ಹಿಪ್ಪೋ ಕಿಡ್ಡೋ ಸಂಸ್ಥೆಯಡಿ ಶೋಭಾ ಗೋಪಾಲ್ ಅರ್ಪಿಸಿ, ನಾಗೇಶ್ ಗೋಪಾಲ್ ಮತ್ತು ಮೋನಿಷಾ ಗೌಡ ನಿರ್ಮಿಸುತ್ತಿರುವ ʻನೋಡಿದವರು ಏನಂತಾರೆʼ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ. ಗುರುವಾರ ನಟ ಶ್ರೀಮುರಳಿ ಈ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ‘ಅಯೋಗ್ಯ’ ಚಿತ್ರದ ನಿರ್ದೇಶಕ ಮಹೇಶ್ಸಮಾರಭದಲ್ಲಿ ಹಾಜರಿದ್ದು, ಚಿತ್ರ ತಂಡಕ್ಕೆ ಶುಭ ಕೋರಿದರು. ಕುಲದೀಪ್ ಕಾರಿಯಪ್ಪ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಗುಲ್ಟು ಖ್ಯಾತಿಯ ನವೀನ್ ಶಂಕರ್ ಹಾಗೂ ಅಪೂರ್ವ ಭಾರಾದ್ವಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಸದ್ಯಕ್ಕೆಚಿತ್ರವು ಚಿತ್ರೀಕರಣದ ಹಂತದಲ್ಲಿದೆ.
ಚಿಕ್ಕಮಗಳೂರು, ಮತ್ತು ಬೆಂಗಳೂರಿನಲ್ಲಿ ಎರಡು ಹಂತರ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನುಳಿದ ಭಾಗಗಳನ್ನು ಗೋಕರ್ಣ, ಕೊಡಗು, ಹಂಪಿ, ಮುಂಬೈ ಮುಂತಾದೆಡೆ ಚಿತ್ರೀಕರಿಸಲಾಗುತ್ತಿದೆ. ಇಡೀ ಚಿತ್ರದಲ್ಲಿ ಪ್ರಯಾಣ ಹೆಚ್ಚಿರುವುದರಿಂದ ಲೊಕೇಷನ್ನುಗಳು ಕೂಡಾ ಸಾಕಷ್ಟಿವೆಯಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವನ್ನೂ ಜಯಂತ್ ಕಾಯ್ಕಿಣಿ ಬರೆಯುತ್ತಿದ್ದಾರಂತೆ.
ಸಕ್ರೆಡ್ ಗೇಮ್ಸ್ ನಂಥಾ ವೆಬ್ ಸಿರೀಸ್ ಗೆ ಕೆಲಸ ಮಾಡಿದ್ದ, ಮುಂಬೈ ಉತ್ಸವ್ ಸ್ಟುಡಿಯೋದ ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜನೆ, ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಸುನಿಲ್ ವೆಂಕಟೇಶ್ ಮತ್ತು ನಿರ್ದೇಶಕರು ಸೇರಿ ಸಂಭಾಷಣೆ ರಚಿಸಿದ್ದಾರೆ. ಕಾಡಿನ ನಡುವೆ ಹಳ್ಳಿ ಮನೆಯ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದ್ದು, ಇನ್ನು ಅರವತ್ತು ದಿನಗಳ ಶೂಟಿಂಗ್ ಬಾಕಿ ಇದೆ. ಅಪೂರ್ವ ಭಾರದ್ವಾಜ್, ಹೊಸ ಕಲಾವಿದೆ ರಮ್ಯ ಕೃಷ್ಣ ಮತ್ತು ಇತರರ ತಾರಾಗಣ ಈ ಚಿತ್ರದಲ್ಲಿದೆ.ಇನ್ನು ಚಿತ್ರದ ಟೈಟಲ್ ಕುರಿತು ವಿವರಣೆ ನೀಡುವ ನಿರ್ದೇಶಕ ಕಾರಿಯಪ್ಪ,
ʻನೋಡಿದವರು ಏನಂತಾರೆ?ʼ ಎನ್ನುವ ಕಾರಣಕ್ಕೆ ನಮ್ಮದಲ್ಲದ ಬದುಕನ್ನು ನಾವು ಸವೆಸುತ್ತಿರುತ್ತೇವೆ. ಇಷ್ಟೇನಾ ಜೀವನ ಅಂತಾ ಎಷ್ಟೋ ಸಲ ಅನ್ನಿಸುವುದುಂಟು. ಇಂಥಾ ಪ್ರಶ್ನೆಗಳಿಗೆ ಉತ್ತರ ನೀಡುವಂತಾ ಸಿನಿಮಾವಿದು ಎನ್ನುತ್ತಾರೆ.
‘ಪೋರ್ ವಾಲ್ಸ್, ಆ್ಯಂಡ್ ಟೂ ನೈಟೀಸ್’ನಲ್ಲಿ ಅಚ್ಯುತ್ ಕುಮಾರ್ ನಾಯಕ ನಟ
ಅಪ್ಪ, ದೊಡ್ಡಪ್ಪ , ಚಿಕ್ಕಪ್ಪ , ವಿಲನ್ , ಕಾಮಿಡಿಯನು ಹಿಂಗೆ ವೆರೈಟಿ ವೆರೈಟಿ ಪಾತ್ರಗಳನ್ನ ಮಾಡಿ ಸೈ ಜೈ ಎನ್ನಿಸಿಕೊಂಡನಟ ಅಚ್ಯುತ್ ಕುಮಾರ್. ಈಗ ಅವರು ಹೀರೋ ಆಗಿದ್ದಾರೆ. ಸದ್ದು ಗದ್ದಲ್ಲ ಇಲ್ಲದೆ ಹೀರೋ ಆಗಿ ಬಣ್ಣ ಹಚ್ಚಿ ಕ್ಯಾಮೆರಾಗೆ ಕೈ ಮುಗಿದ್ದಿದ್ದಾರೆ.ಅದಕ್ಕೀಗ ಶೂಟಿಂಗ್ ಕೂಡ ಮುಗಿದಿದೆ. ಚಿತ್ರ ತಂಡ ರಿಲೀಸ್ ಗೆ ರೆಡಿಯಾಗಿದೆ. ಹಾಗಾದ್ರೆ ಆ ಸಿನಿಮಾ ಎನ್ನುವ ಕುತೂಹಲದ ಪ್ರಶ್ನೆಗೆ ಬ್ಯುಟಿಫುಲ್ ಉತ್ತರವೇ‘ಫೋರ್ ವಾಲ್ಸ್ ಆ್ಯಂಡ್ ಟೂ ನೈಟೀಸ್.
ನಟ ಅಚ್ಯುತ್ ಕುಮಾರ್ ಹೀರೋ ಆಗಿದ್ದಾರೆ. ಅರೆ ಹೌದಾ? ಹೌದು, ಇದು ರಿಯಲ್ ಸ್ಟೋರಿ. ಸ್ಯಾಂಡಲ್ವುಡ್ ನಲ್ಲಿ ಇದುವರೆಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಜನಮನಗೆದ್ದ ಖ್ಯಾತಿ ಅವರದು. ಅಪ್ಪ, ದೊಡ್ಡಪ್ಪ , ಚಿಕ್ಕಪ್ಪ , ವಿಲನ್ , ಕಾಮಿಡಿಯನ್ ಸೇರಿದಂತೆ ಹತ್ತಾರು ಬಗೆಯ ಪಾತ್ರಗಳಿಗೆ ಬಣ್ಣಹಚ್ಚಿ ಸೈ ಜೈ ಎನಿಸಿಕೊಂಡವರು ಅಚ್ಯುತ್ ಕುಮಾರ್.
ರಂಗಭೂಮಿ ಅಥವಾ ಸಿನಿಮಾ ಯಾವುದೇ ಕ್ಷೇತ್ರದಲ್ಲಿ ಯಾವುದೇ ಪಾತ್ರ ಸಿಕ್ಕರು ಅಚ್ಚುಕಟ್ಟಾದ ಅಭಿನಯಕ್ಕೆ ಅಚ್ಯುತ್ ಕುಮಾರ್ ಅವರದ್ದು ಮನೆಮಾತಾದ ಹೆಸರು.ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿ ಹೀರೋ ಎದುರುನಿಂತರು ಹೀರೋ ರೈಂಜ್ಗೆ ಸೌಂಡ್ ಮಾಡಿ ಸೈ ಎನಿಸಿಕೊಂಡ ಅಭಿನಯ ಮೂರ್ತಿಅಚ್ಯುತ್ ಕುಮಾರ್. ಈಗ ಅವರೇ ಹೀರೋ ಅಂದ್ರೆ ನೀವು ನಂಬಲೇ ಬೇಕು.
ಅಂದಹಾಗೆ, ‘ಪೋರ್ ವಾಲ್ಸ್, ಆ್ಯಂಡ್ ಟೂ ನೈಟೀಸ್’ ಎನ್ನುವುದು ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ಹೊಸ ಸಿನಿಮಾ. ಮುಹೂರ್ತ , ಶೂಟಿಂಗು, ಎಡಿಟಿಂಗು , ಡಬಿಂಗು ಅಂತೆಲ್ಲ ಸದ್ದು ಮಾಡದೇ ಚಿತ್ರ ತಂಡ ಶೂಟಿಂಗ್ ಮುಗಿಸಿಕೊಂಡು ಬಂದು ರಿಲೀಸ್ ಗೆ ರೆಡಿ ಆಗಿದೆ. ಈ ಹಂತಲ್ಲೀಗ ಚಿತ್ರದ ಕೆಲವು ಪೋಸ್ಟರ್ ರಿವೀಲ್ ಆಗಿವೆ. ಅವೀಗ ಭಾರೀ ಕುತೂಹಲ ಕೆರಳಿಸಿವೆ.
‘ಮಂತ್ರಂ’ ಹೆಸರಿನ ಚಿತ್ರ ನಿರ್ದೇಶಿಸಿದ್ದ ಬಹುಮುಖ ಪ್ರತಿಭೆ ಎಸ್.ಎಸ್.ಸಜ್ಜನ್ ‘ಫೋರ್ ವಾಲ್ಸ್ ಆ್ಯಂಡ್ ಟೂ ನೈಟೀಸ್’ ಸಿನಿಮಾದ ಒನ್ ಆಂಡ್ ಓನ್ಲಿ ಸೂತ್ರಧಾರ. ಅಂದ್ರೆ ನಿರ್ದೇಶಕ. ಅಚ್ಯುತ್ ಕುಮಾರ್ ಇದರ ಹೀರೋ.ಅವರ ಜೊತೆಗೆ ದತ್ತಣ್ಣ , ಸುಜಯ್ ಶಾಸ್ತ್ರಿ , ಭಾಸ್ಕರ್ ನೀನಾಸಂ , ರಘು ರಾಮನಕೊಪ್ಪ , ಡಾ.ಪವಿತ್ರಾ ಈ ಚಿತ್ರದ ಪಾತ್ರದಾರರು.
ಸಿನಿಮಾ ಈಗ ರಿಲೀಸ್ಗೆ ಸಿದ್ದವಾಗಿದೆ. ಎರಡು ಹಾಡಗಳು ಚಿತ್ರದಲ್ಲಿವೆ. ಇನೇನು ಕೆಲವೇ ದಿನಗಳಲ್ಲಿ ಅವು ಚಿತ್ರಪ್ರೇಮಿಗಳ ಕರಣಗಳನ್ನ ಸ್ಪರ್ಶಿಸಲಿವೆ. ಅಚ್ಯುತ್ ಕುಮಾರ್ ಚಿತ್ರದ ಹೀರೋ ಎನ್ನುವ ಸಂಗತಿಯ ಹಾಗೆ ಅನೇಕ ಕುತೂಹಲಕಾರಿ ಸಂಗತಿ ಈ ಚಿತ್ರದ ಸುತ್ತ ಇವೆ.ಅವೆಲ್ಲವನ್ಜು ಚಿತ್ರತಂಡ ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದೆಯಂತೆ.
“ಆ ದಿನಗಳನ್ನು ನೆನಪಿಸಿಕೊಂಡರೆ ನಿಜಕ್ಕೂ ಅಂತಹ ಕಷ್ಟ ಯಾರಿಗೂ ಬರುವುದು ಬೇಡ. ತುಂಬಾನೇ ಇಷ್ಟಪಟ್ಟು ಈ ಸಿನಿಮಾರಂಗಕ್ಕೆ ಬಂದಿದ್ದೇವೆ. ಸಿನಿಮಾ ಅನ್ನೋ ಕಲರ್ಫುಲ್ ಲೋಕದ ಮೇಲೆ ನೂರಾರು ಕನಸು ಕಟ್ಟಿಕೊಂಡು ಬಂದ್ವಿ. ಆದರೆ ಇಲ್ಲಿಗೆ ಬಂದಮೇಲಷ್ಟೆ, ಅದರ ಅಗಲ, ಆಳ ಗೊತ್ತಾಗಿದ್ದು. ಆದೇನೆ ಇರಲಿ, ಕಷ್ಟಾನೋ, ಸುಖಾನೋ ಎಲ್ಲವನ್ನೂ ಇಲ್ಲೇ ಅನುಭವಿಸಬೇಕು. ನಾವಂದುಕೊಂಡ ಗುರಿ ತಲುಪಲೇಬೇಕು. ಅದಕ್ಕಾಗಿ ಸಂಕಷ್ಟದಲ್ಲೂ ಸಹಿಸಿಕೊಂಡೇ ಇನ್ನೂ ಆ ಅಸೆಯನ್ನು ಜೀವಂತವಾಗಿರಿಸಿಕೊಂಡಿದ್ದೇವೆ..”
