ನ್ಯಾಷನಲ್ ಕ್ರಷ್ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೀಗೇಕೆ ಹೇಳಿದ್ರು….
ನಟಿ ರಶ್ಮಿಕಾ ಮಂದಣ್ಣಗೆ ಈಗ ಕಾಂಟ್ರೋವರ್ಸಿ ಬೇಕೇ ಬೇಕು. ಅದಿಲ್ಲ ಅಂದ್ರೆ ಅವರಿಗೆ ಬೇಜಾರಾಗುತ್ತಂತೆ. ಹೀಗಂತ ಹೇಳಿದ್ದು ಬೇರಾರೂ ಅಲ್ಲ, ಖುದ್ದು ಅವರೇ ಇದನ್ನು ಹೇಳಿಕೊಂಡು ನಗೆ ಬೀರಿದ್ದು ವಿಚಿತ್ರ ಎನಿಸಿತು.
ಇಷ್ಟಕ್ಕೂ ಅವರು ಈ ರೀತಿ ಹೇಳಿದ್ದು ಶನಿವಾರ ʼಪೊಗರುʼ ಚಿತ್ರದ ಮೀಟ್ ದಿ ಮೀಡಿಯಾ ಕಾರ್ಯಕ್ರಮದಲ್ಲಿ. ಸೋಷಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ದಿನನಿತ್ಯ ಕಾಣಿಸಿಕೊಳ್ಳುವ ಕಾಂಟ್ರೋವರ್ಸಿಗಳ ಕುರಿತ ಪ್ರಶ್ನೆಗೆ ನಗುತ್ತಲೇ ಪ್ರತಿಕಿಯಿಸಿದ ನಟಿ ರಶ್ಮಿಕಾ ಮಂದಣ್ಣ, ಅವುಗಳಿಗೆಲ್ಲ ನಾನು ಹೆಚ್ಚು ತಲೆ ಕಡೆಸಿಕೊಳ್ಳುವುದಿಲ್ಲ. ದಿನಿ ನಿತ್ಯ ಮಾಡೋದಿಕ್ಕೆ ಸಾಕಷ್ಟು ಕೆಲಸ ಇರುತ್ತದೆ ಎಂದರು.
” ಮೊದಲೆಲ್ಲ ಅಂದ್ರೆ ಕಿರಿಕ್ ಪಾರ್ಟಿ ಬಂದು ಹೋದ ನಂತರದ ದಿನಗಳಲ್ಲಿ ನನ್ನ ಬಗೆಗಿನ ಯಾವುದಾದರೂ ಕಾಂಟ್ರೋವರ್ಸಿ ವಿಷಯ ಕಿವಿ ಬಿದ್ದರೆ ಸಿಕ್ಕಾಪಟ್ಟೆ ಬೇಸರ ಆಗುತ್ತಿತ್ತು. ಇದ್ಯಾಕೆ ಹೀಗೆ ಜನ ಏನೇನು ಗಾಸಿಪ್ ಹಬ್ಬಿಸುತ್ತಿದ್ದಾರೆ, ಇವರಿಗೇನು ಕೆಲಸ ಇಲ್ಲವೇ ಅಂತೆಲ್ಲ ತಲೆಕೆಡಿಸಿಕೊಂಡು, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೆ. ಆದ್ರೆ ಈಗ ಅದೆಲ್ಲವನ್ನು ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದೇನೆ. ದಿನ ಸುದ್ದಿಯಲ್ಲಿರಬೇಕಾದ್ರೆ ಅಂತಹ ಕಾಂಟ್ರೋವರ್ಸಿ ಇರಬೇಕು ಅಂತೆನಿಸುತ್ತದೆ. ಅದೂ ಇದ್ದಾಗಲೇ ನಾವು ಕೂಡ ಇಲ್ಲಿ ಸಕ್ರಿಯವಾಗಿದ್ದೇವೆ ಅಂತೆನಿಸುತ್ತದೆ ʼ ಅಂತ ನಟಿ ರಶ್ಮಿಕಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಹಾಗಾದ್ರೆ ಕಾಂಟ್ರೋವರ್ಸಿಗಳನ್ನ ಪಾಸಿಟಿವ್ ತೆಗೆದುಕೊಳ್ಳುತ್ತಿದ್ದೀರಿ ಅಂತನಾ ಎನ್ನುವ ಮರು ಪ್ರಶ್ನೆಗೆ, ರಶ್ಮಿಕಾ ಉತ್ತರ ಅಷ್ಟೇ ಬುದ್ಧಿವಂತಿಕೆಯಿಂದಲೇ ಉತ್ತರಿಸಿದರು.” ಪಾಸಿಟಿವ್ ಅಂತಲ್ಲ. ಸೋಷಲ್ ಮೀಡಿಯಾದಲ್ಲಿ ಅದನ್ನೇ ಕಿಯೇಟ್ ಮಾಡೋದಿಕ್ಕೆ ಒಂದಷ್ಟು ಜನರು ಇರುವಾಗ ನಾವು ಅವರಿಗೆ ಏನೇ ಉತ್ತರ ಕೊಟ್ಟರು ಕೂಡ ಅದು ಕಾಂಟ್ರೋವರ್ಸಿಯಾಗಿಯೇ ಇರುತ್ತದೆ. ಹಾಗಾಗಿ ಅವರಿಗೆ ಪ್ರತಿಕ್ರಿಯಿಸಿ ನಾವು ಸಣ್ಣರಾಗುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಲ್ಲವೇ ಎನ್ನುವ ಮೂಲಕ ರಶ್ಮಿಕಾ ತುಂಬಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಟಾಲಿವುಡ್ ನಲ್ಲಿ ರಶ್ಮಿಕಾಗೆ 2 ಕೋಟಿ ಸಂಭಾವನೆಯಂತೆ ಎನ್ನುವ ಪ್ರಶ್ನೆಗೆ ಅಚ್ಚರಿಪಟ್ಟಿದ್ದು ಯಾರು ಗೊತ್ತಾ?
ನ್ಯಾಷನಲ್ ಕ್ರಷ್ ಅಂತಲೇ ಜನಪ್ರಿಯತೆ ಪಡೆದಿರುವ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಹುಭಾಷೆಗಳಲ್ಲಿ ಬಹು ಬೇಡಿಕೆಯ ನಟಿ. ವಿಶೇಷವಾಗಿ ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಮನೆ ಮಾತಾದ ಜನಪ್ರಿಯ ತಾರೆ. ಈಗ ಅಲ್ಲಿ ಅವರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು? ಒಂದು ಸಿನಿಮಾಕ್ಕೆ ಅಲ್ಲಿ ಅವರು ಪಡೆಯುತ್ತಿರುವ ಸಂಭಾವನೆ ಎರಡು ಕೋಟಿ ಎನ್ನುವುದು ನಿಜವೇ?
ಅಧಿಕೃತವಾಗಿ ಅದು ಯಾರಿಗೂ ಗೊತ್ತಿಲ್ಲ. ಆದರೆ ಸೋಷಲ್ ಮೀಡಿಯಾದಲ್ಲಿ ಅವರ ಸಂಭಾವನೆ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ನಲ್ಲಿ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ೨ ಕೋಟಿ. ಹಾಗಾದ್ರೆ ಇದು ನಿಜವೇ? ಇದಕ್ಕೆ ಖುದ್ದು ನಟಿ ರಶ್ಮಿಕಾ ಮಂದಣ್ಣ ಅವರು ಹೇಳುವುದೇನು?
