Categories
ಸಿನಿ ಸುದ್ದಿ

ʼಕಾನೂನಿನ ಮೇಲೆ ನನಗೆ ಗೌರವವಿದೆ, ದೇವರ ದಯೆಯಿಂದ ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸುವೆʼ

ಕುಟುಂಬ ಸಮೇತ ದೇವರ ದರ್ಶನ ಪಡೆದ ನಟಿ ರಾಗಿಣಿ ತಮ್ಮ ಮೇಲಿನ ಆರೋಪಕ್ಕೆ ರಿಯಾಕ್ಷನ್‌ ಕೊಟ್ಟಿದ್ದೇನು….?

ಗ್ಲಾಮರಸ್‌ ನಟಿ ರಾಗಿಣಿ ಮತ್ತೆ ಬಂದಿದ್ದಾರೆ. ಆಗಿದ್ದಾಯ್ತು, ಮುಂದೇ ಹೋಗೋಣ ಎನ್ನುವಂತೆ ಅವರೀಗ ಹೊಸ ಉತ್ಸಾಹ ತುಂಬಿಕೊಂಡು ಮತ್ತೆ ನಟಿಯಾಗಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.


ಸದ್ಯಕ್ಕೆ ಅವರ ಮೊದಲು ಯಾವ ಸಿನಿಮಾ ಟೀಮ್‌ ಮೂಲಕ ಕ್ಯಾಮೆರಾ ಎದುರಿಸಲಿದ್ದಾರೆನ್ನುವುದು ಸಿನಿಮಾ ಪ್ರೇಕ್ಷಕರಲ್ಲಿರುವ ಕುತೂಹಲ. ಅವರು ನಾಯಕಿ ಆಗಿರುವ “ಗಾಂಧಿಗಿರಿʼ ಈಗ ತೆರೆ ಬರಬೇಕಿದೆ. ಇನ್ನೇರೆಡು ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾಗಿಯೂ ಈ ಮುಂಚೆ ಹೇಳಿಕೊಂಡಿದ್ದರು. ಅವೆಲ್ಲವುಗಳ ಕತೆ ಏನೋ ಗೊತ್ತಿಲ್ಲ. ಆದರೆ ಈಗ ಅವರನ್ನೇ ಹಾಕಿಕೊಂಡು ಒಂದು ತಂಡ ಸಿನಿಮಾ ಮಾಡಲು ಹೊರಟಿದೆ.

ಆ ವಿಚಾರ ಇಷ್ಟರಲ್ಲಿಯೇ ಬಹಿರಂಗವಾಗುವುದು ಕೂಡ ಗ್ಯಾರಂಟಿ ಇದೆ. ಈ ನಡುವೆಯೇ ಈಗ ರಾಗಿಣಿ, ಶನಿವಾರ ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಕುಟುಂಬದವರ ಜತೆಗೆ ಒಂದಷ್ಟು ದಿನ ಕಾಲ ಕಳೆಯಬೇಕಿದೆ ಅಂತಲೂ ಹೇಳಿಕೊಂಡಿದ್ದಾರೆ. ಉಳಿದಂತೆ ಸೋಷಲ್‌ ಮೀಡಿಯಾದಲ್ಲಿ ಅವರು ಒಂದಷ್ಟು ವಿಚಾರವನ್ನು ಮನ ಬಿಚ್ಚಿ ಹೇಳಿಕೊಂಡಿರುವುದು ವಿಶೇಷ . ಸರ್ವ ಶಕ್ತನಾದ ದೇವರ ಆಶೀರ್ವಾದಿಂದ ನಾನು ಕೆಟ್ಟದ್ದನ್ನು ಒಳ್ಳೆಯವರಿಂದ ಜಯಸುವೆ. ಅದರ ಮೇಲೆ ನನಗೆ ನಂಬಿಕೆಯಿದೆ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

ಅವರಿಲ್ಲಿ ಹೇಳಿಕೊಂಡಿರುವುದಿಷ್ಟು…” ಹೊಸ ವರ್ಷ ಜಗತ್ತಿಗೆ ಅದ್ಭುತವಾದ ಮೈಲುಗಲ್ಲು ಸ್ಥಾಪಿಸಲಿ. ಕಾನೂನು ಮತ್ತು ಕಾನೂನು ವ್ಯವಸ್ಥೆಯ ಮೇಲೆ ನನಗೆ ಬಲವಾದ ನಂಬಿಕೆ ಇದೆ. ಪ್ರತಿಯೊಬ್ಬ ನಾಗರಿಕರಂತೆ ನಾನು ಕೂಡ ನನ್ನ ಹಕ್ಕುಗಳನ್ನು ಯಾವಾಗಲೂ ಗೌರವಿಸುತ್ತೇನೆ. ಭಾರತದ ಸಂವಿಧಾನದ ಅಡಿಯಲ್ಲಿಯೇ ನಮ್ಮ ಹಕ್ಕುಗಳ ರಕ್ಷಣೆ ಇದೆ. ಅದು ನನಗೆ ಖಚಿತವಿದೆ. ಸರ್ವಶಕ್ತನಾದ ದೇವರ ಆಶೀರ್ವಾದಿಂದ ನಾನು ಕೆಟ್ಟದ್ದನ್ನು ಒಳ್ಳೆಯದರಿಂದ ಜಯಸುತ್ತೇನೆ. ನನ್ನ ಶಕ್ತಿ ನನ್ನ ಕುಟುಂಬ. ಹಾಗೆಯೇ ನನ್ನ ಅಭಿಮಾನಿಗಳು ಮತ್ತು ಬೆಂಬಲಿಗರು. ಇದು ನನ್ನ ಎಲ್ಲ ಪ್ರಯತ್ನಗಳಲ್ಲಿ ವಿಜಯಶಾಲಿಯಾಗಿ ಹೊರಬರಲು ಸಹಾಯ ನೀಡುತ್ತದೆʼ ಎಂದಿದ್ದಾರೆ.ಹಾಗೆಯೇ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿರುವ ರಾಗಿಣಿ, ಹೊಸ ವರ್ಷ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ತರಲಿ ಎಂದಿದ್ದಾರೆ.

