ಸಾಮಾನ್ಯವಾಗಿ ಹೊಸಬರ ಸಿನಿಮಾಗಳಿಗೆ ಸ್ಟಾರ್ ನಟರು ಸಾಥ್ ಕೊಡುವುದು ಹೊಸದೇನಲ್ಲ. ಸದಾ ಹೊಸಬರ ಚಿತ್ರಗಳ ಟ್ರೇಲರ್, ಆಡಿಯೋ, ಟೀಸರ್, ಪೋಸ್ಟರ್ಗಳ ರಿಲೀಸ್ ಮಾಡುವ ಮೂಲಕ ಶುಭಹಾರೈಸುತ್ತಲೇ ಇದ್ದಾರೆ. ಈಗ “ಅನಘ” ಸಿನಿಮಾ ತಂಡಕ್ಕೂ ಉಪೇಂದ್ರ ಸಾಥ್ ನೀಡಿದ್ದಾರೆ. ಹೌದು, ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್ನಡಿ ತಯಾರಾಗಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಉಪೇಂದ್ರ ಅವರು ಟ್ರೇಲರ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ.
ಡಿ.ಪಿ.ಮಂಜುಳಾ ನಾಯಕ ನಿರ್ಮಾಪಕರು. ರಾಜು ಎನ್.ಆರ್. ಚಿತ್ರದ ನಿರ್ದೇಶಕರು. ಇವರಿಗಿದು ಮೊದಲ ನಿರ್ದೇಶನದ ಸಿನಿಮಾ. ಕಥೆ ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಬಹುತೇಕ ಹೊಸ ಪ್ರತಿಭೆಗಳೇ ಈ ಚಿತ್ರದಲ್ಲಿವೆ. ಇದೊಂದು ಸಸ್ಪೆನ್ಸ್, ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರ. ಈ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ, ಪ್ರಚಾರ ಕಾರ್ಯಕ್ಕೆ ರೆಡಿಯಾಗಿದೆ. ರಂಗಭೂಮಿ ಪ್ರತಿಭೆ ನಳೀನ್ ಕುಮಾರ್ ಮತ್ತು ಪವನ್ಪುತ್ರ ಚಿತ್ರದ ಆಕರ್ಷಣೆ. ಇನ್ನುಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್ಗೌಡ್ರು, ಕಿರಣತೇಜ, ಕಿರಣ್ರಾಜ್, ಕರಣ್ ಆರ್ಯನ್, ದೀಪ, ರೋಹಿತ್, ಖುಷಿ, ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ, ಮೋಟು ರವಿ, ಅಭಿ ಮತ್ತು ವಿರೇಶ ಇತರರು ನಟಿಸಿದ್ದಾರೆ. ಇನ್ನು ಬೆಂಗಳೂರು, ದೇವರಾಯನದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶಂಕರ್ ಅವರ ಛಾಯಾಗ್ರಹಣವಿದೆ. ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸವಿದೆ.
ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಹೇಳಿಕೆಯ ಬೆನ್ನಲೇ ಇಂದು ನಟ ಶಿವರಾಜ್ ಕುಮಾರ್ ಧಿಡೀರನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಲಿದ್ದಾರೆಂಬ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಸೋಮವಾರಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಬಂದ ಶಿವರಾಜ್ ಕುಮಾರ್, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಭೇಟಿ ವೇಳೆ ಏನೆಲ್ಲ ಚರ್ಚೆ ನಡೆಯಿತು, ಯಾಕಾಗಿ ಅವರನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದರು ಎನ್ನುವುದು ಇನ್ನು ನಿಖರವಾಗಿ ತಿಳಿದಿಲ್ಲವಾದರೂ, ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವೇ ಅದಕ್ಕೆ ಮೂಲಕ ಕಾರಣ ಎನ್ನುವುದು ಅಷ್ಟೇ ಸತ್ಯ. ಕಳೆದ ಮೂರು ದಿನಗಳ ಹಿಂದಷ್ಟೇ ಮಾಜಿ ಶಾಸಕ ಮಧು ಬಂಗಾರಪ್ಪ ಕೂಡ ಡಿ.