ಶನಿವಾರ ʼಪೊಗರುʼ ಚಿತ್ರದ ಮೀಟ್ ದಿ ಮೀಡಿಯಾ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಅವರಿಗೆ ಈ ಪ್ರಶ್ನೆ ಎದುರಾಯಿತು. ಟಾಲಿವುಡ್ ನಲ್ಲಿ ನೀವು ಒಂದು ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು? ಎರಡು ಕೋಟಿ ಇದೆ ಎನ್ನುವುದು ನಿಜವೇ ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ನಟಿ ರಶ್ಮಿಕಾ ಮಂದಣ್ಣ ಜೋರಾಗಿ ನಕ್ಕರು.
“ಅಯ್ಯೋ,, ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ ಅಲ್ವೇ? ಹಾಗೆಲ್ಲ ಹೇಳಿದರು, ಹೇಳುತ್ತಿರುವವರು ಯಾರೋ ನಂಗೆ ಗೊತ್ತಿಲ್ಲ. ಆದ್ರೆ ನನ್ನ ಪ್ರಕಾರ ಅದೆಲ್ಲ ಸುಳ್ಳು. ವಾಸ್ತವದಲ್ಲಿ ಅಷ್ಟೊಂದು ಸಂಭಾವನೆ ಪಡೆಯುತ್ತಿರುವ ನಟಿ ನಾನಲ್ಲ. ಒಂದು ವೇಳೆ ಅಷ್ಟು ಸಂಭಾವನೆ ಸಿಕ್ಕಿದ್ದರೆ ನಿಜಕ್ಕೂ ಅದು ನಂಗೂ ಖುಷಿ ನೀಡುತ್ತಿತ್ತು.
ಆದರೆ ಅದೆಲ್ಲ ಅಪಪ್ರಚಾರ ಮಾತ್ರ. ಅದರಿಂದಲೇ ಅಲ್ವೇ, ನಮ್ಮ ಮನೆ ಮೇಲೆ ಐಟಿ ದಾಳಿ ನಡೆದಿದ್ದು. ಇದೆಲ್ಲದ್ದಕ್ಕೂ ನಾನು ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಿಲ್ಲ. ಆದರೆ ಅಷ್ಟೊಂದು ಸಂಭಾವನೆ ಬೇಕೆಂದು ಅಲ್ಲಿ ನಾವೇ ಡಿಮ್ಯಾಂಡ್ ಮಾಡಿದರೂ ಅಲ್ಲಿ ಕೊಡುವವರು ಇಲ್ಲ. ಅವರಿಗೂ ಗೊತ್ತು, ಯಾರಿಗೆ ಎಷ್ಟೇಲ್ಲ ಡಿಮ್ಯಾಂಡ್ ಇದೆ, ಎಷ್ಟು ಕೊಡಬೇಕು ಅಂತ. ನಾವು ಕೇಳಿದಷ್ಟನ್ನೇ ಕೊಡುವುದಕ್ಕೂ ಕೂಡ ಬೇರೆ, ಬೇರೆ ನಟಿಯರನ್ನು ಮಾದರಿಯಾಗಿ ತೋರಿಸುತ್ತಾರೆ. ಅವರೇ ಅಷ್ಟೊಂದು ಕಡಿಮೆ ಸಂಭಾವನೆ ಪಡೆಯುವಾಗ, ನೀವ್ಯಾಕೆ ಇಷ್ಟೊಂದು ಕೇಳ್ತೀರಾ ಅಂತಾರೆʼ ಎನ್ನುವ ಮಾತುಗಳ ಮೂಲಕ ಸಂಭಾವನೆ ಹಿಂದಿನ ಗುಟ್ಟು ರಟ್ಟು ಮಾಡಲು ನಿರಾಕರಿಸಿದರು.
ಸಾಮಾನ್ಯವಾಗಿ ಸಿನಿಮಾ ಅಂದಾಕ್ಷಣ, ಒಂದು ಕಲ್ಪನೆಯ ಕಥೆಯನ್ನೋ ಅಥವಾ ನೈಜ ಘಟನೆಯುಳ್ಳ ಕಥೆಯನ್ನೋ ಇಟ್ಟುಕೊಂಡು ಮಾಡುವುದು ಸಹಜ. ಅಂತಹ ಅನೇಕ ಸಿನಿಮಾಗಳು ಗೆಲುವು ಕಂಡಿರುವುದೂ ಉಂಟು. ಇನ್ನೂ ಕೆಲವರು ಒಂದಷ್ಟು ಸುದ್ದಿಯಾದ ಘಟನೆಗಳನ್ನೇ ಇಟ್ಟುಕೊಂಡು ತೆರೆಯ ಮೇಲೆ ತಂದಿದ್ದೂ ಉಂಟು. ಈಗ ರಾಜ್ಯಾದ್ಯಂತ ಸಖತ್‌ವೈರಲ್ ಆಗಿದ್ದ ಒಂದು ವಿಡಿಯೋ ಒಳಗಿನ ವಿಷಯ ಇಟ್ಟುಕೊಂಡೇ ಒಂದು ಕಿರುಚಿತ್ರ ಮಾಡಲಾಗಿದೆ. ಫೆಬ್ರವರಿ 6ರಂದು ಆ ಕಿರುಚಿತ್ರ ಭವಾನಿ ಕ್ಯಾಪ್ಚರ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅದೊಂದು ವಿಶೇಷ ಕಥಾವಸ್ತು ಇರುವ ಕಿರುಚಿತ್ರ. ಆ ಕಾರಣಕ್ಕೆ ಅದು ಸುದ್ದಿಗೆ ಅರ್ಹವಾದ ಕಿರುಚಿತ್ರವೂ ಹೌದು.
ಅಂದಹಾಗೆ, ಆ ಕಿರುಚಿತ್ರಕ್ಕೆ “ಪಬ್ಲಿಕ್ ಟಾಯ್ಲೆಟ್” ಎಂದು ನಾಮಕರಣ ಮಾಡಲಾಗಿದೆ. ಈ ಶೀರ್ಷಿಕೆಗೆ “ತೊಳೆದಷ್ಟೂ ಕೊಳೆ” ಎಂಬ ಅರ್ಥಪೂರ್ಣ ಅಡಿಬರಹವನ್ನೂ ಕೊಡಲಾಗಿದೆ. ಈ ಟೈಟಲ್‌ನಲ್ಲೇ ಒಂದೊಳ್ಳೆಯ ಕಥೆ ಇದೆ, ವ್ಯಥೆಯೂ ಇದೆ ಅನ್ನೋದು ಗೊತ್ತಾಗುತ್ತೆ. ಈ ಕಿರುಚಿತ್ರಕ್ಕೆ ನಾಗೇಶ್ ಹೆಬ್ಬೂರು ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಒಂದು ದಶಕದಿಂದಲೂ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ತಾನೂ ಸ್ವತಂತ್ರ ನಿರ್ದೇಶಕನಾಗಬೇಕು ಎಂಬ ಹಂಬಲದಿಂದಲೇ ಒಂದೊಳ್ಳೆಯ ಕಂಟೆಂಟ್ ಇರುವ ಕಿರುಚಿತ್ರ ನಿರ್ದೇಶಿಸಿ, ಆ ಮೂಲಕ ಸೈ ಎನಿಸಿಕೊಂಡು, ನಿರ್ಮಾಪಕರನ್ನು ಹುಡುಕಿ ಸದಭಿರುಚಿಯ ಸಿನಿಮಾ ಮಾಡುವ ಉದ್ದೇಶ ನಾಗೇಶ್ ಹೆಬ್ಬೂರು ಅವರಿಗಿದೆ. ಅವರ “ಪಬ್ಲಿಕ್‌ಟಾಯ್ಲೆಟ್” ಕುರಿತು ಸ್ವತಃ ಅವರೇ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.
