Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ʼವೇದ ʼಸಿನಿಮಾಗೆ ಗೀತಕ್ಕನೇ ಪ್ರೊಡ್ಯೂಸರ್; ಅನ್ನದಾತೆ ಗೀತಮ್ಮನಿಗೆ ಉಘೇ ಉಘೇ !

‘ಭಜರಂಗಿ’ ಕಾಂಬೋ ಮತ್ತೆ ಆಖಾಡಕ್ಕೆ ಇಳಿಯಲು ಸಜ್ಜಾಗಿದೆ. ಭಜರಂಗಿ 2 ಚಿತ್ರದ ಬಿಡುಗಡೆಯ ಸಿದ್ಧತೆಯ ನಡುವೆಯೇ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ನಿರ್ದೇಶಕ ಎ.ಹರ್ಷ ಜೋಡಿಯ ಮತ್ತೊಂದು ಮೋಸ್ಟ್ ಎಕ್ಸ್ ಪೆಕ್ಟೇಷನ್ ಸಿನಿಮಾ ‘ವೇದ’ ಅಧಿಕೃತವಾಗಿ ಸೆಟ್ಟೇರಿದೆ. ಇದು ಶಿವಣ್ಣ ಅಭಿನಯದ 125 ಸಿನಿಮಾ. ಹಾಗೆಯೇ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬೋ ನಾಲ್ಕನೇ ಚಿತ್ರ. ಭಜರಂಗಿ, ವಜ್ರಕಾಯ ಹಾಗೂ ಭಜರಂಗಿ 2 ನಂತರ ಈಗ ವೇದ.

ಶುಕ್ರವಾರದ ಶುಭ ದಿನದಂದು ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಆ ಮೂಲಕ ಈ ಚಿತ್ರಕ್ಕೆ ಮೂಹೂರ್ತ ಮುಗಿದಿದೆ. ಸದ್ಯಕ್ಕೆ ಇದು ಚಿತ್ರೀಕರಣಕ್ಕೆ ಹೋಗೋದಿಕ್ಕೆ ಇನ್ನಷ್ಟು ಸಮಯ ಬೇಕಿದೆ. ಸದ್ಯಕ್ಕೆ ಸಾಂಗ್ ರೆಕಾರ್ಡಿಂಗ್ ಶುರು ಮಾಡಿದೆ. ಅನೇಕ ಕಾರಣಕ್ಕೆ ಇದು ವಿಶೇಷತೆ ಹೊಂದಿದೆ. ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಕಾಂಬೋ ಸಿನ್ಮಾ ಅನ್ನೋದು ಮಾತ್ರವಲ್ಲ, ವೇದ ಸಿನಿಮಾಗೆ ಗೀತಾ ಶಿವರಾಜ್ ಕುಮಾರ್ ಅವರೇ ನಿರ್ಮಾಪಕರು ಅನ್ನೋದು ಇಲ್ಲಿನ ಬಹು ಸ್ಪೆಷಲ್. ಹೌದು, ಶಿವಣ್ಣ ಹಾಗೂ ಹರ್ಷ ಜೋಡಿಯ ಮತ್ತೊಂದು ಸಿನಿಮಾ ಬರುತ್ತಿದೆ ಎನ್ನುವ ಸುದ್ದಿಯ ಬೆನ್ನಲೇ ಆ ಸುದ್ದಿ ಸಾಕಷ್ಟು ಸೌಂಡ್ ಮಾಡಿದ್ದು ಈ ಚಿತ್ರದ ನಿರ್ಮಾಪಕರ ಕಾರಣಕ್ಕೆ. ಯಾಕಂದ್ರೆ ಈ ಸಿನಿಮಾಕ್ಕೆ ಗೀತಾ ಶಿವರಾಜ್ ಕುಮಾರ್ ಅವರೇ ನಿರ್ಮಾಪಕರು.

ಸಿನಿಮಾ ಹೀಗೆ ಬರಬೇಕೆಂದು ಲೆಕ್ಕಚಾರ ಹಾಕಿಕೊಂಡರೆ, ಹಾಗೆಯೇ ತೆರೆಗೆ ತರಲು ಅವರು ರೆಡಿ. ಅದಕ್ಕೆ ಕಾರಣಕ್ಕೆ ವೇದ ಸಿನಿಮಾ ಬಜೆಟ್ ಬಗ್ಗೆಯೂ ದೊಡ್ಡ ಕುತೂಹಲ ಇದೆ. ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ ಆಗಿದ್ದರಿಂದ ಶಿವಣ್ಣ ಕೂಡ ಅದರ ಮೇಕಿಂಗ್ ನಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳಲಾರರು. ಹರ್ಷ ಜತೆಗೆ ಅಭಿನಯಿಸಿದ ಮೂರು ಸಿನಿಮಾಗಳಲ್ಲಿ ಈಗ ಎರಡು ಸಿನಿಮಾ ತೆರೆ ಕಂಡಿವೆ. ಇನ್ನೊಂದು ಈಗ ತೆರೆಗೆ ಸಿದ್ದವಾಗಿದೆ.

ಈಗಾಗಲೇ ತೆರೆ ಕಂಡ ಸಿನಿಮಾಗಳಲ್ಲಿ ಈ ಜೋಡಿ ಭರ್ಜರಿಯಾಗಿಯೇ ಪ್ರೇಕ್ಷಕರನ್ನು ರಂಜಿಸಿದೆ. ಅದರರ್ಥ ಶಿವಣ್ಣ ಅಭಿಮಾನಿಗಳಿಗೂ ಆ ಸಿನಿಮಾ ಹಿಡಿಸಿವೆ. ಅದೇ ನಿರೀಕ್ಷೆ ಈಗ ವೇದ ಸಿನಿಮಾದ ಮೇಲೂ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರಂತೆ ನಿರ್ದೇಶಕ ಎ. ಹರ್ಷ. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರಕ್ಕಿದೆ. ಶುಕ್ರವಾರ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿಯೇ ಸಾಂಗ್ ರೆಕಾರ್ಡಿಂಗ್ ಗೆ ಚಾಲನೆ ಸಿಕ್ಕಿದೆ. ಉಳಿದಂತೆ ಶಿವಣ್ಣಗೆ ಇಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುವ ಚೆಲುವೆ ಯಾರು, ಉಳಿದ ಪಾತ್ರಗಳಿಗೆ ಬಣ್ಣ ಹಚ್ಚುವವರು ಯಾರು ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಂತೆ. ಅಲ್ಲಿವರೆಗೂ ಕೂತೂಹಲದಿಂದ ಕಾಯಲೆಬೇಕು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಜಗ್ಗೇಶ್‌ ಪುತ್ರ ಗುರುರಾಜನ ಕಾಗೆಮೊಟ್ಟೆ ಸೆಪ್ಟೆಂಬರ್‌ನಲ್ಲಿ ರಿಲೀಸ್ ; ಮಗನ ಚಿತ್ರಕ್ಕೆ ಸಾಹಿತ್ಯ ರಚಿಸಿ ಹಾಡಿದ ಅಪ್ಪ!

ಕೊರೊನಾ ಈಗ ಒಂದು ಹಂತಕ್ಕೆ ಮರೆಯಾಗುತ್ತಿದೆ. ಮೆಲ್ಲನೆ ಭಯ ಕಡಿಮೆಯಾಗುತ್ತಿದೆ. ಎಲ್ಲಾ ರಂಗದಲ್ಲೂ ಕಾರ್ಯಚಟುವಟಿಕೆಗಳೂ ಜೋರಾಗಿವೆ. ಸಿನಿಮಾರಂಗ ಮಾತ್ರ ಶೇ.೫೦ರಷ್ಟು ಆಸನ ಭರ್ತಿ ಆದೇಶದಲ್ಲೇ ಇದೆ. ಹೀಗಿದ್ದರೂ, ಈಗ ಒಂದೊಂದೆ ಸಿನಿಮಾ ರಿಲೀಸ್‌ ಆಗೋಕೆ ರೆಡಿಯಾಗಿವೆ. ಶಿವರಾಜಕುಮಾರ್‌ ಅಭಿನಯದ “ಭಜರಂಗಿ ೨” ಸಿನಿಮಾ ರಿಲೀಸ್‌ ಅನೌನ್ಸ್‌ ಮಾಡಿದೆ. ಅದರ ಬೆನ್ನಲ್ಲೇ ಈಗ ಜಗ್ಗೇಶ್‌ ಪುತ್ರ ಗುರುರಾಜ್‌ ಅವರ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.


ಹೌದು, ನವರಸನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಚಿತ್ರ “ಕಾಗೆ ಮೊಟ್ಟೆ” ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್‌ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಪಕ್ಕಾ ಲೋಕಲ್‌ ಹುಡುಗರ ಕಥೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ‌ ಚಂದ್ರಹಾಸ ಅವರು ಈ ಚಿತ್ರ ಮಾಡಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ ಅನ್ನೋದು ಗೊತ್ತು. ಅದೇ ರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಮೊಟ್ಟೆಯಂತಿರುವ ಇವರು ಬೆಳೆದ ಮೇಲೆ ಯಾವ ರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.


ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್‌ಗೆ ಸಿದ್ದವಾಗಿರುವ ಕಾಗೆಮೊಟ್ಟೆ ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಲಾಕ್‌ಡೌನ್‌ಗೂ ಮುಂಚೆಯೇ ರೆಡಿಯಾಗಿದ್ದ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ.ಮಾದೇಶ್ ಹಾಗೂ ಹೇಮಂತ್ ಇನ್ನಿಬ್ಬರು ಗೆಳೆಯರಾಗಿ ನಟಿಸಿದ್ದಾರೆ. ಕನ್ನಡದವರೇ ಆದ ತನುಜಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ, ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್.ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ.

ಅಂದಹಾಗೆ ಈ ಚಿತ್ರಕ್ಕೆ ಪಿಳ್ಳಾ, ಗೋವಿ, ಕೃಷ್ಣನ ಕಥೆ ಎಂಬ ಅಡಿಬರಹವಿದೆ. ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರು ಹುಡುಗರು, ಒಮ್ಮೆ ಒಂದು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವು ಅಂದುಕೊಂಡಿದ್ದನ್ನು ಮಾಡುತ್ತಾರೋ ಇಲ್ಲವೋ ಅನ್ನೋದು ಕಥೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ಸೌಜನ್ಯ ಎಂಬ ನಟಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ೩ ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವೀ ಚಿತ್ರದ ಕ್ಯಾಮೆರಾ ಹಿಡಿದರೆ, ರಜನೀಕಾಂತ್‌ ಅವರ ಸ್ನೇಹಿತ ರಾಜ್ ಬಹದ್ದೂರ್‌ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ : ಕೆರಳಿದ ನಟಿ ಶ್ರುತಿ !

ಜಗತ್ತು ಎಷ್ಟೇ ಬದಲಾದರೂ ಕೂಡ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ- ದಬ್ಬಾಳಿಕೆ- ಅತ್ಯಾಚಾರ ಮಾತ್ರ ನಿಲ್ಲುತ್ತಿಲ್ಲ.‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಧ್ಯಾರ್ಥಿನಿ ಮೇಲೆ ನಡೆದಂತಹ ಸಾಮೂಹಿಕ ಅತ್ಯಾಚಾರಕ್ಕೆ ಇಡೀ ಕರುನಾಡೇ ಬೆಚ್ಚಿಬಿದ್ದಿದೆ. ಅತ್ಯಾಚಾರವೆಸಗಿ ತಲೆಮರೆಸಿಕೊಂಡಿರುವ ಕೀಚಕರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಘಟನೆಯಿಂದ ಮನನೊಂದು, ಕೀಚಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ʼ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ನಡಿಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ ? ಇಂತ ಪುರುಷರ ಮನಸ್ಥಿತಿ ಬದಲಾಗುವುದೆಂದು? ಇಂತ ಅನಿಷ್ಟ ಕಾಮುಕರನ್ನ ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿ ಆಗಬೇಕು ಎನ್ನುವುದು ಎಷ್ಟು ಸತ್ಯವೋ, ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗ್ಬೇಕು ಎನ್ನುವುದು ನನ್ನ ಅಭಿಪ್ರಾಯ ಹೌದಲ್ಲವೇ.. ಹುಟ್ಟಿನಿಂದ ಸಾವಿನವರೆಗೆ ಹೆಣ್ಣುಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತ ಸಾಧನೆಯನ್ನು ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಹಾಗಾಗದಿರಲಿ ಎಂದು ನಟಿ ಶ್ರುತಿ ಸೋಷಲ್‌ ಮೀರಿಯಾದಲ್ಲಿ ತಮ್ಮ ಅಭಿಪ್ರಾಯ ಷೇರ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ದರ್ಶನ್-ಸುದೀಪ್-ಯಶ್-ಪುನೀತ್‌ಗೆ ಸೆಡ್ಡುಹೊಡೆಯಲಿದ್ದಾರೆ ಶಿವಣ್ಣ; ಹ್ಯಾಟ್ರಿಕ್ ನಿರ್ಧಾರಕ್ಕೆ ನೀವೇನಂತೀರಾ ?