ಕೆ.ಶಿ ಅವರನ್ನು ಭೇಟಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಡಿ.ಕೆ. ಶಿವಕುಮಾರ್ ಅವರೊಂದಿಗಿನ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಾವು ಕಾಂಗ್ರೆಸ್ ಸೇರುವ ಸಂಬಂಧ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರು. ಹಾಗೆಯೇ ತಮ್ಮೊಂದಿಗೆ ಅಕ್ಕ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಸೇರುತ್ತಿದ್ದಾರೆಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲೇ ಇಂದು ನಟ ಶಿವರಾಜ್ ಕುಮಾರ್ , ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
“ನನ್ನನ್ನು ಎಲ್ಲರೂ ಮಂಗಳೂರು ಆಟೋ ಅಂತಾರೆ…” ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟಿ ಶುಭಾಪೂಂಜಾ. ಸಂದರ್ಭ: ಬಿಗ್ಬಾಸ್ ರಿಯಾಲಿಟಿ ಶೋ. ಭಾನುವಾರ ಬಿಗ್ಬಾಸ್ ಸೀಸನ್ ೮ ರ ಎಲ್ಯುಮಿನೇಷನ್ ಪ್ರಕ್ರಿಯೆ ಮುಗಿದು ಹೋಯಿತು. ಆ ಮನೆಯಲ್ಲಿ ಯಾರು ಇಷ್ಟ ಆಗ್ತಾರೆ? ಯಾರು ಇಷ್ಟ ಆಗಲ್ಲ? ಅಂತ ಸುದೀಪ್ ಪ್ರಶ್ನಿಸಿದಾಗ, ಮನೆಯಲ್ಲಿರೋ ಎಲ್ಲರೂ ಒಂದೊಂದು ಹೆಸರನ್ನು ಬೋರ್ಡ್ಗೆ ಅಂಟಿಸಿದರು. ಹೆಚ್ಚಿನವರಿಗೆ ಬೈಕ್ ರೈಡರ್ ಅರವಿಂದ್ ಇಷ್ಟವಾದರೆ, ನಿರ್ಮಲಾ ಚೆನ್ನಪ್ಪ ಅವರು ಇಷ್ಟವಾಗಲ್ಲ ಅಂತ ನೇರವಾಗಿ ಹೇಳಿಕೊಂಡರು. ಈ ಪ್ರಕ್ರಿಯೆ ಮುಗಿದ ಬಳಿಕ, ನಟಿ ಶುಭಾಪೂಂಜಾ ಅವರಿಗೆ ಸುದೀಪ್ ಅವರಿಂದ ಚಪ್ಪಾಳೆ ಸಿಕ್ಕಿತು. ಅದೇ ಖುಷಿಯಲ್ಲಿ ಶುಭಾ ಮನೆಯ ಸದಸ್ಯರನ್ನು ನಗಿಸಿದರು.
ಈ ವೇಳೆ ಶುಭಾಪೂಂಜಾ, ಹೇಳಿದ್ದಿಷ್ಟು. “ಎಲ್ಲರೂ ನನ್ನನ್ನು ಲಗೇಜ್ಗೆ ಹೋಲಿಸುತ್ತಾರೆ. ಮಂಗ್ಳೂರ್ ಆಟೋ ಅಂತಾರೆ. ನಾನು ನಡೆಯೋದು ಹಾಗೇನೆ ಅಂತೆ. ಲಗೇಜ್ ತುಂಬಿಕೊಂಡ ಆಟೋ ತರಹ ನಾನು ನಡೆಯೋದು ಅಂದ್ರು. ಮಂಗಳೂರು ಆಟೋಗೆ ಯಾಕೆ ಹೋಲಿಸುತ್ತಾರೆ ಅಂತ ಸುದೀಪ್ ಪ್ರಶ್ನಿಸಿದಾಗ, ಶುಭಾ ಹೇಳಿದ್ದು ಹೀಗೆ, “ಬಾಡಿ ಮೊದಲು ಮುಂದಿರುತ್ತದೆ, ಆದ ಮೇಲೆ ನಾನು ನಡೆಯುತ್ತೇನೆ. ಯಾವತ್ತೂ ಮಂಗಳೂರಿನ ಆಟೋಗಳು ಫುಲ್ ಲಗೇಜ್ ತುಂಬಿಕೊಂಡಿರುತ್ತವೆ” ಜೋರು ನಗೆಬುಗ್ಗೆ ಎಬ್ಬಿಸಿದರು ಶುಭಾ.
ಇನ್ನು, ನನಗೆ ಅಳೋಕೆ ಬರೋದಿಲ್ಲ. ಬಿಗ್ಬಾಸ್ ಮನೆಯಲ್ಲಿ ಒಳ್ಳೊಳ್ಳೆ ಡ್ರೆಸ್, ಐ ಶಾಡೋ ಹಾಕುತ್ತ ಮಿಂಚಬೇಕು ಅಂತ ಅನ್ಕೊಂಡಿದ್ದೆ. ಕಲರ್ ಕಲರ್ ಬೂಟ್ಸ್ ಹಾಕಬೇಕು ಅಂದುಕೊಂಡಿದ್ದೆ. ಆದರೆ, ಅದು ಯಾವುದು ಇಲ್ಲಿ ಪ್ರಯೋಜನವಿಲ್ಲ. ಕೆಲವೊಮ್ಮೆ ಅಳು ಬರಬೇಕಾದ ವಿಚಾರದಲ್ಲಿ ಅಳು ಬರೋದೆ ಇಲ್ಲ. ಡೈರೆಕ್ಟರ್ ಎಷ್ಟೋ ಬಾರಿ ಬೇಜಾರಾಗುತ್ತಿದ್ದರು. ನನಗೆ ಕಾಮಿಡಿ ಸೀನ್ಗಳು ಮ್ಯಾಚ್ ಆಗುತ್ತವೆ ಅಂತ ಶುಭಾ ಎಲ್ಲರೆದುರು ತಮ್ಮ ಬಗ್ಗೆ ಹೇಳಿಕೊಂಡರು.
ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಅಬ್ಬರ ದಿನೇ ದಿನೆ ಹೆಚ್ಚಾಗುತ್ತಿದೆ. ಕರ್ನಾಟಕದ ಆಚೆ ಕೂಡ ರಾರಾಜಿಸುತ್ತಿದೆ. ಈ ನಡುವೆ ʼರಾಬರ್ಟ್ʼ ಚಿತ್ರದ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರಿಗೆ ನಟ ದರ್ಶನ್ ಧನ್ಯವಾದ ಹೇಳಿದ್ದಾರೆ.
” ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಅಂತ ದರ್ಶನ್ ಹೇಳಿದ್ದಾರೆ. ಹಾಗಾದ್ರೆ ಬಹು ನಿರೀಕ್ಷಿತ ರಾಬರ್ಟ್ ಚಿತ್ರ ನೋಡಿ ನಟ ಸಂಚಾರಿ ವಿಜಯ್ ಹೇಳಿದ್ದೇನು? ” ಸಿಂಗಲ್ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ !! ಅದರ ಜೊತೆಗೆ ಮಲ್ಟಿಪ್ಲೆಕ್ಸ್ ನಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ ಗೆ ಬಾಸ್ !! ಅದು ನಿಜವಾದ ಡಿ ಬಾಸ್ ಶಕ್ತಿ. ನಾನು ನಿಜಕ್ಕೂ ಎಂಜಾಯ್ ಮಾಡಿದೆ. ನೀವು ಕೂಡ ನಿಮ್ಮ ಕುಟುಂಬದ ಜತೆಗೆ ಹೋಗಿ ಸಿನಿಮಾ ನೋಡಿ, ಎಂಜಾಯ್ ಮಾಡಿ ʼ ಅಂತ ನಟ ಸಂಚಾರಿ ವಿಜಯ್ ʼರಾಬರ್ಟ್ʼ ಚಿತ್ರ ನೋಡಿದ ನಂತರ ಸೋಷಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಕನ್ನಡದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ. ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿವೆ. ಆ ಸಾಲಲ್ಲಿ ಈಗ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ” ಕೂಡ ಇದೆ. ಏಪ್ರಿಲ್ 1ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಈ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ಬಿಡುಗಡೆ ಮುನ್ನ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿರುವ ಚಿತ್ರತಂಡ, ಆ ನಿಟ್ಟಿನಲ್ಲಿ ಜೋರು ತಯಾರಿ ನಡೆಸಿದೆ. ಮಾರ್ಚ್ 20ರಂದು ಮೈಸೂರಿನಲ್ಲಿ “ಯುವರತ್ನ” ಈವೆಂಟ್ ನಡೆಸಲಿದೆ “ಯುವ ಸಂಭ್ರಮ” ಹೆಸರಲ್ಲಿ ನಡೆಯುವ ಈವೆಂಟ್ಗೆ ಈಗಾಗಲೇ ಸಾಕಷ್ಟು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಇತ್ತೀಚೆಗೆ “ಯುವ ಸಂಭ್ರಮ” ಕಾರ್ಯಕ್ರಮದ ಲೋಗೋ ಕೂಡ ಲಾಂಚ್ ಮಾಡಲಾಗಿದೆ.
ಮೈಸೂರಲ್ಲಿ ಈವೆಂಟ್ ನಡೆಸುವುದಕ್ಕೂ ಮುನ್ನ, ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಬರ್ತ್ಡೇ ಹಿನ್ನೆಲೆಯಲ್ಲಿ ಫೀಲ್ ದಿ ಪವರ್ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಹಲವು ಯೋಜನೆ ಹಾಕಿಕೊಂಡ ಬಗ್ಗೆ ಹೇಳುವುದಿಷ್ಟು. “ಮೈಸೂರಲ್ಲಿ ಪ್ರೀ ರಿಲೀಸ್ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಅಂದು ಸಂಗೀತ ನಿರ್ದೇಶಕ ತಮನ್, ಗಾಯಕರಾದ ವಿಜಯಪ್ರಕಾಶ್, ಅರ್ಮಾನ್ ಮಲ್ಲಿಕ್ ಸೇರಿದಂತೆ ಸಿನಿಮಾ ತಾರೆಯರು ಭಾಗವಹಿಸುತ್ತಿದ್ದಾರೆ.
