Categories
ಸಿನಿ ಸುದ್ದಿ

ರೊಟ್ಟಿ , ಕೋಳಿ ಕರಿ ಅಂದ್ರೆ ರಶ್ಮಿಕಾ‌ಗೆ ಹಾಟ್ ಫೆವೆರಿಟ್ ಫುಡ್ ಅಂತೆ ! ..

‘ಅಕ್ಕಿ ರೊಟ್ಟಿಗೂ ಕೂರ್ಗ್ ನವರಿಗೂ  ಬಿಡಿಸಲಾಗದ ನಂಟಿದೆ. ಅದರಲ್ಲೂ ಜಿನಿ ಜನಿ ಮಳೆ‌ಗಾಲದ ನಡುವೆ ಅಕ್ಕಿರೊಟ್ಟಿ- ಕೋಳಿ ಕರಿ ತಿ‌ಂತಿದ್ರೆ, ಎಂತಹ ಆನಂದ ಗೊತ್ತಾ? ಹೀಗಂತ ಒಂದ್ಸಲ ಬಾಯಿ ಚಪ್ಪರಿಸಿದ್ದು ಬೇರಾರು ಅಲ್ಲ ಸೌತ್ ಸೆನ್ಸೆಷನಲ್ ನಟಿ , ಕೊಡಗಿನ ಬೆಡಗಿ ರಶ್ಮಿಕಾ‌ ಮಂದಣ್ಣ.

ಹಾಗಂತ ಅವರು ಹೇಳಿಕೊಂಡಿದ್ದು ಯೂವರ್ಸ್ ಲೈಫ್ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ. ಅಂದ ಹಾಗೆ ಇದು  ಮೆಗಾ ಸ್ಟಾರ್ ಚಿರಂಜೀವಿ ಅವರ ಸೊಸೆ, ರಾಮ್ ಚರಣ್ ತೇಜ್ ಪತ್ನಿ ಉಪಾಸನಾ ಅವರು ಶುರು‌ಮಾಡಿರೋ ಆನ್ ಲೈನ್ ಪ್ಲಾಟ್ ಫಾರ್ಮ್.

ಆರೋಗ್ಯ, ಲೈಫ್​ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಅವರು,   URLife.co.in ಹೆಸರಿನ ವಿನೂತನ ವೆಬ್​ಸೈಟ್​ ಮೂಲಕ ಹೇಳ ಹೊರಟಿದ್ದಾರೆ. ಈ ವೆಬ್ ಸೈಟ್ ಗೆ ಉಪಾಸನಾ ಅವರು ಮ್ಯಾನೇಜಿಂಗ್ ಡೈರೆಕ್ಟರ್ .‌

ಈ ಶೋನಲ್ಲಿ ಈಗ  ಅತಿಥಿ ಸಂಪಾದಕಿಯಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ಕೊಡಗಿನವರಿಗೂ , ಅಕ್ಕಿ ರೊಟ್ಟಿಗೂ ಇರುವ  ನಂಟಿನ ಬಗ್ಗೆ ಹೇಳಿಕೊಂಡಿರುವುದು ವಿಶೇಷ. ಈ ಹಿಂದೆ ಇದಕ್ಕೆ ಅತಿಥಿಯಾಗಿ ಹೋಗಿದ್ದ ಕರ್ನಾಟಕದ ಕ್ರಷ್ ರಶ್ಮಿಕಾ‌ಮಂದಣ್ಣ , ಕೋಳಿ ಕರಿ ಶುಚಿ- ರುಚಿ ಕುರಿತು ಮಾತನಾಡಿದ್ದರು.‌ಈಗ ಮತ್ತೆ ಅಲ್ಲಿಗೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಅಕ್ಕಿ ರೊಟ್ಟಿ ನಂಟಿನ ಬಗ್ಗೆ ಹೇಳಿಕೊಂಡರು.

‘ ನಮ್ಮ ಮನೆಯಲ್ಲಿ ಬೆಳಗ್ಗೆಯೇ ಅಕ್ಕಿ ರೊಟ್ಟಿ ಉಪಾಹಾರ. ನಮ್ಮ ಅಜ್ಜಿ ಆ ರೊಟ್ಟಿ ಮಾಡುವುದರಲ್ಲಿ ಎತ್ತಿದ ಕೈ. ಬೆಳಗ್ಗೆಯೂ ಅದೇ, ಮಧ್ಯಾಹ್ನ ಊಟಕ್ಕೂ ಅಕ್ಕಿರೊಟ್ಟಿ, ರಾತ್ರಿ ಊಟಕ್ಕೂ ಅಕ್ಕಿ ರೊಟ್ಟಿ. ನಾನೊಬ್ಬಳೇ ಅಲ್ಲ ಬಹುತೇಕ ಎಲ್ಲ ಕೂರ್ಗಿಗಳಿಗೆ ಅಕ್ಕಿರೊಟ್ಟಿ ಅಂದರೆ ಇಷ್ಟ’  ಎಂದರು ರಶ್ಮಿಕಾ‌ಮಂದಣ್ಣ.

Categories
ಸಿನಿ ಸುದ್ದಿ

ಜನವರಿಗೆ ಬರ್ತಾಳೆ ಪಾರು – ಟೀಸರ್ ರಿಲೀಸ್ ಮಾಡಿದ ಹಂಸಲೇಖ

ಚಿಂದಿ ಆಯುವ ಹುಡುಗಿ ಡಿಸಿ ಆದಾಗ…

ಕನ್ನಡದಲ್ಲೀಗ ಸಿನಿಮಾಗಳ ಕಲರವ. ಹೌದು, ಕೊರೊನಾ ಹಾವಳಿಯ ಬಳಿಕ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಮೆಲ್ಲನೆ, ಒಂದೊಂದೇ ಚಿತ್ರಗಳು ತೆರೆಗೆ ಬರುತ್ತಿವೆ. ಈಗ ಮಕ್ಕಳ ಚಿತ್ರವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪಾರು” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಚಿತ್ರ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

 

ಬಡತನದ ಬೇಗೆಯಲ್ಲೇ ದಿನದೂಡಿ ಬದುಕುವ ಫ್ಯಾಮಿಲಿಯಲ್ಲಿ ನಾಲ್ವರು ಚಿಂದಿ ಆಯುವ ಮಕ್ಕಳಲ್ಲಿ ಒಬ್ಬಳು ಚೆನ್ನಾಗಿ ಓದಿ, ಜಿಲ್ಲಾಧಿಕಾರಿಯಾಗುತ್ತಾಳೆ. ಆದೇ ಚಿತ್ರದ ಕಥಾಹಂದರ. ಹನುಮಂತ್‌ ಪೂಜಾರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಹಾಗು ಛಾಯಾಗ್ರಹಣದ ಜವಾಬ್ದಾರಿಯೂ ಹನುಮಂತ್‌ ಪೂಜಾರ್‌ ಅವರಿಗಿದೆ. ಇನ್ನು, ನೀನಾಸಂ ನಂಟು ಇರುವ ಹನುಮಂತ್‌ ಪೂಜಾರ್‌, “ಬುದ್ದಿವಂತ”, “ಅಯೋಗ್ಯ”, “ದೋಬಿಘಾಟ್” ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ದುರ್ಗ‌ ಸಿನಿ ಕ್ರಿಯೇಷನ್ಸ್ ‌ಬ್ಯಾನರ್‌ನಲ್ಲಿ ಹನುಮಂತ್‌ ಪೂಜಾರ್ ಅವರೇ ಚಿತ್ರ ನಿರ್ಮಿಸಿದ್ದಾರೆ. ಸಿ.ಎನ್.ಗೌರಮ್ಮ ಅವರ ಸಹ ನಿರ್ಮಾಣವಿದೆ.


ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತವಿದೆ. ಶಿವ‌ಕುಮಾರ್ ಸ್ವಾಮಿ‌‌ ಸಂಕಲನ‌ ಮಾಡಿದ್ದಾರೆ. “ಪಾರು” ಚಿತ್ರದಲ್ಲಿ ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ‌ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಮ್‌ ಕುಮಾರ್ ಇತರರು ಇದ್ದಾರೆ. ದಾವಣಗೆರೆ, ಬೆಂಗಳೂರು, ಹಾವೇರಿ ಇನ್ನಿತರೆ ಕಡೆ ಚಿತ್ರೀಕರಣ ನಡೆದಿದೆ.

Categories
ಸಿನಿ ಸುದ್ದಿ

ಹೊಸ ಬೆಳಕಿನ ನಿರೀಕ್ಷೆಯಲ್ಲಿ ಅಕ್ಷತಾ ಪಾಂಡವಪುರ !

ಸೋಷಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಹಂಚಿಕೊಂಡ ಕಲಾವಿದೆ

ರಂಗಭೂಮಿ‌ಕಲಾವಿದೆ ಹಾಗೂ ಬಿಗ್‍ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನ ಅವರು ಸೋಷಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದಾರೆ.

” ಬದುಕೆಂಬ ಪುಸ್ತಕದಲ್ಲಿ ಮುಂದಿನ ಅಧ್ಯಾಯಕ್ಕೆ ಕೆಲವೇದಿನಗಳು ಬಾಕಿ.ಹೊಸವರ್ಷ ಹೊಸಬೆಳಕಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ…ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿದ್ದೇವೆ” ಅಂತ ಅಕ್ಷತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗರ್ಭಿಣಿಯಾಗಿರುವ ಅಕ್ಷತಾ ಪಾಂಡವಪುರ, ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದಾರೆ. ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ. ಕೆಂಪು-ಹಳದಿ ಬಾರ್ಡರಿನ ಕಪ್ಪು ಬಣ್ಣದ ಇಳಕಲ್ ಸೀರೆ ತೊಟ್ಟು, ದೊಡ್ಡ ಕತ್ತಿನ ಸರ ಮತ್ತು ಮೂಗುತಿ ತೊಟ್ಟು ಕ್ಯಾಮೆರಾ ಕ್ಕೆ ಪೋಸು ನೀಡಿದ್ದಾರೆ.

ಅಕ್ಷತಾ ಪತಿ ಪ್ರಸನ್ ಸಾಗರ್ ನಿರ್ದೇಶಕರಾಗಿದ್ದಾರೆ. ಪ್ರಸನ್ನ್ ಶಿವಮೊಗ್ಗ ಜಿಲ್ಲೆಯ ಸಾಗರ್ ಮೂಲದವರಾಗಿದ್ದು, ಅಕ್ಷತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ.