– ಇದು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕೆಲವು ಸಹ ನಿರ್ದೇಶಕ, ಸಹಾಯಕ ನಿರ್ದೇಶಕರ ನೋವಿನ ಮಾತು. ಹೌದು, ಕೊರೊನಾ ಸಂದರ್ಭದಲ್ಲಿ ಎಲ್ಲರೂ ನೋವು ಅನುಭವಿಸಿದ್ದಾರೆ. ಕಷ್ಟ ಎದುರಿಸಿದ್ದಾರೆ. ಅಂಥ್ದದೊಂದು ಕಷ್ಟವನ್ನು ಕನ್ನಡ ಚಿತ್ರರಂಗದಲ್ಲಿ ಹಗಲಿರುಳು ದುಡಿಯುತ್ತಿರುವ ಅಸಿಸ್ಟಂಟ್ ಡೈರೆಕ್ಟರ್ಸ್, ಅಸೋಸಿಯೇಟ್ಸ್ ಡೈರೆಕ್ಟರ್ಸ್ ಕೂಡ ಅನುಭವಿಸಿದ್ದಾರೆ. ಕೊರೊನಾ ತಂದಿಟ್ಟ ಸಮಸ್ಯೆ ಎಂಥದ್ದು ಎಂಬುದನ್ನು “ಸಿನಿಲಹರಿ” ಜೊತೆ ಬಿಚ್ಚಿಟ್ಟಿದ್ದಾರೆ.
ಸಹಾಯಕ ನಿರ್ದೇಶಕ ನಾಗೇಶ್ ಹೆಬ್ಬೂರು
ನಮಗೆ ನಿರ್ದಿಷ್ಟ ಪೇಮೆಂಟ್ ಇಲ್ಲವೇ ಇಲ್ಲ
“ನಾನು ಈ ಸಿನಿಮಾ ಇಂಡಸ್ಟ್ರಿಗೆ ಬಂದು ಸರಿ ಸುಮಾರು ಒಂದು ದಶಕವೇ ಕಳೆದಿದೆ. ಇಷ್ಟು ವರ್ಷಗಳಲ್ಲಿ ನಾನು ಸುಮಾರು 14 ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಕೊರೊನಾ ತಂದಿಟ್ಟ ಅವಾಂತರ ಸಾಕಷ್ಟಿದೆ. ಹಾಗೆ ಹೇಳುವುದಾದರೆ, ಕಹಿ ಅನುಭವ ಅನ್ನೋದು ಕೊರೊನಾ ಸಮಯದಲ್ಲಿ ಮಾತ್ರವಲ್ಲ. ಈ ಫೀಲ್ಡ್ಗೆ ಎಂಟ್ರಿಯಾದಾಗಿನಿಂದಲೂ ಆಗಿರುವಂಥದ್ದೇ. ನನ್ನಂತಹ ಅದೆಷ್ಟೋ ಹುಡುಗರು ಕನಸು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಾನೊಬ್ಬ ನಿರ್ದೇಶಕ ಆಗಬೇಕು ಅಂದುಕೊಂಡೇ ಇಲ್ಲಿಗೆ ಬಂದವರು ಹೆಚ್ಚು. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಮಸ್ಯೆ ತಪ್ಪಿದ್ದಲ್ಲ. ಕಷ್ಟ-ನಷ್ಟಗಳ ನಡುವೆಯೇ ಅವರು ಇಲ್ಲಿ ಬದುಕು ಸವೆಸುತ್ತಿದ್ದಾರೆ. ಇದಕ್ಕೆ ನಾನೂ ಹೊರತಲ್ಲ. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಹುಡುಗರಿಗೆ ಕಹಿ ಅನುಭವ ಹೊಸದಲ್ಲ. ಲಾಕ್ಡೌನ್ ಕೂಡ ವಿಭಿನ್ನವಾಗಿರಲಿಲ್ಲ. ಸಾಮಾನ್ಯ ದಿನಗಳನ್ನು ಹೇಗೆಲ್ಲಾ ಎದುರಿಸುತ್ತಿದ್ದರೋ, ಅದಕ್ಕಿಂತ ಸ್ವಲ್ಪ ಜಾಸ್ತಿ ಸಮಸ್ಯೆಯನ್ನು ಈ ಲಾಕ್ಡೌನ್ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂದಿದ್ದು ಸುಳ್ಳಲ್ಲ. ಸಹ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರಿಗೆ ಯಾವಾಗಲೂ ಹಣ ಸಿಗಲ್ಲ. ಸಿನಿಮಾ ಇದ್ದಾಗ ಮಾತ್ರ, ಆಯಾ ಪ್ರೊಡಕ್ಷನ್ಸ್ ಕೊಡುವ ಹಣವೇ ಆಧಾರ. ಹಾಗಂತ, ಅಲ್ಲಿ ಸಿಗುವ ಹಣ ಊಟಕ್ಕಷ್ಟೇ ಸೀಮಿತ. ಕೊರೊನಾ ಸಮಸ್ಯೆಯಲ್ಲಷ್ಟೇ ಅಲ್ಲ, ಪ್ರತಿ ದಿನವೂ ನಮ್ಮಂತಹ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರ ಸಮಸ್ಯೆ ನಿರಂತರ. ಕನ್ನಡ ಚಿತ್ರರಂಗದಲ್ಲಿ ಒಬ್ಬ ಲೈಟ್ ಬಾಯ್ಗೆ 750 ರುಪಾಯಿ ವೇತನ ಫಿಕ್ಸ್ ಇದೆ. ಒಬ್ಬ ಕಸಗೂಡಿಸುವವನಿಗೂ ಇಲ್ಲಿ ಪೇಮೆಂಟ್ ಅನ್ನೋದು ಫಿಕ್ಸ್. ದುರಂತವೆಂದರೆ, ಎಂಬತ್ತು ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ನಿರ್ದೇಶನ ವಿಭಾಗದ ಹುಡುಗರಿಗೆ ಒಂದು ಫಿಕ್ಸ್ ಅಮೌಂಟ್ ಅನ್ನುವುದೇ ಇಲ್ಲ. ನಿರ್ದೇಶನ ವಿಭಾಗ ಸಿನಿಮಾದಲ್ಲಿ ಕ್ರಿಯೇಟಿವ್ ವಿಭಾಗ ಅನ್ನೋದು ಹೆಸರಿಗಷ್ಟೇ. ಆದರೆ, ಪೇಮೆಂಟ್ ಬಗ್ಗೆ ಕೇಳುವಂತಿಲ್ಲ. ಅಂತಹ ಯಾವ ಮಾನದಂಡವೂ ಇಲ್ಲ” ಎಂಬುದು ದಶಕಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿರುವ ನಾಗೇಶ್ ಹೆಬ್ಬೂರು ಮಾತು.
ಶರಣ್ ಗೆಣ್ಕಾಳ್
ಬ್ರದರ್ ಮನೆ ಇತ್ತು ಬಚಾವ್ ಆದೆ…
“ಸಿನಿಮಾ ನಂಬಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ” ಎಂಬುದು ಮತ್ತೊಬ್ಬ ಸಹಾಯಕ ನಿರ್ದೇಶಕ ಶರಣ್ ಗೆಣ್ಕಲ್ ಅವರ ಮಾತು. ತಮ್ಮ ದಶಕದ ಅನುಭವ ಬಿಚ್ಚಿಡುವ ಅವರು, ಇಲ್ಲಿ ನಿರ್ದೇಶನ ಕನಸು ಕಟ್ಟಿಕೊಂಡು ಬಂದಿದ್ದೇನೆ. ನಿಜ ಹೇಳುವುದಾದರೆ, ಇಲ್ಲಿ ಪ್ರತಿಭೆ ಜೊತೆಗೆ ಅದೃಷ್ಟವೂ ಇರಬೇಕು. ಅದಿದ್ದರೆ ಮಾತ್ರ, ಪವಾಡ ಸಾಧ್ಯ. ಇಲ್ಲವಾದರೆ, ನಮ್ಮಂತಹ ಅದೆಷ್ಟೋ ಸಹ, ಸಹಾಯಕ ನಿರ್ದೇಶಕರು ನಿರ್ದೇಶಕರಾಗಲು ಹೆಣಗಾಡಲೇಬೇಕು. ಮೊದಲೇ ಇಂತಿಷ್ಟು ಅನ್ನೋ ಪೇಮೆಂಟ್ ಇರೋದಿಲ್ಲ. ಅದರಲ್ಲೂ ಈ ಕೊರೊನಾ ಎದುರಾಗಿ, ನಮ್ಮಂತಹ ಅನೇಕ ಸಹ ನಿರ್ದೇಶಕರು, ಸಹಾಯಕ ನಿರ್ದೇಶಕರನ್ನು ಹೈರಾಣಾಗಿಸಿದ್ದಂತೂ ಸುಳ್ಳಲ್ಲ. ಕೊರೊನಾ ಸಮಯದಲ್ಲಿ ಎಲ್ಲವೂ ಬಂದ್ ಆಗಿದ್ದರಿಂದ ನಮ್ಮಂಥವರ ಬದುಕು ನಿಜಕ್ಕೂ ಶೋಚನೀಯವಾಗಿತ್ತು. ಲಾಕ್ಡೌನ್ ಮುನ್ನ ಒಂದಷ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆದರೆ, ಪೇಮೆಂಟ್ ಮಾತ್ರ ಕ್ಲಿಯರ್ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಲಾಕ್ಡೌನ್ ಶುರುವಾದಾಗ, ಬದುಕು ಅತಂತ್ರವಾಯ್ತು. ಪೇಮೆಂಟ್ ಕೊಡಬೇಕಾದವರೂ ಫೋನ್ ಪಿಕ್ ಮಾಡದೇ ಹೋದರು. ನಿಜ ಹೇಳುವುದಾದರೆ, ಈ ವರ್ಷ ಒಂದೇ ಒಂದು ರುಪಾಯಿ ಕೂಡ ದುಡಿಮೆ ಇಲ್ಲ, ಆದರೂ ಹೇಗೋ ಬದುಕಿದ್ದೇನೆ. ನನ್ನ ಸಹೋದರ ಮನೆಯಲ್ಲೇ ಇದ್ದುದರಿಂದ ನಾನು ಬಚಾವ್ ಆಗಿದ್ದೇನೆ. ನನ್ನ ಅನೇಕ ಗೆಳೆಯರ ಸ್ಥಿತಿಯಂತೂ ಹೇಳತೀರದು” ಎನ್ನುತ್ತಾರೆ ಶರಣ್ ಗೆಣ್ಕಲ್.
ಸಹಾಯಕ ನಿರ್ದೇಶಕ ಅಂಜನ್
ನಮ್ಮಂಥವರ ಪರಿಸ್ಥಿತಿ ಭೀಕರ
“ಸಿನಿಮಾದಲ್ಲೇ ಏನಾದರೊಂದು ಸಾಧನೆ ಮಾಡಬೇಕು ಅಂತ ಬಂದವರು ಸಹಾಯಕ ನಿರ್ದೇಶಕ ಅಂಜನ್. ಇಲ್ಲಿಗೆ ಬಂದು ಸುಮಾರು 7 ವರ್ಷಗಳೇ ಕಳೆದಿವೆ. ಸಿನಿಮಾ ಜೊತೆಗೆ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದಾರೆ. ನಿರ್ದೇಶಕ ಆಗಬೇಕು ಎಂಬ ಕಾರಣಕ್ಕೆ ಹಣದ ಬಗ್ಗೆ ತಲೆಕೆಡಿಸಿಕೊಳ್ಳದೆ, ಸಹನಿರ್ದೇಶಕನಾಗಿ ಕೆಲಸ ಮಾಡಿದ್ದುಂಟು. ಆದರೆ, ನಮ್ಮದೂ ಅಂತ ಹೊಟ್ಟೆ ಪಾಡು ಇದ್ದೇ ಇರುತ್ತಲ್ಲವೇ. ಏನೋ ಕೊಟ್ಟಷ್ಟು ಇಟ್ಟುಕೊಂಡು ಬದುಕು ಸವೆಸಿದ್ದೇನೆ. ಕೊರೊನಾ ಬಂದ ಸಮಯದಲ್ಲಂತೂ ನಮ್ಮನ್ನು ಕೇಳುವವರೇ ಇರಲಿಲ್ಲ. ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಆದರೆ, ಯಾರೊಬ್ಬರೂ ಆ ವೇಳೆ ಸಹಾಯಕ್ಕೆ ಬರಲಿಲ್ಲ. ಆಗ ಎನಿಸಿದ್ದೊಂದೇ, ಇನ್ನೂ ಇಲ್ಲಿರಬೇಕಾ ಅಂತ. ಆದರೂ, ಕನಸು ಇಟ್ಟುಕೊಂಡಿದ್ದೇನೆ. ನಿರ್ದೇಶಕನಾಗಬೇಕು ಅಂತ ಹೊರಟಿದ್ದೇನೆ. ಆರಂಭದ ದಿನಗಳಲ್ಲಿ ಅದೆಷ್ಟೋ ಉಪವಾಸ ದಿನಗಳನ್ನೂ ನೋಡಿದ್ದುಂಟು. ಸಿನಿಮಾ ಫೀಲ್ಡ್ನಲ್ಲಿದ್ದೇನೆ ಅನ್ನೋದಷ್ಟೇ ಖುಷಿ. ಅದರ ಹೊರತಾಗಿ ಕಷ್ಟಗಳ ಸರಮಾಲೆಯೇ ದೊಡ್ಡದಿದೆ. ಆದರೂ, ಮುಂದೊಂದು ದಿನ ನಿರ್ದೇಶಕನಾಗ್ತೀನಿ ಎಂಬ ಭರವಸೆಯಿಂದಲೇ ಬಂದಿದ್ದನ್ನು ಸಹಿಸಿಕೊಂಡಿದ್ದೇನೆ” ಎನ್ನುತ್ತಾರೆ ಅಂಜನ್.
