ಸಂಗೀತ ನಿರ್ದೇಶಕ ಮಂಜು ಕವಿ ನಿರ್ದೇಶನದ ಟೆಂಪರ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ನಿರ್ಮಾಣವಾಗಿರುವ ಈ ಚಿತ್ರ ಪಕ್ಕಾ ಮಾಸ್ ಕಥಾ ಹಂದರ ಹೊಂದಿದೆ. ಸದ್ಯಕ್ಕೀಗ ಅಂತಹದೇ ಮಾಸ್ ಲುಕ್ ನ ಒಂದು ಲಿರಿಕಲ್ ವಿಡಿಯೋ ಸಾಂಗ್ ಮೂಲಕ ಸೌಂಡ್ ಮಾಡಲು ಶುರು ಮಾಡಿದೆ ಟೆಂಪರ್ ಚಿತ್ರ. ಅರ್ಯನ್ ಸೂರ್ಯ ಹಾಗೂ ಕಾಶಿಮಾ ಚಿತ್ರದ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜರ್ನಿಲಿಸ್ಟ್ ಧನು ಯಲಗಚ್ ನಾಯಕನ ಸ್ನೇಹಿತನಾಗಿ ಅಭಿನಯಿಸಿದ್ದಾರೆ.
ಅವರೊಂದಿಗೆ ಮಜಾಟಾಕೀಸ್ ಪವನ್‍ಕುಮಾರ್, ಪತ್ರಕರ್ತ ಯತಿರಾಜ್ ಮತ್ತಿತರರು ಪೋಷಕ ಪಾತ್ರಗಳಲ್ಲಿದ್ದಾರೆ. ಶ್ರೀಬಾಲಾಜಿ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಬಿ.ಮೋಹನಬಾಬು ಹಾಗೂ ವಿ.ವಿನೋದ್‍ಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಆಯಿತು.
ನಿರ್ದೇಶಕ ಮಂಜುಕವಿ ಮಾತನಾಡಿ, ನಾಯಕನಿಗೆ ಚಿಕ್ಕವನಾದಾಗಿನಿಂದ ಯಾವುದೇ ವಿಷಯಕ್ಕಾದರೂ ಶೀಘ್ರವೇ ಕೋಪಗೊಳ್ಳುವಂತಹ ಗುಣವಿರುತ್ತದೆ. ಕಾರ್ ಗ್ಯಾರೇಜ್ ಇಟ್ಟುಕೊಂಡಿರುವ ಆತನಿಗೆ ತನ್ನ ಗೆಳೆಯರೇ ಪ್ರಪಂಚ, ಆ ಸಮಯದಲ್ಲಿ ದೊಡ್ಡ ಮನೆತನದ ಯುವತಿಯ ಮೇಲೆ ನಾಯಕನಿಗೆ ಪ್ರೀತಿ ಚಿಗುರುತ್ತದೆ, ಈ ಸಮಯದಲ್ಲಿ ತನ್ನ ಕುಟುಂಬ ಹಾಗೂ ಪ್ರೇಯಸಿಯನು ಆತ ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಸಾರಾಂಶ ಎನ್ನುತ್ತಾರವರು.
ಚಿತ್ರಕ್ಕೆ ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಮಡಿಕೇರಿ, ಮಂಡ್ಯ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಇದೇ ತಿಂಗಳು ಚಿತ್ರದ ಟೀಸರ್ ಕೂಡ ರಿಲೀಸ್ ಆಗಲಿದೆಯಂತೆ. ನಟ ಬಲ ರಾಜವಾಡಿ ಈ ಚಿತ್ರದ ಮತ್ತೊರ್ವ ಪ್ರಮುಖ ಪಾತ್ರಧಾರಿ. ಅವರೇ ಹಳ್ಳಿ ಪ್ರಮುಖರಂತೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ.