ಕನ್ನಡದ ಹಲವು ಸಿನಿಮಾಗಳು ಬೇರೆ ಭಾಷೆಗಳಿಗೆ ರಿಮೇಕ್ ಆಗುವುದು ಹೊಸದೇನಲ್ಲ. ಈಗಾಗಲೇ ಸಾಕಷ್ಟು ಕನ್ನಡದ ಸಿನಿಮಾಗಳು ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಆಗಿರುವುದುಂಟು. ಈಗ ಆ ಸಾಲಿಗೆ ಮಂಸೋರೆ ನಿರ್ದೇಶನದ “ಆಕ್ಟ್ -೧೯೭೮” ಚಿತ್ರ ಕೂಡ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಮಂಸೋರೆ ಅವರು ಸ್ಪಷ್ಟಪಡಿಸಿದ್ದಾರೆ.
ಯಜ್ಞಾ ಶೆಟ್ಟಿ ಪ್ರಮುಖ ಆಕರ್ಷಣೆಯಾಗಿದ್ದ ಈ ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಎಲ್ಲರ ಮನಗೆದ್ದಿತ್ತು. ಆ ಸಿನಿಮಾಗೆ ಎಲ್ಲೆಡೆಯಿಂದಲೂ ಪ್ರಶಂಸೆ ಬಂದಿತ್ತು. ಈ ನಿಟ್ಟಿನಲ್ಲಿ ಈಗ ಹಿಂದಿ ಭಾಷೆಗೆ ರಿಮೇಕ್ ಆಗುತ್ತಿದೆ. ಆದರೆ, ಹಿಂದಿ ಭಾಷೆಯ ಈ ಸಿನಿಮಾಗೆ ನಿರ್ದೇಶಕರು ಯಾರು ಅನ್ನೋದು ಗೊತ್ತಿಲ್ಲ. ಯಾವ ನಟಿ ನಟಿಸುತ್ತಾರೆ ಅನ್ನೋದು ತಿಳಿದಿಲ್ಲ. ಹಾಗೇನಾದರೂ ನಿರ್ದೇಶನಕ್ಕೆ ಅವಕಾಶ ಸಿಕ್ಕರೆ, ಮಂಸೋರೆ ಅವರು ನಿರ್ದೇಶನಕ್ಕೂ ಸೈ ಎನ್ನುತ್ತಾರೆ.
ಅಂದಹಾಗೆ, ಕೊರೊನಾ ಲಾಕ್‌ಡೌನ್ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಚಿತ್ರಮಂದಿರಕ್ಕೆ ಮೊದಲ ಬಾರಿಗೆ ಎಂಟ್ರಿಕೊಟ್ಟ ಸಿನಿಮಾ ಇದಾಗಿತ್ತು. ಭಯದ ವಾತಾವರಣದ ಸಮಯದಲ್ಲೂ ಜನರು ಚಿತ್ರಮಂದಿರಕ್ಕೆ ಬಂದಿದ್ದರು. ಬಂದವರನ್ನು ನಿರಾಸೆಗೊಳಸಿದ ಈ ಚಿತ್ರ ಯಶಸ್ವಿಯಾಗಿತ್ತು. ಮಹಿಳೆಯೊಬ್ಬಳು ಸರ್ಕಾರ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಯಾವ ಅಸ್ತ್ರ ಪ್ರಯೋಗಿಸುತ್ತಾಳೆ ಎಂಬುದು ಚಿತ್ರದ ಹೈಲೈಟ್. ನ್ಯಾಯಕ್ಕಾಗಿ ಆಕೆ ಏನೆಲ್ಲಾ ಸರ್ಕಸ್ ಮಾಡ್ತಾಳೆ, ಕೊನೆಗೆ ಆಕೆ ಅದರಲ್ಲಿ ಯಶಸ್ವಿಯಾಗ್ತಾಳಾ ಇಲ್ಲವಾ ಅನ್ನೋದು ಕಥಾವಸ್ತು. ಈ ಚಿತ್ರ ಈ ಹಿಂದೆಯೇ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದ್ದು, ಅಲ್ಲೂ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ.