Categories
ಸಿನಿ ಸುದ್ದಿ

ಅರವಿಂದ್-ದಿವ್ಯಾ ಲವ್‌ಲೈಫ್ ಸೀಕ್ರೇಟ್! ಬಿಗ್‌ ಬಾಸ್‌ ಮನೇಲಿ ಡಿಂಗು-ಡಾಂಗು ; ಹೊರಗೆ ಹಂಗೂ ಹಿಂಗು?

I love u but I am not in love with u !?

  • ವಿಶಾಲಾಕ್ಷಿಸಿನಿಲಹರಿ ವಿಶೇಷ

ಅರವಿಂದ್-ದಿವ್ಯಾ ಇವರಿಬ್ಬರು ಕೇವಲ ಬಿಗ್‌ಬಾಸ್ ಸ್ಪರ್ಧಿಗಳಾಗಿ ಉಳಿದಿಲ್ಲ ಬದಲಾಗಿ ಕ್ಯೂಟ್ ಜೋಡಿಯಾಗಿ ಕರುನಾಡ ಅಂಗಳದಲ್ಲಿ ಮೆರೆಯುತ್ತಿದ್ದಾರೆ. ಲಕ್ಷಾಂತರ ಜನರು
ಈ ಬೊಂಬಾಟ್ ಜೋಡಿಗೆ ಅಭಿಮಾನಿಗಳಾಗಿದ್ದಾರೆ. ರಿಯಾಲಿಟಿ ಸ್ಪರ್ಧೆಗೋಸ್ಕರ ಒಟ್ಟಾಗಿರುವ ಈ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗ್ಬೇಕು ಅಂತ ಇವರಿಬ್ಬರ ಫ್ಯಾನ್ಸ್ ಆಸೆಪಟ್ಟಿದ್ದಾರೆ. ಅರ್ವಿಯಾ ಅಂತ ನಾಮಕರಣ ಮಾಡಿ ಇವರಿಬ್ಬರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಬಿಗ್‌ಬಾಸ್ ಫೈನಲ್ ಮುಗಿಸಿಕೊಂಡು ಹೊರಗಡೆ ಬಂದರೆ ಸಾಕು ಇವರಿಬ್ಬರಿಗೂ ಮುತ್ತಿನಹಾರ ಹಾಕಿ ಮೆರವಣಿಗೆ ಮಾಡ್ಬೇಕು ಅಂತ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅರ್ವಿಯಾ ಲವ್‌ಲೈಫ್ ಸೀಕ್ರೇಟ್ ಫೋಟೋಸ್ ಬಟಾಬಯಲಾಗಿದ್ದು ಇವರಿಬ್ಬರ ಅಪ್ಪಟ ಅಭಿಮಾನಿಗಳು ಅಪ್‌ಸೆಟ್ ಆಗುವಂತೆ ಮಾಡಿದೆ.

ಅದೇನದು ಅರ್ವಿಯಾ ಲವ್‌ಲೈಫ್ ಸೀಕ್ರೇಟ್ ಅಂತೀರಾ? ಆ ಇಂಟ್ರೆಸ್ಟಿಂಗ್ ವಿಷ್ಯವನ್ನು ತಿಳಿದುಕೊಳ್ಳೋದಕ್ಕೂ ಮುನ್ನ ಅರವಿಂದ್-ದಿವ್ಯಾ ಬಗ್ಗೆ ಶಾರ್ಟ್ ಅಂಡ್ ಸ್ವೀಟಾಗಿ ತಿಳಿದುಕೊಳ್ಳೋಣ. ನಟಿ ದಿವ್ಯಾ ಉರುಡುಗ ಹಾಗೂ ಬೈಕ್ ರೈಡರ್ ಅರವಿಂದ್ ಕೆ.ಪಿ ಕೇವಲ ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆಯನ್ನ ಪ್ರವೇಶ ಮಾಡಿದ್ದರು. ದೊಡ್ಮನೆ ಅಂಗಳಕ್ಕೆ ಬಲಗಾಲಿಟ್ಟು ಬರುವಾಗ ಇವರಿಬ್ಬರು ಅಪರಿಚಿತರು. ಆದರೆ, ಅರಮನೆಯಂತಿರುವ ಸೆರೆಮನೆಯಲ್ಲಿ ದಿನಗಳು ಕಳೆದಂತೆ ಅರವಿಂದ್-ದಿವ್ಯಾ ಇಬ್ಬರು ಕ್ಲೋಸ್ ಆದರು. ಒಬ್ಬರಿಗೊಬ್ಬರು ಫೀಲಿಂಗ್ಸ್ ನ ಶೇರ್ ಮಾಡಿಕೊಂಡರು. ಇಷ್ಟಕ್ಕೆ ಸುಮ್ಮನಾಗದೇ ಒಟ್ಟೊಟ್ಟಿಗೆ ಕಾಲ ಕಳೆಯುವುದಕ್ಕೆ ಶುರು ಮಾಡಿದರು. ಕಣ್ಮಣಿ ಕಣ್ಣಿಗೆ ಬೀಳೋದಲ್ಲದೇ ಕರುನಾಡ ಮಂದಿಯ ಕಣ್ಣಿಗೂ ಬಿದ್ದರು.

ಅರವಿಂದ್-ದಿವ್ಯಾರನ್ನು ಒಟ್ಟಿಗೆ ನೋಡಿದ ಮಂದಿಗೆ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ ಎಂದೆನಿಸಿದ್ದು ಮಾತ್ರ ಸತ್ಯ. ಆದರೆ, ಅರ್ವಿಯಾ ಜೋಡಿ ಮಾತ್ರ ಬಿಗ್‌ಬಾಸ್ ಮನೆಯಲ್ಲಾಗಲಿ ಅಥವಾ ಕೊರೊನಾ ಕಾರಣದಿಂದ ದೊಡ್ಮನೆ ತೊರೆದು ಬಂದಾಗಾಗಲೀ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಹೀಗಾಗಿ, ಈ ಕ್ಷಣಕ್ಕೂ ಇವರಿಬ್ಬರ ನಡುವೆ ಇರುವುದು ಸ್ನೇಹಾನಾ ಅಥವಾ ಪ್ರೀತಿನಾ ಎನ್ನುವ ಸಂಶಯವಿದೆ. ಅದಾಗ್ಯೂ ಈ ಜೋಡಿ ಪ್ರಣಪಕ್ಷಿಗಳಂತೆ ದೊಡ್ಮನೆಯನ್ನು ರಂಗೇರಿಸುತ್ತಲೇ ಇದೆ. ಪ್ರತಿಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಾ ಫೈನಲ್ಸ್ ತಲುಪೋದಕ್ಕೆ ಅರ್ವಿಯಾ ಕಾದಾಡುತ್ತಲೇ ಇದ್ದಾರೆ. ಈ ಮಧ್ಯೆ ಅರವಿಂದ್ ಹಾಗೂ ದಿವ್ಯಾ ಲವ್‌ಲೈಫ್ ಸೀಕ್ರೇಟ್ ಬಗ್ಗೆ ಹಿಂಟ್ ಕೊಡುವ ಕೆಲವೊಂದು ಖಾಸಗಿ ಫೋಟೋಗಳು ವೈರಲ್ ಆಗಿವೆ. ಇದರಿಂದ ಅರ್ವಿಯಾ ಫ್ಯಾನ್ಸ್ ಫುಲ್ ಅಪ್‌ಸೆಟ್ ಆಗಿದ್ದಾರೆ.

