ಕಲರ್‌ಫುಲ್ ಲೋಕದಲ್ಲಿ ಪೇನ್‌ಫುಲ್‌ ಲೈಫ್ !

ಲಾಕ್ ಡೌನ್ ದಿನದ ಯಾತನೆ ಯಾರಿಗೂ ಬೇಡ….

-ಸಹಾಯಕ ನಿರ್ದೇಶಕರ ನೋವಿನ ಮಾತು

 

“ಆ ದಿನಗಳನ್ನು ನೆನಪಿಸಿಕೊಂಡರೆ ನಿಜಕ್ಕೂ ಅಂತಹ ಕಷ್ಟ ಯಾರಿಗೂ ಬರುವುದು ಬೇಡ. ತುಂಬಾನೇ ಇಷ್ಟಪಟ್ಟು ಈ ಸಿನಿಮಾರಂಗಕ್ಕೆ ಬಂದಿದ್ದೇವೆ. ಸಿನಿಮಾ ಅನ್ನೋ ಕಲರ್‌ಫುಲ್‌ ಲೋಕದ ಮೇಲೆ ನೂರಾರು ಕನಸು ಕಟ್ಟಿಕೊಂಡು ಬಂದ್ವಿ. ಆದರೆ ಇಲ್ಲಿಗೆ ಬಂದಮೇಲಷ್ಟೆ, ಅದರ ಅಗಲ, ಆಳ ಗೊತ್ತಾಗಿದ್ದು. ಆದೇನೆ ಇರಲಿ, ಕಷ್ಟಾನೋ, ಸುಖಾನೋ ಎಲ್ಲವನ್ನೂ ಇಲ್ಲೇ ಅನುಭವಿಸಬೇಕು. ನಾವಂದುಕೊಂಡ ಗುರಿ ತಲುಪಲೇಬೇಕು. ಅದಕ್ಕಾಗಿ ಸಂಕಷ್ಟದಲ್ಲೂ ಸಹಿಸಿಕೊಂಡೇ ಇನ್ನೂ ಆ ಅಸೆಯನ್ನು ಜೀವಂತವಾಗಿರಿಸಿಕೊಂಡಿದ್ದೇವೆ..”
– ಇದು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕೆಲವು ಸಹ ನಿರ್ದೇಶಕ, ಸಹಾಯಕ ನಿರ್ದೇಶಕರ ನೋವಿನ ಮಾತು. ಹೌದು, ಕೊರೊನಾ ಸಂದರ್ಭದಲ್ಲಿ ಎಲ್ಲರೂ ನೋವು ಅನುಭವಿಸಿದ್ದಾರೆ. ಕಷ್ಟ ಎದುರಿಸಿದ್ದಾರೆ. ಅಂಥ್ದದೊಂದು ಕಷ್ಟವನ್ನು ಕನ್ನಡ ಚಿತ್ರರಂಗದಲ್ಲಿ ಹಗಲಿರುಳು ದುಡಿಯುತ್ತಿರುವ ಅಸಿಸ್ಟಂಟ್‌ ಡೈರೆಕ್ಟರ್ಸ್‌, ಅಸೋಸಿಯೇಟ್ಸ್‌ ಡೈರೆಕ್ಟರ್ಸ್‌ ಕೂಡ ಅನುಭವಿಸಿದ್ದಾರೆ. ಕೊರೊನಾ ತಂದಿಟ್ಟ ಸಮಸ್ಯೆ ಎಂಥದ್ದು ಎಂಬುದನ್ನು “ಸಿನಿಲಹರಿ” ಜೊತೆ ಬಿಚ್ಚಿಟ್ಟಿದ್ದಾರೆ.

