ʼರಾಮಾ ರಾಮಾ ರೇ ʼ ಖ್ಯಾತಿಯ ನಟ ಈಗ ಫುಲ್ ಬ್ಯುಸಿ
ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಟ ನಟರಾಜ್ ಈಗ ಯೋಗರಾಜ್ ಭಟ್ ಅಂಗಳಕ್ಕೆ ಜಿಗಿದಿದ್ದಾರೆ. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ “ಪದವಿ ಪೂರ್ವʼ ಚಿತ್ರಕ್ಕೆ ನಟರಾಜ್ ಎಂಟ್ರಿ ಆಗಿದ್ದಾರೆ. ಹರಿ ಪ್ರಸಾದ್ ಜಯಣ್ಣ ನಿರ್ದೇಶನದ ಈ ಚಿತ್ರದಲ್ಲಿ, ನಟರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡು ತಂಡದ ಉತ್ಸಾಹ ಮತ್ತು ಚಿತ್ರೀಕರಣದ ಕಾರ್ಯ ವೈಖರಿಗೆ ಮಾರು ಹೋಗಿದ್ದಾರಂತೆ. ಸದ್ಯಕ್ಕೆ ಈ ಚಿತ್ರದಲ್ಲಿ ನಟರಾಜ್ ಅವರ ಪಾತ್ರ ಎಂತಹದು ಎನ್ನುವುದನ್ನು ಚಿತ್ರ ತಂಡ ರಿವೀಲ್ ಮಾಡಿಲ್ಲ. ಆದರೆ ಚಿತ್ರ ತಂಡದಿಂದಲೇ ರಿವೀಲ್ ಆಗಿರುವ ನಟರಾಜ್ ಅವರ ಪಾತ್ರದ ಫಸ್ಟ್ ಲುಕ್ ಫೋಟೋ ನೋಡಿದರೆ ಅವರೊಬ್ಬ ಕಾಲೇಜ್ ಉಪನ್ಯಾಸಕ ಎನ್ನುವುದು ಗ್ಯಾರಂಟಿ.
ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ನಟ ನಟರಾಜ್, ಇದೊಂದು ಸುವರ್ಣಾವಕಾಶ ಅಂತ ಹೇಳಿದರು. ” ಇದೆಲ್ಲ ಹೇಗಾಯಿತು ಗೊತ್ತಿಲ್ಲ. ಟೀಮ್ ಕಡೆಯಿಂದ ಆಫರ್ ಬಂತು. ಒಳ್ಳೆಯ ಅವಕಾಶ, ಯಾಕೆ ಬಿಡುವುದು ಅಂತ ಒಂದೇ ಮಾತಿನಲ್ಲಿ ಓಕೆ ಅಂದೆ. ಜತೆಗೆ ಯೋಗರಾಜ್ ಮೂವೀಸ್ ನಿರ್ಮಾಣದ ಚಿತ್ರ ಎನ್ನುವುದು ಕೂಡ ಹೆಚ್ಚು ಇಂಪ್ರೆಸ್ ಮಾಡಿತು. ಚಿತ್ರದಲ್ಲಿ ಪಾತ್ರವೂ ಅದ್ಭುತವಾಗಿದೆ. ಒಂದೊಳ್ಳೆಯ ಸಿನಿಮಾ ಹಾಗೂ ಟೀಮ್ ನಲ್ಲಿ ಅಭಿನಯಿಸಿದ ಖುಷಿಯಿದೆʼ ಎನ್ನುತ್ತಾರೆ ನಟರಾಜ್. ಈಗಾಗಲೇ ಈ ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣವು ಮುಗಿದಿದೆ. ಮಲೆನಾಡಿನ ಸುತ್ತಮುತ್ತಲಿನ ಅತ್ಯಂತ ಸುಂದರ ತಾಣಗಳಲ್ಲಿ ಚಿತ್ರದ ಸಂದರ ದೃಶ್ಯಗಳನ್ನು ಚಿತ್ರ ತಂಡ ಚಿತ್ರೀಕರಿಸಿಕೊಂಡು ಬಂದಿದೆ. ಇದೀಗ ಮೂರನೇ ಹಂತದ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಭರ್ಜರಿ ತಯಾರಿ ನಡೆಸಿದೆ. ಈ ಹಂತದಲ್ಲಿ ನಟರಾಜ್ ಎಂಟ್ರಿ ಬಹಿರಂಗಗೊಂಡಿದೆ.