ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ, ಹಾಗಾಯ್ತು ಈ ನಿರ್ದೇಶಕನ ಕಥೆ. ದುಡ್ಡು ಹಾಕಿದ ನಿರ್ಮಾಪಕರನ್ನೇ ಮರೆತು ತಾನೇ ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ ಅಂತೆಲ್ಲ ಪೋಸು ಕೊಟ್ಟಿದ್ದ. ಆ ತಪ್ಪಿಗೆ ಆತ ಕ್ಷಮೆ ಕೇಳಲೇಬೇಕಾಯಿತು. ಅದೂ ಬಹಿರಂಗ ಸಭೆಯಲ್ಲಿಯೇ ನಡೆದು ಹೋಯಿತು. ಚಿತ್ರ ತಂಡ ಆಯೋಜಿಸಿದ್ದ ಆಡಿಯೋ ಲಾಂಚ್ ಸಮಾರಂಭ ಅನ್ನೋದು ಜಗಳದ ವೇದಿಕೆ ಆಯಿತು. ಸಿಡಿದೆದ್ದ ನಿರ್ಮಾಪಕರು, ತಮ್ಮ ಅಳಲು ತೋಡಿಕೊಂಡರು. ಸಭಿಕರೂ ಸಿಟ್ಟಾದರು. ಅಷ್ಟಾದ್ಮೇಲೆ ಕೇಳ್ಬೇಕೆ, ನಿರ್ದೇಶಕ ವಿಧಿ ಇಲ್ಲದೆ ತಪ್ಪೊಪ್ಪಿಕೊಳ್ಳಬೇಕಾಯಿತು. ಮಾಡಿದ್ದಕ್ಕೆ ಕ್ಷಮೆ ಕೇಳಬೇಕಾಯಿತು. ಇದು ಆಗಿದ್ದು ಚಕ್ರಾಧಿಪತಿ ಹೆಸರಿನ ಚಿತ್ರದ ಆಡಿಯೋ ಲಾಂಚ್ ಸಂದರ್ಭ.
ಸಿನಿಮಾ ಅನ್ನೋದು ಈಗ ಅಷ್ಟಾಗಿ ಕೌತುಕ ಜಗತ್ತು ಅಂತೇನೂ ಉಳಿದಿಲ್ಲ. ಹೊರಾಂಗಣ ಚಿತ್ರೀಕರಣಕ್ಕೆ ಅದು ಇಳಿದ ದಿನದಿಂದಲೇ ಒಂದಷ್ಟು ಕೌತುಕ ಮಾಯವಾಗಿದೆ. ಅದೂ ಈ ಹೊತ್ತಿನ ಡಿಜಿಟಲ್ ಯುಗದಲ್ಲಂತೂ ಇನ್ನಷ್ಟು ಕೌತುಕ ಕಳೆದುಕೊಂಡಿದೇ ಅನ್ನೋದು ಇನ್ನಷ್ಟು ಸತ್ಯ. ಇಷ್ಟಾಗಿಯೂ ಕೆಲವರಿಗೆ ಸಿನಿಮಾ ಜಗತ್ತು ಇನ್ನು ಭ್ರಮ ಲೋಕವೇ. ಪರದೆ ಮೇಲೆ ಕಾಣಿಸಿಕೊಳ್ಳಬೇಕು, ತಾನೂ ನಿರ್ಮಾಪಕ ಅಂತೆನಿಸಿಕೊಳ್ಳಬೇಕೋ ಅನ್ನೋ ಶೋಕಿ ಜತೆಗೆ ಇಲ್ಲಿನ ತಳಕು ಬಳುಕಿಗೆ ಮಾರು ಹೋಗುವವರು ಇದ್ದಾರೆ. ಹಾಗಂತ ” ಚಕ್ರಾಧಿಪತಿʼ ಹೆಸರಿನ ಚಿತ್ರಕ್ಕೆ ಬಂಡಾವಾಳ ಹಾಕಿ, ಅದರಲ್ಲಿ ತಾವು ನಟರಾಗಿಯೂ ಕಾಣಿಸಿಕೊಂಡ ನಿರ್ಮಾಪಕರಿಗೂ ಅಂತಹದೊಂದು ಶೋಕಿ ಇದೆ ಅಂತ ಹೇಳುತ್ತಿಲ್ಲ. ಬದಲಿಗೆ ಅವರೊಂದಿಷ್ಟು ಅಮಾಯಕರಂತೂ ಹೌದು ಅಂತ ಗೊತ್ತಾಗಿದ್ದು ನಿರ್ದೇಶಕನ ಜಾಣ್ಮೆ ಕಂಡಾಗಲೇ.