ಸ್ಯಾಂಡಲ್‌ವುಡ್ ಸುಲ್ತಾನ್, ಸ್ಯಾಂಡಲ್‌ವುಡ್ ಬಚ್ಚನ್, ಸ್ಯಾಂಡಲ್‌ವುಡ್ ಷೆಹಜಾದ್, ಸ್ಯಾಂಡಲ್‌ವುಡ್ ಮಿಸ್ಟರ್‌ ಪರ್ಫೆಕ್ಷನಿಸ್ಟ್ ಉಫ್… ಈ ಎಲ್ಲಾ ಸೂಪರ್‌ಸ್ಟಾರ್‌ಗಳಿಗೆ ಗಂಧದಗುಡಿಯ ಅಧಿಪತಿ, ಆರು ಕೋಟಿ ಜನ ಅಪ್ಪಿ-ಒಪ್ಪಿಕೊಂಡ ಕರುನಾಡ ಚಕ್ರವರ್ತಿ ಸೆಡ್ಡು ಹೊಡೆಯುತ್ತಾರೆ ಅಂದರೆ ಎಲ್ಲರ ಕಿವಿ ನೆಟ್ಟಗಾಗುತ್ತೆ . ಅಟ್ ದಿ ಸೇಮ್ ಟೈಮ್ ಕಣ್ಣು ಊರಗಲ ಆಗುತ್ತೆ. ಅಪ್‌ಕೋರ್ಸ್ ಆಗ್ಲೆಬೇಕು. ಯಾಕಂದ್ರೆ, ಗಂಧದಗುಡಿಯ ಸ್ಟಾರ್‌ನಟರುಗಳ ನಡುವೆ ಹೆಲ್ದಿ ಕಾಂಪಿಟೇಷನ್ ಇರುವ ಹೊತ್ತಲ್ಲಿ, ಸೆಡ್ಡು-ಗಿಡ್ಡು ಅಂತ ಕಡ್ಡಿಗೀರೋದಕ್ಕೆ ನೋಡಿದ್ರೆ ಅವರವರ ಫ್ಯಾನ್ಸ್ ಕಣ್ಣು ಕೆಂಪಗಾಗುತ್ತವೆ. ಸೋ, ಫ್ಯಾನ್ಸ್ ಕೆಂಡಉಗುಳೋದಕ್ಕೂ ಮುನ್ನ ಅಸಲಿ ಮ್ಯಾಟರ್ ಏನು ಅಂತ ಹೇಳಿಬಿಡ್ತೀವಿ. ಅಷ್ಟಕ್ಕೂ, ಇದು ಬೆಂಕಿಹಚ್ಚೋ ಕಥೆ ಅಲ್ಲ ಬದಲಾಗಿ ಸ್ಟಾರ್‌ನಟರುಗಳೇ ಶಿವಣ್ಣಂಗೆ ಉಘೇ ಉಘೇ ಎನ್ನುವ ಕಥನ. ದೊಡ್ಮನೆ ಅಭಿಮಾನಿಗಳು ಹಬ್ಬ ಅಲ್ಲ ಊರಬ್ಬ ಮಾಡುವ ಸ್ಟೋರಿಯಿದು.

ಭಗವಂತನ ಸ್ವತ್ತನ್ನ ನಾಶಮಾಡ್ತೀನಿ ಅಂತ ಹೊರಟರೆ ಅದನ್ನ ಕಾಪಾಡೋಕೆ ಅವನೇ ಅವತಾರ ಎತ್ತಿ ಬರಬೇಕಾಗಿಲ್ಲ ಅವನ ರೂಪದಲ್ಲಿ ಇನ್ನೊಬ್ಬ ರಕ್ಷಕ ಹುಟ್ಟಿರ‍್ತಾನೆ. ಅದರಂತೇ, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಷ್‌ರಂತಹ ಮಹನೀಯರುಗಳು ಕಟ್ಟಿಬೆಳೆಸಿದ ಗಂಧದಗುಡಿ ಶೇಕ್ ಆಗ್ತಿದೆ ಅಂದರೆ, ನಲುಗುತ್ತಿದೆ-ನರಳುತ್ತಿದೆ ಅಂದರೆ, ಪಾತಾಳಕ್ಕೆ ಕುಸಿಯುತ್ತಿದೆ ಅಂದರೆ ಎಷ್ಟು ದಿನ ಅಂತ ನೋಡಿಕೊಂಡು ಕೈಕಟ್ಟಿಕೊಂಡು ಸುಮ್ಮನೇ ಕೂರೋದಕ್ಕೆ ಆಗುತ್ತೆ ಹೇಳಿ. ದಂಡಿಗೆ ಹೆದರಲಿಲ್ಲ-ದಾಳಿಗೆ ಹೆದರಲಿಲ್ಲ ಇನ್ನೂ ಕಾಣದ ಕ್ರಿಮಿಗೆ ಹೆದರ‍್ಬೇಕಾ ಅಂತ ಮೈಕೊಡವಿಕೊಂಡು ಅಖಾಡಕ್ಕೆ ಇಳಿಯಲೇಬೇಕಾಗುತ್ತದೆ. ಧ್ರುವತಾರೆಗಳು ರಕ್ತಬಸಿದು ಕಟ್ಟಿದ ಗಂಧದಗುಡಿ ಸಾಮ್ರಾಜ್ಯಕ್ಕಾಗಿ ಹೋರಾಡಲೆಬೇಕಾಗುತ್ತದೆ. ಆ ಹೋರಾಟಕ್ಕೆ ಹಾಗೂ ದಿಗ್ವಿಜಯ ಸಾಧಿಸುವುದಕ್ಕೆ ಕರುನಾಡ ಚಕ್ರವರ್ತಿ ಸಿದ್ದರಾಗಿದ್ದಾರೆ.

ಈ ಭೂಮಿ ಮೇಲೆ ಅದೆಷ್ಟೋ ಜೀವಿಗಳನ್ನು ಸೃಷ್ಟಿಸಿದ ಭಗವಂತ, ಮನುಷ್ಯನಿಗೆ ಮಾತ್ರ ಎಲ್ಲಾ ಸೌಲಭ್ಯಗಳನ್ನು ಕೊಟ್ಟನು. ಕಾಲ ಕ್ರಮೇಣ ಅದು ಹೆಚ್ಚಾದಂತೆ ರೋಗ ರುಜನಿಗಳು ಹೆಚ್ಚಾದವು. ಮನುಷ್ಯನ ಮೇಲಿದ್ದ ಅಗಾದವಾದ ಪ್ರೀತಿಯಿಂದ ಈ ರೋಗಗಳಿಗೆ ಪರಿಹಾರವನ್ನು ಈ ಪ್ರಕೃತಿಯಲ್ಲಿಯೇ ಇಟ್ಟನು. ಇದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ʼಭಜರಂಗಿ-2ʼ ಚಿತ್ರದ ಡೈಲಾಗ್. ಈ ಡೈಲಾಗ್‌ನಂತಾಗಿಯೇ ಇದೆ ಭೂಮಂಡಲದ ಪರಿಸ್ಥಿತಿ. ಚೀನಿ ಕ್ರಿಮಿ ಕೊರೊನಾದಿಂದ ಮನುಕುಲವೇ ನರನರ ನಲುಗಿದೆ. ಅದಕ್ಕೆ ಪರಿಹಾರವೂ ಸಿಕ್ಕಿದೆ ಕೋವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್, ಸ್ಪುಟ್ನಿಕ್, ಮೊಡೊರ್ನಾ ಹೀಗೆ ವಿವಿಧ ರೀತಿಯ ವ್ಯಾಕ್ಸಿನೇಷನ್ ಸಿಕ್ಕಿದೆ. ಇದರಿಂದ ಮನುಕುಲ ನಿಟ್ಟುಸಿರು ಬಿಟ್ಟಿದೆ. ಆದರೆ, ಗಂಧದಗುಡಿ ನೆಮ್ಮದಿಯಾಗಿ ಉಸಿರಾಡುವುದಕ್ಕೆ ಇನ್ನೂ ಸಾಧ್ಯವಾಗ್ತಿಲ್ಲ.

ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿ ಹತ್‌ಹತ್ರ ಎರಡು ವರ್ಷ ಆಗುತ್ತಾ ಬಂತು. ಚೀನಾದಿಂದ ಎಗರಿಎಗರಿಕೊಂಡು ಕರ್ನಾಟಕಕ್ಕೆ ಕಾಲಿಟ್ಟ ಕೊರೊನಾ ಬಣ್ಣದ ಲೋಕವನ್ನು ಬಂದ್ ಮಾಡ್ಸಿ ರೌದ್ರನರ್ತನ ಶುರುವಿಟ್ಟುಕೊಂಡ್ತು. ಹೀಗೆ ಶುರುವಾದ ಕಾಣದ ಕ್ರಿಮಿಯ ನರ್ತನಕ್ಕೆ ಚಂದನವನ ಹೈರಣಾಗಿ ಹೋಗಿದೆ. ಸ್ಯಾಂಡಲ್‌ವುಡ್ ಬಳಲಿ ಬೆಂಡಾಗಿ ಬಸವಳಿದಿದೆ. ಬೆಳ್ಳಿತೆರೆ ಮಂಕಾಗಿದೆ, ಬಾಕ್ಸ್ಆಫೀಸ್ ಕೋಮಾಗೆ ಹೋಗಿದೆ. ಇದೆಲ್ಲದರ ಪರಿಣಾಮ ಬಣ್ಣವನ್ನೇ ನಂಬಿಕೊಂಡು ಬದುಕುವ ಸಣ್ಣಪುಟ್ಟ ಕಲಾವಿದರು, ದಿನಗೂಲಿ ಕಾರ್ಮಿಕರು, ಚಿತ್ರಮಂದಿರದಲ್ಲಿ ಕೆಲಸ ನಿರ್ವಹಿಸುವವರು ಸೇರಿದಂತೆ ಥಿಯೇಟರ್ ಮಾಲೀಕರು, ವಿತಕರು, ಪ್ರದರ್ಶಕರು, ಅನ್ನದಾತರು ಹೀಗೆ ಒಬ್ಬಿಬ್ಬರಲ್ಲ ಬಿಡಿ ಸಿನಿಮಾವನ್ನೇ ನಂಬಿಕೊಂಡಿರು ವವರೆಲ್ಲಾ ಅಕ್ಷರಶಃ ಆಕಾಶ ನೋಡಿದರು. ಈಗಲೂ ಅವರ ಪರಿಸ್ಥಿತಿ ಕೊಂಚ ಚಿಂತಾಜನಕ. ಹೀಗಾಗಿ, ಗಂಧದಗುಡಿಯ ಕ್ಯಾಪ್ಟನ್ ಆಫ್ ದಿ ಶಿಪ್ ಉರುಫ್ ಗಂಧದಗುಡಿಯ ಅಧಿಪತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ಯಸ್, ಎಷ್ಟು ದಿನ ಅಂತ ಕಾರ್ಮಿಕರು ಹಾಗೂ ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವುದನ್ನ ನೋಡಲಿ, ಇನ್ನೆಷ್ಟು ದಿನ ಅಂತ ಕಾಣದ ಕ್ರಿಮಿಗೆ ಹೆದರಿಕೊಂಡು ಕೂರಲಿ. ನೋ ನೋ.. ಇನ್ನೂ ಕೈಕಟ್ಟಿ ಕೂರೋದಕ್ಕೆ ಆಗಲ್ಲ ಭಂಡಧೈರ್ಯ ಮಾಡಿಬಿಡುವ ಅಂತ ಶಿವಣ್ಣ ತಮ್ಮ ಭಜರಂಗಿ ಟೀಮ್‌ಗೆ ಹೊಸ ಹುರುಪು ತುಂಬಿದ್ದಾರೆ. ಆಗಿದ್ದಾಗಲೀ, ಆಕಾಶ ತಲೆಕೆಳಗಾಗಲಿ ಭಜರಂಗಿ-2' ಸಿನಿಮಾನ ಬಿಡುಗಡೆ ಮಾಡೆಬಿಡೋಣ ಅಂತ ಅನ್ನದಾತರನ್ನು ಒಪ್ಪಿಸಿದ್ದಾರೆ.ಟಗರು ಚಿತ್ರದಲ್ಲಿ ಸುಬ್ಬಿ ಅಂಕಲ್‌ನ ಹೊಡೆದ ಹಾಗೇ’ ಕೊರೊನಾನ ಹೊಡೆದು ಬಿಸಾಕಬೇಕು. ಬಿಗ್‌ಸ್ಕ್ರೀನ್ ಗೆ ಲಗ್ಗೆ ಇಡಲೆಬೇಕು, ಸಾಗರೋಪಾದಿಯಲ್ಲಿ ಪ್ರೇಕ್ಷಕ ಮಹಾಶಯರನ್ನ ಚಿತ್ರಮಂದಿರಕ್ಕೆ ಕರೆತರಲೆಬೇಕು, ಬೆಳ್ಳಿತೆರೆಯನ್ನ ನಗಿಸಲೆಬೇಕು, ಬಾಕ್ಸ್ಆಫೀಸ್‌ನ ಬೆಚ್ಚಿಸಲೆಬೇಕು, ಅನ್ನದಾತರ ಖಜಾನೆಗೆ ಭರಪೂರ ಹಣ ಹರಿದುಬರುವಂತೆ ಮಾಡ್ಬೇಕು ಹೀಗಂತ ಭಜರಂಗಿ-2 ಬಳಗ ದೃಢ ಸಂಕಲ್ಪ ಮಾಡಿದೆ.