ನಾಗೇಶ್ ಹೆಬ್ಬೂರು, ನಿರ್ದೇಶಕ
“ಇತ್ತೀಚೆಗೆ ಒಂದು ಹೆಣ್ಣು ಮಗಳ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದು ಬೇರೇನೂ ಅಲ್ಲ, ತುಮಕೂರು ಜಿಲ್ಲೆಯಲ್ಲಿ ನಡೆದ ಒಂದು ಘಟನೆಯದು. ಒಂದು ಪಬ್ಲಿಕ್ ಟಾಯ್ಲೆಟ್‌ನಲ್ಲಿ ಮಹಿಳೆಯೊಬ್ಬಳು ಪರಪುರುಷನ ಜೊತೆ ಇರುವ ವೇಳೆ ಅಪರಿಚಿತನೊಬ್ಬ ಮೊಬೈಲ್ ಮೂಲಕ ವಿಡಿಯೋ ಮಾಡಲು ಮುಂದಾದಾಗ, ಆ ಮಹಿಳೆ, “ಯಾಕಣ್ಣಾ…” ಅಂತ ಮುಗ್ಧತೆಯಿಂದಲೇ ಪ್ರಶ್ನಿಸುತ್ತಾಳೆ. ಆ “ಯಾಕಣ್ಣಾ…” ಅನ್ನುವ ಧ್ವನಿಯಲ್ಲಿ ಒಂದು ಮನವಿ ಇತ್ತು. ಆದರೆ, ಆ ವಿಡಿಯೋ ಮಾಡಿದ ಅಪರಿಚಿತ, ತನ್ನ ಕಲ್ಮಶ ಮನಸ್ಸಲ್ಲೇ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಬಿಟ್ಟ. ಗಂಟೆಗಳಲ್ಲೇ ಆ ವಿಡಿಯೋ ತುಂಬಾ ಫೇಮಸ್ ಆಯ್ತು. ಅಷ್ಟೇ ಅಲ್ಲ, ಆ ಮಹಿಳೆ ಹೇಳಿದ “ಯಾಕಣ್ಣಾ..” ಅನ್ನೋ ಪದ ಸಾಕಷ್ಟು ಟಿಕ್‌ಟಾಕ್‌ಗೂ ಬಳಕೆಯಾಯ್ತು. ಆ ಟಿಕ್‌ಟಾಕ್‌ಮೂಲಕ ಹಲವು ಯುವತಿಯರು, ಯುವಕರು ತಮ್ಮ ಖುಷಿಗೆ ಬಳಸಿಕೊಂಡರು.
ಆ ಬಳಿಕ “ಯಾಕಣ್ಣ ರೀಮಿಕ್ಸ್ ಸಾಂಗ್”, “ಯಾಕಣ್ಣ ಡಿಜೆ ಸೌಂಡ್”, “ಯಾಕಣ್ಣ ಅಭಿಮಾನಿಗಳ ಸಂಘ” ಕೂಡ ಆಗುವ ಮೂಲಕ ಆಕೆ ರಾತ್ರೋ ರಾತ್ರಿ ಆಕೆ ಮನೆ ಮಾತಾಗಿಬಿಟ್ಟಳು. ಪಡ್ಡೆಗಳ ಪಾಲಿಗೆ ಆಕೆ ತಮಾಷೆಯ ವಸ್ತುವಾಗಿಬಿಟ್ಟಳು. ಏನಿಲ್ಲವೆಂದರೂ ಆ ವಿಡಿಯೋ ಒಂದು ಕೋಟಿ ವೀಕ್ಷಣೆ ಪಡೆದಿದ್ದೇ ದೊಡ್ಡ ಸುದ್ದಿಯಾಯ್ತು. ಈ ಕಥೆಯ ಹಿಂದೆ ಒಂದು ವ್ಯಥೆಯ ಕಥೆ ಹುಡುಕಿದೆ. ಅಲ್ಲೊಂದು ಮಾನವೀಯತೆಯ ಕಥೆಯ ಎಳೆ ಸಿಕ್ಕಿತು. ಅದನ್ನಿಟ್ಟುಕೊಂಡೇ ಒಂದು ಕಿರುಚಿತ್ರ ಮಾಡಿದ್ದೇನೆ” ಎಂದು ವಿವರ ಕೊಡುತ್ತಾರೆ ನಿರ್ದೇಶಕ ನಾಗೇಶ್ ಹೆಬ್ಬೂರು.
ಆ ಶೌಚಾಲಯದೊಳಗೆ ಪರಪುರುಷನ ಜೊತೆ ಇದ್ದ ಆಕೆಯ ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಗೆ ಆ ಕ್ಷಣಕ್ಕೆ ಖುಷಿಯಾಗಿರಬಹುದು. ತಾನು ಮಾಡಿದ ವಿಡಿಯೋ ವೈರಲ್ ಆಗಿ, ಟಿಕ್‌ಟಾಕ್ ಕೂಡ ಆಗೋಗಿದೆ ಅಂತೆಲ್ಲಾ ಸಂಭ್ರಮ ಪಟ್ಟಿರಬಹುದು. ಆದರೆ, ಆಕೆಯ ಪರಿಸ್ಥಿತಿ ಏನಾಯ್ತು ಎಂಬುದರ ಅರಿವು ಆತನಿಗಿಲ್ಲವಂತಾಯ್ತು. ಆಕೆ ಎಲ್ಲೇ ಸಿಕ್ಕರೂ, ಜನರು ಮಾತನಾಡಿಸಿ, ವಿಡಿಯೋ ಮಾಡುವ ಖಯಾಲಿಗಿಳಿದರು. ಕೊನೆ ಕೊನೆಗೆ ಆಕೆಗೂ ಆ ವಿಡಿಯೋದ ಅರಿವಾಯಿತು. ಆಕೆ ನೊಂದಳು, ಬೆಂದಳು, ಮರುಗಿದಳು, ಕಣ್ಣೀರಾದಳು. ಕಣ್ಣೀರಿಡುತ್ತಲೇ ಆಕೆ ಹೇಳಿದ್ದು, “ನಾನು ಯಾರೋ ಮಾಡದಿರುವ ತಪ್ಪು ಮಾಡಿಲ್ಲ. ಹೊಟ್ಟೆಗಾಗಿ ಮಾಡಿದೆ. ಈಗ ನೋಡಿದರೆ, ಯಾರೋ ವಿಡಿಯೋ ಮಾಡಿ, ತಿನ್ನುವ ಅನ್ನಕ್ಕೂ ಕಲ್ಲುಹಾಕಿದ್ದಾರೆ” ಅಂತ ಮನಕಲಕುವ ಆ ದೃಶ್ಯ ಕೂಡ ವೈರಲ್ ಆಗೋಯ್ತು. ನಾನೂ ಅದನ್ನೆಲ್ಲಾ ನೋಡಿದ್ದರಿಂದ ನನ್ನೊಳಗೊಂದು ಕಥೆ ಹುಟ್ಟುಕೊಂಡಿತು.
