ಓಟಿಟಿ ಬ್ರೋಕರ್ಸ್ ವಿರುದ್ಧ ಚಿತ್ರೋದ್ಯಮ ಸೊಲ್ಲೆತ್ತಿದೆ. ಕೆಲವು ನೊಂದ ನಿರ್ಮಾಪಕರು ತಮಗಾದ ಅನ್ಯಾಯದ ವಿರುದ್ಧ ಇದೀಗ ಧ್ವನಿ ಎತ್ತಿದ್ದಾರೆ. ಈ ಬ್ರೋಕರ್ಸ್ ದಂಧೆಗೆ ಕಡಿವಾಣ ಬೀಳದಿದ್ದರೆ, ಕೊರೋನಾ ಎಂಬ ಕೆನ್ನಾಲಿಗೆಯಲ್ಲಿ ಬೆಂದ ನಿರ್ಮಾಪಕರಿಗೆ ಇನ್ನಷ್ಟು ಮೋಸ, ಮತ್ತಷ್ಟು ಅನ್ಯಾಯ ಖಚಿತ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ”ದ ಚಿತ್ರದ ನಿರ್ಮಾಪಕ ಕಿಶೋರ್ ಕುಮಾರ್ ಅವರು ಈಗ ತಮಗಾದ ಅನ್ಯಾಯವನ್ನು ಹೊರ ಹಾಕಿದ್ದಾರೆ.
ವೆಂಕಟೇಶ್ ಆಚಾರ್ಯ ಎಂಬಾತ ತಮಗೆ ಮೋಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಈ ಓಟಿಟಿ ಮೋಸದ ಜಾಲವಾದರೂ ಹೇಗೆ ? ಆ ಬಗ್ಗೆ ನಾವ್ ನಿಮಗೆ ಹೇಳುವ ಮುನ್ನ ಒಟಿಟಿ ಅಂದರೇನು? ಇದಕ್ಕಿಂದ್ದಂತೆ ಅದು ಹೇಗೆಲ್ಲ ಹುಟ್ಟಿಕೊಂಡಿತು, ಯಾರೆಲ್ಲ ಇದರಲ್ಲಿದ್ದಾರೆ ಎನ್ನುವುದೇ ಒಂದು ಇಂಟರೆಸ್ಟಿಂಗ್ ಸ್ಟೋರಿ. ಮೊದಲು ಆ ಕಥೆಯನ್ನೊಮ್ಮೆ ಕೇಳಿ.
ಓವರ್ ದಿ ಟಾಪ್ : ಓಟಿಟಿ ಅಂದರೆ ಇದೊಂದು ಡಿಜಿಟಲ್ ಪ್ಲಾಟ್ ಫಾರ್ಮ್. ಓವರ್ ದಿ ಟಾಪ್ ಎನ್ನುವುದು ಇದರ ಪೂರ್ಣಾರ್ಥ (ಫುಲ್ ಫಾರ್ಮ್). ಅಂದರೆ ಅಂತಾರ್ಜಾಲದಲ್ಲಿ ವೆಬ್ ಸೀರಿಸ್ ಅಥವಾ ಚಲನಚಿತ್ರಗಳನ್ನು ನಿಗದಿತ ದರಗಳ ಮೇಲೆ ಗ್ರಾಹಕರಿಗೆ ಒದಗಿಸುವ ಒಂದು ಸಾಧನ. ಸದ್ಯಕ್ಕೀಗ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ಪ್ಲಾಟ್ ಫಾರ್ಮ್‌ಗೆ ಬಹುಬೇಡಿಕೆ ಬಂದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಿನಿಮಾ ಅಥವಾ ವೆಬ್ ಸೀರಿಸ್ ನಿರ್ಮಾಪಕರ ಆದ್ಯತೆಗಳು ಕೂಡ ಈಗ ಓಟಿಟಿ ಕಡೆಗೆ ಹೆಚ್ಚಿವೆ. ಹಾಗೆಯೇ ಸ್ಯಾಟಲೈಟ್ ಟಿವಿ ಚಾನೆಲ್‌ಗಳು ಕೂಡ ಓಟಿಟಿ ಕೆಳಗಡೆಯೇ ಬರುತ್ತಿವೆ.
