ಕನ್ನಡ ಕಿರುತೆರೆಯಲ್ಲಿ ಮತ್ತೆ ʼಎದೆ ತುಂಬಿ ಹಾಡುವೆನುʼ ಸಿಂಗಿಂಗ್ ರಿಯಾಲಿಟಿ ಶೋ ಶುರುವಾಗಿದೆ. ಆರು ವರ್ಷಗಳ ನಂತರ ಕಲರ್ಸ್ ಕನ್ನಡ ಮತ್ತೆ ಈ ಕಾರ್ಯಕ್ರಮವನ್ನು ʼಸ್ವರ ಮಹಾನ್ವೇಷಣೆʼ ಹೆಸರಲ್ಲಿ ವೀಕ್ಷಕರ ಮನೆ ಬಾಗಿಲಿಗೆ ಮುಟ್ಟಿಸುತ್ತಿದೆ. ʼಈ ಟಿವಿʼ ಎನ್ನುವ ಜನಪ್ರಿಯ ಖಾಸಗಿ ಮನರಂಜನೆ ವಾಹಿನಿಯಲ್ಲಿ ಮೂಡಿ ಬಂದಿದ್ದ ಈ ರಿಯಾಲಿಟಿ ಶೋ, ಹೊಸ ಮೈಲುಗಲ್ಲು ಸೃಷ್ಟಿಸಿದ್ದೀಗ ಇತಿಹಾಸ. ಅದಕ್ಕೆ ಕಾರಣ ದೇಶದ ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ. ಕೆನರಾ ಬ್ಯಾಂಕ್ ಎದೆ ತುಂಬಿ ಹಾಡುವೆನು ಹೆಸರಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮಕ್ಕೆ ಅವರು ಮುಖ್ಯ ತೀರ್ಪುಗಾರರು. ವೇದಿಕೆಗೆ ಬಂದು ಹಾಡುತ್ತಿದ್ದ ಮಕ್ಕಳನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಅವರ ತಾಯಿ ಪ್ರೀತಿಗೆ ಸರಿ ಸಾಟಿ ಯಾರು ನಿಲ್ಲಲ್ಲು ಆಗದು. ಹಾಗಾಗಿಯೇ ಅದು ಭಾರೀ ಜನಪ್ರಿಯತೆ ಪಡೆದಿದ್ದ ಕಾರ್ಯಕ್ರಮ ಅಗಿದ್ದೆಲ್ಲವೂ ನಿಮಗೂ ಗೊತ್ತು. ಅಷ್ಟು ಜನಪ್ರಿಯತೆ ಪಡೆದಿದ್ದ ರಿಯಾಲಿಟಿ ಶೋ ಈಗ ಮತ್ತೆ ಶುರುವಾಗಿದ್ದು, ಸಹಜವಾಗಿಯೇ ಆ ಬಗ್ಗೆ ದೊಡ್ಡ ಕುತೂಹಲವೂ ಮೂಡಿದೆ.
ಹಾಡು ಹಳೆಯದಾದರೇನು, ಭಾವನವನವೀನ ಎನ್ನುವಂತೆ ʼಎದೆ ತುಂಬಿ ಹಾಡುವೆನುʼ ಕಾರ್ಯಕ್ರಮ ಈಗ ಮತ್ತೆ ಕನ್ನಡದ ಕಿರುತೆರೆ ವೀಕ್ಷಕರಿಗೆ ಸಂಗೀತದ ಸವಿರುಚಿ ಬಡಿಸಲು ಮುಂದಾಗಿದೆ. ಅನೇಕ ಕಾರಣಕ್ಕೆ ಅದು ಎಸ್‌ಪಿಬಿ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತಿದೆ. ಕಾಲಕ್ಕೆ ತಕ್ಕಂತೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಹೊಸ ರೂಪ, ಹೊಸ ನೋಟ ಸಿಕ್ಕಿದೆ. ಝಗಮಗಿಸುವ ದೊಡ್ಡ ವೇದಿಕೆ ಮತ್ತಷ್ಟು ರಂಗು ತುಂಬಿಕೊಂಡಿದೆ. ಎಸ್‌ಪಿಬಿ ಅವರು ಭೌತಿಕವಾಗಿ ಈಗಿಲ್ಲ ಎನ್ನುವುದನ್ನು ಬಿಟ್ಟರೆ ಅವರ ಇರುವಿಕೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಹಾಗೆ ಒಂದ್ರೀತಿ ಎಸ್‌ಪಿಬಿ ನೆರಳಲ್ಲಿಯೇ ಈ ಕಾರ್ಯಕ್ರಮ ಮೂಡಿಬರುತ್ತಿದೆಯಲ್ಲದೇ, ಎಸ್‌ಪಿಬಿ ಅವರ ದೊಡ್ಡ ಮೂರ್ತಿಯೂ ಆ ವೇದಿಕೆಯಲ್ಲಿದ್ದು, ಕಾರ್ಯಕ್ರಮ ಮತ್ತೆ ಜನರ ಭಾವಕ್ಕೆ ತಾಗುವಂತೆ ಮಾಡುವ ಕಸರತ್ತು ನಡೆದಿದೆ. ಆದರೆ ಆರಂಭದಲ್ಲಿಯೇ ಅದಕ್ಕೆ ಒಂದಷ್ಟು ಅಪಸ್ವರಗಳು ಕೇಳಿಬಂದಿವೆ.
