ಕ್ರಿಕೆಟ್ ಸಿನಿಮಾ ‘83’ ಜೂನ್‌ 4ಕ್ಕೆ‌ ರಿಲೀಸ್


ಕಪಿಲ್‌ ದೇವ್ ನಾಯಕತ್ವದಲ್ಲಿ ಚೊಚ್ಚಲ ಕ್ರಿಕೆಟ್ ವಿಶ್ವಕಪ್‌ ಗೆದ್ದ ಸಂಭ್ರಮವನ್ನು ದಾಖಲಿಸುವ ‘83’ ಹಿಂದಿ ಸಿನಿಮಾ ಜೂನ್‌ 4ಕ್ಕೆ ತೆರೆಕಾಣಲಿದೆ. ಕಪಿಲ್ ಪಾತ್ರದಲ್ಲಿ ನಟಿಸುತ್ತಿರುವ ರಣವೀರ್‌ ಸಿಂಗ್ ಚಿತ್ರದ ಪೋಸ್ಟರ್‌ನೊಂದಿಗೆ ಬಿಡುಗಡೆ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ರೀಮೇಕ್‌ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗದ್ದರೆ ಚಿತ್ರ ಕಳೆದ ವರ್ಷ ಏಪ್ರಿಲ್‌ 10ಕ್ಕೆ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಚಿತ್ರೀಕರಣವೂ ತಡವಾಗಿ ಕೊನಗೆ ಬಿಡುಗಡೆಯೂ ವಿಳಂಬವಾಯ್ತು. ಮೊದಲು ಈ ಚಿತ್ರವನ್ನು ಓಟಿಟಿಯಲ್ಲೇ ತೆರೆಕಾಣಿಸಲು ನಿರ್ಮಾಪಕರು ಯೋಜಿಸಿದ್ದರು. ಇದಕ್ಕೆ ಸುಮಾರು 150 ಕೋಟಿ ರೂಪಾಯಿ ಆಫರ್ ಮಾಡಲಾಗಿತ್ತು ಎನ್ನಲಾಗಿದೆ. ಅಂತಿಮವಾಗಿ ಚಿತ್ರದ ನಿರ್ಮಾಪಕರು ಥಿಯೇಟರ್‌ನಲ್ಲೇ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡರು ಎನ್ನಲಾಗುತ್ತಿದೆ.

1983ರ ವಿಶ್ವಕಪ್ ಗೆದ್ದ ತಂಡದ ಆಟಗಾರರನ್ನು ‘ಕಪಿಲ್ ಡೆವಿಲ್ಸ್‌’ ಎಂದೇ ಕರೆಯುತ್ತಾರೆ! ಅಸಾಧಾರಣ, ಅನಿರೀಕ್ಷಿತ ಆಟದಿಂದ ಎದುರಾಳಿಗಳನ್ನು ಮಣಿಸಿದ್ದರಿಂದ ಭಾರತ ತಂಡದ ಆ ಪಂದ್ಯಗಳು ರೋಚಕವಾಗಿವೆ. ಹಾಗಾಗಿ ‘83’ ಒಂದು ಸ್ಪೋರ್ಟ್ಸ್‌ ಡ್ರಾಮಾ ಸಿನಿಮಾ ಆಗಿ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎನ್ನುವುದು ಸಿನಿ ವಿಶ್ಲೇಷಕರ ಅಭಿಪ್ರಾಯ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕಪಿಲ್‌ ದೇವ್ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ತಾಹಿರ್ ರಾಜ್ ಭಾಸಿನ್‌, ಸಕಿಬ್ ಸಲೀಂ, ಅಮಿ ವಿರ್ಕ್‌, ಸಾಹಿಲ್ ಕಟ್ಟರ್‌, ಚಿರಾಗ್ ಪಾಟೀಲ್‌, ಆದಿನಾಥ್ ಕೊಠಾರೆ, ಧೈರ್ಯ ಕರ್ವ್‌, ಜತಿನ್ ಸರ್ನಾ, ನಿಶಾಂತ್‌ ದಾಹಿಯಾ ಇತರೆ ಆಟಗಾರರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Related Posts

error: Content is protected !!