ಮೈಸೂರಲ್ಲಿ ರತ್ನನ್‌ ಸಂಭ್ರಮ! ಪುನೀತ್‌ ರಾಜ್‌ಕುಮಾರ್ ಬರ್ತ್‌ಡೇಗೆ ಫೀಲ್‌ ದಿ ಪವರ್‌ ಸಾಂಗು‌ ರಿಲೀಸ್ – ಏಪ್ರಿಲ್‌ 1ಕ್ಕೆ ‌ ಯುವರತ್ನ

ಕನ್ನಡದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ. ಸ್ಟಾರ್‌ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿವೆ. ಆ ಸಾಲಲ್ಲಿ ಈಗ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಕೂಡ ಇದೆ. ಏಪ್ರಿಲ್‌ 1ರಂದು ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರವನ್ನು ಸಂತೋಷ್‌ ಆನಂದರಾಮ್‌ ನಿರ್ದೇಶಿಸಿದ್ದಾರೆ.

ಬಿಡುಗಡೆ ಮುನ್ನ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿರುವ ಚಿತ್ರತಂಡ, ಆ ನಿಟ್ಟಿನಲ್ಲಿ ಜೋರು ತಯಾರಿ ನಡೆಸಿದೆ. ಮಾರ್ಚ್‌ 20ರಂದು ಮೈಸೂರಿನಲ್ಲಿ “ಯುವರತ್ನ” ಈವೆಂಟ್‌ ನಡೆಸಲಿದೆ “ಯುವ ಸಂಭ್ರಮ” ಹೆಸರಲ್ಲಿ ನಡೆಯುವ ಈವೆಂಟ್‌ಗೆ ಈಗಾಗಲೇ ಸಾಕಷ್ಟು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಇತ್ತೀಚೆಗೆ “ಯುವ ಸಂಭ್ರಮ” ಕಾರ್ಯಕ್ರಮದ ಲೋಗೋ ಕೂಡ ಲಾಂಚ್‌ ಮಾಡಲಾಗಿದೆ.

ಮೈಸೂರಲ್ಲಿ ಈವೆಂಟ್‌ ನಡೆಸುವುದಕ್ಕೂ ಮುನ್ನ, ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌ ಅವರ ಬರ್ತ್‌ಡೇ ಹಿನ್ನೆಲೆಯಲ್ಲಿ ಫೀಲ್‌ ದಿ ಪವರ್‌ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರು ಹಲವು ಯೋಜನೆ ಹಾಕಿಕೊಂಡ ಬಗ್ಗೆ ಹೇಳುವುದಿಷ್ಟು. “ಮೈಸೂರಲ್ಲಿ ಪ್ರೀ ರಿಲೀಸ್‌ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಅಂದು ಸಂಗೀತ ನಿರ್ದೇಶಕ ತಮನ್‌, ಗಾಯಕರಾದ ವಿಜಯಪ್ರಕಾಶ್‌, ಅರ್ಮಾನ್‌ ಮಲ್ಲಿಕ್‌ ಸೇರಿದಂತೆ ಸಿನಿಮಾ ತಾರೆಯರು ಭಾಗವಹಿಸುತ್ತಿದ್ದಾರೆ.

ಮೈಸೂರಲ್ಲಿ ಕಳೆದ ವರ್ಷ ದಸರಾ ಆಚರಣೆಯಾಗಲಿಲ್ಲ. ಅದನ್ನು ಮರುಕಳಿಸಲು “ಯುವ ಸಂಭ್ರಮ” ಹೆಸರಲ್ಲಿ ಈವೆಂಟ್‌ ಮಾಡಲು ಮುಂದಾಗಿದ್ದೇವೆ. ಮೈಸೂರಿನ ಮಹಾರಾಜಾ ಮೈದಾನದಲ್ಲಿ ಈ ಈವೆಂಟ್‌ ನಡೆಯಲಿದೆ. ಇನನು, ಮಾ.17ರಂದು ಪುನೀತ್‌ ಅವರ ಹುಟ್ಟುಹಬ್ಬ. ಅದಕ್ಕಾಗಿ ಅಂದು “ಫೀಲ್‌ ದ ಪವರ್” ಹಾಡು ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ ಪುನೀತ್‌ ಅವರ ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಮಾರ್ಚ್‌ 27ರಂದು ಹೈದರಾಬಾದ್‌ನಲ್ಲಿ ದೊಡ್ಡ ಈವೆಂಟ್‌ ನಡೆಯಲಿದೆ. ಏಪ್ರಿಲ್‌ ೧ರಂದು ಚಿತ್ರ ಬಿಡುಗಡೆಯಾಗಲಿದೆ” ಎಂಬುದು ನಿರ್ದೇಶಕರ ಮಾತು.

ತೆಲುಗಿನಲ್ಲಿ “ಯುವರತ್ನ” ಚಿತ್ರವನ್ನು ದಿಲ್‌ ರಾಜು ಹಾಗೂ ಸಾಯಿಕೋರ ರಿಲೀಸ್‌ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರ ದುಬೈ ಅಮೆರಿಕಾ, ಆಸ್ಟೃೇಲಿಯಾದಲ್ಲೂ ರಿಲೀಸ್‌ ಆಗುತ್ತಿದೆ. ಯುಕೆಯಲ್ಲಿ ಥಿಯೇಟರ್‌ ಓಪನ್‌ ಆಗದ ಕಾರಣ, ಅಲ್ಲಿ ರಿಲೀಸ್‌ ಮಾಡುತ್ತಿಲ್ಲ. ವಿಶ್ವದಲ್ಲಿ ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲಾ ಈ ಚಿತ್ರ ರಿಲೀಸ್‌ ಆಗಲಿದೆ ಎಂಬುದು ಚಿತ್ರತಂಡದ ಮಾತು.