ಸಿನ್ಮಾಗೆ ಹೋಗಿ ಮಗ ಕೆಟ್ನಾ ಎಂಬ ಆತಂಕ
ತನ್ನ ಹೆಸರು ಹೇಳಲಿಚ್ಛಿಸದ ಸಹಾಯಕ ನಿರ್ದೇಶಕರೊಬ್ಬರ ಅಳಲಿನ ಮಾತಿದು. “ನಾನು ಮೂಲತಃ ಉತ್ತರ ಕರ್ನಾಟಕದಿಂದ ಬಂದವನು. ನನ್ನಂತೆಯೇ ರಾಜ್ಯಾದ್ಯಂತ ಸಾಕಷ್ಟು ಹುಡುಗರು ಕನಸು ಕಟ್ಟಿಕೊಂಡು ಸಿನಿಮಾ ಫೀಲ್ಡ್ಗೆ ಬಂದಿದ್ದಾರೆ. ಕೆಲವರು ಅದೃಷ್ಟದ ಮೇಲೆ ನಿರ್ದೇಶಕರಾಗಿದ್ದಾರೆ. ನಮ್ಮಂತವರು ಇನ್ನೂ ಸೈಕಲ್ ತುಳೀತಾನೇ ಇದೀವಿ. ನಾನು ಒಂದು ದಶಕದಿಂದಲೂ ಈ ಫೀಲ್ಡ್ನಲ್ಲಿದ್ದೇನೆ. ಈವರೆಗೆ ಸುಮಾರು ಹದಿನೈದು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಲ್ಲಿ ಸಹಾಯಕ ನಿರ್ದೇಶಕ ಎನ್ನುವುದಷ್ಟೇ ತೃಪ್ತಿ. ಬಿಟ್ಟರೆ, ಹಣದ ವಿಷಯದಲ್ಲಿ ಸೊನ್ನೆ. ಕೆಲಸ ಕೊಟ್ಟರೆ ಆದೇ ಹೆಚ್ಚಿರುವಾಗ, ಹಣದ ಮಾತೆಲ್ಲಿ? ಏನಾದರೂ, ನಿರ್ಮಾಪಕರ ಬಳಿ ಇಂತಿಷ್ಟು ಹಣ ಕೊಡಿ ಸರ್ ಅಂತ ಡಿಮ್ಯಾಂಡ್ ಇಟ್ಟರೆ, “ನೀವೆಲ್ಲಾ ಮುಂದೆ ಡೈರೆಕ್ಟರ್ ಆಗ್ತೀರಿ. ದೊಡ್ಡ ಆಫರ್ ಸಿಗುತ್ತವೆ. ನಾವೆಲ್ಲ ಹಿಂದೆ ಬಹಳ ಕಷ್ಟಪಟ್ಟು ಬಂದಿದ್ದೇವೆ. ಇದು ನಿಮ್ಮ ಮೊದಲ ಸಿನಿಮಾ ಅಂದುಕೊಂಡು ಕೆಲಸ ಮಾಡಿ ಅನ್ನುತ್ತಲೇ ಖರ್ಚಿಗೆ ಅಷ್ಟೋ ಇಷ್ಟೋ ಕಾಸು ಕೊಟ್ಟು ಸುಮ್ಮನಾಗುತ್ತಾರೆ. ಹೊಟ್ಟೆಪಾಡು ನೋಡಿಕೊಳ್ಳೋದೆ ಕಷ್ಟ ಎನಿಸಿದ ಸಂದರ್ಭದಲ್ಲಿ ಕೊರೊನಾ ಎರಗಿ ಬದುಕನ್ನು ಇನ್ನಷ್ಟು ಕಠಿಣವಾಗಿಸಿತು. ಇಲ್ಲಿಗೆ ಬಂದಾಗಲಷ್ಟೇ ಸಿನಿಮಾದ ಉದ್ದ, ಅಗಲ, ಆಳ ಗೊತ್ತಾಗಿದ್ದು. ಊರ್ ಕಡೆ ಹೋದರೆ, ನಿಮ್ ಸಿನಿಮಾ ಹತ್ತು ಕೋಟಿ ಗಳಿಸಿತ್ತಂತಲ್ಲಾ, ನಿಮಗೆಷ್ಟು ಕೊಟ್ರು ಅಂತ ಗೇಲಿ ಮಾಡಿದ್ದೂ ಆಯ್ತು. ಇನ್ನು ಮನೆಯವರು ಸಿನಿಮಾಗೆ ಹೋಗಿ ನಮ್ ಹುಡುಗ ಕೆಟ್ನಾ, ಅವರು ಕೆಟ್ಟ ದಾರಿ ಹಿಡಿದ್ನಾ ಎಂಬ ಪ್ರಶ್ನೆ ಹಾಕಿಕೊಂಡಿದ್ದೂ ಹೌದು. ಮದುವೆ ಮಾಡ್ಕೊಂಡು ಸೆಟ್ಲ್ ಆಗೋ ಅನ್ನೋ ಮನೆಯವರಿಗೆ, ನಾಳೆಯ ಮೇಲಿನ ನಂಬಿಕೆಯಿಂದಲೇ ನಾನು ನಿರ್ದೇಶಕನಾಗಿ ತೋರಿಸ್ತೀನಿ. ಆಮೆಲೆ ನಿಮ್ಮ ಮಾತು ಕೇಳ್ತೀನಿ ಅನ್ನುತ್ತಲೇ ವರ್ಷಗಳನ್ನು ಕಳೆದಿದ್ದೇನೆ. ಇಲ್ಲಿ ಉಪವಾಸ, ವನವಾಸ ಮಾಡಿಕೊಂಡೇ ಇಷ್ಟು ವರ್ಷ ಲೈಫು ತಳ್ಳಿದ್ದೇನೆ. ಒಂದೊಳ್ಳೆಯ ನಾಳೆಗೋಸ್ಕರ ಕಾಯುತ್ತಿದ್ದೇನೆ ಎನ್ನುತ್ತಲೇ ಭಾವುಕರಾಗುತ್ತಾರೆ ಆ ಸಹಾಯಕ ನಿರ್ದೇಶಕ.
ಅದೇನೆ ಇರಲಿ, ಇಲ್ಲಿ ತುಂಬಾನೇ ಸ್ಟ್ರಗಲಿಂಗ್ ಇದೆ. ಕೇವಲ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಿಗೆ ಈ ಮಾತು ಅನ್ವಯಿಸೋದಿಲ್ಲ. ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡು ಬಂದ ಪ್ರತಿಯೊಬ್ಬರಿಗೂ ಈ ಮಾತು ಅನ್ವಯಿಸುತ್ತದೆ. ಕೆಲವರಿಗೆ ಸಿನಿಮಾ ಅನ್ನೋದು ಕಲರ್ಫುಲ್ ಜಗತ್ತು. ಆದರೆ, ಇಲ್ಲಿ ಮಾತ್ರ ಕಲರ್ ಕಲರ್ ಕಾಗೆ ಹಾರಿಸೋ ಮಂದಿ ಸಾಕಷ್ಟು ಇದ್ದಾರೆ. ಹಾಗಾಗಿ, ಪ್ರತಿಭಾವಂತರು ಕಷ್ಟದ ಮೆಟ್ಟಿಲುಗಳಲ್ಲೇ ಏರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅದೆಷ್ಟೋ ಸಹ, ಸಹಾಯಕ ನಿರ್ದೇಶಕರು ಕೊರೊನಾ ಸಮಸ್ಯೆಗೆ ಸಿಲುಕಿ ತಮ್ಮ ಬಾಡಿಗೆ ಮನೆ, ರೂಮ್ ಖಾಲಿ ಮಾಡಿಕೊಂಡು ಊರು ಸೇರಿಕೊಂಡಿದ್ದುಂಟು. ಅನೇಕರು ತಮ್ಮ ಗೆಳೆಯರ ಜೊತೆ ಸೇರಿದ್ದುಂಟು, ಇನ್ನೂ ಕೆಲವರು ಈ ಫೀಲ್ಡ್ ಮೇಲೆ ನಂಬಿಕೆ ಇಟ್ಟು, ಕಷ್ಟಾನೋ, ಸುಖಾನೋ ಇಲ್ಲೇ ಇರ್ತೀವಿ ಅಂತ ಸಾಲ, ಸೂಲ ಮಾಡಿಕೊಂಡೇ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಮಂಸೋರೆ ಎನ್ನುವುದಕ್ಕೆ ಮತ್ತೊಂದು ಹೆಸರೇ ” ಮಾಸ್ ಅಂದ್ರು ಅವಾರ್ಡ್ ವಿನ್ನರ್ ಡೈರೆಕ್ಟರ್
ಸಕತ್ ಸದ್ದು ಮಾಡುತ್ತಿದೆ “ಆ್ಯಕ್ಟ್ 1978” ಟ್ರೇಲರ್
ಮಂಸೋರೆ ಅಂದ್ರೆ ಕನ್ನಡದ ಪ್ರತಿಭಾವಂತ ನಿರ್ದೇಶಕ. ಚಿತ್ರ ನಿರ್ದೇಶನದಲ್ಲಿ ಎಲ್ಲರದೂ ಒಂದು ದಾರಿಯಾದರೆ, ಮಂಸೋರೆ ಆಯ್ದುಕೊಂಡಿದ್ದೇ ಹೊಸತಾದ ಹಾದಿ. ಆ ಮೂಲಕವೇ ಚೊಚ್ಚಲ ಚಿತ್ರದಿಂದ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ನಿರ್ದೇಶಕ ಎನ್ನುವ ಹೆಗ್ಗಳಿಕೆ ಅವರದು. ಅಷ್ಟೇ ಅಲ್ಲ “ನಾತಿಚೆರಾಮಿʼ ಚಿತ್ರದೊಂದಿಗೆ ಕನ್ನಡಕ್ಕೆ ಐದು ರಾಷ್ಟ್ರ ಪ್ರಶಸ್ತಿ ಬಂದಿದ್ದು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಈಗವರು ಬದಲಾಗಿದ್ದಾರೆ. ಬದಲಾಗುವ ಕಾಲ ಅವರಿಗೂ ಬಂದಿದೆ. ಆರ್ಟ್ ಸಿನಿಮಾ ಮೇಕರ್ಸ್ ಎನ್ನುವ ಟಾರ್ಗೆಟ್ ಸಿಂಡ್ರೋಮಕ್ಕೆ ಈಗ ಸರ್ಜರಿ ಗ್ಯಾರಂಟಿ ಆಗಿದೆ. ಯಾಕಂದ್ರೆ ‘ಆ್ಯಕ್ಟ್ 1978’ ಚಿತ್ರ ಮಂಸೋರೆ ಸಿನಿ ಬದುಕಿನಲ್ಲಿ ಹೊಸ ಭಾಷೆ ಬರೆಯುವುದು ಖಾತರಿ ಆಗಿದೆ.
ಸದ್ಯಕ್ಕೆ ಮಂಸೋರೆ ನಿರ್ದೇಶಿಸಿ ತೆರೆಗೆ ತರುತ್ತಿರುವ ಚಿತ್ರ’ ಆ್ಯಕ್ಟ್ 1978′ ಚಿತ್ರ. ಟೈಟಲ್ ಮೂಲಕವೇ ಕುತೂಹಲ ಮೂಡಿಸಿದ್ದ ಚಿತ್ರವೀಗ ರಿಲೀಸ್ಗೆ ರೆಡಿ ಆಗಿದೆ. ರಿಲೀಸ್ಗೆ ಸಿದ್ದತೆ ನಡೆಸಿರುವ ಚಿತ್ರ ತಂಡ ಈಗ ಟ್ರೇಲರ್ ಮೂಲಕ ಪ್ರಚಾರ ಆರಂಭಿಸಿದೆ. ಕೆಲವೇ ದಿನಗಳ ಹಿಂದಷ್ಟೆ ಥೀಮ್ ಸಾಂಗ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ ವೀಗ ಟ್ರೇಲರ್ ಮೂಲಕ ಸಖತ್ ಸದ್ದು ಮಾಡುತ್ತಿದೆ. 2 ನಿಮಿಷ 44 ಸೆಕೆಂಡಿಗಳ ಅವದಿಯ ಈ ಚಿತ್ರದ ಅಧಿಕೃತ ಟ್ರೇಲರ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲಾ ಕಡೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಟ್ರೇಲರ್ ಲಾಂಚ್ ಆದ 24 ಗಂಟೆಗಳಲ್ಲಿ ಅದರ ವೀಕ್ಷಕರ ಸಂಖ್ಯೆ 1 ಲಕ್ಷ ದಾಟಿತ್ತು. ಎರಡನೇ ದಿನಕ್ಕೆ 2
ಲಕ್ಷ ಆಗಿದೆ. ಚಿತ್ರ ರಸಿಕರಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಅದೇ ವಿಶ್ವಾಸದ ಲ್ಲೀಗ ತಾವು ಬದಲಾಗಿದ್ದರ ಸುಳಿವು ನೀಡುತ್ತಾರೆ ನಿರ್ದೇಶಕ ಮಂಸೋರೆ. “ಹೌದು, ಇದೊಂಥರ ಸವಾಲಿನ ಸಂದರ್ಭ. ಬರೀ ಆರ್ಟ್ ಸಿನಿಮಾ ಡೈರೆಕ್ಟರ್ ಎನ್ನುವ ನನ್ನ ಮೇಲಿನ ಟಾರ್ಗೆಟ್ ಸಿಂಡ್ರೊಮ್ ಕ್ಕೆ ಸರ್ಜರಿ ಮಾಡಬೇಕಂತಲೇ ಈ ಸಿನಿಮಾ ಮಾಡಿದ್ದೇನೆ. ಮಂಸೋರೆ ಎನ್ನುವ ಇನ್ನೊಂದು ಹೆಸರೇ ಮಾಸ್ ಅಂತಾಗಬೇಕುʼ ಎನ್ನುವ ಮನದಾಳದ ಮಾತುಗಳನ್ನು ಆಪ್ತವಾಗಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ಮಂಸೋರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ತಾವು ಬದಲಾಗಿದ್ದು, ಬದಲಾಗಿದ್ದರ ಕುರಿತು ಹೀಗೆ ಹೇಳಿಕೊಳ್ಳುವುದಕ್ಕೂ ಕಾರಣ ತಮ್ಮ ಕ್ರಿಯೇಟಿವಿಟಿಯ ಮೇಲಿದ್ದ ಅಪನಂಬಿಕೆಯ ಟಾರ್ಗೆಟ್ ಸಿಂಡ್ರೋಮಾ.ಹೌದು, ಪ್ರಶಸ್ತಿ, ಪುರಸ್ಕಾರಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮುಕುಟ ಪ್ರಾಯ. ದುರಂತ ಅಂದ್ರೆ ಸಿನಿದುನಿಯಾದಲ್ಲಿ ಇದು ಪಕ್ಕಾ ಉಲ್ಟಾ. ಆರ್ಟ್ ಸಿನಿಮಾ ಮಾಡಿ ದೊಡ್ಡ ಮಟ್ಟದ ಪ್ರಶಸ್ತಿ ಪಡೆದವರು, ಕಮರ್ಷಿಯಲ್ ಸಿನಿಮಾ ಮಾಡೋದು ಕಷ್ಟ ಎನ್ನುವ ಆರೋಪಕ್ಕೆ ಸಿಲುಕುತ್ತಾರೆ. ಬಹಳಷ್ಟು ದಿನ ಅಂತಹ ಅಪ ನಂಬಿಕೆಯ ಸಿಂಡ್ರೋಮ್ ಕ್ಕೆ ಗುರಿಯಾಗಿ ನೋವು ಅನುಭವಿಸಿದವರ ಪೈಕಿ ಪ್ರತಿಭಾವಂತ ನಿರ್ದೇಶಕ ಮಂಸೋರೆ ಕೂಡ ಒಬ್ಬರು.
ಈಗ ಅದು ಗತಕಾಲಕ್ಕೆ ಜಾರುವುದು ಗ್ಯಾರಂಟಿ. ಸದ್ಯಕ್ಕೆ ಆಕ್ಟ್ 1978 ಸದ್ದು ಮಾಡುತ್ತಿರುವ ಪರಿ ನೋಡಿದರೆ, ಮಂಸೋರೆ ಮಾಸ್ ಪ್ರೇಕ್ಷಕರ ಮನ ಸೂರೆ ಗೊಂಡು ಮಾಸ್ ಮಂಸೋರೆ ಅಂತ ಜನಪ್ರಿಯತೆ ಪಡೆದುಕೊಂಡರು ಅಚ್ಚರಿ ಇಲ್ಲ. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ತೀವ್ರ ಕುತೂಹಲ ಹುಟ್ಟಿಸಿದೆ. ಒಂದು ಹೊಸತಾದ ತಾಜಾ ಕತೆ ಇಲ್ಲಿದೆ. ಅದೆಲ್ಲಕ್ಕಿಂತ ಥ್ರಿಲ್ಲರ್ ಕಥಾ ಹಂದರವೇ ಇಲ್ಲಿ ರೋಚಕವಾಗಿದೆ. ದಂಡೀ ಪಾತ್ರಗಳು ಇಲ್ಲಿವೆ. ದೊಡ್ಡ ತಾರಾಗಣ ಇಲ್ಲಿದೆ.
ಟ್ರೇಲರ್ ನಲ್ಲಿ ಹಲವು ವಿಷಯಗಳು ರಿವೀಲ್ ಆಗಿವೆ. ಒಂದು ಸಮಸ್ಯೆಯ ಇತ್ಯರ್ಥಕ್ಕೆ’ ಆ್ಯಕ್ಟ್ 1978′ ಬೇಕಿತ್ತು ಎನ್ನುವುದನ್ನು ಈ ಸಿನಿಮಾ ಹೇಳ ಹೊರಟಿದೆ ಎನ್ನುವುದನ್ನು ಟ್ರೇಲರ್ ಬಿಚ್ಚಿಟ್ಟಿದೆ. ಇದರಾಚೆ ಈ ಸಿನಿಮಾದ ಟೆಕ್ನಿಕಲ್ ಪ್ರದರ್ಶನ ಕೂಡ ಆಗಿದೆ. ಪತ್ರಕರ್ತ ಹಾಗೂ ಸಿನಿಮಾ ಪ್ರೇಮಿ ದಿನೇಶ್ ಕುಮಾರ್ ( ದಿನೂಸಚಂ) ಸಿನಿಮಾ ನೋಡಿದ್ದಾರೆ. ಅವರ ಪ್ರಕಾರ ಇದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಕನ್ನಡದ ಮಟ್ಟಿಗೆ ಇದೊಂಥರ ಲ್ಯಾಂಡ್ ಮಾರ್ಕ್ ಸಿನಿಮಾ ಮೂವೀ.
ರಿಲೀಸ್ ಮುನ್ನವೇ ‘ಆ್ಯಕ್ಟ್ 1978 ‘ಈ ಮಟ್ಟಕ್ಕೆ ಸದ್ದು ಮಾಡುತ್ತಿರುವುದರ ಹಿಂದೆ ಮಂಸೋರೆ ಅವರ ಸಿನಿಮಾ ಕಟ್ಟುವಿಕೆಯೇ ಕಾರಣ. ಹಾಗೆಯೇ ಒಂದು ಸಿನಿಮಾ ಮಾಡುವಾಗ ವಹಿಸುವ ಜಾಗ್ರತೆ, ಎಚ್ಚರವೂ ಕಾರಣ.
ಸಾಕಷ್ಟು ರಿಸರ್ಚ್ ಮಾಡಿಯೇ ಈ ಸಿನಿಮಾದ ಕತೆ ಬರೆದು, ಗೆಳೆಯರ ಜತೆ ಚರ್ಚಿಸಿ ಈ ಸಿನಿಮಾ ಮಾಡಿದ್ದು ಇವತ್ತು, ಒಂದಷ್ಟು ಸದ್ದು ಮಾಡಲು ಕಾರಣವಾಗಿದೆ. ಚಿತ್ರೋದ್ಯಮದಲ್ಲಿ ದೊಡ್ಡ ಬೆಂಬಲವೂ ಸಿಗುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದ ಥೀಮ್ ಸಾಂಗ್ ಲಾಂಚ್ ಮಾಡಿ ಶುಭ ಹಾರೈಸಿದ ಬೆನ್ನಲೇ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ರೇಲರ್ ಲಾಂಚ್ ಮಾಡಿ ಶುಭ ಹಾರೈಸಿದರು. ಇದು ಚಿತ್ರ ತಂಡಕ್ಕೆ ದೊಡ್ಡ ಬೆಂಬಲ ಸಿಕ್ಕಿದೆ. ಮಂಸೋರೆ ಹೆಸರು ಮಾಸ್ ಮಂಸೋರೆ ಅಂತಾಗುವುದು ಗ್ಯಾರಂಟಿ ಎನ್ನುವ ವಿಶ್ವಾಸ ಅವರಲ್ಲೂ ಇದೆ. ಬದಲಾವಣೆ ಜಗದ ನಿಯಮ.ಆಲ್ ದಿ ಬೆಸ್ಟ್ ಮಂಸೋರೆ.
ಟೂಲ್ಸ್ ಬಂದಿದೆ, ಪಲ್ಸ್ ಕೂತಿದೆ. ಟೂಲ್ಸ್ ಆ್ಯಂಡ್ ಫಲ್ಸ್ ಉತ್ತಮವಾಗಿದೆ. ಇನ್ನೇಕೆ ತಡ ಎಲ್ಲವೂ ಸರಿ ಹೋಗ್ತಿದೆ..!
– ಸಂಗೀತ ನಿರ್ದೇಶಕ ಹಂಸಲೇಖ ಇಷ್ಟು ಹೇಳಿದ್ದೇ ತಡ ಅಲ್ಲಿದ್ದವರು ಜೋರಾಗಿ ನಕ್ಕು , ಸಂಭ್ರಮಿಸಿದರು.
ಇದು ಆಗಿದ್ದು ಸಂಗೀತ ನಿರ್ದೇಶಕ ಪಳನಿ ಸೇನಾಪತಿ ಅವರ ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆ ಕಾರ್ಯಕ್ರಮದಲ್ಲಿ. ನಾದಬ್ರಹ್ಮ ಹಂಸಲೇಖ ಅವರ ಶಿಷ್ಯ ಪಳನಿ ಸೇನಾಪತಿ . ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ.ಈಗ ಅವರೇ ಸಂಗೀತ ನಿರ್ದೇಶಕ ರಾಗಿ ಹೊಸದೊಂದು ಸ್ಟುಡಿಯೋ ಆರಂಭಿಸಿದ್ದು ಗುರುವಾರ ಅದರ ಉದ್ಘಾಟನೆ ಹಂಸಲೇಖ ಬಂದಿದ್ದರು.
ಹಂಸಲೇಖ ಇರುವ ಕಡೆ ಆಡುಭಾಷೆಗೆ ಬರವಿಲ್ಲ.ಹಾಗೆಯೇ ಶಬ್ದಕ್ಕೂ ಬರವಿಲ್ಲ.ಮಾತು ಶುರು ಮಾಡಿದರೆ ನಗಿಸುವ, ಗಂಭೀರವಾಗಿ ಅಲೋಚಿಸುವಂತೆ ಮಾತನಾಡುವ ಕಲೆ ಅವರಿಗೆ ಸಿದ್ದಿಸಿದೆ.ಶಿಷ್ಯ ಪಳನಿಯವರ ’ಪಲ್ಸ್ ರೆರ್ಕಾಡಿಂಗ್ ಸ್ಟುಡಿಯೋ’ ಉದ್ಘಾಟಿಸಿ ಮಾತನಾಡಿದ ಅವರು, ಹೋಲ್ಡ್ ದಿ ಪಲ್ಸ್, ಲಿಸನ್ ದಿ ಮ್ಯೂಸಿಕ್. ಸೌಂಡ್ ಆಫ್ ಮ್ಯೂಸಿಕ್ ಇದೆ. ಸೌಂಡ್ ಆಫ್ ರುಪಿ ಬೇಕು. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ನಮ್ಮ ಸಿನಿಮಾಗಳನ್ನು ಹೇಗೆ ಮಾರ್ಕೆಟ್ ಮಾಡಿಸಬೇಕು. ಇವತ್ತು ಉತ್ಪಾದನೆ ಇಷ್ಟು. ಮಾರಾಟ ಆಗುವ ಜಾಗಗಳು ಅಷ್ಟು. ಹುಷಾರಾಗಿ ಮಾರಾಟ ಮಾಡಿ ದುಡ್ಡು ತೆಗದುಕೊಳ್ಳಬೇಕಿದೆ. ಟೂಲ್ಸ್ ಅಂಡ್ ಪಲ್ಸ್ ಉತ್ತಮವಾಗಿದೆ. ಅಂಥಾ ಪಲ್ಸ್ ಪಳನಿಗೆ ಒಳ್ಳೆಯದಾಗಲಿ ಎಂದರು.
ಪಳನಿಸೇನಾಪತಿ ಇಲ್ಲಿಯವರೆಗೂ ೧೦೦೦ಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನಲೆ ಶಬ್ದ ಒದಗಿಸಿ, ಇಂದು ಸಂಗೀತ ನಿರ್ದೇಶಕರಾಗಿದ್ದಾರೆ. ಪಲ್ಸ್ ಹೆಸರಲ್ಲಿ ಹೊಸದೊಂದು ರೆಕಾರ್ಡಿಂಗ್ ಸ್ಟುಡಿಯೋ ಶುರು ಮಾಡಿದ್ದು, ಆ ಬಗ್ಗೆಮಾತನಾಡಿದರು. ಹಿರಿಯ ನಿರ್ದೇಶಕ ಭಗವಾನ್, ಲಹರಿವೇಲು, ವಿ.ಮನೋಹರ್, ನಟ ವಿಜಯ್ಮಹೇಶ್, ನಿರ್ಮಾಪಕರುಗಳು ಶುಭಸಂದರ್ಭದಲ್ಲಿ ಹಾಜರಿದ್ದರು.