ಹಾಗಾದ್ರೆ, ಭಜರಂಗಿ ಅಖಾಡಕ್ಕೆ ಇಳಿಯೋದು ಯಾವಾಗ? ಬಿಗ್‌ಸ್ಕ್ರೀನ್ ಮೇಲೆ ಭಜರಂಗಿ-2 ಅಬ್ಬರ ಯಾವಾಗ ಶುರುವಾಗುತ್ತೆ? ಸಿಲ್ವರ್‌ಸ್ಕ್ರೀನ್ ಮೇಲೆ ಹೇಗಿರಲಿದೆ ಭಜರಂಗಿಯ ಘರ್ಜನೆ? ಈ ಪ್ರಶ್ನೆಯ ಜೊತೆಗೆ ಸರ್ಕಾರ ಇನ್ನೂ ಶೇಕಡ 100 ರಷ್ಟು ಅನುಮತಿ ಕೊಟ್ಟಿಲ್ಲವಲ್ಲಾ ಗುರು ಅದ್ಹೇಗೆ ರಿಲೀಸ್ ಮಾಡ್ತಾರೆ. 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಭಜರಂಗಿ-2 ಚಿತ್ರವನ್ನು ತೆರೆಗೆ ತರೋದಕ್ಕೆ ನಿರ್ಧಾರ ಮಾಡಿದ್ದಾರಾ? ಅಪ್‌ಕೋರ್ಸ್ ಸರ್ಕಾರ 100ರಷ್ಟು ಅನುಮತಿ ಕೊಡೋದಕ್ಕೆ ಇನ್ನೂ ತಡಮಾಡಿದ್ರೆ, ಕೊರೊನಾ ಮೂರನೇ ಅಟ್ಟಹಾಸ ನೋಡಿಕೊಂಡು ಚಿತ್ರಮಂದಿರಕ್ಕೆ 100 ರಷ್ಟು ಅನುಮತಿ ಕೊಡ್ತೀವಿ ಅಂತ ಏನಾದರೂ ಹೇಳಿದರೆ ಅಲ್ಲಿವರೆಗೂ ಕಾಯೋದಕ್ಕೆ ಆಗಲ್ಲ. ಹೀಗಾಗಿ50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಭಜರಂಗಿ-2 ಚಿತ್ರವನ್ನ ರಿಲೀಸ್ ಮಾಡುತ್ತಾರೆ. ಸೆಪ್ಟೆಂಬರ್ 1 ರಂದು ಟ್ರೇಲರ್ ರಿಲೀಸ್ ಮಾಡಿ ಸೆಪ್ಟೆಂಬರ್ 10 ರಂದು 250 ಥಿಯೇಟರ್ ಹಾಗೂ ಮೆಜೆಸ್ಟಿಕ್‌ನಲ್ಲೇ 3 ಥಿಯೇಟರ್‌ನಲ್ಲಿ ಭಜರಂಗಿ-೨ ಮೂವೀನಾ ಅದ್ದೂರಿಯಾಗಿ ಬಿಡುಗಡೆ ಮಾಡ್ತಾರೆ.

ಎ. ಹರ್ಷ ನಿರ್ದೇಶನದ ಭಜರಂಗಿ-2 ಚಿತ್ರದ ಮೇಲೆ ಸಾಗರದಷ್ಟು ನಿರೀಕ್ಷೆಯಿದೆ. ಎಂಟು ವರ್ಷಗಳ ನಂತರ ತಯ್ಯಾರಾಗಿರುವ ಸೀಕ್ವೆಲ್ ಸೆಟ್ಟೇರಿದಾಗಿನಿಂದಲೂ ಕೂತೂಹಲ ಕಾಯ್ದಿರಿಸಿಕೊಂಡು ಬಂದಿದೆ. ಭಜರಂಗಿ ಉರುಫ್ ಶಿವಣ್ಣ ಮಾತ್ರವಲ್ಲ ಸಿಗಾರ್ ಕೈಲಿಡಿದಿರುವ ಶ್ರುತಿ, ಕಾಟನ್ ಸೀರೆಯುಟ್ಟು ಕಣ್ಣಕ್ಕಿಳಿದಿರುವ ಭಾವನಾ, ಸೌರವ್ ಲೋಕಿ ಸೇರಿದಂತೆ ಪ್ರತಿ ಪಾತ್ರವೂ ಕೂಡ ಮೊದಲ ನೋಟದಲ್ಲೇ ಬೆಚ್ಚಿಬೀಳಿಸ್ತಿದೆ. ಟ್ರೈಲರ್ ಹಾಗೂ ಹಾಡು ಮೈ ಜುಮ್ ಎನ್ನಿಸಿದೆ. ಜಯ್ಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಕೋಟಿ ವೆಚ್ಚದಲ್ಲಿ ಶಿಲೆಯಂತೆ ತಯ್ಯಾರಾಗಿರುವ ಭಜರಂಗಿ-2 ಚಿತ್ರವನ್ನು ತೆರೆಮೇಲೆ ನೋಡಿ ಆನಂದಿಸಬೇಕಿದೆ. ಆ ಅದ್ಬುತ ಕ್ಷಣ ಕೆಲವೇ ದಿನಗಳಲ್ಲಿ ಬರಲಿದೆ. ದರ್ಶನ್-ಸುದೀಪ್-ಪುನೀತ್-ಯಶ್‌ಗಿಂತ ಮೊದಲೇ ಶಿವಣ್ಣ ಅಖಾಡಕ್ಕೆ ಇಳಿಯಲಿದ್ದಾರೆ. ಕೊರೊನಾದಿಂದ ಪಾತಾಳಕ್ಕೆ ಕುಸಿದಿರುವ ಸ್ಯಾಂಡಲ್‌ವುಡ್‌ನ ಎತ್ತಿಕಟ್ಟಲಿದ್ದಾರೆ. ಇಂಡಸ್ಟ್ರಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲಿದ್ದಾರೆ ಒನ್ ಅಂಡ್ ಒನ್ಲೀ ಶಿವಣ್ಣ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲವ್‌ಸ್ಟೋರಿಯಲ್ಲೊಂದು ಕ್ರಾಂತಿಕಾರಿ ಬದಲಾವಣೆ ಡಾರ್ಲಿಂಗ್‌ ಕೃಷ್ಣ ಸಿನಿಮಾಗೆ ಹೊಸ ತೇಜಸ್ಸು!

ಶಿವತೇಜಸ್‌ ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ

ಒಂದು ಸಿನಿಮಾ ಮಾಡೋಕೆ ಮುಖ್ಯವಾಗಿ ಬೇಕಾಗಿರೋದು ಸಿನಿಮಾ ಪ್ರೀತಿ. ಅದಷ್ಟೇ ಅಲ್ಲ, ಶ್ರದ್ಧೆ ಮತ್ತು ಪ್ರತಿಭೆ. ಇದನ್ನೇ ನಂಬಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟವರು ನಿರ್ದೇಶಕ ಶಿವತೇಜಸ್.‌ ಈಗಾಗಲೇ ಜೋರು ಪ್ರೀತಿಯ “ಮಳೆ” ಸುರಿಸಿದ ಶಿವತೇಜಸ್‌, ಸಿನಿಪ್ರೇಮಿಗಳ ಮನವನ್ನು ಪ್ರೀತಿಯಿಂದಲೇ ಒದ್ದೆ ಮಾಡಿದವರು. ಆ ನಂತರ “ಧೈರ್ಯಂ” ಮೂಲಕ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡ ಧೈರ್ಯದಲ್ಲೇ ಮತ್ತೊಂದು ಕ್ಯೂಟ್‌ ಅಂಡ್‌ ಪ್ಯೂರ್‌ ಲವ್‌ಸ್ಟೋರಿ ಹಿಂದೆ ನಿಂತಿದ್ದಾರೆ ಶಿವತೇಜಸ್.‌ ಹೌದು, ನಿರ್ದೇಶಕ ಶಿವತೇಜಸ್‌ ಈಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಎಂದಿಗಿಂತಲೂ ಜೋರು ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆವರ ಆಯ್ಕೆ ಕೂಡ ಹಾಗೆಯೇ ಇದೆ. ಹಾಗಾಗಿ, ಅವರ ಹೊಸ ಚಿತ್ರ ಜೋರು ಸೌಂಡು ಮಾಡುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

ಅಂದಹಾಗೆ, ಶಿವತೇಜಸ್‌ ಮಾಡ ಹೊರಟಿರುವ ಸಿನಿಮಾದ ಹೀರೋ ಬೇರಾರೂ ಅಲ್ಲ, “ಲವ್‌ ಮಾಕ್ಟೇಲ್‌” ಖ್ಯಾತಿಯ “ಡಾರ್ಲಿಂಗ್‌” ಕೃಷ್ಣ ಅವರದು. ನಿಜ, ಶಿವತೇಜಸ್‌ ಅವರು ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಚಿತ್ರದ ಪೂಜೆ ನೆರವೇರುತ್ತಿದೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ನಡೆಯುತ್ತಿದೆ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್‌ ಅಂದರೆ, ನಿರ್ದೇಶಕ ಶಿವತೇಜಸ್‌ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.

ಈ ಸುಮಂತ್‌ ಕ್ರಾಂತಿ ಹೆಸರು ಕೇಳಿದಾಕ್ಷಣ, ಥಟ್ಟನೆ ನೆನಪಾಗೋದೇ “ನಾನಿ” ಎಂಬ ಕಾಡುವ ಚಿತ್ರ. ಹೌದು, ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾದ ಸುಮಂತ್‌ ಕ್ರಾಂತಿ ಇದೀಗ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅದೀಗ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನ ಹಿಂದೆಯೇ ಅವರು “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್‌ ಸಿನಿಮಾ ಕೂಡ ಮಾಡಿದ್ದಾಗಿದೆ. ಅದರ ಹಿಂದೆಯೇ ಅವರು ಪ್ರಜ್ವಲ್‌ ದೇವರಾಜ್‌ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿರೋದು ಹೊಸ ಸುದ್ದಿಯೇನಲ್ಲ. ಈಗ ಶಿವತೇಜಸ್‌ ಅವರಿಗಾಗಿ “ಡಾರ್ಲಿಂಗ್‌” ಕೃಷ್ಣ ಅವರ ನಟನೆಯ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಇದು ನಿಜಕ್ಕೂ ಮೆಚ್ಚುವ ವಿಷಯ.

ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ಅವರು, ಈಗ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ. ಸುಮಂತ್‌ ಕ್ರಾಂತಿ ಅವರೂ ನಿರ್ದೇಶಕರಾಗಿರುವುದರಿಂದ, ಈ ಚಿತ್ರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಪೂರೈಸುತ್ತಾರೆ ಎಂಬ ಭವ್ಯ ಭರವಸೆ ಕೂಡ ನಿರ್ದೇಶಕ ಶಿವತೇಜಸ್‌ ಅವರಿಗಿದೆ. ಅದೇನೆ ಇರಲಿ, ಶಿವತೇಜಸ್ ಈ ಬಾರಿ ಒಂದೊಳ್ಳೆಯ ಕಥೆ ಹಿಡಿದು ಬರುತ್ತಿದ್ದಾರೆ. ತಮ್ಮ ಬ್ಯೂಟಿಫುಲ್‌ ಲವ್‌ಸ್ಟೋರಿ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಶಿವತೇಜಸ್‌ ಹೇಳಿದ್ದಿಷ್ಟು.

“ನಾನು “ಮಳೆ” ಬಳಿಕ ಮತ್ತೊಂದು ಪ್ಯೂರ್‌ ಬೊಂಬಾಟ್‌ ಲವ್‌ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಧರ್ಮಸ್ಥಳದಲ್ಲಿ ಆಗಸ್ಟ್‌ 27ರಂದು ಪೂಜೆ ನೆರವೇರಲಿದೆ. ಸುಮಂತ್‌ ಕ್ರಾಂತಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೂಲತಃ ನಿರ್ದೇಶಕರಾಗಿದ್ದರೂ, ನನ್ನ ಕಥೆ ನಂಬಿ ಹಣ ಹಾಕುತ್ತಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ತೀನಿ ಎಂಬ ಮಾತು ಕೊಡ್ತೀನಿ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ನನ್ನದೇ. ಇನ್ನು, ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರೆಂಬುದು ಸದ್ಯ ಗೌಪ್ಯ.