Categories
ಸಿನಿ ಸುದ್ದಿ

ಎಕ್ಸ್‌ಕ್ಯೂಸ್‌… ಮಿ ಬಂದು 17 ವರ್ಷ! ಸ್ಟಾರ್ ಗಿರಿ ಮೇಲೆ ನಂಬಿಕೆ ಇಲ್ಲ- ಅಜೇಯ್‌ರಾವ್

ಕಷ್ಟ ಮರೆಯಲ್ಲ, ಸಾಧನೆ ಬಿಡಲ್ಲ…

ಡಿಸೆಂಬರ್‌, 5, 2003
– ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಸಿನಿಮಾವೊಂದು ಬಿಡುಗಡೆಯಾದ ದಿನ. ಹೌದು, ಪ್ರೇಮ್‌ ನಿರ್ದೇಶನದ ಅಜೇಯ್‌ ರಾವ್ , ರಮ್ಯಾ ಹಾಗೂ ಸುನೀಲ್‌ ರಾವ್‌ ಅಭಿನಯದ “ಎಕ್ಸ್‌ ಕ್ಯೂಸ್‌.. ಮಿ” ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಹದಿನೇಳು ವರ್ಷಗಳು ಸಂದಿವೆ. ಎನ್‌.ಎಂ.ಸುರೇಶ್‌ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್‌ ಸಂಗೀತ ನೀಡಿದ್ದರು. ಇಂದಿಗೂ ಈ “ಎಕ್ಸ್‌ ಕ್ಯೂಸ್‌ …ಮಿ” ಎವರ್‌ಗ್ರೀನ್.‌ ಒಂದಷ್ಟು ಸಿನಿಮಾಗಳು ಪದೇ ಪದೇ ಕಾಡುವುದಕ್ಕೆ ಕಾರಣ, ಆ ಚಿತ್ರದಲ್ಲಿದ್ದ ಕಥೆ, ಚಿತ್ರಕಥೆ, ಹಾಡುಗಳು ಹಾಗೂ ಕಲಾವಿದರ ಅಭಿನಯ. ಅಷ್ಟಕ್ಕೂ ಈ ಚಿತ್ರದ ಬಗ್ಗೆ ಇಷ್ಟೊಂದು ಹೇಳುವುದಕ್ಕೆ ಕಾರಣವಿಷ್ಟೇ. ಈ ಚಿತ್ರವನ್ನು ಅಜೇಯ್‌ರಾವ್‌ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಯಶಸ್ಸು ತಂದುಕೊಟ್ಟ “ಎಕ್ಸ್‌ ಕ್ಯೂಸ್‌…ಮಿ” ಚಿತ್ರ ಅವರಿಗೊಂದು ಐಡೆಂಟಿಟಿ ತಂದುಕೊಟ್ಟಿದೆ ಅನ್ನುವುದು ಸತ್ಯ. ಹೀರೋ ಆಗಿ ಯಶಸ್ಸು ಕೊಟ್ಟ ಚಿತ್ರವಿದು. ಹಾಗಾಗಿ ಈ ಹದಿನೇಳು ವರ್ಷಗಳ ಸಿನಿಮಾ ಜರ್ನಿಯಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಆ ಕುರಿತು ಅಜೇಯ್‌ರಾವ್‌ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

ನೋವು-ಸಂಕಟ ಮರೆತಿಲ್ಲ
“ಹಲೋ ಎಕ್ಸ್‌ ಕ್ಯೂಸ್‌… ಮಿ” ಈ ಪದವನ್ನೊಮ್ಮೆ ಕೇಳೋಕೆ ಒಂದು ಖುಷಿ ಎನಿಸುತ್ತೆ. ಯಾಕೆಂದರೆ, ನಾನು “ಎಕ್ಸ್‌ ಕ್ಯೂಸ್‌… ಮಿ” ಸಿನಿಮಾ ಮೂಲಕ ಹೀರೋ ಆದವನು. ನನ್ನನ್ನು ಹೀರೋ ಅಂತ ಗುರುತಿಸಿಕೊಟ್ಟ ಸಿನಿಮಾವದು. ದೊಡ್ಡ ಯಶಸ್ಸು ಕೊಟ್ಟ ಚಿತ್ರವದು. ನನ್ನ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟ, ನನ್ನೊಳಗಿನ ಬಯಕೆಯನ್ನು ಈಡೇರಿಸಿದ ಮತ್ತು ಎಂದೆಂದಿಗೂ ಮರೆಯಲಾರದ ಚಿತ್ರವದು. ನಾನು ಯಾರು ಅಂತ ಗೊತ್ತಿಲ್ಲದ ದಿನದಲ್ಲೇ ಆ ಚಿತ್ರ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡಿದ ಚಿತ್ರವದು. ಹಾಗಾಗಿ, ನನಗೆ ಆ ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ.


ಈ ಹದಿನೇಳು ವರ್ಷಗಳು ಸುದೀರ್ಘ ಪಯಣದಲ್ಲಿ ಸಕ್ಸಸ್‌ ನೋಡಿದ್ದೇನೆ. ಫೇಲ್ಯೂರ್‌ ಕೂಡ ಕಂಡಿದ್ದೇನೆ. ಈ ಎರಡನ್ನೂ ನಾನು ಹತ್ತಿರದಿಂದಲೇ ನೋಡಿದವನು. ಒಂದೊಂದೇ ಮೆಟ್ಟಿಲನ್ನು ತುಂಬಾ ಕಷ್ಟಪಟ್ಟು ಹತ್ತಿ ಬಂದಿದ್ದೇನೆ. ಹತ್ತುವಾಗ ಎಡವಿದ್ದೇನೆ, ನೋವು ಅನುಭವಿಸಿದ್ದೇನೆ. ಒಮ್ಮೊಮ್ಮೆ ಆ ಮೆಟ್ಟಿಲ ಮೇಲೆ ನಿಂತು ಖುಷಿಪಟ್ಟಿದ್ದೇನೆ. ಆದರೆ, ನಾನು ಯಾವುದನ್ನೂ ಮರೆತಿಲ್ಲ ಎಂಬುದೊಂದೇ ಸತ್ಯ. ಯಾಕೆಂದರೆ, ಮನುಷ್ಯ ಎಷ್ಟೇ ಮೇಲೆ ಬಂದರೂ, ಎಷ್ಟೇ ಗಳಿಸಿದರೂ, ಹಿಂದಿನ ನೆನಪು, ಆ ಕಷ್ಟ, ನೋವು, ಸಂಕಟ ಮರೆಯಬಾರದು. ನಾನು ಈ ಎಲ್ಲವನ್ನೂ ಅನುಭವಿಸಿದ್ದರಿಂದ ಪದೇ ಪದೇ ಎಲ್ಲವೂ ನೆನಪಾಗುತ್ತಲೇ ಇರುತ್ತದೆ. ಹಾಗಾಗಿಯೇ ನಾನು ಸದಾ ಕೇವಲ ಒಬ್ಬ ನಟನಾಗಿ ಇರಲು ಇಷ್ಟಪಡ್ತೀನಿ.

 

ಸ್ಟಾರ್‌ ಅನ್ನೋದು ಮಿಂಚಿ ಮರೆಯಾಗುತ್ತೆ…
ಕ್ಯಾಮೆರಾ ಮುಂದೆ ನಾನು ಒಬ್ಬ ಆರ್ಟಿಸ್ಟ್‌ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡ್ತೀನಿ. ಯಾಕೆಂದರೆ, ನಟನಾಗಿರುವುದೇ ಶಾಶ್ವತ. ನನಗೆ ಸ್ಟಾರ್‌ ಪಟ್ಟ ಬೇಡವೇ ಬೇಡ. ಅದೊಂದು ರೀತಿ ಸ್ವಿಚ್‌ ಆನ್‌ ಅಂಡ್‌ ಆಫ್‌ ಇದ್ದಂತೆ. ಆಗಾಗ ಸಕ್ಸಸ್‌, ಫೇಲ್ಯೂರ್‌ ಇದ್ದಂಗೆ. ಹಾಗಾಗಿ ನಾನು ಸ್ಟಾರ್‌ಗಿಂತ ಒಬ್ಬ ನಟನಾಗಿ ಗುರುತಿಸಿಕೊಳ್ಳೋಕೆ ಇಷ್ಟಪಡ್ತೀನಿ. ಒಬ್ಬ ನಿರ್ದೇಶಕನ ಕಲ್ಪನೆ ಪಾತ್ರಕ್ಕೆ ನ್ಯಾಯ ಸಲ್ಲಿಸುವಂತಹ ನಟನಾಗಬೇಕು ಎಂಬುದು ನನ್ನ ಉದ್ದೇಶ. ನಾವು ಅಣ್ಣಾವ್ರು ಅವರನ್ನು ನೆನಪಿಸಿಕೊಂಡರೆ, ಅವರು ಮಾಡಿದ ಕೆಲಸಗಳು, ಪಾತ್ರಗಳು, ಚಿತ್ರಗಳು ಕಣ್ಣೆದುರು ಬರುತ್ತವೆ. ಅದಷ್ಟೇ ಶಾಶ್ವತ. ಹಾಗಾಗಿ ನಾವು ತೆರೆಯ ಮೇಲೆ ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯಬೇಕಾದರೆ, ಶ್ರದ್ಧೆ, ಭಕ್ತಿ,ಪ್ರಾಮಾಣಿಕತೆಯಿಂದ ಮಾಡಬೇಕು.

ನಟನಿಗೆ ಸ್ಟಾರ್‌ ಭ್ರಮೆ ಇರಬಾರದು
ನನಗೆ ಈ ಸ್ಟಾರ್‌ಡಮ್‌ ಮೇಲೆ ನಂಬಿಕೆ ಇಲ್ಲ. ಸ್ಟಾರ್‌ ಪಟ್ಟ ಅನ್ನೋದು ಶಾಶ್ವತವೂ ಅಲ್ಲ. ನಟನಾದವನು ಆ ಭ್ರಮೆಯಲ್ಲಿ ಇರಬಾರದು. ಕಲಾವಿದರ ಬದುಕಲ್ಲಿ ಸೋಲು-ಗೆಲುವು ಕಾಮನ್.‌ ನಿರ್ಮಾಪಕ ಇರಲಿ, ನಿರ್ದೇಶಕ ಇರಲಿ, ನಟನೇ ಇರಲಿ ತನ್ನ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಮಾತ್ರ ಎಲ್ಲವೂ ಶಾಶ್ವತವಾಗಿರುತ್ತೆ. ಎಲ್ಲರ ಮನಸ್ಸಲ್ಲಿ ಕೊನೆಗೆ ಉಳಿಯೋದು ಮಾಡಿದ ಕೆಲಸವಷ್ಟೇ. ಅದೆಷ್ಟೋ ಸಿನಿಮಾಗಳು ಫ್ಲಾಪ್‌ ಆಗಿದ್ದರೂ, ಇವತ್ತಿಗೂ ಆ ಸಿನಿಮಾಗಳನ್ನು ನೋಡಿದಾಗ, ಎಂಥಾ ಕ್ಲಾಸಿಕ್‌ ಸಿನಿಮಾ ಮಾಡಿದ್ದಾರೆ ಅನ್ಸುತ್ತೆ. ಇವತ್ತು ಮಾರ್ಕೆಟ್‌ ಅನ್ನೋದು ಕೂಡ ಶಾಶ್ವತವಲ್ಲ. ನಾಳೆ ನಾವೇ ಇರ್ತೀವೋ ಇಲ್ಲವೋ ಅನ್ನೋದು ಶಾಶ್ವತವಲ್ಲ. ಆದರೆ, ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯೋದು ಎಂಬುದು ಅವರ ಮಾತು.