Categories
ಸಿನಿ ಸುದ್ದಿ

“ಕಟೌಟ್‌ ಮೇಲೆ ಕಾಗೆ ಬಿಟ್ರೆ , ಒಂದು ಹಾರನು ಇರಲಿಲ್ಲ ‘

ಆ ದಿನವನ್ನು ನಟ ಸುದೀಪ್‌ ಇವತ್ತು ನೆನಪಿಸಿಕೊಂಡ ಪರಿಯೇ ವಿಚಿತ್ರ…

ನಟ ಕಿಚ್ಚ ಸುದೀಪ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಲ್ಲಿಗೆ  25 ವರ್ಷ. ಈಗ ಒಬ್ಬ ನಟನಿಗೆ 25  ವರ್ಷದ ಸಿನಿಮಾ ಜರ್ನಿ ಅನ್ನೋದು ದೊಡ್ಡ ಸಾಧನೆ. ಅದರಲ್ಲೂ ಬಹುಬೇಡಿಕೆಯ ನಟನಾಗಿ ಬಹುಕಾಲ ವರ್ಚಸ್ಸು ಉಳಿಸಿಕೊಂಡು ಇರುವುದೇ ಇಲ್ಲಿ ದೊಡ್ಡ ಸವಾಲು. ಅದರೆ ಅದು ಸುದೀಪ್‌ ಅವರಿಗೆ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಕನ್ನಡದಾಚೆಯೂ ಕಿಚ್ಚ ಸುದೀಪ್‌ ಬಹುಬೇಡಿಕೆಯ ನಟರಾಗಿರುವುದು ಅವರ ಬಹುಮುಖ ಪ್ರತಿಭೆಗೆ ಹಿಡಿದ ಕನ್ನಡಿ. ಈ ತಾರಾ ವರ್ಚಸ್ಸಿನ ನಡುವೆಯೇ ಅವರೀಗ ತಮ್ಮ ಸಿನಿಮಾ ಜರ್ನಿಯ 25 ನೇ ವರ್ಷದ ಸಂಭ್ರಮವನ್ನು ದೂರದ ದುಬೈನಲ್ಲಿ ತುಂಬಾನೆ ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಅಂದ್ರೆ, ಅವರೀಗ ಬಹುನಿರೀಕ್ಷಿತ ʼ ವಿಕ್ರಾಂತ್‌ ರೋಣʼ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿಯೇ ದುಬೈಗೆ ಹಾರಿದ್ದಾರೆ. ನಾಳೆ( ಜ.31 ) ಅಲ್ಲಿ “ವಿಕ್ರಾಂತ್‌ ರೋಣʼ ಚಿತ್ರದ ಟೀಸರ್‌ ಲಾಂಚ್‌ ಆಗುತ್ತಿದೆ. ಚಿತ್ರದ ಟೀಸರ್ ಅನ್ನು ಬುರ್ಜ್ ಖಲೀಫಾ ಮೇಲೆ ಅನಾವರಣ ಮಾಡಲಾಗುತ್ತಿದೆ. ಅದಕ್ಕೂ ಮೊದಲು ಅಂದ್ರೆ, ಜ. 30 ರಂದು ಶನಿವಾರ ದುಬೈನಿಂದಲೇ ವರ್ಚುವಲ್‌ ನೆಟ್‌ವರ್ಕ್‌ ಮೂಲಕ ನಟ ಕಿಚ್ಚ ಸುದೀಪ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 25 ವರ್ಷದ ಹಾದಿಯಲ್ಲಿ ಸಿಕ್ಕ ಕೆಲವು ಮರೆಯಲಾಗದ ಘಟನೆಗಳನ್ನು ಹೇಳಿಕೊಂಡರು. ಹಾಗೆಯೇ ಇಷ್ಟು ವರ್ಷದ ಸಿನಿಮಾ ಜರ್ನಿಯ ಏಳು-ಬೀಳಿನ ಬಗ್ಗೆ ಮಾತನಾಡಿದರು.

ಸಿನಿಮಾ ರಿಲೀಸ್ ಆದ ದಿನ ಚಿತ್ರಮಂದಿರಕ್ಕೆ ತೆರಳಿದ್ದಾಗ ಆದ ಅನುಭವದ ಬಗ್ಗೆ ಮಾತನಾಡಿದ ಸುದೀಪ್, ‘ಚಿತ್ರಮಂದಿರಕ್ಕೆ ಹೋದಾಗ ಏಳೆಂಟು ಜನ ಇದ್ರು. ಒಬ್ಬ ಹಾರ ಕೈಯಲ್ಲಿ ಹಿಡಿದು ನಿಂತಿದ್ದ. ನಾನು ಹೋಗುತ್ತಿದ್ದ ಹಾಗೆ ಬಂದು ಹಾರ ಹಾಕಿದ್ರು. ಇರೋದು 8 ಜನ ಅದ್ರಲ್ಲಿ ಒಬ್ಬ ಬಂದು ಹಾರ ಹಾಕಿದ್ದು ನೋಡಿ, ಅವ್ನೇನೋ ತಿಥಿ ಮಾಡೋಕೆ ಬಂದಿದ್ದಾನಾ ಅಂತೆನಿಸಿತು. ಅಷ್ಟೇ ಅಲ್ಲ, ಅಲ್ಲಿದ್ದ ಕಟೌಟ್‌ ನೋಡಿದೆ. ಅದರ ಮೇಲೆ ಕಾಗೆ ಬಿಟ್ರೆ ಒಂದು ಹಾರನು ಇರಲಿಲ್ಲ. ನಾನು ನನ್ನ ಸ್ನೇಹಿತ ಚಿತ್ರಮಂದಿರದ ಒಳಗೆ ಹೋದೆವು. ಮ್ಯಾನೇಜರ್ ಬಂದು ಕಾಫಿ ಬೇಕಾ ಅಂತ ಕೇಳಿದ್ರು, ಬೇಡ ಎಂದೆ, ಕಾಫಿ ತಗೊಳ್ಳಿ ಎಂದು ಒತ್ತಾಯ ಮಾಡಿದ್ರು. ಅವರು ನನ್ನ ಸ್ನೇಹಿತನ ಬಳಿ ಕೇಳಿದ್ರು ಏನಾಯಿತು ಎಂದು ಆಗ ಜನ ಇಲ್ಲ ಅದಕ್ಕೆ ಹೀಗೆ ಕುಳಿದ್ದಾರೆ ಎಂದ. ಆಗ ಅವರು ಇದಕ್ಕಿಂತ ಜನ ಬೇಕಾ ಎಂದು ಹೇಳಿದ್ರು. 8 ಜನಕ್ಕೆ ಇವರು ಇಷ್ಟು ದೊಡ್ಡ ಕ್ರೌಡ್ ಅಂತ ಅಂದುಕೊಂಡಿದ್ದಾರಾ ಅಂತ ಅಂದು ಕೊಂಡೆ. ಆದ್ರೆ ಟಾಕೀಸ್‌ ಹೌಸ್‌ ಫುಲ್‌ ಆಗಿತ್ತು. ಆ ಮೇಲಿನ ಕ್ಷಣಗಳೇ ರೋಚಕ‌ʼ ಎಂದರು ನಟ ಸುದೀಪ್.

