ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಮೇಲೊಬ್ಬ ಮಾಯಾವಿ’ ಚಿತ್ರತಂಡ ಕಂಟೆಂಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಹರಳು ಮಾಫಿಯಾದ ಕಂಟೆಂಟ್ ಇರುವಂತಹ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿತ್ತು.
ಈಗ ಚಿತ್ರ ತಂಡ ಚಿತ್ರದ ಟೈಟಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದೆ. ‘ಬಿಗ್ ಬಾಸ್’ ಖ್ಯಾತಿಯ, ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ಇರುವ ಈ ಹಾಡನ್ನು ಎಲ್.ಎನ್.ಶಾಸ್ತ್ರೀ, ಹೇಮಂತ್ ಮತ್ತು ಶಮಿತಾ ಮಲ್ನಾಡ್ ಹಾಡಿದ್ದಾರೆ.
ಎಲ್.ಎನ್.ಶಾಸ್ತ್ರೀಯವರು ತಮ್ಮ ಕೊನೆಯ ದಿನಗಳಲ್ಲಿ ಹಾಡಿದ ಈ ಹಾಡು ಸಾಕಷ್ಟು ಅರ್ಥಗರ್ಭಿತವಾಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ.
ಕರಾವಳಿಯಲ್ಲಿ ನಡೆದ ಸತ್ಯ ಕಥೆ ಆಧಾರಿತ ಈ ಚಿತ್ರವನ್ನು ಬಿ.ನವೀನ್ ಕೃಷ್ಣ ಕಥೆ, ಬರೆದು ನಿರ್ದೇಶಿಸಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್ ನಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರಕ್ಕೆ ಎಲ್.ಎನ್. ಶಾಸ್ತ್ರಿ ಸಂಗೀತ ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯ ರಚಿಸಿದ್ದಾರೆ. ಕೆ.ಗಿರೀಶ್ ಕುಮಾರ್ ಸಂಕಲನಕಾರರಾಗಿರುವ ʻಮೇಲೊಬ್ಬ ಮಾಯಾವಿʼಗೆ, ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಹಣ ಮಾಡಿದ್ದಾರೆ. ದೇಸಿ ಸೊಗಡಿನ ಈ ಹಾಡಿಗೆ ರಾಮು ಅವರ ನೃತ್ಯ ನಿರ್ದೇಶನವಿದೆ.
ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಎಮ್.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್ ಲಕ್ಷ್ಮೀ ಅರ್ಪಣ್, ನವೀನ್‌ಕುಮಾರ್, ಪವಿತ್ರಾ ಜಯರಾಮ್, ಮುಖೇಶ್, ಡಾ.ಮನೋನ್ಮಣಿ, ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ “ಮೇಲೊಬ್ಬ ಮಾಯಾವಿ”ಚಿತ್ರ ತೆರೆಗೆ ಬರಲಿದೆ.