ಅಂತೆಯೇ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಸೇರಿದಂತೆ ಉಳಿದ ತಾಂತ್ರಿಕ ವರ್ಗದ ಆಯ್ಕೆ ಹಾಗು ಕಲಾವಿದರ ಆಯ್ಕೆ ನಡೆಯಬೇಕಿದೆ. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಶಿವತೇಜಸ್, “ಮಳೆ” ನೋಡಿದವರಿಗೆ ಒಂದೊಳ್ಳೆಯ ಫೀಲ್‌ ಇತ್ತು. ಈ ಸಿನಿಮಾ ಅದಕ್ಕಿಂತಲೂ ಬೊಂಬಾಟ್‌ ಫೀಲ್‌ ಕೊಡುತ್ತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಇಲ್ಲಿದೆ. ಲವ್‌ಸ್ಟೋರಿ ಅಂದರೆ, ಅದೇ ಪ್ರೀತಿ ಗೀತಿ ಇತ್ಯಾದಿ ಇರುತ್ತೆ. ಆದರೆ, ನಮ್‌ ಲವ್‌ಸ್ಟೋರಿಯ ರೇಂಜ್‌ ಬೇರೆ ರೀತಿ ಇರುತ್ತೆ. ಎಲ್ಲವನ್ನೂ ಈಗಲೇ ಹೇಳಿದರೆ, ಕುತೂಹಲ ಇರಲ್ಲ. ಸಿನಿಮಾ ಬಂದಮೇಲೆ ಖಂಡಿತವಾಗಿಯೂ ಎಲ್ಲಾ ವರ್ಗಕ್ಕೆ ಇಷ್ಟವಾಗುತ್ತೆ ಎಂಬ ಭರವಸೆ ಕೊಡ್ತೀನಿ ಅಂತಾರೆ ಶಿವತೇಜಸ್.‌

Categories
ಸಿನಿ ಸುದ್ದಿ

ನಟ ಕಿಚ್ಚ ಸುದೀಪ್ ಆಯ್ತು, ಈಗ ಪಾರ್ವತಿ ಟಾರ್ಗೆಟ್‌ :ʼಪಾರುʼ ಪಾರಿವಾಳದ ಮೇಲೆ ಅಹೋರಾತ್ರನ ಕಣ್ಣು !

ಅಹೋರಾತ್ರ ಎನ್ನುವ ಒಬ್ಬ ಸೋ ಕಾಲ್ಡ್‌ ಅಸ್ಡ್ರಾಲಜಿಸ್ಟ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅವರಿಗೆ ಕೆರೆದು ಹುಣ್ಣು ಮಾಡಿಕೊಳ್ಳುವ ಕಾಯಿಲೆ ಹಿಡಿದಿರುವ ಹಾಗನ್ಸುತ್ತೆ. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಎನ್ನುವ ಹಾಗೆ ಸ್ಯಾಂಡಲ್ವುಡ್‌ ಪಾಲಿಗೆ ಆಗಾಗ ಅವರು ಇಣುಕು ಹಾಕುತ್ತಿರುವುದು ವಿಚಿತ್ರವಾಗಿದೆ. ನಟ ಸುದೀಪ್‌ ಅವರಾಯ್ತು, ಈಗ ಅಹೋರಾತ್ರ ಕಣ್ಣು ಕಿರುತೆರೆಯ ಫೇಮಸ್‌ ನಟಿ ಮೋಕ್ಷಿತಾ ಪೈ ಮೇಲೆ ಬಿದ್ದಿದೆ. ಪಾರು ಸೀರಿಯಲ್‌ ಖ್ಯಾತಿಯ ನಟಿ ಇವ್ರು. ಇಷ್ಟಕ್ಕೂ ಇವ್ರು ಅಹೋರಾತ್ರ ಕೆಂಗಣ್ಣಿಗೆ ಗುರಿಯಾಗುವುದಕ್ಕೆ ಕಾರಣ ಎಂತ ಗೊತ್ತಾ, ಅದೇ ಆನ್‌ ಲೈನ್‌ ರಮ್ಮಿ. ಅಂದ ಹಾಗೆ, ಆನ್‌ ಲೈನ್‌ ರಮ್ಮಿ ಅಂದಾಕ್ಷಣ ನಿಮಗೆ ಈ ಸೋ ಕಾಲ್ಡ್‌ ಅಸ್ಟ್ರಾಲಜಿಸ್ಟ್‌ ಅಹೋರಾತ್ರ ಯಾರು ಅಂದಾಜು ಸಿಕ್ಕೇ ಸಿಕ್ಕಿರುತ್ತೆ. ಯಾಕಂದ್ರೆ, ನಟ ಕಿಚ್ಚ ಸುದೀಪ್‌ ಅವರ ವಿಚಾರದಲ್ಲಿ ಇತ್ತೀಚೆಗೆ ಸ್ಯಾಂಡಲ್‌ ವುಡ್‌ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ವ್ಯಕ್ತಿ ಇವ್ರು.

ಆನ್‌ಲೈನ್‌ ರಮ್ಮಿಗೆ ನಟ ಸುದೀಪ್‌ ಅವರು ಜಾಹೀರಾತಿಗೆ ಬ್ರಾಂಡ್‌ ಆಗಿದ್ದನ್ನು ವಿರೋಧಿಸಿ, ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಅರಚಾಡಿಕೊಂಡಿದ್ದ ವ್ಯಕ್ತಿ ಇವ್ರು. ಕೊನೆಗದು ಕೋರ್ಟ್‌ ಮೆಟ್ಟಿಲು ಏರಿತ್ತು. ಅಲ್ಲೂ ಸುದೀಪ್‌ ಅವರ ಪರ ತೀರ್ಪು ಬಂತು. ಅಷ್ಟಕ್ಕೂ ಸುಮ್ಮನಾಗದ ಈ ಅಹೋರಾತ್ರ ಮತ್ತೆ ಸೋಷಲ್‌ ಮೀಡಿಯಾದಲ್ಲಿ ತನ್ನದೇ ವಕ್ರಬಕ್ರ ಅರಚಾಟ ಶುರುವಿಟ್ಟುಕೊಂಡಾಗ, ಸುದೀಪ್‌ ಅಭಿಮಾನಿಗಳೇ ಮನೆ ಬಾಗಿಲಿಗೆ ಹೋಗಿ ಬುದ್ದಿ ಕಲಿಸಬೇಕಾಯಿತು ಅನ್ನೋದೆಲ್ಲವೂ ಹಳೇ ಸುದ್ದಿಯೇ ಬಿಡಿ. ಹಾಗಂತ ಇಷ್ಟಾಗಿಯೂ ಆತ ಸುಮ್ಮನಿದ್ದಾರೆ ಅಂತಂದುಕೊಳ್ಳುವಂತಿಲ್ಲ, ವಿವಾದವೋ, ವಿಚಿತ್ರವೋ ಸದಾ ಸುದ್ದಿಯಲ್ಲಿರಬೇಕೆನ್ನುವುದೊಂದು ಅವರಿಗೆ ಅಂಟಿಕೊಂಡ ವಿಚಿತ್ರ ಪಬ್ಲಿಸಿಟಿಯ ಕೊರೋನಾ ಅದು. ಅದೇ ಕಾರಣಕ್ಕೆ ಈಗ ಅಹೋರಾತ್ರನಿಗೆ ʼಪಾರುʼ ಸೀರಿಯಲ್‌ ಖ್ಯಾತಿಯ ಬಹುಜನಪ್ರಿಯ ನಟಿ ಮೋಕ್ಷಿತಾ ಪೈ ಟಾರ್ಗೆಟ್‌ ಆಗಿದ್ದು ವಿಚಿತ್ರ, ವಿಕ್ಷಿಪ್ತ.

ಮೋಕ್ಷಿತಾ ಪೈ ಮೇಲೆ ಈ ಅಹೋರಾತ್ರ ಕಣ್ಣು ಹಾಕಿದ್ದು ಯಾಕೆ ಗೊತ್ತಾ ? ಆನ್‌ ಲೈನ್‌ ನಲ್ಲಿನ ರಮ್ಮಿ ಆಟದ ಪ್ರಚಾರಕ್ಕೆ ಈಗ ಜನಪ್ರಿಯ ನಟಿ ಮೋಕ್ಷಿತಾ ಪೈ ಬ್ರಾಂಡ್‌ ಆಗ್ತಿದ್ದಾರೆ ಅನ್ನೋ ಸುದ್ದಿ ಇದೆ. ಸದ್ಯಕ್ಕೆ ಇದು ಕನ್‌ ಫರ್ಮ್‌ ಅಂತ ಯಾರಿಗೂ ಗೊತ್ತಿಲ್ಲ. ಆದರೆ ಅಂತಹದೊಂದು ವಾಸನೆ ಅಹೋರಾತ್ರರ ಮೂಗಿಗೆ ಬಡಿದೆಯಂತೆ. ಹೇಳಿ ಕೇಳಿ ಅವರು ಜ್ಯೋತಿಷಿ ಅಲ್ವಾ? ಕಾಲಜ್ಝಾನಿ ಥರ ಮುಂದೆ ಆಗುವುದೆಲ್ಲವೂ ಇವ್ರಿಗೆ ಗೊತ್ತಾಗಿ ಬಿಡುತ್ತಂತೆ. ಹಾಗಂತ ಕೊರೋನಾ ಯಾವಾಗ ಹೋಗುತ್ತೆ, ನೀವ್ಯಾಗ ಸೇಪ್‌ ಆಗಿ ಊರೆಲ್ಲಾ ತಿರುಗಾಡುತ್ತೀಯಾ ಅಂತ ಕೇಳೋದಿಕ್ಕೆ ಹೋಗ್ಬೇಡಿ, ಅಂತೆಲ್ಲವನ್ನು ಬಿಟ್ಟು ಬೇರೆಯವರ ಭವಿಷ್ಯ ಹೇಳೋ ಕಾಲಿಯೆ ಅದು. ಅಷ್ಟಾಗಿಯೂ ಅವ್ರೀಗೀಗ ಪಾರು ಸೀರಿಯಲ್‌ ಖ್ಯಾತಿಯ ಮೋಕ್ಷಿತಾ ಪೈ ರಮ್ಮಿ ಬ್ರಾಂಡ್‌ ಆಗಿ ಅವ್ರ ಕನಸಿಗೆ ಬಂದಂತಿದೆ. ಅದೇ ಕಾರಣಕ್ಕೆ ಟ್ವಿಟರ್‌ ನಲ್ಲಿ ಒಂದಷ್ಟು ವಾಂತಿ ಮಾಡಿಕೊಂಡಿದ್ದಾರೆ.

ʼ ನಿಮ್ಮ ಟ್ಯಾಲೆಂಟ್‌ ಪ್ರದರ್ಶನಕ್ಕೆ ಯಾರು ಅಡ್ಡಿ ಮಾಡಲ್ಲ, ಅದರಲ್ಲೂ ರಮ್ಮಿ ಗೇಮ್‌ ನಲ್ಲಿ, ನಿಮ್ಮ ನೆಚ್ಚಿನ ಭಾಷೆಯಲ್ಲಿಯೇ ರಮ್ಮಿ ಗೇಮ್‌ ಅನ್ನು ಎಂಜಾಯ್‌ ಮಾಡಿʼ ಎಂಬುದಾಗಿ ಮೋಕ್ಷಿತಾ ಪೈ ಹಾಕಿದ್ದ ಟ್ವಿಟ್‌ ಗೆ ಅಹೋರಾತ್ರ ರಿಯಾಕ್ಟ್‌ ಮಾಡಿ, ಈ ಸೆಲಿಬ್ರಿಟಿಗಳ ಮಾತು ನಂಬ್ವೇಡಿ ಅಂತ ಹೇಳಿದ್ಧಾರೆ. ಹಾಗೆಯೇ ವಿಜಯಕಂಠಕ ವಿಜಿ ಎಂಬಾತ ಮೋಕ್ಷಿತಾ ಪೈ ಅವರ ಟ್ವಿಟ್‌ ಗೆ ರಿಯಾಕ್ಟ್‌ ಮಾಡಿ, ನಿವೊಬ್ಬ ನಟಿ, ನಿಮಗೆ ಸ್ವಲ್ಪವಾದರೂ ಸಾಮಾಜಿಕ ಕಾಳಜಿ ಇರಬೇಕು, ಈ ರೀತಿಯ ಜೂಜು ಜಾಹೀರಾತು ಕೊಡ್ಬೇಡಿ. ನಿಮ್ಮಂತಹ ನಟ-ನಟಿಯರನ್ನು ಬೆಳೆಸಿದ್ದು ಜನ. ಆದರೆ, ಅದೇ ಜನರನ್ನು ಈ ಜೂಜಿನ ವಿಷ ಜಾಲಕ್ಕೆ ತಳ್ಳಲು ಹೊರಟಿರುವ ನಿಮಗೆಧಿಕ್ಕಾರವಿರಲಿʼಎಂಬುದಾಗಿ ಹೇಳಿದ್ದಾರೆ, ಇದನ್ನು ಅಹೋರಾತ್ರ ಷೇರ್‌ ಮಾಡಿ, ಅದನ್ನೇ ದೊಡ್ಡದಾಗಿ ವಿವಾದ ಮಾಡಲು ಹೊರಟಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿವೆ.ನಿಜ, ಆನ್‌ ಲೈನ್‌ ರಮ್ಮಿ ಅನ್ನೋದು ಜೂಜಾಟ. ಅದನ್ನು ಜನರಿಗೆ ಆಡಿ ಅಂತ ಸೆಲಿಬ್ರಿಟಿಗಳು ಹೇಳುವುದು ಕೂಡ ಸರಿಯಲ್ಲ. ಆದರೆ ಈ ಅಹೋರಾತ್ರ ತಾನು ಇನ್ನೇಲ್ಲೋ ಇದು. ಈ ರೀತಿ ಪ್ರಚಾರಕ್ಕಾಗಿ ಸೆಲಿಬ್ರಿಟಿಗಳನ್ನು ಹಿಡ್ಕೊಂಡೋ ಕಾಂಟ್ರೋ ವರ್ಷಿ ಮೂಲಕ ಪಬ್ಲಿಸಿಟಿ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ? ಇದು ಸಾರ್ವಜನಿಕರ ಪ್ರಶ್ನೆ.
ದೇಶಾದ್ರಿ , ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ನಾಲಿಗೆ ತೊದಲಿದರೇನು ಎದೆತುಂಬಿ ಹಾಡ್ತಾರೆ; ಹಳ್ಳಿಹೈದ ಸೂರ್ಯಕಾಂತ್ ಕಂಠಕ್ಕೆ ದೇವರೇ ಶರಣು !

