ಕನ್ನಡಕ್ಕೆ ಮತ್ತೆ ಮಹಾಲಕ್ಷ್ಮೀ ಕೃಪೆ

ದಶಕಗಳ ಬಳಿಕ ಕನ್ನಡಕ್ಕೆ ಬರಲಿರುವ ಸ್ವಾಭಿಮಾನದ ಹೆಣ್ಣು

ಒಂದು ಕಾಲದಲ್ಲಿ ಸಿನಿಮಾ ಜಗತ್ತಿನಲ್ಲಿ ಮಿಂಚಿದ್ದ ನಟಿ ಮಹಾಲಕ್ಷ್ಮಿ ಈಗ ಮತ್ತೆ ಸಿನಿಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ಇದೊಂದು ವಿಶೇಷ ಸುದ್ದಿಯೇ. ಒಂದು ದಶಕದ ಕಾಲ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಾಗಿ ಸುಮ್ಮನಾದ ಅದ್ಭುತ ನಟಿ ಇವರು. ನಿರ್ದೇಶಕ ರವಿ ಶ್ರೀವತ್ಸ ಅವರು ಹಿರಿಯ ನಟಿ ಮಹಾಲಕ್ಷ್ಮಿ ಅವರನ್ನು ಕನ್ನಡಕ್ಕೆ ಪುನಃ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ನಿಜವೂ ಹೌದು. ಹಲವು ವರ್ಷಗಳ ಬಳಿಕ ಮಹಾಲಕ್ಷ್ಮಿ ಇದೀಗ, ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಂಬುದು ಸುದ್ದಿ.

ಮಹಾಲಕ್ಷ್ಮಿ ಅಂದಾಕ್ಷಣ, ಸದಾ ಕಣ್ಣೀರಿಡುವ, ಎಲ್ಲರನ್ನೂ ಕಾಡುವ ನಟಿಯ ಛಾಯೆ ಕಣ್ಮುಂದೆ ಬರುತ್ತದೆ. “ಬಾರೆ ಮುದ್ದಿನ ರಾಣಿ”, “ಸ್ವಾಭಿಮಾನ”, “ಮದುವೆ ಮಾಡು ತಮಾಷೆ ನೋಡು”, “ತಾಯಿ ಕೊಟ್ಟ ತಾಳಿ”, “ಜಯಸಿಂಹ”, “ಬ್ರಹ್ಮ ವಿಷ್ಣು ಮಹೇಶ್ವರ”, “ಪರಶುರಾಮ”, “ಹೆಂಡ್ತೀಗೆ ಹೇಳ್ಬೇಡಿ”, “ಮನೇಲಿ ಇಲಿ ಬೀದಿಲಿ ಹುಲಿ” ಸೇರಿದಂತೆ ಒಂದಷ್ಟು ಸಿನಿಮಾಗಳು ಜನಮನಸೂರೆಗೊಂಡಿದ್ದವು.

ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲೇ ಯಶಸ್ವಿ ನಟಿ ಎನಿಸಿಕೊಂಡ ಮಹಾಲಕ್ಷ್ಮಿ, ಉತ್ತುಂಗದ ಕಾಲದಲ್ಲಿರುವಾಗಲೇ ಚಿತ್ರರಂಗದಿಂದ ಸ್ವಲ್ಪ ದೂರವಾದರು. “ದುರ್ಗಾಷ್ಟಮಿ” ಬಳಿಕ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬಹುತೇಕರಿಗೆ ಮಹಾಲಕ್ಷ್ಮಿ ಅವರ ಸುದ್ದಿಯೇ ಇರಲಿಲ್ಲ. ಅವರ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದರು. ಇದೀಗ ಅವರು ಪುನಃ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡುವ ಸುದ್ದಿ ತಿಳಿದು ಹಿರಿಹಿರಿ ಹಿಗ್ಗುತ್ತಿದ್ದಾರೆ. ಇಷ್ಟು ವರ್ಷ ಮನೆ, ಮಕ್ಕಳು ಅಂತ ಬಿಝಿಯಾಗಿದ್ದರು. ಆ ಕುರಿತಂತೆ ಅವರೇ ಹೇಳಿದ್ದು “ಫ್ಯಾಮಿಲಿಗೋಸ್ಕರ ಕೆಲಸ ಅಂತ ಮಾಡಲೇಬೇಕು. ಇದರಿಂದ ಜವಾಬ್ದಾರಿ ಹೆಚ್ಚಾಗುತ್ತೆ, ಮಕ್ಕಳು ಬೆಳೆದಿದ್ದಾರೆ. ನನ್ನ ಉತ್ಸಾಹ ಹಾಗೆಯೇ ಇದೆ” ಅಂತ ಹೇಳಿಕೊಂಡಿದ್ದೂ ಉಂಟು. ಅದೇನೆ ಇರಲಿ, ಇದೀಗ ಮಹಾಲಕ್ಷ್ಮೀ ಅವರು ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಆದಷ್ಟು ಬೇಗ ಅವರು ತೆರೆಗೆ ಬರುವಂತಾಗಲಿ ಅನ್ನೋದು ಕೂಡ “ಸಿನಿಲಹರಿ” ಹಾರೈಕೆ.

Related Posts

error: Content is protected !!