ಮುತ್ತಪ್ಪ ರೈ ಚಿತ್ರ ನಾನೇ ಮಾಡ್ತೀನಿ – ರೈ ಬಳಗದ ಆಪ್ತ ಪದ್ಮನಾಭ್ ಹೇಳಿಕೆ

ಎಂಆರ್ ಸಿನಿಮಾ ಅನೌನ್ಸ್ ಮಾಡಿದ ರವಿ ಶ್ರೀವತ್ಸ ಈಗ ಏನ್ ಮಾಡ್ತಾರೆ?

ಒಂದು ಕಾಲದ ಡಾನ್ ಎಂದೇ‌ ಹೆಸರಾಗಿದ್ದ ಮುತ್ತಪ್ಪ ರೈ ಅವರ ಕುರಿತ ಚಿತ್ರವೊಂದು ಇತ್ತೀಚೆಗೆ ಮುಹೂರ್ತ ಕಂಡಿತ್ತು.
ಮಾಸ್ ನಿರ್ದೇಶಕ ಎಂದೇ ಹೆಸರಾಗಿರುವ ರವಿ ಶ್ರೀವತ್ಸ ಅವರು ನಿರ್ಮಾಪಕ ಶೋಭ ರಾಜಣ್ಣ ಅವರ ಪುತ್ರನಿಗೆ ‘ಎಂ ಆರ್’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದರು. ತಮ್ಮ ಚಿತ್ರತಂಡದ ಪರಿಚಯ ಮಾಡಿಕೊಡುವುದರ ಜೊತೆಗೆ ‘ಎಂ ಆರ್’ ಸಿನಿಮಾ ಕುರಿತು ವಿವರ ನೀಡಿದ್ದರು.
ಆದರೆ, ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಮುತ್ತಪ್ಪ ರೈ ಕುರಿತ ಸಿನಿಮಾವನ್ನು ನಾನೇ ಮಾಡ್ತೀನಿ ಎಂದು ಮುತ್ತಪ್ಪ ರೈ ಬಳಗದ ಆಪ್ತ ನಿರ್ಮಾಪಕ ಪದ್ಮನಾಭ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಅವರು ಬಿಡುಗಡೆ ಮಾಡಿರುವ ಹೇಳಿಕೆಯನ್ನೊಮ್ಮೆ ಓದಿ…