ಬಿಗ್‌ಬಾಸ್ ಅಂಗಳಕ್ಕೆ ಕಾಲಿಡುವಾಗ ದಿವ್ಯಾ `ಐ ಆ್ಯಮ್ ಸಿಂಗಲ್’ ಅಂತ ಕಿಚ್ಚನ ಮುಂದೆ ಹೇಳಿಕೊಂಡಿದ್ದರು. ಆದ್ರೀಗ, ಯಾವುದೇ ಹುಡುಗನಿಗೆ ಅಪ್ಪಿಕೊಂಡು ಪಪ್ಪಿ ಕೊಡುತ್ತಿರುವ ಫೋಟೋ ಸೇರಿದಂತೆ ಕೆಲವು ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗಿವೆ. ದಿವ್ಯಾ ಉರುಡುಗ ಅವರದ್ದು ಮಾತ್ರವಲ್ಲ ಅರವಿಂದ್ ಕೆ.ಪಿ ಕೂಡ ಯಾವುದೋ ಹುಡುಗಿಯ ಕೆನ್ನೆಗೆ ಮುತ್ತಿಡುತ್ತಿರುವ ಫೋಟೋ ಕೂಡ ಸೋಷಿಯಲ್ ಲೋಕಕ್ಕೆ ಬಂದಿದೆ. ಅಂದ್ಹಾಗೇ, ಈ ಫೋಟೋಗಳನ್ನು ನೋಡಿದ್ರೆ ಇವರಿಬ್ಬರು ಲವ್‌ಲೈಫ್‌ನ ಎಂಜಾಯ್ ಮಾಡಿದ್ದಾರೆ ಎನಿಸುತ್ತೆ. ಈಗಲೂ ಲವ್‌ಲೈಫ್‌ನಲ್ಲಿದ್ದಾರಾ ಈ ಪ್ರಶ್ನೆಗೆ ಇಬ್ಬರು ಬಿಗ್‌ಬಾಸ್ ಮನೆಯಿಂದ ಹೊರಬಂದ್ಮೇಲೆ ಉತ್ತರ ಕೊಡ್ಬೇಕು. ಆ ಉತ್ತರ ಹೇಗಿರಲಿದೆ ಎನ್ನುವುದೇ ಕೂತೂಹಲ.

ದೊಡ್ಮನೆಯಲ್ಲಿ ಪ್ರಣಯಪಕ್ಷಿಗಳಂತೆ ಕಾಣುತ್ತಿರುವ ಅರ್ವಿಯಾ ಮಧ್ಯೆ ಪ್ರೀತಿ ಚಿಗುರಿದೆಯಾ ಗೊತ್ತಿಲ್ಲ. `ಐ ಲವ್ ಯೂ ಬಟ್ ಐ ಆ್ಯಮ್ ನಾಟ್ ಇನ್ ಲವ್ ವಿತ್ ಯೂ’ ಹೀಗಂತ ಅರ್ವಿಯಾ ಓಪನ್ನಾಗಿ ಹೇಳಿ ಬಿಡ್ತಾರಾ? ಹೀಗಂತ ಅಂತಿಮ ತೀರ್ಮಾನಕ್ಕೆ ಬರುವುದಕ್ಕೂ ಆಗ್ತಿಲ್ಲ. ಆದರೆ, ಅರವಿಂದ್ ಹಾಗೂ ದಿವ್ಯಾ ಬೇರೆ ಬೇರೆಯವರೊಟ್ಟಿಗೆ ಇರುವ ಖಾಸಗಿ ಫೋಟೋಗಳನ್ನು ನೋಡಿದ್ರೆ ಹಳೆಯ ಪ್ರೇಮಪುರಾಣ ಇರುವುದಂತೂ ಖಚಿತ. ಅದು ಈಗ್ಲೂ ಚಾಲ್ತಿಯಲ್ಲಿದೆಯಾ ಸಮ್ ರೀಸನ್ಸ್ ನಿಂದ ಬ್ರೇಕಪ್ ಆಗಿದೆಯಾ ಗೊತ್ತಿಲ್ಲ?

ಅದು ಏನೇ ಆಗಿರಲಿ ಅರ್ವಿಯಾ ಜೋಡಿ ರಿಯಾಲಿಟಿ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲಿ, ಅಭಿಮಾನಿಗಳು ಒಟ್ಟಿರುವ ಪ್ರೀತಿ ನಂಬಿಕೆಯನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲಿ ಎನ್ನುವುದೇ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಬರ್ತ್‌ಡೇ ಸಂಭ್ರಮದಲ್ಲಿ ರಿಯಲ್‌ ಹೀರೋ! ಸೋನು ಸೂದ್‌ಗೆ ಶುಭಾಶಯಗಳ ಸುರಿಮಳೆ

ಸೋನು ಸೂದ್‌ ಈ ಹೆಸರು ಈಗ ಎಲ್ಲೆಡೆ ಪರಿಚಿತ. ಬರೀ ನಟರಾಗಿಯಷ್ಟೇ ಅಲ್ಲ, ಮಾನವೀಯ ಮೌಲ್ಯವಿರುವ ಒಬ್ಬ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಅನ್ನೋದು ವಿಶೇಷ. ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. (ಜುಲೈ ೩೦) ಅವರಿಂದು 48ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ಫ್ಯಾನ್ಸ್‌ ಸಿಕ್ಕಾಪಟ್ಟೆ ಫೋಟೋಸ್‌ ಶೇರ್‌ ಮಾಡಿ ಶುಭಾಶಯ ಹೇಳ್ತಾ ಇದ್ದಾರೆ.

ರೀಲ್‌ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು, ರಿಯಲ್‌ ಲೈಫ್‌ನಲ್ಲಿ ನಿಜಕ್ಕೂ ಅವರು ಹೀರೋನೇ. ಅದಾಗಲೇ ಸಾಬಿತಾಗಿದೆ ಕೂಡ. ತೆರೆ ಮೇಲೆ ಅಬ್ಬರಿಸುವ ವಿಲನ್‌ ಸೋನು ಅವರ ನಟನೆಯನ್ನು ಎಷ್ಟು ಇಷ್ಟಪಡ್ತಾರೋ, ಅವರ ನಿಜ ಜೀವನದ ವ್ಯಕ್ತಿತ್ವವನ್ನೂ ಜನರು ಅದಕ್ಕಿಂತಲೂ ಹೆಚ್ಚು ಇಷ್ಟಪಡ್ತಾರೆ. ಅದಕ್ಕೆ ಕಾರಣ, ಕಳೆದ ವರ್ಷ ಕೊರೊನಾ ಹಾವಳಿಯಿಂದ ತತ್ತರಿಸಿದ್ದ ಶ್ರಮಿಕರ ಪರ ನಿಂತು ಕೈಲಾದ ಸೇವೆ ಮಾಡಿದ್ದು.

ಕೊರೊನಾ ಹಿನ್ನೆಲೆಯಲ್ಲಿ ದಿಢೀರ್ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ, ಎಲ್ಲೆಡೆ ಸಮಸ್ಯೆ ಹೆಚ್ಚಾಯ್ತು. ಅದೆಷ್ಟೋ ಜನರು ಇದ್ದ ಕೆಲಸ ಕಳೆದುಕೊಂಡು ಮೌನವಾಗಿದ್ದರು. ಇನ್ನು, ಸರಿಯಾಗಿ ಆಹಾರ ಸಿಗದೆ ಪರಿತಪಿಸುತ್ತಿದ್ದ ಜನರಿಗಂತೂ ಲೆಕ್ಕವೇ ಇಲ್ಲ. ಎಲ್ಲವೂ ಬಂದ್‌ ಆಗಿದ್ದರಿಂದ ತಮ್ಮ ತಮ್ಮ ಊರಿಗೂ ಹೋಗಲಾಗದೆ ಒದ್ದಾಡುತ್ತಿದ್ದ ಕಾರ್ಮಿಕರನ್ನು ಅವರವರ ರಾಜ್ಯ, ಊರುಗಳಿಗೆ ಕಳುಹಿಸಲು ಟೊಂಕ ಕಟ್ಟಿ ನಿಂತಿದ್ದು ಇದೇ ಸೋನು ಸೂದ್.‌ ಆ ಮೂಲಕ ಅವರು ಮಾನವೀಯ ತೋರಿದರು.