ನಿರ್ದೇಶನದ ಆಸೆಯೂ ಇದೆ
ಅಂದಹಾಗೆ, ಅಜೇಯ್‌ರಾವ್‌ ಈ ಹದಿನೇಳು ವರ್ಷಗಳಲ್ಲಿ ಗೆದ್ದಿದ್ದಾರೆ, ಬಿದ್ದಿದ್ದಾರೆ, ನಿರ್ಮಾಪಕರಾಗಿದ್ದಾರೆ, ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ನಿರ್ದೇಶನದ ಮೇಲೆ ಆಸೆ ಇಲ್ಲವೇ? ಈ ಬಗ್ಗೆ ಮಾತನಾಡುವ ಅಜೇಯ್‌ರಾವ್‌, ನನಗೂ ನಿರ್ದೇಶನದ ಮೇಲೆ ಪ್ರೀತಿ ಇದೆ. ಆದರೆ, ಮೊದಲ ಆದ್ಯತೆ ನಟನೆಗೆ ಕೊಡ್ತೀನಿ. ಅದು ನನ್ನ ಪ್ಯಾಷನ್‌ ಕೂಡ. ಮೊದಲು ನನ್ನೊಂದಿಗೆ ಸಿನಿಮಾ ಮಾಡೋಕೆ ಬರೋರನ್ನು ಗೌರವಿಸುತ್ತೇನೆ. ಅಂಥವರಿಗೆ ಸಿನಿಮಾ ಮೇಲೆ ಪ್ರೀತಿ ಇರಬೇಕು. ಗೆಲ್ಲುವ ಛಲ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ತಾಳ್ಮೆ ಇರಬೇಕು. ಇಂದು ನನಗೆ ಆ ತಾಳ್ಮೆ ಇದ್ದುದರಿಂದಲೇ ಎಲ್ಲವನ್ನೂ ಕಂಡುಕೊಳ್ಳಲು ಸಾಧ್ಯವಾಗಿದೆ ಎಂಬುದು ಅವರ ಮಾತು.

ಸಾಧಿಸುವುದಿನ್ನೂ ಇದೆ…
ಸದ್ಯ ಅಜೇಯ್‌ ರಾವ್‌ ಅವರ “ಕೃಷ್ಣ ಟಾಕೀಸ್‌” ಸೆನ್ಸಾರ್‌ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಉಳಿದಂತೆ “ಶೋಕಿವಾಲ” ಕೂಡ ರೆಡಿ. ಇವುಗಳ ಜೊತೆಗೆ ನಿರ್ದೇಶಕರಾದ ಮಂಜು ಸ್ವರಾಜ್‌ ಮತ್ತು ಗುರುದೇಶಪಾಂಡೆ ಜೊತೆ ಸಿನಿಮಾ ಮಾಡಬೇಕಿದೆ. ಇದರ ನಡುವೆಯೇ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆಯಂತೆ. ಅದೇನೆ ಇರಲಿ, ಅಜೇಯ್‌ ರಾವ್‌ “ಎಕ್ಸ್‌ ಕ್ಯೂಸ್‌… ಮಿ”ಗೆ ಹದಿನೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಅಜೇಯ್‌ರಾವ್‌ ಎಲ್ಲಾ ಪಾಠ ಕಲಿತಿದ್ದಾರೆ. ಒಮ್ಮೆ ತಿರುಗಿ ನೋಡಿದಾಗ ಸಾಧನೆ ಮಾಡುವುದು ಇನ್ನೂ ಇದೆ ಎಂದೆನಿಸದಿರದು.

Categories
ಸಿನಿ ಸುದ್ದಿ

ಸ್ಟಾರ್ ಸುವರ್ಣದಲ್ಲಿ  ‘ಮನಸೆಲ್ಲಾ ನೀನೇ’, ಡಿ.7ರಿಂದ ಪ್ರತಿ  ರಾತ್ರಿ 9.30ಕ್ಕೆ ಪ್ರಸಾರ

ಶನಿವಾರ ( ಡಿ.5) ಹುಟ್ಟು ಹಬ್ಬ ಆಚರಿಸಿಕೊಂಡ ಕನ್ನಡದ ಏಕ್ತಾ‌ಕಪೂರ್ ಶ್ರುತಿ ನಾಯ್ಡು

ಸ್ಟಾರ್ ಸುವರ್ಣ ಬದಲಾವಣೆಯ ಬೆಳಕಿನೊಂದಿಗೆ ಹೊಸ ಕಿರುತೆರೆ ವೀಕ್ಷಕರನ್ನು ಹೊಸ ರೂಪದಲ್ಲಿ ರಂಜಿಸುತ್ತಿದೆ. ಹೊಸ ಆಲೋಚನೆಯ ‘ಸರಸು’ ಧಾರಾವಾಹಿ, ಹೊಸ ಪರಿಕಲ್ಪನೆಯ ‘ಸುವರ್ಣ ಸೂಪರ್ ಸ್ಟಾರ್’ ಕಾರ್ಯಕ್ರಮಗಳು ಈಗಾಗಲೇ  ಕಿರುತೆರೆ ವೀಕ್ಷಕರ ಮನಸಿಗೆ ಹತ್ತಿರವಾಗಿವೆ. ಆ ಸಾಲಿಗೆ ಈಗ ‘ಮನಸೆಲ್ಲಾ ನೀನೇ’ ಹೊಚ್ಚ ಹೊಸ ಧಾರಾವಾಹಿ.

ಇದು ಶ್ರುತಿ ನಾಯ್ಡು ನಿರ್ಮಾಣದ ಹೊಸ ಧಾರಾವಾಹಿ‌. ಶ್ರುತಿ ನಾಯ್ಡು  ಅವರು ತಮ್ಮದೇ ‘ಶ್ರುತಿ ನಾಯ್ಡ ಚಿತ್ರ’ ಸಂಸ್ಥೆಯ ಮೂಲಕ ಈಗಾಗಲೇ ಅವರು ಕಿರುತೆಯಲ್ಲಿ ಹಲವು ಜನಪ್ರಿಯ ಧಾರಾವಾಹಿ ಕೊಟ್ಟವರು. ಅದೇ ಅನುಭವದ ಪಯಣದಲ್ಲೀಗ ಹೊಸತನ್ನು ಬಯಸುವ  ಕಿರುತೆರೆ ವೀಕ್ಷಕರಿಗೆ ಹೊಸ ಹೊಸತೆನಿಸುವ ಕತೆಯೊಂದನ್ನು ‘  ಮನಸೆಲ್ಲಾ‌ನೀನೇ’ ಮೂಲಕ ನೀಡಲು ಬರುತ್ತಿದ್ದಾರೆ. ವಿಶೇಷವಾಗಿ ಸಂಘರ್ಷ ಧಾರಾವಾಹಿ ಯ ನಂತರ ಸ್ಟಾರ್ ಸುವರ್ಣದಲ್ಲಿ ಅವರು ನೀಡುತ್ತಿರುವ ಎರಡನೇ ಧಾರಾವಾಹಿ ಇದು. ಇದುವರೆಗೂ ಬಂದು ಹೋದ ಧಾರಾವಾಹಿಗಳ ಕಥಾ ಹಂದರಕ್ಕಿಂತ ಇದು ಭಿನ್ನವಾದ ಕತೆಯಂತೆ.

ರಶ್ಮಿ ಪ್ರಭಾಕರ್

ಕಥಾ ನಾಯಕಿ ರಾಗ. ಅಪ್ಪ ಅಮ್ಮನ ಪ್ರೀತಿಯ ಮಗಳು.
ವೃತ್ತಿಯಲ್ಲಿ ಡಯಟಿಷಿಯನ್ .  ಪುಟಾಣಿ ಪ್ರೀತೂ ಅಂದ್ರೆ ಇವಳಿಗೆ ಪ್ರಾಣ. ಅವನಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ಇನ್ನು ಕಥಾ ನಾಯಕ ಅರುಣ್  ಯಶಸ್ಸಿನ ಅಮಲಿನಲ್ಲಿ ತೇಲುವ ರಾಕ್ ಸ್ಟಾರ್ . ಅವನಂದ್ರೆ  ಸೆನ್ಸೇಷನ್ .ಒಂಥರ ಯೂತ್ ಐಕನ್. ಅವರ ಮಧ್ಯೆ ಬರುವವನು ಪ್ರೀತಮ್.ಆತ ರಾಕ್ ಸ್ಟಾರ್ ಅರುಣ್ ದೊಡ್ಡ ಫ್ಯಾನ್. ಈತ ರಾಗಾಳ ಮುದ್ದಿನ‌ಮಗ. ಅವರ ಸುತ್ತಲ ಕತೆಯೇ ‘  ಮನಸೆಲ್ಲಾ ನೀನೇ’ . ಕತೆ ಸಿಂಪಲ್ ಎನಿಸಿದರೂ ಇಲ್ಲಿ ಅನೇಕ ಟ್ವಿಸ್ಟ್ ಆ್ಯಂಡ್ ಟರ್ನ್ ಗಳಿವೆ. ಅವೆಲ್ಲ ಏನು, ಹೇಗೆ ಎನ್ನುವುದು ಧಾರಾವಾಹಿಯ ಕುತೂಹಲದ ಅಂಶ.