ಒಂದಲ್ಲ ಎರಡಲ್ಲ, ಹತ್ತಾರು: ಓಟಿಟಿನಲ್ಲೀಗ ಸದ್ಯಕ್ಕೆ ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಲೀಡಿಂಗ್‌ನಲ್ಲಿವೆ. ಇವು ಕನ್ನಡದ ಸ್ಟಾರ್ ಸಿನಿಮಾಗಳ ಜತೆಗೆ ಹೊಸಬರ ಸಿನಿಮಾಗಳನ್ನು ಖರೀದಿಸುತ್ತಿವೆ. ಅಂತಿಮವಾಗಿ ಅವುಗಳಿಗೂ ಲಾಭವೇ ಟಾರ್ಗೆಟ್ ಆಗಿರುವುದರಿಂದ ಕಂಟೆಟ್ ಕಡೆಗೂ ಹೆಚ್ಚು ಆದ್ಯತೆ ನೀಡಿವೆ. ಇದರ ಜತೆಗೆ ಸಾಕಷ್ಟು ಪ್ಲಾಟ್ ಫಾರ್ಮ್‌ಗಳು ಹುಟ್ಟಿಕೊಂಡಿವೆ. ನಮ್ದು ಕನ್ನಡದ್ದೇ ಅಂತ ಹೇಳಿಕೊಂಡ ಓಟಿಟಿಗಳು ಈಗ ಎಲ್ಲೆಡೆ ಹುಟ್ಟಿಕೊಂಡಿವೆ. ಕೂ, ಕನ್ನಡ ಫ್ಲಿಕ್ಸ್, ಫಿಲಂ ಬಜಾರ್… ಹೀಗೆ ಲೆಕ್ಕ ಹಾಕಿದರೆ ನೂರಾರು ಇವೆ. ಇವುಗಳಿಗೆ ಸಿನಿಮಾ ಬೇಕು. ವೆಬ್‌ಸೀರಿಸ್‌ಗಳು ಬೇಕು. ಅವರು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ, ಅವರಿಗೆಲ್ಲ ನಿಮ್ಮ ಸಿನಿಮಾ ಮಾರಾಟ ಮಾಡಿಕೊಡ್ತೀವಿ ಅಂತ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೋಕರ್ಸ್ ಮಾಫಿಯಾವೇ ಈಗ ತಲೆ ಎತ್ತಿದೆ ಎಂಬುದು ವಿಶೇಷ. ಅದರಲ್ಲೂ ಇವರದು ಸುಲಿಗೆ ದಂಧೆ ಅಂದರೆ ನಂಬಲೇಬೇಕು. ಹಾಗಾದರೆ, ಅದು ಹೆಂಗೆ?
ಓಟಿಟಿ ಓನರ್‌ಗಳೆಲ್ಲ ಇವರ ಮಾವಂದಿರು!