ಅವರ ಆ ಕೆಲಸಕ್ಕೆ ಭರ್ಜರಿ ಮೆಚ್ಚುಗೆಯೂ ಸಿಕ್ತು. ಸಾವಿರಾರು ಕಾರ್ಮಿಕರನ್ನು ಸಿಕ್ಕ ಸಿಕ್ಕ ಬಸ್ಸು, ರೈಲುಗಳ ಮೂಲಕ ಮರಳಿ ಗೂಡಿಗೆ ಸೇರಿಸುವ ಮಹತ್ವದ ಕೆಲಸ ಮಾಡಿ ರಿಯಲ್‌ ಹೀರೋ ಆಗಿಬಿಟ್ಟ ಸೋನು, ಕೆಲವರನ್ನು ವಿಮಾನದ ಮೂಲಕವೂ ಅವರವರ ಊರು ತಲುಪಿಸುವ ಕೆಲಸ ಮಾಡಿದರು. ಕೊರೊನೊ ಸಮಯದಲ್ಲಿ ಮಾಡಿದ ಕೆಲಸ ಅವರಿಗೆ ತೃಪ್ತಿ ತಂದಿದ್ದೇ ತಡ, ಯಾವುದೇ ಮೂಲೆಯಲ್ಲಿ ಸಮಸ್ಯೆಗೆ ಸಿಲುಕಿದ ಜನ ಕಷ್ಟ ಅಂದಾಗ, ಅಲ್ಲಿ ಸೋನು ಹೃದಯ ಮಿಡಿಯುತ್ತಿತ್ತು. ಹಾಗಾಗಿ ಸೋನು ಸೂದ್‌ ತೆರೆ ಮೇಲೆ ಖಳನಟರಾಗಿದ್ದರೂ, ತೆರೆಯ ಹಿಂದೆ ನಿಜವಾದ ಹೀರೋನೇ ಅನಿಸಿಕೊಂಡರು.

ತೆಲುಗಿನ “ಅರುಂಧತಿ” ಚಿತ್ರ ಅವರಿಗೆ ದೊಡ್ಡ ಬ್ರೇಕ್ ಕೊಡ್ತು. ಆ ಬಳಿಕ ಸೋನು ಸೂದ್‌ ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುತ್ತಲೇ ಸುದ್ದಿಯಾದರು. ಆ ಬಳಿಕ ಬಾಲಿವುಡ್‌, ಕಾಲಿವುಡ್‌, ಸ್ಯಾಂಡ್‌ಲ್‌ವುಡ್‌ನಲ್ಲೂ ಸೋನು ಹವಾ ಶುರುವಾಯಿತು. ಬಹುತೇಕ ಖಳನಟನ ಪಾತ್ರಗಳಲ್ಲೇ ಮಿಂಚಿದ ಸೋನು ಸೂದ್‌, 2011ರಲ್ಲಿ ಕನ್ನಡ ಸಿನಿರಂಗಕ್ಕೆ ಎಂಟ್ರಿಕೊಟ್ಟರು.

“ವಿಷ್ಣುವರ್ಧನ” ಸಿನಿಮಾ ಮೂಲಕ ಅಬ್ಬರಿಸಿದರು. ಸದ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಬಿಝಿಯಾಗಿರುವ ಸೋನು ಸೂದ್‌, ಮಾನವೀಯ ಕೆಲಸಗಳನ್ನೂ ಮಾಡುತ್ತಿದ್ದಾರೆ. ಅವರ ಬರ್ತ್‌ಡೇ ಅಂಗವಾಗಿ ಅವರ ಫ್ಯಾನ್ಸ್‌ ಸಂಭ್ರಮಿಸುವ ಮೂಲಕ ಸೋನು ಅವರಿಗೆ ಜೈಕಾರ ಹಾಕುತ್ತಿದ್ದಾರೆ.

Categories
ಸಿನಿ ಸುದ್ದಿ

ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ; ಅಭಿಷೇಕ್‌ ಅಂಬರೀಶ್‌ ಹೇಳಿಕೆ


ಮುಂಬರುವ ವಿಧಾನಸಭೆ ಅಖಾಡಕ್ಕಿಳಿದರೂ ಅಚ್ಚರಿ ಇಲ್ಲ!
ಪತಿ ಅಂಬರೀಶ್‌ ಅವರ ಹಾದಿಯನ್ನು ಪತ್ನಿ ಸುಮಲತಾ ಅಂಬರೀಶ್‌ ತುಳಿದಿದ್ದು ಗೊತ್ತೇ ಇದೆ. ಈಗ ಪುತ್ರ ಅಭಿಷೇಕ್‌ ಅಂಬರೀಶ್‌ ಅವರ ಸರದಿ. ಹೌದು, ಅಭಿಷೇಕ್‌ ಅಂಬರೀಶ್‌ ಅವರು ಕೂಡ ರಾಜಕೀಯದತ್ತ ಒಲವು ತೋರಿಸಿದ್ದಾರೆ. ಅರೇ, ಇದೇನಪ್ಪಾ, ಈ ಹಿಂದೆ ಅವರು, “ನನಗೆ ಸಿನಿಮಾ ಮೇಲೆ ಒಲವಿದೆ ಹೊರತು, ರಾಜಕೀಯದ ಮೇಲೆ ಆಸಕ್ತಿಯೇ ಇಲ್ಲ” ಅಂತ ಹೇಳಿದ್ದರು. ಈಗ ನೋಡಿದರೆ, ರಾಜಕೀಯದತ್ತ ಮುಖ ಮಾಡುವ ಸುದ್ದಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆ ಎದುರಾದರೂ, ಇದು ಸತ್ಯ. ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಅವರು ರಾಜಕೀಯ ಪ್ರವೇಶಿಸುವ ಕುರಿತಂತೆ ಸುಳಿವು ನೀಡಿದ್ದಾರೆ.

ಹೀಗಾಗಿ ಇದು ಸದ್ಯ ಮಂಡ್ಯ ರಾಜಕಾರಣದಲ್ಲಿ ಒಂದಷ್ಟು ಕುತೂಹಲದ ವಿಷಯವಾಗಿದೆ. ಸದ್ಯ ಈಗ ವಿಧಾನ ಸಂಭೆ ಹತ್ತಿರವಾಗುತ್ತಿದೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಅಭಿಷೇಕ್‌ ಧುಮುಕುತ್ತಾರಾ ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಇದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಭೇಟಿ ನೀಡಿದ್ದ ಅಭಿಷೇಕ್‌ ಅಂಬರೀಶ್‌, “ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ” ಎಂದಿದ್ದಾರೆ. ಅವರ ಈ ಮಾತು ಒಂದಷ್ಟು ಸಂಚಲನ ಮೂಡಿಸಿದೆ. ಅಲ್ಲಿಗೆ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಣ್ಣದ್ದೊಂದು ಸುಳಿವು ನೀಡಿದ್ದಾರೆ.