ಶ್ರುತಿ ನಾಯ್ಡು

ಧಾರಾವಾಹಿಯ ಕತೆ ಇದಾದರೆ ಇನ್ನು ಉಳಿದಿದ್ದು ಪಾತ್ರವರ್ಗ ಯಾರು ಅನ್ನೋದು. ಕಥಾ ನಾಯಕಿ ರಾಗ ಪಾತ್ರಕ್ಕೆ ಬಣ್ಣ ಹಚ್ಚಿದವರು ರಶ್ಮಿ ಪ್ರಭಾಕರ್.  ಲಕ್ಷ್ಮಿ‌ ಬಾರಮ್ಮ ಧಾರಾವಾಹಿಯ ಚಿನ್ನು ಖ್ಯಾತಿಯ ನಟಿ.‌ಹಾಗೆಯೇ ಕಲಾವಿದ ಸುಜಿತ್, ರಾಕ್ ಸ್ಟಾರ್ ಅರುಣ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪುಟಾಣಿ ಅಲಾಪ್ ಪ್ರೀತಮ್ ಆಗಿ ಬರುತ್ತಿದ್ದಾರೆ.ಈ ಮೂವರ ಅನುಬಂಧದ ಕತೆ  ಇಲ್ಲಿ ಹೊಸತಾಗಿರುವುದು ಮಾತ್ರವಲ್ಲ, ರೋಚಕ , ರಂಜನೆಯ ರಸದೌತಣ ನೀಡಲಿದೆಯಂತೆ. ಹಾಗೆಯೇ  ಅನುಭವಿ ಕಲಾವಿದರಾದ ವಿಜಯ್ ಕಾಶಿ, ಅರುಣಾ ಬಾಲರಾಜ್ , ಬಾಬು ಹಿರಣಯ್ಯ , ಪ್ರಕಾಶ್ ಶೆಟ್ಟಿ, ರೇಖಾ ಸಾಗರ್ ಧಾರಾವಾಹಿಯ ತಾರಾಗಣದಲ್ಲಿದ್ದಾರೆ.

ರಶ್ಮಿ ಪ್ರಭಾಕರ್

ಕರ್ನಾಟಕದ ಸ್ಟೈಲಿಷ್ ಸಿಂಗರ್ ಸಂಜಿತ್ ಹೆಗ್ಡೆ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡಿದ್ದು, ಈ ಹಾಡು ಈಗಾಗಲೇ ಜನಪ್ರಿಯವಾಗಿದೆ. ಅದ್ಧೂರಿ ನಿರ್ಮಾಣ, ಸುಂದರ ಕತೆ, ಮುದ್ದಾದ ಪಾತ್ರವರ್ಗವು  ‘ಮನಸೆಲ್ಲಾ ನೀನೇ’ ಧಾರಾವಾಹಿಯ  ಹೈಲೈಟ್ಸ್. ಅಂದ ಹಾಗೆ, ಶನಿವಾರ( ಡಿಸೆಂಬರ್ 5) ದಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು, ತಮ್ಮ ಬರ್ತಡೇ ವಿಶೇಷ ಎಂಬಂತೆ  ಈ ಧಾರಾವಾಹಿಯ ಸುದ್ದಿ ರಿವೀಲ್ ಮಾಡಿದ್ದಾರೆ. ಡಿ.7ರಿಂದ ಪ್ರತಿ  ರಾತ್ರಿ 9.30ಕ್ಕೆ ಇದು ಸ್ಟಾರ್ ಸುವರ್ಣ ದಲ್ಲಿ ಮೂಡಿ ಬರಲಿದೆ.

Categories
ಸಿನಿ ಸುದ್ದಿ

ಅಭಿಮನ್‌ರಾಯ್‌ ಬಿಚ್ಚಿಡದ ಆರರ ಗುಟ್ಟು! ಸಿಕ್ಸ್‌‌ ಎಂಬ ಸ್ಪೆಷಲಿಸ್ಟ್…‌‌

ಫಸ್ಟ್‌ ಟೀಸರ್‌ ಹುಟ್ಟಿಸಿದ ಹೊಸ ನಿರೀಕ್ಷೆ…

 

“ಆಕೆ ಟೀ ಟೇಸ್ಟರ್. ಅದಕ್ಕೆ ಅವಳು ಟೀ ಮಾತ್ರ ಕುಡಿತಾಳೆ. ಆಕೆಯ ಪ್ರಕಾರ, ಅವಳ ಬಾಯ್‌ಫ್ರೆಂಡ್‌ ಆಗೋನು ಕೂಡ ಟೀ ಕುಡಿಬಾರ್ದು…!
– ಅರೇ ಇದೇನಪ್ಪಾ, ಯಾರವಳು ಟೀ ಟೇಸ್ಟರ್‌, ಏನದು ಎಂಬ ಪ್ರಶ್ನೆ ಎದುರಾದರೆ, ಇದೇ ಮೊದಲ ಸಲ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವ ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌ ಅವರ “ಸಿಕ್ಸ್‌”‌ ಚಿತ್ರದ ಟೀಸರ್ ನೋಡಬೇಕು. ಹಲವು ಚಿತ್ರಗಳ ಟೀಸರ್‌, ಟ್ರೇಲರ್‌ ಬಿಡುಗಡೆಯಾಗುತ್ತವೆ. ಕೆಲ ಚಿತ್ರಗಳ ಟೀಸರ್‌, ಟ್ರೇಲರ್‌ಗಳು ಮೊದಲ ಸಲವೇ ನಿರೀಕ್ಷೆ ಹುಟ್ಟಿಸಿಬಿಡುತ್ತವೆ. ಆ ಸಾಲಿಗೆ “ಸಿಕ್ಸ್‌” ಚಿತ್ರದ ಟೀಸರ್‌ ಕೂಡ ಸೇರಿದೆ ಅನ್ನೋದು ವಿಶೇಷ. ಹೌದು, “ಸಿಕ್ಸ್‌” ಟೀಸರ್‌ ಈಗ ಜೋರು ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ, ಒಳ್ಳೆಯ ಮೆಚ್ಚುಗೆಗೂ ಕಾರಣವಾಗುತ್ತಿದೆ.

ಪಾಯಲ್‌ ಚೆಂಗಪ್ಪ

ಟೀಸರ್‌ ನೋಡಿದವರಿಗೆ ಹೊಸ ಭರವಸೆ ಮೂಡಿಸುವುದಷ್ಟೇ ಅಲ್ಲ, ಅಲ್ಲಲ್ಲಿ ಥ್ರಿಲ್‌ ಎನಿಸುವ ಅಂಶಗಳೂ ಇವೆ. ಲವ್‌ ಇದೆ, ಹಾಸ್ಯವೂ ಇದೆ, ರಗಡ್‌ ಲುಕ್ಕೂ ಇದೆ, ಭಯ ಹುಟ್ಟಿಸುವ ಫೀಲೂ ಇದೆ. ಟೀಸರ್‌ನಲ್ಲಿ “ಏ.. ಏನ್‌ ಮುಖ ನೋಡ್ತಾ ಇದೀಯಾ ಹಿಂದೆನಾ, ಮುಂದೆನಾ…? ಹೀಗೆ ಆ ಹುಡುಗಿ ಕೇಳಿದಾಕ್ಷಣ, ಆ ಹುಡುಗ, “ಯೆಸ್,‌ ಫಸ್ಟ್‌ ಟೈಮ್‌ ಅಲ್ವಾ, ಅದಕ್ಕೆ ಸ್ವಲ್ಪ ನಾಚಿಕೆ ಆಗ್ತಾ ಇದೆ” ಅಂತಾನೆ, ಆ ಮಾತಿಗೆ ಆಕೆ, “ಏನ್‌ ಫಸ್ಟ್‌ ಟೈಮ್‌, ಬದನೆಕಾಯಿ… ಮೂರು ವರ್ಷದಿಂದಲೂ ಓಡಿಸ್ತಾನೆ ಇದೀಯಾʼ ಅನ್ನೋ ಡೈಲಾಗ್‌ ಹರಿಬಿಡುತ್ತಾಳೆ. ಅವನು ತನ್ನ ಮನಸ್ಸಲ್ಲಿ, “ತಾಜ್‌ ಮಹಲ್‌ ತೋರಿಸ್ತಾಳೆ, ಅಂದರೆ, ತಾರ್‌ ರೋಡ್‌ ತೋರಿಸ್ತಾಳೆ..ʼ ಅಂತಾನೆ. ಹಾಗಾದರೆ, ಆ ಹುಡುಗ, ಹುಡುಗಿ ನಡುವೆ ನಡೆಯೋ ಸಂಭಾಷಣೆ ಎಂಥದ್ದು? ಈ ಮಾತುಗಳನ್ನು ಕೇಳಿದರೆ, ಡಬಲ್‌ ಮೀನಿಂಗ್‌ ಎನಿಸುತ್ತೆ, ಆದರೆ, ಆ ದೃಶ್ಯ ನೋಡಿದವರಿಗಷ್ಟೇ, ಅಲ್ಲಿ ಇರೋದ್‌ ಏನು, ನಡೆಯೋದ್‌ ಏನು ಅಂತ. ಸಿಕ್ಸ್‌ ಟೀಸರ್‌ ಕುರಿತು ಅದೇನೆ ಹೇಳಿದರೂ, ಹೆಚ್ಚು ಅರ್ಥ ಆಗಲ್ಲ. ಹಾಗಾಗಿ ಒಮ್ಮೆ “ಸಿಕ್ಸ್‌” ಟೀಸರ್‌ ನೋಡಿದರಷ್ಟೇ, ಎಲ್ಲವೂ ಸ್ಪಷ್ಟವಾಗುತ್ತೆ.

ಆದರೂ, ಟೀಸರ್‌ ಒಂದಷ್ಟ ಕುತೂಹಲದೊಂದಿಗೆ ಸಾಗುತ್ತೆ. ಒಂದು ಬೆಟ್ಟ, ಅಲ್ಲಿರುವ ಕಡಿದಾದ ದಾರಿ, ಕತ್ತಲಲ್ಲಿ ನಡೆದು ಹೋಗುವ ಅಪರಿಚಿತ. ಅವನ ಕೈಲ್ಲೊಂದು ಕಬ್ಬಿಣದ ರಾಡು, ಮುಖವಾಡ ಧರಿಸಿದ ಅಪರಿಚಿತನ ರಗಡ್‌ ಲುಕ್ಕು… ಆಗಾಗ ಬಂಡೆ ಹೊಡೆಯುವ ರಾಡಿನಲ್ಲಿ, ವ್ಯಕ್ತಿಯೊಬ್ಬನ ಹೃದಯಕ್ಕೆ ಚುಚ್ಚುತ್ತಾನೆ….” ಆ ಅಪರಿಚಿತ ಯಾರು, ಯಾರನ್ನು ಕೊಲೆಗೈದ, ಬಂಡೆ ಹೊಡೆಯೋ ಕಾಯಕ ಮಾಡುವ ಆ ವ್ಯಕ್ತಿಗೂ, ಕೊಲೆಯಾದ ವ್ಯಕ್ತಿಗೂ ಇರುವ ಸಂಬಂಧವೇನು ಇತ್ಯಾದಿ ವಿಷಯಗಳು ಇಲ್ಲಿ ಒಂದಷ್ಟು ಸಸ್ಪೆನ್ಸ್‌ ಎನಿಸುತ್ತದೆ. ತುಂಬಾನೇ ಕ್ರಿಯೇಟಿವ್‌ ಎನಿಸುವ ಈ ಟೀಸರ್‌ಗೆ ಅಷ್ಟೇ ಎಫೆಕ್ಟ್‌ ಎನಿಸುವ ಹಿನ್ನೆಲೆ ಸಂಗೀತ ಕೂಡ ಪೂರಕವೆನಿಸಿದೆ. ಒಟ್ಟಾರೆ, ಟೀಸರ್‌ ಹೊಸದೊಂದು ನಿರೀಕ್ಷೆ ಮೂಡಿಸಿರುವುದಂತೂ ಸುಳ್ಳಲ್ಲ. ಅಂಥದ್ದೊಂದು ನಿರೀಕ್ಷೆಗೆ ಝೇಂಕಾರ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ “ಸಿಕ್ಸ್‌” ಟ್ರೇಲರ್‌ ನೋಡಬೇಕು.