ಜಗತ್ತು ಬೆಳಗುವ ಸೂರ್ಯ ಚಂದ್ರರೇ ತಮ್ಮ ಟೈಮ್ ಗೋಸ್ಕರ ಕಾಯ್ತಾರೆ. ಸೂರ್ಯನ ಶಿಫ್ಟ್ ಮುಗಿಯೋವರೆಗೂ ಚಂದ್ರ ಕಾಯಬೇಕು, ಚಂದ್ರ ಬಂದು ಹೋಗುವವರೆಗೂ ಸೂರ್ಯ ವೇಯ್ಟ್ ಮಾಡಬೇಕು. ಹೀಗಾಗಿ, ಎಲ್ಲರಿಗೂ ಒಂದು ಟೈಮ್ ಬರುತ್ತೆ ಆ ಟೈಮ್ ಗೋಸ್ಕರ ಕಾಯಬೇಕು ಅಷ್ಟೆ. ಈಗ ಸೂರ್ಯಕಾಂತ್ ಟೈಮ್

ಎದೆತುಂಬಿ ಹಾಡುವೆನು ಕಾರ್ಯಕ್ರಮ ನೋಡುಗರಿಗೆ ಸೂರ್ಯಕಾಂತ್ ಪರಿಚಯ ಆಗಿರುತ್ತೆ. ಈತನ ಹಿನ್ನಲೆಯ ಜೊತೆಗೆ ಈತನ ಕಂಠಕ್ಕಿರುವ ಶಕ್ತಿ ಎಂತಹದ್ದು ಎಂಬುದು ಕೂಡ ಗೊತ್ತಾಗಿರುತ್ತೆ. ಒಂದ್ವೇಳೆ, ಸೂರ್ಯಕಾಂತ್ ಸಂಗೀತ ಮಿಸ್‌ಮಾಡಿಕೊಂಡವರು ಈ ಸ್ಟೋರಿನಾ ನೋಡಿ.

ಭಗವಂತ ಎಲ್ಲರಿಗೂ ಎಲ್ಲಾನೂ ಕೊಡಲ್ಲ, ಏನಾದರೊಂದು ಕೊರತೆಯಿಟ್ಟೇ ಇಟ್ಟಿರುತ್ತಾನೆ. ಒಂದ್ವೇಳೆ, ಎಲ್ಲವನ್ನೂ ಕೊಟ್ಟು ಕರುಣಿಸಿದರೂ ಕೂಡ ಕೊರಗುವ ಮಂದಿಗೇನ್ ಕಮ್ಮಿಯಿಲ್ಲ. ತನ್ನ ಬಳಿ ಅದಿಲ್ಲ, ಇದಿಲ್ಲ ಅಂತ ಚಿಂತಿಸುತ್ತಾ ದೇವರಿಗೆ ಹಿಡಿಶಾಪ ಹಾಕುತ್ತಾರೆ. ಇವರುಗಳಲ್ಲಿ ಕೆಲವರು ಭಗವಂತ ಕೊಟ್ಟ ನ್ಯೂನತೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಭಗವಂತನಿಗೆ ಸೆಡ್ಡುಹೊಡೆಯುತ್ತಾರೆ. ಸಾಧನೆ ಮೂಲಕ ನ್ಯೂನತೆ ಕೊಟ್ಟು ಕಳುಹಿಸಿದ ಭಗವಂತ ಪಶ್ಚಾತಾಪ ಪಡುವಂತೆ ಮಾಡ್ತಾರೆ. ಸದ್ಯಕ್ಕೆ ಸೂರ್ಯಕಾಂತ್ ಭಗವಂತ ಪಶ್ಚಾತಾಪ ಪಡುವಂತೆ ಮಾಡಿದ್ದಾನೆ. ಯಾರು ಆ ಸೂರ್ಯಕಾಂತ್ ಅಂತೀರಾ. `ಎದೆತುಂಬಿ ಹಾಡುವೆನು'ಅಂಗಳದಲ್ಲಿ ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು’ ಅಂತ ಹಾಡಿ ಸ್ವರಸಾಮ್ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ, ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿರುವ ಗ್ರಾಮೀಣ ಗಾಯಕನೇ ಈ ಸೂರ್ಯಕಾಂತ್

ಸೂರ್ಯಕಾಂತ್ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದವರು. ಹೊಟ್ಟೆಗೆ ಹಿಟ್ಟಿಲ್ಲದ ಹೊತ್ತಲ್ಲೇ ಸಂಗೀತದ ಗೀಳು ಅಂಟಿಸಿಕೊಂಡ ಸೂರ್ಯಕಾಂತ್, ಹಸಿವನ್ನು ನುಂಗಿಕೊಂಡು ಕಲಬುರ್ಗಿಯ ಶ್ರೀ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತದ ಅ.ಆ.ಇ.ಈ ಅಕ್ಷರಾಭ್ಯಾಸ ಮಾಡಿದರು. ಕಣ್ಣಿಲ್ಲದ ಪಂಚಾಕ್ಷರಿ ಅಣ್ಣಿಗೇರಿ ಅಜ್ಜಯ್ಯನವರು ಸೂರ್ಯಕಾಂತ್‌ಗೆ ಶ್ರುತಿ-ಲಯ-ಸ್ವರ-ರಾಗ-ತಾಳ-ಮೇಳ ಹಿಡಿಯುವುದನ್ನು ಕಲಿಸಿಕೊಟ್ಟರು. ಇದೀಗ, ಸಂಗೀತ ಹೇಳಿಕೊಟ್ಟ ಗುರುವು ಮಾತ್ರವಲ್ಲ ಸಾಕ್ಷಾತ್ ದೇವರೆ ಮೆಚ್ಚುವಂತಹ ಗಾಯಕನಾಗಿ ಹೊರಹೊಮ್ಮಿದ್ದಾರೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.

ಹೌದು, ಸೂರ್ಯಕಾಂತ್ ಸಂಗೀತಕ್ಕೆ ಸಾಕ್ಷಾತ್ ದೇವರೆ ಶರಣಾಗಿದ್ದಾರೆ. ಮಾತು ಕಿತ್ಕೊಂಡು ಸೂರ್ಯನನ್ನು ಭೂಮಿಗೆ ಕಳುಹಿಸಿದ್ದಕ್ಕೆ ಇವತ್ತು ದೇವರು ಕೂಡ ಪಶ್ಚಾತಾಪ ಪಡುತ್ತಿರುತ್ತಾರೆ.ಆದರೆ ಮಾತು ಕಿತ್ತುಕೊಂಡ ಭಗವಂತ ಕಂಠಕ್ಕೆ ಬಲತುಂಬಿ ಕಳುಹಿಸಿದ್ದಾನೆ. ಹೀಗಾಗಿ, ಮಾತನಾಡುವಾಗ ತಡವರಿಸುವ ಸೂರ್ಯಕಾಂತ್, ಕಂಠಕ್ಕೆ ಕಿಚ್ಚು ಹಚ್ಚಿದಾಗ ತಡವರಿಸಲ್ಲ ಸಂಗೀತವನ್ನ ಅರ್ಧಕ್ಕೆ ನಿಲಿಸಲ್ಲ. ಇದನ್ನೆಲ್ಲಾ ನೋಡಿದಾಗ ಇದು ಹೇಗೆ ಸಾಧ್ಯ? ಇದೆಂತಾ ಪವಾಡನಪ್ಪಾ ಎಂದೆನಿಸುವುದು ಸಹಜ. ಆದರೆ ಇದಕ್ಕೆಲ್ಲಾ ಕಾರಣ ಸಂಗೀತ ಸರಸ್ವತಿ ಹಾಗೂ ಸೂರ್ಯಕಾಂತ್‌ಗೆ ಸಂಗೀತ ಮೇಲಿರುವ ಅತೀವವಾದ ಶ್ರದ್ದಾ-ಭಕ್ತಿ. ಆ ನಿಷ್ಟೆಗೆ- ಸಂಗೀತ ಸರಸ್ವತಿಯ ಆರಾಧನೆಗೆ `ಎದೆತುಂಬಿ’ ಹಾಡುವೆನು ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿದೆ. ನಾಲಿಗೆ ತಡವರಿಸಿದರೇನಂತೆ ಆತನ ಕಂಠದೊಳಗಿನ ಕಸುವಿಗೆ ಬೆಲೆಕೊಡಬೇಕೆಂದು ಕಲರ್ಸ್ ಕನ್ನಡ ಸಂಸ್ಥೆ ಸೂರ್ಯಕಾಂತ್‌ಗೆ ರತ್ನಗಂಬಳಿ ಹಾಕಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ.

