ಸಿನಿಮಾ ನಿರ್ಮಾಣಕ್ಕೆ ಬಂದರು ಸುಧಾರಾಜು ಎಂಬ ಬಹುಮುಖ ಪ್ರತಿಭೆ- ಚಿ.ತು. ಯುವಕರ ಸಂಘದಲ್ಲಿ ಇವರೂ ಒಬ್ಬರು !

ನಾನು ಸಿನಿಮಾ ನಿರ್ಮಾಣಕ್ಕೆ ಬಂದಿದ್ದು ಹಣ ಮಾಡೋದಿಕ್ಕೆ ಅಲ್ಲ. ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನೋದು. ಅದರಲ್ಲೂ ಮಹಿಳೆಯ ಕುರಿತು ವಿಶೇಷವಾದ ಸಿನಿಮಾ ಮಾಡಬೇಕೆನ್ನುವುದು ನನ್ನ ಕನಸು. ನಾನು ನೋಡಿದಂತೆ ಸಿನಿಮಾದಲ್ಲಿ ಮಹಿಳೆ ಒಂದ್ರೀತಿ ಎರಡನೇ ದರ್ಜೆಯ ಪ್ರಜೆ. ಇದು ಯಾಕೆ ಎನ್ನುವುದು ನನ್ನ ಪ್ರಶ್ನೆ ಎನ್ನುತ್ತಾರೆ ಸಮಾಜ ಸೇವಕಿ ಸುಧಾರಾಜು.

ಸಿನಿಮಾ ರಂಗಕ್ಕೆ ನಟರಾಗಲು ಬಂದ ಅನೇಕ ಕಲಾವಿದರಿಗೆ ವರನಟ ಡಾ. ರಾಜ್ ಕುಮಾರ್ ಸ್ಪೂರ್ತಿ ಆದ ಹಾಗೆಯೇ ಸಿನಿಮಾ ನಿರ್ಮಾಣಕ್ಕೆ ಬಂದ ಹಲವು ಮಹಿಳಾ ನಿರ್ಮಾಪಕಿಯರಿಗೆ ಶ್ರೀಮತಿ ಡಾ. ಪಾರ್ವತಮ್ಮ ರಾಜ್ ಕುಮಾರ್ ಕೂಡ ದೊಡ್ಡ ಸ್ಪೂರ್ತಿಯೇ ಹೌದು. ಅದಕ್ಕೆ ಸಾಕ್ಷಿ ಯುವ ನಿರ್ಮಾಪಕಿ ಸುಧಾರಾಜು ಕೂಡ ಒಬ್ಬರು.

ಮೂಲತಃ ತಮುಕೂರಿನವರಾದ ಸುಧಾ ರಾಜು ಅವರು, ವೃತ್ತಿಯಲ್ಲಿ ಉಪನ್ಯಾಸಕಿ. ಪ್ರವೃತ್ತಿಯಲ್ಲಿ ಸಮಾಜ ಸೇವಕಿ, ರಾಜಕಾರಣಿ ಹಾಗೆಯೇ ಈಗ ಸಿನಿಮಾ ಸಹ ನಿರ್ಮಾಪಕಿ. ಹೌದು, ಅವರೀಗ ʼ ಚಿ. ತು. ಯುವಕರ ಸಂಘʼ ಚಿತ್ರದೊಂದಿಗೆ ಸಹ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇದೊಂದು ವಿಭಿನ್ನ ಶೀರ್ಷಿಕೆಯ ಚಿತ್ರ. ಚಿಂತೆ ಇಲ್ಲದ ತುಂಡ ಹೈಕ್ಳ ಯುವಕರ ಸಂಘ ಎನ್ನುವುದು ಈ ಚಿತ್ರದ ಶೀರ್ಷಿಕೆ ಫುಲ್ಫಾರ್ಮ್.

ಶಿವು ರಾಮನಗರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಚೇತನ್ ರಾಜ್ ಚಿತ್ರದ ಮುಖ್ಯ ನಿರ್ಮಾಪಕರು. ಸಹ ನಿರ್ಮಾಪಕಿಯಾಗಿ ಇವರಿಗೆ ಸಾಥ್ ನೀಡುವ ಮೂಲಕ ಸುಧಾ ರಾಜು ಸಿನಿ ದುನಿಯಾಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಬೆಸಿಕಲಿ ಇವರು ಉಪನ್ಯಾಸಕಿ. ತುಮಕೂರು ವಿಶ್ವವಿದ್ಯಾಲದಲ್ಲಿ ಒಂದಷ್ಟು ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಗುಬ್ಬಿಯ ಶುಭೋದಯ ಕಾಲೇಜಿನಲ್ಲಿ ಒಂದೆರೆಡು ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಕೊನೆಗೆ ಅದೆಲ್ಲ ಸಾಕು ಅಂತ ಸುಧೆ ಸೇವಾ ಟ್ರಸ್ಟ್ ಮೂಲಕ ಸಮಾಜ ಸೇವೆಯತ್ತ ಗಮನ ಹರಿಸಿದರು.