ಅಭಿಮನ್‌ ರಾಯ್‌, ನಿರ್ದೇಶಕ

ಕನ್ನಡದಲ್ಲಿ ಹಲವು ಹಿಟ್‌ ಸಾಂಗ್‌ ಕೊಟ್ಟಿರುವ ಅಭಿಮನ್‌ರಾಯ್‌ ಅವರ ಮೊದಲ ನಿರ್ದೇಶನದ ಚಿತ್ರವಿದು. ಈಗಾಗಲೇ ಫಸ್ಟ್‌ ಲುಕ್‌ನಲ್ಲೇ “ಸಿಕ್ಸ್‌” ಗಮನಸೆಳೆದಿತ್ತು. ಈ ಟೀಸರ್‌ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ, ಇದು ಶ್ರೇಯ ಸಿಲ್ವರ್‌ ಸ್ಕ್ರೀನ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ನಳಿನಿ ಗೌಡ ಹಾಗೂ ರವಿಕುಮಾರ್‌, ಸೋಮಶೇಖರ್‌ ರಾಜವಂಶಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮನ್‌ ರಾಯ್‌ ಅವರ ಈ “ಸಿಕ್ಸ್”‌ ಚಿತ್ರದಲ್ಲಿ ಸಂದೇಶವಿದೆ. ಲವ್‌ಸ್ಟೋರಿ, ಕಾಮಿಡಿಯ ಜೊತೆಗೆ ಥ್ರಿಲ್ಲರ್‌ ಅಂಶಗಳೂ ಇಲ್ಲಿ ಹೈಲೈಟ್.‌ ಅಭಿಮನ್‌ ಬರೀ ಕೀ ಬೋರ್ಡ್‌ ಮೇಲೆ ಕೈಯಾಡಿಸುವುದಷ್ಟೇ ಅಲ್ಲ, ಒಳ್ಳೆಯ ಗೀತರಚನೆಕಾರರೂ ಹೌದು. ಅವರೇ ತಮ್ಮ ಚೊಚ್ಚಲ ಚಿತ್ರ “ಸಿಕ್ಸ್‌”ಗೆ ಕಥೆ ಹೆಣೆದು, ಚಿತ್ರಕಥೆ ಬರೆದು, ಮಾತುಗಳನ್ನೂ ಪೋಣಿಸಿ ನಿರ್ದೇಶಿಸಿದ್ದಾರೆ.

ಒಂದು ಸಣ್ಣ ತಪ್ಪಿನಿಂದ ದೊಡ್ಡ ತಪ್ಪುಗಳು ಹೇಗಾಗುತ್ತವೆ. ದೊಡ್ಡ ಸಮಸ್ಯೆಯನ್ನೂ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬ ವಿಷಯ ಇಟ್ಟುಕೊಂಡು ಮಾಡಿರುವ ಚಿತ್ರವಿದು. ನೈಜತೆಗೆ ಹತ್ತಿರವಾಗಿರುವ ಚಿತ್ರವಿದು ಎನ್ನುವ ಚಿತ್ರತಂಡ, ಇಲ್ಲಿ ಯಾವ ಕಲಾವಿದರಿಗೂ ಮೇಕಪ್‌ ಮಾಡಿಸಿಲ್ಲ ಎಂಬುದು ವಿಶೇಷ. ಬಹುತೇಕ ಬೆಂಗಳೂರು, ಕೋಲಾರ, ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿರಲಿವೆ. ಸದ್ಯಕ್ಕೆ ಈಗ ಝೇಂಕಾರ್‌ ಮ್ಯೂಸಿಕ್‌ ಯುಟ್ಯೂಬ್‌ ಚಾನೆಲ್‌ನಲ್ಲಿ “ಸಿಕ್ಸ್‌ʼ ಟೀಸರ್‌ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ “ಅಮೃತಾಂಜನ್‌” ಕಿರುಚಿತ್ರದ ನಾಯಕಿ ಪಾಯಲ್‌ ಚೆಂಗಪ್ಪ ಈ ಚಿತ್ರದ ನಾಯಕಿ. ಅವರೊಂದಿಗೆ ರವಿಚಂದ್ರ, ಪ್ರಣವ್‌ರಾಯ್‌, ಪೂರ್ವ ಯೋಗಾನಂದ್‌ ಸೇರಿದಂತೆ ಹಲವು ಕಲಾವಿದರು ಇರಲಿದ್ದಾರೆ. ಈ ಸಿದ್ಧಾರ್ಥ್‌ ಅವರು ಕ್ಯಾಮೆರಾ ಹಿಡಿದಿದ್ದಾರೆ.

ನಳಿನಿಗೌಡ, ನಿರ್ಮಾಪಕರು

ಒಳ್ಳೇ ಸಿನ್ಮಾ ಕೊಡುವ ಉದ್ದೇಶ
ಇನ್ನು, ಈ ಚಿತ್ರದ ಬಗ್ಗೆ ನಿರ್ಮಾಪಕಿ ನಳಿನಿ ಗೌಡ ಹೇಳುವುದಿಷ್ಟು, “ಇದು ನನ್ನ ಮೊದಲ ನಿರ್ಮಾಣದ ಸಿನಿಮಾ. ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಇತ್ತು. ಅದಕ್ಕಾಗಿ ಹೊಸತನ ಇರುವಂತಹ ಕಥೆ ಹುಡುಕಾಟ ನಡೆಸುತ್ತಿದ್ದೆ. ಅಭಿಮನ್‌ ರಾಯ್‌ ಅವರ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಿದ್ದೆ. ಹಾಗೆ, ಒಮ್ಮೆ ಭೇಟಿಯಾಗಿ, ನಿರ್ಮಾಣ ಮಾಡುವ ಕುರಿತು ಹೇಳಿಕೊಂಡಿದ್ದೆ. ಆಗ ಅವರು “ಸಿಕ್ಸ್‌” ಚಿತ್ರದ ಒನ್‌ಲೈನ್‌ ಸ್ಟೋರಿ ಹೇಳಿದರು. ನನಗೂ ಅದು ಇಷ್ಟವಾಯ್ತು. ಸಿನಿಮಾ ಶುರುವಾಯ್ತು. ನಾನು ಮೂಲತಃ ಬೆಂಗಳೂರಿನವಳು. ರೈತ ಮತ್ತು ಕಾರ್ಮಿಕರ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯಕ್ಕೆ ಚಿತ್ರದ ಟೀಸರ್‌ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದೇವೆ. ಕನ್ನಡಕ್ಕೊಂದು ಹೊಸತನದ ಸಿನಿಮಾ ಕೊಡುವ ಉದ್ದೇಶ ನನ್ನದುʼ ಎಂಬುದು ನಳಿನಿ ಗೌಡ ಅವರ ಮಾತು.

ಚಾಲೆಂಜಿಂಗ್‌ ಪಾತ್ರ
ಈ ಚಿತ್ರಕ್ಕೆ ಪಾಯಲ್‌ ಚೆಂಗಪ್ಪ ನಾಯಕಿ. “ಅಮೃತಾಂಜನ್‌” ಎಂಬ ಕಿರುಚಿತ್ರದ ಮೂಲಕ ಸುದ್ದಿಯಾದವರು. ಇವರಿಗೆ ಯಾವ ನಟನೆಯ ಅನುಭವ ಇಲ್ಲ. “ಅಮೃತಾಂಜನ್‌” ಮೂಲಕ ತಾನೊಬ್ಬ ನಟಿ ಅನ್ನುವುದನ್ನು ಜನರು ಗುರುತಿಸುತ್ತಿದ್ದಾರೆ. ನನಗೂ ಧೈರ್ಯ ಬಂದಿದೆ. “ಅಮೃತಾಂಜನ್‌” ನಂತರ ಸಿಕ್ಕ ಮೊದಲ ಚಿತ್ರವೇ “ಸಿಕ್ಸ್‌” ಅಭಿಮನ್‌ ರಾಯ್‌ ಸರ್‌ ಸ್ಟೇಟ್‌ ಅವಾರ್ಡ್‌ ವಿನ್ನರ್‌ ಆಗಿದ್ದರೂ, ಅವರು ತುಂಬಾನೇ ಸಿಂಪಲ್.‌ ಅವರನ್ನು ಭೇಟಿ ಮಾಡಿದಾಗ ಅವರು ಕಥೆ ಹೇಳಿದ ರೀತಿ, ನನ್ನ ಪಾತ್ರ ಕಟ್ಟಿಕೊಟ್ಟಿರುವ ರೀತಿ ತುಂಬಾ ಚೆನ್ನಾಗಿತ್ತು. ಅದೊಂದು ಹೊಸ ರೀತಿಯ ಪಾತ್ರ. ಚಾಲೆಂಜಿಂಗ್‌ ಎನಿಸಿದೆ. ಜೊತೆಗೊಂದು ಒಳ್ಳೆಯ ಸಂದೇಶವೂ ಇದೆ. ನನ್ನದು ಒಬ್ಬ ಟೀ ಟೇಸ್ಟರ್‌ ಪಾತ್ರ. ಹಾಗಂತ ಕಡಿಮೆ ಜನರಿಗೆ ಗೊತ್ತಿರುತ್ತೆ. ಅಂಥದ್ದೊಂದು ಹೊಸಬಗೆಯ ಪಾತ್ರ ಹೆಣೆದು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಹಾಗೆ ನೋಡಿದರೆ, ಈ ಪಾತ್ರಕ್ಕೆ ಸಾಕಷ್ಟು ನಾಯಕಿಯರ ಹುಡುಕಾಟ ನಡೆಸಿದ್ದಾರೆ ಎಂಬುದು ಗೊತ್ತಾಯ್ತು. ನನಗೆ ಆ ಅವಕಾಶ ಸಿಕ್ಕಿದೆ. ಸಾಧ್ಯವಾದಷ್ಟು ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂಬ ವಿಶ್ವಾಸವಿದೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವ ಹೆಮ್ಮೆ ನನಗಿದೆ” ಎಂಬುದು ಪಾಯಲ್‌ ಚೆಂಗಪ್ಪ ಅವರ ಮಾತು.