ಸೂರ್ಯಕಾಂತ್ ಅಪ್ಪಟ ದೇಸಿ ಪ್ರತಿಭೆ-ಕಡುಬಡತನದ ಕುಟುಂಬಕ್ಕೆ ಸೇರಿದವ. ಜನ್ಮಕೊಟ್ಟ ಹೆತ್ತವ್ವ ಬಿಟ್ಟರೆ ಸರಸ್ವತಿ ತಾಯಿಯೇ ಎಲ್ಲಾ. ಹೀಗಾಗಿ, ದೇವರು ಮಾತು ಕಿತ್ಕೊಂಡು ಕಳುಹಿಸಿದರೂ ಸಂಗೀತ ಸರಸ್ವತಿ ಕೈಬಿಡದೇ ಸಲುಹಿತ್ತಿದ್ದಾಳೆ. ಹಗಲಿರುಳು ತನ್ನ ಜಪ ಮಾಡುವ ಸೂರ್ಯಕಾಂತ್‌ಗೆ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದ್ದಾಳೆ. ದೇವರು ಎಲ್ಲಾ ಕೊಟ್ಟರೂ ಕೂಡ ತನಗೆ ಅದನ್ನ ಕೊಟ್ಟಿಲ್ಲ ಇದನ್ನ ಕೊಟ್ಟಿಲ್ಲ ಅಂತ ಭಗವಂತನ ಮೇಲೆ ದೂರು ಹೇಳುತ್ತಾ ಕುಳಿತಿರುವ ಸೋಮಾರಿಗಳಿಗೆ, ನೀನು ಒಂದು ಪಾಠ ಆಗಬೇಕು ಹೋಗು ಮಗನೇ ಅಂತ ಅದ್ಬುತ ವೇದಿಕೆಯ ಮೇಲೆ ತಂದು ನಿಲ್ಲಿಸಿದ್ದಾಳೆ. ವರವಾಗಿ ಸಿಕ್ಕಂತಹ ಅವಕಾಶವನ್ನ ಅದ್ಬುತವಾಗಿ ಬಳಸಿಕೊಂಡ ಸೂರ್ಯಕಾಂತ್, `ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯವನ್ನು ತಲ್ಲಣಗೊಳಿಸಿದ್ದಾರೆ. ಕಣ್ಣೀರ ಕಡಲಲ್ಲಿ ತೇಲಿಸುವುದರ ಜೊತೆಗೆ ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಯಾವುದೋ ಸಿನಿಮಾ ಹಾಡನ್ನು ತೆಗೆದುಕೊಂಡು ಧೂಳೆಬ್ಬಿಸೋದು ದೊಡ್ಡದಲ್ಲ. ತತ್ವಪದಗಳನ್ನು ಆಯ್ಕೆಮಾಡಿಕೊಂಡು ಸುನಾಮಿ ಎಬ್ಬಿಸೋದು ದೊಡ್ಡದು. ಯಸ್,
ಕಡಕೋಳ ಮಡಿವಾಳಪ್ಪಜ್ಜನವರು ರಚನೆ ಮಾಡಿದ, ರವೀಂದ್ರ ಹಂದಿಗನೂರ ರಾಗಸಂಯೋಜನೆ ಮಾಡಿ ಕಂಠಕುಣಿಸಿದ ತತ್ವಪದವನ್ನು ಆಯ್ಕೆಮಾಡಿಕೊಂಡ ಸೂರ್ಯಕಾಂತ್, ಸಂಗೀತ ಲೋಕದ ದಿಗ್ಗಜರನ್ನ ಮಂತ್ರಮುಗ್ದಗೊಳಿಸಿದರು. ಮಾತನಾಡುವಾಗಲೇ ತೊದಲಿಸುವ ಸೂರ್ಯಕಾಂತ್ ಇನ್ನೇನು ಹಾಡ್ತಾನ್ರಿ ಅಂತ ಎದುರುನೋಡ್ತಿದ್ದ ಮಂದಿಯನ್ನ ಎದ್ದುನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿಬಿಟ್ಟರು. ಅದಕ್ಕೆ ಹೇಳೋದು ಡೋಂಟ್ ಅಂಡರೆಸ್ಟಿಮೇಟ್ ಪವರ್ ಆಫ್ ಹಳ್ಳಿಮ್ಯಾನ್' ಅಂತ.ಎನಿವೇ,ಮೊದಲ ಹಾಡಿನಲ್ಲೇ ಗೆದ್ದುಬೀಗಿದ್ದಾರೆ. ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯಕ್ಕೆ ಕಳೆತಂದಿದ್ದಾರೆ. ವ್ಯಕ್ತಿತ್ವದಲ್ಲೂ ಹಾಗೂ ಸಂಗೀತದಲ್ಲೂ ಮುಗ್ದತೆಯನ್ನ ಕಾಪಾಡಿಕೊಂಡು ಬಂದಿರುವ ಸೂರ್ಯಕಾಂತ್‌ನ ಬೆಳೆಸಬೇಕು ಅಂತ ನಿರ್ಣಾಯಕರಾದ ರಾಜೇಶ್ ಕೃಷ್ಣನ್, ವಿ ಹರಿಕೃಷ್ಣ, ರಘುದೀಕ್ಷಿತ್ ನಿರ್ಧಾರ ಮಾಡಿದ್ದಾರೆ. ಸೂರ್ಯಕಾಂತ್ ಸಂಗೀತದ ಲಯ-ಶ್ರುತಿ-ಹಿಡಿದು ಎಷ್ಟರ ಮಟ್ಟಿಗೆ ಬೆಳೆಯುತ್ತಾರೆ ಕಾದುನೋಡೋಣ ಅಲ್ಲವೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಲರ್ಸ್‌ ಕನ್ನಡದ ʼಎದೆ ತುಂಬಿ ಹಾಡುವೆನುʼ ರಿಯಾಲಿಟಿ ಶೋ ಬಗ್ಗೆ ವೀಕ್ಷರಲ್ಲಿರುವ ಆಕ್ಷೇಪ ಏನು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಮತ್ತೆ ʼಎದೆ ತುಂಬಿ ಹಾಡುವೆನುʼ ಸಿಂಗಿಂಗ್‌ ರಿಯಾಲಿಟಿ ಶೋ ಶುರುವಾಗಿದೆ. ಆರು ವರ್ಷಗಳ ನಂತರ ಕಲರ್ಸ್‌ ಕನ್ನಡ ಮತ್ತೆ ಈ ಕಾರ್ಯಕ್ರಮವನ್ನು ʼಸ್ವರ ಮಹಾನ್ವೇಷಣೆʼ ಹೆಸರಲ್ಲಿ ವೀಕ್ಷಕರ ಮನೆ ಬಾಗಿಲಿಗೆ ಮುಟ್ಟಿಸುತ್ತಿದೆ. ʼಈ ಟಿವಿʼ ಎನ್ನುವ ಜನಪ್ರಿಯ ಖಾಸಗಿ ಮನರಂಜನೆ ವಾಹಿನಿಯಲ್ಲಿ ಮೂಡಿ ಬಂದಿದ್ದ ಈ ರಿಯಾಲಿಟಿ ಶೋ, ಹೊಸ ಮೈಲುಗಲ್ಲು ಸೃಷ್ಟಿಸಿದ್ದೀಗ ಇತಿಹಾಸ. ಅದಕ್ಕೆ ಕಾರಣ ದೇಶದ ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ. ಕೆನರಾ ಬ್ಯಾಂಕ್‌ ಎದೆ ತುಂಬಿ ಹಾಡುವೆನು ಹೆಸರಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮಕ್ಕೆ ಅವರು ಮುಖ್ಯ ತೀರ್ಪುಗಾರರು. ವೇದಿಕೆಗೆ ಬಂದು ಹಾಡುತ್ತಿದ್ದ ಮಕ್ಕಳನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಅವರ ತಾಯಿ ಪ್ರೀತಿಗೆ ಸರಿ ಸಾಟಿ ಯಾರು ನಿಲ್ಲಲ್ಲು ಆಗದು. ಹಾಗಾಗಿಯೇ ಅದು ಭಾರೀ ಜನಪ್ರಿಯತೆ ಪಡೆದಿದ್ದ ಕಾರ್ಯಕ್ರಮ ಅಗಿದ್ದೆಲ್ಲವೂ ನಿಮಗೂ ಗೊತ್ತು. ಅಷ್ಟು ಜನಪ್ರಿಯತೆ ಪಡೆದಿದ್ದ ರಿಯಾಲಿಟಿ ಶೋ ಈಗ ಮತ್ತೆ ಶುರುವಾಗಿದ್ದು, ಸಹಜವಾಗಿಯೇ ಆ ಬಗ್ಗೆ ದೊಡ್ಡ ಕುತೂಹಲವೂ ಮೂಡಿದೆ.

ಹಾಡು ಹಳೆಯದಾದರೇನು, ಭಾವನವನವೀನ ಎನ್ನುವಂತೆ ʼಎದೆ ತುಂಬಿ ಹಾಡುವೆನುʼ ಕಾರ್ಯಕ್ರಮ ಈಗ ಮತ್ತೆ ಕನ್ನಡದ ಕಿರುತೆರೆ ವೀಕ್ಷಕರಿಗೆ ಸಂಗೀತದ ಸವಿರುಚಿ ಬಡಿಸಲು ಮುಂದಾಗಿದೆ. ಅನೇಕ ಕಾರಣಕ್ಕೆ ಅದು ಎಸ್‌ಪಿಬಿ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತಿದೆ. ಕಾಲಕ್ಕೆ ತಕ್ಕಂತೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಹೊಸ ರೂಪ, ಹೊಸ ನೋಟ ಸಿಕ್ಕಿದೆ. ಝಗಮಗಿಸುವ ದೊಡ್ಡ ವೇದಿಕೆ ಮತ್ತಷ್ಟು ರಂಗು ತುಂಬಿಕೊಂಡಿದೆ. ಎಸ್‌ಪಿಬಿ ಅವರು ಭೌತಿಕವಾಗಿ ಈಗಿಲ್ಲ ಎನ್ನುವುದನ್ನು ಬಿಟ್ಟರೆ ಅವರ ಇರುವಿಕೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಹಾಗೆ ಒಂದ್ರೀತಿ ಎಸ್‌ಪಿಬಿ ನೆರಳಲ್ಲಿಯೇ ಈ ಕಾರ್ಯಕ್ರಮ ಮೂಡಿಬರುತ್ತಿದೆಯಲ್ಲದೇ, ಎಸ್‌ಪಿಬಿ ಅವರ ದೊಡ್ಡ ಮೂರ್ತಿಯೂ ಆ ವೇದಿಕೆಯಲ್ಲಿದ್ದು, ಕಾರ್ಯಕ್ರಮ ಮತ್ತೆ ಜನರ ಭಾವಕ್ಕೆ ತಾಗುವಂತೆ ಮಾಡುವ ಕಸರತ್ತು ನಡೆದಿದೆ. ಆದರೆ ಆರಂಭದಲ್ಲಿಯೇ ಅದಕ್ಕೆ ಒಂದಷ್ಟು ಅಪಸ್ವರಗಳು ಕೇಳಿಬಂದಿವೆ.

ಕಲರ್ಸ್‌ ಕನ್ನಡ ಶೋಧಿಸಿ ತಂದ ಭರವಸೆಯ ಯುವ ಗಾಯಕ-ಗಾಯಕಿಯರ ದೃಷ್ಟಿಯಲ್ಲಿ ನೋಡಿದರೆ ಇದೊಂದು ಅದ್ಬುತ ಶೋ ಆಗುವುದರಲ್ಲಿ ಎರಡು ಮಾತಿಲ್ಲ, ಆದರೆ ಎದೆ ತುಂಬಿ ಹಾಡುವೆನು ಎನ್ನುವ ಬಹುದೊಡ್ಡ ಜನಪ್ರಿಯ ಶೋ ನಲ್ಲಿ ವೀಕ್ಷಕರು ಕಂಡ ಶ್ರದ್ದೆ, ಶಿಸ್ತು, ಸೈಲೆನ್ಸ್‌, ವಿನಯತೆ ಹಾಗೂ ಸಂಸ್ಕಾರದ ಛಾಯೆ ಇಲ್ಲಿ ಅಷ್ಟಾಗಿ ಕಾಣುತ್ತಿಲ್ಲ, ತೀರ್ಪುಗಾರರ ಅಬ್ಬರದ ಮಾತುಗಳೆಲ್ಲವನ್ನು ನೋಡುತ್ತಾ ಹೋದರೆ ಇದು ಉಳಿದ ಖಾಸಗಿ ಮನರಂಜನೆ ವಾಹಿನಿಗಳಲ್ಲಿ ಬರುವ ಮತ್ತೊಂದು ಸಿಂಗಿಂಗ್‌ ರಿಯಾಲಿಟಿ ಶೋಗೆ ಹೋಲಿಕೆ ಮಾಡಿದರೆ ಹೆಚ್ಚೇನು ವ್ಯತ್ಯಾಸ ಕಾಣದು ಎನ್ನುವ ಕಾಮೆಂಟ್ಸ್‌ ಸೋಷಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಎದೆ ತುಂಬಿ ಹಾಡುವೆನು ಎನ್ನುವ ಒಂದು ಕ್ಲಾಸಿಕ್‌ ಮೂಡ್‌ ನ ಶೋಗೆ ಈಗ ದೊಡ್ಡ ಕಮರ್ಷಿಯಲ್‌ ಟಚ್‌ ಸಿಕ್ಕಿದೆ. ಅದೇ ಇಲ್ಲಿ ಜನರ ಆಕ್ಷೇಪಕ್ಕೆ ಕಾರಣವಾಗಿದೆ.
ಯಾಕಂದ್ರೆ, ಎಸ್‌ ಪಿ ಬಿ ಅಂತಹ ದೊಡ್ಡ ಮಹಾನ್‌ ಭಾವ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ರೂಪುರೇಷೆ ಇದಿದ್ದೇ ಹಾಗೆ. ಒಮ್ಮೆ ಅದನ್ನು ನೋಡುತ್ತಾ ಕುಳಿತರೆ ಸಂಗೀತ ಕೇಳುತ್ತಲೇ ಅದರೊಂದಿಗೆ ಭಾವುನಾತ್ಮಕವಾಗಿ ಬೆಸೆದುಕೊಂಡು ನಮಗೆ ನಾವೇ ಕಳೆದುಹೋಗುವ ಬಹುದೊಡ್ಡ ಅನುಭವ ಅಲ್ಲಿತ್ತು. ಒಂದ್ರೀತಿಯ ಗೌರವ ತನಗೆ ತಾನೇ ಹುಟ್ಟಿಕೊಳ್ಳುತ್ತಿತ್ತು. ಕಾರ್ಯಕ್ರಮದ ಶಿಸ್ತು, ಶ್ರದ್ದೆ ಸೇರಿದಂತೆ ನೀಟ್‌ ಆದ ಅದರ ರೂಪುರೇಷೆಗಳೇ ಹಾಗಿದ್ದವು. ಆದರೆ ಇಲ್ಲಿ ಅಂತಹ ಯಾವುದೇ ಆಕರ್ಷಣೆ ಇಲ್ಲ ಎನ್ನುವುದನ್ನು ವೀಕ್ಷಕರೆ ಹಂಚಿಕೊಂಡಿದ್ದಾರೆ.

