ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ; ಅಭಿಷೇಕ್‌ ಅಂಬರೀಶ್‌ ಹೇಳಿಕೆ


ಮುಂಬರುವ ವಿಧಾನಸಭೆ ಅಖಾಡಕ್ಕಿಳಿದರೂ ಅಚ್ಚರಿ ಇಲ್ಲ!
ಪತಿ ಅಂಬರೀಶ್‌ ಅವರ ಹಾದಿಯನ್ನು ಪತ್ನಿ ಸುಮಲತಾ ಅಂಬರೀಶ್‌ ತುಳಿದಿದ್ದು ಗೊತ್ತೇ ಇದೆ. ಈಗ ಪುತ್ರ ಅಭಿಷೇಕ್‌ ಅಂಬರೀಶ್‌ ಅವರ ಸರದಿ. ಹೌದು, ಅಭಿಷೇಕ್‌ ಅಂಬರೀಶ್‌ ಅವರು ಕೂಡ ರಾಜಕೀಯದತ್ತ ಒಲವು ತೋರಿಸಿದ್ದಾರೆ. ಅರೇ, ಇದೇನಪ್ಪಾ, ಈ ಹಿಂದೆ ಅವರು, “ನನಗೆ ಸಿನಿಮಾ ಮೇಲೆ ಒಲವಿದೆ ಹೊರತು, ರಾಜಕೀಯದ ಮೇಲೆ ಆಸಕ್ತಿಯೇ ಇಲ್ಲ” ಅಂತ ಹೇಳಿದ್ದರು. ಈಗ ನೋಡಿದರೆ, ರಾಜಕೀಯದತ್ತ ಮುಖ ಮಾಡುವ ಸುದ್ದಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆ ಎದುರಾದರೂ, ಇದು ಸತ್ಯ. ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಅವರು ರಾಜಕೀಯ ಪ್ರವೇಶಿಸುವ ಕುರಿತಂತೆ ಸುಳಿವು ನೀಡಿದ್ದಾರೆ.

ಹೀಗಾಗಿ ಇದು ಸದ್ಯ ಮಂಡ್ಯ ರಾಜಕಾರಣದಲ್ಲಿ ಒಂದಷ್ಟು ಕುತೂಹಲದ ವಿಷಯವಾಗಿದೆ. ಸದ್ಯ ಈಗ ವಿಧಾನ ಸಂಭೆ ಹತ್ತಿರವಾಗುತ್ತಿದೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಅಭಿಷೇಕ್‌ ಧುಮುಕುತ್ತಾರಾ ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಇದೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಭೇಟಿ ನೀಡಿದ್ದ ಅಭಿಷೇಕ್‌ ಅಂಬರೀಶ್‌, “ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ” ಎಂದಿದ್ದಾರೆ. ಅವರ ಈ ಮಾತು ಒಂದಷ್ಟು ಸಂಚಲನ ಮೂಡಿಸಿದೆ. ಅಲ್ಲಿಗೆ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಣ್ಣದ್ದೊಂದು ಸುಳಿವು ನೀಡಿದ್ದಾರೆ.

“ಭವಿಷ್ಯದಲ್ಲಿ ಏನೇನು ಬದಲಾವಣೆಗಳಾಗುತ್ತವೋ ಯಾರಿಗೆ ಗೊತ್ತು. ಕಳೆದ ವಾರ ಸಿಎಂ ಬದಲಾಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಹಾಗಾಗಿ, ಭವಿಷ್ಯ ಏನು ಅಂತ ಈಗಲೇ ಹೇಳೋಕೆ ಸಾಧ್ಯನಾ? ಜನ ಬಯಸಿದರೆ ನಾನು ಬರ್ತೀನಿ. ಮಂಡ್ಯಗಾಗಲಿ ಮದ್ದೂರಿಗಾಗಲಿ ಏಳು ಕ್ಷೇತ್ರಗಳಿಗೂ ಒಳ್ಳೆಯ ಶಾಸಕರು ಸಿಗಬೇಕು. ಒಳ್ಳೆಯ ಪ್ರತಿನಿಧಿಗಳು ಸಿಗಬೇಕು” ಎನ್ನುವ ಮೂಲಕ ಅಭಿಷೇಕ್ ಅವರು ಸದ್ಯದ ಮಟ್ಟಿಗೆ ಕುತೂಹಲ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಮಂಡ್ಯದಲ್ಲಿ ನಡೆಯುವ ಚುನಾವಣೆಗಳಂತೂ ಪ್ರತಿಷ್ಠೆಯಾಗಿರುತ್ತವೆ. ಒಂದು ವೇಳೆ ಅಭಿಷೇಕ್‌ ಅಂಬರೀಶ್‌ ಅವರು ವಿಧಾನಸಭೆ ಅಖಾಡಕ್ಕಿಳಿದರೂ ಅಚ್ಚರಿ ಇಲ್ಲ ಬಿಡಿ.

Related Posts

error: Content is protected !!