ರವಿಚಂದ್ರ, ನಟ

ವಿಲನ್‌ ಅಂದರೆ ಸ್ಪೆಷಲ್!
ಈ “ಸಿಕ್ಸ್‌”ನ ಮತ್ತೊಂದು ಕೇಂದ್ರ ಬಿಂದು ಅಂದರೆ, ಅದು ರವಿಚಂದ್ರ. ಯಾರು ಈ ರವಿಚಂದ್ರ ಅಂದರೆ, ಇಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲ. ಆದರೆ, “ಸಿಕ್ಸ್‌” ಸಿನಿಮಾ ರಿಲೀಸ್‌ ನಂತರ ಖಂಡಿತವಾಗಿಯೂ ಈ ರವಿಚಂದ್ರ ಒಂದಷ್ಟು ಮಂದಿಗೆ ಗೊತ್ತಾಗುತ್ತಾರೆ. ಅದಕ್ಕೆ ಕಾರಣ, “ಸಿಕ್ಸ್‌” ಚಿತ್ರದಲ್ಲಿರುವ ಇವರ ಪಾತ್ರ. ಹೌದು, ತಮ್ಮ “ಸಿಕ್ಸ್‌” ಸಿನಿಮಾ ಕುರಿತು ಹೇಳುವ ರವಿಚಂದ್ರ, “ಇದು ನನ್ನ ಮೂರನೇ ಹೆಜ್ಜೆ. ಇದಕ್ಕೂ ಮೊದಲು ನಾನು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆ. ಕಿರುತೆರೆ ಬಳಿಕ ಒಂದು ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿತು. ಅದಾದ ಬಳಿಕ ನಾನೀಗ “ಸಿಕ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ. ವಿಲನ್‌ ಪಾತ್ರ ಏನೆಲ್ಲಾ ಮಾಡುತ್ತೆ ಅನ್ನೋದೇ ಸಸ್ಪೆನ್ಸ್.‌ ನನಗೂ ಈ ಚಿತ್ರದ ಪಾತ್ರ ಚಾಲೆಂಜಿಂಗ್‌ ಎನಿಸಿದೆ. ಸದಾ ಕ್ಲೀನ್‌ ಶೇವ್‌ ಮಾಡ್ಕೊಂಡ್‌ ಇರುತ್ತಿದ್ದೆ. ನಿರ್ದೇಶಕರು ನೋಡಿ, ದಾಡಿ, ಕೂದಲು ಬಿಡಿ ಅಂತ ಹೇಳಿ ನಂತರ, ಫೋಟೋ ಶೂಟ್‌ ಮಾಡಿಸಿ, ಒಂದು ಲುಕ್‌ ಬಂದ ನಂತರ, ಸಿನಿಮಾದಲ್ಲಿ ಮಾಡಿಸಿದ್ದಾರೆ. ಪಾತ್ರಕ್ಕಾಗಿಯೇ ನನಗೆ ಮಾಡಿಸಿದ್ದಾರೆ.ʼ ಎನ್ನುತ್ತಾರೆ ರವಿಚಂದ್ರ.

Categories
ಸಿನಿ ಸುದ್ದಿ

ದುಬಾರಿಯಾದ ಶ್ರೀಲೀಲ! ಧ್ರುವ ಸರ್ಜಾ ಜೊತೆ ಫಸ್ಟ್‌ ಮೀಟ್‌

ಜನವರಿಯಲಿ ದುಬಾರಿ ಶುರು

ಸಿನಿಮಾ ಅಂದರೆ, ಅಲ್ಲೊಂದಷ್ಟು ಗಾಸಿಪ್‌ಗಳು ಸಹಜ. ಅಂತೆ ಕಂತೆ ವಿಷಯಗಳೂ ಸಾಮಾನ್ಯ. ಸ್ಟಾರ್‌ ನಟರ ಒಂದು ಹೊಸ ಚಿತ್ರ ಅನೌನ್ಸ್‌ ಆಗಿಬಿಟ್ಟರೆ ಮುಗೀತು, ಆ ಚಿತ್ರದ ಬಗ್ಗೆ ಒಂದಷ್ಟು ಹೊಸ ಬಗೆಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಅಸಲಿಗೆ ಅಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನೋ ವಿಷಯ ಆ ಕಥೆಗಾರನಿಗೆ ಗೊತ್ತಿರಲ್ಲ. ಆದರೂ, ಹೊರಗಡೆಯಿಂದ ಹಾಗಂತೆ, ಹೀಗಂತೆ ಎಂಬ ಸುದ್ದಿಗಳು ಹರಿದಾಡುತ್ತವೆ.

ಶ್ರೀಲೀಲ

ಹಾಗಂತ, ಈ ವಿಷಯ ಕನ್ನಡದ ಸ್ಟಾರ್ ಸಿನಿಮಾಗಳಿಗೆ ಹೊಸದಲ್ಲ ಬಿಡಿ.‌ ಇಲ್ಲೀಗ ಹೇಳಹೊರಟಿರುವ ವಿಷಯವಿಷ್ಟೇ, ಇತ್ತೀಚೆಗೆ ಧ್ರುವಸರ್ಜಾ ಅಭಿನಯದ “ದುಬಾರಿ” ಸಿನಿಮಾ ಪೂಜೆ ಕಂಡಿದ್ದು ಎಲ್ಲರಿಗೂ ಗೊತ್ತಿದೆ. “ಪೊಗರು” ಸಿನಿಮಾ ಬಳಿಕ ನಂದಕಿಶೋರ್‌ ಅವರು ಪುನಃ ಧ್ರುವ ಸರ್ಜಾ ಅವರ ಜೊತೆಗೂಡಿ ಈ ಚಿತ್ರ ಶುರುಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಉದಯ್‌ ಮೆಹ್ತಾ ನಿರ್ಮಾಪಕರು. ಈ ಚಿತ್ರವನ್ನು ಅನೌನ್ಸ್‌ ಮಾಡಿದಾಗ ಯಾರು ನಾಯಕಿ ಅನ್ನೋದು ಗೊತ್ತಿರಲಿಲ್ಲ. ಈಗ ನಿರ್ದೇಶಕ ನಂದಕಿಶೋರ್‌ ಶ್ರೀಲೀಲ ಚಿತ್ರದ ನಾಯಕಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಂದಕಿಶೋರ್‌, ನಿರ್ದೇಶಕರು

ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಶ್ರೀಲೀಲಾ ಹೈಲೈಟ್.‌ ಅವರೊಂದಿಗೆ ಇನ್ನೂ ನಾಲ್ವರು ಜೊತೆಗೂಡುತ್ತಿದ್ದಾರೆ. “ರನ್ನ” ಸಿನಿಮಾದಲ್ಲೂ ರಚಿತಾರಾಮ್‌ ಲೀಡ್‌ ಪಾತ್ರ ಮಾಡಿದ್ದರೂ, ಜೊತೆಯಲ್ಲಿ ಹರಿಪ್ರಿಯಾ ಇದ್ದಂತೆ, ಇಲ್ಲೂ ಹಾಗೆಯೇ ಒಂದಷ್ಟು ನಾಯಕಿಯರು ಇರಲಿದ್ದಾರೆ. ಇದೊಂದು ಪಕ್ಕಾ “ಫ್ಯಾಮಿಲಿ” ಸಬ್ಜೆಕ್ಟ್‌ ಎಂಬುದು ನಂದಕಿಶೋರ್‌ ಅವರ ಮಾತು.

ಉದಯ್‌ ಮೆಹ್ತಾ, ನಿರ್ಮಾಪಕರು

ಇನ್ನು, ಅವರ “ಪೊಗರು” ಸಿನಿಮಾ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಾಣುತ್ತಿದ್ದು, ಈಗಾಗಲೇ ಎಲ್ಲೆಡೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. “ಪೊಗರು” ಜನವರಿಯಲ್ಲಿ ಹೊರಬಂದರೆ, ಜನವರಿಯಲ್ಲೇ “ದುಬಾರಿ” ಚಿತ್ರಕ್ಕೂ ಚಾಲನೆ ಸಿಗಲಿದೆ. ಶ್ರೀಲೀಲಾ “ಕಿಸ್‌” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ನಂತರ ಶ್ರೀಮುರಳಿ ಜೊತೆ “ಭರಾಟೆ”ಯಲ್ಲೂ ಕಾಣಿಸಿಕೊಂಡರು. ಈಗ “ದುಬಾರಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಅದೇನೆ ಇರಲಿ, ಕನ್ನಡದ ಹುಡುಗಿಯನ್ನೇ ನಿರ್ದೇಶಕರು ತಮ್ಮ “ದುಬಾರಿ” ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಪರಭಾಷೆ ನಾಯಕಿ ನಟಿಯಂತೆ ಎಂಬ ಸುದ್ದಿ ಹರಿದಾಡಿತ್ತು. ಅದು ಹಲವು ಪ್ರಶ್ನೆಗಳಿಗೂ ಕಾರಣವಾಗಿತ್ತು. ಈಗ ನಂದಕಿಶೋರ್‌, ಅದಕ್ಕೆಲ್ಲಾ ತೆರೆ ಎಳೆದಿದ್ದಾರೆ. ಇನ್ನು, ಈ ಚಿತ್ರದಲ್ಲಿ ಶ್ರೀಲೀಲ ಅವರೊಂದಿಗೆ ಇನ್ನೂ ಬೆರಳೆಣಿಕೆಯಷ್ಟು ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿಯನ್ನೂ ಹೊರಹಾಕಿರುವ ನಂದಕಿಶೋರ್‌, ಯಾರೆಲ್ಲಾ ಇರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದ್ದಾರೆ. ಇನ್ನು, ಈ ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತವಿದೆ.