ನಿಜ, ಇದು ವ್ಯವಹಾರ. ನಿರ್ಮಾಪಕರಿಗೆ ತಮ್ಮ ಸಿನಿಮಾ ಮಾರಾಟವಾಗಬೇಕು, ಓಟಿಟಿನವರಿಗೆ ಸಿನಿಮಾ ಬೇಕು. ಇವರ ಮಧ್ಯೆ ವ್ಯವಹಾರಕ್ಕೆ ಅಂತ ಈಗ ಲೆಕ್ಜವಿಲ್ಲದಷ್ಟು ಮಂದಿ ಹುಟ್ಟಿಕೊಂಡಿದ್ದಾರೆ. ಇವರೆಲ್ಲ ಯಾರು, ಎಲ್ಲಿಂದ ಬಂದರೂ? ಯಾರೊಬ್ಬರಿಗೂ ಗೊತ್ತಿಲ್ಲ. ಆದರೆ ಅವರೆಲ್ಲ ಅಮೇಜಾನ್‌ನವರು ಭಾವಂದಿರು, ನೆಟ್ ಫ್ಲಿಕ್ಸ್ ತಮಗೆ ಅಳಿಯಂದರು, ಉಳಿದವರೆಲ್ಲ ಭಾವಂದಿರು ಅಂತೆಲ್ಲ ತಮಗೆ ತಾವೇ ಅಂದುಕೊಂಡು ಫೋಸು ಕೊಡುತ್ತಾರೆ. ಇದು ರಂಗುರಂಗಿನ ದುನಿಯಾ ಆಗಿದ್ದರಿಂದ ಕೆಲವು ನಿರ್ಮಾಪಕರು ಕೂಡ ಇದು ನಿಜವೇ ಇರಬೇಕೆಂದು ನಂಬುತ್ತಾರೆ. ಕೊನೆಗೆ ಯಾರಾದರೂ ಇರಲಿ, ತಮ್ಮ ಸಿನಿಮಾ ಒಳ್ಳೆಯ ರೇಟ್‌ಗೆ ಸೇಲ್ ಆಗಿಬಿಟ್ಟರೆ ಸಾಕಪ್ಪ ಅಂತಂದುಕೊಳ್ಳುತ್ತಾರೆ. ಹಾಗಾಗಿ ಅದೇ ಅವರಿಗೆ ಬಂಡವಾಳ.
ಹೇಳೋದೊಂದು, ಮಾಡೋದೇ ಇನ್ನೊಂದು: ಇದು ಪಕ್ಕಾ ಮೋಸದ ವ್ಯವಹಾರ. ಬ್ರೋಕರ್‌ಗಳ್ಯಾರು ನಿರ್ಮಾಪಕರನ್ನು ಅಮೇಜಾನ್, ನೆಟ್ ಫ್ಲಿಕ್ಸ್ ಅಥವಾ ಇನ್ನಾವುದೇ ಓಟಿಟಿ ಮಾಲೀಕರ ಹತ್ತಿರ ಕರೆದುಕೊಂಡು ಹೋಗೋದಿಲ್ಲ ಅದನ್ನೇ ಬಂಡವಾಳ ಮಾಡಿಕೊಳ್ಳುವ ಬ್ರೋಕರ್ಸ್ ಅಲ್ಲಿ ತನ್ನದೇ ವ್ಯವಹಾರ ಮಾಡ್ತಾನೆ. ಹೊರಗೆ ಬಂದು ನಿರ್ಮಾಪಕನಿಗೆ ಇನ್ನೊಂದು ವ್ಯವಹಾರದ ಮೊತ್ತ ಹೇಳ್ತಾನೆ. ಟಿವಿ ರೈಟ್ಸ್ ಸೇಲ್ ಮಾಡಿಕೊಡ್ತೀನಿ ಅಂದವನು ಕೂಡ ಇದನ್ನೇ ಮಾಡ್ತಾನೆ. ಚಾನೆಲ್ ಹೆಡ್ ಬಳಿ ಮಾತನಾಡೋದೇ ಒಂದು, ನಿರ್ಮಾಪಕನಿಗೆ ಹೇಳೋದೇ ಇನ್ನೋಂದು. ಇನ್ನು ಕೆಲವರು ಸಿನಿಮಾ ಟಿವಿ ರೈಟ್ಸ್, ಓಟಿಟಿ ರೈಟ್ಸ್ ಸೇಲ್ ಅಗಿದ್ದರೂ, ನಿರ್ಮಾಪಕರ ಬಳಿ ಆಗಿಲ್ಲ ಅಂತ ಸುಳ್ಳು ಹೇಳಿ ಯಾಮಾರಿಸಿದ್ದು ಇದೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ ಕಿಶೋರ್ ತಮಗಾದ ಅನ್ಯಾಯವನ್ನ ಇಲ್ಲಿ ಹೊರ ಹಾಕಿದ್ದಾರೆ. ಹಾಗೆಯೇ ಅವರ ಪರವಾಗಿ ಒಂದಷ್ಟು ನಿರ್ಮಾಪಕರು ಧ್ವನಿ ಎತ್ತಿದ್ದಾರೆ.
