ನಾಲಿಗೆ ತೊದಲಿದರೇನು ಎದೆತುಂಬಿ ಹಾಡ್ತಾರೆ; ಹಳ್ಳಿಹೈದ ಸೂರ್ಯಕಾಂತ್ ಕಂಠಕ್ಕೆ ದೇವರೇ ಶರಣು !

ಜಗತ್ತು ಬೆಳಗುವ ಸೂರ್ಯ ಚಂದ್ರರೇ ತಮ್ಮ ಟೈಮ್ ಗೋಸ್ಕರ ಕಾಯ್ತಾರೆ. ಸೂರ್ಯನ ಶಿಫ್ಟ್ ಮುಗಿಯೋವರೆಗೂ ಚಂದ್ರ ಕಾಯಬೇಕು, ಚಂದ್ರ ಬಂದು ಹೋಗುವವರೆಗೂ ಸೂರ್ಯ ವೇಯ್ಟ್ ಮಾಡಬೇಕು. ಹೀಗಾಗಿ, ಎಲ್ಲರಿಗೂ ಒಂದು ಟೈಮ್ ಬರುತ್ತೆ ಆ ಟೈಮ್ ಗೋಸ್ಕರ ಕಾಯಬೇಕು ಅಷ್ಟೆ. ಈಗ ಸೂರ್ಯಕಾಂತ್ ಟೈಮ್

ಎದೆತುಂಬಿ ಹಾಡುವೆನು ಕಾರ್ಯಕ್ರಮ ನೋಡುಗರಿಗೆ ಸೂರ್ಯಕಾಂತ್ ಪರಿಚಯ ಆಗಿರುತ್ತೆ. ಈತನ ಹಿನ್ನಲೆಯ ಜೊತೆಗೆ ಈತನ ಕಂಠಕ್ಕಿರುವ ಶಕ್ತಿ ಎಂತಹದ್ದು ಎಂಬುದು ಕೂಡ ಗೊತ್ತಾಗಿರುತ್ತೆ. ಒಂದ್ವೇಳೆ, ಸೂರ್ಯಕಾಂತ್ ಸಂಗೀತ ಮಿಸ್‌ಮಾಡಿಕೊಂಡವರು ಈ ಸ್ಟೋರಿನಾ ನೋಡಿ.

ಭಗವಂತ ಎಲ್ಲರಿಗೂ ಎಲ್ಲಾನೂ ಕೊಡಲ್ಲ, ಏನಾದರೊಂದು ಕೊರತೆಯಿಟ್ಟೇ ಇಟ್ಟಿರುತ್ತಾನೆ. ಒಂದ್ವೇಳೆ, ಎಲ್ಲವನ್ನೂ ಕೊಟ್ಟು ಕರುಣಿಸಿದರೂ ಕೂಡ ಕೊರಗುವ ಮಂದಿಗೇನ್ ಕಮ್ಮಿಯಿಲ್ಲ. ತನ್ನ ಬಳಿ ಅದಿಲ್ಲ, ಇದಿಲ್ಲ ಅಂತ ಚಿಂತಿಸುತ್ತಾ ದೇವರಿಗೆ ಹಿಡಿಶಾಪ ಹಾಕುತ್ತಾರೆ. ಇವರುಗಳಲ್ಲಿ ಕೆಲವರು ಭಗವಂತ ಕೊಟ್ಟ ನ್ಯೂನತೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಭಗವಂತನಿಗೆ ಸೆಡ್ಡುಹೊಡೆಯುತ್ತಾರೆ. ಸಾಧನೆ ಮೂಲಕ ನ್ಯೂನತೆ ಕೊಟ್ಟು ಕಳುಹಿಸಿದ ಭಗವಂತ ಪಶ್ಚಾತಾಪ ಪಡುವಂತೆ ಮಾಡ್ತಾರೆ. ಸದ್ಯಕ್ಕೆ ಸೂರ್ಯಕಾಂತ್ ಭಗವಂತ ಪಶ್ಚಾತಾಪ ಪಡುವಂತೆ ಮಾಡಿದ್ದಾನೆ. ಯಾರು ಆ ಸೂರ್ಯಕಾಂತ್ ಅಂತೀರಾ. `ಎದೆತುಂಬಿ ಹಾಡುವೆನು'ಅಂಗಳದಲ್ಲಿ ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು’ ಅಂತ ಹಾಡಿ ಸ್ವರಸಾಮ್ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ, ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿರುವ ಗ್ರಾಮೀಣ ಗಾಯಕನೇ ಈ ಸೂರ್ಯಕಾಂತ್