Categories
ಸಿನಿ ಸುದ್ದಿ

ಲೋಹಿತ್‌ಗೆ ಸಿಕ್ಕ ನಿಧಿ! ನಾಯಕಿ ಪ್ರಧಾನ ಚಿತ್ರದಲ್ಲಿ ಪಂಚರಂಗಿ ಬೆಡಗಿ

ಜನವರಿಯಲ್ಲಿ ಚಿತ್ರಕ್ಕೆ ಚಾಲನೆ…

 

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಅಂದಾಕ್ಷಣ ನೆನಪಾಗೋದೇ ಒಂದೇ ಉಸಿರಲ್ಲಿ ಪಟಪಟ ಮಾತಾಡುವ “ಪಂಚರಂಗಿ”ಯ ಮಾತಿನ ಮಲ್ಲಿಯ ಪಾತ್ರ. ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳ ಮೂಲಕ ತನ್ನದೇ ಛಾಪು ಮೂಡಿಸಿರುವ ನಿಧಿ ಸುಬ್ಬಯ್ಯ, ಬಾಲಿವುಡ್‌ ಅಂಗಳಕ್ಕೂ ಜಿಗಿದಿದ್ದೂ ಗೊತ್ತೇ ಇದೆ. ಅಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದ್ದೊಂದು ಠಸ್ಸೇ ಹೊತ್ತಿದ ನಿಧಿ ಸುಬ್ಬಯ್ಯ ಬಹಳ ವರ್ಷಗಳ ಬಳಿಕ ಪುನಃ ಕನ್ನಡಕ್ಕೆ ವಾಪಾಸ್ಸಾಗಿದ್ದು ಗೊತ್ತೇ ಇದೆ. ಈಗ ಮತ್ತೊಂದು ವಿಭಿನ್ನ ಕಥಾಹಂದರ ಇರುವ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ, ಈ ಚಿತ್ರ ನಾಯಕಿ ಪ್ರಧಾನವಾದದ್ದು. ಈ ಸಿನಿಮಾ ಮೂಲಕ ಪವನ್‌ ಮತ್ತು ಪ್ರಸಾದ್‌ ನಿರ್ದೇಶನದ ಪಟ್‌ ಅಲಂಕರಿಸುತ್ತಿದ್ದಾರೆ. ಇನ್ನು, ಕಿಶೋರ್‌ ನರಸಿಂಹಯ್ಯ, ಚೇತನ್‌ ಕೃಷ್ಣ ಮತ್ತು ಬಿ.ಜಿ. ಅರುಣ್ ಅವರು ಜೊತೆಗೂಡಿ ಈ ಚಿತ್ರವನನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು “ಮಮ್ಮಿ” ಖ್ಯಾತಿಯ ಲೋಹಿತ್‌ ಎಚ್.‌ ಅರ್ಪಿಸುತ್ತಿದ್ದಾರೆ. ಅವರ ಫ್ರೈಡೇ ಫಿಲ್ಮ್ಸ್‌ ಸಹಯೋಗದೊಂದಿಗೆ ಸಿಲ್ವರ್‌ ಟ್ರೈನ್‌ ಇಂಟರ್ನ್ಯಾಷನಲ್‌ ಮತ್ತು ಸಿ.ಕೆ.ಸಿನಿ ಕ್ರಿಯೇಷನ್‌ ಜೊತೆಯಲ್ಲಿ ತಯಾರಾಗುತ್ತಿರುವುದು ವಿಶೇಷ.


ಈ ನಾಯಕಿ ಪ್ರಧಾನ ಚಿತ್ರಕ್ಕಿನ್ನೂ ಯಾವುದೇ ನಾಮಕರಣ ಮಾಡಿಲ್ಲ. ತಮ್ಮ ಹೊಸ ಚಿತ್ರದ ಬಗ್ಗೆ ನಾಯಕಿ ನಿಧಿ ಸುಬ್ಬಯ್ಯ ಸಾಕಷ್ಟು ಥ್ರಿಲ್‌ ಆಗಿದ್ದಾರೆ. ಆ ಬಗ್ಗೆ ನಿಧಿ ಸುಬ್ಬಯ್ಯ ಹೇಳುವುದಿಷ್ಟು. “ಸಿನಿಮಾದ ಕಥೆ ಕೇಳಿದಾಕ್ಷಣ, ನಾನು ನಿಜಕ್ಕೂ ಥ್ರಿಲ್ ಆದೆ. ಅದರಲ್ಲೂ ನಾನು ಇದೇ ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದೊಂದು ಹೊಸ ಕತೆ, ಪಾತ್ರ ಇರುವಂತಹ ಸಿನಿಮಾ ಆಗಲಿದೆ. ಅಷ್ಟೇ ಅಲ್ಲ, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಚಿತ್ರದ ಕಥೆ ಇಷ್ಟವಾಗುತ್ತೆ ಎಂಬ ನಂಬಿಕೆ ನನಗಿದೆ. ನಾನು ಈವರೆಗೆ ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಿದ್ದೇನೆ. ಇದು ನನಗೆ ಹೊಸ ರೀತಿಯ ಪಾತ್ರ ಕೊಡುತ್ತಿರುವ ಚಿತ್ರ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುವ ಖುಷಿ ಇದೆ” ಎಂಬುದು ನಿಧಿ ಮಾತು.


ಸದ್ಯಕ್ಕೆ ಈ ಚಿತ್ರಕ್ಕೆ ತಾಂತ್ರಿಕ ವರ್ಗ, ಕಲಾವಿದರು, ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ, ಯಾರೆಲ್ಲಾ ಇದರ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಹೊಸ ವರ್ಷಕ್ಕೆ ಹೊಸತನದೊಂದಿಗೆ ಈ ಚಿತ್ರ ಶುರುವಾಗಲಿದೆ ಎಂಬುದು ಲೋಹಿತ್‌ ಅವರ ಮಾತು. ಲೋಹಿತ್‌ ಅವರು ಈ ಹಿಂದೆ “ಮಮ್ಮಿ” ಮೂಲಕ ಜೋರು ಸುದ್ದಿಯಾಗಿದ್ದರು.

ಆ ಬಳಿಕ ಅವರು “ದೇವಕಿ” ಚಿತ್ರ ಮಾಡಿಯೂ ಗೆಲುವು ಕಂಡರು. ಆ ಬಳಿಕ ಅವರು ಸಮಾನ ಮನಸ್ಕರ ಜೊತೆ ಸೇರಿ ತಮ್ಮದ್ದೊಂದು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ “ಲೈಫ್‌ ಈಸ್‌ ಬ್ಯೂಟಿಫುಲ್‌” ಚಿತ್ರ ಶುರು ಮಾಡಿ, ಅದನ್ನೂ ಮುಗಿಸಿದ್ದಾರೆ. ಆ ಚಿತ್ರ ಈಗ ಡಬ್ಬಿಂಗ್‌ ಹಂತದಲ್ಲಿದೆ. ಈಗ ನಾಯಕಿ ಪ್ರಧಾನ ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಈ ಹೊಸ ಪ್ರಯತ್ನಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.

Categories
ಸಿನಿ ಸುದ್ದಿ

ಮಹಾಕರ್ಮ‌ಕ್ಕೆ ಹೀರೋ ಆದ ‘ಮಗಳು ಜಾನಕಿ‌ ‘ ಖ್ಯಾತಿಯ ನಟ, ಕಿರುತೆರೆಯಿಂದ ಹಿರಿತೆರೆಗೆ ಜಿಗಿದ ಅಭಿಲಾಷ್‌

ಹೊಸಬರಾದರೂ, ಚಿತ್ರದ ಕತೆ ಮೇಲಿದೆ ಅಪಾರ ನಂಬಿಕೆ 


ಕಿರುತೆರೆಯಲ್ಲಿ ಫೇಮಸ್ ‌ಆದ ನಟ-ನಟಿಯರು ಹಿರಿತೆರೆಗೆ ಬರುವುದೇನು ಹೊಸದಲ್ಲ. ಸದ್ಯದ ಅನೇಕ ಜನಪ್ರಿಯ ತಾರೆಯರು ಅಲ್ಲಿಂದಲೇ ಬಂದವರು ಎನ್ನುವುದು ನಿಮಗೂ ಗೊತ್ತು. ಅ ಸಾಲಿಗೆ ಈಗ ಹೊಸ ಸೇರ್ಪಡೆ ಯುವ ನಟ ಅಭಿಲಾಷ್ ಅಲಿಯಾಸ್ ಮಧುಕರ್.


ಅಭಿಲಾಷ್ ಎನ್ನುವುದು ಅವರ ಒರಿಜಿನಲ್ ಹೆಸರು. ಆದರೆ ಮಧುಕರ್ ಎನ್ನುವ ಪಾತ್ರದ ಮೂಲಕವೇ
ಜನಪ್ರಿಯತೆ ಪಡೆದ ನಟ ಅವರು. ಅಂದ ಹಾಗೆ, ಮಧುಕರ್ ಎನ್ನುವುದು ‘ ಮಗಳು ಜಾನಕಿ‌’ ಧಾರಾವಾಹಿ ಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರ. ಆ ಪಾತ್ರದೊಂದಿಗೆ ಮನೆ‌ಮಾತಾದ ಅಭಿಲಾಷ್ ಈಗ ‘ಮಹಾ ಕರ್ಮ‌’ ಹೆಸರಿನ ಚಿತ್ರದೊಂದಿಗೆ ಹೀರೋ ಆಗಿ ಬೆಳ್ಳಿತೆರೆಗೆ ಜಿಗಿಯುತ್ತಿರುವುದು ವಿಶೇಷ.

‘ಮಹಾಕರ್ಮ‌’. ಶುದ್ದ ಹೊಸಬರ ಚಿತ್ರ.‌ ಯಶಸ್ವಿ ಬಾಲಾಧಿತ್ಯ ಇದರ ನಿರ್ದೇಶಕ. ಈ ಹಿಂದೆ ಇವರು ಒಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಅದು ಅಷ್ಟೇನು ಸಕ್ಸಸ್ ಕಾಣಲಿಲ್ಲ .ಆದರೆ ಮತ್ತೊಂದು ಸಿನಿಮಾ ಮಾಡಿ ಗೆಲ್ಲಲೇ ಬೇಕೆನ್ನುವ ಛಲದೊಂದಿಗೆ ಮಹಾ ಕರ್ಮಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರಂತೆ. ಇನ್ನು ಈ ಚಿತ್ರಕ್ಕೆ ವಿದ್ಯಾಶ್ರೀ ಕ್ರಿಯೇಷನ್ಸ್ ಮೂಲಕ ವಿ.ಮಂಜುನಾಥ್ ಬಂಡವಾಳ ಹಾಕುತ್ತಿದ್ದು, ಕಿರಣ್ ಛಾಯಾಗ್ರಹಣ, ಮಧು ತುಂಬೆಕೆರೆ ಸಂಕಲನ ಚಿತ್ರಕ್ಕಿದೆ.