ಕೊರೋನಾ ಆತಂಕ ದೂರವಾಗುತ್ತಿರುವ ಬೆನ್ಮಲೇ ಸಾಲು ಸಾಲು ಸಿನಿಮಾಗಳು ಸೆಟ್ಟೇರುತ್ತಿವೆ. ಇವೆಲ್ಲವೂ ಹೊಸಬರ ಸಿನಿಮಾ ಎನ್ನುವುದು ಇನ್ನೊಂದು ವಿಶೇಷ. ಈಗ ಆ ಸಾಲಿಗೆ ಮತ್ತೊಂದು ಸಿನಿಮಾ.ಅದರ ಹೆಸರು ‘ಇಬ್ಬರ ನಡುವಿನ ಮುದ್ದಿನ ರಾಣಿ’.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೌರಭ್ ಕಿಶೋರ್ ಈ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದು, ಪಿ.ಎಂ.ಆರ್ ಕೋಣ್ಣಾರೆಡ್ಡಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ವಿಜಯ್ ಕುಮಾರ್ ಹಾಗೂ ಮಧುಬಾಬು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ದೊಡ್ಡ ಬಳ್ಳಾಪುರದ ಅಂಗಸಾನ ರೆಸಾರ್ಟ್ ನಲ್ಲಿ ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ಮೂರು ವೆಂಕಟ ರೆಡ್ಡಿ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ಈ ಚಿತ್ರವೂ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ರೊಮ್ಯಾಂಟಿಕ್ ಲವ್ ಸ್ಟೋರಿ ಆಧಾರಿತ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಎಂ.ಎಸ್.ಎನ್ ರಾಜಾ ನಿರ್ದೇಶಿಸುತ್ತಿದ್ದಾರೆ. ಹಾಗೆಯೇ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕ ರಾಜಾ ಅವರು ಹೇಳುವ ಪ್ರಕಾರ, ಬೆಂಗಳೂರು, ದೊಡ್ಡಬಳ್ಳಾಪುರ, ಮಡಿಕೇರಿ ಮುಂತಾದ ಕಡೆ 15 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎಂ.ಎಂ.ಮೋಹನ್ ಸಂಗೀತ ನೀಡುತ್ತಿದ್ದಾರೆ. ಬಾಲು ಸುರೇಶ್ ಛಾಯಾಗ್ರಹಣ, ಸತ್ಯಬಾಬು ಸಂಕಲನ ಹಾಗೂ ಭೂಪತಿ ಯಾದಗಿರಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ಚಿತ್ರಕ್ಕೆ ನಿರ್ಮಾಪಕ ಸೌರಭ್ ಕಿಶೋರ್ ನಾಯಕರಾಗಿ ನಟಿಸುತ್ತಿದ್ದು , ಅವರೊಂದಿಗೆ ಚಿತ್ರದ ತಾರಾಬಳಗದಲ್ಲಿ ಆಕಾಶ್ ಆರಾಧ್ಯ, ದಿವ್ಯ ರಾವ್, ರೂಪ ರಾಯಪ್ಪ, ಸಂಜನ ನಾಯ್ಡು, ಮಹೇಂದರ್, ವಿಕ್ಟರಿ ವಾಸು, ಶೇಷಗಿರಿ,ರೆಡ್ಡಿ, ಲೋರ ಇದ್ದಾರೆ.
ಈ ಬಣ್ಣದ ಲೋಕವೇ ಹಾಗೆ, ಇಲ್ಲಿ ಒಮ್ಮೆ ಒಳನುಗ್ಗಿದರೆ ಮುಗೀತು. ಅದು ಸೋಲಿರಲಿ, ಗೆಲುವಿರಲಿ ಮತ್ತೆ ಮತ್ತೆ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರಬೇಕು. ಇದು ಈಗಿನದ್ದಲ್ಲ. ಸಿನಿಮಾ ಹುಟ್ಟು ಯಾವಾಗ ಶುರುವಾಯ್ತೋ ಅಂದಿನಿಂದಲೂ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಸಿನಿಮಾರಂಗ ಸ್ಪರ್ಶಿಸಿದ್ದು, ಗೆಲುವು ಕಾಣುವ ಉತ್ಸಾಹದಲ್ಲೇ ಒಂದಷ್ಟು ಪ್ರಯತ್ನಗಳೊಂದಿಗೆ ಮರಳಿ ಯತ್ನ ಮಾಡುತ್ತಲೇ ಇದ್ದಾರೆ. ಅದೆಷ್ಟೋ ಮಂದಿ ಸಿನಿಮಾವನ್ನೇ ಬದುಕಾಗಿಸಿಕೊಂಡಿದ್ದಾರೆ. ಸದ್ದಿಲ್ಲದೆಯೇ ಈ ಕಲೆಯ ಕಾಯಕ ಮಾಡುತ್ತಲೇ ಬದುಕು ಸವೆಸುತ್ತಿದ್ದಾರೆ. ಅಂತಹವರ ಸಾಲಿಗೆ ಶ್ರೀಧರ್ ಶೆಟ್ಟಿ ಕೂಡ ಒಬ್ಬರು.
ಶ್ರೀಧರ್ ಶೆಟ್ಟಿ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಕಳೆದ ಎರಡುವರೆ ದಶಕಗಳಿಗೂ ಹೆಚ್ಚು ಕಾಲ ಇವರಿಗೆ ಸಿನಿಮಾರಂಗದ ಒಡನಾಟವಿದೆ. ಇಷ್ಟು ವರ್ಷಗಳ ಅನುಭವ ಇರುವ ಅವರು, ಹಲವು ಧಾರಾವಾಹಿಗಳಿಗೆ ಕಥೆ, ಸಂಭಾಷಣೆ, ಚಿತ್ರಕಥೆ ಬರೆದಿದ್ದಾರೆ. ಇದರೊಂದಿಗೆ ಈವರೆಗೆ ಮೂರು ಸಿನಿಮಾ ನಿರ್ದೇಶಿಸಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಮೂರು ಸಿನಿಮಾಗಳನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ. ಇಷ್ಟಕ್ಕೂ ಈ ಶ್ರೀಧರ್ ಶೆಟ್ಟಿ ಯಾರು ಎಂಬ ಪ್ರಶ್ನೆಗೆ ಈ ಕೆಳಗಿರುವ ಸುದ್ದಿ ನೋಡಿ.
“1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್, ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ”
ಸಿನಿಮಾರಂಗ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ. ಆದರೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೆ. ಇಲ್ಲಿ ಪ್ರತಿಭೆ ಮತ್ತು ಅದೃಷ್ಟ ಇದ್ದರೆ ಯಾವುದೇ ಡಿಗ್ರಿಯ ಅಗತ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಶ್ರೀಧರ್ ಶೆಟ್ಟಿ ಬಗ್ಗೆ ಹೇಳೋದಾದರೆ, ಈಗಾಗಲೇ ಬದುಕಿನ ಅರ್ಧಸೆಂಚುರಿ ಮುಗಿಸಿ ಮುನ್ನೆಡೆಯುತ್ತಿದ್ದಾರೆ. ಆದರೆ, ಅವರ ಸಿನಿಮಾ ಉತ್ಸಾಹ ಮಾತ್ರ ಕುಗ್ಗಿಲ್ಲ. ಇವರು ಓದಿದ್ದು ಕೇವಲ 6 ನೇ ತರಗತಿ. ಹಾಗಂತ, ಇವರು ಬದುಕು ಬಲುಕಷ್ಟ ಅಂದುಕೊಳ್ಳಲೂ ಇಲ್ಲ. ಓದುವ ಆಸಕ್ತಿ ಇಟ್ಟುಕೊಳ್ಳದ ಇವರು ಸಿನಿಮಾ ಆಸಕ್ತಿ ಬೆಳೆಸಿಕೊಂಡರು. ಓದುವ ದಿನಗಳಲ್ಲೇ ಹಾಡು ಹಾಡುವ ಗೀಳು ಇಟ್ಟುಕೊಂಡವರು. ಕಾಲಕ್ರಮೇಣ ಇವರು ಕಥೆ ಬರೆಯುವುದರ ಕಡೆ ವಾಲಿದರು. ಆ ಸಮಯದಲ್ಲಿ ನಾಲ್ಕು ಕಥೆ ಬರೆದಿಟ್ಟುಕೊಂಡಿದ್ದರು. ಆಗಿನ ಒಂದಷ್ಟು ತಿಂಗಳ ಹಾಗೂ ವಾರದ ಪತ್ರಿಕೆಗಳಲ್ಲಿ ಪ್ರಕಟಿಸಲು ಕಳುಹಿಸಿದರೂ, ಇವರ ಕಥೆ ರಿಜೆಕ್ಟ್ ಆಗಿತ್ತು. ಬೇಸರಿಸಿಕೊಳ್ಳದ ಅವರು ಸಂಪಂಗಿರಾಮ ನಗರದ ದೇವರಾಜು ಎಂಬುವವರು ಗಣೇಶ ಹಬ್ಬದಲ್ಲಿ ಮಾಡುತ್ತಿದ್ದ ನಾಟಕವೊಂದರಲ್ಲಿನಟಿಸಲು ಅವಕಾಶ ಕೊಟ್ಟಿದ್ದಾರೆ. ನಟನೆಯ ಗಂಧ ತಿಳಿಯದ ಅವರಿಗೆ ಅಲ್ಲಿಂದ ನಟನೆ ಕಡೆ ಆಸಕ್ತಿ ಬೆಳೆದಿದೆ. ಅಲ್ಲಿಂದಲೇ ಅವರು ಸಿನಮಾ ಕಡೆ ವಾಲುವಂತಾಗಿದೆ. ನಟನೆ ಜೊತೆ ಕಥೆ ಬರೆಯುವ ಹುಚ್ಚು ಇಟ್ಟುಕೊಂಡಿದ್ದ ಶ್ರೀಧರ್ ಶೆಟ್ಟಿ, 1993 ರಲ್ಲಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಭೇಟಿಯಾದ ಶ್ರೀಧರ್ ತಾವು ಬರೆದ ಕಥೆ ಹೇಳಿದಾಗ, ಸಿದ್ಧಲಿಂಗಯ್ಯ ಅವರು “ಡಬ್ಬಾ ಥರಾ ಇದೆ ಎಂದು ಬೈದು ಕಳಿಸಿದ್ದರಂತೆ. ಅಷ್ಟಾದರೂ ಶ್ರೀಧರ್ ಕಥೆ ಬರೆಯುವುದನ್ನು ನಿಲ್ಲಿಸದೆ, ಸಿದ್ಧಲಿಂಗಯ್ಯ ಇರುತ್ತಿದ್ದ ಟೂರಿಸ್ಟ್ ಹೋಟೆಲ್ಗೆ ಹೋಗಿ ಕಥೆ ಹೇಳಲು ಕಾಡಿದ್ದಾರೆ. ಕೊನೆಗೆ ಇವರ ಕಾಟ ತಾಳಲಾರದೆ, ಸಿದ್ಧಲಿಂಗಯ್ಯ ಕೂರಿಸಿಕೊಂಡು ಕಥೆ ಬರೆಯುವುದನ್ನು ಹೇಳಿಕೊಟ್ಟಿದ್ದಾರೆ. ಆ ಬಳಿಕ ಶ್ರೀಧರ್, ಮತ್ತೊಂದು ಹೊಸ ಕಥೆ ಬರೆದುಕೊಂಡು ಹೋಗಿ ಕಥೆ ಹೇಳಿದಾಗ, ಪರವಾಗಿಲ್ಲ ಅರಿತಿದ್ದೀಯ ಅಂತ ಹೇಳಿದ್ದಲ್ಲದೆ, ನಾನೇ ಈ ಕಥೆಯನ್ನು ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಆ ವೇಳೆ “ಪ್ರೇಮ ಪ್ರೇಮ” ಸಿನಿಮಾ ಸೋಲು ಕಂಡಿದ್ದರಿಂದ ಅವರು ಸಿನಿಮಾ ಮಾಡುವ ಪ್ರಯತ್ನ ಮಾಡಲಿಲ್ಲ. ಅಂದು ಶ್ರೀಧರ್ ಅವರ ಕಥೆಗೆ ಸಿದ್ಧಲಿಂಗಯ್ಯ ಅವರು ಇಟ್ಟ ಹೆಸರು, “ಬನವಾಸಿಯ ಬಯಲಲ್ಲಿ”. ಇಂದಿಗೂ ಆ ಕಥೆ ಹಾಗೆಯೇ ಇದೆ ಎಂಬುದು ಶ್ರೀಧರ್ ಶೆಟ್ಟಿ ಮಾತು.
ಇಷ್ಟಾದರೂ ಶ್ರೀಧರ್ ಸಿನಿಮಾ ಮೇಲಿನ ಆಸಕ್ತಿ ಕಳೆದುಕೊಳ್ಳದೆ, ಮರಳಿ ಯತ್ನವ ಮಾಡು ಎಂಬಂತೆ ಅವಕಾಶಕ್ಕಾಗಿ ಅಲೆದಾಡಿದ್ದಾರೆ. ಕೊನೆಗೆ ಕಿರುತೆರೆ ನಿರ್ದೇಶಕ ಅಮರ್ದೇವ್, ನಾಗತಿಹಳ್ಳಿ ಚಂದ್ರಶೇಖರ್ ಅವರ ಸಂಪರ್ಕ ಬೆಳೆಸಿಕೊಂಡು “ವಠಾರ” ಧಾರಾವಾಹಿಗೆ ಬರೆಯುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸುಮಾರು 600 ಸಂಚಿಕೆಗಳಿಗೆ ಬರೆಯುವುದರ ಜೊತೆಗೆ 300 ಸಂಚಿಕೆಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದ ಶ್ರೀಧರ್, ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ “ಬೆಳ್ಳಿಚುಕ್ಕಿ”ಯಲ್ಲೂ ಬರೆಯುವ ಅವಕಾಶ ಪಡೆದಿದ್ದಾರೆ. ಆದರೆ, 6ನೇ ತರಗತಿ ಓದಿದವನು ಹೇಗೆಲ್ಲಾ ಬರೆಯಬಹುದು ಎಂಬ ಅನುಮಾನದ ಮಾತುಗಳನ್ನಾಡಿದ್ದರಿಂದ, ಬೇಸತ್ತು, ಅಲ್ಲಿಂದ ಹೊರಬಂದಿದ್ದಾರೆ. ಕಾಲ ಕ್ರಮೇಣ ಅವರು ಸಿನಿಮಾ ನಿರ್ದೇಶನ ಕಡೆ ಮುಖ ಮಾಡಿದ್ದಾರೆ. “ಚಕ್ರ ಸುಳಿ” ಎಂಬ ಸಿನಿಮಾಗೆ ಕೈ ಹಾಕಿದ್ದಾರೆ. ಆ ಸಿನಿಮಾ ಮುಗಿಯುವ ಹಂತದಲ್ಲೇ ಅವರು “ಜನುಮದ ಸ್ನೇಹಿತರು” ಚಿತ್ರ ಮಾಡಿದ್ದಾರೆ. ಆ ಚಿತ್ರದ ಹೀರೋ ರೋಹಿತ್ ಶೆಟ್ಟಿ ಅವರು “ಆರೋಹಣ” ಚಿತ್ರ ನಿರ್ದೇಶನಕ್ಕೆ ಅವಕಾಶವನ್ನೂ ಕೊಟ್ಟಿದ್ದಾರೆ. ಈಗ ಅವರ “ಚಕ್ರ ಸುಳಿ” ಬಿಡುಗಡೆಗೆ ಸಿದ್ಧಗೊಂಡಿದೆ. ಕೈಯಲ್ಲಿ “ಮ್ಯಾಜಿಕ್ ಮನೆ” ಚಿತ್ರವಿದೆ. ಕಳೆದ ಯುಗಾದಿಯಲ್ಲಿ ಪೂಜೆಯಾಗಿದೆ. ಆದರೆ, ಲಾಕ್ಡೌನ್ ಆಗಿದ್ದರಿಂದ ಅದು ಸದ್ಯಕ್ಕೆ ಬ್ರೇಕ್ನಲ್ಲಿದೆ. ಇದರೊಂದಿಗೆ ಮೈಸೂರಿನ ರವಿ ಮತ್ತು ಅರ್ಬಾಜ್ ಎಂಬುವವರ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ತಡವಾದರೂ, ಅವಕಾಶ ಪಡೆದ ಶ್ರೀಧರ್, ಕನ್ನಡ ಚಿತ್ರರಂಗದಲ್ಲಿ ಚಂದದ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅನುಭವ ಹೊಂದಿರುವ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಕಾಲದಲ್ಲಿ ಅವಕಾಶ ಸಿಗಬೇಕಷ್ಟೆ. ಇಲ್ಲಿ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ.
