ಮಧು ತುಂಬಿದ ಬದುಕು…
ಇದು ಮಂದಗೆರೆ ಹುಡುಗನ ಸಿನ್ಮಾ ಪ್ರೀತಿ
ಅವರೊಬ್ಬ ಖಡಕ್ ಪೊಲೀಸ್ ಅಧಿಕಾರಿ. ದುಷ್ಟರನ್ನು ಬಗ್ಗು ಬಡಿಯೋ ಖದರ್ ವ್ಯಕ್ತಿ. ಇಲ್ಲಿಯವರೆಗೆ ಮಾಡಿರುವ ಎನ್‌ಕೌಂಟರ್‌ಗಳ ಒಟ್ಟು ಸಂಖ್ಯೆ 114!
ಅಬ್ಬಾ…! ಬರೋಬ್ಬರಿ 114 ಎನ್‌ಕೌಂಟರ್ ಮಾಡಿದ್ದಾರೆಂದರೆ, ಅದು ಸುಲಭದ ಮಾತಂತೂ ಅಲ್ಲ ಬಿಡಿ. ಹೀಗಂತ ಹಾಗೊಮ್ಮೆ ಅಚ್ಚರಿಯಾಗುವುದು ನಿಜ. ಇದು ರಿಯಲ್ ಪೋಲೀಸ್‌ವೊಬ್ಬರ ರೀಲ್ ಸ್ಟೋರಿ ಅಂದರೆ ನಂಬಲೇಬೇಕು. ಹೌದು, ಅವರು ರಿಯಲ್ ಲೈಫಲ್ಲಿ ರೈಲ್ವೆ ಇಲಾಖೆಯಲ್ಲಿ ಪೊಲೀಸ್ ಆದವರು. ರೀಲ್‌ನಲ್ಲಿ ಮಾತ್ರ ಎಸಿಪಿ, ಎಸ್‌ಪಿ ಆಗಿ ತೆರೆಯ ಮೇಲೆ ಮಿಂಚಿದವರು. ಗನ್ ಹಿಡಿದು ಎದುರಾಳಿಗಳನ್ನು ಮಲಗಿಸಿದವರು. ಕಳೆದ ಮೂರು ದಶಕಗಳಿಂದಲೂ ಸಿನಿರಂಗವನ್ನು ಅಪ್ಪಿಕೊಂಡಿರುವ ಅವರು ಅಪ್ಪಟ ಕನ್ನಡ ಸಿನಿಪ್ರೇಮಿ. ಅಂದಹಾಗೆ, ಅವರು ಬೇರಾರೂ ಅಲ್ಲ, ಮಧು ಮಂದಗೆರೆ. ಹೌದು, ಇದು ಮಧು ಮಂದಗೆರೆ ಟಿಪ್ಪಣಿ. ಅವರ ಇಷ್ಟು ವರ್ಷಗಳ ಜರ್ನಿ ಕುರಿತು “ಸಿನಿ ಲಹರಿ” ಜೊತೆ ಮಾತನಾಡಿದ್ದಾರೆ.
