್ಮಾಣದತ್ತ ಒಲವು ಮೂಡಿದ್ದು ಸುಳ್ಳಲ್ಲʼ ಎನ್ನುತ್ತಾರೆ ಸಹ ನಿರ್ಮಾಪಕಿ ಸುಧಾರಾಜು.
ಶಿವು ರಾಮನಗರ ನಿರ್ದೇಶನದ “ ಚಿ. ತು. ಯುವಕರ ಸಂಘʼ ಚಿತ್ರವು ಈಗಾಗಲೇ ಚಿತ್ರೀಕರಣ ಮುಗಿಸಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಕಾಲಿಟ್ಟಿದೆ. ಒಂದು ವಿಶೇಷ ಕಥಾ ಹಂದರದ ಚಿತ್ರ ಇದು. ಹಾಸ್ಯ ಪ್ರಧಾನ ಚಿತ್ರವಾದರೂ, ಸಮಾಜಕ್ಕೆ ಒಂದು ಸಂದೇಶ ನೀಡುವ ಆಶಯ ಹೊಂದಿದೆಯಂತೆ. ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಸಹ ನಿರ್ಮಾಪಕಿ ಸುಧಾರಾಜು ಅವರು, ಪ್ರೇಕ್ಷಕರ ಪಾಲಿಗೆ ಇದೊಂದು ಒಳ್ಳೆಯ ಸಿನಿಮಾ ಅಗುವುದರಲ್ಲಿ ಅನುಮಾನ ಇಲ್ಲ. ಒಂದೊಳ್ಳೆಯ ಕಥೆ ಎನ್ನುವ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ಭಾಗಿಯಾಗಿದ್ದೇನೆ. ಈ ಸಿನಿಮಾದ ಮೂಲಕ ನನ್ನ ಸಿನಿ ಪಯಣ ಶುರುವಾಗುತ್ತಿದೆ. ಮುಂದೆ ಸಿನಿಮಾ ನಿರ್ಮಾಣದ ಜತೆಗೆ ನಿರ್ದೇಶನಕ್ಕೂ ತೊಡಗಿಸಿಕೊಳ್ಳುವ ಆಲೋಚನೆ ಇದೆʼ ಎನ್ನುತ್ತಾರೆ ಸುಧಾರಾಜು.