ಆಕೆಯ ವಿಡಿಯೋ ಮಾಡಿದ ವ್ಯಕ್ತಿ ಆಕೆಯ ಗೋಳು ನೋಡಿದ ಮೇಲೆ ಹೇಗೆಲ್ಲಾ ಪಶ್ಚಾತ್ತಾಪ ಪಟ್ಟಿರಬಹುದು ಅನ್ನುವುದನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದು ಆಕೆಯ ಕಥೆಯಂತೂ ಅಲ್ಲ. ಇಡೀ ಕಥೆಯಲ್ಲಿ ಅವಳಿಗೆ ಕ್ಯಾಮೆರಾವನ್ನೂ ಹಿಡಿದಿಲ್ಲ. ಆದರೆ, ಅವಳಿಗೆ ಮೊಬೈಲ್ ಕ್ಯಾಮೆರಾ ಹಿಡಿದವನ ಮೇಲೆ ಕ್ಯಾಮೆರಾ ಹಿಡಿಯಲಾಗಿದೆ. ಅವನು ಯಾರೂ ಅನ್ನೋದೇ ಜಗತ್ತಿಗೆ ಗೊತ್ತಿಲ್ಲ. ಅವನು ಯಾಕೆ ಆ ವಿಡಿಯೋ ಮಾಡಿ ಹರಿಬಿಟ್ಟ, ಆ ಕ್ಷಣಕ್ಕೆ ಮಾಡಿದನಾದರೂ ಆಮೇಲೆ ಅವನ ಮನಸ್ಥಿತಿ ಹೇಗಿರಬಹುದು ಅನ್ನೋದು ಕಥೆ. ಎಲ್ಲರಿಗೂ ಗೊತ್ತಿರುವ ಕಥೆಯನ್ನು ಗೊತ್ತಿರದ ದೃಷ್ಟಿಕೋನದಲ್ಲಿ ಮಾಡಲಾಗಿದೆ” ಎಂಬುದು ಅವರ ಮಾತು.
ಇಷ್ಟಕ್ಕೂ ನಾನು ಈ ಕಥೆ ಆಯ್ಕೆ ಮಾಡಿಕೊಳ್ಳೋಕೆ ಕಾರಣ, ನಾನೊಬ್ಬ ನಿರ್ದೇಶಕನಾಗಬೇಕು. ನಾನು ಏನು ಅಂತ ಸಾಬೀತುಪಡಿಸಿಕೊಳ್ಳಬೇಕು ಅನ್ನೋದು. ನಾನೀಗ ಕೈಗೆತ್ತಿಕೊಂಡ ಸಬ್ಜೆಕ್ಟ್ ಮೇಲೆ ವಿಶ್ವಾಸವಿದೆ. ಗೊತ್ತಿರುವ ಕಂಟೆಂಟ್ ಅನ್ನು ಹೇಗೆ ತೋರಿಸ್ತಾರೆ. ಆಕೆಯನ್ನು ತೋರಿಸದೆ, ಹೇಗೆ ಮಾಡಬಹುದು. ನಾನು ಸಾಬೀತುಪಡಿಸಿಕೊಳ್ಳೋಕೆ ಈ ಕಥೆ ಚೆನ್ನಾಗಿದೆ ಅನಿಸಿತು. ನಾನು ಮೇಕಿಂಗ್‌ನಲ್ಲಿ ಎಲ್ಲೂ ಕಾಂಪ್ರಮೈಸ್ ಆಗಲಿಲ್ಲ. ರಿಯಲ್ ಪಾತ್ರದಂತೇ ಇರುವ ಒಬ್ಬ ಜೂನಿಯರ್ ಅರ್ಟಿಸ್ಟ್ ಪವಿ ಎಂಬುವವರನ್ನು ಕರೆಸಿ, ಕ್ಯಾಮೆರಾ ಮುಂದೆ ನಿಲ್ಲಿಸಿ ಚಿತ್ರೀಕರಿಸಲಾಗಿದೆ. ಆಕೆ ಆ ಪಾತ್ರ ಮಾಡುವ ಮುನ್ನ, ರಿಯಲ್ ಹೆಣ್ಣುಮಗಳ ಕಥೆ ವ್ಯಥೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕುರಿತು ತೋರಿಸಿದ ಬಳಿಕ ಪವಿ ನಾನು ಮಾಡ್ತೀನಿ ಅಂತ ಒಪ್ಪಿದರು. ಇನ್ನು, ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್ ಸಂಕಲನ ಮಾಡಿದ್ದಾರೆ.
ಹರ್ಷವರ್ಧನ್ ಸಂಗೀತವಿದೆ. ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕಾಣಿ ಸ್ಟುಡಿಯೋದವರು ಪೋಸ್ಟರ್ ಡಿಸೈನ್ ಮಾಡಿಕೊಟ್ಟಿದ್ದಾರೆ. ಇವರೆಲ್ಲರೂ ನನ್ನ ಪ್ರೀತಿಗಾಗಿ ಕೆಲಸ ಮಾಡಿದ್ದಾರೆ. ಇನ್ನು, ರಂಗಭೂಮಿ ಪ್ರತಿಭೆ ಶ್ವೇತಾ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “{ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ, ಸೇರಿದಂತೆ ಇತರರು ಸಾಥ್ ನೀಡಿದ್ದಾರೆ. ಇಲ್ಲಿ ಪ್ರಮುಖ ಪಾತ್ರವೊಂದಿದೆ. ಅದನ್ನು ಕಿರುಚಿತ್ರದಲ್ಲೇ ನೋಡಬೇಕು. ಇಡೀ ಕಿರುಚಿತ್ರವನ್ನು ಐದು ದಿನಗಳ ಕಾಲ ಚಿತ್ರೀಕರಿಸಿದ್ದು, ನಾಗರಭಾವಿಯಲ್ಲಿರುವ ಮಾಳಗಾಳ ಗ್ರಾಮದಲ್ಲಿ ಶೂಟಿಂಗ್ ನಡೆಸಲಾಗಿದೆ. ಅಲ್ಲೊಂದು ಆಲದ ಮರವಿದೆ. ಬಂಡೆ ಮಾರಮ್ಮ ಬಸ್‌ಸ್ಟಾಪ್ ಬಳಿ ಇರುವ ಟಾಯ್ಲೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ನಾನು ಈ ಕಿರುಚಿತ್ರ ಮಾಡಲು ಹೊರಟಾಗ ಜೇಬಲ್ಲಿ ಕೇವಲ ನಾಲ್ಕು ಸಾವಿರ ಮಾತ್ರ ಹಣವಿತ್ತು. ನನ್ನ ಕಥೆ ಕೇಳಿದ ರಘುನಿಡುವಳ್ಳಿ, ಒಬ್ಬ ಬಳಿ ಕರೆದುಕೊಂಡು ಹೋದರು. ಅವರು ಕೂಡ ಮಹಿಳಾ ಪ್ರಧಾನ ಕಥೆ ಆಧರಿತ ಕಿರುಚಿತ್ರ ಮಾಡುವ ಉದ್ದೇಶ ಹೊಂದಿದ್ದರು. ಅವರಿಗೆ ಕಥೆ ಇಷ್ಟವಾಯ್ತು. ಈ ಕಿರುಚಿತ್ರವನ್ನು ಸಿನಿಮಾ ರೇಂಜ್‌ನಲ್ಲೇ ಮಾಡಿದರು. ಒಂದು ಸೂಕ್ಷ್ಮ ವಿಷಯ ಇಟ್ಟುಕೊಂಡೇ ಕಿರುಚಿತ್ರ ಮಾಡಿದ್ದೇನೆ. ಇಷ್ಟರಲ್ಲೇ ಒಂದು ಟೀಸರ್ ಬಿಡುಗಡೆಯಾಗಲಿದೆ. ನಂತರ ಕಿರುಚಿತ್ರ ಬಿಡುಗಡೆಯಾಗಲಿದೆ. ಜನರು ಟೀಸರ್ ನೋಡಿ ನನ್ನನ್ನು ಬೈಕೋಬಹುದು. ಆದರೆ, ಕಿರುಚಿತ್ರ ನೋಡಿದಾಗ, ನನ್ನ ಪ್ರಯತ್ನ ಏನು, ಯಾವ ವಿಷಯ ಹೇಳಲು ಹೊರಟಿದ್ದೇನೆ ಅನ್ನೋದು ಗೊತ್ತಾಗುತ್ತೆ ಅನ್ನುತ್ತಾರೆ ನಾಗೇಶ್ ಹೆಬ್ಬೂರು.