ಓವರ್ ಟು ಮಧು ಮಂದಗೆರೆ…
“ಸಿನಿಮಾ ನನ್ನ ಕನಸು. ಅದು ಈಗಿನದ್ದಲ್ಲ. ನನಗೆ ಸಿನಿಮಾ ನೋಡುವ ಆಸೆ ಹುಟ್ಟಿದ್ದಾಗಿನಿಂದಲೂ ಹುಟ್ಟಿದ ಕನಸದು. ನಾನು ಮೂಲತಃ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಊರಿನವನು. ಸಾಧಾರಣ ಗ್ರಾಮದಿಂದ ಬಂದವನು. ಕಳೆದ 30 ವರ್ಷಗಳಿಂದಲೂ ನನಗೆ ಸಿನಿಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಅಂದಿನಿಂದ ಇಂದಿನವರೆಗೂ ಸಿನಿಮಾ ಜಪಿಸದ ದಿನವಿಲ್ಲ. ಕೆ.ವಿ.ರಾಜು ಅವರ “ಅಭಿಜಿತ್” ಚಿತ್ರದ ಮೂಲಕ ನಾನು ಸಿನಿಮಾ ರಂಗ ಪ್ರವೇಶಿಸಿದೆ. ದೇವರಾಜ್ ಹಾಗೂ ಖುಷ್ಬು ಅವರ ಚಿತ್ರವದು. ಅಲ್ಲಿಂದ ಶುರುವಾದ ನನ್ನ ಸಿನಿಮಾ ಪಯಣ ಇಲ್ಲಿಯವರೆಗೂ ಮುಂದುವರೆದಿದೆ. ಈವರೆಗೆ ನಾನು ಸುಮಾರು 55ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯಕ್ಕೆ ಬಿಡುಗಡೆಗೆ 11ಕ್ಕೂ ಹೆಚ್ಚು ಚಿತ್ರಗಳು ಸಾಲುಗಟ್ಟಿವೆ. ಇನ್ನು, ನಾನು ಇದುವರೆಗೆ ವಿಷ್ಣುವರ್ಧನ್, ಅಂಬರೀಶ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್, ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರು ಹಾಗೂ ಈಗಿನ ಯುವ ನಟರ ಜೊತೆಗೂ ನಟಿಸಿದ್ದೇನೆ ಎಂಬ ಖುಷಿ ಇದೆʼ ಎಂಬುದು ಮಂದು ಮಂದಗೆರೆ ಮಾತು.
ಪೊಲೀಸ್‌ನಿಂದ ಎಸ್‌ಪಿವರೆಗೆ…
ನಾನು ಸಿನಿಮಾ ಕನಸು ಕಂಡಿದ್ದನ್ನು ನನಸು ಮಾಡಿಕೊಂಡಿದ್ದೇನೆ. ಸಿನಿಮಾ ನಂಟು ಬೆಳೆಸಿಕೊಂಡಿದ್ದವನಿಗೆ ಸರ್ಕಾರಿ ಕೆಲಸವೂ ಸಿಕ್ಕಿದ್ದು ಮತ್ತೊಂದು ವಿಶೇಷ. ರೈಲ್ವೆ ಇಲಾಖೆಯಲ್ಲಿ ಪೊಲೀಸ್ ಆಗಿ ಕೆಲಸ ಪಡೆದವನಿಗೆ. ಸಿನಿಮಾ ಇನ್ನೇನು ಮರೆತುಬಿಡಬೇಕು ಅನ್ನುವ ಹೊತ್ತಲ್ಲಿ, ನನ್ನೊಳಗಿನ ಪ್ರತಿಭೆ ಮತ್ತು ಅದಮ್ಯ ಉತ್ಸಾಹ ಕಂಡ ಕಚೇರಿಯ ಅಧಿಕಾರಿಗಳು ಸಾಥ್ ಕೊಟ್ಟರು. ಹಾಗಾಗಿಯೇ ನಾನು ಒಂದಷ್ಟು ಸಿನಿಮಾಗಳಲ್ಲಿ ನಟಿಸೋಕೆ ಸಾಧ್ಯವಾಯ್ತು. ನಾನೊಬ್ಬ ರೈಲ್ವೆ ಪೊಲೀಸ್ ಆಗಿಯೂ ಸಿನಿಮಾದಲ್ಲಿ ಅವಕಾಶ ಪಡೆದು ನಟಿಸಿದೆ. ರಿಯಲ್‌ನಲ್ಲಿ ಪೊಲೀಸ್ ಆಗಿದ್ದರೆ, ರೀಲ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇನೆ ಎಂಬ ಹೆಮ್ಮೆ ಇದೆ. ಇಲಾಖೆಯಲ್ಲಿದ್ದುಕೊಂಡು ಅಧಿಕಾರಿಗಳ ಸಲಹೆ, ಸೂಚನೆಯೊಂದಿಗೆ ನನ್ನೊಳಗಿನ ಬಣ್ಣದ ಕನಸನ್ನು ನನಸಾಗಿಸಿಕೊಂಡು ಬಂದಿದ್ದೇನೆ. ಈಗ ಇನ್ನೊಂದು ವಿಷಯ ಹೇಳಲೇಬೇಕು. ನಾನು ರೈಲ್ವೆ ಪೊಲೀಸ್ ಆಗಿದ್ದೆ. ಈಗ ಪೊಲೀಸ್ ಕೆಲಸದಿಂದ ಹೊರಬಂದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪೊಲೀಸ್ ಆಗಿ ಭಾರತದ ಹಲವು ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಈಗ ಕಚೇರಿ ಕೆಲಸ ಪಡೆದಿದ್ದು, ಬೆಳಗ್ಗೆ ಹೋಗಿ, ಸಂಜೆ ಹಿಂದಿರುಗುತ್ತಿದ್ದೇನೆ. ಸಿನಿಮಾ ವಿಷಯಕ್ಕೆ ಬಂದರೆ, ಅವಕಾಶ ಸಿಕ್ಕಾಗೆಲ್ಲಾ ಪಾತ್ರಗಳನ್ನು ಒಪ್ಪಿ, ಅಪ್ಪಿ ನಿರ್ವಹಿಸುತ್ತಿದ್ದೇನೆ.