ಸಹಾಯಕ ನಿರ್ದೇಶಕ ನಾಗೇಶ್‌ ಹೆಬ್ಬೂರು

ನಮಗೆ ನಿರ್ದಿಷ್ಟ ಪೇಮೆಂಟ್‌ ಇಲ್ಲವೇ ಇಲ್ಲ

“ನಾನು ಈ ಸಿನಿಮಾ ಇಂಡಸ್ಟ್ರಿಗೆ ಬಂದು ಸರಿ ಸುಮಾರು ಒಂದು ದಶಕವೇ ಕಳೆದಿದೆ. ಇಷ್ಟು ವರ್ಷಗಳಲ್ಲಿ ನಾನು ಸುಮಾರು 14 ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಕೊರೊನಾ ತಂದಿಟ್ಟ ಅವಾಂತರ ಸಾಕಷ್ಟಿದೆ. ಹಾಗೆ ಹೇಳುವುದಾದರೆ, ಕಹಿ ಅನುಭವ ಅನ್ನೋದು ಕೊರೊನಾ ಸಮಯದಲ್ಲಿ ಮಾತ್ರವಲ್ಲ. ಈ ಫೀಲ್ಡ್‌ಗೆ ಎಂಟ್ರಿಯಾದಾಗಿನಿಂದಲೂ ಆಗಿರುವಂಥದ್ದೇ. ನನ್ನಂತಹ ಅದೆಷ್ಟೋ ಹುಡುಗರು ಕನಸು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಾನೊಬ್ಬ ನಿರ್ದೇಶಕ ಆಗಬೇಕು ಅಂದುಕೊಂಡೇ ಇಲ್ಲಿಗೆ ಬಂದವರು ಹೆಚ್ಚು. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಮಸ್ಯೆ ತಪ್ಪಿದ್ದಲ್ಲ. ಕಷ್ಟ-ನಷ್ಟಗಳ ನಡುವೆಯೇ ಅವರು ಇಲ್ಲಿ ಬದುಕು ಸವೆಸುತ್ತಿದ್ದಾರೆ. ಇದಕ್ಕೆ ನಾನೂ ಹೊರತಲ್ಲ. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಹುಡುಗರಿಗೆ ಕಹಿ ಅನುಭವ ಹೊಸದಲ್ಲ. ಲಾಕ್‌ಡೌನ್‌ ಕೂಡ ವಿಭಿನ್ನವಾಗಿರಲಿಲ್ಲ. ಸಾಮಾನ್ಯ ದಿನಗಳನ್ನು ಹೇಗೆಲ್ಲಾ ಎದುರಿಸುತ್ತಿದ್ದರೋ, ಅದಕ್ಕಿಂತ ಸ್ವಲ್ಪ ಜಾಸ್ತಿ ಸಮಸ್ಯೆಯನ್ನು ಈ ಲಾಕ್‌ಡೌನ್‌ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂದಿದ್ದು ಸುಳ್ಳಲ್ಲ. ಸಹ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರಿಗೆ ಯಾವಾಗಲೂ ಹಣ ಸಿಗಲ್ಲ. ಸಿನಿಮಾ ಇದ್ದಾಗ ಮಾತ್ರ, ಆಯಾ ಪ್ರೊಡಕ್ಷನ್ಸ್‌ ಕೊಡುವ ಹಣವೇ ಆಧಾರ. ಹಾಗಂತ, ಅಲ್ಲಿ ಸಿಗುವ ಹಣ ಊಟಕ್ಕಷ್ಟೇ ಸೀಮಿತ. ಕೊರೊನಾ ಸಮಸ್ಯೆಯಲ್ಲಷ್ಟೇ ಅಲ್ಲ, ಪ್ರತಿ ದಿನವೂ ನಮ್ಮಂತಹ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರ ಸಮಸ್ಯೆ ನಿರಂತರ. ಕನ್ನಡ ಚಿತ್ರರಂಗದಲ್ಲಿ ಒಬ್ಬ ಲೈಟ್ ಬಾಯ್‌ಗೆ 750 ರುಪಾಯಿ ವೇತನ ಫಿಕ್ಸ್‌ ಇದೆ. ಒಬ್ಬ ಕಸಗೂಡಿಸುವವನಿಗೂ ಇಲ್ಲಿ ಪೇಮೆಂಟ್‌ ಅನ್ನೋದು ಫಿಕ್ಸ್. ದುರಂತವೆಂದರೆ, ಎಂಬತ್ತು ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ನಿರ್ದೇಶನ ವಿಭಾಗದ ಹುಡುಗರಿಗೆ ಒಂದು ಫಿಕ್ಸ್‌ ಅಮೌಂಟ್‌ ಅನ್ನುವುದೇ ಇಲ್ಲ. ನಿರ್ದೇಶನ ವಿಭಾಗ ಸಿನಿಮಾದಲ್ಲಿ ಕ್ರಿಯೇಟಿವ್‌ ವಿಭಾಗ ಅನ್ನೋದು ಹೆಸರಿಗಷ್ಟೇ. ಆದರೆ, ಪೇಮೆಂಟ್‌ ಬಗ್ಗೆ ಕೇಳುವಂತಿಲ್ಲ. ಅಂತಹ ಯಾವ ಮಾನದಂಡವೂ ಇಲ್ಲ” ಎಂಬುದು ದಶಕಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿರುವ ನಾಗೇಶ್‌ ಹೆಬ್ಬೂರು ಮಾತು.‌