Categories
ಸಿನಿ ಸುದ್ದಿ

ಹೊಸಬರ ಫಾರೆಸ್ಟ್‌ ಜರ್ನಿ

ಕನ್ನಡಕ್ಕೆ ಮತ್ತೊಂದು ಹಾರರ್‌ ಚಿತ್ರ

ಈಗ ಸಿನಿಮಾರಂಗ ಮತ್ತಷ್ಟು ರಂಗು ರಂಗಾಗಿದೆ. ಇನ್ನೇನು ಫೆಬ್ರವರಿ ಒಂದರಿಂದ ಸ್ಯಾಂಡಲ್‌ವುಡ್‌ ತನ್ನ ಕಾರ್ಯಚಟುವಟಿಕೆಯನ್ನು ಸಾಕಷ್ಟು ವಿಸ್ತರಿಸಲಿದೆ. ಈ ನಿಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಹೌದು, ಈಗಾಗಲೇ ಸ್ಟಾರ್‌ ಚಿತ್ರಗಳು ತಮ್ಮ ಚಿತ್ರಗಳ ಬಿಡುಗಡೆ ದಿನವನ್ನು ಘೋಷಿಸಿವೆ. ಆ ಸಾಲಿಗೆ ಈಗ ಹೊಸಬರ “ಸ್ಕೇರಿ ಫಾರೆಸ್ಟ್‌” ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.


ಹೌದು, ಸಂಪೂರ್ಣ ಹೊಸಬರೇ ಸೇರಿ ಮಾಡಿರುವ “ಸ್ಕೇರಿ ಫಾರೆಸ್ಟ್”‌ ಹಾರರ್‌ ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ “ಸ್ಕೇರಿ ಫಾರೆಸ್ಟ್” ಚಿತ್ರವೂ ಸೇರಿದೆ. ಈ ಚಿತ್ರಕ್ಕೆ “ಪ್ರೀತಿ-ಭಯ-ಆತ್ಮ” ಎಂಬ ಅಡಿಬರಹವಿದೆ. ಈ ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ.


ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಮಿತ್ರರೆಲ್ಲ ಸೇರಿ ಒಂದು ಸಂಶೋಧನೆಗೆಂದು ಕಾಡಿಗೆ ಹೋಗುತ್ತಾರೆ. ಅಲ್ಲೊಂದಷ್ಟು ವಿಚಿತ್ರ ಘಟನೆಗಳು ನಡೆಯುತ್ತವೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಈ ಚಿತ್ರದ ಕಥಾವಸ್ತು. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯ ಜಯಪ್ರಭು ಆರ್. ಲಿಂಗಾಯಿತ್ ಚಿತ್ರದ ನಿರ್ಮಾಪಕರು. ಸಂಜಯ್‌ ಅಭೀರ್‌ ನಿರ್ದೇಶನವಿದೆ. ಇದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಿದೆ.

ನಿರ್ದೇಶಕ ಸಂಜಯ್‌ ಅಭೀರ್‌ ಅವರು ಬಾಲಿವುಡ್‌ನಲ್ಲಿ ಒಂದಷ್ಟು ಕೆಲಸ ಮಾಡಿದ ಅನುಭವ ಹೊಂದಿದ್ದು, ಆ ಅನುಭವದ ಮೇಲೆ ಈ ಚಿತ್ರ ಮಾಡಿದ್ದಾರೆ. ನಿರ್ಮಾಪಕ ಜಯಪ್ರಭು ಆರ್.‌ ಲಿಂಗಾಯಿತ್‌, ಮುಂಬೈನಲ್ಲಿದ್ದಾರೆ. ಡಾ.ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ ಆಗಿರುವ ಅವರು, ಅವರ ಸ್ಫೂರ್ತಿಯಿಂದಲೇ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಮುಂಬೈನಲ್ಲೊಂದು ಕಾರ್ಖಾನೆ ನಡೆಸುತ್ತಿರುವ ಜಯಪ್ರಭು ಲಿಂಗಾಯಿತ್‌, ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದು, ಟ್ರಸ್ಟ್‌ವೊಂದನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿ ಕಾರ್ಯ ನಡೆಸುತ್ತಿದ್ದಾರೆ. ಗೆಳೆಯರೊಬ್ಬರು ಸಿನಿಮಾ ನಿರ್ಮಾಣ ಮಾಡಿ ಅಂದಾಗ, ಕನ್ನಡ ಸಿನಿಮಾ ಮಾಡಿದರೆ ಮಾತ್ರ ಮಾಡುವುದಾಗಿ ಹೇಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.


ನಿರ್ದೇಶಕ ಸಂಜಯ್‌ ಅಭೀರ್‌ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‌ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ನೀಡಿದ್ದಾರೆ. ಹಾಲಿವುಡ್ ನ “ಜಂಗಲ್ ಬುಕ್ 1994”, ಹಿಂದಿಯ “ರಾಗಿಣಿ ಎಂ.ಎಂ.ಎಸ್-೨” ಸೇರಿದಂತೆ ಮುಂತಾದ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣವಿದೆ. ರಾಜೇಶ್ ಶಾ ಸಂಕಲನ ಹಾಗೂ‌ ದೀಪಕ್ ಶರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಕುತೂಹಲಕಾರಿ ಕಥೆಯೊಂದಿಗೆ ಟ್ರಯಾಂಗಲ್ ಲವ್ ಸ್ಟೋರಿ ಕೂಡ ಚಿತ್ರದಲ್ಲಿ ಸಾಗಲಿದೆ. ನಿರ್ಮಾಪಕ‌ ಜಯಪ್ರಭು ಸಹ‌ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಜೀತ್ ರಾಯ್ದತ್, ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ‌ ಟೀನಾ ಪೊನ್ನಪ್ಪ, ಆಮ್‌ ರೀನ್, ಕಲ್ಪನಾ ನಾಯಕಿಯರು. ಬೇಬಿ ಪೂಜಾ ಇತರರು ನಟಿಸಿದ್ದಾರೆ. ಸಿದ್ದಗಂಗಾ ಮಠದ ಆವರಣ, ತುಮಕೂರು, ಚಿಕ್ಕಮಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ.

Categories
ಸಿನಿ ಸುದ್ದಿ

ಕೆಜಿಎಫ್-‌2 ರಿಲೀಸ್‌ ಡೇಟ್‌ ಫಿಕ್ಸ್‌ ಜುಲೈ 16 ರಂದು ರಣ ಬೇಟೆಗಾರನ ಬೇಟೆ!

ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ ಬಹುನಿರೀಕ್ಷೆಯ ಯಶ್‌ ಚಿತ್ರ

 

ಕನ್ನಡದಲ್ಲಿ ಈಗ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈಗಾಗಲೇ ಸ್ಟಾರ್‌ ಚಿತ್ರಗಳು ತಮ್ಮ ಸಿನಿಮಾಗಳ ದಿನಾಂಕವನ್ನು ಘೋಷಣೆ  ಮಾಡಿವೆ. ಇದೀಗ ಯಶ್ ‌ಅಭಿನಯದ ಬಹುನಿರೀಕ್ಷೆಯ “ಕೆಜಿಎಫ್-2” ಚಿತ್ರ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಹೌದು, ಯಶ್ ‌ಅಭಿಮಾನಿಗಳು ತಮ್ಮ ಹೀರೋ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದಿದ್ದರು.

ಅವರಿಗೆ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ತಮ್ಮ ಟ್ವಿಟ್ಟರ್‌ಹಾಗೂ ಫೇಸ್‌ಬುಕ್‌ನಲ್ಲಿ ತಮ್ಮ ಚಿತ್ರದ ಬಿಡುಗಡೆಯನ್ನು ಘೋಷಣೆ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್‌ಅವರು “ಕೆಜಿಎಫ್‌-2” ಚಿತ್ರ ರಿಲೀಸ್‌ದಿನವನ್ನು ಘೋಷಣೆ ಮಾಡುವುದರ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.


ಅಂದಹಾಗೆ, “ಕೆಜಿಎಫ್-‌2ʼ ಚಿತ್ರ ಜುಲೈ 16 ರಂದು ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬಿಡುಗಡೆಯ ದಿನಾಂಕದ  ಬಗ್ಗೆ ಮಾಹಿತಿ  ನೀಡಿದ್ದಾರೆ. ಇದು ಸಹಜವಾಗಿಯೇ ಯಶ್ ‌ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಬೀರಿದೆ.

ಈಗಿನಿಂದಲೇ ಅವರು “ಕೆಜಿಎಫ್-‌2″  ಚಿತ್ರದ  ಹಬ್ಬ ಆಚರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ಧ್ರುವಸರ್ಜಾ ಅಭಿನಯದ ‌”ಪೊಗರು” ಫೆಬ್ರವರಿ 19, “ರಾಬರ್ಟ್” ಮಾರ್ಚ್‌11, “ಯುವರತ್ನ” ಏಪ್ರಿಲ್‌ 1, “ಸಲಗ ” ಏಪ್ರಿಲ್‌ 15, “ಕೋಟಿಗೊಬ್ಬ” ಮೇ ತಿಂಗಳಲ್ಲಿ ರಿಲೀಸ್‌ದಿನವನ್ನು ಘೋಷಣೆ ಮಾಡಿವೆ.

ಪ್ರಶಾಂತ್‌ ನೀಲ್‌, ನಿರ್ದೇಶಕ

ಈಗ ಆ ಸಾಲಿಗೆ “ಕೆಜಿಎಫ್-2” ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಲಾಗಿದೆ. “ಕೋಟಿಗೊಬ್ಬ” ಮೇ ತಿಂಗಳಲ್ಲಿ ಬರಲಿದ್ದು, ಅದೇ ತಿಂಗಳ ಕೊನೆಯ ವಾರದಲ್ಲಿ “ಕೆಜಿಎಫ್-‌2” ಚಿತ್ರ ತೆರೆಗೆ ಅಪ್ಪಳಿಸಲಿದೆ. ಅಂದಹಾಗೆ, “ಕೆಜಿಎಫ್‌-2” ವಿಶ್ವಾದ್ಯಂತ ತೆರೆಗೆ ಬರಲಿದೆ. ಅದೇನೆ ಇರಲಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಹುತೇಕ ಎಲ್ಲ ಕನ್ನಡ ಸ್ಟಾರ್ ನಟರ ಚಿತ್ರಗಳ ಜಾತ್ರೆಗೆ ಅಭಿಮಾನಿಗಳಂತೂ ಈಗ ಕಾತುರದಿಂದ ಕಾದು ನಿಂತಿರುವುದಂತೂ ನಿಜ.

ವಿಜಯ್‌ ಕಿರಗಂದೂರು, ನಿರ್ಮಾಪಕ

“ಕೆಜಿಎಫ್-2” ಸಿನಿಮಾ ಈಗಾಗಲೇ ಪೋಸ್ಟರ್‌, ಟೀಸರ್‌ಮೂಲಕ ದೊಡ್ಡ ಕ್ರೇಜ್‌ ಹುಟ್ಟಿಸಿರುವುದಂತೂ ನಿಜ. ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಅಲೆ ಎಬ್ಬಿಸಿದ್ದ “ಕೆಜಿಎಫ್”‌ ಈಗ “ಚಾಪ್ಟರ್‌2” ಮೂಲಕವೂ ದೊಡ್ಡದ್ದೊಂದು ಭರವಸೆ ಹುಟ್ಟಿಸಿದೆ. ಎಲ್ಲರೂ ಈ  ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದ ದಿನ ಗೊತ್ತಾಗಿದೆ. ಇನ್ನೇನಿದ್ದರೂ, ಎಲ್ಲರೂ ಆ ಹಬ್ಬಕ್ಕಾಗಿ ಕಾಯಬೇಕಿದೆ.

Categories
ಸಿನಿ ಸುದ್ದಿ

ಡಾಕ್ಟರ್‌ ಆಗಿದ್ದ ಆಕ್ಟರ್‌ ಸಾಯಿಕುಮಾರ್‌ ಪುತ್ರಿ ಈಗ ಫುಡ್‌ ಪ್ರಾಡೆಕ್ಟ್‌ ಸಂಸ್ಥೆಯ ಓನರ್‌

ಮಕ್ಕಳಿಗಾಗಿಯೇ ಮಾರುಕಟ್ಟೆಗೆ ಬಂತು ಫುಡ್‌ಸ್ಟೆಪ್ಸ್‌, ಶುಭವಾಗಲಿ ಅಂದ್ರು ಪವರ್‌ ಸ್ಟಾರ್‌

ಕನ್ನಡದಲ್ಲಿ ಪೊಲೀಸ್‌ ಸ್ಟೋರಿ ಚಿತ್ರದೊಂದಿಗೆ ಡೈಲಾಗ್‌ ಕಿಂಗ್‌ ಅಂತಲೇ ಹೆಸರಾದ ನಟ ಸಾಯಿಕುಮಾರ್‌ ಪುತ್ರಿ ಡಾಕ್ಟರ್.‌ ಅಷ್ಟೇ ಅಲ್ಲ ಉದ್ಯಮಿಯೂ ಹೌದು. ಸ್ಟಾರ್ಸ್‌ ಮಕ್ಕಳು ತಮ್ಮ ಪೋಷಕರ ಹಾಗೆಯೇ ಬಣ್ಣದ ಜಗತ್ತಿನಲ್ಲೇ ಗುರುತಿಸಿಕೊಳ್ಳಬೇಕೆಂದು ಬಯಸುವಾಗ ನಟ ಸಾಯಿಕುಮಾರ್‌ ಪುತ್ರಿ ಜ್ಯೋತಿರ್ಮಯಿ ಅವರದ್ದು ಕೊಂಚ ಡಿಫೆರೆಂಟ್‌ ವ್ಯಕ್ತಿತ್ವ. ಅವರು ಎಂಬಿಬಿಎಸ್‌ ಓದಿ ಡಾಕ್ಟರ್ ಆಗಿದ್ದು ಮಾತ್ರವಲ್ಲ, ಈಗ ಮಕ್ಕಳತಜ್ಞೆ. ಹಾಗೆಯೇ ಮಕ್ಕಳಿಗಾಗಿಯೇ ಪೌಷ್ಟಿಕ ಆಹಾರ ತಯಾರಿಸುವ ಒಂದು ಕಂಪನಿಯ ಒಡತಿ.