ಎರಡು ಸಿನ್ಮಾದಲ್ಲಿ ಲೀಡ್ ರೋಲ್
ನನ್ನ ಇಷ್ಟು ವರ್ಷಗಳ ಪಯಣದಲ್ಲಿ ಬಹುತೇಕ ಪೊಲೀಸ್ ಅಧಿಕಾರಿ ಪಾತ್ರಗಳನ್ನೇ ನಿರ್ವಹಿಸಿದ್ದೇನೆ ಎಂದು ಹೇಳೋಕೆ ಖುಷಿ ಆಗುತ್ತಿದೆ. ಅದೊಂದು ಅದೃಷ್ಟ ಎನ್ನಬಹುದು. ನನ್ನ ಹೈಟು, ಪರ್ಸನಾಲಿಟಿ ನೋಡಿದವರು ಅದೇ ಪಾತ್ರ ಹುಡುಕಿ ಕೊಡುತ್ತಾರೆ. ನಾನೂ ಕೂಡ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ಹಾಗಾಗಿ, ಪೊಲೀಸ್ ಅಧಿಕಾರಿ ಪಾತ್ರಕ್ಕೆ ಸಾಕಷ್ಟು ಅವಕಾಶಗಳು ಬಂದಿವೆ. ಬರುತ್ತಲೂ ಇವೆ. ಸದ್ಯಕ್ಕೆ ನಾನು ಎರಡು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದೇನೆ. ಅಲ್ಲಿ ಹೀರೋ ಎನ್ನುವುದಕ್ಕಿಂತ ಪ್ರಮುಖ ಪಾತ್ರ ಎನ್ನಬಹುದು. ಖ್ಯಾತ ಸಾಹಿತಿ ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ “ದನಗಳು” ಮತ್ತು ಹೊಸಬರ “ಪವನ್ ಸ್ಟಾರ್” ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರವಿದೆ. “ಪವನ್ ಸ್ಟಾರ್” ಚಿತ್ರಕ್ಕೆ ಸತೀಶ್ ಚಂದ್ರ ಎಂಬುವವರು ನಿರ್ಮಾಪಕರು. ಆ ಚಿತ್ರದಲ್ಲಿ ನಾನು ಆರ್ಮಿ ಪಾತ್ರ ಮಾಡುತ್ತಿದ್ದೇನೆ. ಎರಡು ಹಾಡು, ಫೈಟ್ಸ್ ಕೂಡ ಇದೆ. ಇನ್ನು, “ದನಗಳು” ಸಿನಿಮಾ “ಸಂಕ್ರಾಂತಿʼ ಹಬ್ಬಕ್ಕೆ ತೆರೆ ಕಾಣಲಿದೆ. ಸದ್ಯ “ಭಜರಂಗಿ-2”, “ಯುವರತ್ನ”, “ಅರ್ಜುನ್ ಗೌಡ”, :”ಜಾಸ್ತಿ ಪ್ರೀತಿ”,” ಪಂಟ್ರು”, “ಪ್ರಾರಂಭ”,”ಫೈಟರ್”,” ಅಲ್ಲೇ ಡ್ರಾ, ಅಲ್ಲೇ ಬಹುಮಾನ”,”ಜಿಪಿಎಸ್”,” ವಾಸಂತಿ ನಲಿದಾಗ”, “ದೃತಿ” ಸೇರಿದಂತೆ ಇನ್ನಷ್ಟು ಸಿನಿಮಾಗಳಿವೆ.