 

  ಶರಣ್‌ ಗೆಣ್ಕಾಳ್

ಬ್ರದರ್‌ ಮನೆ ಇತ್ತು ಬಚಾವ್‌ ಆದೆ…

“ಸಿನಿಮಾ ನಂಬಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ” ಎಂಬುದು ಮತ್ತೊಬ್ಬ ಸಹಾಯಕ ನಿರ್ದೇಶಕ ಶರಣ್‌ ಗೆಣ್ಕಲ್ ಅವರ ಮಾತು. ತಮ್ಮ ದಶಕದ ಅನುಭವ ಬಿಚ್ಚಿಡುವ ಅವರು, ಇಲ್ಲಿ ನಿರ್ದೇಶನ ಕನಸು ಕಟ್ಟಿಕೊಂಡು ಬಂದಿದ್ದೇನೆ. ನಿಜ ಹೇಳುವುದಾದರೆ, ಇಲ್ಲಿ ಪ್ರತಿಭೆ ಜೊತೆಗೆ ಅದೃಷ್ಟವೂ ಇರಬೇಕು. ಅದಿದ್ದರೆ ಮಾತ್ರ, ಪವಾಡ ಸಾಧ್ಯ. ಇಲ್ಲವಾದರೆ, ನಮ್ಮಂತಹ ಅದೆಷ್ಟೋ ಸಹ, ಸಹಾಯಕ ನಿರ್ದೇಶಕರು ನಿರ್ದೇಶಕರಾಗಲು ಹೆಣಗಾಡಲೇಬೇಕು. ಮೊದಲೇ ಇಂತಿಷ್ಟು ಅನ್ನೋ ಪೇಮೆಂಟ್‌ ಇರೋದಿಲ್ಲ. ಅದರಲ್ಲೂ ಈ ಕೊರೊನಾ ಎದುರಾಗಿ, ನಮ್ಮಂತಹ ಅನೇಕ ಸಹ ನಿರ್ದೇಶಕರು, ಸಹಾಯಕ ನಿರ್ದೇಶಕರನ್ನು ಹೈರಾಣಾಗಿಸಿದ್ದಂತೂ ಸುಳ್ಳಲ್ಲ. ಕೊರೊನಾ ಸಮಯದಲ್ಲಿ ಎಲ್ಲವೂ ಬಂದ್‌ ಆಗಿದ್ದರಿಂದ ನಮ್ಮಂಥವರ ಬದುಕು ನಿಜಕ್ಕೂ ಶೋಚನೀಯವಾಗಿತ್ತು. ಲಾಕ್‌ಡೌನ್‌ ಮುನ್ನ ಒಂದಷ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆದರೆ, ಪೇಮೆಂಟ್‌ ಮಾತ್ರ ಕ್ಲಿಯರ್‌ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಲಾಕ್‌ಡೌನ್‌ ಶುರುವಾದಾಗ, ಬದುಕು ಅತಂತ್ರವಾಯ್ತು. ಪೇಮೆಂಟ್‌ ಕೊಡಬೇಕಾದವರೂ ಫೋನ್‌ ಪಿಕ್‌ ಮಾಡದೇ ಹೋದರು. ನಿಜ ಹೇಳುವುದಾದರೆ, ಈ ವರ್ಷ ಒಂದೇ ಒಂದು ರುಪಾಯಿ ಕೂಡ ದುಡಿಮೆ ಇಲ್ಲ, ಆದರೂ ಹೇಗೋ ಬದುಕಿದ್ದೇನೆ. ನನ್ನ ಸಹೋದರ ಮನೆಯಲ್ಲೇ ಇದ್ದುದರಿಂದ ನಾನು ಬಚಾವ್‌ ಆಗಿದ್ದೇನೆ. ನನ್ನ ಅನೇಕ ಗೆಳೆಯರ ಸ್ಥಿತಿಯಂತೂ ಹೇಳತೀರದು” ಎನ್ನುತ್ತಾರೆ ಶರಣ್‌ ಗೆಣ್ಕಲ್.‌

