ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿದ್ದು ಸುಳ್ಳಲ್ಲ. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಹೌದು, ಇದು ನಿಜ ಕೂಡ. ಕೊರೊನಾ ಹಾವಳಿ ನಿಯಂತ್ರಣವಾಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದೇನೋ ಸತ್ಯ. ಆದರೆ, ಈಗ ದಿನ ಕಳೆದಂತೆ ಮತ್ತೆ ಕೊರೊನಾ ಪಾಸಿಟಿವ್ ಕೇಸುಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಒಂದು ವೇಳೆ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪುನಃ ಲಾಕ್‌ಡೌನ್‌ಗೆ ಮುಂದಾದರೆ? ಖಂಡಿತವಾಗಿಯೂ ಚಿತ್ರರಂಗ ಮೇಲೇಳಲು ವರ್ಷಗಳೇ ಬೇಕಾದೀತು. ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಏನಾದರೊಂದು ಸಮಸ್ಯೆಗೆ ಕಾರಣವಾಗಿಬಿಟ್ಟರೆ, ಚಿತ್ರರಂಗವನ್ನೇ ನಂಬಿದವರ ಪಾಡೇನು ಎಂಬ ಪ್ರಶ್ನೆ ಈಗ ಎದುರಾಗಿದೆ.
ಹೀಗೆ ಖಾಲಿ ಚಿತ್ರಮಂದಿರ ಬೇಡ
ಸದ್ಯಕ್ಕೆ ಚಿತ್ರರಂಗದವರಲ್ಲಿ ಎರಡನೇ ಅಲೆ ಎಂಬ ಮಾತು ಭಾರೀ ಆತಂಕಕ್ಕೆ ಕಾರಣವಾಗಿದೆ. ಮೆಲ್ಲನೆ ಕೇಸುಗಳು ಹೆಚ್ಚುತ್ತಿವೆ. ವ್ಯಾಕ್ಸಿನ್ ಬಂದಿದ್ದರೂ, ನಿಯಂತ್ರಣವಾಗುತ್ತಿಲ್ಲವಾದ್ದರಿಂದ ಸರ್ಕಾರ ಸಭೆ ನಡೆಸುತ್ತಿದೆ. ಹಾಗೇನಾದರೂ ಒಂದು ವೇಳೆ ಲಾಕ್‌ಡೌನ್‌ಗೆ ಸರ್ಕಾರ ಮುಂದಾದರೆ ಚಿತ್ರರಂಗದವರ ಸ್ಥಿತಿ ಇನ್ನಷ್ಟು ಗಂಭೀರವಾಗುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ಸರ್ಕಾರ ಕೂಡ ಕೆಲವು ಕ್ರಮ ಕೈಗೊಂಡಿದೆ. ಮದುವೆ, ಜಾತ್ರೆ ಇನ್ನಿತರೆ ಸಮಾರಂಭಗಳಿಗೆ ಕೊಂಚ ಬ್ರೇಕ್ ಹಾಕಿದೆ. ಇತಿಮಿತಿಯಲ್ಲೇ ನಡೆಸಬೇಕು ಎಂಬ ಷರತ್ತು ಹಾಕಿದೆ. ಈ ನಿಟ್ಟಿನಲ್ಲಿ ಸಿನಿಮಾರಂಗ ಕೂಡ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ. ಈಗಾಗಲೇ ಹಲವು ಚಿತ್ರತಂಡಗಳು ಹಾಕಿಕೊಂಡಿದ್ದ ಲೆಕ್ಕಾಚಾರಗಳು ಕೂಡ ಉಲ್ಟಾ ಆಗುತ್ತಿವೆ. ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ” ಚಿತ್ರದ ಕಾರ್ಯಕ್ರಮ ಕೂಡ ಕ್ಯಾನ್ಸಲ್ ಆಗಿದೆ. ಹೌದು, ಮೈಸೂರಲ್ಲಿ “ಯುವ ಸಂಭ್ರಮ” ಹೆಸರಲ್ಲಿ ಕಾರ್ಯಕ್ರಮ ನಡೆಸಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ, ಕೊರೊನಾದ ಎರಡನೇ ಹಂತದ ಅಲೆ ಹೆಚ್ಚಿದ್ದರಿಂದ, ಎಚ್ಚೆತ್ತುಕೊಂಡ ಚಿತ್ರತಂಡ ತಕ್ಷಣವೇ “ಯುವ ಸಂಭ್ರಮ” ರದ್ದು ಮಾಡಿತು. ಇನ್ನು, ಸರ್ಕಾರ ಜನಸಂದಣಿ ಆಗುವ ಸ್ಥಳಗಳ ಮೇಲೆ ಏನಾದರೂ ಗಂಭೀರ ಕ್ರಮಕ್ಕೆ ಮುಂದಾದರೆ, ಚಿತ್ರಮಂದಿರಗಳಿಗೆ ಭಾರೀ ಪೆಟ್ಟು ಬೀಳಬಹುದು.
ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದಾರೆ. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳನ್ನು ಮುಚ್ಚಿಸುವ ಕ್ರಮ ಕೈಗೊಂಡರೆ ಚಿತ್ರರಂಗ ದಿಕ್ಕು ತೋಚದಂತಾಗುತ್ತದೆ.
ಈಗಾಗಲೇ ಒಂದು ವರ್ಷದಿಂದ ಕಾದು ಸೋತಿರುವ ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗುತ್ತಿವೆ. ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ, ನಾ ಮುಂದು, ನೀ ಮುಂದು ಅಂತ ಸಾಲು ಸಾಲು ಸಿನಿಮಾಗಳು ತೆರೆಕಂಡು ಸೋತು ಸಣ್ಣಗಾಗಿದ್ದೂ ಇದೆ. ಈಗ ಬಿಡುಗಡೆಯ ಡೇಟ್ ಕೂಡ ಏರುಪೇರಾಗಬಹುದು.