ಕಲರ್ಸ್ ಕನ್ನಡ ಶೋಧಿಸಿ ತಂದ ಭರವಸೆಯ ಯುವ ಗಾಯಕ-ಗಾಯಕಿಯರ ದೃಷ್ಟಿಯಲ್ಲಿ ನೋಡಿದರೆ ಇದೊಂದು ಅದ್ಬುತ ಶೋ ಆಗುವುದರಲ್ಲಿ ಎರಡು ಮಾತಿಲ್ಲ, ಆದರೆ ಎದೆ ತುಂಬಿ ಹಾಡುವೆನು ಎನ್ನುವ ಬಹುದೊಡ್ಡ ಜನಪ್ರಿಯ ಶೋ ನಲ್ಲಿ ವೀಕ್ಷಕರು ಕಂಡ ಶ್ರದ್ದೆ, ಶಿಸ್ತು, ಸೈಲೆನ್ಸ್, ವಿನಯತೆ ಹಾಗೂ ಸಂಸ್ಕಾರದ ಛಾಯೆ ಇಲ್ಲಿ ಅಷ್ಟಾಗಿ ಕಾಣುತ್ತಿಲ್ಲ, ತೀರ್ಪುಗಾರರ ಅಬ್ಬರದ ಮಾತುಗಳೆಲ್ಲವನ್ನು ನೋಡುತ್ತಾ ಹೋದರೆ ಇದು ಉಳಿದ ಖಾಸಗಿ ಮನರಂಜನೆ ವಾಹಿನಿಗಳಲ್ಲಿ ಬರುವ ಮತ್ತೊಂದು ಸಿಂಗಿಂಗ್ ರಿಯಾಲಿಟಿ ಶೋಗೆ ಹೋಲಿಕೆ ಮಾಡಿದರೆ ಹೆಚ್ಚೇನು ವ್ಯತ್ಯಾಸ ಕಾಣದು ಎನ್ನುವ ಕಾಮೆಂಟ್ಸ್ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಎದೆ ತುಂಬಿ ಹಾಡುವೆನು ಎನ್ನುವ ಒಂದು ಕ್ಲಾಸಿಕ್ ಮೂಡ್ ನ ಶೋಗೆ ಈಗ ದೊಡ್ಡ ಕಮರ್ಷಿಯಲ್ ಟಚ್ ಸಿಕ್ಕಿದೆ. ಅದೇ ಇಲ್ಲಿ ಜನರ ಆಕ್ಷೇಪಕ್ಕೆ ಕಾರಣವಾಗಿದೆ.
