ಸಾಮಾನ್ಯವಾಗಿ ಹೊಸಬರ ಸಿನಿಮಾಗಳಿಗೆ ಸ್ಟಾರ್ ನಟರು ಸಾಥ್ ಕೊಡುವುದು ಹೊಸದೇನಲ್ಲ. ಸದಾ ಹೊಸಬರ ಚಿತ್ರಗಳ ಟ್ರೇಲರ್, ಆಡಿಯೋ, ಟೀಸರ್, ಪೋಸ್ಟರ್‌ಗಳ ರಿಲೀಸ್ ಮಾಡುವ ಮೂಲಕ ಶುಭಹಾರೈಸುತ್ತಲೇ ಇದ್ದಾರೆ. ಈಗ “ಅನಘ” ಸಿನಿಮಾ ತಂಡಕ್ಕೂ ಉಪೇಂದ್ರ ಸಾಥ್ ನೀಡಿದ್ದಾರೆ. ಹೌದು, ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್‌ನಡಿ ತಯಾರಾಗಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಉಪೇಂದ್ರ ಅವರು ಟ್ರೇಲರ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ.
ಡಿ.ಪಿ.ಮಂಜುಳಾ ನಾಯಕ ನಿರ್ಮಾಪಕರು. ರಾಜು ಎನ್.ಆರ್. ಚಿತ್ರದ ನಿರ್ದೇಶಕರು. ಇವರಿಗಿದು ಮೊದಲ ನಿರ್ದೇಶನದ ಸಿನಿಮಾ. ಕಥೆ ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಬಹುತೇಕ ಹೊಸ ಪ್ರತಿಭೆಗಳೇ ಈ ಚಿತ್ರದಲ್ಲಿವೆ. ಇದೊಂದು ಸಸ್ಪೆನ್ಸ್, ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರ. ಈ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ, ಪ್ರಚಾರ ಕಾರ್ಯಕ್ಕೆ ರೆಡಿಯಾಗಿದೆ. ರಂಗಭೂಮಿ ಪ್ರತಿಭೆ ನಳೀನ್ ಕುಮಾರ್ ಮತ್ತು ಪವನ್‌ಪುತ್ರ ಚಿತ್ರದ ಆಕರ್ಷಣೆ. ಇನ್ನುಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್‌ಗೌಡ್ರು, ಕಿರಣತೇಜ, ಕಿರಣ್‌ರಾಜ್, ಕರಣ್ ಆರ್ಯನ್, ದೀಪ, ರೋಹಿತ್, ಖುಷಿ, ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ, ಮೋಟು ರವಿ, ಅಭಿ ಮತ್ತು ವಿರೇಶ ಇತರರು ನಟಿಸಿದ್ದಾರೆ. ಇನ್ನು ಬೆಂಗಳೂರು, ದೇವರಾಯನದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶಂಕರ್ ಅವರ ಛಾಯಾಗ್ರಹಣವಿದೆ. ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸವಿದೆ.