ನಿಖಿಲ್ ಕುಮಾರ್ ‘ರೈಡರ್‌’ನಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್‌!

‘ಕೆಜಿಎಫ್‌’ ಸಿನಿಮಾದಲ್ಲಿ ‘ಗರುಡ’ನಾಗಿ ಅಬ್ಬರಿಸಿದ್ದ ರಾಮಚಂದ್ರ ರಾಜು (ಗರುಡ ರಾಮ್‌) ಈಗ ‘ರೈಡರ್‌’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್‌ಕುಮಾರ್ ಕೊಂಡ ನಿರ್ದೇಶನದ ಈ ಆಕ್ಷನ್ – ಡ್ರಾಮಾ ಚಿತ್ರದಲ್ಲಿ ನಿಖಿಲ್‌ ಮತ್ತು ಕಶ್ಮೀರಾ ಪರ್ದೇಸಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಕೆಜಿಎಫ್‌’ ಚಿತ್ರದ ದೊಡ್ಡ ಯಶಸ್ಸಿನಿಂದಾಗಿ ಗರುಡ ರಾಮ್‌ ದಕ್ಷಿಣ ಭಾರತ ಸಿನಿಮಾರಂಗ ಮಾತ್ರವಲ್ಲದೆ ಬಾಲಿವುಡ್‌ಗೂ ಪರಿಚಿತರಾಗಿದ್ದಾರೆ.


ಅವರಿಗೀಗ ಕೈತುಂಬಾ ಅವಕಾಶಗಳು. ಸೂಪರ್‌ಸ್ಟಾರ್ ಮೋಹನ್‌ ಲಾಲ್‌ ನಟನೆಯ ‘ಆರಾಟ್ಟು’ ಮಲಯಾಳಂ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮ್‌ ನಟಿಸುತ್ತಿದ್ದಾರೆ. ತೆರೆಗೆ ಸಿದ್ಧವಾಗಿರುವ ಕಾರ್ತಿ ಅಭಿನಯದ ‘ಸುಲ್ತಾನ್‌’ನಲ್ಲೂ ಅವರು ಖಳನಟ.

ರಾಜ್ ತರುಣ್ ಹೀರೋ ಆಗಿರುವ ತೆಲುಗು ಸಿನಿಮಾ, ಅರ್ಜುನ್ ಸರ್ಜಾ ಮತ್ತು ತಾಪ್ಸಿ ಪನ್ನು ಜೋಡಿ ನಟಿಸಲಿರುವ ತಮಿಳು ಚಿತ್ರಕ್ಕೂ ಅವರು ಸಹಿ ಹಾಕಿದ್ದಾರೆ. ಸಾಮಾನ್ಯ ನಟನ ವೃತ್ತಿ ಬದುಕಿಗೆ ಚಿತ್ರವೊಂದು ಹೇಗೆ ದೊಡ್ಡ ತಿರುವಾಗುತ್ತದೆ ಎನ್ನುವುದಕ್ಕೆ ರಾಮ್‌ ಉದಾಹರಣೆಯಾಗಿದ್ದಾರೆ. ಇನ್ನು ‘ರೈಡರ್‌’ ಶೇಕಡಾ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ. ನಿಖಿಲ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಿತ್ತು. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ‘ರೈಡರ್‌’ಗಿದೆ. ದತ್ತಣ್ಣ, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ರಾಜೇಶ್ ನಟರಂಗ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

Related Posts

error: Content is protected !!