‘ನಾನು, ನಿರ್ಮಾಪಕ ಎಲ್ ಪದ್ಮನಾಭ್, ಈಗಾಗಲೇ ನನ್ನ ಗಮನಕ್ಕೆ ಬಾರದೆ, ನಾನು ವಿದೇಶದಲ್ಲಿ ಇದ್ದ ಕಾರಣ, ‘ಎಂ ಆರ್’ ಸಿನಿಮಾ ಮುಹೂರ್ತ ಆಗಿರುವುದು ಗೊತ್ತಾಗಿಲ್ಲ. ಹೀಗಾಗಿ, ಮುತ್ತಪ್ಪ ರೈ ಕುರಿತ ಚಿತ್ರವನ್ನು ನಾನೇ ನಿರ್ಮಿಸಬೇಕಿದೆ. ಈಗಾಗಲೇ ಈ ಹಿಂದೆ ಈ ಬಗ್ಗೆ ಒಂದು ಪತ್ರಿಕಾಗೋಷ್ಟಿಯನ್ನೂ ನಾನು ಮಾಡಿದ್ದೆ. ಅವರಿದ್ದಾಗಲೇ ಬಹುಭಾಷೆಯಲ್ಲಿ ಈ ಚಿತ್ರ ಮಾಡುವ ಬಗ್ಗೆ ಚರ್ಚೆಯಾಗಿತ್ತು. ರಾಮ್ ಗೋಪಾಲ್ ವರ್ಮಾ ಹಿಂದೆ ಸರಿದ ಬಳಿಕ ನಾನೇ ನಮ್ಮ ಎಂಆರ್ ಬ್ಯಾನರ್ ನಲ್ಲಿ ಈ ಚಿತ್ರವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಪ್ರಕ್ರಿಯೆ ಈ ಮೊದಲೇ ಶುರುವಾಗಿತ್ತು. ನನ್ನ ಎಂಆರ್ ಪಿಕ್ಚರ್ಸ್ ಸಂಸ್ಥೆ ಹುಟ್ಟು ಹಾಕಿದ್ದೆ ಅದರ ಸಲುವಾಗಿ. ಅಷ್ಟೇ ಅಲ್ಲ, ರೈ ಅಣ್ಣನ ಬಗ್ಗೆ ಸಿನಿಮಾ‌ ಪ್ರಾಜೆಕ್ಟ್ ಕೈಗೆತ್ತಿಕೊಂಡರೆ ಅದಕ್ಕೆ ಅನುಮತಿ ಪಡೆಯಲೇಬೇಕಿದೆ. ಇದೀಗ ನಿರ್ದೇಶಕ ರವಿ ಶ್ರೀವತ್ಸ ಅವರು ಸಿನಿಮಾ ಘೋಷಣೆ ಮಾಡಿಕೊಂಡು ಮುಹೂರ್ತವನ್ನೂ ಮಾಡಿಕೊಂಡಿದ್ದಾರೆ. ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಸಿನಿಮಾ ಕೈ ಬಿಡುವಂತೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಸಮ್ಮತಿ ಸಿಕ್ಕಿದೆ. ಕೊಂಚ ಕಾಲಾವಕಾಶವನ್ನೂ ಕೇಳಿದ್ದಾರೆ. ಅವರು ಕೈಬಿಟ್ಟ ಬಳಿಕ ಅವರ ಸಿನಿಮಾ ಕಥೆ ಕೇಳುತ್ತೇನೆ. ಒಬ್ಬ ನಿರ್ಮಾಪಕನಾಗಿ ಮತ್ತೊಬ್ಬ ನಿರ್ಮಾಪಕನ ಸಮಸ್ಯೆ ನನಗೆ ಗೊತ್ತು. ಹಾಗಾಗಿ, ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಅವರ ಗಮನಕ್ಕೆ ತರುವುದು ಒಳಿತು ಎನ್ನುವ ಕಾರಣಕ್ಕೆ ಅವರೊಂದಿಗೆ ಚರ್ಚಿಸಿದ್ದೇನೆ. ಸದ್ಯ ಸಾಕಷ್ಟು ಸಿನಿಮಾಗಳು ಸೆನ್ಸಾರ್ ಆಗಿವೆ. ಅವುಗಳ ಬಿಡುಗಡೆ ಪ್ರಕ್ರಿಯೆ ಶುರುವಾಗಲಿ. ಇನ್ನು ಕೆಲ ದಿನಗಳ ಬಳಿಕ ಆ ಚಿತ್ರವನ್ನು ನಾನೇ ಘೋಷಣೆ ಮಾಡಲಿದ್ದೇನೆ. ಎಂಆರ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಾನೇ ನಿರ್ಮಾಣ ಮಾಡಲಿದ್ದೇನೆ’ ಎಂದು ಪದ್ಮನಾಭ್ ಹೇಳಿದ್ದಾರೆ.
ಅದೇನೋ ಸರಿ ಆದರೆ, ರವಿ ಶ್ರೀವತ್ಸ ಅವರು ಈಗ ‘ಎಂ.ಆರ್’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಶೂಟಿಂಗ್ ಹೋಗುವ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಈಗ ಪದ್ಮನಾಭ್ ನಾನೇ ಆ ಚಿತ್ರ ಮಾಡ್ತೀನಿ ಎನ್ನುತ್ತಿದ್ದಾರೆ. ಹಾಗಾದರೆ, ರವಿ ಶ್ರೀವತ್ಸ ಅವರೇ ಪದ್ಮನಾಭ್ ನಿರ್ಮಾಣದಲ್ಲಿ ಚಿತ್ರ ನಿರ್ದೇಶನ ಮಾಡುತ್ತಾರೋ ಅಥವಾ ಬೇರೆ ನಿರ್ದೇಶಕರ ಜೊತೆ ಪದ್ಮನಾಭ್ ಸಿನಿಮಾ ನಿರ್ಮಾಣ ಮಾಡುತ್ತಾರೋ ಕಾದು ನೋಡಬೇಕಿದೆ.
ಒಟ್ಟಲ್ಲಿ ಮುತ್ತಪ್ಪ ರೈ ಅವರು ಇದ್ದಾಗಲೂ ಈ ಚಿತ್ರ ಸೆಟ್ಟೇರಲಿಲ್ಲ. ಅವರು ಇಲ್ಲವಾದಾಗ ಇನ್ನೇನು ಶುರುವಾಯಿತು ಅನ್ನುವುದರೊಳಗೆ ಈಗ ಸಿನಿಮಾಗೆ ಸಣ್ಣ ಅಡಚಣೆಯಾಗಿದೆ. ಇದು ಎಷ್ಟರಮಟ್ಟಿಗೆ ಬಗೆಹರಿದು ಸಿನಿಮಾ ಆಗುತ್ತೋ ಕಾದು ನೋಡಬೇಕಿದೆ.

Related Posts

error: Content is protected !!