ʼಚಕ್ರಾಧಿಪತಿʼ ಅನ್ನೋದು ಒಂದು ಪಕ್ಕಾ ಹೊಸಬರ ಚಿತ್ರ. ಬಹುತೇಕ ಇಲ್ಲಿವವರೆಲ್ಲ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕಡೆಯವರೇ. ಮಲಿಯಣ್ಣ ಅಂತ ಇದರ ನಿರ್ದೇಶಕರು. ಯುವ ಪ್ರತಿಭೆ. ಮೊದಲ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದಕ್ಕೆ ಏಳು ಮಂದಿ ನಿರ್ಮಾಪಕರು. ಎಲ್ಲರೂ ಸೇರಿಕೊಂಡು ತಮ್ಮದೇ ಬಜೆಟ್ ನಲ್ಲಿ ಸಿನಿಮಾ ಮಾಡೋಣ ಅಂತ ಬಂದವರು. ಕೆಲವರಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಆಸೆ. ಇನ್ನು ಕೆಲವರಿಗೆ ಸಿನಿಮಾ ನಿರ್ಮಾಪಕ ಎಂದೆನೆಸಿಕೊಳ್ಳುವ ಹಂಬಲ. ನಿರ್ದೇಶಕನ ಜಾಣ್ಮೆಯಲ್ಲೇ ಇವರೇ ಮೋಸ ಹೋದರು. ಅಂದ್ರೆ, ಚಿತ್ರದ ಪೋಸ್ಟರ್ ನಲ್ಲಿ ಇವರ ಹೆಸರೇ ಮಾಯ. ಅದೇ ಕಾರಣಕ್ಕೆ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಜಗಳದ ವೇದಿಕೆ ಆಯಿತು.
ಅಷ್ಟು ಜನರ ಹೆಸರು ಹಾಕೋದಿಕ್ಕೆ ಕಷ್ಟ ಅಂತ ನನ್ನ ಹೆಸರೇ ಹಾಕಿಕೊಂಡೆ ಅಂತ ನಿರ್ದೇಶಕ ಸ್ಪಷ್ಟನೆ ಕೊಟ್ಟರು ಪ್ರಯೋಜನ ಆಗಲಿಲ್ಲ. ನೀನು ನಿರ್ದೇಶಕನೆ, ನಿರ್ಮಾಪಕನೆ ಅಂತ ಸಭಿಕರೇ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಆತ ಕ್ಷಮೆ ಕೇಳಲೇಬೇಕಾಯಿತು. ಆ ಗದ್ದಲದ ನಡುವೆ ಆಡಿಯೋ ಲಾಂಚ್ ಗೆ ವೇದಿಕೆ ಸಿದ್ದಪಡಿಸಿದ ಸಿರಿ ಮ್ಯೂಜಿಕ್ ಸಂಸ್ಥೆಯ ಮಾಲೀಕರೇ ಮೂಲೆಗುಂಪಾದರು. ಚಿತ್ರ ತಂಡ ಅಂದುಕೊಂಡಿದ್ದೇ ಒಂದು, ಅಲ್ಲಿ ಆಗಿದ್ದೇ ಇನ್ನೊಂದು ಎನ್ನುವ ಹಾಗಾಯಿತು ಪರಿಸ್ಥಿತಿ.