“ಭವಿಷ್ಯದಲ್ಲಿ ಏನೇನು ಬದಲಾವಣೆಗಳಾಗುತ್ತವೋ ಯಾರಿಗೆ ಗೊತ್ತು. ಕಳೆದ ವಾರ ಸಿಎಂ ಬದಲಾಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಹಾಗಾಗಿ, ಭವಿಷ್ಯ ಏನು ಅಂತ ಈಗಲೇ ಹೇಳೋಕೆ ಸಾಧ್ಯನಾ? ಜನ ಬಯಸಿದರೆ ನಾನು ಬರ್ತೀನಿ. ಮಂಡ್ಯಗಾಗಲಿ ಮದ್ದೂರಿಗಾಗಲಿ ಏಳು ಕ್ಷೇತ್ರಗಳಿಗೂ ಒಳ್ಳೆಯ ಶಾಸಕರು ಸಿಗಬೇಕು. ಒಳ್ಳೆಯ ಪ್ರತಿನಿಧಿಗಳು ಸಿಗಬೇಕು” ಎನ್ನುವ ಮೂಲಕ ಅಭಿಷೇಕ್ ಅವರು ಸದ್ಯದ ಮಟ್ಟಿಗೆ ಕುತೂಹಲ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಮಂಡ್ಯದಲ್ಲಿ ನಡೆಯುವ ಚುನಾವಣೆಗಳಂತೂ ಪ್ರತಿಷ್ಠೆಯಾಗಿರುತ್ತವೆ. ಒಂದು ವೇಳೆ ಅಭಿಷೇಕ್‌ ಅಂಬರೀಶ್‌ ಅವರು ವಿಧಾನಸಭೆ ಅಖಾಡಕ್ಕಿಳಿದರೂ ಅಚ್ಚರಿ ಇಲ್ಲ ಬಿಡಿ.

Categories
ಸಿನಿ ಸುದ್ದಿ

ಹಾಡಿ ಕುಣಿದ ವಾಸುಕಿ ವೈಭವ್ ಗೆ ಮ್ಯಾನ್ ಆಫ್ ದಿ ಮ್ಯಾಚ್! ಮ್ಯೂಸಿಕ್ ಡೈರೆಕ್ಟರ್ ಕುಣಿದ್ರು

ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಹಾಗೂ ಸತ್ಯ & ಮಯೂರ ಪಿಕ್ಚರ್ಸ್ ಜತೆಗೂಡಿ ತಯಾರಿಸುತ್ತಿರುವ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿದೆ.

ಡಿ ಸತ್ಯ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕುತೂಹಲಕಾರಿ ಅಂಶವೊಂದು ಹೊರಬಿದ್ದಿದೆ. ಈ ಚಿತ್ರದಲ್ಲಿ ವಾಸುಕಿ ವೈಭವ್ ಅವರು ಸಂಗೀತ ನೀಡುವುದರ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಹಾಡಿ, ಕುಣಿದಿದ್ದಾರೆ.

ನೃತ್ಯ ನಿರ್ದೇಶನವನ್ನು ಸ್ವತಃ ಡಿ ಸತ್ಯ ಪ್ರಕಾಶ್ ಅವರೇ ಮಾಡಿದ್ದಾರೆ. ಚಿತ್ರದ ಕಥೆ ತಿಳಿಸುವ ಈ ಹಾಡಿಗೆ, ಸೊಗಸಾದ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ಡಿ ಸತ್ಯ ಪ್ರಕಾಶ್ ಜಂಟಿಯಾಗಿ ಬರೆದಿದ್ದಾರೆ.

Categories
ಸಿನಿ ಸುದ್ದಿ

ದರ್ಶನ್-ಧ್ರುವ ಸರ್ಜಾ ಸಮಾಗಮ; ಕಮ್ಮಿಂಗ್ ಸೂನ್ ಸೂಪರ್ ಸಪ್ರೈಸ್ !

ಇದು ಸಿನಿಲಹರಿ ವಿಶೇಷ

  • ವಿಶಾಲಾಕ್ಷಿ

ದರ್ಶನ್-ಧ್ರುವ ಈ ಹೆಸರು ಒಟ್ಟೊಟ್ಟಿಗೆ ಕೇಳಿ ಬಂದರೆ ಇವರಿಬ್ಬರ ಫ್ಯಾನ್ಸ್ ಮಾತ್ರವಲ್ಲ ಸಕಲರೂ ದಡಕ್ಕನೆ ಎದ್ದು ಕೂರುತ್ತಾರೆ. ಅಪ್‌ಕೋರ್ಸ್ ಕೂರ್ಲೇಬೇಕು. ಯಾಕಂದ್ರೆ ಹಂಗೈತೆ ಇವರಿಬ್ಬರ ಗತ್ತು ಮತ್ತು ತಾಕತ್ತು. ಒಬ್ಬರು ಚಾಲೆಂಜಿಂಗ್ ಸ್ಟಾರ್ ಇನ್ನೊಬ್ಬರು ಆಕ್ಷನ್ ಬಹದ್ದೂರ್. ಗಂಧದಗುಡಿಯಲ್ಲಿ ಗುರ್ತಿಸಿಕೊಳ್ಳೋದಕ್ಕೆ ಹಾಗೂ ಬಣ್ಣದ ಲೋಕದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟೋದಕ್ಕೆ ಪಟ್ಟಶ್ರಮ ಎಷ್ಟು ಅನ್ನೋದು ಬೆಳ್ಳಿಪರದೆಗೂ ಗೊತ್ತಿದೆ. ಅಷ್ಟಕ್ಕೂ, ನಾವ್ ಇವತ್ತು ದಚ್ಚು-ಧ್ರುವ ಬಗ್ಗೆ ಮಾತನಾಡ್ತಿರವುದಕ್ಕೆ ಕಾರಣ ಆ ಸಿನಿಮಾ ಸುದ್ದಿ.

ಕಳೆದೊಂದು ವರ್ಷದ ಹಿಂದೆ ಆಕ್ಷನ್‌ಪ್ರಿನ್ಸ್ ಧ್ರುವಾ ಸರ್ಜಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಗಮದ ಸುದ್ದಿ ಕೇಳಿ ಬಂದಿತ್ತು. ಇದೀಗ, ಆ ಸುದ್ದಿ ನಿಜವಾಗುವ ಗಳಿಗೆ ಸನ್ನಿಹಿತವಾಗಿದೆ. ಬಹದ್ದೂರ್ ಗಂಡು ಹಾಗೂ ಚಕ್ರವರ್ತಿ ಜೊತೆಯಾಗಿ ಶಕ್ತಿ ತುಂಬುವ ದಿವ್ಯಕ್ಷಣಕ್ಕಾಗಿ ಫುಲ್ ಟೀಮ್ ಕೂಡ ಎದುರು ನೋಡ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ದಚ್ಚು- ಧ್ರುವ ಇಬ್ಬರು ಕೂಡ ಇನ್ನೊಂದು ವಾರದೊಳಗೆ ಆ ದಿವ್ಯಜಾಗಕ್ಕೆ ಭೇಟಿಕೊಡ್ತಾರೆ. ಒಟ್ಟಿಗೆ ಸೇರಿ ಹೋಗದಿದ್ದರೂ ಕೂಡ ಬೇರೆ ಬೇರೆ ಟೈಮು-ಗಳಿಗೆಯಲ್ಲಿ ಅಲ್ಲಿಗೆ ಹೋಗಿ ಕೆಲಸ ಮಾಡಿಕೊಟ್ಟು ಬರಲಿದ್ದಾರೆ. ಒಂದೊಳ್ಳೆ ಕೆಲಸಕ್ಕಾಗಿ ಆಕ್ಷನ್‌ಸ್ಟಾರ್-ಚಾಲೆಂಜಿಂಗ್‌ಸ್ಟಾರ್ ಕೈಜೋಡಿಸ್ತಿರುವುದು ವಿಶೇಷ.