“ಪೊಗರು” ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಬೆನ್ನಲ್ಲೇ ಸ್ಟಾರ್ ಚಿತ್ರಗಳಾದ, “ರಾಬರ್ಟ್”, “ಕೋಟಿಗೊಬ್ಬ 3”, “ಯುವರತ್ನ”,”ಕೆಜಿಎಫ್2″, “ಸಲಗ” ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಚಿತ್ರಮಂದಿರಗಳ ಪ್ರದರ್ಶನಕ್ಕೆ ಷರತ್ತು ಹಾಕಿದರೆ, ಒಂದು ವೇಳೆ ಮುಚ್ಚಬೇಕೆಂಬ ಆದೇಶ ಹೊರಡಿಸಿದರೆ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳ ಪಾಡೇನು, ನಿರ್ಮಾಪಕರ ಸ್ಥಿತಿ ಏನು? ಸ್ಟಾರ್ ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಕೊರೊನಾ ಹಾವಳಿ ಮತ್ತೆ ಶುರುವಾಗಿ, ಲಾಕ್‌ಡೌನ್ ಮಾಡಿ ಚಿತ್ರಮಂದಿರಗಳು, ಮಲ್ಟಪ್ಲೆಕ್ಸ್ ಬಂದ್ ಮಾಡಿದ್ದಲ್ಲಿ, ಚಿತ್ರರಂಗವನ್ನೇ ನಂಬಿದವರ ಬದುಕು ಅಕ್ಷರಶಃ ಬೀದಿಪಾಲಾಗುತ್ತದೆ. ಅಂದಾಜಿನ ಪ್ರಕಾರ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಈಗ ಸ್ವಲ್ಪ ಸುಧಾರಿಸಿಕೊಂಡು ಬರುವ ತಯಾರಿಯಲ್ಲಿವೆ. ಈಗ ನೋಡಿದರೆ, ಪುನಃ ಕೊರೊನಾ ಭಯ ಹುಟ್ಟಿಸುತ್ತಿದೆ. ಹೀಗಾದರೆ, ಹೊಸ ನಿರ್ಮಾಪಕರ ಗತಿ ಏನು?
ಈಗಾಗಲೇ ಕೊರೊನಾದ ಎರಡನೇ ಅಲೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ, ಚಿತ್ರೋತ್ಸವ ಕೂಡ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಹಲವು ಕಾರ್ಯಕ್ರಮಗಳಿಗೂ ಕಡಿವಾಣ ಬೀಳುತ್ತಿದೆ. ಇದು ಗಂಭೀರವಾಗಿಬಿಟ್ಟರೆ, ಸಿನಿಮಾವನ್ನೇ ನಂಬಿ ಹಣ ಹಾಕಿದವರ ಸ್ಥಿತಿ ಏನಾಗಬೇಡ?
ಕಳೆದ ವರ್ಷ ಕೊರೊನಾ ಎಂಟ್ರಿಯಾಗುವ ಮುನ್ನವೇ, “ದಿಯಾ” ಮತ್ತು “ಲವ್ ಮಾಕ್ಟೇಲ್” ಚಿತ್ರಗಳು ಗೆದ್ದು ಬೀಗಿದ್ದವು. ಕೊರೊನಾ ಹೊಡೆತದ ಮಧ್ಯದಲ್ಲೂ ಫೀನಿಕ್ಸ್‌ನಂತೆ ಎದ್ದು ಗೆದ್ದಿದ್ದವು. ಈ ವರ್ಷ ಮಾರ್ಚ್‌ನಲ್ಲಿ “ರಾಬರ್ಟ್” ಕೂಡ ಬಿಡುಗಡೆಯಾಗಿ ಚಿತ್ರರಂಗಕ್ಕೆ ಒಂದಷ್ಟು ಧೈರ್ಯ ತುಂಬಿದೆ. ಎಲ್ಲಾ ಕಡೆ ಅಬ್ಬರ ಮುಂದುವರೆಸಿದೆ. ಇದರ ಹಿಂದೆಯೇ ಒಂದಷ್ಟು ಸ್ಟಾರ್ ಸಿನಿಮಾಗಳು, ಹೊಸಬರ ಸಿನಿಮಾಗಳೂ ಕೂಡ ಅದೇ ಜೋಶ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿವೆ. ಆದರೆ, ಸರ್ಕಾರ ಗಂಭೀರವಾಗಿ ಕ್ರಮ ಕೈಗೊಂಡುಬಿಟ್ಟರೆ, ಪರಿಸ್ಥಿತಿ ಘೋರವಾಗಿರುತ್ತೆ.
ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಪೆಟ್ಟು ತಿನ್ನುತ್ತವೆ. ಬಹಳಷ್ಟು ಸರ್ಕಸ್ ಮಾಡಿಯೇ ನಿರ್ಮಾಪಕ ಸಿನಿಮಾ ಮುಗಿಸಿರುತ್ತಾನೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಸದ್ಯಕ್ಕೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಲು ಮುಂದಾದರೆ, ಚಿತ್ರರಂಗ ಕೂಡ ಟಾರ್ಗೆಟ್ ಆಗಿರುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಆಗದಿರಲಿ ಎಂಬುದೇ “ಸಿನಿಲಹರಿ” ಆಶಯ.