ಅಭಿನಯ ಚಕ್ರವರ್ತಿಯ ಗ್ರಾಮ ದತ್ತು ಸ್ವೀಕಾರ, ಆವಿಗೆ ಗ್ರಾಮಕ್ಕೆ ಇನ್ನು ಮುಂದೆ ಸು”ದೀಪ”

ನಟ ಕಿಚ್ಚ ಸುದೀಪ್‌ ಅಂದ್ರೆ  ಸಿನಿಮಾ ಅಥವಾ ರಿಯಾಲಿಟಿ ಶೋ ಮಾತ್ರವಲ್ಲ ಅದರಾಚೆ ಸಾಮಾಜಿಕ ಕೆಲಸಗಳಲ್ಲೂ  ಸದಾ ಮುಂಚೂಣಿಯಲ್ಲಿರುವ ಹೆಸರು. ಸಾಮಾಜಿಕ ಕೆಲಸಗಳಿಗೆ ಅಂತಲೇ ಅವರು ಶುರು ಮಾಡಿರುವ ಕಿಚ್ಚ ಚಾರಿಟೇಬಲ್‌ ಟ್ರಸ್ಟ್‌ ಇತ್ತೀಚೆಗಷ್ಟೇ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು ನಿಮಗೂ ಗೊತ್ತು. ಈ ಹಂತದಲ್ಲೀಗ ಮತ್ತೊಂದು ಮಹತ್ವದ ಸಾಮಾಜಿಕ ಕಾರ್ಯದ ಮೂಲಕ  ಕಿಚ್ಚ ಸುದೀಪ್‌ ಸುದ್ದಿಯಲ್ಲಿದ್ದಾರೆ. ಅದುವೇ ಗ್ರಾಮ ದತ್ತು ಸ್ವೀಕಾರ !

ಹೌದು, ಇದೀಗ ಕಿಚ್ಚ ಸುದೀಪ್‌ ಅವರು ತಮ್ಮ ತವರು ಜಿಲ್ಲೆ  ಶಿವಮೊಗ್ಗದ  ಗ್ರಾಮವೊಂದನ್ನು ದತ್ತು ಪಡೆದಿದ್ದಾರೆ. ಸಾಗರ ತಾಲೂಕು ಆವಿಗೆ ಗ್ರಾಮವನ್ನು ಕಿಚ್ಚ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ದತ್ತು ಪಡೆದು, ಸಂಪೂರ್ಣವಾಗಿ ಅಭಿವೃದ್ದಿ ಪಡಿಸಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಅವರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದು ಮಾತ್ರವಲ್ಲ, ಗ್ರಾಮ ದತ್ತು ಸ್ವೀಕಾರದ ಸಂಬಂಧ ಆಗಬೇಕಿರುವ ಎಲ್ಲಾ ಸರ್ಕಾರಿ ಕೆಲಸಗಳನ್ನು ಅಧಿಕೃತವಾಗಿಯೂ ಮುಗಿಸಿಕೊಂಡು ಬಂದಿದ್ದಾರಂತೆ.ಸಿನಿಮಾ ನಟ-ನಟಿಯರ ಸಾಮಾಜಿಕ ಕೆಲಸಗಳಲ್ಲೇ ಇದೊಂದು ಮಹತ್ತರವಾದ ಕೆಲಸ. ಯಾಕಂದ್ರೆ, ನಟ-ನಟಿಯರು ಇದುವರೆಗೂ ಸರ್ಕಾರಿ ಶಾಲೆಗಳನ್ನು, ಅನಾಥಾಶ್ರಮಗಳನ್ನು, ಮೃಗಾಲಯಗಳಲ್ಲಿನ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದು ನಿಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ ಗ್ರಾಮ ದತ್ತು ಸ್ವೀಕಾರ ಅಂತ ಬಂದಾಗ ಇದು ಮೊದಲು. ಆ ಕೆಲಸ ಸುದೀಪ್‌ ಅವರ ಮೂಲಕ ಶುರುವಾಗಿದೆ. ಇಷ್ಟಕ್ಕೂ ಈ ಗ್ರಾಮವನ್ನೇ ಅವರು ದತ್ತು ಪಡೆದಿದ್ದಕ್ಕೂ ಒಂದು ಬಲವಾದ ಕಾರಣ ಇದೆ.

ಆವಿಗೆ ಗ್ರಾಮ ಇರೋದು ಸಾಗರ ತಾಲೂಕಿನಲ್ಲಿ. ತಾಲೂಕು ಕೇಂದ್ರ ಸಾಗರ ಪಟ್ಟಣದಿಂದ 70 ಕಿಲೋ ಮೀಟರ್‌ ದೂರದಲ್ಲಿದೆ. ಶರಾವತಿ  ಹಿನ್ನಿರಿನ ಪ್ರದೇಶದಲ್ಲಿರುವ ಈ ಗ್ರಾಮವು ಈಗಲೂ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದೆ. ಕೇವಲ 27 ಮನೆಗಳಿರುವ ಕುಗ್ರಾಮ ಇದು. ಅಲ್ಲಿಯೇ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ಇದ್ದು, ಅಲ್ಲಿ 13 ಮಕ್ಕಳು ಕಲಿಯುತ್ತಿದ್ದಾರೆ. ಇಷ್ಟಾಗಿಯೂ ಇಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ. ಸುಸಜ್ಜಿತವಾದ ರಸ್ತೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಈಗ ಕಿಚ್ಚ ಚಾರಿಟೆಬಲ್‌ ಟ್ರಸ್ಟ್‌ ಮುಂದಾಗಿದೆ.

Related Posts

error: Content is protected !!