ವೈದ್ಯೆ ಜ್ಯೋತಿರ್ಮಯಿ ಅವರ ಈ ಪ್ರಯತ್ನಕ್ಕೆ ಸಾಥ್‌ ಕೊಟ್ಟಿದ್ದು ಅವರ ಪತಿ ಕೃಷ್ಣ ಫಲ್ಗುಣ. ಮೂಲತಃ ಇವರು ಬೆಳಗಾವಿ. ಅಲ್ಲಿಯೇ ಕ್ಸೋಬು ಫುಡ್ಸ್‌ ಮತ್ತು ಬೆವರೇಜಸ್‌ ಸಂಸ್ಥೆಯ ಮೂಲಕ ಈ ದಂಪತಿ ಈಗ ಅಹಾರ ತಯಾರಿಕಾ ಉದ್ಯಮ ಶುರು ಮಾಡಿದ್ದಾರೆ. ಅದರ ಫಲವಾಗಿ ಈಗ ಮಕ್ಕಳಿಗಾಗಿಯೇ ಧ್ರವಿಕೃತ ಸಿದ್ಧ ಆಹಾರದ ಪಾಕೆಟ್‌ಗಳ “ಫುಡ್‌ಸ್ಟೆಪ್ಸ್‌ʼ ಪ್ರಾಡೆಕ್ಟ್‌ ಮಾರುಕಟ್ಟೆಗೆ ಬಿಡುಗಡೆ ಆಗಿದೆ.

ಜ. ೨೮ ರಂದು ಗುರುವಾರ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಈ ಪ್ರಾಡೆಕ್ಟ್‌ ಲಾಂಚ್‌ ಕಾರ್ಯಕ್ರಮ ತುಂಬಾ ಗ್ರಾಂಡ್‌ ಆಗಿಯೇ ನಡೆಯಿತು. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಈ ಪ್ರಾಡೆಕ್ಟ್‌ ಲಾಂಚ್‌ ಮಾಡಿ, ಶುಭ ಹಾರೈಸಿದರು.
ಫುಡ್‌ ಪ್ರಾಡೆಕ್ಟ್‌ ಮೊದಲ ಗ್ರಾಹಕರಾಗಿ ಸಿಂಪಲ್ಲಾಂಗ್‌ ಒಂದ್‌ ಸ್ಟೋರಿಯ ಜನಪ್ರಿಯ ನಟಿ ಶ್ವೇತಾ ಶ್ರೀವಾತ್ಸವ್‌ , ದ್ರವೀಕೃತ ಸಿದ್ದ ಆಹಾರದ ಪಾಕೆಟ್ ಖರೀದಿಸಿದ್ದು ವಿಶೇಷ. ಪ್ರಾಡೆಕ್ಟ್‌ ಲಾಂಚ್‌ ಮಾಡಿ ಮಾತನಾಡಿದ ನಟ ಪುನೀತ್‌ ರಾಜ್‌ ಕುಮಾರ್‌, ಫುಡ್‌ ಸ್ಟೆಪ್ಸ್‌ ನಂತಹ ಪ್ರಾಡೆಕ್ಟ್ ಗಳನ್ನು ಫಾರಿನ್ ಕಂಟ್ರಿಗಳಲ್ಲಿ ನೋಡುತ್ತಿದ್ದೆವು. ಈಗ ನಮ್ಮಲ್ಲಿಯೂ ಸಹ ಬಂದಿದೆ. ನಟ ಸಾಯಿಕುಮಾರ್ ಅವರ ಮಗಳು ಮಕ್ಕಳ ವೈದ್ಯರಾಗಿ, ಇಂಥ ಒಂದು ಪ್ರಾಡೆಕ್ಟ್ ರೆಡಿ ಮಾಡಿದ್ದಾರೆ. ಅವರ ಕಂಪನಿ ಉತ್ತಮವಾಗಿ ಬೆಳೆಯಲಿ ʼಎಂದರು.

ಹಾಗೆಯೇ ಈ ಪ್ರಾಡೆಕ್ಟ್‌ ಅನ್ನು ತಾವೇ ತಯಾರಿಸಿದ್ದಕ್ಕೆ ಕಾರಣವೇನು ಅನ್ನೋದನ್ನು ಸಾಯಿ ಕುಮಾರ್‌ ಪುತ್ರಿ ಜ್ಯೋತಿರ್ಮಯಿ ಹೇಳಿಕೊಂಡರು. ” ನಾನು ಮಕ್ಕಳತಜ್ಞೆ ಯಾಗಿ ಕಂಡ ಒಂದು ಸಂಗತಿ ಮಕ್ಕಳ ಪೌಷ್ಟಿಕ ಆಹಾರದ ಕೊರತೆಗೆ ಸಂಬಂಧಿಸಿದ್ದು. ಬಹಳಷ್ಟು ಪೋಷಕರು ನಿರಾಸಕ್ತಿ ವಹಿಸಿದ್ದರಿಂದಲೇ ಇದೆಲ್ಲ ಕಾರಣ ಅನ್ನೋದು ತಿಳಿಯಿತು. ಒಂದು ಧ್ರವೀಕೃತ ಸಿದ್ಧ ಆಹಾರವೇ ಸಿಕ್ಕರೆ ಪೋಷಕರಿಗೂ ಅನುಕೂಲ ಆಗುತ್ತೆ ಅಂತ ನಾವು ಇದನ್ನು ತಯಾರಿಸಲು ಮುಂದಾದೆವು. ಅದರ ಫಲವೇ ಫುಡ್ ಸ್ಟೆಪ್ಸ್‌ʼ ಎಂದರು. ಜ್ಯೋತಿರ್ಮಯಿ ಪತಿ ಕೃಷ್ಣಫಲ್ಗುಣ ಹಾಜರಿದ್ದರು.