ಡಾ.ರಾಜಕುಮಾರ್ ಕಲಾ ಬದುಕಿನ ಮುಖ್ಯ ವಿನ್ಯಾಸಕಾರರೊಲ್ಲಬ್ಬರು ಅಂದರೆ ಅದು ಅವರ ಪ್ರೀತಿಯ ಸಹೋದರ ಎಸ್.ಪಿ.ವರದರಾಜು. ಅವರೊಬ್ಬ ನಿರ್ಮಾಪಕರೂ ಹೌದು. ವೃತ್ತಿರಂಗಭೂಮಿ ಪ್ರತಿಭೆಯಾದ ಅವರಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಸಂದಿದೆ. ವರದಪ್ಪನವರ ಅಗಲಿಕೆಯ ನಂತರ ಅವರ ಹೆಸರಿನಲ್ಲಿ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರಿಗೆ ಪ್ರಶಸ್ತಿ ಕೊಡಲಾಗುತ್ತಿದೆ.
ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ
ಅಂತೆಯೇ ಈ ಬಾರಿಯೂ ಕೂಡ ರಂಗಭೂಮಿಯಿಂದ ಕುಕನೂರು ಬಾಬಣ್ಣ ಮತ್ತು ಸಿನಿಮಾ ಕ್ಷೇತ್ರದಿಂದ ಸುರೇಖಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 13ರ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ನಟರಾದ ಶಿವರಾಜ್‌ಕುಮಾರ್, ಪುನೀತ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಾಹಿತಿ ಮತ್ತು ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ಆಶಯ ಮಾತುಗಳನ್ನಾಡಲಿದ್ದಾರೆ. ನಟ ದೊಡ್ಡಣ್ಣ ಮತ್ತು ನಟಿ ಸುಧಾರಾಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂಬುದು ವಿಶೇಷ.
ಕುಕನೂರು ಬಾಬಣ್ಣ – ಸುರೇಖಾ
ಡಾ.ರಾಜ್‌ಕುಮಾರ್ ಅವರ ಕಿರಿಯ ಸಹೋದರ ವರದರಾಜು ಅವರಿಗೆ ಸಿನಿಮಾದ ವಿವಿಧ ವಿಭಾಗಗಳಲ್ಲಿ ಅಪಾರ ಪರಿಣತಿಯಿತ್ತು. ರಾಜ್ ಅವರಂತೆಯೇ ಅವರು ಕೂಡ ವೃತ್ತಿರಂಗಭೂಮಿಯ ಬದುಕಲ್ಲಿ ಬೆರೆತು ಬೆಳೆದವರು. ರಂಗಭೂಮಿ ಮೇಲೆ ಮತ್ತು ತೆರೆಯ ಹಿಂದೆ ಸಮಾನ ಕ್ರಿಯಾಶೀಲತೆ ಮೂಲಕವೇ ಸದಭಿರುಚಿಯನ್ನು ಕಟ್ಟುವ ಪ್ರಬುದ್ಧ ಸಾಂಸ್ಕೃತಿಕ ಪ್ರೇರಕರಾದರು ವರದಪ್ಪ. ಡಾ.ರಾಜ್ ಚಿತ್ರರಂಗ ಪ್ರವೇಶ ಮಾಡಿ ಪ್ರಸಿದ್ಧರಾದ ಮೇಲೆ ಕಥೆ ಆಯ್ಕೆ, ಚಿತ್ರಕಥೆಯ ಚರ್ಚೆ ಮತ್ತು ಚಿತ್ರದ ಒಟ್ಟು ವಿನ್ಯಾಸಕ್ಕೆ ಒತ್ತಾಸೆಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ನೇಪಥ್ಯದ ನೆರವು ನೀಡಿದರು.
ಪಾರ್ವತಮ್ಮನವರು ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿದ ಮೇಲೆ ಆ ಸಂಸ್ಥೆಯಿಂದ ನಿರ್ಮಾಣಗೊಂಡ ಎಲ್ಲ ಚಿತ್ರಗಳ ವಸ್ತು ವಿನ್ಯಾಸದ ಪ್ರಮುಖ ಶಕ್ತಿಯಾಗಿದ್ದರು ವರದಪ್ಪ. ವರದಪ್ಪ ಪಾಲುದಾರಿಕೆಯಲ್ಲಿ ನಿರ್ಮಿಸಿದ ಚಿತ್ರಗಳು ಸಹ ಕನ್ನಡ ಚಿತ್ರರಂಗದ ಮೌಲ್ಯಕ್ಕೆ ಕಾರಣವಾಗಿವೆ. ವರದಪ್ಪ 2006ರ ಫೆಬ್ರವರಿ 8ರಂದು ಅಗಲಿದರು. ಅಲ್ಲಿಂದ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 28 ಸಾಧಕರಿಗೆ ಎಸ್.ಪಿ.ವರದರಾಜು ಪ್ರಶಸ್ತಿ ಸಂದಿದೆ ಎಂಬುದು ವಿಶೇಷತೆಗಳಲ್ಲೊಂದು.
ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸುದ್ದಿಯಲ್ಲಿರುವ ಹುಡುಗಿ. ಕನ್ನಡದ ಈ ಹುಡುಗಿ ಕನ್ನಡ ಚಿತ್ರರಂಗದ ಮೂಲಕ ಇದೀಗ ಇಡೀ ಭಾರತ ಚಿತ್ರರಂಗದಲ್ಲೇ ಒಂದು ರೌಂಡ್ ಸುತ್ತಿದ್ದಾರೆ. ಹೌದು, ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್ ಜೊತೆಗೆ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಸಖತ್ ಸೌಂಡ್ ಮಾಡುತ್ತಿದ್ದಾರೆ. “ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಕನ್ನಡ ಸಿನಿಲೋಕಕ್ಕೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಅಂದರೆ ತಪ್ಪಿಲ್ಲ. ಇವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.