ಮೈಸೂರಲ್ಲಿ ಕಳೆದ ವರ್ಷ ದಸರಾ ಆಚರಣೆಯಾಗಲಿಲ್ಲ. ಅದನ್ನು ಮರುಕಳಿಸಲು “ಯುವ ಸಂಭ್ರಮ” ಹೆಸರಲ್ಲಿ ಈವೆಂಟ್ ಮಾಡಲು ಮುಂದಾಗಿದ್ದೇವೆ. ಮೈಸೂರಿನ ಮಹಾರಾಜಾ ಮೈದಾನದಲ್ಲಿ ಈ ಈವೆಂಟ್ ನಡೆಯಲಿದೆ. ಇನನು, ಮಾ.17ರಂದು ಪುನೀತ್ ಅವರ ಹುಟ್ಟುಹಬ್ಬ. ಅದಕ್ಕಾಗಿ ಅಂದು “ಫೀಲ್ ದ ಪವರ್” ಹಾಡು ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ ಪುನೀತ್ ಅವರ ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಮಾರ್ಚ್ 27ರಂದು ಹೈದರಾಬಾದ್ನಲ್ಲಿ ದೊಡ್ಡ ಈವೆಂಟ್ ನಡೆಯಲಿದೆ. ಏಪ್ರಿಲ್ ೧ರಂದು ಚಿತ್ರ ಬಿಡುಗಡೆಯಾಗಲಿದೆ” ಎಂಬುದು ನಿರ್ದೇಶಕರ ಮಾತು.
ತೆಲುಗಿನಲ್ಲಿ “ಯುವರತ್ನ” ಚಿತ್ರವನ್ನು ದಿಲ್ ರಾಜು ಹಾಗೂ ಸಾಯಿಕೋರ ರಿಲೀಸ್ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರ ದುಬೈ ಅಮೆರಿಕಾ, ಆಸ್ಟೃೇಲಿಯಾದಲ್ಲೂ ರಿಲೀಸ್ ಆಗುತ್ತಿದೆ. ಯುಕೆಯಲ್ಲಿ ಥಿಯೇಟರ್ ಓಪನ್ ಆಗದ ಕಾರಣ, ಅಲ್ಲಿ ರಿಲೀಸ್ ಮಾಡುತ್ತಿಲ್ಲ. ವಿಶ್ವದಲ್ಲಿ ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲಾ ಈ ಚಿತ್ರ ರಿಲೀಸ್ ಆಗಲಿದೆ ಎಂಬುದು ಚಿತ್ರತಂಡದ ಮಾತು.
ಸೋನು ಗೌಡ
ನಟ ಪುನೀತ್ ರಾಜಕುಮಾರ್ ಅವರಿಗೆ “ಯುವರತ್ನ” ಚಿತ್ರದ ಮೇಲೆ ಸಾಕಷ್ಟು ಭರವಸೆ ಇದೆಯಂತೆ. ಅದಕ್ಕೆ ಕಾರಣ, ಚಿತ್ರದ ಕಥೆಯಂತೆ. ಆ ಕುರಿತು ಪುನೀತ್ ಹೇಳುವುದು ಹೀಗೆ. “ಮೈಸೂರಲ್ಲಿ ಒಳ್ಳೆಯ ಈವೆಂಟ್ ಆಗುತ್ತಿದೆ. ಎರಡು ತಿಂಗಳಿನಿಂದ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಜನರು ಕೂಡ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಿದ್ದಾರೆ. ಮುಂದೆಯೂ ಒಳ್ಳೆಯ ಚಿತ್ರಗಳು ಬರುತ್ತವೆ. ನನಗೆ ಹೊಂಬಾಳೆ ಫಿಲಂಸ್ ಜೊತೆ ಮೂರನೇ ಸಿನಿಮಾ. ನಿರ್ದೇಶಕ ಜೊತೆ ಎರಡನೇ ಚಿತ್ರ. ಇದು ಅಭಿಮಾನಿಗಳಿಗೆ ಮಾಡಿದ ಸಿನಿಮಾವಲ್ಲ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರ. ಒಳ್ಳೆಯ ಸಂದೇಶವನ್ನು ಇಲ್ಲಿ ಕಾಣಬಹುದು” ಎನ್ನುತ್ತಾರೆ ಪುನೀತ್.
ಧನಂಜಯ್
ಈ ಚಿತ್ರದಲಿ “ಡಾಲಿ” ಧನಂಜಯ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆ ಬಗ್ಗೆ ಹೇಳುವ ಅವರು, “ನನಗೆ ಇಲ್ಲಿ ಒಳ್ಳೆಯ ರೋಲ್ ಸಿಕ್ಕಿದೆ. ಒಂದೊಳ್ಳೆಯ ಸಿನಿಮಾದ ಭಾಗವಾಗಿದ್ದೇನೆ ಅಂತ ಹೇಳಲು ಖುಷಿಯಾಗುತ್ತಿದೆ. ಸಾಕಷ್ಟು ವ್ಯಾಲ್ಯು ಇರುವಂತಹ ಚಿತ್ರವಿದು. ಈ ಚಿತ್ರ ನೋಡುಗರಿಗೆ ಸಖತ್ ಮನರಂಜನೆಯಂತೂ ಸಿಗಲಿದೆ. ಹಾಗೆಯೇ ಒಂದಷ್ಟು ಹೊಸ ವಿಷಯಗಳನ್ನೂ ತಿಳಿದುಕೊಳ್ಳಬಹುದು” ಎನ್ನುತ್ತಾರೆ ಧನಂಜಯ್. ಸೋನುಗೌಡ ಕೂಡ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಆ ಕುರಿತು ಹೇಳುವ ಸೋನುಗೌಡ, “ನಾನು ಅಪ್ಪು ಸರ್ ಜೊತೆ “ರಾಮ್” ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಈಗ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಹೇಳಿದಂತೆಯೇ ಸಿನಿಮಾ ಶೂಟ್ ಮಾಡಿದ್ದಾರೆ. ನಾನು ಕೂಡ ಅಪ್ಪು ಅಭಿಮಾನಿ. ಬಿಗ್ ಬ್ಯಾನರ್ನಲ್ಲಿ, ಬಿಗ್ ಸ್ಟಾರ್ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಇಲ್ಲಿ ಪ್ರತಿ ಪಾತ್ರಕ್ಕೂ ಆದ್ಯತೆ ಇದೆ ಎಂಬುದು ಸೋನು ಮಾತು.
