ಬೆಳ್ಳಿತೆರೆಗೆ ಮತ್ತೆ ಬಂದ್ರು ರಾಮ್‌ಕುಮಾರ್‌ ; ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು ಅಂತಾರೆ ಸ್ಪುರದ್ರೂಪಿ ನಟ!

ಕಲಾವಿದನಿಗೆ ಕಲೆ ಅನ್ನೋದು ನಿತ್ಯ ನಿರಂತರ. ಅದರಲ್ಲೂ ಕಲಾವಿದ ಒಮ್ಮೆ ಬಣ್ಣ ಹಚ್ಚಿದರೆ, ಅದು ಕೊನೆಯವರೆಗೂ ಹಚ್ಚುತ್ತಲೇ ಇರಬೇಕು, ಬೆಳ್ಳಿಪರದೆ ಮೇಲೆ ಸದಾ ಮಿಂಚುತ್ತಲೇ ಇರಬೇಕು ಅಂತೆನಿಸದೇ ಇರದು. ಇಲ್ಲೀಗ ಹೇಳಹೊರಟಿರುವ ವಿಷಯ, ತೆರೆಮೇಲೆ ಕಾಣಿಸಿಕೊಳ್ಳದೆ ಒಂದಷ್ಟು ಗ್ಯಾಪ್‌ ಕೊಟ್ಟಿದ್ದ ಒಂದು ಕಾಲದ ಸಕ್ಸಸ್‌ಫುಲ್‌ ಹೀರೋ ರಾಮ್‌ಕುಮಾರ್‌ ಅವರದ್ದು. ಹೌದು, ರಾಮ್‌ಕುಮಾರ್‌ ಈಗ ಮತ್ತೊಮ್ಮೆ ತೆರೆಮೇಲೆ ರಾರಾಜಿಸಲು ಸಜ್ಜಾಗಿದ್ದಾರೆ ಅದೇ ಈ ಹೊತ್ತಿನ ವಿಶೇಷ. ಈಗಾಗಲೇ ರಾಮ್‌ಕುಮಾರ್‌ ಅವರ ಪುತ್ರ ಧೀರನ್‌, ಪುತ್ರಿ ಧನ್ಯಾ ಅವರು ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ವರ್ಷಗಳ ಗ್ಯಾಪ್‌ ನಂತರ ರಾಮ್‌ಕುಮಾರ್‌ ಕೂಡ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಹಾಗಂತ, ಅಪ್ಪ, ಮಗ,ಮಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದುಕೊಂಡರೆ ಆ ಊಹೆ ನಿಜಕ್ಕೂ ತಪ್ಪು.
ಇಷ್ಟಕ್ಕೂ ಈಗ ರಾಮ್‌ಕುಮಾರ್‌ ಅವರು ನಟಿಸುತ್ತಿರುವ ಸಿನಿಮಾದ ಹೆಸರು “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು”. ಈ ಸಿನಿಮಾ ಮೂಲಕ ಹೊಸ ಇನ್ನಿಂಗ್ಸ್‌ ಶುರುಮಾಡಿದ್ದಾರೆ ರಾಮ್‌ಕುಮಾರ್.‌ ಇನ್ನು, ಈ ಚಿತ್ರವನ್ನು ಪ್ರವೀಣ್‌ ಚೆನ್ನಪ್ಪ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ರಾಮ್‌ಕುಮಾರ್‌, ಒಂದೊಳ್ಳೆಯ ಸಿನಮಾ ಮೂಲಕವೇ ಹೊಸ ಇನ್ನಿಂಗ್ಸ್‌ಗೆ ಕಾಲಿಡುತ್ತಿದಾರೆ. ಇವರೊಂದಿಗೆ “ದಿಯಾ” ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಇದೊಂದು ಬಾಂಧವ್ಯದ ಸಿನಿಮಾ. ಈಗಿನ ವಾಸ್ತವತೆಗೆ ತಕ್ಕಂತಹ ಕಥಾಹಂದರ ಇಲ್ಲಿದೆ. ಸದ್ಯಕ್ಕೆ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ರಾಮ್‌ಕುಮಾರ್‌ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದರೂ, ಇಡೀ ಕಥೆ ಅವರ ಸುತ್ತವೇ ಸಾಗುತ್ತದೆ. ಅವರಿಲ್ಲಿ ಕೃಷ್ಣಮೂರ್ತಿ ಎಂಬ ಲೆಕ್ಚರರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಅದೇನೆ ಇರಲಿ, ಸುಂದರ ಮೊಗದ ನಟ ರಾಮ್‌ಕುಮಾರ್‌ ಅವರು ಎಲ್ಲೋ ಮರೆಯಾಗಿಬಿಟ್ಟರು ಅನ್ನುವ ಹೊತ್ತಿಗೆ “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು” ಅನ್ನುತ್ತಲೇ ಅವರು ಎಂಟ್ರಿಯಾಗುತ್ತಿದ್ದಾರೆ.

ಸದ್ಯಕ್ಕೆ ಅವರನ್ನು ಪುನಃ ತೆರೆ ಮೇಲೆ ಕಾಣಲು ಒಂದಷ್ಟು ಮಂದಿ ಕಾತುರರಾಗಿರುವುದಂತೂ ನಿಜ.
ಈ ಚಿತ್ರದ ಮೂಲಕ ಮತ್ತೆ ರಾಮ್‌ಕುಮಾರ್‌ ಅವರನ್ನು ಕರೆತರುತ್ತಿರುವುದು ನಿರ್ಮಾಪಕ ನಾಗೇಶ್‌ ಕುಮಾರ್.‌ ಈ ಹಿಂದೆ “ನಮ್‌ ಗಣಿ ಬಿಕಾಂ ಪಾಸ್‌” ಎಂಬ ಮೆಚ್ಚುಗೆಯ ಸಿನಿಮಾ ನಿರ್ಮಿಸಿ ಭರವಸೆ ಮೂಡಿಸಿರುವ ನಿರ್ಮಾಪಕರು, ಈಗಾಗಲೇ “ಗಜಾನನ ಗ್ಯಾಂಗ್‌” ಎಂಬ ಚಿತ್ರವನ್ನೂ ನಿರ್ಮಿಸಿದ್ದಾರೆ. ಆ ಚಿತ್ರ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿರುವ ಬೆನ್ನಲ್ಲೇ ಅವರು, “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತುʼ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

ಹೊಸಬರಿಗೆ ಸದಾ ಅವಕಾಶ ಕೊಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳನ್ನೇ ನೀಡಬೇಕು ಅಂತ ಪಣ ತೊಟ್ಟಿರುವ ನಿರ್ಮಾಪಕ ನಾಗೇಶ್‌ ಕುಮಾರ್‌, ಇಷ್ಟರಲ್ಲೇ ಹೊಸ ತಂಡದ ವಿಭಿನ್ನ ಕಥೆ ಇರುವ ಸಿನಿಮಾ ಬಗ್ಗೆಯೂ ಮಾಹಿತಿ ಕೊಡುವುದಾಗಿ ಹೇಳುತ್ತಾರೆ.

Related Posts

error: Content is protected !!