ಹೆಸರಾಂತ ಗಾಯಕ ಎಸ್ಪಿಬಿ ನಡೆಸಿಕೊಟ್ಟಿದ್ದ ʼಎದೆ ತುಂಬಿ ಹಾಡುವೆನುʼ ರಿಯಾಲಿಟಿ ಶೋ ಕನ್ನಡ ಕಿರುತೆರೆಗೇ ಒಂದು ಮೈಲುಗಲ್ಲು. ಅಂತಹ ಕಾರ್ಯಕ್ರಮದ ರೂಪಕಗಳನ್ನು ಇನ್ನಷ್ಟು ಮಾಡಬಹುದೇ ಹೊರತು ಅಂತಹದೇ ಕಾರ್ಯಕ್ರಮವನ್ನು ರೂಪಿಸುವುದು ಕಷ್ಟಸಾಧ್ಯ. ಆ ದೃಷ್ಟಿಯಲ್ಲಿ ಇದೊಂದು ಬೇರೆಯದೇ ರಿಯಾಲಿಟಿ ಶೋ ಎನ್ನುವುದು ನಿಜವೇ ಆದರೂ, ಇದು ಕೂಡ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಎನ್ನುವುದು ಅಷ್ಟೇ ಸತ್ಯ.ಹಾಗಾಗಿ ಅದರ ಘನತೆಗೆ ದಕ್ಕೆಯಾಗದಂತೆ ಕಾರ್ಯಕ್ರಮ ಮೂಡಿಬರುವಂತೆ ಮಾಡಬೇಕಿರುವ ಹೊಣೆ ಈಗ ಕಲರ್ಸ್‌ ಕನ್ನಡದ ಮೇಲಿದೆ ಅಂತ ವೀಕ್ಷಕರೇ ಹೇಳುತ್ತಿದ್ದಾರೆ. ಈಗ ಇಲ್ಲಿ ತೀರ್ಪುಗಾರರಾಗಿ ಎಸ್‌ ಪಿಬಿ ಅವರ ಮಾನಸ ಪುತ್ರ ಎಂದೇ ಗುರುತಿಸಿಕೊಂಡಿರುವ ಕನ್ನಡದ ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ರಾಜೇಶ ಕೃಷ್ಣನ್‌, ಹರಿಕೃಷ್ಣ, ರಘು ದೀಕ್ಷಿತ್‌ ಇದ್ದಾರೆ.ಮೂವರು ಕೂಡ ಈಗ ಕನ್ನಡದ ಟಾಪ್‌ ಮೋಸ್ಟ್‌ ಸಂಗೀತ ನಿರ್ದೇಶಕರೇ ಹೌದು. ಸುತ್ತಿ ಬಳಸಿ ಬಂದರೂ ಕಲರ್ಸ್‌ ಕನ್ನಡಕ್ಕೆ ಅಂತಿಮವಾಗಿ ಒಂದು ರೇಟಿಂಗ್‌ ಕಾರ್ಯಕ್ರಮ ಇದಾಗಬೇಕು. ಆದರಾಚೆ, ಇದಕ್ಕೊಂದು ಘನತೆ ತಂದುಕೊಡಬಹುದಾದ ಅವಕಾಶ ಈ ಮೂವರು ತೀರ್ಪುಗಾರರ ಕೈಯಲ್ಲಿದೆ. ಮುಂದೆ ಅವರಿಂದ ಅದು ಸಾಧ್ಯವಾಗುತ್ತಾ? ಕಾದು ನೋಡಬೇಕಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕೊರೋನಾ ಹೋಗುತ್ತೆ ಮೊದಲು ಈ ಕೆಲಸ ಮಾಡಿ ಅಂತ ಕ್ರೇಜಿಸ್ಟಾರ್ ಕೊಟ್ರು ಅದ್ಬುತ ಸಲಹೆ !

ಕೊರೋನಾ ಯಾವಾಗ ಹೋಗುತ್ತೆ ? ಈ ಪ್ರಶ್ನೆಗೆ ಉತ್ತರ ಯಾರಿಗಾದ್ರು ಗೊತ್ತಾ ? ಖಂಡಿತಾ ಇಲ್ಲ. ಯಾಕಂದ್ರೆ, ಕಳೆದ ಒಂದು- ಒಂದೂವರೆ ವರ್ಷದಿಂದ ಇಡೀ ಜಗತ್ತೇ ಕೊರೋನಾ ಮಹಾಮಾರಿಯ ಅಟ್ಟಹಾಸದಲ್ಲಿ ನಲುಗಿ ಹೋಗಿದೆ. ಒಂದನೇ ಅಲೆ ಮುಗಿದು, ಈಗ ಎರಡನೇ ಅಲೆ ಇದೆಯಂತೆ. ಜನರೆಲ್ಲಾ ಕೊರೋನಾ ಎರಡನೇ ಅಲೆಯೂ ಮುಗಿದಿದೆ ಅಂದ್ಕೊಂಡಿದ್ದಾರೆ. ಆದರೆ, ಸರ್ಕಾರ ಹೇಳುವ ಪ್ರಕಾರ ಇನ್ನು ಎರಡನೇ ಅಲೆಯೇ ಇದೆ. ಇದು ಮುಗಿದ ನಂತ್ರ ಮೂರನೇ ಅಲೆ ಬರುತ್ತೆ ಅಂತ ಹೇಳಲಾಗುತ್ತಿದೆ. ಅಲ್ಲಿಗೆ ಈ ಕೊರೋನಾ ಇನ್ನೇಷ್ಟು ದಿನ ಇರುತ್ತೆ ? ಯಾವಾಗ ಹೋಗುತ್ತೆ ? ಅಂದಾಜು ಕೂಡ ಮಾಡಲಾಗುತ್ತಿಲ್ಲ. ಕೊರೋನಾ ಬಗ್ಗೆ ಎಚ್ಚರಿಕೆ ನೀಡುತ್ತಿರುವ ತಜ್ಜರಿಗೂ ಇದು ಗೊತ್ತಿಲ್ಲ. ಆದರೆ, ಕೊರೋನಾ ಯಾವಾಗ ಹೋಗುತ್ತೆ ಎನ್ನುವುದರ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಭವಿಷ್ಯ ನುಡಿದ್ದಾರೆ. ಅವರು ಹೇಳುವ ಪ್ರಕಾರ ಕೊರೋನಾ ತಾನಾಗಿಯೇ ಹೋಗೋದಿಲ್ಲ, ಅದನ್ನು ಜನರೇ ಹೋಗಿಸಬೇಕಂತೆ. ಅದು ಹೇಗೆ ಅಂತ ಅವ್ರು ಕೊಡುವ ಕಾರಣ ಇದು.

‘ಎಲ್ಲರೂ ಕೊರೋನಾ ಕೊರೋನಾ ಅಂತ ಮನೆ ಹಿಡಿದು ಕುಳಿತಿದ್ದಾರೆ. ಏನಾಗುತ್ತೋ ಎನ್ನುವ ಭಯ ಅವರನ್ನು ಆವರಿಸಿಕೊಂಡಿದೆ. ಅದೇ ಕಾರಣಕ್ಕೆ ಎಲ್ಲ ಉದ್ಯಮವೋ ಬಿದ್ದು ಹೋಗಿದೆ. ಇದೆಲ್ಲ ಸರಿ ಆಗಬೇಕಾದ್ರೆ ಕೊರೋನಾ ಹೋಗಬೇಕು. ಕೊರೋನಾ ಹೋಗಬೇಕಾದ್ರೆ ಜನರು ಭಯ ಬಿಡಬೇಕು. ಭಯ ಬಿಟ್ಟು ಫೀಲ್ಡಿಗಿಳಿದರೆ ಕೊರೋನಾ ತಾನಾಗಿಯೇ ಹೊಗುತ್ತೆ’ ಅಂತ ನಟ ರವಿಚಂದ್ರನ್ ಹೇಳ್ತಾರೆ.

‘ದೃಶ್ಯ 2’ ಚಿತ್ರದ ಸುದ್ದಿಗೋಷ್ಠಿಯ ಮೂಲಕ ಮೊನ್ನೆಯಷ್ಟೇ ನಟ ರವಿಚಂದ್ರನ್ ಮಾಧ್ಯಮದ ಮುಂದೆ ಬಂದಿದ್ದರು. ಮಾಧ್ಯಮದವರನ್ನು ನೋಡಿ ಅವರಿಗೆ ಶಾಕ್. ಯಾಕಂದ್ರೆ ಎಲ್ಲರೂ ಕೂಡ ಮಾಸ್ಕ್ ಹಾಕ್ಕೊಂಡೆ ಅಲ್ಲಿಗೆ ಹಾಜರಾಗಿದ್ದರು. ಸರ್ಕಾರದ ರೂಲ್ಸು- ಗಿಲ್ಸು ಅದೆಲ್ಲ ತಮಗ್ಯಾಕೆ ಬೇಕು ಅಂತ ಆ ಬಗ್ಗೆ ಮಾತನಾಡದೆ ಮೊದಲು ‘ದೃಶ್ಯ 2’ ಸಿನಿಮಾದ ಕುರಿತು ಮಾತನಾಡ ಹೊರಟರು. ಮಾತಿನ ಮಧ್ಯೆ ಸಿನಿಮಾ ರಿಲೀಸ್ ಮಾತು ಬಂತು. ಹಾಗೆಯೇ ಈಗಿರುವ ಚಿತ್ರಮಂದಿರಗಳ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದರು. ಎಲ್ಲವೂ ಸರಿ ಹೋಗಬೇಕಾದರೆ, ಚಿತ್ರಮಂದಿರಗಳು ಮೊದಲಿನಂತೆ ಒಪನ್ ಆಗ್ಬೇಕು, ಚಿತ್ರಮಂದಿರಗಳಿಗೆ ಜನರು ಬರಬೇಕು. ಅಲ್ಲಿಗೆ ಜನ ಬರಬೇಕಾದರೆ ಜನರಲ್ಲಿ ಕೊರೋನಾ ಭಯ ಹೋಗಬೇಕು, ಆಗ ಮಾತ್ರ ಚಿತ್ರೋದ್ಯಮಕ್ಕೆ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂದರು ಕ್ರೇಜಿಸ್ಟಾರ್.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ತೂಕ ಹೆಚ್ಚಿಸಿಕೊಂಡ ನಟರ ಪೈಕಿ ಡ್ರಗ್ಸ್ ದಾಸರ‍್ಯಾರು ? ʼಬಾಡಿ ಶೇಪ್ ನೋಡ್ರಿ’ ಸಂಬರ್ಗಿ ಸುಳಿವು ಕೊಟ್ರು !

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್‌ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್‌ ಹೌಸ್‌ ಗಳಲ್ಲಿಮಿಡ್‌ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆಿ.ಇದು ಪ್ರಶಾಂತ್‌ ಸಂಬರಗಿ ಬಿಚ್ಚಿಟ್ಟ ರೋಚಕ ಕಥೆ