ಅದರಲ್ಲೂ ಪಡ್ಡೆಗಳಿಗೆ ಹಾಟ್ ಫೇವರೇಟ್ ಈ ಕೊಡಗಿನ ಬೆಡಗಿ. ಗೀತಾ, ಸಾನ್ವಿ, ಖುಷಿ… ಹೀಗೆ ಇವರ ಪಾತ್ರಗಳು ತಮ್ಮ ಸಿನಿಬದುಕಿನ ದಿಕ್ಕನ್ನೇ ಬದಲಿಸಿದ್ದು ನಿಜ. ಮೆಲ್ಲನೆ, ಸ್ಟಾರ್ ನಟರ ಜೊತೆಯಲ್ಲೇ ಪರದೆ ಮೇಲೆ ರಾರಾಜಿಸುವ ಅವಕಾಶ ಪಡೆದು ಸೈ ಎನಿಸಿಕೊಂಡಿರುವ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಒಂದಷ್ಟು ಸೌಂಡು ಮಾಡೋಕೆ ಹೊರಟಿದ್ದಾರೆ. ಅಂದಹಾಗೆ, ಫೆಬ್ರವರಿ ೧೯ರಂದು ಧ್ರುವಸರ್ಜಾ ಅಭಿನಯದ “ಪೊಗರು” ರಿಲೀಸ್ ಆಗುತ್ತಿದೆ.
ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಹಾಗೆ ನೋಡಿದರೆ, ಈ ಚಿತ್ರ, ಲಾಕ್ ಡೌನ್ ಮುಂಚೆಯೇ ಬಿಡುಗಡೆಯಾಗಬೇಕಿತ್ತು. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಚಿತ್ರ ತಡವಾಗಿದ್ದು, ಈಗ ಬಿಡುಗಡೆಗೆ ದಿನ ಎಣಿಸುತ್ತಿದೆ ಚಿತ್ರತಂಡ. ಅಂದಹಾಗೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಟೀಚರ್ ಪಾತ್ರ ಮಾಡಿದ್ದಾರೆ. ಅದೊಂದು ಹಳ್ಳಿ ಹುಡುಗಿಯಾಗಿ, ಟ್ರೆಡಿಶನಲ್ ಲುಕ್ನಲ್ಲಿ ತೆರೆ ಮೇಲೆ ಕಾಣಿಸ್ಕೊತಿದ್ದಾರೆ.
ಪುರೋಹಿತರ ಮಗಳಾಗಿ ನಟಿಸುತ್ತಿರುವ ಅವರು, ಒಂದು ಪ್ರೀತಿಗೆ ಸಿಲುಕುತ್ತಾರೆ. ನಂತರ ಅವರಿಗೆ ಆಗುವಂತಹ ಸಮಸ್ಯೆ ಏನು ಎಂಬುದೇ ಚಿತ್ರದ ಕಥಾಹಂದರ. ಸದ್ಯಕ್ಕೆ ಜೋರು ಸುದ್ದಿಯಲ್ಲಿರುವ ರಶ್ಮಿಕಾ ಅವರಿಗೂ “ಪೊಗರು” ಮೇಲೆ ಎಲ್ಲಿಲ್ಲದ ಭರವಸೆ ಇದೆ. ಸಿನಿಮಾ ದೊಡ್ಡ ಹಿಟ್ ಕೊಡುತ್ತದೆ ಎಂಬ ವಿಶ್ವಾಸವೂ ಅವರಿಗಿದೆ. ಇನ್ನು, ಅವರಿಗೆ ಹೊಸ ತಂಡದವರ ಜೊತೆ ಕೆಲಸ ಮಾಡುವುದು ಸಿಕ್ಕಾಪಟ್ಟೆ ಖುಷಿಯಂತೆ. “ಪೊಗರು” ಚಿತ್ರದಲ್ಲಿ ಸಾಕಷ್ಟು ಕಲಿತ ಬಗ್ಗೆ ಹೇಳುವ ರಶ್ಮಿಕಾ ಮಂದಣ್ಣ, ಒಂದೊಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಹೆಮ್ಮೆ ನನ್ನದು ಎನ್ನುತ್ತಾರೆ.
ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಪೈಕಿ “ಡಾ. |ಅಭಿ ೦೦7” ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನ್ನು, ಧ್ರುವ ಸರ್ಜಾ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಅಂದಹಾಗೆ, ಈ ಚಿತ್ರಕ್ಕೆ ವಿಷ್ಣು ಹೀರೋ. ಈ ಚಿತ್ರದ ಮೂಲಕ ವಿಷ್ಣು ಅವರು ಪೂರ್ಣ ಪ್ರಮಾಣದ ಹೀರೋ ಆಗಿ ಸಿನಿರಂಗ ಪ್ರವೇಶಿಸಿದ್ದಾರೆ. ಈ ಹಿಂದೆ ದರ್ಶನ್ ಅಭಿನಯದ “ಜಗ್ಗುದಾದಾ” ಚಿತ್ರದಲ್ಲಿ ವಿಷ್ಣು ಕಾಣಿಸಿಕೊಂಡಿದ್ದರು. ಡಾಕ್ಟರ್ ಆಗಿರುವ ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಕೆಲವು ವೆಬ್‌ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇವರಿಗಿದೆ. ಇದು ವೆಂಕಟೇಶ್ ಪ್ರಸಾದ್‌ಅವರ ಮೊದಲ ನಿರ್ದೇಶನದ ಚಿತ್ರ.
ಅಂದಹಾಗೆ, ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಯು.ವಿ. ಸ್ಟೆವೆನ್ ಸತೀಶ್ ಸಂಗೀತ ನೀಡಲಿದ್ದಾರೆ. ಚೇತನ್ ಕುಮಾರ್ ಸಾಹಿತ್ಯವಿದೆ. ಇನ್ ಫೆಂಟ್ ಭರತ್ ಕ್ಯಾಮೆರಾ ಹಿಡಿದರೆ, ಅರುಣ್ ರೈ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
https://youtu.be/D_HaTi_z_y8
ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಡಾ. ಸುಮಿತ್ ತಲ್ವಾರ್ ಇತರರು ಇದ್ದಾರೆ. ಈಗಾಗಲೇ 35 ದಿನಗಳ ಕಾಲ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15 ದಿನಗಳ ಚಿತ್ರೀಕರಣ ಬಾಕಿಯಿದೆ.
ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ ಅಂದರೆ ಅದು ʼಬಿಗ್‌ಬಾಸ್”…
ಹೌದು, ಯಾರಿಗೆ ತಾನೇ ಆ ದೊಡ್ಡ ಮನೆಯ ಸುದ್ದಿಯನ್ನು ಇಷ್ಟಪಡಲ್ಲ ಹೇಳಿ. ಅದರಲ್ಲೂ ಆ ಮನೆಯೊಳಗೆ ಈ ಬಾರಿ ಯಾರೆಲ್ಲ ಹೋಗ್ತಾರೆ ಅನ್ನುವ ಕುತೂಹಲ ಸಾಕಷ್ಟು ಇದೆ. ಆದರೂ, ಬಿಗ್‌ಬಾಸ್ ಮನೆಗೆ ಹೋಗಲು ತುದಿಗಾಲ ಮೇಲೆ ನಿಂತವರ ಸಾಲು ದೊಡ್ಡದೇ ಇದೆ. ಅದೇನೆ ಇದ್ದರೂ, ಸುದೀಪ್ ಕೈಯಲ್ಲಿ ಈಗಾಗಲೇ ಯಾರೆಲ್ಲಾ ಆ ಮನೆಗೆ ಪ್ರವೇಶಿಸುತ್ತಾರೆ ಅನ್ನೋ ಒಂದು ಪಟ್ಟಿಯೂ ಇದೆ ಎಂಬ ಸುದ್ದಿ ಇದೆ.
ಬಿಗ್‌ಬಾಸ್ ಆಯೋಜಕರು ಈಗಾಗಲೇ ಒಂದು ಪಟ್ಟಿ ರೆಡಿ ಮಾಡಿ ಇನ್ನೇನು ಶುರು ಮಾಡಲು ತಯಾರಾಗಿದ್ದಾರೆ. ಈ ಬಾರಿ ಕಾಮನ್ ಮ್ಯಾನ್ ಇರೋದಿಲ್ಲ ಎಂಬ ಮಾತು ಕೇಳಿಬಂದಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸತ್ಯ ಅನ್ನುವುದನ್ನು ಬಿಗ್‌ಬಾಸ್ ಮನೆಯಲ್ಲಿ ಕಾಣುವ ಸ್ಪರ್ಧಿಗಳ ಮೇಲೆ ನಿರ್ಧಾರವಾಗಿದೆ. ಅದೆಲ್ಲಾ ಸರಿ, ಈಗ ಬಿಗ್‌ಬಾಸ್ ಕಥೆ ಬಗ್ಗೆ ಹೇಳೋಕೆ ಕಾರಣ, ಕಿರುತೆರೆಯಲ್ಲಿ ಸುದ್ದಿ ಮಾಡಿರುವ ನಟಿ ವೈಷ್ಣವಿಗೌಡ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.
ಈಗಾಗಲೇ ಬಿಗ್‌ಬಾಸ್ ಮನೆಗೆ ಹೋಗುವ ಸ್ಪರ್ಧಿಗಳ ಹೆಸರು ಆ ಪಟ್ಟಿಯಲ್ಲಿದೆ. ವೈಷ್ಣವಿ ಹೆಸರೂ ಕೂಡ ಸೇರಿದೆ ಎಂಬುದೇ ಈ ಹೊತ್ತಿನ ಸುದ್ದಿ. ಆದರೆ, ನಿಜವಾಗಿಯೂ ವೈಷ್ಣವಿಗೌಡ ಬಿಗ್‌ಬಾಸ್ ಮನೆಗೆ ಬಲಗಾಲಿಟ್ಟು ಪ್ರವೇಶ ಮಾಡುತ್ತಾರಾ? ಈ ಕುರಿತಂತೆ ಸಾಕಷ್ಟು ಪ್ರಶ್ನೆಗಳಿವೆಯಾದರೂ, ಸ್ವತಃ ವೈಷ್ಣವಿಗೌಡ ಅವರೇ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಒಂದಷ್ಟು ಸುದ್ದಿಗಳು ಹರಿದಾಡಿದ್ದೇ ತಡ, ವೈಷ್ಣವಿ ಗೌಡ, ತಮ್ಮ ಟ್ವೀಟ್‌ನಲ್ಲಿ ನನಗೂ ಬಿಗ್‌ಬಾಸ್ ಮನೆಗೆ ಹೋಗಲು ಆಪರ್ ಬಂದಿತ್ತು. ಆದರೆ, ನಾನು ಹೋಗುತ್ತಿಲ್ಲ. ನನ್ನ ಕೈಯಲ್ಲಿ ಒಂದಷ್ಟು ಚಿತ್ರಗಳಿವೆ” ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ವೈಷ್ಣವಿಗೌಡ ಬಿಗ್‌ಬಾಸ್ ಮನೆಯ ಪ್ರವೇಶದ ವಿಷಯ ಪಕ್ಕಕ್ಕೆ ಸರಿದಂತಾಗಿದೆ.
– ಅರೇ ಇದೇನಪ್ಪಾ ಶ್ರದ್ಧಾ ಕಪೂರ್ ಮದ್ವೆ ಆಯ್ತಾ?
ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಸಿನಿಮಾ ನಟಿಮಣಿಗಳು ಅಂದರೆ, ಒಂದಷ್ಟು ಗಾಸಿಪ್ ಇರದೇ ಇದ್ದರೆ ಹೇಗೆ. ಇದೂ ಕೂಡ ಅಂಥದ್ದೇ ಒಂದು ಸುದ್ದಿ. ಹೌದು, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇದಾರಲ್ಲ, ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಪಡ್ಡೆ ಹುಡುಗರ ಹಾಟ್ ಫೇವರೇಟ್. ಸಾಲು ಸಾಲು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಈ ನಟಿಗೆ ಸಾಕಷ್ಟು ಹುಡುಗರೇ ಫ್ಯಾನ್ಸ್ ಇದ್ದಾರೆ.
ನಟ ವರುಣ್ ಧವನ್ ಮದುವೆಯಾದ ಬೆನ್ನಲ್ಲೇ ಈಗ ಶ್ರದ್ಧಾ ಕಪೂರ್ ವಿವಾಹದ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ. ಹೌದು ಹೆಚ್ಚಿನ ಬಾಲಿವುಡ್ ನಟಿಮಣಿಯರು ಮದುವೆಯಾಗ್ತಿದ್ದಾರೆ, ನಾನು ಮದುವೆಯ ವಿಚಾರದಲ್ಲಿ ಪಕ್ಕಾ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಈ ನಟಿ ರೋಹನ್ ಶ್ರೇಷ್ಠ ಛಾಯಾಗ್ರಾಫರ್ ಒಬ್ಬರ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುಳಿವು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ಮದುವೆ ಸುದ್ದಿಯೂ ಹರಡಿದೆ. ಅದಕ್ಕಾಗಿ ಶ್ರದ್ಧಾ ಕಪೂರ್ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಇವೆಲ್ಲದ ಜೊತೆಗೆ ಶ್ರದ್ಧಾ ಕಪೂರ್ ತನ್ನ ಇನ್ಸ್ಟಾಗ್ರಾಂನಲ್ಲಿ ಒಂದಷ್ಟು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಸಿನಿಮಾ ಜಗತ್ತಿನಲ್ಲಿ ಮಿಂಚಿದ್ದ ನಟಿ ಮಹಾಲಕ್ಷ್ಮಿ ಈಗ ಮತ್ತೆ ಸಿನಿಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ಇದೊಂದು ವಿಶೇಷ ಸುದ್ದಿಯೇ. ಒಂದು ದಶಕದ ಕಾಲ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಾಗಿ ಸುಮ್ಮನಾದ ಅದ್ಭುತ ನಟಿ ಇವರು. ನಿರ್ದೇಶಕ ರವಿ ಶ್ರೀವತ್ಸ ಅವರು ಹಿರಿಯ ನಟಿ ಮಹಾಲಕ್ಷ್ಮಿ ಅವರನ್ನು ಕನ್ನಡಕ್ಕೆ ಪುನಃ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ನಿಜವೂ ಹೌದು. ಹಲವು ವರ್ಷಗಳ ಬಳಿಕ ಮಹಾಲಕ್ಷ್ಮಿ ಇದೀಗ, ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಂಬುದು ಸುದ್ದಿ.