 

ಸಹಾಯಕ ನಿರ್ದೇಶಕ ಅಂಜನ್

ನಮ್ಮಂಥವರ ಪರಿಸ್ಥಿತಿ ಭೀಕರ

“ಸಿನಿಮಾದಲ್ಲೇ ಏನಾದರೊಂದು ಸಾಧನೆ ಮಾಡಬೇಕು ಅಂತ ಬಂದವರು ಸಹಾಯಕ ನಿರ್ದೇಶಕ ಅಂಜನ್.‌ ಇಲ್ಲಿಗೆ ಬಂದು ಸುಮಾರು 7 ವರ್ಷಗಳೇ ಕಳೆದಿವೆ. ಸಿನಿಮಾ ಜೊತೆಗೆ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದಾರೆ. ನಿರ್ದೇಶಕ ಆಗಬೇಕು ಎಂಬ ಕಾರಣಕ್ಕೆ ಹಣದ ಬಗ್ಗೆ ತಲೆಕೆಡಿಸಿಕೊಳ್ಳದೆ, ಸಹನಿರ್ದೇಶಕನಾಗಿ ಕೆಲಸ ಮಾಡಿದ್ದುಂಟು. ಆದರೆ, ನಮ್ಮದೂ ಅಂತ ಹೊಟ್ಟೆ ಪಾಡು ಇದ್ದೇ ಇರುತ್ತಲ್ಲವೇ. ಏನೋ ಕೊಟ್ಟಷ್ಟು ಇಟ್ಟುಕೊಂಡು ಬದುಕು ಸವೆಸಿದ್ದೇನೆ. ಕೊರೊನಾ ಬಂದ ಸಮಯದಲ್ಲಂತೂ ನಮ್ಮನ್ನು ಕೇಳುವವರೇ ಇರಲಿಲ್ಲ. ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಆದರೆ, ಯಾರೊಬ್ಬರೂ ಆ ವೇಳೆ ಸಹಾಯಕ್ಕೆ ಬರಲಿಲ್ಲ. ಆಗ ಎನಿಸಿದ್ದೊಂದೇ, ಇನ್ನೂ ಇಲ್ಲಿರಬೇಕಾ ಅಂತ. ಆದರೂ, ಕನಸು ಇಟ್ಟುಕೊಂಡಿದ್ದೇನೆ. ನಿರ್ದೇಶಕನಾಗಬೇಕು ಅಂತ ಹೊರಟಿದ್ದೇನೆ. ಆರಂಭದ ದಿನಗಳಲ್ಲಿ ಅದೆಷ್ಟೋ ಉಪವಾಸ ದಿನಗಳನ್ನೂ ನೋಡಿದ್ದುಂಟು. ಸಿನಿಮಾ ಫೀಲ್ಡ್‌ನಲ್ಲಿದ್ದೇನೆ ಅನ್ನೋದಷ್ಟೇ ಖುಷಿ. ಅದರ ಹೊರತಾಗಿ ಕಷ್ಟಗಳ ಸರಮಾಲೆಯೇ ದೊಡ್ಡದಿದೆ. ಆದರೂ, ಮುಂದೊಂದು ದಿನ ನಿರ್ದೇಶಕನಾಗ್ತೀನಿ ಎಂಬ ಭರವಸೆಯಿಂದಲೇ ಬಂದಿದ್ದನ್ನು ಸಹಿಸಿಕೊಂಡಿದ್ದೇನೆ” ಎನ್ನುತ್ತಾರೆ ಅಂಜನ್.‌