ನವರಸನ್
ಚಿತ್ರದಲ್ಲಿ ದಿಗಂತ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು, ಈ ಚಿತ್ರದ ಈವೆಂಟ್ ಜವಾಬ್ದಾರಿಯನ್ನು ಶ್ರೇಯಸ್ ಮೀಡಿಯಾ ವಹಿಸಿಕೊಂಡಿದೆ. ನವರಸನ್ ಈ ಈವೆಂಟ್ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಶ್ರೇಯಸ್ ಮೀಡಿಯಾ “ಪೊಗರು”,”ರಾಬರ್ಟ್” ಚಿತ್ರಗಳ ಈವೆಂಟ್ ನಡೆಸಿದೆ. ಇದು ಮೂರನೇ ಈವೆಂಟ್ ಎಂಬುದು ವಿಶೇಷ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರ ಹಾಗೂ ನಟ ಆದಿತ್ಯ ಅಂದ್ರೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ತಕ್ಷಣ ನೆನಪಾಗೋದುʼ ಡೆಡ್ಲಿ ಸೋಮʼ ಚಿತ್ರ. ಆದಿತ್ಯ ಸಿನಿ ಜರ್ನಿಯಲ್ಲಿ ಆ ಸಿನಿಮಾ ಒಂದು ಮೈಲುಗಲ್ಲು. ಅಷ್ಟೇ ಅಲ್ಲ, ಆ ಸಿನಿಮಾದ ಮೂಲಕವೇ ಆದಿತ್ಯ ಒಬ್ಬ ನಟರಾಗಿ ಹೊರ ಹೊಮ್ಮಿದ್ದು. ಆ ನಂತರದ ಅವರ ತಾರಾ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿದ್ದು ಅಗ್ನಿ ಶ್ರೀಧರ್ ರಚನೆಯ ʼಎದೆಗಾರಿಕೆʼ ಚಿತ್ರ. ಅವರಿಗೆ ನಟನಾಗಿ ಒಂದಷ್ಟು ತಾರಾ ವರ್ಚಸ್ಸು ಕೊಟ್ಟ ಅವೆರೆಡು ಚಿತ್ರಗಳೂ ಭೂಗತ ಜಗತ್ತಿನ ಕಥೆಯ ಚಿತ್ರಗಳೇ. ಅಲ್ಲಿಂದ ಅವರು ಬಹುತೇಕ ಅಂತಹದೇ ಸಿನಿಮಾಗಳಿಗೆ ಬ್ರಾಂಡ್ ಆದ್ರು. ನಟನೊಬ್ಬನ ಪಾಲಿಗೆ ಅದು ವರವೂ ಹೌದು, ಶಾಪವೂ ಹೌದು. ಆದಿತ್ಯ ಪಾಲಿಗಂತೂ ಇದು ನೋವು ತಂದಿದ್ದೇ ಹೆಚ್ಚಂತೆ. ಹಾಗಂತ ಅವರು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ತಮ್ಮ ನೋವು ತೊಡಿಕೊಂಡರು.
