ರಾಘಣ್ಣನಿಗೆ ಪುನೀತ್‌ ಸಾಥ್-‌ ರಾಜತಂತ್ರ ಟೀಸರ್‌ ಬಂತು, ಜನವರಿಗೆ ಸಿನಿಮಾ ಬರುತ್ತೆ

ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ರಾಘಣ್ಣ

ರಾಘವೇಂದ್ರ ರಾಜಕುಮಾರ್‌ “ರಾಜತಂತ್ರ” ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಲಾಕ್‌ಡೌನ್‌ ಕೊಂಚ ಸಡಿಲಗೊಂಡ ಬಳಿಕ “ರಾಜತಂತ್ರ” ಸಿನಿಮಾ ಶುರುವಾಗಿತ್ತು. ಅದಾಗಲೇ ಸದ್ದಿಲ್ಲದೆಯೇ ಕೊರೊನಾ ನಡುವೆಯೂ ಮುಂಜಾಗ್ರತೆ ವಹಿಸಿಕೊಂಡು ಯಶಸ್ವಿಯಾಗಿ ಸಿನಿಮಾ ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್‌ಗೆ ರೆಡಿಯಾಗಿದೆ.


ಅದಕ್ಕೂ ಮುನ್ನ, ಚಿತ್ರದ ಟೀಸರ್‌ ಹೊರತರಲಾಗಿದೆ. ನಟ ಪುನೀತ್‌ರಾಜಕುಮಾರ್‌ ಅವರು ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್‌ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ತಮ್ಮ ಸಿನಿಮಾ ಕುರಿತು ಮಾತನಾಡಿದ ಪ್ರಹ್ಲಾದ್‌, ” ಕಾಲೇಜ್‌ ದಿನಗಳಿಂದಲೂ ಬರಹಗಾರನಾಗಿ ಬದುಕಬೇಕೆಂಬುದು ನನ್ನಾಸೆ ಆಗಿತ್ತು. ಪತ್ರಕರ್ತನಾದರೆ, ಬರಹಗಾರನಾಗಬಹುದು ಅಂತ ಅಂದುಕೊಂಡು, ಪತ್ರಿಕೋದ್ಯಮಕ್ಕೆ ಬಂದೆ. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದೆ. ಹಾಗೆಯೇ ಹಲವು ನಾಟಕಗಳಲ್ಲಿ ಕೆಲಸ ಮಾಡಿದೆ. ಹಂಸಲೇಖ ಅವರು ನನ್ನನ್ನು ಸಿನಿಮಾರಂಗಕ್ಕೆ ಪರಿಚಯಿಸಿದರು.”ಸಿಪಾಯಿ” ಮೂಲಕ ಚಿತ್ರರಂಗ ಪ್ರವೇಶಿಸಿದೆ.

ನಂತರದ ದಿನಗಳಲ್ಲಿ ಶಿವರಾಜಕುಮಾರ್‌ ಅವರ ಸಿನಿಮಾಗೂ ಕೆಲಸ ಮಾಡಿದೆ. ಈವರೆಗೆ ಸುಮಾರು ೪೦ ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಕಿರುತೆರೆಯ “ಮಾಯಾಮೃಗ” ಧಾರಾವಾಹಿಗೂ ಕೆಲಸ ಮಾಡಿದೆ. ಒಟ್ಟು ೯ ಸಾವಿರ ಎಪಿಸೋಡ್‌ ಬರೆದಿದ್ದೇನೆ ಎಂಬ ಸಂತಸವಿದೆ. ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಕೆಲಸ ಮಾಡಿದ ಹೆಮ್ಮೆಯೂ ಇದೆ. ಆಪ್ತರು ಸೇರಿ ಒಂದು ಕಂಪೆನಿ ಮಾಡೋಣ ಅಂತಂದುಕೊಂಡು ವಿಶ್ವಂ ಡಿಜಿಟಲ್‌ ಮೀಡಿಯಾ ನಿರ್ಮಾಣ ಸಂಸ್ಥೆ ಶುರುಮಾಡಿದೆವು. ನಮ್ಮ ಬಳಿ ಕಂಟೆಂಟ್‌ ಇತ್ತು ಆದರೆ, ನಿರ್ಮಾಣ ಮಾಡುವುದು ಕಷ್ಟ ಎನಿಸಿತು. ಆದರೂ, ಮೊದಲಿಗೆ ” ಅಭಯಾರಣ್ಯ” ಚಿತ್ರ ಮಾಡಿದೆವು. ನಂತರ “ರಾಜತಂತ್ರ” ಕಥೆ ಮಾಡಿ ಸಿನಿಮಾ ಮಾಡಿದ್ದೇವೆ. ನಿರ್ದೇಶಕರ ಬಳಿ ಹೇಳಿದಾಗ, ಈ ಕಥೆ ರಾಘಣ್ಣವರಿಗೆ ಹೇಳಿ ಸೂಕ್ತವಾಗುತ್ತೆ ಅಂದರು. ಅಲ್ಲಿಂದ ಇಲ್ಲಿಯವರೆಗೆ ನಡೆದುಬಂದಿದೆ ಎಂದರು ಪ್ರಹ್ಲಾದ್.‌