ಸುಧಾರಾಜು ಅವರದ್ದು ಬಹುಮುಖ ಪ್ರತಿಭೆ. ಚಿತ್ರಕಲೆ ಹಾಗೂ ಸಾಹಿತ್ಯದಲ್ಲೂ ವಿಶೇಷ ಆಸಕ್ತಿ ಹೊಂದಿರುವರು. ಇತ್ತೀಚೆಗಷ್ಟೇ ‘ಚಿತ್ತ ಕದಡಿದ ಬಯಲು’ ಹೆಸರಿನ ಕವನ ಸಂಕಲನ ಹೊರತಂದಿದ್ದರು. ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಆಗಮಿಸಿ, ಕವನ ಸಂಕಲನ ಬಿಡುಗಡೆ ಮಾಡಿದ್ದರು. ಇದಕ್ಕೆ ಕಾರಣ ಸುಧಾರಾಜು ಅವರು ಕೂಡ ಬಿಜೆಪಿ ಮುಖಂಡರಾಗಿದ್ದು. ಹಾಲಿ ಈಗ ಅವರು ತುಮಕೂರು ಜಿಲ್ಲಾ ಬಿಜೆಪಿ ಮಹಿಳಾ ವಿಭಾಗದ ಅಧ್ಯಕ್ಷೆ. ಹಾಗೆಯೇ ಇಂಟರ್ ನ್ಯಾಷನಲ್ ಚಿತ್ರಕಲಾ ಪ್ರಮೋಟ ರ್ ಕೂಡ ಆಗಿದ್ದು, ಈಗ ಅವೆಲ್ಲವುದರ ಜತೆಗೆ ಸಿನಿಮಾ ಸಹ ನಿರ್ಮಾಪಕಿಯೂ ಆಗಿದ್ದಾರೆ. ಹಾಗಾದ್ರೆ ರಾಜಕಾರಣಿಯೂ ಆಗಿ ಸಿನಿಮಾದತ್ತ ಅವರ ಒಲವು ಯಾಕೆ ?

“ ಸಿನಿಮಾ, ರಾಜಕಾರಣ, ಸಾಹಿತ್ಯ, ಚಿತ್ರಕಲೆ ಎಲ್ಲವೂ ಒಟ್ಟೊಟ್ಟಿಗೆ ಇರುವ ಕ್ಷೇತ್ರಗಳು. ನನ್ನ ಪ್ರಕಾರ ಇವೆಲ್ಲ ಬೇರೆ ಬೇರೆ ಅಂತ ಹೇಳೋದಿಕ್ಕೆ ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ನನಗೆ ಸಿನಿಮಾ ಕೂಡ ಮೊದಲಿನಿಂದಲೂ ಒಂದು ಆಸಕ್ತಿಯ ಕ್ಷೇತ್ರವೇ ಆಗಿತ್ತು. ವಿಶೇಷವಾಗಿ ನನಗೆ ಇಲ್ಲಿಗೆ ಬರಲು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರೇ ಸ್ಫೂರ್ತಿ. ಅವರು ನಿರ್ಮಾಣ ಮಾಡಿದ ಚಿತ್ರಗಳು, ನಿರ್ಮಾಪಕಿಯಾಗಿ ಬೆಳೆದ ಪರಿ, ಅಲ್ಲಿಯೇ ಸಕ್ಸಸ್ ಕಂಡ ರೀತಿಗಳೆಲ್ಲ ನನಗೆ ಕುತೂಹಲದ ವಿಷಯ. ಅವರ ಬಗ್ಗೆ ಕೇಳಿ ತಿಳಿಯುತ್ತಾ ಹೋದಂತೆ ನನಗೂ ಸಿನಿಮಾ ನಿರ್ಮಾಣದತ್ತ ಒಲವು ಮೂಡಿದ್ದು ಸುಳ್ಳಲ್ಲʼ ಎನ್ನುತ್ತಾರೆ ಸಹ ನಿರ್ಮಾಪಕಿ ಸುಧಾರಾಜು.

ಶಿವು ರಾಮನಗರ ನಿರ್ದೇಶನದ “ ಚಿ. ತು. ಯುವಕರ ಸಂಘʼ ಚಿತ್ರವು ಈಗಾಗಲೇ ಚಿತ್ರೀಕರಣ ಮುಗಿಸಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಕಾಲಿಟ್ಟಿದೆ. ಒಂದು ವಿಶೇಷ ಕಥಾ ಹಂದರದ ಚಿತ್ರ ಇದು. ಹಾಸ್ಯ ಪ್ರಧಾನ ಚಿತ್ರವಾದರೂ, ಸಮಾಜಕ್ಕೆ ಒಂದು ಸಂದೇಶ ನೀಡುವ ಆಶಯ ಹೊಂದಿದೆಯಂತೆ. ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಸಹ ನಿರ್ಮಾಪಕಿ ಸುಧಾರಾಜು ಅವರು, ಪ್ರೇಕ್ಷಕರ ಪಾಲಿಗೆ ಇದೊಂದು ಒಳ್ಳೆಯ ಸಿನಿಮಾ ಅಗುವುದರಲ್ಲಿ ಅನುಮಾನ ಇಲ್ಲ. ಒಂದೊಳ್ಳೆಯ ಕಥೆ ಎನ್ನುವ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ಭಾಗಿಯಾಗಿದ್ದೇನೆ. ಈ ಸಿನಿಮಾದ ಮೂಲಕ ನನ್ನ ಸಿನಿ ಪಯಣ ಶುರುವಾಗುತ್ತಿದೆ. ಮುಂದೆ ಸಿನಿಮಾ ನಿರ್ಮಾಣದ ಜತೆಗೆ ನಿರ್ದೇಶನಕ್ಕೂ ತೊಡಗಿಸಿಕೊಳ್ಳುವ ಆಲೋಚನೆ ಇದೆʼ ಎನ್ನುತ್ತಾರೆ ಸುಧಾರಾಜು.

Related Posts

error: Content is protected !!