ಸಿನ್ಮಾ ಬದುಕು ತೃಪ್ತ
ನಾನು ಈವರೆಗೆ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದು ನನಗೆ ನಿಜಕ್ಕೂ ತೃಪ್ತಿ ಎನಿಸಿದೆ. ಇಲ್ಲಿ ನಿರ್ವಹಿಸಿದ ಪ್ರತಿ ಪಾತ್ರವೂ ಪ್ರಮಖ ಎನಿಸಿವೆ. ದೊಡ್ಡದು, ಸಣ್ಣದು ಎಂಬ ಲೆಕ್ಕ ಇಟ್ಟುಕೊಳ್ಳದ ನಾನು, ಯಾವುದೇ ಪಾತ್ರ ಸಿಕ್ಕರೂ ಪ್ರೀತಿಯಿಂದಲೇ ನಿರ್ವಹಿಸಿದ್ದೇನೆ ಎಂಬ ತೃಪ್ತಭಾವವಿದೆ. ಎಲ್ಲದ್ದಕ್ಕೂ ಹೆಚ್ಚಾಗಿ, ನಾನು ಇಂದು ಏನೇ ಮಾಡಿದ್ದರೂ, ಹೇಗೆ ಇದ್ದರೂ, ಅದಕ್ಕೆ ಕಾರಣ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು. ಆ ರಾಯರ ಅನುಗ್ರಹದಿಂದ ಇಂದು ಸಿನ್ಮಾದಲ್ಲಿ ಒಂದಷ್ಟು ಗುರುತಿಸಿಕೊಂಡಿದ್ದೇನೆ. ಕನ್ನಡದ ಜೊತೆಯಲ್ಲಿ ನಾನು ಮೂರು ತಮಿಳು ಸಿನಿಮಾಗಳಲ್ಲೂ ನಟಿಸಿದ್ದೇನೆ. ಕನ್ನಡದಲ್ಲೇ ಹೆಚ್ಚು ಕೆಲಸ ಮಾಡಿ, ಇಲ್ಲೇ ಗುರುತಿಸಿಕೊಂಡು, ನೆಲೆಕಂಡುಕೊಳ್ಳುವ ಮಹಾದಾಸೆಯಂತು ಇದೆ ಎಂಬುದು ಮಧು ಮಾತು.