ಈ ಪ್ರಯತ್ನಕ್ಕೆ ನಟರಾದ ಸಾಯಿ ಕುಮಾರ್‌, ರವಿಶಂಕರ್‌, ಅಯ್ಯಪ್ಪ ಹಾಜರಿದ್ದರು. ಕಾರ್ಯಕ್ರಮ ಒಂದು ಪ್ರಾಡೆಕ್ಟ್‌ ಲಾಂಚ್‌ ಕಾರ್ಯಕ್ರಮವಾದರೂ, ಅದೊಂದು ಸಾಯಿ ಕುಮಾರ್‌ ಪರಿವಾರದ ಸಮಾರಂಭದಂತೆ ಕಂಡಿತು. ಕೊನೆಯಲ್ಲಿ ಇಡೀ ಕುಟುಂಬ ನಟ ಪುನೀತ್‌ ಅವರೊಂದಿಗೆ ಕ್ಯಾಮೆರಾಕ್ಕೆ ಪೋಸು ನೀಡಿತು.

Categories
ಸಿನಿ ಸುದ್ದಿ

ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ ಅವರ ಭಾಷೆ ಮಾತನಾಡುವ ಜನ ನಾವು – ನಟ ದರ್ಶನ್‌ ಹೀಗೆಲ್ಲ ಸಿಟ್ಟಾಗಿದ್ದು ಯಾಕೆ ?

ʼರಾಬರ್ಟ್ʼ‌  ಚಿತ್ರದ ರಿಲೀಸ್‌ ವಿಚಾರದಲ್ಲಿ ಗರಂ ಆದ ದರ್ಶನ್‌
 

ನಟ ದರ್ಶನ್‌ ಸಿಟ್ಟಾಗಿದ್ದಾರೆ. ಅದರಲ್ಲೂ ಕನ್ನಡಿಗರ ಭಾಷಾಭಿಮಾನದ ಕುರಿತು ಖಾರವಾಗಿ ಮಾತನಾಡಿದ್ದಾರೆ. ” ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ, ಅವರ ಭಾಷೆಯಲ್ಲಿ ಮಾತನಾಡುವ ಜನ ನಾವುʼ ಅಂತ ಕಿಡಿಕಾರಿದ್ದಾರೆ. ಅವರ ಈ ಸಿಟ್ಟಿಗೆ ಕಾರಣ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದು. ಈ ಸಂಬಂಧ ಶುಕ್ರವಾರ ಬೆಳಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡಿಗರು ನಿಜ ಭಾಷಾಭಿಮಾನ ಹೊಂದಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಅದರಿಂದಲೇ ಇದೆಲ್ಲ ಸಮಸ್ಯೆ ಆಗುತ್ತಿದೆ ಅನ್ನೋದು ಅವರ ವಾದ.
ಹಾಗಂತ ಇದು ಅವರ “ರಾಬರ್ಟ್‌ʼ ಚಿತ್ರಕ್ಕೆ ಮಾತ್ರ ಸಂಬಂಧಿಸಿದ್ದೇ ? ” ಖಂಡಿತಾ ಹಾಗಲ್ಲ, ನಾನು ಕೇವಲ ನನ್ನ ಸಿನಿಮಾದ ವಿಚಾರಕ್ಕೆ ಮಾತ್ರ ಮಾತನಾಡುತ್ತಿಲ್ಲ. ಇಲ್ಲಿ ಸಾಕಷ್ಟು ಮಂದಿ ಹೊಸಬರು ಬಂದು ಸಿನಿಮಾ ಮಾಡುತ್ತಿದ್ದಾರೆ. ಅವರು ಒಂದು ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟಗಳಿವೆ. ಅದನ್ನೆಲ್ಲ ಕಷ್ಟಪಟ್ಟು ಎದುರಿಸಿ, ಅವರು ಒಂದು ಸಿನಿಮಾ ಮಾಡಿ ಹೊರ ತರುವಾಗ ಇಂತಹ ಸಮಸ್ಯೆಗಳಾದರೆ ಅವರ ಗತಿಯೇನು ಎನ್ನುವುದೇ ನನ್ನ ಪ್ರಶ್ನೆ ಎನ್ನುವ ಉತ್ತರ ದರ್ಶನ್‌ ಅವರದ್ದು.

ಇನ್ನು ದರ್ಶನ್‌ ಅವರೇ ಈ ಸ್ವ ಇಚ್ಚೆಯಿಂದ ಈ ವಿಚಾರ ಪ್ರಸ್ತಾಪಿಸಿದರಾ ಅಥವಾ ಚಿತ್ರತಂಡದ ಪರವಾಗಿ ಮತನಾಡಿದರಾ ಎನ್ನುವ ಮಾಧ್ಯಮದ ಪ್ರಶ್ನೆಗೂ ಅವರು ನೀಡಿದ್ದು ಖಡಕ್‌ ಉತ್ತರವೇ. ರಾಬರ್ಟ್‌ ಕುರಿತು ನಾನಿಲ್ಲಿ ಮಾತನಾಡುತ್ತೇನೆಂದರೆ, ಚಿತ್ರ ತಂಡದಲಿದ್ದೇ ಅಲ್ವಾ? ನಿರ್ಮಾಪಕರು ಅನ್ನದಾತರು. ಅವರ ಪರವಾಗಿ ನಾನು ಕೊನೆವರೆಗೂ ನಿಲ್ಲಬೇಕು. ಅದೇ ಕಾರಣಕ್ಕೆ ನಾನಿಲ್ಲಿ ಮಾತನಾಡುತ್ತಿದ್ದೇನೆ ಅಂತ ಉತ್ತರಿಸಿದರು ದರ್ಶನ್.‌

 

Categories
ಸಿನಿ ಸುದ್ದಿ

ಟಾಲಿವುಡ್ ನಲ್ಲಿ ರಾಬರ್ಟ್‌ ರಿಲೀಸ್‌ ಗೆ ವಿರೋಧ , ದರ್ಶನ್‌ ಆಕ್ರೋಶಕ್ಕೆ ಫಿಲ್ಮ್‌ ಚೇಂಬರ್‌ ತತ್ತರ

ಭಾನುವಾರವೇ ಸೌತ್‌ ಸಿನಿಮಾ ಇಂಡಸ್ಟ್ರಿ ವಾಣಿಜ್ಯ ಮಂಡಳಿ ಸಭೆ – ಅಧ್ಯಕ್ಷ ಜೈರಾಜ್‌ ಭರವಸೆ


ಬಹುನಿರೀಕ್ಷಿತ ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲಗು ಚಿತ್ರರಂಗ ಅಡ್ಡಿಯಾಗಿರುವ ವಿಚಾರ ಈಗ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್‌ ಗುಟುರು ಹಾಕಿದ್ದು, ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲೇ ತಲ್ಲಣ ಹುಟ್ಟಿದೆ. ಇದೀಗ ಕರ್ನಾಟಕ ವಾಣಿಜ್ಯ ಮಂಡಳಿ ಕೂಡ ಎಚ್ಚೆತ್ತುಕೊಂಡಿದೆ. ಭಾನುವಾರ ಈ ಸಂಬಂಧ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಸೇರುವುದು ಗ್ಯಾರಂಟಿ ಆಗಿದೆ. ಅಲ್ಲಿಯೇ “ರಾಬರ್ಟ್‌‌ʼ ಚಿತ್ರದ ಬಿಡುಗಡೆ ಬಿಕ್ಕಟ್ಟು ಬಗೆಹರಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈ ರಾಜ್‌ ಭರವಸೆ ಕೊಟ್ಟಿದ್ದಾರೆ.

ʼರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದರ ವಿರುದ್ಧ ಶುಕ್ರವಾರ ಬೆಳಗ್ಗೆ ನಟ ದರ್ಶನ್‌ , ಕರ್ನಾಟಕ ವಾಣಿಜ್ಯ ಮಂಡಳಿ ಭೇಟಿ ನೀಡಿ ದೂರು ಸಲ್ಲಿಸಿದರು. ಆ ನಂತರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈರಾಜ್‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ರಾಬರ್ಟ್‌ ಚಿತ್ರದ ಬಿಡುಗಡೆ ತೆಲುಗಿನಲ್ಲಿ ವಿರೋಧ ಅಗಿಲ್ಲ. ಆದರೆ ಮಾರ್ಚ್‌ 11 ರಂದೇ ತೆಲುಗಿನಲ್ಲೂ ಒಂದುಅದ್ದೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ. ಭಾನುವಾರವೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆಯುವಂತೆ ಕೋರಲಾಗುವುದು. ಅಲ್ಲಿಯೇ ಈ ಸಮಸ್ಯೆ ಬಗೆಹರಿಸುವುದಾಗಿ ‘ರಾಬರ್ಟ್’‌ ಚಿತ್ರ ತಂಡಕ್ಕೆ ಭರವಸೆ ಕೊಟ್ಟರು.

ತೆಲುಗು ಚಿತ್ರರಂಗದವರ ಸ್ವಪಕ್ಷಪಾತ ನೀತಿ ಬಗ್ಗೆ ಗರಂ ಆಗಿದ್ದ ನಟ, ಇದೆಲ್ಲ ನಡೆಯೋದಿಲ್ಲ. ಅವರ ಸಿನಿಮಾಗಳಿಗೆ ಮುಂದೆ ಕನ್ನಡದಲ್ಲಿ ಸಮಸ್ಯೆಯಾಲಿದೆ ಅಂತ ಗುಟುರು ಹಾಕಿದ್ದರು. ಅಷ್ಟೇ ಅಲ್ಲ, ಶುಕ್ರವಾರ ಬೆಳಗ್ಗೆ ತೆಲುಗು ಚಿತ್ರರಂಗದ ಈ ಇಬ್ಬಗೆ ನೀತಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದರು. ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳು ಇಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಿರುವುದು ಎಷ್ಟು ಸರಿ ಎಂಬುದು ದರ್ಶನ್ ಅಸಮಾಧಾನ ಹೊರ ಹಾಕಿದ್ದರು.

Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿ ಶುರು ಮಾಡಿದ ಡಾರ್ಲಿಂಗ್‌ ಕೃಷ್ಣ

ಕೃಷ್ಣನಿಗೆ ಮೂವರು ನಾಯಕಿಯರು!

“ಲವ್‌ ಮಾಕ್ಟೇಲ್‌” ಖ್ಯಾತಿಯ ಕೃಷ್ಣ ಈಗ “ಶುಗರ್‌ ಫ್ಯಾಕ್ಟರಿ” ಶುರುಮಾಡಿದ್ದಾರೆ..!

ಅರೇ, ಹೀಗಂದಾಕ್ಷಣ, ಅವರು ಯಾಕೆ ಶುಗರ್‌ ಫ್ಯಾಕ್ಟರಿಗೆ ಕೈ ಹಾಕಿದರು ಎಂಬ ಪ್ರಶ್ನೆ ಸಹಜ. ಆದರೆ, ಇದು ಬಿಝಿನೆಸ್‌ ಮಾಡುವ ಫ್ಯಾಕ್ಟರಿ ಅಲ್ಲ, ಬದಲಾಗಿ ಸಿನಿಮಾದ ಹೆಸರು. ಈ ಹಿಂದೆ ಕೃಷ್ಣ ಅವರು “ಶುಗರ್‌ ಫ್ಯಾಕ್ಟರಿ” ಚಿತ್ರ ಮಾಡಲಿದ್ದಾರೆ ಅಂತ ಸುದ್ದಿಯಾಗಿತ್ತು. ನಟಿ ಅಮೂಲ್ಯ ಅವರ ಸಹೋದರ ನಿರ್ದೇಶಕ ದೀಪಕ್‌ ಅರಸ್‌ ಅವರ ನಿರ್ದೇಶನದ ಈ ಚಿತ್ರಕ್ಕೆ ಗುರುವಾರ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ.

ನಿರ್ದೇಶಕ ತರುಣ್ ಸುಧೀರ್ ಕಿಶೋರ್ ಅವರ ಕ್ಲಾಪ್‌ ಮಾಡಿದರೆ, ‌ಜಿ.ಹೆಚ್.ರಾಮಚಂದ್ರ ಅವರು‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ನಟಿ ಅಮೂಲ್ಯ, ಜಗದೀಶ್, “ಲಾಸ್ಟ್ ಬಸ್” ಖ್ಯಾತಿಯ ಅರವಿಂದ್, ಮಯೂರ್ ಪಟೇಲ್ ಸೇರಿದಂತೆ ಹಲವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.
ಶುಕ್ರವಾರದಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.

