ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಒಂದಷ್ಟು ದಿನಗಳ ಗ್ಯಾಪ್ ನಂತ್ರ ಮತ್ತೆ ಆಕ್ಷನ್ ಕಟ್ ಹೇಳಲು ಶುರು ಮಾಡಿದ್ದಾರೆ. ಬಹುದಿನಗಳ ಪ್ರಯತ್ನದೊಂದಿಗೆ ಈಗವರು ತಮ್ಮದೇ ʼಸತ್ಯ ಫಿಕ್ಚರ್ಸ್ʼ ಮೂಲಕ ನಿರ್ಮಾಣ ಹಾಗೂ ನಿರ್ದೇಶನದ ಸಾಹಸದೊಂದಿಗೆ ʼಮ್ಯಾನ್ ಆಫ್ ದಿ ಮ್ಯಾಚ್ʼ ಆರಂಭಿಸಿದ್ದಾರೆ. ಅವರ ಸಾಹಸಕ್ಕೆ ʼಮಯೂರ ಫಿಕ್ಚರ್ಸ್ʼನ ಡಿ. ಮಂಜುನಾಥ್ ಕೂಡ ಸಾಥ್ ನೀಡಿದ್ದಾರೆ. ಅಂದ ಹಾಗೆ, ಈಗ ಡಿ. ಸತ್ಯಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಹೆಸರು “ಮ್ಯಾನ್ ಆಫ್ ದಿ ಮ್ಯಾಚ್ʼ.
ಗುರುವಾರವಷ್ಟೇ ಈ ಚಿತ್ರಕ್ಕೆ ಬೆಂಗಳೂರಿನ ಬನಶಂಕರಿಯ ಬನಗಿರಿ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಮುಹೂರ್ತ ಮುಗಿಯಿತು. ಮುಹೂರ್ತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಾದಬ್ರಹ್ಮ ಹಂಸಲೇಖ ಅವರು ಕ್ಲಾಪ್ ತೋರಿಸುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಾಗೆಯೇ ನಟ ಡಾಲಿ ಧನಂಜಯ್ ಕ್ಯಾಮರಾ ಚಾಲನೆ ಮಾಡಿದರು. ಏಪ್ರಿಲ್ ಮೊದಲ ವಾರದಿಂದ ಚಿತ್ರಕ್ಕೆ ಚಿತ್ರೀಕರಣ ಶುರುವಾಗುತ್ತಿದೆ. ಸದ್ಯಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಹೊಸ ಕಲಾವಿದರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಇರಾದೆ ನಿರ್ದೇಶಕ ಸತ್ಯ ಪ್ರಕಾಶ್ ಅವರದ್ದು. ಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಮಯೂರ ಫಿಕ್ಚರ್ಸ್ ನ ಡಿ. ಮಂಜುನಾಥ್ ಕೂಡ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರಂತೆ. ಉಳಿದಂತೆ ” ರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಟರಾಜ್, ಧರ್ಮಣ್ಣ ಕಡೂರು, ವೀಣಾ-ಸುಂದರ್ ದಂಪತಿ ಕೂಡ ಚಿತ್ರದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಲವಿತ್ ಹಾಗೂ ಮದನ್ ಛಾಯಾಗ್ರಹಣ, ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಇನ್ನು ಚಿತ್ರದ ಟೈಟಲ್ ಕೇಳಿದಾಕ್ಷಣ ಇದೇನು ಕ್ರೀಡಾ ಆಧರಿತ ಸಿನಿಮಾ ಅಂದುಕೊಳ್ಳೋದು ಸಹಜ. ಆದ್ರೆ ಇದು ಆ ತರಹದ ಸಿನಿಮಾ ಅಂತಾರೆ ನಿರ್ದೇಶಕ ಸತ್ಯ ಪ್ರಕಾಶ್.
ಇದು ಕ್ರೀಡೆಗೆ ಸಂಬಂಧಿಸಿದ ಚಿತ್ರ ಅಲ್ಲ. ಮ್ಯಾನ್ ಅಫ್ ದಿ ಮ್ಯಾಚ್ ಅಂದ್ರೆ ಇದು ಎಲ್ಲರಿಗೂ ಕನೆಕ್ಟ್ ಆಗುವ ಕಥಾವಸ್ತು. ಯಾಕಂದ್ರೆ ನಮ್ ಬದುಕು ಅನ್ನೋದೇ ಪ್ರತಿಯೊಬ್ಬರಿಗೂ ಪ್ರತಿ ದಿನವೂ ಒಂಥರ ಮ್ಯಾಚ್ ಇದ್ದ ಹಾಗೆ. ಬೆಳಗ್ಗೆ ಮನೆಯಿಂದ ಹೊರಟು ಸಂಜೆ ಮನೆ ಸೇರೋ ತನಕ ಒಂದು ಮ್ಯಾಚ್‌ನಲ್ಲಿಯೇ ನಾವೆಲ್ಲ ಇರುತ್ತವೆ. ಇದಲ್ಲಿ ಕೆಲವರು ಗೆಲ್ತಾರೆ, ಇನ್ನು ಕೆಲವರು ಸೋಲ್ತಾರೆ. ಅದು ಹೇಗೆ, ಏನು ಅನ್ನೋದನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸತ್ಯ ಪ್ರಕಾಶ್.
ಇನ್ನೊಂದು ಸ್ಪೆಷಲ್ ಅಂದ್ರೆ ಇಡೀ ಸಿನಿಮಾ ಒಂದೇ ಜಾಗದಲ್ಲಿ ನಡೆಯುವ ಕತೆ. ಹಾಗಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿ, ಇಡೀ ಸಿನಿಮಾವನ್ನು ಅಲ್ಲಿಯೇ ಚಿತ್ರೀಕರಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಹಾಗೆಯೇ ಸತ್ಯ ಪ್ರಕಾಶ್ ಅವರ ಈ ಹಿಂದಿನ ಸಿನಿಮಾಗಳಿಗೂ ಇದಕ್ಕೂ ಸಾಕಷ್ಟು ವಿಭಿನ್ನತೆ ಮತ್ತು ವಿಶೇಷತೆ ಇರಲಿದೆಯಂತೆ. ಅದು ಸ್ಕೀಫ್ಟ್ ಜತೆಗೆ ಟೆಕ್ನಿಕಲ್ ವರ್ಕ್ ನಲ್ಲೂ ವಿಭಿನ್ನತೆ ಕಾಣಲಿದೆ. ಹೊಸ ಬಗೆಯಲ್ಲೇ ಒಂದು ಪ್ರಯೋಗ ಮಾಡೋಣ ಅಂತ ಹೊರಟಿದ್ದೇವೆ ಎನ್ನುವ ಮಾತು ಸತ್ಯ ಪ್ರಕಾಶ್ ಅವರದ್ದು.