ಬರ್ತ್‌ಡೇ ಸಂಭ್ರಮದಲ್ಲಿ ರಿಯಲ್‌ ಹೀರೋ! ಸೋನು ಸೂದ್‌ಗೆ ಶುಭಾಶಯಗಳ ಸುರಿಮಳೆ

ಸೋನು ಸೂದ್‌ ಈ ಹೆಸರು ಈಗ ಎಲ್ಲೆಡೆ ಪರಿಚಿತ. ಬರೀ ನಟರಾಗಿಯಷ್ಟೇ ಅಲ್ಲ, ಮಾನವೀಯ ಮೌಲ್ಯವಿರುವ ಒಬ್ಬ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಅನ್ನೋದು ವಿಶೇಷ. ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. (ಜುಲೈ ೩೦) ಅವರಿಂದು 48ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ಫ್ಯಾನ್ಸ್‌ ಸಿಕ್ಕಾಪಟ್ಟೆ ಫೋಟೋಸ್‌ ಶೇರ್‌ ಮಾಡಿ ಶುಭಾಶಯ ಹೇಳ್ತಾ ಇದ್ದಾರೆ.

ರೀಲ್‌ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು, ರಿಯಲ್‌ ಲೈಫ್‌ನಲ್ಲಿ ನಿಜಕ್ಕೂ ಅವರು ಹೀರೋನೇ. ಅದಾಗಲೇ ಸಾಬಿತಾಗಿದೆ ಕೂಡ. ತೆರೆ ಮೇಲೆ ಅಬ್ಬರಿಸುವ ವಿಲನ್‌ ಸೋನು ಅವರ ನಟನೆಯನ್ನು ಎಷ್ಟು ಇಷ್ಟಪಡ್ತಾರೋ, ಅವರ ನಿಜ ಜೀವನದ ವ್ಯಕ್ತಿತ್ವವನ್ನೂ ಜನರು ಅದಕ್ಕಿಂತಲೂ ಹೆಚ್ಚು ಇಷ್ಟಪಡ್ತಾರೆ. ಅದಕ್ಕೆ ಕಾರಣ, ಕಳೆದ ವರ್ಷ ಕೊರೊನಾ ಹಾವಳಿಯಿಂದ ತತ್ತರಿಸಿದ್ದ ಶ್ರಮಿಕರ ಪರ ನಿಂತು ಕೈಲಾದ ಸೇವೆ ಮಾಡಿದ್ದು.

ಕೊರೊನಾ ಹಿನ್ನೆಲೆಯಲ್ಲಿ ದಿಢೀರ್ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ, ಎಲ್ಲೆಡೆ ಸಮಸ್ಯೆ ಹೆಚ್ಚಾಯ್ತು. ಅದೆಷ್ಟೋ ಜನರು ಇದ್ದ ಕೆಲಸ ಕಳೆದುಕೊಂಡು ಮೌನವಾಗಿದ್ದರು. ಇನ್ನು, ಸರಿಯಾಗಿ ಆಹಾರ ಸಿಗದೆ ಪರಿತಪಿಸುತ್ತಿದ್ದ ಜನರಿಗಂತೂ ಲೆಕ್ಕವೇ ಇಲ್ಲ. ಎಲ್ಲವೂ ಬಂದ್‌ ಆಗಿದ್ದರಿಂದ ತಮ್ಮ ತಮ್ಮ ಊರಿಗೂ ಹೋಗಲಾಗದೆ ಒದ್ದಾಡುತ್ತಿದ್ದ ಕಾರ್ಮಿಕರನ್ನು ಅವರವರ ರಾಜ್ಯ, ಊರುಗಳಿಗೆ ಕಳುಹಿಸಲು ಟೊಂಕ ಕಟ್ಟಿ ನಿಂತಿದ್ದು ಇದೇ ಸೋನು ಸೂದ್.‌ ಆ ಮೂಲಕ ಅವರು ಮಾನವೀಯ ತೋರಿದರು.