ಸದ್ದಿಲ್ಲದೆ ಸುದ್ದಿ ಮಾಡದೆ ‘ ಮಹಾ ಕರ್ಮ‌ ‘ ಚಿತ್ರಕ್ಕೆ ಮುಹೂರ್ತವು ಮುಗಿದಿದೆ. ಇತ್ತೀಚೆಗಷ್ಟೇ ನಗರದಲ್ಲಿ ಮುಹೂರ್ತ ಮುಗಿಸಿಕೊಂಡ ಚಿತ್ರ ತಂಡವೀಗ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದೆ. ನಟ ಅಭಿಲಾಷ್ ಪ್ರಕಾರ ಮಹಾಕರ್ಮ ಒಂದು ವಿಶೇಷವಾದ ಸಿನಿಮಾ. ಇದೊಂದು ಕ್ರೇಮ್ ಥ್ಲಿಲ್ಕರ್ ಕತೆ. ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಸಿನಿಮಾವೂ ಹೌದು. ಸಾಕಷ್ಟು ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿವೆ. ಹೊಸಬರಾದರೂ, ಚಿತ್ರದ ಕತೆ ಪ್ರೇಕ್ಷಕ ರಿಗೆ ಹೆಚ್ಚು ಇಷ್ಟವಾಗಲಿದೆ. ಅದರ ಜತೆಗೆ ನಿರ್ಮಾಪಕ ಮಂಜುನಾಥ್ ಅವರು ಕೂಡ ಚಿತ್ರವನ್ನು ಅದ್ದೂರಿಯಾಗಿಯೇ ತೆರೆಗೆ ತರಲು ಮುಂದಾಗಿದ್ದಾರೆ. ‌ಸಿನಿಮಾ ಚೆನ್ನಾಗಿ ಮೂಡಿ ಬರುವ ನಂಬಿಕೆಯಿದೆ ಎನ್ನುತ್ತಾರೆ ಯುವನಟ ಅಭಿಲಾಷ್.

Categories
ಸಿನಿ ಸುದ್ದಿ

ಸೂಪರ್​ಸ್ಟಾರ್​ಗೆ ಅದ್ಧೂರಿ ಮುಹೂರ್ತ ಸೋಮವಾರದಿಂದ ಶೂಟಿಂಗ್​ ಶುರು

ಅಣ್ಣನ ಮಗನ ಸಿನಿ ಜರ್ನಿಗೆ ಮನದುಂಬಿ ಹಾರೈಸಿದ ರಿಯಲ್ ಸ್ಟಾರ್ ಉಪೇಂದ್ರ 

 

” ‘ಲೇ ಮಚಾ.. ತೆಳ್ಳಗೆ ಬೆಳ್ಳಗೆ  ಇದಾನೆ ಅಂತ ಲಿಟಲ್ ಸ್ಟಾರ್ ಅಂದ್ಕೊಂಡ್ಬಿಟ್ಟೇನೋ ಮಗನೇ, ನಾನು ರಿಯಲ್ ಸ್ಟಾರ್ ಗರಡಿಯಲ್ಲಿ ಪಳಗಿರೋ ಸೂಪರ್ಸ್ಟಾರ್ ಕಣೋ….” 

– ಜನ ಜಾತ್ರೆ ನಡುವೆ ಹೀಗೆ ಖಡಕ್ ಡೈಲಾಗ್ ಹೊಡೆದು ಕುತೂಹಲ‌ ಮೂಡಿಸಿದರು ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ. ಇದು ನಡೆದಿದ್ದು ಸೂಪರ್ ಸ್ಟಾರ್ ಚಿತ್ರದ ಮುಹೂರ್ತ ಸಂದರ್ಭ.

ಅಂದ ಹಾಗೆ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವುದು ಹಳೇ ಸುದ್ದಿ. ಅದಕ್ಕಾಗಿಯೇ ನಿರಂಜನ್ ತುಂಬಾ ದಿನಗಳಿಂದ ಬಾಡಿ ವರ್ಕೌಟ್ ಮಾಡಿದ್ದು, ಆ ನಂತರ ಸೂಪರ್ ಸ್ಟಾರ್ ಅವರ ಚೊಚ್ಚಲ ಚಿತ್ರಕ್ಕೆ ಹೆಸರಿಟ್ಟು, ಅದರ ಟೀಸರ್ ಲಾಂಚ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದು , ಸಾಕಷ್ಟು ಕುತೂಹಲ ಮೂಡಿಸಿದ್ದೆಲ್ಲ ನಿಮಗೆ ಗೊತ್ತೇ ಇದೆ‌. ಅದಾದ ನಂತರವೀಗ ಡಿಸೆಂಬರ್ 4 ರಂದು ಶುಕ್ರವಾರ ಬೆಂಗಳೂರಿನ ಅಂಜನ ನಗರ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೂಪರ್ ಸ್ಟಾರ್‌ ಚಿತ್ರಕ್ಕೆ ಅದ್ದೂರಿ ಮುಹೂರ್ತ ಕಾರ್ಯಕ್ರಮ ನೆಡೆಯಿತು.

ಚಿತ್ರದ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ಅವರ ತಾಯಿ ಶ್ರೀಮತಿ ಗೌರಮ್ಮ ಮುನಿಯಪ್ಪ, ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಶ್ರೀಮತಿ ಲಕ್ಷ್ಮೀ ಕ್ಯಾಮರಾಕ್ಕೆ ಚಾಲನೆ ನೀಡಿದರು. ಬಳಿಕ ಚಿತ್ರ ತಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿತು. ‘ ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಬಗ್ಗೆ ಇಡೀ ತಂಡ ತಲೆ ಕೆಡಿಸಿಕೊಂಡಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ನಮ್ಮ ಮನೆಮಂದಿಯೆಲ್ಲ ನಿರಂಜನ್​ನನ್ನು ನೋಡಿ ಜಿಮ್​ ಸೇರಿದ್ದಾರೆ. 19ನೇ ವರ್ಷಕ್ಕೆ ಜಿಮಿನಾಸ್ಟಿಕ್ ಶುರುಮಾಡಿದ ಅದಾದ ಬಳಿಕ ಡಾನ್ಸ್​, ಜಿಮ್, ಡ್ರಾಮಾ ಹೀಗೆ ಸಿನಿಮಾಕ್ಕಾಗಿ ತುಂಬ ಶ್ರಮ ಹಾಕುತ್ತಿದ್ದಾನೆ. ಪರಿಶ್ರಮ ಇದ್ದರೆ ಯಶಸ್ಸು
ಗ್ಯಾರಂಟಿ‌ ಸಿಗಲಿದೆ ‘ ಅಂತ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ಉಪೇಂದ್ರ ಶುಭ ಹಾರೈಸಿದರು.

ನಿರ್ಮಾಪಕ ಮೈಲಾರಿ ಚಿತ್ರ‌ನಿರ್ಮಾಣದ ವಿಶೇಷತೆ ಕುರಿತು‌ಮಾತನಾಡಿದರು. ‘ ಸಿನಿಮಾ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಉಪೇಂದ್ರ ಮತ್ತವರ ಇಡೀ ಕುಟುಂಬ ಮತ್ತು ಚಿತ್ರರಂಗದ ಸಾಕಷ್ಟು ಸ್ಟಾರ್ ನಟರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬರಲಿದೆ’ ಎಂದರು.

ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ಮಾತನಾಡಿ, ಚಿತ್ರಕ್ಕೆ ಮೂಗೂರು ಸುಂದರಂ ಅವರನ್ನು ಕರೆತರುವುದಕ್ಕೆ ನಾಲ್ಕು ತಿಂಗಳ ಕಾಲ ವ್ಯಯ ಮಾಡಿದ್ದೇವೆ. ಪೋನ್ ಮಾಡಿದರೂ ಅವರು ಸಿಕ್ಕಿರಲಿಲ್ಲ. ಕೊನೆಗೆ ಅವರ ಮನೆಗೆ ಹೋಗಿ ಕಥೆ ಹೇಳಿ ಅವರ ಒಪ್ಪಿಗೆ ಪಡೆದುಕೊಂಡು ಬಂದಿದ್ದೇವೆ. ಈ ಸಿನಿಮಾದಲ್ಲಿ ಅವರು ಡಾನ್ಸ್ ಮಾಸ್ಟರ್ ಪಾತ್ರ ಮಾಡಲಿದ್ದಾರೆ. ಸೋಮವಾರ ದಿಂದ ಶೂಟಿಂಗ್​ ಶುರುವಾಗಲಿದೆ‘ ಎಂದರು ನಿರ್ದೇಶಕರು. ಇನ್ನು ನಾಯಕ ನಿರಂಜನ್ ಮಾತಿಗೆ ಮುನ್ನ ಖಡಕ್ ಡೈಲಾಗ್ ಹೊಡೆದು ಕುತೂಹಲ ಮೂಡಿಸಿದರು.

ನನಗೆ ಸಿನಿಮಾವೊಂದೆ ಗೊತ್ತಿರುವುದು. ಅದರಲ್ಲಿಯೇ ಏನಾದರು ಮಾಡಬೇಕೆಂಬ ತುಡಿತ ಇದೆ. ತುಂಬ ವರ್ಷಗಳಿಂದ ಒಳ್ಳೇ ಸ್ಕ್ರಿಪ್ಟ್ ಸಲುವಾಗಿ ಕಾಯುತ್ತಿದ್ದೆ. ಅದು ಸೂಪರ್​ಸ್ಟಾರ್ ಮೂಲಕ ಸಿಕ್ಕಿತು. ಡಾನ್ಸಿಂಗ್​ ಸಿನಿಮಾ ಆಗಿರುವುದರಿಂದ ನನಗೂ ಡಾನ್ಸ್ ಇಷ್ಟ. ಒಂದೊಳ್ಳೆ ಮೆಸೆಜ್ ಸಹ ಇದರಲ್ಲಿದೆ ” 

ನಿರಂಜನ್ ಸುಧೀಂದ್ರ, ನಟ

ಮುಹೂರ್ತಕ್ಕೆ ಅತಿಥಿಯಾಗಿ ಬಂದಿದ್ದ ನಟ ನೆನಪಿರಲಿ ಪ್ರೇಮ್, ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ವಿಜಯ್ ಮಾಸ್ಟರ್ ಸಾಹಸ ನಿರ್ದೇಶನ, ಯೋಗಿ ಕ್ಯಾಮರ್, ರಾಘವೇಂದ್ರ ವಿ ಸಂಗೀತ, ವಿಜಯ್ ಕುಮಾರ್ ಸಂಕಲನ, ಮೋಹನ್ ಅವರು ಈ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ತಾರಾಗಣದ ಆಯ್ಕೆಯೂ ನಡೆಯುತ್ತಿದ್ದು, ಶೀಘ್ರದಲ್ಲಿ ಚಿತ್ರ ತಂಡ ಅದನ್ನು ಬಹಿರಂಗ ಪಡಿಸಲಿದೆಯಂತೆ.

error: Content is protected !!