ಚಿತ್ರರಂಗ ಅನ್ನೋದು ಒಂದು ಮನೆ ಇದ್ದಂತೆ… ಕನ್ನಡ ಚಿತ್ರೋದ್ಯಮದ ಮಂದಿ ಬಹಿರಂಗ ವೇದಿಕೆಗಳಲ್ಲಿ ಹೀಗೆಲ್ಲ ಹೇಳುವುದನ್ನು ನೀವು ಕೇಳಿದ್ದೀರಿ. ಹಾಗಂತ ಸ್ಟಾರ್‌ಗಳು ಕೂಡ ಮಾತನಾಡುವುದು ಮಾಮೂಲು. ಆದರೆ ಇತ್ತೀಚೆಗೆ ಚಿತ್ರರಂಗ ಒಂದೇ ಮನೆಯ ಕುಟುಂಬದಂತೆ ಕಂಡಿದ್ದು ನಿಮಗೇನಾದರೂ ಗೊತ್ತಾ ? ಇಲ್ಲ, ಅವರವರ ಸಿನಿಮಾಗಳಿಗೆ ಸಂಕಷ್ಟಗಳು, ಸವಾಲುಗಳು ಎದುರಾದಾಗೆಲ್ಲ ಅವರವರೇ ಮಾತನಾಡುವುದು ಈಗ ವಾಡಿಕೆ ಅಗಿದೆ. ಅದರ ಪರಿಣಾಮವೇ, ಸ್ಟಾರ್ ಗಳೆಲ್ಲ ಅವರವರ ಸಿನಿಮಾಕ್ಕೆ ಸಂಕಷ್ಟ ಬಂದಾಗ ಮಾತನಾಡುತ್ತಿದ್ದಾರೆ. ಅದೇ ಸಾಲಿನಲ್ಲೀಗ ಯುವರತ್ನನ ಸರದಿ.
ಬೇಕಾದರೆ ಇತ್ತೀಚಿನ ದಿನಗಳಲ್ಲೇ ಆದ ಬೆಳವಣಿಗೆ ನೋಡಿ, “ಪೊಗರುʼ ಚಿತ್ರಕ್ಕೆ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಾಗ ನಟ ಧ್ರುವ ಸರ್ಜಾ ಅಬ್ಬರಿಸಿ, ಬೊಬ್ಬಿರಿದರು. ಸೋಷಲ್ ಮೀಡಿಯಾದಲ್ಲಿ ಅದಕ್ಕೆ ಕೆಲವರು ಸಾಥ್ ಕೊಟ್ಟರು. ಅದು ದೊಡ್ಡ ಸುದ್ದಿಯೂ ಆಯಿತು. ಸರ್ಕಾರ ಚಿತ್ರಮಂದಿರಕ್ಕೆ ಹೇರಲು ಹೊರಟಿದ್ದ ನಿರ್ಬಂಧದ ಪ್ರಸ್ತಾಪ ಅಷ್ಟಕ್ಕೆ ನಿಂತುಹೊಯಿತು. ಮುಂದೆ ರಾಬರ್ಟ್ ರಿಲೀಸ್‌ಗೆ ಅಡ್ಡಿಯಾದ ವಿಚಾರದಲ್ಲಿ ನಟ ದರ್ಶನ್ ಟಾಲಿವುಡ್ ವಿರುದ್ಧ ಕೆಂಡ ಕಾರಿದರು. ಅದಕ್ಕೂ ಕೆಲವರು ಸೋಷಲ್ ಮೀಡಿಯಾದಲ್ಲಿ ಬೆಂಬಲ ಕೊಟ್ಟರು. ಅದು ಕೂಡ ದೊಡ್ಡ ಸುದ್ದಿಯಾಯಿತು. ರಿಲೀಸ್ ಸಮಸ್ಯೆ ತಕ್ಷಣವೇ ಬಗೆಹರಿಯಿತು. ಈಗ ʼಯುವರತ್ನʼ ಚಿತ್ರದ ಸರದಿ.
ಯುವ ರತ್ನ ಚಿತ್ರ ರಿಲೀಸ್ ಆಗಿ ಇನ್ನು ಎರಡು ದಿನ ಆಗಿಲ್ಲ. ಆಗಲೇ ಸರ್ಕಾರ ಕೊರೋನಾ ಕಾರಣಕ್ಕೆ ರಾಜ್ಯದಲ್ಲಿ ಟಫ್ ರೂಲ್ಸ್ ತಂದಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿನ ಚಿತ್ರ ಮಂದಿರಗಳಲ್ಲಿ ಶೇ.50 ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ಕೊಟ್ಟಿದೆ. ಇದು ಯುವರತ್ನ ಚಿತ್ರದ ಸಕ್ಸಸ್ ಓಟಕ್ಕೆ ಭರ್ಜರಿ ಬ್ರೇಕ್ ಹಾಕಿದೆ. ಒಂಥರ ಇದು ಆಘಾತವೇ ಹೌದು.