ಚಿತ್ರದಲ್ಲಿ ಸೊನಾಲ್‌ ಮಾಂತೆರೊ, ಅದ್ವಿತಿ ಶೆಟ್ಟಿ, ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ ‌ನಾಯಕಿಯರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಗೋವಿಂದೇಗೌಡ, ಸೂರಜ್ ಕುಮಾರ್, ಮಹಾಂತೇಶ್ (ಹೊಸ ಪರಿಚಯ), ಪವನ್ ಎಸ್.ನಾರಾಯಣ್, ಬ್ರೋ ಗೌಡ, ರಾಯಲ್ ರವಿ, ಅವೀಕ್ಷ, ನೀತೂರಾಯ್, ಡಿ.ಜಿ.ವಿಂಪಲ್ ಇತರರು ನಟಿಸುತ್ತಿದ್ದಾರೆ. ಇನ್ನು, ಈ ಚಿತ್ರ ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್‌ ನಲ್ಲಿ ತಯಾರಾಗುತ್ತಿದ್ದು, ಗಿರೀಶ್.ಆರ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಏಳು ಹಾಡುಗಳಿಗೆ ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿದೆ. ಇನ್ನು, ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ಬರಗೂರು ರಾಮಚಂದ್ರಪ್ಪ ಅವರ ಅಮೃತಮತಿಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ

ಇದು ಕಿಶೋರ್-ಹರಿಪ್ರಿಯಾ ಜೋಡಿ ಸಿನಿಮಾ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ “ಅಮೃತಮತಿ” ಸಿನಿಮಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆ ಸಿನಿಮಾಗೆ ಒಂದಷ್ಟು ಪ್ರಶಸ್ತಿಗಳು ಲಭಿಸುತ್ತವೆ ಎಂಬ ಮಾತುಗಳೂ ಕೂಡ ಕೇಳಿಬಂದಿದ್ದವು. ಈಗ ಆ ಮಾತು ನಿಜವಾಗಿದೆ.

ಹೌದು, “ಅಮೃತಮತಿ” ಚಿತ್ರಕ್ಕೆ ಅಮೆರಿಕದ ಅಟ್ಲಾಂಟದಲ್ಲಿ ನಡೆದ ‘ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ದಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿದೆ. “ಅಮೃತಮತಿ” ಈಗಾಗಲೇ 5 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ನೋಯ್ಡಾದ 4ನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈ ಚಲನ ಚಿತ್ರೋತ್ಸವದಲ್ಲಿ “ಅಮೃತಮತಿ” ಪಾತ್ರ ನಿರ್ವಹಿಸಿದ್ದ ಹರಿಪ್ರಿಯ ಅವರು ಶ್ರೇಷ್ಠನಟಿ ಪ್ರಶಸ್ತಿಗೆ ಭಾಜನರಾಗಿದ್ದರು. “ಅಮೃತಮತಿ” ಸಿನಿಮಾ 13ನೇ ಶತಮಾನದ ಜನ್ನ ಕವಿಯ ಯಶೋಧರ ಚರಿತ್ರೆಯನ್ನು ಆಧರಿಸಿ ಮಾಡಲಾಗಿದೆ. ಇನ್ನು ಚಿತ್ರದ ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.

ಇವರೊಂದಿಗೆ ಹಿರಿಯ ನಟರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ರಾವ್, ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಮುಂಬೈ ಮೂಲದ ಸಿಎಆರ್ ಯು ಎಂಟರ್ ಪ್ರೈಸಸ್ ಸಂಸ್ಥೆ ಈಚಿತ್ರದ ಪ್ರದರ್ಶನದ ಹಕ್ಕು ಪಡೆದಿದೆ. ಚಿತ್ರಮಂದಿರ ಮಾತ್ರವಲ್ಲದೆ ಈ ಸಿನಿಮಾ ಓಟಿಟಿಯಲ್ಲೂ ರಿಲೀಸ್ ಆಗಲಿದೆ ಎನ್ನಲಾಗಿದೆ.

 

Categories
ಸಿನಿ ಸುದ್ದಿ

ತೆಲುಗು ಇಂಡಸ್ಟ್ರಿ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

ರಾಬರ್ಟ್ ಬಿಡುಗಡೆಗೆ ಟಾಲಿವುಡ್ ಅಡ್ಡಿ

ಫಿಲ್ಮ್ ಚೇಂಬರ್ ಗೆ ದೂರಲು ದಚ್ಚು ಸಜ್ಜು

ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅಭಿನಯದ “ರಾಬರ್ಟ್” ಮಾರ್ಚ್ 11ಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಈ ಹಿಂದೆ ಚಿತ್ರತಂಡ ಹೇಳಿದಂತೆ “ರಾಬರ್ಟ್” ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಮಾಡುವ ಕುರಿತು ಘೋಷಣೆ‌ ಮಾಡಿತ್ತು. ಆದರೆ, ಇದೀಗ ತೆಲುಗಿನ ಮಂದಿ “ರಾಬರ್ಟ್” ಬಿಡುಗಡೆಗೆ ಅಡ್ಡಿಯಾಗಿದ್ದಾರೆ.

ಹೌದು, ಟಾಲಿವುಡ್ ನಲ್ಲಿ ರಿಲೀಸ್ ಮಾಡುವುದಕ್ಕೆ ಅಲ್ಲಿನ ಸಿನಿಮಾ ಮಂದಿ ಬಿಡುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ್ ತೆಲುಗು ಸಿನಿಮಾರಂಗದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡಬ್ಬಿಂಗ್ ಸಿನಿಮಾಗೆ ಕರ್ನಾಟಕದಲ್ಲಿ ಅನುಮತಿ ಸಿಕ್ಕಿದೆ. ತೆಲುಗು ಸಿನಿಮಾಗಳು ಸಹ ಒಂದರ‌ ಮೇಲೊಂದರಂತೆ ಬಿಡುಗಡೆಯಾಗುತ್ತಿವೆ. ಹಾಗೆ ನೋಡಿದರೆ ಇಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲೇ ತೆಲುಗು ಚಿತ್ರಗಳೇ ಹೆಚ್ಚಾಗಿ ರಿಲೀಸ್ ಆಗುತ್ತಿವೆ. ಈ ಮೂಲಕ ಕನ್ನಡ ಚಿತ್ರಮಂದಿರಗಳನ್ನೂ ಆವರಿಸುತ್ತಿವೆ. ಆದರೆ ಕನ್ನಡದಿಂದ ತೆಲುಗಿಗೆ ಡಬ್ ಆಗಿರುವಂತಹ, “ರಾಬರ್ಟ್” ಚಿತ್ರದ ಬಿಡುಗಡೆಗೆ ತೆಲುಗಿನ ಸಿನಿಮಾ‌ ಮಂದಿ ಹಾಗೊಂದು ಕ್ಯಾತೆ ತೆಗೆಯುತ್ತಿದ್ದಾರೆ.


ತೆಲುಗು ಸಿನಿಮಾರಂಗದ ಜನರ ಈ‌ ನಡವಳಿಕೆಗೆ ದರ್ಶನ್ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
“ನಮ್ಮ ಸಿನಿಮಾ ಅಲ್ಲಿ ರಿಲೀಸ್ ಮಾಡೋಕೆ ಅವಕಾಶ ಇಲ್ಲ ಅಂದಮೇಲೆ, ಅವರ ಸಿನಿಮಾನೂ ಇಲ್ಲಿ ರಿಲೀಸ್ ಆಗಬಾರದು” ಎಂಬ ವಿಷಯ ಇಟ್ಟುಕೊಂಡು ದೂರು ನೀಡಲು ರೆಡಿಯಾಗಿದ್ದಾರೆ.

 

error: Content is protected !!