* 9 ವರ್ಷಗಳ ಕಠಿಣ ಶ್ರಮ * 6500 ಹಾಡುಗಳು * 4000 ಚಿತ್ರಗಳ ಟೀಸರ್, ಟ್ರೇಲರ್ * ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲೂ ಹವಾ * ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ
ಮನೋಹರ್ ನಾಯ್ಡು, ವೇಲು
” ಯಾವುದೇ ಒಂದು ಸಾಧನೆಯ ಹಿಂದೆ ಒಂದು ಕಥೆ ಇರುತ್ತೆ. ಅಲ್ಲಿ ರಾತ್ರಿ-ಹಗಲಿನ ಕಠಿಣ ಶ್ರಮ ಇದ್ದೇ ಇರುತ್ತೆ. ಲಹರಿ ಮ್ಯೂಸಿಕ್ ಸಂಸ್ಥೆ ಕೂಡ ಅಂಥದ್ದೊಂದು ಕಠಿಣ ಶ್ರಮದ ಮೇಲೆಯೇ ಇಂದು ದಕ್ಷಿಣ ಭಾರತದಲ್ಲಿ ಟಾಪ್ನಲ್ಲಿದೆ. ದಶಕಗಳ ಹಿಂದೆ ಕೇವಲ 500 ರುಪಾಯಿ ಬಂಡವಾಳ ಹೂಡಿ ತನ್ನ ಶ್ರದ್ಧೆಯ ಕಾಯಕ ಶುರುಮಾಡಿದ ಲಹರಿ ಸಂಸ್ಥೆ, ಈಗ ಸಾವಿರಾರು ಕೋಟಿಯ ಒಡೆಯನಾಗಿದೆ ಅಂದರೆ, ಹಿಂದಿನ ಶ್ರಮದ ಫಲವದು”
ಇದು ಸುಮಾರು ಎರಡ್ಮೂರು ದಶಕಗಳ ಹಿಂದಿನ ಮಾತು. ಆಗೆಲ್ಲಾ ಟೇಪ್ ರೆಕಾರ್ಡ್ಗಳ ಸುಗ್ಗಿ. ನಗರ, ಪಟ್ಟಣವಷ್ಟೇ ಅಲ್ಲ, ಹಳ್ಳಿಗಳಲ್ಲೂ “ಪ್ರೇಮಲೋಕ” ಚಿತ್ರದ ಹಾಡುಗಳದ್ದೇ ಹಬ್ಬ! ಟೇಪ್ ರೆಕಾರ್ಡ್ ಇದ್ದವರ ಮನೆಯಲ್ಲಂತೂ “ಪ್ರೇಮಲೋಕ” ಕ್ಯಾಸೆಟ್ ಫಿಕ್ಸ್. ಅಷ್ಟರಮಟ್ಟಿಗೆ “ಪ್ರೇಮಲೋಕ” ಹಾಡುಗಳು ಜನಪ್ರಿಯಗೊಂಡಿದ್ದವು. ಈ ಜನಪ್ರಿಯ ಹಾಡುಗಳನ್ನು ಅಂದಿನ ಕಾಲಕ್ಕೆ ಮನೆ ಮನಸ್ಸಿಗೆ ತಲುಪಿಸಿದ್ದು ಲಹರಿ ಆಡಿಯೋ ಸಂಸ್ಥೆ. ಆ ಕಾಲಕ್ಕೇ ಲಹರಿ ಆಡಿಯೋ ಸಂಸ್ಥೆಯದು ದೊಡ್ಡ ಹೆಸರು. ಆ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿರುವುದಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಉನ್ನತ ಸ್ಥಾನದಲ್ಲಿದೆ. ಅಷ್ಟೇ ಆಗಿದ್ದರೆ, ಹೆಚ್ಚು ಹೇಳುವ ಅಗತ್ಯ ಇರುತ್ತಿರಲಿಲ್ಲ. ಲಹರಿ ಮ್ಯೂಸಿಕ್ ಸಂಸ್ಥೆ ಈಗ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಲಹರಿ ಮ್ಯೂಸಿಕ್ ಸಂಸ್ಥೆ ಬರೋಬ್ಬರಿ ಒಂದು ಕೋಟಿ ಚಂದಾದಾರರನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂಬುದೇ ಈ ಹೊತ್ತಿನ ವಿಶೇಷ.
ಲಹರಿ ಆಡಿಯೋ ಸಂಸ್ಥೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವ ಮೂಲಕ ತನ್ನ ಚಂದಾದಾರರನ್ನೂ ಖುಷಿಪಡಿಸುತ್ತಿದೆ ಎಂಬುದು ಹೆಮ್ಮೆಯ ವಿಷಯ. ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಈ ಸಂಸ್ಥೆಯ ರೂವಾರಿಗಳು ಎಂಬುದು ಮತ್ತೊಂದು ಖುಷಿ. ಸಾಕಷ್ಟು ಸಂಕಷ್ಟಗಳ ಸವಾಲುಗಳನ್ನು ಎದುರಿಸಿದ ಈ ಸಹೋದರರು ಈಗ ಅನೇಕ ಉತ್ಸಾಹಿ ಯುವ ಉದ್ಯಮಿಗಳಿಗೆ, ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಇಷ್ಟಕ್ಕೂ ಈ ಲಹರಿ ಮ್ಯೂಸಿಕ್ ಸಂಸ್ಥೆ ಖಾತೆಯಲ್ಲಿ ಒಂದು ಕೋಟಿ ಚಂದಾದಾರರು ಇದ್ದಾರೆಂದರೆ ಅದು ಲಹರಿ ಮ್ಯೂಸಿಕ್ ಸಂಸ್ಥೆ ಕೊಡುತ್ತಿರುವ ಗುಣಮಟ್ಟದ ಹಾಗೂ ಚಂದದ ಹಾಡುಗಳು ಕಾರಣ. ಇಷ್ಟೆಲ್ಲಾ ಪ್ರಗತಿಗೊಂಡಿರುವ ಲಹರಿ ಮ್ಯೂಸಿಕ್ ಸಂಸ್ಥೆ ಈಗಾಗಲೇ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಹಿಂದೆ ಯೂಟ್ಯೂಬ್ ಕೊಡಮಾಡುವ ಪ್ರತಿಷ್ಠಿತ ಸ್ವರ್ಣಪದಕ ಪ್ರಶಸ್ತಿಗೆ ಭಾಜನವಾಗಿದ್ದ ಲಹರಿ ಮ್ಯೂಸಿಕ್ ಈಗ ವಜ್ರ ಪದಕ ಪಡೆಯುವ ಉತ್ಸಾಹದಲ್ಲಿದೆ. ಅಂದಹಾಗೆ, ಈ ಅವಾರ್ಡ್ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ಮ್ಯೂಸಿಕ್ ಸಂಸ್ಥೆ ಎಂಬುದು ವಿಶೇಷ.
ಯಶಸ್ಸಿಗೆ ದಶಕದ ಕಠಿಣ ಶ್ರಮ ಕಾರಣ
ಯಾವುದೇ ಒಂದು ಸಾಧನೆಯ ಹಿಂದೆ ಒಂದು ಕಥೆ ಇರುತ್ತೆ. ಅಲ್ಲಿ ರಾತ್ರಿ-ಹಗಲಿನ ಕಠಿಣ ಶ್ರಮ ಇದ್ದೇ ಇರುತ್ತೆ. ಲಹರಿ ಮ್ಯೂಸಿಕ್ ಸಂಸ್ಥೆ ಕೂಡ ಅಂಥದ್ದೊಂದು ಕಠಿಣ ಶ್ರಮದ ಮೇಲೆಯೇ ಇಂದು ದಕ್ಷಿಣ ಭಾರತದಲ್ಲಿ ಟಾಪ್ನಲ್ಲಿದೆ. ದಶಕಗಳ ಹಿಂದೆ ಕೇವಲ 500 ರುಪಾಯಿ ಬಂಡವಾಳ ಹೂಡಿ ತನ್ನ ಶ್ರದ್ಧೆಯ ಕಾಯಕ ಶುರುಮಾಡಿದ ಲಹರಿ ಸಂಸ್ಥೆ, ಈಗ ಸಾವಿರಾರು ಕೋಟಿಯ ಒಡೆಯನಾಗಿದೆ ಅಂದರೆ, ಹಿಂದಿನ ಶ್ರಮದ ಫಲವದು. ಈ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, “ಈ ಸಾಧನೆಗೆ ಕಾರಣ ನಾವೊಬ್ಬರೇ ಅಲ್ಲ. ನನ್ನ ಸಿಬ್ಬಂದಿಯೂ ಇದ್ದಾರೆ. ಲಹರಿ ಮ್ಯೂಸಿಕ್ ಸಂಸ್ಥೆ ಒಂದು ಕೋಟಿ ಚಂದಾದಾರರನ್ನು ಹೊಂದಿದೆ ಅಂದರೆ, ನಿಜಕ್ಕೂ ಸುಲಭದ ಮಾತಲ್ಲ. ಇದಕ್ಕಾಗಿ ನಾವು ಕಳೆದ ಒಂದು ದಶಕದಿಂದಲೂ ಹಗಲು-ರಾತ್ರಿ ಕಠಿಣ ಶ್ರಮಪಟ್ಟಿದ್ದರಿಂದಲೇ ಇಂದು ಈ ಪ್ರತಿಫಲ ಕಾಣುವುದಕ್ಕೆ ಕಾರಣ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಏಕೈಕ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸಿದೆ. ಇದೊಂದು ರೀತಿ ಡಿಜಿಟಲ್ ಕ್ರಾಂತಿ. ಎಲ್ಲವೂ ಡಿಜಿಟಲ್ಮಯ ಆಗಿದ್ದರಿಂದ ಬಹಳಷ್ಟು ಆಡಿಯೋ ಕಂಪೆನಿಗಳು ಭಯಗೊಂಡಿದ್ದು ನಿಜ. ಆಗ ನಾವು ಬೇರೆ ಏನನ್ನೂ ಯೋಚಿಸದೆ, ಲಹರಿ ಮ್ಯೂಸಿಕ್ ಹೆಸರಲ್ಲಿ ಸಿಂಪಲ್ಲಾಗಿ ಒಂದು ಯುಟ್ಯೂಬ್ ಚಾನೆಲ್ ಶುರುಮಾಡಿದೆವು. ಆರಂಭದಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೆ ಕೆಲಸ ಮಾಡಿದೆವು. ಜೀರೋದಿಂದ ಆರಂಭಿಸಿದ ಈ ಸಂಸ್ಥೆ ಈಗ ಉನ್ನತಮಟ್ಟದಲ್ಲಿದೆ. ಸಂಗೀತ ಕ್ಷೇತ್ರ ಎಂಬುದು ನಮ್ಮ ಪಾಲಿಗೆ ನಮ್ಮ ತಾಯಿ ಇದ್ದಂತೆ. ಇದಕ್ಕೆ ಚಿತ್ರರಂಗದ ಎಲ್ಲರೂ ಕಾರಣ ಎಂಬುದು ಲಹರಿ ವೇಲು ಮಾತು.