ಯಾಕಂದ್ರೆ, ಎಸ್ ಪಿ ಬಿ ಅಂತಹ ದೊಡ್ಡ ಮಹಾನ್ ಭಾವ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ರೂಪುರೇಷೆ ಇದಿದ್ದೇ ಹಾಗೆ. ಒಮ್ಮೆ ಅದನ್ನು ನೋಡುತ್ತಾ ಕುಳಿತರೆ ಸಂಗೀತ ಕೇಳುತ್ತಲೇ ಅದರೊಂದಿಗೆ ಭಾವುನಾತ್ಮಕವಾಗಿ ಬೆಸೆದುಕೊಂಡು ನಮಗೆ ನಾವೇ ಕಳೆದುಹೋಗುವ ಬಹುದೊಡ್ಡ ಅನುಭವ ಅಲ್ಲಿತ್ತು. ಒಂದ್ರೀತಿಯ ಗೌರವ ತನಗೆ ತಾನೇ ಹುಟ್ಟಿಕೊಳ್ಳುತ್ತಿತ್ತು. ಕಾರ್ಯಕ್ರಮದ ಶಿಸ್ತು, ಶ್ರದ್ದೆ ಸೇರಿದಂತೆ ನೀಟ್ ಆದ ಅದರ ರೂಪುರೇಷೆಗಳೇ ಹಾಗಿದ್ದವು. ಆದರೆ ಇಲ್ಲಿ ಅಂತಹ ಯಾವುದೇ ಆಕರ್ಷಣೆ ಇಲ್ಲ ಎನ್ನುವುದನ್ನು ವೀಕ್ಷಕರೆ ಹಂಚಿಕೊಂಡಿದ್ದಾರೆ.
ಹೆಸರಾಂತ ಗಾಯಕ ಎಸ್ಪಿಬಿ ನಡೆಸಿಕೊಟ್ಟಿದ್ದ ʼಎದೆ ತುಂಬಿ ಹಾಡುವೆನುʼ ರಿಯಾಲಿಟಿ ಶೋ ಕನ್ನಡ ಕಿರುತೆರೆಗೇ ಒಂದು ಮೈಲುಗಲ್ಲು. ಅಂತಹ ಕಾರ್ಯಕ್ರಮದ ರೂಪಕಗಳನ್ನು ಇನ್ನಷ್ಟು ಮಾಡಬಹುದೇ ಹೊರತು ಅಂತಹದೇ ಕಾರ್ಯಕ್ರಮವನ್ನು ರೂಪಿಸುವುದು ಕಷ್ಟಸಾಧ್ಯ. ಆ ದೃಷ್ಟಿಯಲ್ಲಿ ಇದೊಂದು ಬೇರೆಯದೇ ರಿಯಾಲಿಟಿ ಶೋ ಎನ್ನುವುದು ನಿಜವೇ ಆದರೂ, ಇದು ಕೂಡ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಎನ್ನುವುದು ಅಷ್ಟೇ ಸತ್ಯ.ಹಾಗಾಗಿ ಅದರ ಘನತೆಗೆ ದಕ್ಕೆಯಾಗದಂತೆ ಕಾರ್ಯಕ್ರಮ ಮೂಡಿಬರುವಂತೆ ಮಾಡಬೇಕಿರುವ ಹೊಣೆ ಈಗ ಕಲರ್ಸ್ ಕನ್ನಡದ ಮೇಲಿದೆ ಅಂತ ವೀಕ್ಷಕರೇ ಹೇಳುತ್ತಿದ್ದಾರೆ. ಈಗ ಇಲ್ಲಿ ತೀರ್ಪುಗಾರರಾಗಿ ಎಸ್ ಪಿಬಿ ಅವರ ಮಾನಸ ಪುತ್ರ ಎಂದೇ ಗುರುತಿಸಿಕೊಂಡಿರುವ ಕನ್ನಡದ ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ರಾಜೇಶ ಕೃಷ್ಣನ್, ಹರಿಕೃಷ್ಣ, ರಘು ದೀಕ್ಷಿತ್ ಇದ್ದಾರೆ.ಮೂವರು ಕೂಡ ಈಗ ಕನ್ನಡದ ಟಾಪ್ ಮೋಸ್ಟ್ ಸಂಗೀತ ನಿರ್ದೇಶಕರೇ ಹೌದು. ಸುತ್ತಿ ಬಳಸಿ ಬಂದರೂ ಕಲರ್ಸ್ ಕನ್ನಡಕ್ಕೆ ಅಂತಿಮವಾಗಿ ಒಂದು ರೇಟಿಂಗ್ ಕಾರ್ಯಕ್ರಮ ಇದಾಗಬೇಕು. ಆದರಾಚೆ, ಇದಕ್ಕೊಂದು ಘನತೆ ತಂದುಕೊಡಬಹುದಾದ ಅವಕಾಶ ಈ ಮೂವರು ತೀರ್ಪುಗಾರರ ಕೈಯಲ್ಲಿದೆ. ಮುಂದೆ ಅವರಿಂದ ಅದು ಸಾಧ್ಯವಾಗುತ್ತಾ? ಕಾದು ನೋಡಬೇಕಿದೆ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