ನಟ ಪುನೀತ್ ರಾಜ್ ಕುಮಾರ್ ಈಗ ಸರ್ಕಾರದ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕಿದ್ದಂತೆ ಸರ್ಕಾರ ಈ ಆದೇಶ ಜಾರಿಗೊಳಿಸಿ, ತಮಗೆ ಅನ್ಯಾಯ ಮಾಡಿದೆ ಅಂತ ಗುಡುಗಿದ್ದಾರೆ. ಮೊದಲೇ ಸರ್ಕಾರ ಈ ರೀತಿ ಮಾಡುತ್ತೇವೆ ಅಂತ ಹೇಳದ್ರೆ, ನಾವು ಚಿತ್ರವನ್ನೇ ಬಿಡುಗಡೆ ಮಾಡುತ್ತಿರಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರೋದ್ಯಮದ ಹಲವರು ಅವರ ಮಾತಿಗೆ ಸಾಥ್ ಕೊಟ್ಟಿದ್ದಾರೆ.
ಹಾಗೆಯೇ ಕೆಲವರು ಪುನೀತ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಟ ಪುನೀತ್ ತಮ್ಮ ಅನುಕೂಲಕ್ಕೆ ತಕ್ಕಂತೆ ಬೇಡಿಕೆ ಇಡುವುದು ಸೂಕ್ತವಲ್ಲ ಅಂತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಟಾಂಗ್ ಕೊಟ್ಟಿದ್ದಾರೆ. ಕೆಲವರು ಇದೆಲ್ಲ ತಮಗ್ಯಾಕೆ ಅಂತಲೂ ಮೌನ ತಾಳಿದ್ದಾರೆ. ಮತ್ತೆ ಹಲವರು ಸಂಬಂಧವೇ ಇಲ್ಲದ್ದಂತೆ ಮುಗುಮ್ ಅಗಿದ್ದಾರೆ. ಹೀಗೆಲ್ಲ ಆಗುವುದ್ಯಾಕೆ ಅಂದ್ರೆ, ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕೆ.
ಒಂದು ಕಾಲದಲ್ಲಿ ಕೂಡ ಚಿತ್ರರಂಗ ಅಂದ್ರೆ ಕೂಡು ಕುಟುಂಬದಂತೆ ಇತ್ತು. ಯಾವುದೇ ಸಮಸ್ಯೆ ಎದುರಾದಾಗ ಹಿರಿಯ ನೇತೃತ್ವದಲ್ಲಿ ಒಂದಾಗಿ ಬೀದಿಗಿಳಿಯುತ್ತಿತ್ತು. ಈಗ ಅದು ಒಡೆದ ಮನೆ. ಅಲ್ಲಿ ಯಜಮಾನ ಯಾರು ಎಂಬುದೇ ಗೊತ್ತಿಲ್ಲ. ಪ್ರತಿಯೊಬ್ಬರು ಇಲ್ಲಿ ದೊಡ್ಡವರೇ. ವಿಶೇಷವಾಗಿ ಸ್ಟಾರ್ ಗಳಂತೂ ತಾವೇ ಮೇಲೆ, ತಾವು ಹೇಳಿದ್ದೆ ಆಗ್ಬೇಕು ಅನ್ನೋ ರೇಂಜ್ ನಲ್ಲಿ ಪೋಸು ನೀಡುತ್ತಿದ್ದಾರೆ. ಉದ್ಯಮ ಎನ್ನುವುದಕ್ಕಿಂತ ತಮ್ಮ ತಮ್ಮ ಸಿನಿಮಾಗಳನ್ನ ಹಿತವನ್ನು ತಾವು ಕಾಯ್ದುಕೊಳ್ಳುವುದಕಷ್ಟೇ ಸೀಮಿತವಾಗುಳಿಯುತ್ತಿದ್ದಾರೆ. ಅದೆಲ್ಲದರ ಪರಿಣಾಮ ಚಿತ್ರೋದ್ಯಮ ಇವತ್ತು ಕೊರೋನಾ ನೆಪದಲ್ಲಿ ಆರ್ಥಿಕ ದಿವಾಳಿ ಹಂತಕ್ಕೆ ಬಂದು ನಿಂತಿದೆ ಎನ್ನುವುದು ದುರಂತ.