” ಒಂದು ಸಂಸ್ಥೆಯ ಬೆಳವಣಿಗೆ ಹಿಂದೆ ಮಹಾನ್ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ನಮ್ಮ ಈ ಲಹರಿ ಮ್ಯೂಸಿಕ್ ಸಂಸ್ಥೆಗೆ ನನ್ನ ಅಣ್ಣ ಮನೋಹರ್ ನಾಯ್ಡು ಅವರೇ ಬೆನ್ನೆಲುಬು. ನಮಗೆ ಅವರೇ ನಿಜವಾದ ಕ್ಯಾಪ್ಟನ್. ನಾನು ಕೇವಲ ಈ ಲಹರಿ ಆಡಿಯೋ ಸಂಸ್ಥೆಯ ಉದ್ಯೋಗಿೈಷ್ಟೇ. ಇನ್ನು, ನನ್ನ ಅಣ್ಣನ ಮಕ್ಕಳಾದ ನವೀನ್ ಕುಮಾರ್ ಹಾಗೂ ಚಂದ್ರು ವಿದೇಶದಲ್ಲಿ ಓದಿದವರು. ಅವರು ತಾಂತ್ರಿಕತೆಯಲ್ಲಿ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರ ಆ ತಾಂತ್ರಿಕ ತಿಳುವಳಿಕೆ ಕೂಡ ನಮ್ಮ ಆಡಿಯೋ ಸಂಸ್ಥೆಯ ವ್ಯಾಪಾರ ವಹಿವಾಟುಗೆ ಸಹಕಾರಿಯಾಗಿದೆ ”
ಲಹರಿಗೆ ನನ್ನ ಸಹೋದರ ಬೆನ್ನೆಲುಬು
ಒಂದು ಸಂಸ್ಥೆಯ ಬೆಳವಣಿಗೆ ಹಿಂದೆ ಮಹಾನ್ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ನಮ್ಮ ಈ ಲಹರಿ ಮ್ಯೂಸಿಕ್ ಸಂಸ್ಥೆಗೆ ನನ್ನ ಅಣ್ಣ ಮನೋಹರ್ ನಾಯ್ಡು ಅವರೇ ಬೆನ್ನೆಲುಬು. ನಮಗೆ ಅವರೇ ನಿಜವಾದ ಕ್ಯಾಪ್ಟನ್. ನಾನು ಕೇವಲ ಈ ಲಹರಿ ಆಡಿಯೋ ಸಂಸ್ಥೆಯ ಉದ್ಯೋಗಿೈಷ್ಟೇ. ಇನ್ನು, ನನ್ನ ಅಣ್ಣನ ಮಕ್ಕಳಾದ ನವೀನ್ ಕುಮಾರ್ ಹಾಗೂ ಚಂದ್ರು ವಿದೇಶದಲ್ಲಿ ಓದಿದವರು. ಅವರು ತಾಂತ್ರಿಕತೆಯಲ್ಲಿ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರ ಆ ತಾಂತ್ರಿಕ ತಿಳುವಳಿಕೆ ಕೂಡ ನಮ್ಮ ಆಡಿಯೋ ಸಂಸ್ಥೆಯ ವ್ಯಾಪಾರ ವಹಿವಾಟುಗೆ ಸಹಕಾರಿಯಾಗಿದೆ. ಇಲ್ಲಿಯವರೆಗೆ ಸುಮಾರು 6500 ಹಾಡುಗಳು ಲಹರಿ ಮ್ಯೂಸಿಕ್ ಸಂಸ್ಥೆಯಿಂದ ಹೊರಬಂದಿವೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಗಳ ಟೀಸರ್, ಟ್ರೇಲರ್ ಬಿಡುಗಡೆಗೊಂಡಿದೆ. ಕೇವಲ ಕನ್ನಡಕ್ಕೆ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಇದು ವಿಸ್ತರಣೆಯಾಗಿದೆ. ಇವತ್ತು ಈ ಲಹರಿ ಮ್ಯೂಸಿಕ್ ಸಂಸ್ಥೆ ಈ ಎತ್ತರಕ್ಕೆ ಬೆಳೆದಿದೆ ಅಂದರೆ, ಅದರ ಹಿಂದೆ ದೊಡ್ಡ ಶ್ರಮವಿದೆ. ನೂರಾರು ಕೋಟಿ ಹಣ ಹೂಡಿಕೆ ಮಾಡಿದ್ದೇವೆ. ದೊಡ್ಡ ಮಟ್ಟದ ಯಶಸ್ವಿ ಚಿತ್ರಗಳ ಹಾಡುಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಿ ಹಕ್ಕು ಖರೀದಿಸಿದ್ದೇವೆ. ಪ್ರತಿ ಹಂತದಲ್ಲೂ ತುಂಬಾನೇ ರಿಸ್ಕ್ ತೆಗೆದುಕೊಂಡೇ ಕೆಲಸ ಮಾಡಿದ್ದೇವೆ ಅನ್ನೋದು ವೇಲು ಹೇಳಿಕೆ.
ಭಾವಗೀತೆಗೆ ಪ್ರತ್ಯೇಕ ಚಾನೆಲ್
ಬಹುಶಃ ಭಾವಗೀತೆಗೆಂದೇ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ವಿರಳ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಭಾವಗೀತೆ ಹಾಡುಗಳನ್ನು ಎಲ್ಲೆಡೆ ಪಸರಿಸಲು ಲಹರಿ ಮ್ಯೂಸಿಕ್ ಸಂಸ್ಥೆ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಮಾಡಿದ್ದು ವಿಶೇಷತೆಗಳಲ್ಲೊಂದು. ಇದು ಭಾರತೀಯ ಚಿತ್ರರಂಗದಲ್ಲೇ ಮೊದಲು. ಹಾಗಾಗಿ ಇದೊಂದು ಮೈಲಿಗಲ್ಲು ಎನ್ನಬಹುದು. ಸದ್ಯಕ್ಕೆ ಭಾವಗೀತೆಗೆಂದೇ ವಿಶೇಷವಾಗಿ ರೂಪಿಸಿರುವ ಯೂಟ್ಯೂಬ್ ಚಾನೆಲ್ನಲ್ಲಿ ಈಗ ಎಂಟು ಲಕ್ಷ ಚಂದಾದಾರರಿದ್ದಾರೆ. ಇನ್ನು ಎರಡು ಲಕ್ಷ ಚಂದಾದಾರರಾದರೆ, ನಿಜಕ್ಕೂ ಇದೊಂದು ಹಿರಿಮೆ. ಈ ಕುರಿತು ಮಾತನಾಡುವ ವೇಲು, ಅವರು, ಆರಂಭದಲ್ಲಿ ಸಣ್ಣದ್ದಾಗಿ ಶುರು ಮಾಡಿದ ಈ ಸಂಸ್ಥೆ ಕೋಟಿ ಮಂದಿ ಚಂದಾದಾರರನ್ನು ಹೊಂದುತ್ತೆ ಎಂದು ಅಂದಾಜು ಇರಲಿಲ್ಲ. ಯಾವಾಗ ಡಿಜಿಟಲ್ ಮಾಧ್ಯಮದ ಹವಾ ಹೆಚ್ಚಾಯ್ತೋ, ಕೆಲವು ಆಡಿಯೋ ಕಂಪೆನಿಗಳು ಮುಚ್ಚಬೇಕಾಯ್ತು. ಆಗ ಇನ್ನೇನು ಸಂಗೀತ ಕ್ಷೇತ್ರದಲ್ಲಿರುವ ಆಡಿಯೋ ಕಂಪೆನಿಗಳು ಬಾಗಿಲು ಮುಚ್ಚುತ್ತವೆ ಅಂತ ಜನ ಮಾತಾಡತೊಡಗಿದರು. ಕೆಲವರು ಆಡಿಯೋ ಕಂಪೆನಿ ಮಾರಿದರು. ಆದರೆ, ನಾವು, ನೋಡೋಣ, ನಡೆಸೋಣ ಅಂತ ತಾಳ್ಮೆಯಿಂದ ಕಾದು ನೋಡಿದೆವು. ರಾತ್ರಿ-ಹಗಲು ಕಷ್ಟಪಟ್ಟೆವು. ಫಲ ಸಿಕ್ಕಿತು. ಈ ಸಾಧನೆ ಹಿಂದೆ ಹಲವರಿದ್ದಾರೆ. ನಮ್ಮ ಕಂಪೆನಿ ಮೇಲೆ ನಂಬಿಕೆ ಇಟ್ಟು ಬಂದವರಿಗೆ ಇದುವರೆಗೂ ಸಮಸ್ಯೆ ಆಗಿಲ್ಲ ಎಂಬುದು ಅವರ ಮಾತು.
ರಾಜ್ಯೋತ್ಸವದಂದು ಸಿನಿ ಲಹರಿ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ
ಸಿನಿ ಲಹರಿ ಲಾಂಚ್ ಗೆ ಶ್ರೀ ಮುರಳಿ ಎಂಟ್ರಿ
ಒಂದು ಹೆಜ್ಜೆ ಇಟ್ಟಾಯಿತು. ಬಹು ದಿನದ ಕನಸು ನನಸಾಯಿತು. ಮಾಧ್ಯಮ ಕ್ಷೇತ್ರದಲ್ಲಿದ್ದು, ಸಿನಿಮಾಕ್ಕೆ ಸಂಬಂಧಿಸಿದಂತೆ ನಾವೇ ಒಂದು ವೆಬ್ ಸೈಟ್ ಶುರು ಮಾಡಬೇಕೆನ್ನುವ ಆಸೆಯಿತ್ತು. ಕೊನೆಗೂ ಅದು ಈಡೇರಿದ್ದು ಈ ವರ್ಷದ ನೆವೆಂಬರ್ ೧ ಕ್ಕೆ .ವಿಶೇಷ ಅಂದ್ರೆ, ಅವತ್ತು ಕನ್ನಡ ರಾಜ್ಯೋತ್ಸವ. ಕಾಕತಾಳೀಯ ಎನ್ನುವಂತೆ ಅಂದೇ ʼ ಸಿನಿ ಲಹರಿʼ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ಎರಡು ಉದ್ಘಾಟನೆಗೊಂಡವು.
ಸಿನಿ ಲಹರಿ ವೆಬ್ ಸೈಟ್ ಲಾಂಚ್
ಅಂದು ಸಂಜೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋ ಸಭಾಂಗಣದಲ್ಲಿʼ ಸಿನಿ ಲಹರಿʼ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಅಧಿಕೃತವಾಗಿ ಆಹ್ವಾನಿಸಿದ್ದಕ್ಕಿಂತ ಹೆಚ್ಚೇ ಸ್ನೇಹಿತರು, ಬಂಧುಗಳು, ಒಡನಾಡಿಗಳು , ಹಿತೈಷಿಗಳು ಬಂದರು. ಕೊರೋನಾ ಕಾರಣಕ್ಕೆ ಹೆಚ್ಚು ಜನರೇ ಬೇಡ ಎಂದುಕೊಂಡಿದ್ದೆವು. ಆದರೆ ದೊಡ್ಡ ಸಂಖ್ಯೆಯ ಜನರೇ ಆಗಮಿಸಿ, ಸಿನಿ ಲಹರಿಗೆ ಮನ ದುಂಬಿ ಹಾರೈಸಿದ್ದನ್ನು ಮರೆಯಲಾಗದು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ರೋರಿಂಗ್ ಸ್ಟಾರ್ ಶ್ರೀ ಮುರಳಿ. ಆರಂಭದಿಂದಲೂ ಅವರು ನಮ್ಮ ಜತೆಗಿದ್ದರು. ಹಾಗಾಗಿ ಅವರೇ ಉದ್ಘಾಟನೆ ಮಾಡಬೇಕೆನ್ನುವುದು ನಮ್ಮಗಿದ್ದಆಸೆ. ಅಂತೆಯೇ ನಟ ಶ್ರೀಮುರಳಿ ಅಂದು ಹಾಜರಿದ್ದು “ಸಿನಿ ಲಹರಿ” ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ಉದ್ಘಾಟಿಸಿದರು. ” ತುಂಬಾ ಆಪ್ತರು ಶುರುಮಾಡಿದ ಸಂಸ್ಥೆ. ಆವರು ಆಹ್ವಾನಿಸದ್ದೇ ಇದಿದ್ದರೂ ನಾನಿಲ್ಲಿಗೆ ಬರುತ್ತಿದ್ದೆ. ಇದು ನನ್ನದೇ ಕಾರ್ಯಕ್ರಮ ಎನ್ನುವಷ್ಟು ಖುಷಿಯಿದೆ. ಈ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಲಿ ʼ ಅಂತ ಹಾರೈಸಿದರು.
ಇನ್ನು ಸಿನಿಲಹರಿಯ ಬೆನ್ನೆಲಬು ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಯ ಮಾಲೀಕ ಲಹರಿ ವೇಲು ಅವರು. ಅವರು ಕೂಡ ಹಾಜರಿದ್ದು ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು. ಸಂಸ್ಥೆಯ ಆರಂಭಕ್ಕೆ ಅವರೇ ಕಾರಣವಾಗಿದ್ದರಿಂದ, ಆರಂಭದ ದಿನಗಳಲ್ಲಿ ಸಂಸ್ಥೆಯ ರೂವಾರಿಗಳು ಪಟ್ಟ ಪರಿಶ್ರಮ ನೆನಪಿಸಿಕೊಂಡು ಭಾವುಕರಾದರು. ನಟ ರವಿಶಂಕರ್ ಗೌಡ, ನಟಿ ಆರೋಹಿನಾರಾಯಣ್, ನಿರ್ಮಾಪಕ ಪಿ. ಕೃಷ್ಣ, ಕೆಪಿಸಿಸಿ ಕೋ ಆರ್ಡಿನೇಟರ್ ಟಿ. ನಾಗರಾಜ್ ವೇದಿಕೆಯಲ್ಲಿದ್ದು , ಉದ್ಘಾಟನೆಗೆ ಮೆರಗು ತಂದರು. ಕೊನೆಯಲ್ಲಿ ರಾಷ್ಟ್ರಪಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಎಂಟ್ರಿ ಕೊಟ್ಟು ನಮ್ಮ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.