ಸಿನಿಮಾ ನಿರ್ದೇಶಿಸೋ ಆಸೆ
ಕಳೆದ ಮೂರು ದಶಕಗಳಿಂದಲೂ ಸಿನಿಮಾರಂಗವನ್ನು ನೋಡಿಕೊಂಡು ಬಂದವನು. ಇಲ್ಲಿ ಸೋಲು-ಗೆಲುವು ಎಲ್ಲವೂ ಇದೆ. ಹಾಗಂತ ನಾನು ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಅಲೆದಾಡಿ, ಸಿಗದಿದ್ದಾಗ, ಸಿನಿಮಾರಂಗದ ಸಹವಾಸ ಬೇಡ ಎಂದು ಯಾವತ್ತೂ ಅಂದುಕೊಂಡಿಲ್ಲ. ತಾಳ್ಮೆಯಿಂದ ಕಾದಿದ್ದರಿಂದಲೇ ಇಂದು ನಾನು ಸಿನಿಮಾದವರಿಗೆ ಬೇಕಾಗಿದ್ದೇನೆ. ಬಹುತೇಕ ನಿರ್ದೇಶಕ, ನಿರ್ಮಾಪಕರು ಕರೆದು ಅವಕಾಶ ಕೊಡುತ್ತಿದ್ದಾರೆ. ಇದಕ್ಕಿಂತ ಬೇರೇನೂ ಬೇಡ. ಇಷ್ಟು ವರ್ಷದ ಅನುಭವ ಪಡೆದಿದ್ದೇನೆ. ನನಗೂ ನಿರ್ದೇಶಿಸುವ ಆಸೆ ಇದೆ. ಅದಕ್ಕಾಗಿ ಒಂದು ಕಥೆಯನ್ನೂ ರೆಡಿ ಮಾಡಿಕೊಂಡಿದ್ದೇನೆ. ನಾನು ಇತ್ತೀಚೆಗೆ ಬಿಹಾರದ ಅಲಹಾಬಾದ್‌ಗೆ ಚುನಾವಣೆ ಕೆಲಸಕ್ಕೆಂದು ಹೋದಾಗ, ಅಲ್ಲಿನ “ರಂಡಿ ಬಜಾರ್” (ವೇಶ್ಯೆಯರ ನಗರ)ಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸಿಕ್ಕ ಕೆಲವರ ಜೊತೆ ಆಪ್ತವಾಗಿ ಮಾತನಾಡಿದಾಗ, ಒಂದೊಳ್ಳೆಯ ಲೈನ್ ಸಿಕ್ಕವು. ಅದನ್ನೇ ಇಟ್ಟುಕೊಂಡು ಒಂದು ಕಥೆ ಮಾಡಿದ್ದೇನೆ. “18 ದಿನಗಳು” ಎಂಬ ಹೆಸರಲ್ಲಿ ಚಿತ್ರ ಮಾಡುವ ಆಸೆ ಇದೆ. “ನಾನು ಮತ್ತು ಅವಳು” ಎಂಬ ಟ್ಯಾಗ್‌ಲೈನ್ ಕೂಡ ಇಟ್ಟಿದ್ದೇನೆ. ಅದೊಂದು ನೈಜ ಘಟನೆಯ ಕಥೆ. ಅಷ್ಟೇ ನೈಜವಾಗಿ ಮಾಡುವ ಆಸೆ ಇದೆ. ಇಷ್ಟೆಲ್ಲಾ ಮಾಡುತ್ತಿರುವುದರ ಹಿಂದೆ ನನ್ನ ಫ್ಯಾಮಿಲಿಯ ಸಹಕಾರವೂ ಇದೆ. ಹೆಂಡತಿ, ಮಗಳ ಸಹಕಾರ ಇರದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ಜೊತೆಗೆ ನಿರ್ದೇಶಕರು, ನಿರ್ಮಾಪಕರು, ಗೆಳೆಯರು ಕೊಟ್ಟ ಉತ್ಸಾಹದಿಂದ ನಟನಾಗಿದ್ದೇನೆ. ನಾನಿನ್ನೂ ಸಾಧಿಸಿಲ್ಲ. ಸಾಧಿಸುವ ಉತ್ಸಾಹವಿದೆ.
