ದರ್ಶನ್-ಧ್ರುವ ಸರ್ಜಾ ಸಮಾಗಮ; ಕಮ್ಮಿಂಗ್ ಸೂನ್ ಸೂಪರ್ ಸಪ್ರೈಸ್ !

ಇದು ಸಿನಿಲಹರಿ ವಿಶೇಷ

  • ವಿಶಾಲಾಕ್ಷಿ

ದರ್ಶನ್-ಧ್ರುವ ಈ ಹೆಸರು ಒಟ್ಟೊಟ್ಟಿಗೆ ಕೇಳಿ ಬಂದರೆ ಇವರಿಬ್ಬರ ಫ್ಯಾನ್ಸ್ ಮಾತ್ರವಲ್ಲ ಸಕಲರೂ ದಡಕ್ಕನೆ ಎದ್ದು ಕೂರುತ್ತಾರೆ. ಅಪ್‌ಕೋರ್ಸ್ ಕೂರ್ಲೇಬೇಕು. ಯಾಕಂದ್ರೆ ಹಂಗೈತೆ ಇವರಿಬ್ಬರ ಗತ್ತು ಮತ್ತು ತಾಕತ್ತು. ಒಬ್ಬರು ಚಾಲೆಂಜಿಂಗ್ ಸ್ಟಾರ್ ಇನ್ನೊಬ್ಬರು ಆಕ್ಷನ್ ಬಹದ್ದೂರ್. ಗಂಧದಗುಡಿಯಲ್ಲಿ ಗುರ್ತಿಸಿಕೊಳ್ಳೋದಕ್ಕೆ ಹಾಗೂ ಬಣ್ಣದ ಲೋಕದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟೋದಕ್ಕೆ ಪಟ್ಟಶ್ರಮ ಎಷ್ಟು ಅನ್ನೋದು ಬೆಳ್ಳಿಪರದೆಗೂ ಗೊತ್ತಿದೆ. ಅಷ್ಟಕ್ಕೂ, ನಾವ್ ಇವತ್ತು ದಚ್ಚು-ಧ್ರುವ ಬಗ್ಗೆ ಮಾತನಾಡ್ತಿರವುದಕ್ಕೆ ಕಾರಣ ಆ ಸಿನಿಮಾ ಸುದ್ದಿ.

ಕಳೆದೊಂದು ವರ್ಷದ ಹಿಂದೆ ಆಕ್ಷನ್‌ಪ್ರಿನ್ಸ್ ಧ್ರುವಾ ಸರ್ಜಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಗಮದ ಸುದ್ದಿ ಕೇಳಿ ಬಂದಿತ್ತು. ಇದೀಗ, ಆ ಸುದ್ದಿ ನಿಜವಾಗುವ ಗಳಿಗೆ ಸನ್ನಿಹಿತವಾಗಿದೆ. ಬಹದ್ದೂರ್ ಗಂಡು ಹಾಗೂ ಚಕ್ರವರ್ತಿ ಜೊತೆಯಾಗಿ ಶಕ್ತಿ ತುಂಬುವ ದಿವ್ಯಕ್ಷಣಕ್ಕಾಗಿ ಫುಲ್ ಟೀಮ್ ಕೂಡ ಎದುರು ನೋಡ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ದಚ್ಚು- ಧ್ರುವ ಇಬ್ಬರು ಕೂಡ ಇನ್ನೊಂದು ವಾರದೊಳಗೆ ಆ ದಿವ್ಯಜಾಗಕ್ಕೆ ಭೇಟಿಕೊಡ್ತಾರೆ. ಒಟ್ಟಿಗೆ ಸೇರಿ ಹೋಗದಿದ್ದರೂ ಕೂಡ ಬೇರೆ ಬೇರೆ ಟೈಮು-ಗಳಿಗೆಯಲ್ಲಿ ಅಲ್ಲಿಗೆ ಹೋಗಿ ಕೆಲಸ ಮಾಡಿಕೊಟ್ಟು ಬರಲಿದ್ದಾರೆ. ಒಂದೊಳ್ಳೆ ಕೆಲಸಕ್ಕಾಗಿ ಆಕ್ಷನ್‌ಸ್ಟಾರ್-ಚಾಲೆಂಜಿಂಗ್‌ಸ್ಟಾರ್ ಕೈಜೋಡಿಸ್ತಿರುವುದು ವಿಶೇಷ.

