ಕಳೆದ ಶುಕ್ರವಾರವಷ್ಟೇ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ʼಕೊಡೆ ಮುರುಗʼ ಚಿತ್ರದ ಶೋ ಸ್ಟಾಪ್ ಆಗಿದೆ. ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ತಂಡ ಈ ನಿರ್ಧಾರಕ್ಕೆ ಬಂದಿದೆ. ಹಾಗಂತ ಚಿತ್ರ ತಂಡ ಅಧಿಕೃತ ವಾಗಿ ಪ್ರಕಟಿಸಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಚಿತ್ರವನ್ನು ರೀ ರಿಲೀಸ್ ಮಾಡುವುದಾಗಿಯೂ ಅನೌನ್ಸ್ ಮಾಡಿದೆ. ಸದ್ಯಕ್ಕೆ ರೀ ರಿಲೀಸ್ ದಿನಾಂಕ ಫಿಕ್ಸ್ ಆಗಿಲ್ಲ. ಅಂದಾಜು ಮುಂದಿನ ತಿಂಗಳಾದರೂ ಆಗಬಹುದು ಅಂತ ಚಿತ್ರ ತಂಡ ಹೇಳಿದೆ. ಚಿತ್ರದ ಪ್ರದರ್ಶನ ನಿಲ್ಲಿಸಿದ ಬಗೆಗೆ ಚಿತ್ರ ತಂಡ ಸೋಮವಾರ ತುರ್ತು ಪತ್ರಿಕಾ ಗೋಷ್ಟಿ ಕರೆದಿತ್ತು. ಅಲ್ಲಿ ಶೋ ಸ್ಟಾಪ್ ಆಗಿದ್ದರ ಕುರಿತು ವಿವರ ನೀಡಿತು.
” ಸಿನಿಮಾಕ್ಕೆ ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ನೋಡಿದವರೆಲ್ಲಾ ಸಿನಿಮಾ ಅದ್ಭುತವಾಗಿ ಬಂದಿದೆ. ತೆರೆ ಮೇಲೆ ಕಾಣಿಸಿಕೊಂಡವರೆಲ್ಲ ಹೊಸಬರಾದರೂ, ಸಿನಿಮಾ ಕಥೆ, ಚಿತ್ರಕಥೆ ಜತೆಗೆ ತಾಂತ್ರಿಕವಾಗಿಯೂ ಗಮನ ಸೆಳೆಯುತ್ತಿದೆ. ಕಲೆಕ್ಷನ್ ಕೂಡ ಚೆನ್ನಾಗಿದೆ. ಆದರೂ ಈಗ ಕೊರೋನಾ ಹಾವಳಿ ಹೆಚ್ಚುತ್ತಿದೆ. ಚಿತ್ರದ ಪ್ರದರ್ಶನ ಇದ್ದರೂ, ಜನರು ಬರುವುದು ಅಷ್ಟು ಸುಲಭ ಇಲ್ಲ. ಅದೇ ಕಾರಣಕ್ಕೆ ನಾವೀಗ ಚಿತ್ರದ ಪ್ರದರ್ಶನವನ್ನು ನಿಲ್ಲಿಸುತ್ತಿದ್ದೇವೆ. ಸದ್ಯಕ್ಕೆ ನಮಗೆ ನಷ್ಟವೇ. ಆದರೂ ತೊಂದರೆ ಇಲ್ಲ. ಜನರ ಆರೋಗ್ಯವೂ ಮುಖ್ಯ ʼ ಅಂತ ಚಿತ್ರದ ನಿರ್ಮಾಪಕ ರವಿ ಕುಮಾರ್ ಸ್ಪಷ್ಟ ಪಡಿಸಿದರು.
ಸದ್ಯಕ್ಕೆ ಚಿತ್ರದ ಪ್ರದರ್ಶನ ಸ್ಟಾಪ್ ಆಗುತ್ತಿದೆ ಅಂತ ಚಿತ್ರ ತಂಡ ಹೇಳಿದೆ. ಆದರೆ ರೀ ರಿಲೀಸ್ ಪ್ಲಾನ್ ಯಾವಾಗ ಅಂತ ಅಧಿಕೃತವಾಗಿ ಪ್ರಕಟಿಸಿಲ್ಲ. ” ರೀ ರಿಲೀಸ್ ಪ್ಲಾನ್ ಇದೆ. ಆದರೆ ಯಾವಾಗ ಅಂತ ನಾವೀನ್ನು ಡಿಸೈಡ್ ಮಾಡಿಲ್ಲ. ಯಾಕಂದ್ರೆ ಮುಂದಿನ ದಿನಗಳಲ್ಲೂ ಕೊರೋನಾ ಪರಿಸ್ಥಿತಿ ಹೇಗಿರುತ್ತೆ ಅಂತ ಹೇಳೋದಿಕ್ಕೆ ಕಷ್ಟ. ಹಾಗಾಗಿ ಪರಿಸ್ಥಿತಿ ನೋಡಿಕೊಂಡು ರೀ ರಿಲೀಸ್ ಮಾಡೋಣ ಅಂತ ಇದ್ದೇವೆ ಎಂಬುದಾಗಿ ನಿರ್ಮಾಪಕ ರವಿ ಕುಮಾರ್ ಅಂದ್ರು. ನಿರ್ಮಾಪಕ ರವಿ ಕುಮಾರ್ ಈ ಹಿಂದೆ “ಮಮ್ಮಿʼ ಎಂಬ ಸೂಪರ್ ಸಿನಿಮಾ ನೀಡಿದ್ದರು. ಈಗ ಕೆ ಆರ್ ಕೆ ಬ್ಯಾನರ್ ನಲ್ಲಿ ‘ಕೊಡೆ ಮುರುಗ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಅವರಿಗೆ ಅಶೋಕ್ ಶಿರಾಲಿ ಸಾಥ್ ನೀಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ನಾಯಕರಾಗಿದ್ದು, ಕಥೆ ಬರೆದು ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮುರುಗ ಖ್ಯಾತಿಯ ಮುನಿಕೃಷ್ಣ, ಪಲ್ಲವಿ ಗೌಡ, ಸ್ವಾತಿ ಗುರುದತ್, ತುಮಕೂರು ಮೋಹನ್, ರಂಗಿತರಂಗ ಅರವಿಂದ್, ಕುರಿ ಪ್ರತಾಪ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.