ಅಷ್ಟಕ್ಕೂ ಅದ್ಯಾವ ಕೆಲಸಕ್ಕಾಗಿ ಸಾರಥಿ ಹಾಗೂ ಧ್ರುವ ಕೈಜೋಡಿಸ್ತಿದ್ದಾರೆ ಈ ಕೂತೂಹಲದ ಪ್ರಶ್ನೆಗೆ ಉತ್ತರ ರಾಜಮಾರ್ತಾಂಡ.
ಈ‌ ಸಿನಿಮಾದ ಹೆಸರು ಕೇಳಿ ದಾಕ್ಷಣ ಕಂಪ್ಲೀಟ್ ಪಿಕ್ಚರ್ ನಿಮ್ಮ ಕಣ್ಮುಂದೆ ಬಂದಿರುತ್ತೆ. ರಾಜಮಾರ್ತಾಂಡ ಯುವಸಾಮ್ರಾಟ ಚಿರಂಜೀವಿ ಸರ್ಜಾ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿರು ಅಕಾಲಿಕ ಮರಣಕ್ಕೆ ತುತ್ತಾಗಿ ಅರ್ಧಕ್ಕೆ ಜೀವನಪಯಣ ಮುಗಿಸಿದರು. ಅಣ್ಣನ ಸಿನಿಮಾ ಅರ್ಧಕ್ಕೆ ನಿಂತು ಹೋಗುವುದನ್ನು ಇಷ್ಟಪಡದ ಸಹೋದರ ಧ್ರುವ ಅಣ್ಣನ ಸಿನಿಮಾಗೆ ಬೆನ್ನೆಲುಬಾಗಿ ನಿಲ್ತಿದ್ದಾರೆ.

ಚಿರು ರಾಜಮಾರ್ತಾಂಡ ಚಿತ್ರಕ್ಕೆ ಧ್ರುವ ಬೆಂಬಲವಿರುವುದು ಹಾಗೂ ಚಿರು ಪಾತ್ರಕ್ಕೆ ಧ್ರುವ ವಾಯ್ಸ್ ಡಬ್ ಮಾಡುವುದು ಹಳೆಯ ವಿಷ್ಯ. ಲೇಟೆಸ್ಟ್ ಅಪ್ ಡೇಟ್ ಅಂದರೆ ಧ್ರುವ ಕಾಲ್ ಶೀಟ್ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಖಾಸಗಿ ಸ್ಟುಡಿಯೋಗೆ ಆಗಮಿಸಲಿರುವ ಧ್ರುವ ಅಣ್ಣನ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ. ಈಗಾಗಲೇ ರಿಲೀಸ್ ಆಗಲಿರುವ ಟ್ರೇಲರ್ ನಲ್ಲಿ ಚಿರು ಅಭಿನಯಕ್ಕೆ ಧ್ರುವ ಕಂಠದಾನದ ಮೂಲಕ ಕಳೆ ತಂದಿರುವುದನ್ನು‌ ನೋಡಬಹುದಾಗಿದೆ.

ಇನ್ನೂ ಇದೇ ರಾಜಮಾರ್ತಾಂಡ ಚಿತ್ರಕ್ಕೆ ಚಾಲೆಂಜಿಂಗ್ ಚಕ್ರವರ್ತಿ ಕೂಡ ಶಕ್ತಿ ತುಂಬುತ್ತಾರೆನ್ನುವ ಸುದ್ದಿ ಕೂಡ‌‌ ಕಳೆದ ವರ್ಷವೇ ಕೇಳಿ ಬಂದಿತ್ತು. ಕೊಟ್ಟ ಮಾತಿನಂತೆ ಸಾರಥಿ ನಡೆದುಕೊಳ್ತಿದ್ದಾರೆ. ಶೀಘ್ರದಲ್ಲೇ ರಾಜಮಾರ್ತಾಂಡ ಚಿತ್ರದ ಚಿರು ಇಂಟ್ರುಡಕ್ಷನ್ ಸೀನ್ ಗೆ ದಚ್ಚು ಬಲ ತುಂಬಲಿದ್ದಾರೆ. ಇದನ್ನು ಸೆರೆ ಹಿಡಿಯೋಕೆ‌ ಚಿತ್ರತಂಡ ಸಿದ್ದತೆ ನಡೆಸಿಕೊಂಡಿದೆ. ಡಬ್ಬಿಂಗ್ ನಂತರ ಆದಷ್ಟು ಬೇಗ ಸಿನಿಮಾ ಕೆಲಸ ಕಾರ್ಯ ಮುಗಿಸಿಕೊಂಡು ಚಿತ್ರ ತೆರೆಗೆ ತರಲು ಪ್ಲ್ಯಾನ್ ರೂಪಿಸುತ್ತಿದೆ. ಟೈಸನ್ ಖ್ಯಾತಿಯ ರಾಮ್ ನಾರಾಯಣ್ ನಿರ್ದೇಶನ ಚಿತ್ರಕ್ಕಿದ್ದು, ಶಿವಕುಮಾರ್ ನಿರ್ಮಾಣದಲ್ಲಿ ಮೂಡಿಬರ್ತಿದೆ. ದಚ್ಚು- ಧ್ರುವ ಸಮಾಗಮದಲ್ಲಿ ರಾಜಮಾರ್ತಾಂಡನಿಗೆ ನೂರಾನೆ ಬಲ ಬಂದಿದೆ ಅಂದರೆ ತಪ್ಪಾಗಲ್ಲ ಬಿಡಿ.

Categories
ಸಿನಿ ಸುದ್ದಿ

ಮೇಲೊಬ್ಬ ಮಾಯಾವಿ ಚಿತ್ರದ ಟೈಟಲ್ ಸಾಂಗ್ ರಿಲೀಸ್; ಇದು ಚಕ್ರವರ್ತಿ ಚಂದ್ರಚೂಡ್ ಬರೆದ ಹಾಡು

ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಮೇಲೊಬ್ಬ ಮಾಯಾವಿ’ ಚಿತ್ರತಂಡ ಕಂಟೆಂಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಹರಳು ಮಾಫಿಯಾದ ಕಂಟೆಂಟ್ ಇರುವಂತಹ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಈಗ ಚಿತ್ರ ತಂಡ ಚಿತ್ರದ ಟೈಟಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದೆ. ‘ಬಿಗ್ ಬಾಸ್’ ಖ್ಯಾತಿಯ, ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ಇರುವ ಈ ಹಾಡನ್ನು ಎಲ್.ಎನ್.ಶಾಸ್ತ್ರೀ, ಹೇಮಂತ್ ಮತ್ತು ಶಮಿತಾ ಮಲ್ನಾಡ್ ಹಾಡಿದ್ದಾರೆ.


ಎಲ್.ಎನ್.ಶಾಸ್ತ್ರೀಯವರು ತಮ್ಮ ಕೊನೆಯ ದಿನಗಳಲ್ಲಿ ಹಾಡಿದ ಈ ಹಾಡು ಸಾಕಷ್ಟು ಅರ್ಥಗರ್ಭಿತವಾಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ.

ಕರಾವಳಿಯಲ್ಲಿ ನಡೆದ ಸತ್ಯ ಕಥೆ ಆಧಾರಿತ ಈ ಚಿತ್ರವನ್ನು ಬಿ.ನವೀನ್ ಕೃಷ್ಣ ಕಥೆ, ಬರೆದು ನಿರ್ದೇಶಿಸಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್ ನಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ಎಲ್‌.ಎನ್. ಶಾಸ್ತ್ರಿ ಸಂಗೀತ ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯ ರಚಿಸಿದ್ದಾರೆ. ಕೆ.ಗಿರೀಶ್‌ ಕುಮಾರ್‌ ಸಂಕಲನಕಾರರಾಗಿರುವ ʻಮೇಲೊಬ್ಬ ಮಾಯಾವಿʼಗೆ, ದೀಪಿತ್‌ ಬಿಜೈ ರತ್ನಾಕರ್‌ ಛಾಯಾಗ್ರಹಣ ಮಾಡಿದ್ದಾರೆ. ದೇಸಿ ಸೊಗಡಿನ ಈ ಹಾಡಿಗೆ ರಾಮು ಅವರ ನೃತ್ಯ ನಿರ್ದೇಶನವಿದೆ.

