ಸಲಾರ್‌ ; ನಟ ಪ್ರಭಾಸ್‌ಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ? ೧೦೦ ಕೋಟಿ ಎನ್ನುತ್ತಿವೆ ಗಾಂಧಿನಗರದ ಮೂಲಗಳು

ಸಲಾರ್‌ಗಾಗಿ ಇಟ್ಟ ಬಜೆಟ್‌ ೫೦೦ ಕೋಟಿ?

ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್‌” ಬಹುದೊಡ್ಡ ಬಜೆಟ್‌ನ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತು. ಆ ಸಿನಿಮಾ ದೇಶ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿತು ಅನ್ನೋದು ಗೊತ್ತು. ಈಗ “ಕೆಜಿಎಫ್‌ ಚಾಪ್ಟರ್‌ ೨” ಕೂಡ ದೊಡ್ಡ ಬಜೆಟ್‌ ಸಿನಿಮಾ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡಿದ್ದೂ ಸಹ ದೊಡ್ಡ ಸುದ್ದಿಯಾಗಿದೆ. ಹೌದು, ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅವರಿಗೆ “ಸಲಾರ್‌” ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿತ್ತು. ಆ ಚಿತ್ರಕ್ಕೆ “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶಕ ಎನ್ನುವುದನ್ನೂ ಹೇಳಿತ್ತು. ಈಗ ಜೋರಾಗಿ ಹರಿದಾಡುತ್ತಿರುವ ಸುದ್ದಿ ಅಂದರೆ, “ಸಲಾರ್‌” ಚಿತ್ರದ ನಟನೆಗಾಗಿ ಪ್ರಭಾಸ್‌ ಅವರಿಗೆ ಹೊಂಬಾಳೆ ಫಿಲ್ಮ್ಸ್‌ ಕೊಟ್ಟಿರುವ ಸಂಭಾವನೆ ಕುರಿತು. ಗಾಂಧಿನಗರದ ಮೂಲಗಳ ಪ್ರಕಾರ, ಪ್ರಭಾಸ್‌ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗುತ್ತಿದೆ ಎಂಬುದು ದೊಡ್ಡ ಸುದ್ದಿ.

ಇನ್ನು, ಈ ಚಿತ್ರವನ್ನು ಸುಮಾರು ೫೦೦ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದೇನೆ ಇರಲಿ, “ಕೆಜಿಎಫ್‌” ಬಳಿಕ ಹೊಂಬಾಳೆ ಫಿಲ್ಮ್ಸ್‌ ಕೈಗೆತ್ತಿಕೊಂಡ ಅದ್ಧೂರಿ ಸಿನಿಮಾ “ಸಲಾರ್‌”. “ಬಾಹುಬಲಿ” ಖ್ಯಾತಿಯ ಪ್ರಭಾಸ್‌ ಈ ಹಿಂದೆ ಹಿಂದಿಯಲ್ಲಿ “ಸಾಹೋ” ಚಿತ್ರ ಮಾಡಿದ್ದರು. ಆ ಚಿತ್ರಕ್ಕೂ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗಿತ್ತು ಎಂಬ ಸುದ್ದಿ ಇತ್ತು. ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ, ಈಗ ಹೀಗೊಂದು ಸುದ್ದಿ ಗಾಂಧಿನಗರದಲ್ಲೂ ಜೋರಾಗಿ ಹರಿದಾಡುತ್ತಿದೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್‌ ಶ್ರೀಮುರಳಿ ಅವರಿಗೆ “ಬಘೀರ” ಸಿನಿಮಾವನ್ನು ಅನೌನ್ಸ್‌ ಮಾಡಿದೆ. ಈ ಚಿತ್ರ ಏಪ್ರಿಲ್‌ ವೇಳೆಗೆ ಶುರುವಾಗಬಹುದು.
ಈ ಎಲ್ಲಾ ಬೆಳವಣಿಗೆಗಳ ಸುದ್ದಿ ಕೇಳುತ್ತಿದ್ದರೆ, ಕನ್ನಡ ಚಿತ್ರರಂಗ ಇನ್ನಷ್ಟು ಮಟ್ಟಕ್ಕೆ ಬೆಳವಣಿಗೆಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಒಂದಂತೂ ಸತ್ಯ, ಹೊಂಬಾಳೆ ಫಿಲ್ಮ್ಸ್‌ ಮಾಡುವ ಚಿತ್ರಗಳಲ್ಲಿ ಅದ್ಧೂರಿತನಕ್ಕೇನೂ ಕೊರತೆ ಇರೋದಿಲ್ಲ.

Related Posts

error: Content is protected !!