ಕಿಶೋರ್, ನಿರ್ಮಾಪಕರು
ಪೆನ್ಸಿಲ್ ಬಾಕ್ಸ್‌ಗೂ ಸಮಸ್ಯೆ!
ಇವರ ಮಾತಿಗೆ ಧ್ವನಿಗೂಡಿಸಿರುವ ನಿರ್ಮಾಪಕ ನಾಗೇಶ್ ಕುಮಾರ್ ಕೂಡ ಇಂತಹ ಓಟಿಟಿ ಹೆಸರು ಹೇಳಿಕೊಂಡು ಬರುವ ಸುಳ್ಳು ಬ್ರೋಕರ್ಸ್ ಮೇಲೆ ಹರಿಹಾಯ್ದಿದ್ದಾರೆ. “ಈ ಓಟಿಟಿಗೆ ಸಿನಿಮಾಗಳನ್ನು ಮಾರಾಟ ಮಾಡಿಕೊಡ್ತೀವಿ ಅನ್ನುವವರ ಬಗ್ಗೆ ನಿರ್ಮಾಪಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ವೆಂಕಟೇಶ್ ಆಚಾರ್ಯ ಎಂಬಾತನೊಬ್ಬನಾದರೆ, ಕೃಷ್ಣ ಎಂಬಾತ “ಪೆನ್ಸಿಲ್ ಬಾಕ್ಸ್” ಸಿನಿಮಾ ರೀ ರಿಲೀಸ್ ಮಾಡಿಕೊಡ್ತೀನಿ ಅಂದಿದ್ದಾನೆ. ನಿರ್ಮಾಪಕರಿಗೂ ಇದು ಸಮಸ್ಯೆಯೇ. ಇಲ್ಲಿ ನ್ಯಾಯವಾಗಿರುವವರಿಗೆ ಸಂಕಷ್ಟವೇ ಜಾಸ್ತಿ. ಜಾಸ್ತಿ ತುಂಬಿಕೊಂಡಿದ್ದಾರೆ. ಡಬ್ಬಿಂಗ್ ರೈಟ್ಸ್ ಆ ರೈಟ್ಸ್ ಈ ರೈಟ್ಸ್ ಅಂತಾರೆ ತುಂಬಾನೇ ಮೋಸವಿದೆ ಇಲ್ಲಿ. ಆ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕು. ನೇರವಾಗಿಯೇ ಸಂಬಂಧಿಸಿದವರನ್ನು ಸಂಪರ್ಕಿಸಿ ತಮ್ಮ ಸಿನಿಮಾದ ಹಕ್ಕು ಮಾರಾಟ ಮಾಡಿ ಅಂದಿರುವ ನಾಗೇಶ್ ಕುಮಾರ್, ನನಗೂ ಇಂತಹ ಅನುಭವ ಆಗಿದೆ. ಇಲ್ಲಿ ಹೊಸ ನಿರ್ಮಾಪಕರು ಬಂದರೆ, ಅವರನ್ನು ಯಾಮಾರಿಸುವ ಮಂದಿ ಹೆಚ್ಚಿದ್ದಾರೆ. ಮೊದಲೇ ಕೊರೊನಾ ಹಾವಳಿಗೆ ತತ್ತರಿಸಿರುವ ನಿರ್ಮಾಪಕರಿಗೆ ಇಂತಹ ಮಾಫಿಯಾದವರು ಹುಟ್ಟುಕೊಂಡಿದ್ದಾರೆ. ಈ ಕುರಿತಂತೆ ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಬೇಕು ಅಂತ ನಿರ್ಧರಿಸಿದ್ದೇನೆ. ಈ ರೀತಿ ಮೋಸ ಹೋಗಿರುವ ನಿರ್ಮಾಪಕರೆಲ್ಲರೂ ಈ ವಿರುದ್ಧ ಧ್ವನಿ ಎತ್ತಬೇಕು ಅನ್ನೋದು ಅವರ ಮಾತು.