ಅಷ್ಟಕ್ಕೂ ಅದ್ಯಾವ ಕೆಲಸಕ್ಕಾಗಿ ಸಾರಥಿ ಹಾಗೂ ಧ್ರುವ ಕೈಜೋಡಿಸ್ತಿದ್ದಾರೆ ಈ ಕೂತೂಹಲದ ಪ್ರಶ್ನೆಗೆ ಉತ್ತರ ರಾಜಮಾರ್ತಾಂಡ.
ಈ‌ ಸಿನಿಮಾದ ಹೆಸರು ಕೇಳಿ ದಾಕ್ಷಣ ಕಂಪ್ಲೀಟ್ ಪಿಕ್ಚರ್ ನಿಮ್ಮ ಕಣ್ಮುಂದೆ ಬಂದಿರುತ್ತೆ. ರಾಜಮಾರ್ತಾಂಡ ಯುವಸಾಮ್ರಾಟ ಚಿರಂಜೀವಿ ಸರ್ಜಾ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿರು ಅಕಾಲಿಕ ಮರಣಕ್ಕೆ ತುತ್ತಾಗಿ ಅರ್ಧಕ್ಕೆ ಜೀವನಪಯಣ ಮುಗಿಸಿದರು. ಅಣ್ಣನ ಸಿನಿಮಾ ಅರ್ಧಕ್ಕೆ ನಿಂತು ಹೋಗುವುದನ್ನು ಇಷ್ಟಪಡದ ಸಹೋದರ ಧ್ರುವ ಅಣ್ಣನ ಸಿನಿಮಾಗೆ ಬೆನ್ನೆಲುಬಾಗಿ ನಿಲ್ತಿದ್ದಾರೆ.

ಚಿರು ರಾಜಮಾರ್ತಾಂಡ ಚಿತ್ರಕ್ಕೆ ಧ್ರುವ ಬೆಂಬಲವಿರುವುದು ಹಾಗೂ ಚಿರು ಪಾತ್ರಕ್ಕೆ ಧ್ರುವ ವಾಯ್ಸ್ ಡಬ್ ಮಾಡುವುದು ಹಳೆಯ ವಿಷ್ಯ. ಲೇಟೆಸ್ಟ್ ಅಪ್ ಡೇಟ್ ಅಂದರೆ ಧ್ರುವ ಕಾಲ್ ಶೀಟ್ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಖಾಸಗಿ ಸ್ಟುಡಿಯೋಗೆ ಆಗಮಿಸಲಿರುವ ಧ್ರುವ ಅಣ್ಣನ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ. ಈಗಾಗಲೇ ರಿಲೀಸ್ ಆಗಲಿರುವ ಟ್ರೇಲರ್ ನಲ್ಲಿ ಚಿರು ಅಭಿನಯಕ್ಕೆ ಧ್ರುವ ಕಂಠದಾನದ ಮೂಲಕ ಕಳೆ ತಂದಿರುವುದನ್ನು‌ ನೋಡಬಹುದಾಗಿದೆ.

ಇನ್ನೂ ಇದೇ ರಾಜಮಾರ್ತಾಂಡ ಚಿತ್ರಕ್ಕೆ ಚಾಲೆಂಜಿಂಗ್ ಚಕ್ರವರ್ತಿ ಕೂಡ ಶಕ್ತಿ ತುಂಬುತ್ತಾರೆನ್ನುವ ಸುದ್ದಿ ಕೂಡ‌‌ ಕಳೆದ ವರ್ಷವೇ ಕೇಳಿ ಬಂದಿತ್ತು. ಕೊಟ್ಟ ಮಾತಿನಂತೆ ಸಾರಥಿ ನಡೆದುಕೊಳ್ತಿದ್ದಾರೆ. ಶೀಘ್ರದಲ್ಲೇ ರಾಜಮಾರ್ತಾಂಡ ಚಿತ್ರದ ಚಿರು ಇಂಟ್ರುಡಕ್ಷನ್ ಸೀನ್ ಗೆ ದಚ್ಚು ಬಲ ತುಂಬಲಿದ್ದಾರೆ. ಇದನ್ನು ಸೆರೆ ಹಿಡಿಯೋಕೆ‌ ಚಿತ್ರತಂಡ ಸಿದ್ದತೆ ನಡೆಸಿಕೊಂಡಿದೆ. ಡಬ್ಬಿಂಗ್ ನಂತರ ಆದಷ್ಟು ಬೇಗ ಸಿನಿಮಾ ಕೆಲಸ ಕಾರ್ಯ ಮುಗಿಸಿಕೊಂಡು ಚಿತ್ರ ತೆರೆಗೆ ತರಲು ಪ್ಲ್ಯಾನ್ ರೂಪಿಸುತ್ತಿದೆ. ಟೈಸನ್ ಖ್ಯಾತಿಯ ರಾಮ್ ನಾರಾಯಣ್ ನಿರ್ದೇಶನ ಚಿತ್ರಕ್ಕಿದ್ದು, ಶಿವಕುಮಾರ್ ನಿರ್ಮಾಣದಲ್ಲಿ ಮೂಡಿಬರ್ತಿದೆ. ದಚ್ಚು- ಧ್ರುವ ಸಮಾಗಮದಲ್ಲಿ ರಾಜಮಾರ್ತಾಂಡನಿಗೆ ನೂರಾನೆ ಬಲ ಬಂದಿದೆ ಅಂದರೆ ತಪ್ಪಾಗಲ್ಲ ಬಿಡಿ.

Related Posts

error: Content is protected !!