ರಾತ್ರೋರಾತ್ರಿ ಹೆದರಿಸಲು ಬಂದ ಹೊಸಬರು !

ಹೀರೋ ಆಗಿ ಬರುತ್ತಿದ್ದಾರೆ ಫೈಟರ್‌ ದಾಸ್‌ ಪುತ್ರ ಪವನ್‌ಕುಮಾರ್‌

ಅಪ್ಪ-ಅಮ್ಮ ಕಲಾವಿದರು ಎನ್ನುವ ಕಾರಣವೋ, ಇಲ್ಲವೇ ನಿರ್ದೇಶಕ ಅಥವಾ ನಿರ್ಮಾಪಕರು ಎನ್ನುವ ಪ್ರಭಾವವೋ, ಸಿನಿಮಾ ರಂಗಕ್ಕೆ ಅವರ ಮಕ್ಕಳು ಬಂದ ಕತೆಗಳಿಗೇನು ಇಲ್ಲಿ ಕಮ್ಮಿ ಇಲ್ಲ. ಅದಕ್ಕೆ ಕಾರಣ ಸಿನಿದುನಿಯಾದ ಆಕರ್ಷಣೆ. ದಾರಿಯಲ್ಲಿ ಸುಮ್ಮನೆ ಹೊರಟವರನ್ನು ತನ್ನತ್ತ ಆಕರ್ಷಿಸುವ ಶಕ್ತಿ ಸಿನಿಮಾ ಜಗತ್ತಿಗಿದೆ. ಆ ಕಾರಣಕ್ಕಾಗಿಯೇ ತುಂಬಾ ಜನ ಇಲ್ಲಿಗೆ ಬಂದಿದ್ದಾರೆನ್ನುವುದು ಹೊಸದೇನಲ್ಲ. ಅಂದ ಹಾಗೆ ಇದಿಷ್ಟು ಯಾಕೆ ಹೇಳಬೇಕಾಗಿ ಬಂತು ಅಂದ್ರೆ, ಫೈಟರ್‌ ದಾಸ್‌ ಪುತ್ರ ಪವನ್‌ ಕುಮಾರ್‌ ಸಿನಿಮಾ ಎಂಟ್ರಿ ಕಾರಣಕ್ಕೆ.

ಅಪ್ಪ ಸಿನಿಮಾರಂಗದಲ್ಲಿದ್ದಾರೆನ್ನುವ ಕಾರಣಕ್ಕೆ ದಾಸ್‌ ಪುತ್ರ ಪವನ್‌ ಕುಮಾರ್‌, ಒಳ್ಳೆಯ ಉದ್ಯೋಗ ಬಿಟ್ಟು ಸಿನಿಮಾ ರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಸದ್ದಿಲ್ಲದೆ ಸುದ್ದಿ ಮಾಡದೆ ಗೆಳೆಯರ ಜತೆಗೆ ಸೇರಿಕೊಂಡು ʼರಾತ್ರೋರಾತ್ರಿʼ ಹೆಸರಿನ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಣದ ಜತೆಗೆ ಚಿತ್ರದಲ್ಲಿ ಅವರೇ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇದೀಗ ಸಿನಿಮಾ ಚಿತ್ರೀಕರಣ ಅದರ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿ ರಿಲೀಸ್‌ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರ ತಂಡ ಘೋಷಿಸಿರುವ ಪ್ರಕಾರ ಸಂಕ್ರಾಂತಿಗೆ ಇದು ಬಿಡುಗಡೆ ಆಗುತ್ತಿದೆ. ಸರಿ ಸುಮಾರು ನೂರು ಚಿತ್ರ ಮಂದಿರಗಳಲ್ಲಿ ತೆರೆ ಕಾಣುವುದಾಗಿಯೂ ಚಿತ್ರ ತಂಡ ಹೇಳಿದೆ.

ಬಹುತೇಕ ಹೊಸಬರೇ ಸೇರಿಕೊಂಡು ಸಿದ್ಧಪಡಿಸಿದ ಚಿತ್ರ ಇದು. ಪವನ್‌ ನಾಯಕರಾಗಿ ಕಾಣಸಿಕೊಂಡರೆ, ರಚಿಕಾ ಹಾಗೂ ಡಯಾನ ಚಿತ್ರದ ನಾಯಕಿಯರು. ತಾಯಿ ಪಾತ್ರದಲ್ಲಿ ಗಂಗಮ್ಮ ಅಭಿನಯಿಸಿದ್ದಾರೆ. ರಾಜ್‌ಕಾಂತ್ ಹಾಗೂ ವಿನಯ್‌ಕುಮಾರ್.ವಿ.ನಾಯಕ್ ಖಳ ನಟರಾಗಿ ಕಾಣಸಿಕೊಂಡಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ದಿವಾಕರ್ ಇದ್ದರೆ, ಹಾಸ್ಯ ಪಾತ್ರಗಳಿಗೆ ಹರೀಶ್‌, ಪ್ರಸನ್ನ, ಮನೋಜ್‌, ಸುನೀಲ್‌ ಇದ್ದಾರೆ. ಪವನ್‌ ಚಿತ್ರಾಲಯ ಮೂಲಕ ಪವನ್‌ ಅವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಡೀಲ್‌ ಮುರಳಿ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್‌ನರಸಿಂಹನ್‌ ಸಂಗೀತ ನೀಡಿದ್ದಾರೆ. ಕಿರಣ್‌ ಗಜ ಛಾಯಾಗ್ರಣ ಹಾಗೂ ಸಾಲೋಮನ್‌ ಸಂಕಲನ, ಅಕ್ಷಯ್‌ ಮೂರ್ತಿ ಸಾಹಸ ಚಿತ್ರಕ್ಕಿದೆ.

ಚಿತ್ರಕ್ಕೆ ಬಿಡದಿ, ರಾಮನಗರ, ಮಂಡ್ಯ ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಾರರ್‌, ಥ್ರಿಲ್ಲರ್‌ ಕಥಾ ಹಂದರದ ಚಿತ್ರ. ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕತೆ. ಟೆಂಪೋ ಚಾಲಕನಾದ ಚಿತ್ರದ ಕಥಾ ನಾಯಕ ಒಮ್ಮೆ ಸಂಕಷ್ಟಕ್ಕೆ ಸಿಲುಕಿರುತ್ತಾನೆ. ಆತನ ತಾಯಿ ಅನಾರೋಗ್ಯದಲ್ಲಿರುತ್ತಾಳೆ. ಚಿಕಿತ್ಸೆಗೆ ಸುಮಾರು 50 ಸಾವಿರದ ರೂ. ಗಳ ಅಗತ್ಯ ವಿರುತ್ತದೆ. ಯಾರಿಂದಲೂ ಸಹಾಯ ದೊರೆಯದಿದ್ದಾಗ ಆತ ದೇವರ ಮೊರೆ ಹೋಗುತ್ತಾನೆ. ಅಲ್ಲಿ ಒಬ್ಬ ಪರಿಚಿತ ಸಿಗುತ್ತಾನೆ. ಒಂದು ಹೆಣ ಇದೆ. ಅದನ್ನು ತಾನು ಹೇಳಿದ ಜಾಗಕ್ಕೆ ಸಾಗಿಸಿದರೆ, ಕೇಳಿದಷ್ಟು ಹಣ ಸಿಗಲಿದೆ ಎನ್ನುತ್ತಾನೆ. ಆತ ಅದಕ್ಕೆ ಓಕೆ ಎನ್ನುತ್ತಾನೆ. ಅಲ್ಲಿಂದ ಮುಂದೇನಾಗುತ್ತೆ ಎನ್ನುವುದೇ ಚಿತ್ರದ ಕತೆಯಂತೆ.

Related Posts

error: Content is protected !!