ಕನ್ನಡದವರೇ ಆದ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ ರಜನಿಕಾಂತ್, ಪ್ರತಿಷ್ಟಿತ ದಾದಾ ಸಾಹೇಬ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಕೇಂದ್ರ ಸರ್ಕಾರ ನೀಡುವ ಪುರಸ್ಕಾರಕ್ಕೆ ರಜನಿ ಪಾತ್ರರಾಗಿರುವುದು ತಮಿಳು ಚಿತ್ರರಂಗಕ್ಕೆ ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೂ ದೊಡ್ಡ ಹೆಮ್ಮೆಯೇ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೆಕರ್ ಗುರುವಾರ ಈ ಕುರಿತು ಅಧಿಕೃತ ಮಾಹಿತಿ ರಿವೀಲ್ ಮಾಡಿದ್ದಾರೆ. 2020ನೇ ಸಾಲಿನ 51ನೇ ಫಾಲ್ಕೆ ಪ್ರಶಸ್ತಿ ಇದಾಗಿದೆ.
ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ರಂಜಿಸಿ, ಸ್ಫೂರ್ತಿ ತುಂಬಿರುವ ತಲೈವಾ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ರಜನಿಕಾಂತ್ ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಿರುವ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. ಮಾಹಿತಿ ಹಂಚಿಕೊಳ್ಳುವ ಜೊತೆಗೆ ರಜನಿಕಾಂತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.2020 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್ ಹೆಸರನ್ನು ಫೋಷಿಸುತ್ತಿರುವುದು ಸಂತಸ ತಂದಿದೆ ಅಂತಲೂ ಹೇಳಿದ್ದಾರೆ. ಸದ್ಯ ತಮಿಳು ನಾಡಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಈ ನಡುವೆಯೂ ರಜನಿ ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ. ಕನ್ನಡ ಚಿತ್ರೋದ್ಯಮ ಕೂಡ ರಜನಿ ಅವರಿಗೆ ಅಭಿನಂದನೆ ಸಲ್ಲಿಸಿದೆ. ಈ ಮಧ್ಯೆ ಪ್ರಧಾನಿ ಮೋದಿ ಕೂಡ ರಜನಿ ಕಾಂತ್ ಅವರಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.