ಆದಿತ್ಯ ಅಭಿನಯದ ” ಮುಂದುವರೆದ ಅಧ್ಯಾಯʼ ಚಿತ್ರ ಇದೇ ತಿಂಗಳು 17 ರಂದು ತೆರೆ ಕಾಣುತ್ತಿದೆ. ರಿಲೀಸ್ ಪೂರ್ವ ಪ್ರಚಾರದ ಹಿನ್ನೆಲೆಯಲ್ಲಿ ಚಿತ್ರ ತಂಡ ಇತ್ತೀಚೆಗಷ್ಟೆ ಸಿನಿಮಾ ಟೀಸರ್ ಹಾಗೂ ಸಾಂಗ್ಸ್ ಲಾಂಚ್ ಮೂಲಕ ಮಾಧ್ಯಮದ ಮುಂದೆ ಬಂದಿತ್ತು. ಅಲ್ಲಿ ಚಿತ್ರದ ನಾಯಕ ಆದಿತ್ಯ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುತ್ತಾ, ʼ ನನಗೆ ಬಹುತೇಕ ಸಿನಿಮಾಗಳು ಅಂಡರ್ ವಲ್ಡ್ ಅಂತ ಸಬ್ಜೆಕ್ಟ್ ನಿಂದಲೇ ಪಾತ್ರಗಳ ಅವಕಾಶ ಸಿಗುತ್ತಿತ್ತು. ಇದು ನನಗೆ ತೀರಾ ನೋವಾಗಿದೆ. ಇದರಿಂದ ನಾನು ಗೊಂದಲಕ್ಕೆ ಸಿಲುಕಿಕೊಂಡೆ. ಅಂತಹ ಸಿನಿಮಾಗಳನ್ನು ರಿಜೆಕ್ಟ್ ಮಾಡಿಕೊಂಡು ಬಂದೆ. ಯಾಕೆ ನನಗೆ ಅಂತಹ ಪಾತ್ರಗಳನ್ನೇ ಹುಡುಕಿಕೊಂಡು ಬಂದು ಅಪ್ರೋಚ್ ಮಾಡುತ್ತಿದ್ದರು ಅಂತ ಬೇಜಾರಾಗಿತ್ತುʼ ಎಂದರು. ರಿಲೀಸ್ ಗೆ ರೆಡಿಯಾಗಿರುವ ಮುಂದುವರೆದ ಅಧ್ಯಾಯ ಚಿತ್ರದ ಕುರಿತು ಮಾತನಾಡಿ, ಈ ಸಿನಿಮಾದಲ್ಲಿ ಕ್ಯೂರಿಯಾಸಿಟಿಯಿದೆ. ನನ್ನ ಪ್ರತಿ ಸಿನಿಮಾಕ್ಕೂ ನನ್ನ ಟೆಕ್ನೀಶಿಯನ್ಸ್ , ಆರ್ಟಿಸ್ಟ್, ಪ್ರೊಡ್ಯೂಸರ್ಸ್, ಡೈರೆಕ್ಟರ್ ಗಳೇ ನನಗೆ ಹೀರೋಗಳು. ಇದು ವಿಭಿನ್ನವಾದ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಎಲ್ಲರ ಒಗ್ಗಟ್ಟಿನಿಂದ ಈ ಸಿನಿಮಾ ಮೂಡಿ ಬಂದಿದೆ ಎಂದರು. ನಿರ್ದೇಶಕ ಬಾಲು ಚಂದ್ರಶೇಖರ್ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಶಿವರಾತ್ರಿ ಹಬ್ಬದ ದಿನ ಒಬ್ಬರು ಕಾಣೆಯಾಗುತ್ತಾರೆ, ಅದು ಯಾಕೆ? ಕಾಣೆಯಾಗಲು ಕಾರಣವೇನು? ಎನ್ನುವುದು ಕಥೆಯ ತಿರುಳಾಗಿದೆ. ಪೊಲೀಸ್ ಪಾತ್ರದಲ್ಲಿ ನಟ ಆದಿತ್ಯ ರಗಡ್ ಲುಕ್ ನಲ್ಲಿ ಪ್ರೇಕ್ಷಕರನ್ನು ಮನರಂಜಿಸಲು ಬರುತ್ತಿದ್ದಾರೆಂದು ಹೇಳಿದರು.
ಕನ್ನಡ ಸಿನಿಮಾಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಆ ಸಾಲಿಗೆ ಈಗ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾವೂ ಸೇರಿದೆ. ಹೌದು, ಕೊಲ್ಕತ್ತಾದಲ್ಲಿ ನಡೆಯುವ ಕಲ್ಟ್ ಕ್ರಿಟಿಕ್ ಮೂವಿ ಅವಾರ್ಡ್ನಲ್ಲಿ ಒಂದಲ್ಲ, ಎರಡಲ್ಲ ಮೂರು ಪ್ರಶಸ್ತಿಗಳು ಲಭಿಸಿವೆ. ಚಿತ್ರವನ್ನು ಶರಣಪ್ಪ ಎಂ ಕೊಟಗಿ ನಿರ್ಮಾಣ ಮಾಡಿದ್ದಾರೆ.
ಬಲ ರಾಜವಾಡಿ
ಪೂರ್ಣ ಚಂದ್ರ ಅವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ ದಕ್ಕಿದೆ. ನಟ ಬಲ ರಾಜವಾಡಿ ಅವರಿಗೆ ಉತ್ತಮ ಪೋಷಕ ನಟ ಪ್ರಶಸ್ತಿ ಹಾಗೂ ಚಿತ್ರಕ್ಕೆ ಬೆಸ್ಟ್ ಔಟ್ ಸ್ಟಾಂಡಿಂಗ್ ಅಚೀವ್ ಮೆಂಟ್ ಅವಾರ್ಡ್ ಬಂದಿದೆ. ಸಹಜವಾಗಿಯೇ ಈ ಪ್ರಶಸ್ತಿ ಲಭಿಸಿದ್ದು, ಚಿತ್ರತಂಡಕ್ಕೆ ಖುಷಿ ನೀಡಿದೆ. ಚಿತ್ರ ಈಗಾಗಲೇ ಬಿಡುಗಡೆಗೂ ಸಜ್ಜಾಗಿದೆ. ಚಿತ್ರಕ್ಕೆ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಬಂದಿರುವುದಕ್ಕೆ ಚಿತ್ರತಂಡ ಸಂಭ್ರಮಪಟ್ಟಿದೆ.