ಅಪ್ಪು ಸ್ಫೂರ್ತಿ
ನಾನು ಡಾ.ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅದರಲ್ಲೂ ಪುನೀತ್ ರಾಜಕುಮಾರ್ ಅವರ ಪಕ್ಕಾ ಫ್ಯಾನು. ಅಪ್ಪು ಸರ್ ನನಗೆ ಸ್ಫೂರ್ತಿ. ಅವರಿಂದಲೇ ಸಿನಿಮಾ ಆಸೆ ಹೆಚ್ಚಾಯ್ತು. ಇದುವರೆಗೆ ನಾನು ಒಬ್ಬ ರೈಲ್ವೆ ಪೊಲೀಸ್ ಆಗಿ, ಇಂಡಿಯಾ ಸುತ್ತಿ ಬಂದಿದ್ದೇನೆ. ಈಗ ಪೊಲೀಸ್ ವೃತ್ತಿಯಿಂದ ಆಚೆ ಬಂದು ಕಚೇರಿಯೊಳಗಿನ ಕೆಲಸ ಮಾಡುತ್ತಿದ್ದೇನೆ. ಮೊದ ಮೊದಲು ಅವಕಾಶ ಹುಡುಕಿ ಹೋಗುತ್ತಿದ್ದೆ. ಸಣ್ಣ ಪಾತ್ರವಾದರೂ ಸಿಗುತ್ತಿತ್ತು. ಈಗ ಅವಕಾಶ ಹುಡುಕಿ ಬರುತ್ತಿದೆ. ಸಣ್ಣದಿರಲಿ, ದೊಡ್ಡದಿರಲಿ ಕಣ್ಣಿಗೊತ್ತಿ ಮಾಡುತ್ತಿದ್ದೇನೆ ಎನ್ನುವ ಮಧು, ಸಿನಿಮಾಗಿಂತ ಖುಷಿಯ ಜಾಗ ಬೇರೊಂದಿಲ್ಲ ಎನ್ನುತ್ತಾರೆ ಅವರು.
ಅಂಬೇಡ್ಕರ್ ಪ್ರತಿಮೆ ಸ್ಥಾಪನೆ
ಮಧು ಮಂದಗೆರೆ ಮಂಡ್ಯದವರು. ಗೌಡ್ರು ಸದಾ ಸದ್ದು ಮಾಡುತ್ತಿರಬೇಕು ಸರ್ ಎನ್ನುವ ಅವರು, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಮಂದಗೆರೆ ಗ್ರಾಮದಲ್ಲಿ ಸುಮಾರು 40 ಹುಡುಗರ ಬಳಗ ಕಟ್ಟಿಕೊಂಡು, ಅವರಿಗೆ ಒಂದು ಕಚೇರಿ ಮಾಡಿಕೊಟ್ಟು, ನಿತ್ಯ ಆಟವಾಡಲು ಕ್ರೀಡೆ ಸಾಮಾಗ್ರಿ ಕೊಡಿಸಿದ್ದಾರೆ. ಅಷ್ಟೇ ಅಲ್ಲ, ಕಚೇರಿಯಲ್ಲಿ ಅಂಬೇಡ್ಕರ್, ಬುದ್ಧ, ಬಸವ ಹೀಗೆ ಮಹನೀಯರ ಕುರಿತಾದ ಪುಸ್ತಕಗಳನ್ನಿಟ್ಟು, ಓದುವಂತೆ ಪ್ರೇರೇಪಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಧು ಮಂದಗೆರೆ ಅವರು, ತನ್ನೂರಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದಾರೆ.
ಇದೇ ಡಿಸೆಂಬರ್ 6 ರಂದು ಮಂದಗೆರೆಯಲ್ಲಿ ಪಂಚಾಯ್ತಿ ಸೂಚಿಸಿರುವ ಜಾಗದಲ್ಲಿ ಮಧು ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡುತ್ತಿದ್ದಾರೆ. ಈ ಬಗ್ಗೆ ಹೇಳುವ ಮಧು, ನಾನು ಇವತ್ತಿಗೂ ಜಾತಿ ಬಗ್ಗೆ ಮಾತಾಡಲ್ಲ. ಅದರ ಬಗ್ಗೆ ಗೊತ್ತೂ ಇಲ್ಲ. ನಾನು ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತಗಳನ್ನು ಒಪ್ಪಿಕೊಂಡವನು. ಹಾಗಾಗಿ ಮೊದಲಿಗೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದೇನೆ. ನನ್ನೂರ ಜನರ ಬೆಂಬಲಿವೆ. ಡಿ.6ರಂದು ದೊಡ್ಡ ಕಾರ್ಯಕ್ರಮ ಮೂಲಕ ಅಂದು ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ. ಇದು ನನ್ನ ಬಾಲ್ಯದ ಕನಸು ಕೂಡ. ಅಂದು ಅನೇಕ ಗಣ್ಯರು ಭಾಗಿಯಾಗಲಿದ್ದಾರೆ ಎನ್ನುತ್ತಾರೆ ಅವರು.