ಸೂರ್ಯಕಾಂತ್ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದವರು. ಹೊಟ್ಟೆಗೆ ಹಿಟ್ಟಿಲ್ಲದ ಹೊತ್ತಲ್ಲೇ ಸಂಗೀತದ ಗೀಳು ಅಂಟಿಸಿಕೊಂಡ ಸೂರ್ಯಕಾಂತ್, ಹಸಿವನ್ನು ನುಂಗಿಕೊಂಡು ಕಲಬುರ್ಗಿಯ ಶ್ರೀ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತದ ಅ.ಆ.ಇ.ಈ ಅಕ್ಷರಾಭ್ಯಾಸ ಮಾಡಿದರು. ಕಣ್ಣಿಲ್ಲದ ಪಂಚಾಕ್ಷರಿ ಅಣ್ಣಿಗೇರಿ ಅಜ್ಜಯ್ಯನವರು ಸೂರ್ಯಕಾಂತ್‌ಗೆ ಶ್ರುತಿ-ಲಯ-ಸ್ವರ-ರಾಗ-ತಾಳ-ಮೇಳ ಹಿಡಿಯುವುದನ್ನು ಕಲಿಸಿಕೊಟ್ಟರು. ಇದೀಗ, ಸಂಗೀತ ಹೇಳಿಕೊಟ್ಟ ಗುರುವು ಮಾತ್ರವಲ್ಲ ಸಾಕ್ಷಾತ್ ದೇವರೆ ಮೆಚ್ಚುವಂತಹ ಗಾಯಕನಾಗಿ ಹೊರಹೊಮ್ಮಿದ್ದಾರೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.

ಹೌದು, ಸೂರ್ಯಕಾಂತ್ ಸಂಗೀತಕ್ಕೆ ಸಾಕ್ಷಾತ್ ದೇವರೆ ಶರಣಾಗಿದ್ದಾರೆ. ಮಾತು ಕಿತ್ಕೊಂಡು ಸೂರ್ಯನನ್ನು ಭೂಮಿಗೆ ಕಳುಹಿಸಿದ್ದಕ್ಕೆ ಇವತ್ತು ದೇವರು ಕೂಡ ಪಶ್ಚಾತಾಪ ಪಡುತ್ತಿರುತ್ತಾರೆ.ಆದರೆ ಮಾತು ಕಿತ್ತುಕೊಂಡ ಭಗವಂತ ಕಂಠಕ್ಕೆ ಬಲತುಂಬಿ ಕಳುಹಿಸಿದ್ದಾನೆ. ಹೀಗಾಗಿ, ಮಾತನಾಡುವಾಗ ತಡವರಿಸುವ ಸೂರ್ಯಕಾಂತ್, ಕಂಠಕ್ಕೆ ಕಿಚ್ಚು ಹಚ್ಚಿದಾಗ ತಡವರಿಸಲ್ಲ ಸಂಗೀತವನ್ನ ಅರ್ಧಕ್ಕೆ ನಿಲಿಸಲ್ಲ. ಇದನ್ನೆಲ್ಲಾ ನೋಡಿದಾಗ ಇದು ಹೇಗೆ ಸಾಧ್ಯ? ಇದೆಂತಾ ಪವಾಡನಪ್ಪಾ ಎಂದೆನಿಸುವುದು ಸಹಜ. ಆದರೆ ಇದಕ್ಕೆಲ್ಲಾ ಕಾರಣ ಸಂಗೀತ ಸರಸ್ವತಿ ಹಾಗೂ ಸೂರ್ಯಕಾಂತ್‌ಗೆ ಸಂಗೀತ ಮೇಲಿರುವ ಅತೀವವಾದ ಶ್ರದ್ದಾ-ಭಕ್ತಿ. ಆ ನಿಷ್ಟೆಗೆ- ಸಂಗೀತ ಸರಸ್ವತಿಯ ಆರಾಧನೆಗೆ `ಎದೆತುಂಬಿ’ ಹಾಡುವೆನು ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿದೆ. ನಾಲಿಗೆ ತಡವರಿಸಿದರೇನಂತೆ ಆತನ ಕಂಠದೊಳಗಿನ ಕಸುವಿಗೆ ಬೆಲೆಕೊಡಬೇಕೆಂದು ಕಲರ್ಸ್ ಕನ್ನಡ ಸಂಸ್ಥೆ ಸೂರ್ಯಕಾಂತ್‌ಗೆ ರತ್ನಗಂಬಳಿ ಹಾಕಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ.