ಈಗಾಗಲೇ ಒಂದಷ್ಟು ಚಿತ್ರೋತ್ಸವಗಳಲ್ಲಿ ಈ ಚಿತ್ರ ಆಯ್ಕೆಯಾಗಿದ್ದು, ಪ್ರದರ್ಶನ ಕಾಣಲಿದೆ. ಚಿತ್ರದಲ್ಲಿ ವರ್ಧನ್ ನಾಯಕರಾಗಿ ಅಭಿನಯಿಸಿದ್ದಾರೆ. ಪೂಜ (ತಿಥಿ ಖ್ಯಾತಿ), ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅನುಷಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ ಮುಂತಾದವರು ಚಿತ್ರದಲ್ಲಿದ್ದಾರೆ.
ನಟ ಚಿರಂಜೀವಿ ಸರ್ಜಾ ಅಭಿನಯದ “ರಣಂ” ಸಿನಿಮಾವೊಂದು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಹೌದು, “ರಣಂ” ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ಚೇತನ್ (ಆ ದಿನಗಳು) ಹೀರೋ. ಇದರಲ್ಲಿ ವಿಶೇಷ ಪಾತ್ರದ ಮೂಲಕ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.
ಚೇತನ್
ಈ ಚಿತ್ರ ಮಾರ್ಚ್ ೨೬ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ರಣಂ” ತೆರೆ ಕಾಣಲಿದೆ ಎಂಬುದು ವಿಶೇಷ. ಈಗಾಗಲೇ ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿರುವ ಆರ್. ಎಸ್. ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಆರ್. ಶ್ರೀನಿವಾಸ್ (ಕನಕಪುರ) ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ 21ನೇ ಚಿತ್ರ. ಇವರೊಂದಿಗೆ ಕಿರಣ್ ಗೌಡ ಈ ಚಿತ್ರದ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
“ರಣಂ” ಚಿರಂಜೀವಿ ಸರ್ಜಾ ಅವರು ನಟಿಸಿ, ಡಬ್ಬಿಂಗ್ ಮಾಡಿರುವ ಕೊನೆಯ ಚಿತ್ರ. ವಿ.ಸಮುದ್ರ ನಿರ್ದೇಶನದ ಈ ಚಿತ್ರಕ್ಕೆ ರವಿಶಂಕರ್ ಹಾಗೂ ಎಸ್ ಚಿನ್ನ ಸಂಗೀತ ನೀಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ಸಂಭಾಷಣೆಯನ್ನು ಪಾರ್ವತಿ ಚಂದು ಮತ್ತು ಮೋಹನ್ ಬರೆದಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ ಮುಂತಾದವರು ಚಿತ್ರದಲ್ಲಿದ್ದಾರೆ.
ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಿರ್ದೇಶನದ ಜತೆಗೆಯೇ ಈಗ ಚಿತ್ರ ನಿರ್ಮಾಣಕ್ಕೂ ಕೈ ಹಾಕುತ್ತಿದ್ದಾರೆ. ಚಿತ್ರ ನಿರ್ಮಾಣದ ಅವರ ಸಾಹಸಕ್ಕೀಗ ನಿರ್ಮಾಪಕ ಮಂಜುನಾಥ್ ದಾಸೇಗೌಡ ಸಾಥ್ ನೀಡಿದ್ದಾರೆ. ʼಸತ್ಯ ಮತ್ತು ಮಯೂರ ಪಿಕ್ಚರ್ಸ್ʼ ಬ್ಯಾನರ್ ನಲ್ಲಿ ಇಷ್ಟರಲ್ಲಿಯೇ ಹೊಸ ಸಿನಿಮಾ ಶುರುವಾಗಲಿದೆ ಅಂತ ಅವರೇ ರಿವೀಲ್ ಮಾಡಿದ್ದಾರೆ. ವಿವಿಧ ವಸ್ತು ವಿಷಯಗಳನ್ನು ಒಳಗೊಂಡಿರುವ ಚಲನಚಿತ್ರ ಹಾಗೂ ಓಟಿಟಿಗೆ ಬೇಕಾದ ಕಥೆಗಳನ್ನು ಪ್ರೇಕ್ಷಕರ ಮುಂದಿಡುವ ಉದ್ದೇಶ ಹೊಂದಲಾಗಿದೆ ಅಂತ ಸತ್ಯ ಪ್ರಕಾಶ್ ಹಾಗೂ ನಿರ್ಮಾಪಕ ದಾಸೇಗೌಡ ಅನೌನ್ಸ್ ಮಾಡಿದ್ದಾರೆ.