ನಟ ಪುನೀತ್ ರಾಜಕುಮಾರ್‌ ಅವರಿಗೆ “ಯುವರತ್ನ” ಚಿತ್ರದ ಮೇಲೆ ಸಾಕಷ್ಟು ಭರವಸೆ ಇದೆಯಂತೆ. ಅದಕ್ಕೆ ಕಾರಣ, ಚಿತ್ರದ ಕಥೆಯಂತೆ. ಆ ಕುರಿತು ಪುನೀತ್‌ ಹೇಳುವುದು ಹೀಗೆ. “ಮೈಸೂರಲ್ಲಿ ಒಳ್ಳೆಯ ಈವೆಂಟ್‌ ಆಗುತ್ತಿದೆ. ಎರಡು ತಿಂಗಳಿನಿಂದ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಜನರು ಕೂಡ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಿದ್ದಾರೆ. ಮುಂದೆಯೂ ಒಳ್ಳೆಯ ಚಿತ್ರಗಳು ಬರುತ್ತವೆ. ನನಗೆ ಹೊಂಬಾಳೆ ಫಿಲಂಸ್‌ ಜೊತೆ ಮೂರನೇ ಸಿನಿಮಾ. ನಿರ್ದೇಶಕ ಜೊತೆ ಎರಡನೇ ಚಿತ್ರ. ಇದು ಅಭಿಮಾನಿಗಳಿಗೆ ಮಾಡಿದ ಸಿನಿಮಾವಲ್ಲ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರ. ಒಳ್ಳೆಯ ಸಂದೇಶವನ್ನು ಇಲ್ಲಿ ಕಾಣಬಹುದು” ಎನ್ನುತ್ತಾರೆ ಪುನೀತ್.

ಈ ಚಿತ್ರದಲಿ “ಡಾಲಿ” ಧನಂಜಯ್‌ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆ ಬಗ್ಗೆ ಹೇಳುವ ಅವರು, “ನನಗೆ ಇಲ್ಲಿ ಒಳ್ಳೆಯ ರೋಲ್‌ ಸಿಕ್ಕಿದೆ. ಒಂದೊಳ್ಳೆಯ ಸಿನಿಮಾದ ಭಾಗವಾಗಿದ್ದೇನೆ ಅಂತ ಹೇಳಲು ಖುಷಿಯಾಗುತ್ತಿದೆ. ಸಾಕಷ್ಟು ವ್ಯಾಲ್ಯು ಇರುವಂತಹ ಚಿತ್ರವಿದು. ಈ ಚಿತ್ರ ನೋಡುಗರಿಗೆ ಸಖತ್‌ ಮನರಂಜನೆಯಂತೂ ಸಿಗಲಿದೆ. ಹಾಗೆಯೇ ಒಂದಷ್ಟು ಹೊಸ ವಿಷಯಗಳನ್ನೂ ತಿಳಿದುಕೊಳ್ಳಬಹುದು” ಎನ್ನುತ್ತಾರೆ ಧನಂಜಯ್.‌
ಸೋನುಗೌಡ ಕೂಡ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಆ ಕುರಿತು ಹೇಳುವ ಸೋನುಗೌಡ, “ನಾನು ಅಪ್ಪು ಸರ್‌ ಜೊತೆ “ರಾಮ್‌” ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಈಗ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಹೇಳಿದಂತೆಯೇ ಸಿನಿಮಾ ಶೂಟ್‌ ಮಾಡಿದ್ದಾರೆ. ನಾನು ಕೂಡ ಅಪ್ಪು ಅಭಿಮಾನಿ. ಬಿಗ್‌ ಬ್ಯಾನರ್‌ನಲ್ಲಿ, ಬಿಗ್‌ ಸ್ಟಾರ್‌ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಇಲ್ಲಿ ಪ್ರತಿ ಪಾತ್ರಕ್ಕೂ ಆದ್ಯತೆ ಇದೆ ಎಂಬುದು ಸೋನು ಮಾತು.

‌ಚಿತ್ರದಲ್ಲಿ ದಿಗಂತ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು, ಈ ಚಿತ್ರದ ಈವೆಂಟ್‌ ಜವಾಬ್ದಾರಿಯನ್ನು ಶ್ರೇಯಸ್‌ ಮೀಡಿಯಾ ವಹಿಸಿಕೊಂಡಿದೆ. ನವರಸನ್‌ ಈ ಈವೆಂಟ್‌ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಶ್ರೇಯಸ್‌ ಮೀಡಿಯಾ “ಪೊಗರು”,”ರಾಬರ್ಟ್”‌ ಚಿತ್ರಗಳ ಈವೆಂಟ್‌ ನಡೆಸಿದೆ. ಇದು ಮೂರನೇ ಈವೆಂಟ್‌ ಎಂಬುದು ವಿಶೇಷ.

Related Posts

error: Content is protected !!