ಸೂರ್ಯಕಾಂತ್ ಅಪ್ಪಟ ದೇಸಿ ಪ್ರತಿಭೆ-ಕಡುಬಡತನದ ಕುಟುಂಬಕ್ಕೆ ಸೇರಿದವ. ಜನ್ಮಕೊಟ್ಟ ಹೆತ್ತವ್ವ ಬಿಟ್ಟರೆ ಸರಸ್ವತಿ ತಾಯಿಯೇ ಎಲ್ಲಾ. ಹೀಗಾಗಿ, ದೇವರು ಮಾತು ಕಿತ್ಕೊಂಡು ಕಳುಹಿಸಿದರೂ ಸಂಗೀತ ಸರಸ್ವತಿ ಕೈಬಿಡದೇ ಸಲುಹಿತ್ತಿದ್ದಾಳೆ. ಹಗಲಿರುಳು ತನ್ನ ಜಪ ಮಾಡುವ ಸೂರ್ಯಕಾಂತ್‌ಗೆ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದ್ದಾಳೆ. ದೇವರು ಎಲ್ಲಾ ಕೊಟ್ಟರೂ ಕೂಡ ತನಗೆ ಅದನ್ನ ಕೊಟ್ಟಿಲ್ಲ ಇದನ್ನ ಕೊಟ್ಟಿಲ್ಲ ಅಂತ ಭಗವಂತನ ಮೇಲೆ ದೂರು ಹೇಳುತ್ತಾ ಕುಳಿತಿರುವ ಸೋಮಾರಿಗಳಿಗೆ, ನೀನು ಒಂದು ಪಾಠ ಆಗಬೇಕು ಹೋಗು ಮಗನೇ ಅಂತ ಅದ್ಬುತ ವೇದಿಕೆಯ ಮೇಲೆ ತಂದು ನಿಲ್ಲಿಸಿದ್ದಾಳೆ. ವರವಾಗಿ ಸಿಕ್ಕಂತಹ ಅವಕಾಶವನ್ನ ಅದ್ಬುತವಾಗಿ ಬಳಸಿಕೊಂಡ ಸೂರ್ಯಕಾಂತ್, `ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯವನ್ನು ತಲ್ಲಣಗೊಳಿಸಿದ್ದಾರೆ. ಕಣ್ಣೀರ ಕಡಲಲ್ಲಿ ತೇಲಿಸುವುದರ ಜೊತೆಗೆ ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಯಾವುದೋ ಸಿನಿಮಾ ಹಾಡನ್ನು ತೆಗೆದುಕೊಂಡು ಧೂಳೆಬ್ಬಿಸೋದು ದೊಡ್ಡದಲ್ಲ. ತತ್ವಪದಗಳನ್ನು ಆಯ್ಕೆಮಾಡಿಕೊಂಡು ಸುನಾಮಿ ಎಬ್ಬಿಸೋದು ದೊಡ್ಡದು. ಯಸ್,
ಕಡಕೋಳ ಮಡಿವಾಳಪ್ಪಜ್ಜನವರು ರಚನೆ ಮಾಡಿದ, ರವೀಂದ್ರ ಹಂದಿಗನೂರ ರಾಗಸಂಯೋಜನೆ ಮಾಡಿ ಕಂಠಕುಣಿಸಿದ ತತ್ವಪದವನ್ನು ಆಯ್ಕೆಮಾಡಿಕೊಂಡ ಸೂರ್ಯಕಾಂತ್, ಸಂಗೀತ ಲೋಕದ ದಿಗ್ಗಜರನ್ನ ಮಂತ್ರಮುಗ್ದಗೊಳಿಸಿದರು. ಮಾತನಾಡುವಾಗಲೇ ತೊದಲಿಸುವ ಸೂರ್ಯಕಾಂತ್ ಇನ್ನೇನು ಹಾಡ್ತಾನ್ರಿ ಅಂತ ಎದುರುನೋಡ್ತಿದ್ದ ಮಂದಿಯನ್ನ ಎದ್ದುನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿಬಿಟ್ಟರು. ಅದಕ್ಕೆ ಹೇಳೋದು ಡೋಂಟ್ ಅಂಡರೆಸ್ಟಿಮೇಟ್ ಪವರ್ ಆಫ್ ಹಳ್ಳಿಮ್ಯಾನ್' ಅಂತ.ಎನಿವೇ,ಮೊದಲ ಹಾಡಿನಲ್ಲೇ ಗೆದ್ದುಬೀಗಿದ್ದಾರೆ. ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯಕ್ಕೆ ಕಳೆತಂದಿದ್ದಾರೆ. ವ್ಯಕ್ತಿತ್ವದಲ್ಲೂ ಹಾಗೂ ಸಂಗೀತದಲ್ಲೂ ಮುಗ್ದತೆಯನ್ನ ಕಾಪಾಡಿಕೊಂಡು ಬಂದಿರುವ ಸೂರ್ಯಕಾಂತ್‌ನ ಬೆಳೆಸಬೇಕು ಅಂತ ನಿರ್ಣಾಯಕರಾದ ರಾಜೇಶ್ ಕೃಷ್ಣನ್, ವಿ ಹರಿಕೃಷ್ಣ, ರಘುದೀಕ್ಷಿತ್ ನಿರ್ಧಾರ ಮಾಡಿದ್ದಾರೆ. ಸೂರ್ಯಕಾಂತ್ ಸಂಗೀತದ ಲಯ-ಶ್ರುತಿ-ಹಿಡಿದು ಎಷ್ಟರ ಮಟ್ಟಿಗೆ ಬೆಳೆಯುತ್ತಾರೆ ಕಾದುನೋಡೋಣ ಅಲ್ಲವೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!