ಸ್ಯಾಂಡಲ್‌ವುಡ್‌ಗೆ ಸ್ಯಾಂಡಲ್‌ವುಡ್ಡೇ ಬೆಚ್ಚುವಂತಹ ಬೆಳವಣಿಗೆಗಳು ಆಗುತ್ತಿವೆ. ಸಂಜನಾ-ರಾಗಿಣಿ ಡ್ರಗ್ಸ್ ಸೇವನೆ ದೃಢಪಟ್ಟ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಸಂಬರ್ಗಿ ಮತ್ತೊಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್ ಅಂಗಳದಲ್ಲಿ ನಟಿಮಣಿಯರು ಮಾತ್ರ ಡ್ರಗ್ಸ್ ವ್ಯಸನಿಗಳಾಗಿದ್ದಾರೆಂದು ತಿಳಿದುಕೊಳ್ಳಬೇಡಿ, ನಟರುಗಳು ಕೂಡ ಮಾದಕ ದ್ರವ್ಯಕ್ಕೆ ಮಾರುಹೋಗಿದ್ದಾರೆ. ಮತ್ತಿನ ಮತ್ತಲ್ಲಿ ತೇಲಾಡುತ್ತಾ, ಕೂಗಾಡುತ್ತಾ, ಕಿರುಚಾಡುತ್ತಾ, ಅರಚಾಡುತ್ತಾ, ಸುಮ್ ಸುಮ್ಮನೇ ನಗುತ್ತಾ, ಆವೇಶಭರಿತ ಮಾತುಗಳನ್ನಾಡುತ್ತಾ, ಸಮ್ ಟೈಮ್ಸ್ ಸಪ್ಪೇ ಮೋರೆ ಹಾಕಿಕೊಳ್ಳುತ್ತಾ, ಸಮ್ ಟೈಮ್ಸ್ ಖುಷಿ ಖುಷಿಯಿಂದ ಜಿಗಿದಾಡುತ್ತಾ ಮಾದಕಲೋಕದಲ್ಲಿ ಮೆರೆಯುವ ನಟರುಗಳು ನಮ್ಮಲ್ಲಿದ್ದಾರೆ. ಅವರೆಲ್ಲರ ಅಸಲಿಯತ್ತು ಒಂದಲ್ಲಾ ಒಂದು ದಿನ ಬಟಾಬಯಲಾಗುತ್ತೆ ಎನ್ನುವ ಪ್ರಶಾಂತ್ ಸಂಬರ್ಗಿ, ಸಿನಿಲಹರಿ ಜೊತೆ ಮಾತನಾಡುತ್ತಾ ತೂಕ ಹೆಚ್ಚಿಸಿಕೊಂಡಿರುವ ನಟರುಗಳಿಗೂ- ಡ್ರಗ್ಸ್ ಗೂ ಇರುವ ನಂಟೇನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್‌ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್‌ ಹೌಸ್‌ ಗಳಲ್ಲಿಮಿಡ್‌ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆ. ಡ್ರಗ್ಸ್ ವ್ಯಾಪಾರ ದಂಧೆ-ದುಡಿಮೆ ಮಾಡುವ ಮನಸ್ಥಿತಿ ನಟರಿಗಿಲ್ಲ, ಆದರೆ ಮೋಜು ಮಸ್ತಿಗೇನು ಕಮ್ಮಿಯಿಲ್ಲ ಎನ್ನುವ ಪ್ರಶಾಂತ್, ಯಾವ್ಯಾವ ನಟರು ಡ್ರಗ್ಸ್ ವ್ಯಸನಿಯಾಗಿದ್ದಾನೆಂದು ನಾನು ಮಾಧ್ಯಮದ ಮುಂದೆ ಓಪನ್ ಆಗಿ ಹೇಳೋದಕ್ಕೆ ಆಗದೇ ಇರ‍್ಬೋದು ಆದರೆ ಒಂದೇ ಒಂದು ಸುಳಿವನ್ನ ಕೊಡ್ತೀನಿ ಅಂತ ಕೊಟ್ಟಿದ್ದಾರೆ. ನೀವುಗಳೇ ಆ ನಟರು ಯಾರೆಂದು ಪತ್ತೆಹಚ್ಚಬಹುದು ಹೀಗಂತ ಮಾತು ಶುರುಮಾಡಿದ ಪ್ರಶಾಂತ್ ಸಂಬರ್ಗಿಯವರು, ಕಳೆದ ಎರಡು ವರ್ಷಗಳಲ್ಲಿ ಯಾವ ನಟರ ತೂಕ ಹೆಚ್ಚಾಗಿದೆಯೋ ಆ ನಟರು ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದಾರೆಂದು ಅರ್ಥ ಎಂದಿದ್ದಾರೆ. ಸಂಬರ್ಗಿಯವರ ಈ ಸ್ಟೇಟ್ಮೆಂಟ್ ಕಿವಿಗೆ ಬಿದ್ಮೇಲೆ ಸ್ಯಾಂಡಲ್‌ವುಡ್‌ನ ಒಂದಿಷ್ಟು ನಟರುಗಳು ಕಣ್ಮುಂದೆ ಬಂದು ನಿಲ್ತಾರೆ. ಹಾಗೇ ಬಂದುನಿಂತ ನಟರುಗಳು ದಪ್ಪ ಇದ್ದಾರೆ ಎಂದ ಮಾತ್ರಕ್ಕೆ ಅವರು ಡ್ರಗ್ಸ್ ದಾಸರಾಗಿದ್ದಾರೆಂದು ಒಪ್ಪಿಕೊಳ್ಳುವುದಕ್ಕೆ ಆಗಲ್ಲ. ಯಾಕಂದ್ರೆ, ನಟರುಗಳು ದಪ್ಪ ಆಗೋದು.. ಸಣ್ಣ ಆಗೋದು ಮಾಮೂಲಿ.

ಸಿನಿಮಾಗೋಸ್ಕರ ನಟರುಗಳು ಬದಲಾಗುತ್ತಾರೆ, ಬದಲಾಗಬೇಕಾಗುತ್ತದೆ. ಪಾತ್ರಕ್ಕೆ ಜೀವ ತುಂಬಲು ಕೆಲವೊಮ್ಮೆ ತೂಕ ಹೆಚ್ಚಿಸಿಕೊಳ್ಳಬೇಕಾಗು ತ್ತದೆ, ಕೆಲವೊಮ್ಮೆ ತೂಕ ಇಳಿಸಿಕೊಳ್ಳಬೇಕಾಗುತ್ತದೆ. ಒಂದು ಸಿನಿಮಾಗೆ ಕಮಿಟ್ ಆದ್ಮೇಲೆ ಆ ಸಿನಿಮಾದ ಪಾತ್ರ ಎರೆಡೆರಡು ಶೇಡ್ ಇದ್ದಲ್ಲಿ, ಆ ಪಾತ್ರ ತೂಕವನ್ನು ಹೆಚ್ಚು ಕಡಿಮೆ ಕೇಳಿದ್ದಲ್ಲಿ, ಆ ಪಾತ್ರದ ಚಿತ್ರೀಕರಣ ದ ಸಮಯ ವರ್ಷಗಳು ಹಿಡಿದಲ್ಲಿ ಆ ಚಿತ್ರದ ನಾಯಕನ ದೇಹದ ಹೆಚ್ಚುಕಡಿಮೆಯಾಗುತ್ತೆ. ದಪ್ಪಗಾಗೋದಕ್ಕೆ ಹಾಗೂ ಸಣ್ಣಗಾಗೋದಕ್ಕೆ ಜಿಮ್ ಬಾಗಿಲು ಬಡಿಯುತ್ತಾರೋ, ಫಿಟ್ನೆಸ್ ಟ್ರೈನರ್‌ಗಳ ಸಲಹೆಯಂತೆ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ತಾರೋ ಅಥವಾ ಯಾವುದು ಬೇಡ ಗುರು ಅಂತ ನಾಲ್ಕು ಗೋಡೆಯ ಮಧ್ಯೆ ದೇಹದಂಡಿಸ್ತಾರೋ ಗೊತ್ತಿಲ್ಲ. ಒಟ್ನಲ್ಲಿ, ಸಿನಿಮಾಗೋಸ್ಕರ ಕಟ್ಟುಮಸ್ತಾಗಿ ಮೈಹುರಿಗೊಳಿಸಿಕೊಂಡು ಅಖಾಡಕ್ಕೆ ಧುಮುಕುತ್ತಾರೆ. ಕಮಿಟ್ ಆದಂತೆ ಆ ಮೂವೀನಾ ಮುಗಿಸಿಕೊಡ್ತಾರೆ, ಅನ್ನದಾತರನ್ನ ಉಳಿಸ್ತಾರೆ, ಚಿತ್ರರಂಗವನ್ನ ಬೆಳೆಸ್ತಾರೆ, ಕೋಟ್ಯಾಂತರ ಪ್ರೇಕ್ಷಕರನ್ನ ರಂಜಿಸ್ತಾರೆ. ಇದೆಲ್ಲಾ ಹೊರಜ ಗತ್ತಿಗೆ ಗೊತ್ತಿದೆ. ಇದರಾಚೆಗಿರುವ ಸತ್ಯಾಸತ್ಯತೆ ಸಾಮಾನ್ಯರಿಗೆ ಗೊತ್ತಿಲ್ಲ ಅಷ್ಟು ಸುಲಭವಾಗಿ ತಿಳಿಯೋದು ಇಲ್ಲ ಬಿಡಿ.

ಹಾಗಾದ್ರೆ, ಯಾವುದು ಸತ್ಯ? ಯಾವುದು ಸುಳ್ಳು? ಗೊತ್ತಿಲ್ಲ. ಆದರೆ, ಕೆಲವು ಸತ್ಯ ನನಗೆ ಗೊತ್ತಿದೆ ಎನ್ನುವ ಪ್ರಶಾಂತ್ ಸಂಬರ್ಗಿಯವರು ಕೆಲವು ನಟರು ಸಿನಿಮಾಗಾಗಿ ದಪ್ಪ ಆಗಿದ್ದಾರೆ ಅಂತ ನೀವು ತಿಳಿದುಕೊಂಡಿದ್ದೀರಾ ಅಷ್ಟೇ. ಆದರೆ, ಅವರುಗಳು ದಪ್ಪ ಆಗಿರುವುದು ಮೂವಿಗೋಸ್ಕರ ಅಲ್ಲ, ಬದಲಾಗಿ ಡ್ರಗ್ಸ್ ಅಡಿಕ್ಟ್ ಆಗಿ ತೂಕ ಹೆಚ್ಚಾಗಿದೆ ಎಂದಿದ್ದಾರೆ. ಡ್ರಗ್ಸ್ ನಲ್ಲಿ ಅಪ್ ಡ್ರಗ್ಸ್ ಹಾಗೂ ಡೌನ್ ಡ್ರಗ್ಸ್ ಎನ್ನುವ ಎರಡು ರೀತಿಯದಿದ್ದೇ. ಅಪ್ ಡ್ರಗ್ಸ್ ನಲ್ಲಿ ಗಾಂಜಾ ಬರುತ್ತೆ. ಇದು ತುಂಬಾ ಖುಷಿಪಡಿಸುತ್ತೆ. ಹೊಟ್ಟೆ ತುಂಬಾ ಊಟ ಮಾಡ್ತಾರೆ, ಸದಾ ಹ್ಯಾಪಿಯಾಗಿರುತ್ತಾರೆ. ಸುಮ್ ಸುಮ್ನೆ ನಗ್ತಾರೆ, ಕಿರುಚಾಡುತ್ತಾರೆ, ಹೊಡೆದಾಡುತ್ತಾರೆ, ಆವೇಶಭರಿತ ಮಾತುಗಳನ್ನಾಡುತ್ತಾರೆ. ಅದೇ, ರೀತಿ ಡೌನ್ ಡ್ರಗ್ಸ್ ಅಡಿಕ್ಟ್ ಆದ ನಟರುಗಳು ಇದ್ದಾರೆ. ಕೆಮಿಕಲ್ ಡ್ರಗ್ಸ್ನ ಸೇವನೆ ಮಾಡಿಕೊಂಡು ಗರ ಬಡಿದವರ ಥರ ಇರುತ್ತಾರೆ. ಟೈಮ್ ಟು ಟೈಮ್ ಊಟ ಮಾಡಲ್ಲ, ನಿದ್ದೆ ಮಾಡಲ್ಲ. ಒಂಟಿಯಾಗಿ ಅಲೆಮಾರಿ ಥರ ಇರುವುದು ನಿಲ್ಲಿಸಿಲ್ಲ ಅವರು ಹೀಗಂತ ಪ್ರಶಾಂತ್ ಹಿಂಟ್ ಮೇಲೆ ಹಿಂಟ್ ಕೊಟ್ಟಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಪ್ರಶಾಂತ್ ಸಂಬರ್ಗಿಯವರು, ಗಾಂಜಾ ಸೇವನೆ ಮಾಡಿದವರು ಹೆಚ್ಚು ಊಟ ಮಾಡ್ತಾರೆ, ನಾನ್ ವೆಜ್ ತಿನ್ನುತ್ತಾರೆ ಇದರಿಂದ ಐದಲ್ಲ ಹತ್ತಲ್ಲ ೧೫ ಕೆಜಿ ತೂಕ ಜಾಸ್ತಿಯಾಗುತ್ತೆ ಎಂದಿದ್ದಾರೆ. ನಾನು ಕಾಗಕ್ಕ ಗುಬ್ಬಕ್ಕ ಸ್ಟೋರಿ ಹೇಳುತ್ತಿಲ್ಲ ಕಳೆದ ಎರಡು ವರ್ಷದಿಂದ ಡ್ರಗ್ಸ್ ದಾಸರ ಮೇಲೆ ವರ್ಕ್ ಮಾಡಿದ್ದೇನೆ. ೧೫೦ ರಿಯಾಬಿಲಿಟೇಷನ್ ಮಾಡಿ ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಮಾದಕ ವ್ಯಸನಕ್ಕೆ ಒಳಗಾದವರ ಮನಸ್ತಿತಿ ಹೇಗಿರುತ್ತೆ ಎಂದು ಅರಿತುಕೊಂಡಿದ್ದೇನೆ. ನಾನು ಯಾರೊಬ್ಬರನ್ನೂ ಟಾರ್ಗೆಟ್ ಮಾಡಿ ಹೇಳುತ್ತಿಲ್ಲ. ಸಮಾಜಕ್ಕೆ ಕಂಟಕವಾಗಿರುವ ಡ್ರಗ್ಸ್ ಮಾಫಿಯಾ ತೊಡೆದು ಹಾಕುವುದಕ್ಕೆ ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ. ತನಗೆ ಗೊತ್ತಿರುವ ಹೆಚ್ಚಿನ ಮಾಹಿತಿಯನ್ನ ಪೊಲೀಸರಿಗೆ ಒಪ್ಪಿಸಲಿದ್ದೇನೆ ಎಂದಿದ್ದಾರೆ ಪ್ರಶಾಂತ್.


ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!