ಸಿನ್ಮಾಗೆ ಹೋಗಿ ಮಗ ಕೆಟ್ನಾ ಎಂಬ ಆತಂಕ
ತನ್ನ ಹೆಸರು ಹೇಳಲಿಚ್ಛಿಸದ ಸಹಾಯಕ ನಿರ್ದೇಶಕರೊಬ್ಬರ ಅಳಲಿನ ಮಾತಿದು. “ನಾನು ಮೂಲತಃ ಉತ್ತರ ಕರ್ನಾಟಕದಿಂದ ಬಂದವನು. ನನ್ನಂತೆಯೇ ರಾಜ್ಯಾದ್ಯಂತ ಸಾಕಷ್ಟು ಹುಡುಗರು ಕನಸು ಕಟ್ಟಿಕೊಂಡು ಸಿನಿಮಾ ಫೀಲ್ಡ್‌ಗೆ ಬಂದಿದ್ದಾರೆ. ಕೆಲವರು ಅದೃಷ್ಟದ ಮೇಲೆ ನಿರ್ದೇಶಕರಾಗಿದ್ದಾರೆ. ನಮ್ಮಂತವರು ಇನ್ನೂ ಸೈಕಲ್‌ ತುಳೀತಾನೇ ಇದೀವಿ. ನಾನು ಒಂದು ದಶಕದಿಂದಲೂ ಈ ಫೀಲ್ಡ್‌ನಲ್ಲಿದ್ದೇನೆ. ಈವರೆಗೆ ಸುಮಾರು ಹದಿನೈದು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಲ್ಲಿ ಸಹಾಯಕ ನಿರ್ದೇಶಕ ಎನ್ನುವುದಷ್ಟೇ ತೃಪ್ತಿ. ಬಿಟ್ಟರೆ, ಹಣದ ವಿಷಯದಲ್ಲಿ ಸೊನ್ನೆ. ಕೆಲಸ ಕೊಟ್ಟರೆ ಆದೇ ಹೆಚ್ಚಿರುವಾಗ, ಹಣದ ಮಾತೆಲ್ಲಿ? ಏನಾದರೂ, ನಿರ್ಮಾಪಕರ ಬಳಿ ಇಂತಿಷ್ಟು ಹಣ ಕೊಡಿ ಸರ್‌ ಅಂತ ಡಿಮ್ಯಾಂಡ್‌ ಇಟ್ಟರೆ, “ನೀವೆಲ್ಲಾ ಮುಂದೆ ಡೈರೆಕ್ಟರ್‌ ಆಗ್ತೀರಿ. ದೊಡ್ಡ ಆಫರ್‌ ಸಿಗುತ್ತವೆ. ನಾವೆಲ್ಲ ಹಿಂದೆ ಬಹಳ ಕಷ್ಟಪಟ್ಟು ಬಂದಿದ್ದೇವೆ. ಇದು ನಿಮ್ಮ ಮೊದಲ ಸಿನಿಮಾ ಅಂದುಕೊಂಡು ಕೆಲಸ ಮಾಡಿ ಅನ್ನುತ್ತಲೇ ಖರ್ಚಿಗೆ ಅಷ್ಟೋ ಇಷ್ಟೋ ಕಾಸು ಕೊಟ್ಟು ಸುಮ್ಮನಾಗುತ್ತಾರೆ. ಹೊಟ್ಟೆಪಾಡು ನೋಡಿಕೊಳ್ಳೋದೆ ಕಷ್ಟ ಎನಿಸಿದ ಸಂದರ್ಭದಲ್ಲಿ ಕೊರೊನಾ ಎರಗಿ ಬದುಕನ್ನು ಇನ್ನಷ್ಟು ಕಠಿಣವಾಗಿಸಿತು. ಇಲ್ಲಿಗೆ ಬಂದಾಗಲಷ್ಟೇ ಸಿನಿಮಾದ ಉದ್ದ, ಅಗಲ, ಆಳ ಗೊತ್ತಾಗಿದ್ದು. ಊರ್‌ ಕಡೆ ಹೋದರೆ, ನಿಮ್‌ ಸಿನಿಮಾ ಹತ್ತು ಕೋಟಿ ಗಳಿಸಿತ್ತಂತಲ್ಲಾ, ನಿಮಗೆಷ್ಟು ಕೊಟ್ರು ಅಂತ ಗೇಲಿ ಮಾಡಿದ್ದೂ ಆಯ್ತು. ಇನ್ನು ಮನೆಯವರು ಸಿನಿಮಾಗೆ ಹೋಗಿ ನಮ್‌ ಹುಡುಗ ಕೆಟ್ನಾ, ಅವರು ಕೆಟ್ಟ ದಾರಿ ಹಿಡಿದ್ನಾ ಎಂಬ ಪ್ರಶ್ನೆ ಹಾಕಿಕೊಂಡಿದ್ದೂ ಹೌದು. ಮದುವೆ ಮಾಡ್ಕೊಂಡು ಸೆಟ್ಲ್‌ ಆಗೋ ಅನ್ನೋ ಮನೆಯವರಿಗೆ, ನಾಳೆಯ ಮೇಲಿನ ನಂಬಿಕೆಯಿಂದಲೇ ನಾನು ನಿರ್ದೇಶಕನಾಗಿ ತೋರಿಸ್ತೀನಿ. ಆಮೆಲೆ ನಿಮ್ಮ ಮಾತು ಕೇಳ್ತೀನಿ ಅನ್ನುತ್ತಲೇ ವರ್ಷಗಳನ್ನು ಕಳೆದಿದ್ದೇನೆ. ಇಲ್ಲಿ ಉಪವಾಸ, ವನವಾಸ ಮಾಡಿಕೊಂಡೇ ಇಷ್ಟು ವರ್ಷ ಲೈಫು ತಳ್ಳಿದ್ದೇನೆ. ಒಂದೊಳ್ಳೆಯ ನಾಳೆಗೋಸ್ಕರ ಕಾಯುತ್ತಿದ್ದೇನೆ ಎನ್ನುತ್ತಲೇ ಭಾವುಕರಾಗುತ್ತಾರೆ ಆ ಸಹಾಯಕ ನಿರ್ದೇಶಕ.