” ರಾಮಾ ರಾಮಾ ರೇʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಯವಾದ ಡಿ.ಸತ್ಯ ಪ್ರಕಾಶ್, ಆನಂತರ ” ಒಂದಲ್ಲ ಎರಡಲ್ಲಾ ʼ ಚಿತ್ರ ನಿರ್ದೇಶಿಸಿದ್ದರು. ಆದಾದ ನಂತರ ಪಿಆರ್ ಕೆ ಬ್ಯಾನರ್ ನಲ್ಲಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆಂಬ ಸುದ್ದಿ ಬಹಿರಂಗ ಗೊಂಡಿತ್ತು. ಅದೀಗ ಏನಾಯ್ತೋ ಗೊತ್ತಿಲ್ಲ, ಈಗ ತಾವೇ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅವರಿಗೆ ನಿರ್ಮಾಪಕ ದಾಸೇ ಗೌಡ ಬೆಂಬಲಕ್ಕೆ ನಿಂತಿದ್ದಾರೆ.
ದಾಸೇ ಗೌಡ ಈಗಾಗಲೇ ತಮ್ಮದೇ ‘ಮಯೂರ ಮೋಶನ್ ಪಿಕ್ಚರ್ಸ್ ಮೂಲಕ ‘ಉದ್ಘರ್ಷ’ (ಸಹನಿರ್ಮಾಣ) ಮತ್ತು ‘ವೀಕೆಂಡ್’ ಎಂಬ ಸಿನಿಮಾ ನಿರ್ಮಾಣ ಮಾಡಿದ ಅನುಭವ ಇದೆ. ಈಗ ನಿರ್ದೇಶಕ ಸತ್ಯ ಜತೆಗೆ ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ಸತ್ಯ ಪ್ರಕಾಶ್ ನಿರ್ದೇಶನ ಮಾಡಲಿದ್ದಾರೆ. ” ರಾಮಾ ರಾಮಾ ರೇʼ ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡ ಈ ಚಿತ್ರದಲ್ಲೂ ಮುಂದುವರೆಯಲಿದೆ. ಕಥೆ, ಚಿತ್ರಕಥೆ ಮುಗಿಸಿ ಶೂಟಿಂಗಿಗೆ ಸಿದ್ದವಾಗಿರುವ ಈ ಸಿನಿಮಾದ ಇನ್ನಷ್ಟು ವಿವರಗಳು ಸದ್ಯದಲ್ಲೆ ಹೊರಬೀಳಲಿವೆಯಂತೆ.
ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಬರಲು ಸಜ್ಜಾಗಿವೆ ಈಗಲೂ ಒಂದಷ್ಟು ಹೊಸಬರ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಆದರೆ, ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಒಳಗೊಳ್ಳುವ ಮೂಲಕ ಹೊಸತನ ಸೃಷ್ಟಿಸಲು ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸಬರ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೂಡ ಸೇರಿದೆ. ಆ ಚಿತ್ರಕ್ಕೆ “ಮೋಕ್ಷ” ಎಂದು ಹೆಸರಿಡಲಾಗಿದೆ.
ಸಮರ್ಥ್ ನಾಯಕ್, ನಿರ್ದೇಶಕ
ಇದೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾ. ಅಂತೆಯೇ ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ. ಅಂದಹಾಗೆ, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 27ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸಮರ್ಥ್ ನಾಯಕ್ ನಿರ್ದೇಶಕರು. ಚಿತ್ರದ ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಇದು ಇವರಿಗೆ ಮೊದಲ ನಿರ್ದೇಶನದ ಸಿನಿಮಾ ಆಗಿದ್ದರೂ, ನಿರ್ದೇಶನದ ಅನುಭವ ಇವರಿಗಿದೆ. ಈಗಾಗಲೇ ಸಾಕಷ್ಟು ಜಾಹೀರಾತು ನಿರ್ಮಿಸಿ ಅನುಭವವಿರುವ ಸಮರ್ಥ್ ನಾಯಕ್, ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
ಇದೊಂದು ಗೊಂದಲಗೊಳಿಸುವ, ರೋಚಕತೆ ಎನಿಸುವ, ಭಯಾನಕ, ನಿಗೂಢ ಕಥೆ ಇರುವಂತಹ ಸಸ್ಪೆನ್ಸ್ ಇದರಲ್ಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸಮರ್ಥ್ ನಾಯಕ್. ಚಿತ್ರದ ಎಲ್ಲಾ ಪಾತ್ರಗಳಲ್ಲೂ ವಿಶೇಷತೆ ಇದೆ. ವಿಶೇಷವಾಗಿ ಮಾಸ್ಕ್ ಮ್ಯಾನ್ ಎಂಬ ಪಾತ್ರ ಚಿತ್ರದ ಮುಖ್ಯ ಆಕರ್ಷಣೆ ಎಂಬುದು ನಿರ್ದೇಶಕರ ಮಾತು.
ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ನೀಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದಲ್ಲಿದ್ದಾರೆ.