ಮಣಿಕಾಂತ್‌ ಕದ್ರಿ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್‌, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್‌, ಕೃಷ್ಣಮೂರ್ತಿ ಕವತ್ತಾರ್‌, ಎಮ್‌.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್‌ ಲಕ್ಷ್ಮೀ ಅರ್ಪಣ್‌, ನವೀನ್‌ಕುಮಾರ್‌, ಪವಿತ್ರಾ ಜಯರಾಮ್‌, ಮುಖೇಶ್‌, ಡಾ.ಮನೋನ್ಮಣಿ, ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ “ಮೇಲೊಬ್ಬ ಮಾಯಾವಿ”ಚಿತ್ರ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಫಿನಾಲೆಯಲ್ಲಿ ಪ್ರಶಾಂತ್ ಸಂಬರ್ಗಿ ಇರ‍್ಬೇಕ್ ಅಷ್ಟೇ; ಹೀಗನ್ನುತ್ತಿದೆ ಅದೊಂದು ಬಣ !?

  • ವಿಶಾಲಾಕ್ಷಿ


ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಬಿಗ್‌ಬಾಸ್ ಪಟ್ಟ ಹಾಗೂ ದೊಡ್ಮನೆ ಕಿರೀಟ ಅದ್ಯಾರ ಮುಡಿಗೇರಲಿದೆ ಎನ್ನುವ ಕೂತೂಹಲ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆಗಸ್ಟ್ ೦೮ಕ್ಕೆ ಮುಹೂರ್ತ ಫಿಕ್ಸಾಗಿದ್ದು `ಇವರು ವಿನ್ ಆಗ್ಬೋದು, ಇವರು ರನ್ನರ್‌ ಅಪ್ ಆಗ್ಬಹುದು’ ಅಂತ ಕರುನಾಡ ಮಂದಿ ಲೆಕ್ಕಚ್ಚಾರ ಶುರುವಿಟ್ಟುಕೊಂಡಿದ್ದಾರೆ. ಆದರೆ, ಬಿಗ್‌ಬಾಸ್ ಸ್ಪರ್ಧಿಗಳ ಅಭಿಮಾನಿಗಳು ಮಾತ್ರ ತಾವು ಇಷ್ಟ ಪಡುವವರೇ ವಿನ್ ಆಗ್ಬೇಕು ಅಂತ ಆಸೆ ಪಡ್ತಿದ್ದಾರೆ. ಈ ರೀತಿ ಎಕ್ಸ್ಪೆಕ್ಟ್ ಮಾಡೋದು ತಪ್ಪು ಅಂತ ಹೇಳೋದಕ್ಕೆ ಆಗಲ್ಲ ಯಾಕಂದ್ರೆ ಆಯಾ ಸ್ಪರ್ಧಿಗಳ ಮೇಲೆ ಅವರವರ ಫ್ಯಾನ್ಸ್‌ಗೆ ಇರುವ ಅಪಾರವಾದ ಪ್ರೀತಿ ಮತ್ತು ಅಭಿಮಾನ. ಇದಕ್ಕೆ ಪ್ರಶಾಂತ್ ಸಂಬರ್ಗಿಯವರ ಅಭಿಮಾನಿ ಬಣ ಕೂಡ ಹೊರತಾಗಿಲ್ಲ.

ಈ ಭಾರಿಯ ಬಿಗ್‌ಬಾಸ್ ಕಿರೀಟವನ್ನು ಹಾಗೂ ೫೦ ಲಕ್ಷ ಚೆಕ್‌ನ ಅದ್ಯಾರ ಮುಡಿಗೇರಿಸಬೇಕು ಅಂತ ನೀವು ನಿರ್ಧರಿಸಿದ್ದೀರೋ ಗೊತ್ತಿಲ್ಲ. ಇಲ್ಲಿವರೆಗೂ ನೀವುಗಳು ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ದೊಡ್ಮನೆ ಟ್ರೋಪಿಯನ್ನು ಯಾರದ್ದೋ ಪಾಲು ಮಾಡುತ್ತಾ ಬಂದಿದ್ದೀರೋ ಅದು ಕೂಡ ನಮಗೆ ತಿಳಿದಿಲ್ಲ. ಎನಿವೇ ಈ ರೀತಿ ನೀವು ಮಾಡಿಕೊಂಡು ಬಂದಿಲ್ಲ ಅಂದರೆ ಪ್ರಶಾಂತ್ ಸಂಬರ್ಗಿಯವರನ್ನ ಹಾಗೂ ಶಮಂತ್‌ರನ್ನ ಟಾಪ್ 2ಗೆ ತಂದು ನಿಲ್ಲಿಸಿ ನೋಡೋಣ ಹೀಗಂತ ಅದೊಂದು ಬಣ ಸೋಷಿಯಲ್ ಲೋಕದಲ್ಲಿ ಬಿಗ್‌ಹೌಸ್‌ಗೆ ಚಾಲೆಂಜ್ ಮಾಡ್ತಿದೆ. ಅಲ್ಲದೇ, ಟಾಫ್ ೫ನಲ್ಲಿ ಫೈನಲ್ಸ್ ಅಂಗಳದಲ್ಲಿ ಸಂಬರ್ಗಿ ಹಾಗೂ ಶಮಂತ್‌ರನ್ನು ನಾವು ನೋಡ್ಲೆಬೇಕು ಎನ್ನುವ ಇಂಗಿತ ಕೂಡ ವ್ಯಕ್ತಪಡಿಸುತ್ತಿದೆ.

ಈ ಬಣದ ಆಸೆಯಂತೆ ಪ್ರಶಾಂತ್-ಶಮಂತ್ ಫೈನಲ್ಸ್ ತಲುಪುತ್ತಾರಾ ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ ಆದರೆ, ಬಿಗ್‌ಬಾಸ್ ಅಂಗಳಕ್ಕೆ ಬರುತ್ತಿರುವ ಕಮೆಂಟ್ಸ್ ನ ನೋಡಿದ್ರೆ ಅದೃಷ್ಟ ಕೈ ಹಿಡಿದರೂ ಹಿಡಿಯಬಹುದು ಕಿಚ್ಚ ಸುದೀಪ್ ಅಕ್ಕ-ಪಕ್ಕದಲ್ಲಿ ಇವರಿಬ್ಬರು ನಿಂತರೂ ನಿಲ್ಲಬಹುದು. ಅದೃಷ್ಟ ಯಾರಪ್ಪನ ಮನೆ ಸ್ವತ್ತೂ ಅಲ್ಲ ಈ ಕ್ಷಣ ಕೋಟ್ಯಾಧಿಪತಿ ಮನೆಯ ಅಂಗಳದಲ್ಲಿ ಕೇಕೆ ಹಾಕ್ತಿದ್ದರೂ ಮುಂದಿನ ಕ್ಷಣಕ್ಕೆ ಭಿಕ್ಷುಕನ ಮನೆಯಂಗಳಕ್ಕೆ ಶಿಫ್ಟ್ ಆಗಬಹುದು. ಹೀಗಾಗಿ ಪ್ರತಿಕ್ಷಣದ ಮೇಲೂ ಎಲ್ಲರೂ ಕಣ್ಣಿಟ್ಟರಲೆಬೇಕು. ನಮ್ಮ ಅಂಗಳಕ್ಕೆ ಬಂದಾಗ ಅದೃಷ್ಟ ಎನ್ನುವ ಕುದುರೆಯನ್ನ ಕಟ್ಟಿ ಹಾಕಿಕೊಳ್ಳೋದಕ್ಕೂ ರೆಡಿಯಾಗ್ಬೇಕು.