ಅದೇನೆ ಇರಲಿ, ಇಲ್ಲಿ ತುಂಬಾನೇ ಸ್ಟ್ರಗಲಿಂಗ್‌ ಇದೆ. ಕೇವಲ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಿಗೆ ಈ ಮಾತು ಅನ್ವಯಿಸೋದಿಲ್ಲ. ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡು ಬಂದ ಪ್ರತಿಯೊಬ್ಬರಿಗೂ ಈ ಮಾತು ಅನ್ವಯಿಸುತ್ತದೆ. ಕೆಲವರಿಗೆ ಸಿನಿಮಾ ಅನ್ನೋದು ಕಲರ್‌ಫುಲ್‌ ಜಗತ್ತು. ಆದರೆ, ಇಲ್ಲಿ ಮಾತ್ರ ಕಲರ್‌ ಕಲರ್‌ ಕಾಗೆ ಹಾರಿಸೋ ಮಂದಿ ಸಾಕಷ್ಟು ಇದ್ದಾರೆ. ಹಾಗಾಗಿ, ಪ್ರತಿಭಾವಂತರು ಕಷ್ಟದ ಮೆಟ್ಟಿಲುಗಳಲ್ಲೇ ಏರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅದೆಷ್ಟೋ ಸಹ, ಸಹಾಯಕ ನಿರ್ದೇಶಕರು ಕೊರೊನಾ ಸಮಸ್ಯೆಗೆ ಸಿಲುಕಿ ತಮ್ಮ ಬಾಡಿಗೆ ಮನೆ, ರೂಮ್‌ ಖಾಲಿ ಮಾಡಿಕೊಂಡು ಊರು ಸೇರಿಕೊಂಡಿದ್ದುಂಟು. ಅನೇಕರು ತಮ್ಮ ಗೆಳೆಯರ ಜೊತೆ ಸೇರಿದ್ದುಂಟು, ಇನ್ನೂ ಕೆಲವರು ಈ ಫೀಲ್ಡ್‌ ಮೇಲೆ ನಂಬಿಕೆ ಇಟ್ಟು, ಕಷ್ಟಾನೋ, ಸುಖಾನೋ ಇಲ್ಲೇ ಇರ್ತೀವಿ ಅಂತ ಸಾಲ, ಸೂಲ ಮಾಡಿಕೊಂಡೇ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Related Posts

error: Content is protected !!