ನಾಗೇಶ್ ಕುಮಾರ್, ನಿರ್ಮಾಪಕರು
ಮಂಡಳಿ ಸಭೆ: ಸಂಬಂಧ ಒಂದಷ್ಟು ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ್ದು, ಶನಿವಾರ ಸಭೆ ಕೂಡ ನಡೆಸಲಾಗಿದೆ. ಸಭೆಯಲ್ಲಿ ನಾಗೇಶ್ ಕುಮಾರ್, ಕುಮಾರ್, ಕಿಶೋರ್ , ಶ್ರೀನಿವಾಸ್ ಅವರು ಈ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು, ಕುಮಾರ್ ಎಸ್, ನಾಗೇಂದ್ರ ಅರಸ್ ಮೊದಲಿನಿಂದಲೂ ಈ ವಿರುದ್ಧ ಧ್ವನಿ ಎತ್ತಿದ್ದಾರೆ. ಮಂಡಳಿಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದ್ದು, ನಿರ್ಮಾಪಕರು ಹೀಗೆ ಇದ್ದರೆ ಮೋಸ ಮಾಡುತ್ತಲೇ ಇರುತ್ತಾರೆ. ಎಲ್ಲಾ ನಿರ್ಮಾಪಕರಿಗೂ ಮಂಡಳಿ ಜೊತೆ ನಿಲ್ಲಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾರು ಈ ವೆಂಕಟೇಶ್ ಆಚಾರ್ಯ : ವೆಂಕಟೇಶ್ ಆಚಾರ್ಯ ಎಂಬಾತ ಎರಡು ವರ್ಷಗಳ ಹಿಂದೆ “ಆಪರೇಷನ್ ನಕ್ಷತ್ರ” ಸಿನಿಮಾವನ್ನು ೧೮ ಲಕ್ಷಕ್ಕೆ ಓಟಿಟಿಗೆ ಅಂತ ಖರೀದಿ ಮಾಡಿದ್ದರು. ಆ ಸಂಬಂಧ ಅಗ್ರಿಮೆಂಟ್ ಕೂಡ ಆಗಿತ್ತು. ಆ ಪ್ರಕಾರ ಆತ ಅರವತ್ತು ದಿನಗಳಿಗೆ ಅಷ್ಟು ಅಮೌಂಟ್ ಕ್ಲಿಯರ್ ಮಾಡಬೇಕಿತ್ತು. ಇದಾಗಿ ಒಂದಷ್ಟು ದಿನಕ್ಕೆ ಆ ಚಿತ್ರ ಅಮೇಜಾನ್‌ನಲ್ಲೂ ಬಂತು. ಆದರೆ ನಮಗೆ ಬರಬೇಕಿದ್ದ ದುಡ್ಡು ಸರಿಯಾದ ಸಮಯಕ್ಕೆ ಬರಲಿಲ್ಲ. ಕೇಳಿದರೆ ನಾಳೆ, ನಾಡಿದ್ದು ಅಂತ ಹೇಳುತ್ತಲೇ ಬಂದಿದ್ದಾರೆ. ಕೊನೆಗೆ ಅವರ ವಿರುದ್ಧ ಚೇಂಬರ್‌ನಲ್ಲಿ ಹೇಳಿಕೊಂಡರೂ ಅಲ್ಲೂ ನ್ಯಾಯ ಸಿಕ್ಕಿಲ್ಲ. ವೆಂಕಟೇಶ್ ಆಚಾರ್ಯ ಚೇಂಬರ್ ಮೆಂಬರ್ ಅಲ್ಲ ಅಂತ ಸುಮ್ಮನಾಗಿದ್ದಾರೆ. ಸಾಲ ಮಾಡಿ ಹಣ ಹಾಕಿರುವ ನಮಗೆ ನಿಜಕ್ಕೂ ಅನ್ಯಾಯವಾಗಿದೆ ಎಂಬುದು “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ ಕಿಶೋರ್ ಮಾತು.