ನಿರ್ಮಾಪಕ ವಿಜಯ ಭಾಸ್ಕರ್ ಮಾತನಾಡಿ, ಒಳ್ಳೆಯ ಕಥೆ ಜತೆಗೆ ಆಗಮಿಸುತ್ತಿದ್ದೇವೆ. ನೋಡಿ ಹರಸಿ ಎಂದು ಮನವಿ ಮಾಡಿದರು.
ರಾಘವೇಂದ್ರ ರಾಜಕುಮಾರ್‌ ಕೂಡ ಖುಷಿಯಲ್ಲಿದ್ದರು. “ನನ್ನ ಲೈಫ್ ನಲ್ಲಿ ಈ ಥರದ ಪಾತ್ರ ಮಾಡಿರಲಿಲ್ಲ. ಮಾಜಿ ಮಿಲಿಟಿರಿ ಅಧಿಕಾರಿ ಪಾತ್ರ ನನಗೆ ಹೊಸ ಅನುಭವ ಕೊಟ್ಟಿದೆ. ಇಲ್ಲಿ ನಾನು ಹೆಚ್ಚು ಕಲಿತಿದ್ದೇನೆ. ನಾನು ಮಾಡಿದ್ದೇನೆ ಎನ್ನುವುದಕ್ಕಿಂತ ಎಲ್ಲರೂ ನನ್ನಿಂದ ಕೆಲಸ ಮಾಡಿಸಿದ್ದಾರೆ. ಅಭಿಮಾನಿಗಳ ಪ್ರೋತ್ಸಾಹವೇ ನಮ್ಮಕೆಲಸಕ್ಕೆ ಕಾರಣ ಎಂದರು.

ಟೀಸರ್‌ ಬಿಡುಗಡೆ ಮಾಡಿ ಮಾತನಾಡಿದ ಪುನೀತ್‌, ” ಈ ವರ್ಷ ನಾವು , ನೀವೆಲ್ಲರೂ ಕೊರೊನಾ ಪರಿಸ್ಥಿತಿಗೆ ಸಿಕ್ಕವರು. ಇಂತಹ ಸಮಯದಲ್ಲೂ ಈ ಚಿತ್ರತಂಡ ಚಿತ್ರ ಮಾಡಿದೆ. ಈ ಸಿನಿಮಾದಲ್ಲಿ ರಾಘಣ್ಣ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಮೇಲೆ ಸಿನಿಮಾ ಮಾಡ್ತಾ ಇದ್ದಾರೆ. ಈ ಸಿನಿಮಾಗೆ ಗೆಲುವು ಸಿಗಲಿ. ರಾಘಣ್ಣ ಇಲ್ಲಿ ಫೈಟ್‌ ಮಾಡಿದ್ದಾರೆ. ಒಬ್ಬ ನಟನಿಗೆ ವಯಸ್ಸು ಇರಬಹುದು. ಯಾವುದೇ ಪರಿಸ್ಥಿತಿ ಇರಬಹುದು. ಸಿನಿಮಾ ಅಂತ ಬಂದಾಗ ಉತ್ಸಾಹ ತುಂಬುತ್ತೆ. ಜನರ ಪ್ರೀತಿ, ಅಭಿಮಾನಿಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಜನವರಿ ೧ರಂದು ರಿಲೀಸ್ ಆಗಲಿದೆ ಎಲ್ಲರೂ ಪ್ರೋತ್ಸಾಹಿಸಿ ಎಂದರು.


ನಿರ್ದೇಶಕ ಪಿವಿಆರ್ ಸ್ವಾಮಿ, ” “ಅಮ್ಮನ ಮನೆ” ಸಿನಿಮಾದಲ್ಲಿ ರಾಘಣ್ಣ ಜತೆ‌ ಕೆಲಸ ಮಾಡಿದ್ದೆ. ಆಗಲೇ ಈ ಕಥೆ ಹೇಳಿದ್ದೆ. ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಧಿಕಾರಿಯಾಗಿ ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುತ್ತಾರೆ. ಅದೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಾಘಣ್ಣ ಅವರ ಕಡೆಯಿಂದ ಫೈಟ್ ಸಹ ಮಾಡಿಸಿದ್ದೇವೆ ಎಂದರು.


ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ಸಿಕ್ಕಿದೆ. ಶ್ರೀಸುರೇಶ್ ಸಂಗೀತವಿದೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್ ಇತರರು ನಟಿಸಿದ್ದಾರೆ.

Related Posts

error: Content is protected !!