ಅಷ್ಟೇ ಅಲ್ಲ, ನಾವು ವೇದಿಕೆಗೆ ಆಹ್ವಾನಿಸಲೇ ಬೇಕಿದ್ದ ಹಲವರು ಸಭಿಕರ ಸಾಲಿನಲ್ಲಿದ್ದರು. ಅವೆಲ್ಲರೂ ತಾವು ಸೆಲಿಬ್ರಿಟಿಗಳು ಎನ್ನುವ ಯಾವುದೇ ಅಹಂ ಇಲ್ಲದೆ ಕೇವಲ ನಮ್ಮ ಮೇಲಿನ ಪ್ರೀತಿಗೆ ಬಂದಿದ್ದು, ವಿಶೇಷ. ಆ ಪೈಕಿ ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇ ಗೌಡ, ನಿರ್ಮಾಪಕ ಕಮ್ ನಿರ್ದೇಶಕ ರಘುವರ್ಧನ್, ಹೇಮಂತ್ ಕುಮಾರ್, ನಿರ್ದೇಶಕರಾದ ಮಂಸೋರೆ, ನಾಗಚಂದ್ರ, ನೂತನ್ ಉಮೇಶ್, ಮಾ. ಚಂದ್ರು, ನಟರಾದ ಮಧು, ಕಾಕ್ರೋಚ್ ಸುಧಿ, ಬೆನಕ ಗುಬ್ಬಿ ವೀರಣ್ಣ, ಯಶ್ ರಾಜ್, ಪ್ರಸಾದ್, ಸಂಗೀತ ನಿರ್ದೇಶಕ ವೀರ್ ಸಮರ್ಥ್, ಸಂಕಲನ ಕಾರ ಕಿರಣ್ ಕುಮಾರ್, ಪಿಆರ್ ಒ ವೆಂಕಟೇಶ್, ವಿಜಯ್ ಕುಮಾರ್ , ಚಿತ್ರತಾರಾ ಮನು ಸೇರಿದಂತೆ ಹಲವರು ಹಾಜರಿದ್ದು, ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು. ಇನ್ನು ಮುಂದೆ ತಾಜಾ ಸುದ್ದಿಗಳೊಂದಿಗೆ ಸಿನಿ ಲಹರಿ ನಿಮ್ಮ ಮುಂದೆ.
” ಶುಕ್ರವಾರ ಬಂತೆಂದರೆ ಸಾಕು, ನನ್ನ ಎದುರು ಜನಜಾತ್ರೆ. ಹಲಗೆ, ಡೊಳ್ಳು, ಶಿಳ್ಳೆ, ಕೇಕೆ ಜೊತೆ ಕುಣಿತದ ಸಂಭ್ರಮವೇ ತುಂಬಿ ತುಳುಕುತ್ತಿತ್ತು. ಹಾರ, ತುರಾಯಿ ಹಾರಾಟ ಜೋರಾಗಿಯೇ ಇರುತ್ತಿತ್ತು. ಅದೆಷ್ಟೋ ಜನರನ್ನು ಕುಣಿಸಿದ್ದೇನೆ, ಖುಷಿಪಡಿಸಿದ್ದೇನೆ. ರಂಜಿಸಿದ್ದೇನೆ. ಹೇಳಲಾಗದಷ್ಟು ಸಂಭ್ರಮಕ್ಕೆ ಕಾರಣವಾಗಿದ್ದೇನೆ. ಆದರೆ, ಕೊರೊನಾ ಎಂಬ ಮಹಾಮಾರಿ ನನ್ನಲ್ಲಿದ್ದ ಆ ಖುಷಿಯನ್ನು ದೂರಪಡಿಸಿತ್ತಲ್ಲದೆ, ನನ್ನೊಂದಿಗಿದ್ದ ನೌಕರರನ್ನೂ ನನ್ನಿಂದ ದೂರ ಮಾಡುವಂತಹ ಪರಿಸ್ಥಿತಿಗೆ ನೂಕಿಬಿಟ್ಟಿದೆ. ಇಷ್ಟೇ ಆಗಿದ್ದರೆ, ನನ್ನ ನೋವನ್ನು ನಾನೀಗ ತೋಡಿಕೊಳ್ಳುತ್ತಿರಲಿಲ್ಲ. ಕೊರೊನಾ ನೆಪ ಹೇಳಿ ಇನ್ನು ಮುಂದೆ ಸಂಪೂರ್ಣವಾಗಿಯೇ ನನ್ನನ್ನು ಕಡೆಗಣಿಸುತ್ತಾರೇನೋ ಎಂಬ ಭಯ ನನ್ನನ್ನು ಕಾಡುತ್ತಿದೆ…”
– ಇದು ಯಾರೋ ಹೇಳಿದ ಮಾತಲ್ಲ. ಪ್ರಸ್ತುತ ರಾಜ್ಯದಲ್ಲಿರುವ ಕೆಲವು ಚಿತ್ರಮಂದಿರಗಳು ಹೇಳಿಕೊಳ್ಳುತ್ತಿರುವ ಪರಿ. ಹೌದು, ಕೊರೊನಾ ಇಡೀ ಜಗತ್ತನ್ನೇ ಕಾಡಿದ್ದು ಸುಳ್ಳಲ್ಲ. ಇದಕ್ಕೆ ಚಿತ್ರರಂಗವೂ ಹೊರತಲ್ಲ ಬಿಡಿ. ಕೊರೊನಾದಿಂದ ಅದೆಷ್ಟೋ ಮಂದಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ನೆಲೆ ಕಾಣದೆ ಪರಿತಪಿಸುತ್ತಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಡೀ ಜಗತ್ತಿನ ವ್ಯಾಪಾರ-ವಹಿವಾಟು ಕುಸಿದಿದ್ದಷ್ಟೇ ಅಲ್ಲ, ಕಷ್ಟಪಟ್ಟು ಕಟ್ಟಿಕೊಂಡಿದ್ದ ಬದುಕು ಕೂಡ ರಪ್ಪನೆ ಕಳಚಿಬಿದ್ದಿದೆ. ಇಲ್ಲೀಗ ಕಳಚಿ ಬೀಳುತ್ತಿರುವ ಚಿತ್ರಮಂದಿರಗಳ ಬಗ್ಗೆಯೂ ಹೇಳಲೇಬೇಕಿದೆ.
ಹೌದು, ಕಪ್ಪು-ಬಿಳುಪು ಸಿನಿಮಾಗಳ ಕಾಲದಿಂದಲೂ ದಶಕಗಳ ಕಾಲ ಜನರನ್ನು ರಂಜಿಸುತ್ತಿದ್ದ ಅದೆಷ್ಟೋ ಚಿತ್ರಮಂದಿರಗಳು ಈಗಲೂ ಇವೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು, ಪಟ್ಟಣಗಳಲ್ಲಿದ್ದ ಕೆಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದು ಗೊತ್ತೇ ಇದೆ. ಜನರಿಗೆ ರಸದೌತಣ ನೀಡುತ್ತಿದ್ದ ಚಿತ್ರಮಂದಿರಗಳು ಮಾಲೀಕರ ನಿರ್ಧಾರದಿಂದಾಗಿ ನೆಲಸಮಗೊಂಡು ಕಮರ್ಷಿಯಲ್ ಬಿಲ್ಡಿಂಗ್ ರೂಪ ಪಡೆದುಕೊಂಡಿವೆ. ಈಗ ಕೊರೊನೊ ತಂದ ಅವಾಂತರದಿಂದಾಗಿ, ಇದ್ದ ಬದ್ದ ಕೆಲವು ಚಿತ್ರಮಂದಿರಗಳೂ ಕೂಡ ಸಂಪೂರ್ಣ ಮುಚ್ಚುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಮತ್ತದೇ ಕೊರೊನಾ!
ಇದು ನಿಜಕ್ಕೂ ನೋವಿನ ಸಂಗತಿ
ದಶಕಗಳ ಕಾಲ ಸಾವಿರಾರು ಸಿನಿಮಾಗಳ ಪ್ರದರ್ಶನ ಮಾಡಿರುವ ಕೆಲವು ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಬಲಿಯಾಗುತ್ತಿವೆ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿವೆ. ಇದು ನಿಜವಾದರೂ, ಎಷ್ಟರ ಮಟ್ಟಿಗೆ ಅದು ದೃಢ ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ. ಆದರೂ, ಒಂದಷ್ಟು ಚಿತ್ರಮಂದಿರಗಳು ಪುನಃ ಬಾಗಿಲು ತೆಗೆಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಎಲ್ಲಾ ಸರಿ, ಅಷ್ಟಕ್ಕೂ ಚಿತ್ರಮಂದಿರಗಳೇಕೆ ಮುಚ್ಚುವ ಪರಿಸ್ಥಿತಿಯಲ್ಲಿವೆ ಎಂಬ ಪ್ರಶ್ನೆಗೆ ಉತ್ತರ, ಕೊರೊನಾ ತಂದ ನಷ್ಟ.
ನಿಜ, ಕೊರೊನಾದಿಂದಾಗಿ ಲಾಕ್ಡೌನ್ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು. ಇದರಿಂದ ಎಲ್ಲವೂ ಬಂದ್ ಆಯ್ತು. ಚಿತ್ರಮಂದಿರಗಳೂ ಇದಕ್ಕೆ ಹೊರತಾಗಲಿಲ್ಲ. ಕಳೆದ ಎಂಟು ತಿಂಗಳಿನಿಂದಲೂ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದರಿಂದ, ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ನೌಕರರು ಕೂಡ ಬೀದಿಗೆ ಬಿದ್ದರು. ಅಷ್ಟೇ ಯಾಕೆ, ಸ್ವತಃ ಮಾಲೀಕರು ಸಹ, ಚಿತ್ರಮಂದಿರವನ್ನು ಮೇಂಟೈನ್ ಮಾಡದಂತಹ ಪರಿಸ್ಥಿತಿಗೆ ಬಂದು ಮುಚ್ಚುವ ನಿರ್ಧಾರ ಮಾಡುವಂತಾಗಿದೆ. ಮಾಹಿತಿ ಪ್ರಕಾರ ರಾಜ್ಯದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣ? ನಷ್ಟ. ಇದು ನಿಜ, ಚಿತ್ರಮಂದಿರಗಳು ಈಗ ನಷ್ಟದಲ್ಲಿವೆ.
ಅದರಲ್ಲೂ ಈ ಲಾಕ್ಡೌನ್ ಟೈಮ್ನಲ್ಲಿ ಬಾಗಿಲು ಮುಚ್ಚಿದ್ದರಿಂದ ಕರೆಂಟ್ ಬಿಲ್, ವಾಟರ್ ಬಿಲ್ ಇತ್ಯಾದಿ ಖರ್ಚುಗಳೆಲ್ಲವೂ ಚಿತ್ರಮಂದಿರಗಳ ಮಾಲೀಕರ ಮೇಲೆಯೇ ಬಂದಿದೆ. ಅದು ಸಾವಿರಾರು ರುಪಾಯಿ ಆಗಿದ್ದರೆ, ಹೇಗೋ ಪರಿಸ್ಥಿತಿ ನಿವಾರಿಸಿಕೊಳ್ಳಬಹುದಿತ್ತೇನೋ? ಆದರೆ, ಲಕ್ಷಾಂತರ ರುಪಾಯಿ ಬಿಲ್ ಪಾವತಿಸುವುದೆಂದರೆ ನಿಜಕ್ಕೂ ನಿವಾರಿಸುವುದು ಕಷ್ಟ ಸಾಧ್ಯ. ಇದೊಂದೇ ಕಾರಣಕ್ಕೆ ಮಾಲೀಕರು ತಮ್ಮ ಚಿತ್ರಮಂದಿರಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟುವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ದುಡಿದ ನೌಕರರನ್ನೂ ಹೊರಗಿಡುವ ಪರಿಸ್ಥಿತಿ ಬಂದೊದಗಿದೆ ಎಂಬುದು ಚಿತ್ರಮಂದಿರ ಮಾಲೀಕರೊಬ್ಬರ ನೋವಿನ ನುಡಿ. ಚಿತ್ರಮಂದಿರಗಳನ್ನು ಪುನಃ ಆರಂಭಿಸುವ ಮುನ್ನ, ಕರೆಂಟ್ ಬಿಲ್ ಸೇರಿದಂತೆ ಇತ್ಯಾದಿ ಬಿಲ್ಗಳನ್ನು ಭರಿಸಲೇಬೇಕು. ಭರಿಸಲು ಮಾಲೀಕರಲ್ಲಿ ಈಗ ಅಷ್ಟೊಂದು ಹಣವಿಲ್ಲ.
ಸಿನಿಮಾ ಬಿಡುಗಡೆಯಾಗಿ, ಥಿಯೇಟರ್ ಚಾಲನೆಯಲ್ಲಿರುತ್ತಿದ್ದರೆ, ಎಲ್ಲವೂ ಸರಿಯಾಗಿರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಹೀಗಾಗಿಯೇ, ಚಿತ್ರಮಂದಿರಗಳನ್ನು ಮುಚ್ಚುವುದರ ಜೊತೆಗೆ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ, ವರ್ಷಾನುಗಟ್ಟಲೆ ರಂಜಿಸಿದ್ದ ಚಿತ್ರಮಂದಿರಗಳು ಹೀಗೆ ದಿಢೀರನೆ ಮುಚ್ಚುತ್ತವೆ ಅಂದಾಗ, ಎಂಥವರಿಗೂ ಬೇಸರ ಇದ್ದೇ ಇರುತ್ತೆ. ಸಿನಿರಸಿಕರಿಗಂತೂ ಚಿತ್ರಮಂದಿರಗಳ ಮೇಲೆ ಪ್ರೀತಿ ಇದ್ದೇ ಇರುತ್ತೆ. ಅದರಲ್ಲೂ ಚಿತ್ರಮಂದಿರವನ್ನು ಸ್ವಚ್ಛವಾಗಿಟ್ಟುಕೊಂಡು, ಪ್ರತಿ ದಿನ ಬರುವ ಪ್ರೇಕ್ಷಕರನ್ನು ಅಷ್ಟೇ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಕೂಡ ಈಗ ಅಕರಶಃ ಬೀದಿಪಾಲು. ಇದಕ್ಕೊಂದು ಪರಿಹಾರ ಇದೆಯಾ? ಗೊತ್ತಿಲ್ಲ. ಅದನ್ನು ಚಿತ್ರಮಂದಿರ ಮಾಲೀಕರೇ ನಿರ್ಧರಿಸಬೇಕು, ಚಿತ್ರಮಂದಿರ ಪಾಲಿಗೆ ಒಳ್ಳೆಯ ದಿನಗಳು ಬರಬೇಕು ಅನ್ನುವುದು “ಸಿನಿಲಹರಿ” ಆಶಯ.