ಮಹಾಲಕ್ಷ್ಮಿ ಅಂದಾಕ್ಷಣ, ಸದಾ ಕಣ್ಣೀರಿಡುವ, ಎಲ್ಲರನ್ನೂ ಕಾಡುವ ನಟಿಯ ಛಾಯೆ ಕಣ್ಮುಂದೆ ಬರುತ್ತದೆ. “ಬಾರೆ ಮುದ್ದಿನ ರಾಣಿ”, “ಸ್ವಾಭಿಮಾನ”, “ಮದುವೆ ಮಾಡು ತಮಾಷೆ ನೋಡು”, “ತಾಯಿ ಕೊಟ್ಟ ತಾಳಿ”, “ಜಯಸಿಂಹ”, “ಬ್ರಹ್ಮ ವಿಷ್ಣು ಮಹೇಶ್ವರ”, “ಪರಶುರಾಮ”, “ಹೆಂಡ್ತೀಗೆ ಹೇಳ್ಬೇಡಿ”, “ಮನೇಲಿ ಇಲಿ ಬೀದಿಲಿ ಹುಲಿ” ಸೇರಿದಂತೆ ಒಂದಷ್ಟು ಸಿನಿಮಾಗಳು ಜನಮನಸೂರೆಗೊಂಡಿದ್ದವು.
ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲೇ ಯಶಸ್ವಿ ನಟಿ ಎನಿಸಿಕೊಂಡ ಮಹಾಲಕ್ಷ್ಮಿ, ಉತ್ತುಂಗದ ಕಾಲದಲ್ಲಿರುವಾಗಲೇ ಚಿತ್ರರಂಗದಿಂದ ಸ್ವಲ್ಪ ದೂರವಾದರು. “ದುರ್ಗಾಷ್ಟಮಿ” ಬಳಿಕ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬಹುತೇಕರಿಗೆ ಮಹಾಲಕ್ಷ್ಮಿ ಅವರ ಸುದ್ದಿಯೇ ಇರಲಿಲ್ಲ. ಅವರ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದರು. ಇದೀಗ ಅವರು ಪುನಃ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡುವ ಸುದ್ದಿ ತಿಳಿದು ಹಿರಿಹಿರಿ ಹಿಗ್ಗುತ್ತಿದ್ದಾರೆ. ಇಷ್ಟು ವರ್ಷ ಮನೆ, ಮಕ್ಕಳು ಅಂತ ಬಿಝಿಯಾಗಿದ್ದರು. ಆ ಕುರಿತಂತೆ ಅವರೇ ಹೇಳಿದ್ದು “ಫ್ಯಾಮಿಲಿಗೋಸ್ಕರ ಕೆಲಸ ಅಂತ ಮಾಡಲೇಬೇಕು. ಇದರಿಂದ ಜವಾಬ್ದಾರಿ ಹೆಚ್ಚಾಗುತ್ತೆ, ಮಕ್ಕಳು ಬೆಳೆದಿದ್ದಾರೆ. ನನ್ನ ಉತ್ಸಾಹ ಹಾಗೆಯೇ ಇದೆ” ಅಂತ ಹೇಳಿಕೊಂಡಿದ್ದೂ ಉಂಟು. ಅದೇನೆ ಇರಲಿ, ಇದೀಗ ಮಹಾಲಕ್ಷ್ಮೀ ಅವರು ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಆದಷ್ಟು ಬೇಗ ಅವರು ತೆರೆಗೆ ಬರುವಂತಾಗಲಿ ಅನ್ನೋದು ಕೂಡ “ಸಿನಿಲಹರಿ” ಹಾರೈಕೆ.
ಕಿರುತೆರೆ ಮೂಲಕ ಜೋರು ಸುದ್ದಿಯಾಗಿರುವ ರಂಜಿನಿ ರಾಘವನ್, ಈಗಂತೂ ಸದಾ ಸುದ್ದಿಯಲ್ಲೇ ಇರುತ್ತಾರೆ. ಸದ್ಯಕ್ಕೆ “ಕನ್ನಡತಿ” ಧಾರಾವಾಹಿಯ ಆಕರ್ಷಣೆ ಎನಿಸಿರುವ ರಂಜಿನಿ ರಾಘವನ್, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ದಿಗಂತ್ ಜೊತೆ ಜೋಡಿಯಾಗಿರುವ ರಂಜಿನಿಯ ಆ ಚಿತ್ರವೀಗ ಮುಗಿದಿದ್ದು, ಬಿಡುಗಡೆಯ ತಯಾರಿಯಲ್ಲಿದೆ. ಸದ್ಯಕ್ಕೆ ರಂಜಿನಿಯಂತೂ ಕಿರುತೆರೆ, ಹಿರಿತೆರೆಯಲ್ಲಿ ಸದಾ ಸುದ್ದಿಯಾಗುತ್ತಲೇ ಇದ್ದಾರೆ. ಅಪ್ಪಟ ಕನ್ನಡತಿಯಾಗಿರುವ ರಂಜಿನಿ, ಸದ್ಯ ಕೆಂಪು ಕೆಂಪಾಗಿದ್ದಾರೆ!
ಅರೇ, ಇದೇನಪ್ಪಾ ಕೆಂಪು ಕೆಂಪಾಗಿದ್ದಾರೆ ಅಂತೆಲ್ಲಾ ಮಾತುಗಳು ಕೇಳಿಬರುತ್ತಿದೆ ಎಂಬ ಪ್ರಶ್ನೆ ಎದುರಾಗಬಹುದು. ಕೆಂಪೆಂದರೆ, ಕೆಂಪಲ್ಲ. ಆವರು ರೆಡ್ ಕಲರ್ ಟಾಪ್ ಹಾಕ್ಕೊಂಡ್ ಹಾಗೊಂದು ಫೋಸು ಕೊಟ್ಟಿರುವ ಫೋಟೋ ಸಖತ್ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೇನು ವ್ಯಾಲಂಟೈನ್ಸ್ ಡೇ ಕೂಡ ಹತ್ತಿರ ಬರುತ್ತಿದೆ. ಅವರ ಈ ರೆಡ್ ಟಾಪ್ ಫೋಸ್ ನೋಡಿದರೆ ಲವರ್ಸ್ ಡೇಯನ್ನು ಸಖತ್ ಆಗಿಯೇ ಸ್ವಾಗತಿಸಲು ಸಜ್ಜಾದಂತಿದೆ. ಅದೇನೆ ಇರಲಿ, ರಂಜಿನಿ ಈಗ ಪಡ್ಡೆ ಹುಡುಗರ ಹಾಟ್‌ಫೇವರೇಟ್ ಅನ್ನೋದಂತೂ ಹೌದು.