ದೊಡ್ಮನೆ ಅಖಾಡ ಧಗಧಗಿಸುತ್ತಿದೆ, ಕ್ಷಣಕ್ಷಣಕ್ಕೂ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ. ಬಿಗ್‌ಬಾಸ್ ಡಿಫರೆಂಟ್ ಟಾಸ್ಕ್ ಕೊಟ್ಟು ಟ್ವಿಸ್ಟ್ ಇಟ್ಟು ದೊಡ್ಮನೆ ರಂಗೇರುವಂತೆ ಮಾಡ್ತಿದ್ದಾರೆ. ಬಿಗ್‌ಬಾಸ್ ಎಂತಹದ್ದೇ ಟಫ್ ಟಾಸ್ಕ್ ಕೊಟ್ಟರೂ, ಎಂತಹದ್ದೇ ಟ್ವಿಸ್ಟ್ ಇಟ್ಟರೂ ಕೂಡ ಅದನ್ನು ಜಯಿಸುವಲ್ಲಿ ಪ್ರಶಾಂತ್ ಹಾಗೂ ಶಮಂತ್ ಯಶಸ್ವಿಯಾಗ್ತಿದ್ದಾರೆ. ದೋಸ್ತಿಗಳಾಗಿದ್ದ ಇವರಿಬ್ಬರ ನಡುವೆ ಈಗ ನೆಕ್ ಟು ನೆಕ್ ಫೈಟ್ ನಡೆಯುತ್ತಿದೆ. ಒಟ್ಟು 8 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿದ್ದು ಹಣಾಹಣಿ ಜೋರಾಗಿದೆ. ಇಲ್ಲಿವರೆಗೂ ಬಂದಿರುವ ನಾವು ಯಾವುದೇ ಕಾರಣಕ್ಕೂ ಈ ವಾರ ಎಲಿಮಿನೇಟ್ ಆಗ್ಬಾರ್ದು ಫೈನಲ್ಸ್ಗೆ ಲಗ್ಗೆ ಇಡಲೆಬೇಕು ಅಂತ 8 ಜನ ಕೂಡ ಹೊಡೆದಾಡುತ್ತಿದ್ದಾರೆ.

ಕಮ್ಮಿಂಗ್ ಸಂಡೇ ಒಳಗಾಗಿ ಮೂರು ಜನ ಸ್ಪರ್ಧಿಗಳು ದೊಡ್ಮನೆಯಿಂದ ಹೊರಗೆ ಹೋಗ್ಬೇಕು. ಐದು ಜನ ಸ್ಪರ್ಧಿಗಳು ಫೈನಲ್ ಕಣಕ್ಕೆ ಜಿಗಿಬೇಕು. ಆ ಐವರು ಸ್ಪರ್ಧಿಗಳಲ್ಲಿ ಪ್ರಶಾಂತ್-ಶಮಂತ್ ಇಬ್ಬರು ರ‍್ತಾರಾ ಎಂಬ ಕೂತೂಹಲ ಹೆಚ್ಚಾಗ್ತಿದೆ. ಟಾಪ್ ೫ನಲ್ಲಿ ಇವರಿಬ್ಬರು ಇದ್ದೇ ಇರುತ್ತಾರೆ ಎನ್ನುವ ಭರವಸೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಪ್ರಶಾಂತ್ ಅವರು ತಮ್ಮ ಶಕ್ತಿಮೀರಿ ಎಫರ್ಟ್ ಹಾಕ್ತಿದ್ದಾರೆ, ಮುಖವಾಡ ಹಾಕಿಕೊಳ್ಳದೇ ಆಟ ಆಡುತ್ತಿದ್ದಾರೆ.

ಶಮಂತ್ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ಕೊಡುತ್ತಾ ಭರ್ಜರಿ ಎಂಟರ್‌ಟೈನ್ಮೆಂಟ್ ಕೊಡ್ತಿದ್ದಾರೆ. ಹೀಗಾಗಿ, ರಿಯಲ್ ವ್ಯಕ್ತಿತ್ವಕ್ಕೆ ಮಣೆಹಾಕೋಣ, ರಿಯಲ್‌ ಸ್ಪರ್ಧಿಗಳನ್ನು ಗೆಲ್ಲಿಸೋಣ ಅಂತ ಕೆಲವರು ಪಣತೊಟ್ಟಿದ್ದಾರೆ. ಹೀಗೆ ಕೆಲವರ ಆಸೆಯಂತೆ ಇವರಿಬ್ಬರು ಸುದೀಪ್ ಅಕ್ಕ-ಪಕ್ಕ ನಿಲ್ತಾರೆ ವೇಯ್ಟ್ ಅಂಡ್ ಸೀ ಅಷ್ಟೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

TT #50 ಎಂಬ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ; ಆಗಸ್ಟ್‌ಗೆ ಬರಲಿದೆ ಹೊಸಬರ ಚಿತ್ರ

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಜನರ ಬೆಂಬಲ ಸಿಕ್ಕಿದ್ದು ಹೆಚ್ಚು. ಅದರಲ್ಲೂ ಇತ್ತೀಚಿಗೆ ಹೊಸ ತಂಡ ಕಟ್ಟಿಕೊಂಡು ವಿಭಿನ್ನ ಕಥಾ ಹಂದರದ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ತುಸು ಹೆಚ್ಚುತ್ತಲೇ ಇದೆ.
ಅಂಥದ್ದೇ ಒಂದು ಉತ್ಸಾಹಿ ಯುವಕರ ತಂಡ ವಿಭಿನ್ನ ಕಥೆ ಇರುವ ಸಿನಿಮಾ ಮಾಡಿದೆ. ಅವರ ಹೊಸ ಪ್ರಯತ್ನಕ್ಕೆ “TT # 50” ಎಂದು ಹೆಸರಿಡಲಾಗಿದೆ. ಆಗಸ್ಟ್ 13 ರಂದು ರಾಜ್ಯಾದ್ಯಂತ ಬಿಡುಗಡೆ‌ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.


ಮೂಲತಃ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಕೃಷ್ಣ. ಎಲ್ ರಂಗಭೂಮಿಯೊಂದಿಗೆ ಒಡನಾಟ ಹೊಂದಿದ್ದು, ಹಿರಿ ತೆರೆಯಲ್ಲಿ ಮೊದಲ ಬಾರಿಗೆ ತಾವೇ ಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೊತೆಯಲ್ಲಿ ನಿರ್ಮಾಣ ಕೂಡ ಇವರದೆ.
ಸಸ್ಪೆನ್ಸ್ ಅಂಶವಿರುವ ಈ ಚಿತ್ರದ ಚಿತ್ರೀಕರಣ ಭದ್ರಾವತಿಯಲ್ಲಿ ಹೆಚ್ಚಿನ ಭಾಗ ನಡೆದಿದೆ.

ಇನ್ನು ಈ ಚಿತ್ರಕ್ಕೆ ಕರ್ಣ ಎಸ್.ರಾಮಚಂದ್ರ ಹೀರೋ. ಅವರು ಹೇಳುವಂತೆ, “ನಾನು ಹತ್ತು ವರ್ಷದ ಹಿಂದೆ “ಫೆಬ್ರವರಿ ೧೪” ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಕಾರಣಾಂತರದಿಂದ ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಅಭಿನಯದ ಧಾರಾವಾಹಿ ನೋಡಿದ ನಿರ್ದೇಶಕರು ನನಗೆ ಈ ಚಿತ್ರದಲ್ಲಿ ನಾಯಕನ ಪಾತ್ರ ನೀಡಿದ್ದಾರೆ ಅಂತ ಧನ್ಯವಾದ ಅರ್ಪಿಸಿದರು ಅವರು.


ಎರಡನೇ ನಾಯಕನಾಗಿ ನಟಿಸಿರುವ ಹೇಮಂತ್ ಕುಮಾರ್ ಅವರಿಗೂ ಇದು ಮೊದಲ ಚಿತ್ರವಂತೆ. ಒಂದು ಹಾಡಿರುವ ಚಿತ್ರಕ್ಕೆ ಮುರಳೀಧರನ್ ಸಂಗೀತ ನೀಡಿದ್ದಾರೆ. ದಿವ್ಯ ರಾಮಚಂದ್ರ ಹಾಡಿದ್ದಾರೆ.
ಶಿವಕುಮಾರ್ ನಾಗನವಿಲು, ನಟ ಪ್ರಶಾಂತ್ ಸಿದ್ದಿ, ಉದ್ಯಮಿ ಪ್ರದೀಪ್ ಕುಮಾರ್, ಶ್ರೀಮಂತ್ ಮಂಜು ಹಾಗೂ ನಿರ್ಮಲ ಇತರರು ಇದ್ದರು.