ಅವರ ಆ ಕೆಲಸಕ್ಕೆ ಭರ್ಜರಿ ಮೆಚ್ಚುಗೆಯೂ ಸಿಕ್ತು. ಸಾವಿರಾರು ಕಾರ್ಮಿಕರನ್ನು ಸಿಕ್ಕ ಸಿಕ್ಕ ಬಸ್ಸು, ರೈಲುಗಳ ಮೂಲಕ ಮರಳಿ ಗೂಡಿಗೆ ಸೇರಿಸುವ ಮಹತ್ವದ ಕೆಲಸ ಮಾಡಿ ರಿಯಲ್‌ ಹೀರೋ ಆಗಿಬಿಟ್ಟ ಸೋನು, ಕೆಲವರನ್ನು ವಿಮಾನದ ಮೂಲಕವೂ ಅವರವರ ಊರು ತಲುಪಿಸುವ ಕೆಲಸ ಮಾಡಿದರು. ಕೊರೊನೊ ಸಮಯದಲ್ಲಿ ಮಾಡಿದ ಕೆಲಸ ಅವರಿಗೆ ತೃಪ್ತಿ ತಂದಿದ್ದೇ ತಡ, ಯಾವುದೇ ಮೂಲೆಯಲ್ಲಿ ಸಮಸ್ಯೆಗೆ ಸಿಲುಕಿದ ಜನ ಕಷ್ಟ ಅಂದಾಗ, ಅಲ್ಲಿ ಸೋನು ಹೃದಯ ಮಿಡಿಯುತ್ತಿತ್ತು. ಹಾಗಾಗಿ ಸೋನು ಸೂದ್‌ ತೆರೆ ಮೇಲೆ ಖಳನಟರಾಗಿದ್ದರೂ, ತೆರೆಯ ಹಿಂದೆ ನಿಜವಾದ ಹೀರೋನೇ ಅನಿಸಿಕೊಂಡರು.

ತೆಲುಗಿನ “ಅರುಂಧತಿ” ಚಿತ್ರ ಅವರಿಗೆ ದೊಡ್ಡ ಬ್ರೇಕ್ ಕೊಡ್ತು. ಆ ಬಳಿಕ ಸೋನು ಸೂದ್‌ ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುತ್ತಲೇ ಸುದ್ದಿಯಾದರು. ಆ ಬಳಿಕ ಬಾಲಿವುಡ್‌, ಕಾಲಿವುಡ್‌, ಸ್ಯಾಂಡ್‌ಲ್‌ವುಡ್‌ನಲ್ಲೂ ಸೋನು ಹವಾ ಶುರುವಾಯಿತು. ಬಹುತೇಕ ಖಳನಟನ ಪಾತ್ರಗಳಲ್ಲೇ ಮಿಂಚಿದ ಸೋನು ಸೂದ್‌, 2011ರಲ್ಲಿ ಕನ್ನಡ ಸಿನಿರಂಗಕ್ಕೆ ಎಂಟ್ರಿಕೊಟ್ಟರು.

“ವಿಷ್ಣುವರ್ಧನ” ಸಿನಿಮಾ ಮೂಲಕ ಅಬ್ಬರಿಸಿದರು. ಸದ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಬಿಝಿಯಾಗಿರುವ ಸೋನು ಸೂದ್‌, ಮಾನವೀಯ ಕೆಲಸಗಳನ್ನೂ ಮಾಡುತ್ತಿದ್ದಾರೆ. ಅವರ ಬರ್ತ್‌ಡೇ ಅಂಗವಾಗಿ ಅವರ ಫ್ಯಾನ್ಸ್‌ ಸಂಭ್ರಮಿಸುವ ಮೂಲಕ ಸೋನು ಅವರಿಗೆ ಜೈಕಾರ ಹಾಕುತ್ತಿದ್ದಾರೆ.

Related Posts

error: Content is protected !!