Categories
ಸಿನಿ ಸುದ್ದಿ

ತಾಯ್ತ ಕಟ್ತಾರಂತೆ ಲಯಕೋಕಿಲ ! ಅವರೀಗ ಡೈರಕ್ಟರ್!!‌

ತಮ್ಮ ನಟನೆಯಿಂದ ಮನೆಮಾತಾಗಿರುವ ಲಯಕೋಕಿಲ, ಸಂಗೀತ ನಿರ್ದೇಶಕರಾಗಿ ಸರಾದವರು. ಅಷ್ಟೇ ಅಲ್ಲ, ನಟರಾಗಿಯೂ ಗೊತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಲಯಕೋಕಿಲ. ಹೌದು, ಲಯಕೋಕಿಲ ಈಗ ಡೈರೆಕ್ಟರ್.‌
ತಮ್ಮ ಮೊದಲ‌ ಚಿತ್ರಕ್ಕೆ “ತಾಯ್ತ” ಎಂದು ಹೆಸರಿಟ್ಟಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭ ರಾಮನಗರದ ದರ್ಗಾವೊಂದರಲ್ಲಿ ಸರಳವಾಗಿ ಆರಂಭವಾಗಿದೆ.
ನಿರ್ಮಾಪಕರ ತಾಯಿ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿ ಶುಭಹಾರೈಸಿದ್ದಾರೆ. ಲಯಕೋಕಿಲ ಅವರೆ ಕ್ಲಾಪ್ ಮಾಡುವ ಮೂಲಕ ತಮ್ಮ ನಿರ್ದೇಶನಕ್ಕೆ ಚಾಲನೆ ನೀಡಿದ್ದಾರೆ.
ಮೊದಲ ದಿನದ ಚಿತ್ರೀಕರಣವನ್ನು ರಾಮನಗರದ ಸುತ್ತಮುತ್ತ ನಡೆಸಲಾಗಿದೆ.

ಆಗಸ್ಟ್ 5 ರಿಂದ ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ನಿರಂತರ ಚಿತ್ರೀಕರಣ ನಡೆಯಲಿದೆ. ಈ ಚಿತ್ರವನ್ನು ಡಾ.ಶಾಹಿದ್ ಅವರು ನಿರ್ಮಿಸುತ್ತಿದ್ದಾರೆ. ಕಥೆ ಕೂಡ ಶಾಹಿದ್ ಅವರೇ ಬರೆದಿದ್ದಾರೆ.
ಲಯಕೋಕಿಲ ಅವರ ಸಂಗೀತ ಇರುವ ಈ ಚಿತ್ರದ ಹಾಡುಗಳನ್ನು ರಾಮನಾರಾಯಣ್ ಬರೆದಿದ್ದಾರೆ.
ಆನಂದ್ ಛಾಯಾಗ್ರಹಣವಿದೆ. ಮೋಹನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು, ರಿಹಾನ್ ಎಂಬ‌ ಹೊಸ ಪ್ರತಿಭೆ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ.

ರಿಹಾನ್ ಅವರಿಗೆ ಹರ್ಷಿಕಾ ಪೂಣಚ್ಛ ನಾಯಕಿಯಾಗಿದ್ದಾರೆ.
ನಾಯಕನ ತಾಯಿ ಪಾತ್ರದಲ್ಲಿ ಸುಮಾಶಾಸ್ತ್ರಿ ಕಾಣಿಸಿಕೊಳ್ಳುತ್ತಿದ್ದಾರೆ.
ಲಯಕೋಕಿಲ, ಡಾ. ಶಾಹಿದ್, ಶೋಭ್ ರಾಜ್, ಕಲೀಲ್, ಮಿಮಿಕ್ರಿ ಮಂಜು, ಕಾರ್ತಿಕ್ ಶರ್ಮ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ತಾಯ್ತ” ಮಾಮೂಲಿ ಕಥೆಯಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎಂಬುದು ಲಯಕೋಕಿಲ ಅವರ ಮಾತು.

Categories
ಸಿನಿ ಸುದ್ದಿ

ಸಂಜಯ್‌ ದತ್‌ ಹುಟ್ಟುಹಬ್ಬಕ್ಕೆ ಕೆಜಿಎಫ್‌ ಟೀಮ್‌ ಹೊಸ ಪೋಸ್ಟರ್‌ ರಿಲೀಸ್;‌ ಸಂತಸ ಹಂಚಿಕೊಂಡ ಬಾಲಿವುಡ್‌ ನಟ

ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸದ್ದು ಮಾಡಿರುವ “ಕೆಜಿಎಫ್‌-೨” ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಇಷ್ಟರಲ್ಲೇ ಸಿನಿಮಾ ಬಿಡುಗಡೆಯ ಅಧಿಕೃತ ಘೋಷಣೆಯಾಗಲಿದೆ. ಈ ಮಧ್ಯೆ ಚಿತ್ರತಂಡ ಸಂಜಯ್‌ ದತ್‌ ಅವರ ಮತ್ತೊಂದು ಭರ್ಜರಿ ಪೋಸ್ಟರ್‌ ಬಿಡುಗಡೆ ಮಾಡಿದೆ.


ಹೌದು, ಜುಲೈ ೨೯ರಂದು ಸಂಜಯ್‌ದತ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ, ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಆ ಪೋಸ್ಟರ್‌ಗೆ ಸಖತ್‌ ಮೆಚ್ಚುಗೆ ಸಿಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತುತ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿರುವ “ಕೆಜಿಎಫ್-‌೨” ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಅಂದಹಾಗೆ, ಪೋಸ್ಟರ್ ರಿಲೀಸ್ ಮಾಡಿ, “ಯುದ್ಧವು ಪ್ರಗತಿಗಾಗಿ ಆಗಿದೆ. ರಣಹದ್ದುಗಳು ಕೂಡ ನನ್ನೊಂದಿಗೆ ಒಪ್ಪುತ್ತವೆ” ಎಂಬ ಬರಹದೊಂದಿಗೆ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಸಂಜಯ್‌ ದತ್ ಅವರ ಹೊಸ ಪೋಸ್ಟರ್ ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಪೋಸ್ಟರ್‌ ನೋಡಿದವರಿಗೆ ಅವರ ಪಾತ್ರ ನಿಜಕ್ಕೂ ಕುತೂಹಲ ಮೂಡಿಸೋದು ನಿಜ. ಕೈಯಲ್ಲೊಂದು ಖಡ್ಗ, ಕಣ್ಣಿಗೊಂದು ಬ್ಲಾಕ್‌ ಗ್ಲಾಸ್‌, ಕಣ್‌ಸೆಳೆಯೋ ಹೇರ್‌ಸ್ಟೈಲ್‌, ಪೆಪ್ಪರ್‌ ಸಾಲ್ಟ್‌ ದಾಡಿ, ಖದರ್‌ ಲುಕ್‌ನೊಂದಿಗಿರುವ ಪೋಸ್ಟರ್‌ ಸದ್ಯ ಜೋರು ಸುದ್ದಿ ಮಾಡುತ್ತಿದೆ.

ಇನ್ನು ಈ ಪೋಸ್ಟರ್ ಅನ್ನು ನಟ ಸಂಜಯ್ ದತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. “ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯಲು ಯೋಗ್ಯವಾಗಿರುತ್ತದೆ” ಎಂದು ದತ್ ಹೇಳಿದ್ದಾರೆ.

error: Content is protected !!